ಶಿವರಾತ್ರಿ ಬಂದರೆ ಊರಿನ ರಂಗಮಂದಿರದಲ್ಲಿ ಹಲವು ವರ್ಷಗಳಿಂದ ಶ್ರೀ ಮಂಜುನಾಥ ಫಿಕ್ಸು. ಭಂಗಿ ಕುಡಿದು ಭಂಗಿಭಂಗಿಯಲ್ಲಿ ಕುಣಿಯೋ ಶಿವನನ್ನು ನೋಡಲು ತಾವೂ ಕುಡಿದು ಹೋಗಿ ವಾಲಾಡಿದರೆ ಭಕ್ತಿ ಹೆಚ್ಚಾಗಿ ಶಿವ ಒಲಿಯುವ ಸಂಭಾವ್ಯ ಜಾಸ್ತಿ ಎಂಬ ನಂಬಿಕೆ ಊರ ಗಂಡಸರದು. ಹೀಗಾಗಿ ಹೆಣ್ಣುಮಕ್ಕಳು ಮನೆಯಲ್ಲೇ ಉಳಿಯಬೇಕಾದುದು ಅನಿವಾರ್ಯ. ಚಿಂತೆಯಿಲ್ಲ, ಈಗ ಎಲ್ಲರ ಮನೆಯಲ್ಲೂ ಟಿವಿಯಿದೆ. ಹಬ್ಬವೆಂದರೆ ನಾಲ್ಕು ಚಾನೆಲ್‌ಗಳಲ್ಲಿ ದಿನಕ್ಕೆ ಕನಿಷ್ಠ ನಾಲ್ಕು ಶಿವನ ಚಿತ್ರಗಳನ್ನು ಹಾಕುವಾಗ ಹೊರಾಂಗಣದಲ್ಲಿ ಚಳಿ ಹೊಡೆಸಿಕೊಂಡು ನೋಡುವ ಪಡಿಪಾಟಲೇಕೆ? ಅದೇನೇ ಇರಲಿ, ಶಿವರಾತ್ರಿಯಂದು ಟಿವಿ ನೋಡುವಾಗ ಎನಿಸುತ್ತದೆ, ನೃತ್ಯದಲ್ಲಿ, ಸಿಟ್ಟಿನಲ್ಲಿ ಸೈ ಎನಿಸಿಕೊಂಡಿರುವ ಈ ಶಿವ, ಚಲನಚಿತ್ರಗಳಿಗೂ ಎಂಟ್ರಿ ಕೊಟ್ಟುಬಿಟ್ಟನಲ್ಲಾ... ಕಲೆ ಹಾಗೂ ತಂತ್ರಜ್ಞಾನಗಳಿಗೆ ಎಷ್ಟು ಚೆನ್ನಾಗಿ ಅಪ್‌ಡೇಟ್ ಆಗಿದ್ದಾನೆ. ವೆರಿ ಮಾಡ್ರನ್ ಮೈಂಡೆಡ್ ನೋ?
ಒಮ್ಮೆ ಕಣ್ಣು ಮುಚ್ಚಿ ಭಕ್ತಿಯಿಂದ ಶಿವನ ರೂಪ ಕಲ್ಪಿಸಿಕೊಂಡು ನೋಡಿ, ನಟ ಚಿರಂಜೀವಿಯೋ, ಶ್ರೀಧರ‌್ರೋ, ಸಂಜೈ, ಶ್ರೀನಿವಾಸಮೂರ್ತಿ ಇಲ್ಲವೇ ಅಣ್ಣಾ ರಾಜಣ್ಣರ ರೂಪವೇ ಕಣ್ಮುಂದೆ ಬರುತ್ತದಲ್ಲವೇ? ನಾವು ಶಿವನನ್ನು ನೋಡಿರುವುದೇ ಹಾಗೆ, ಬೇಡರ ಕಣ್ಣಪ್ಪ, ಭೂಕೈಲಾಸ, ಶ್ರೀಮಂಜುನಾಥ, ಶಿವಪಾರ್ವತಿ, ಭಕ್ತ ಮಾರ್ಕಂಡೇಯ, ಭಕ್ತಸಿರಿಯಾಳ, ಶ್ರೀನಂಜುಂಡೇಶ್ವರ ಮಹಿಮೆ, ಶ್ರೀ ಧರ್ಮಸ್ಥಳ ಮಹಾತ್ಮೆಯಂಥ ಸಿನಿಮಾ ಮಹಾತ್ಮೆ ಇದು!
ಕಣ್ಣಿಗೆ ಕಾಣದವನನ್ನು ಹೀಗಿದ್ದಾನೆ ಎಂದು ಯಾರಾದರೂ ತೋರಿಸಿದರೆ, ನೋಡಿಬಂದಂತೆ ಹೇಳಿದರೆ ನಂಬದೇ ವಿಧಿ ಇದೆಯೇ? ನಿರ್ದೇಶಕರು ಕೊಟ್ಟ ರೂಪಕ್ಕೆ, ಈ ನಟರು ವೇಷ ತೊಟ್ಟು ಪರಕಾಯ ಪ್ರವೇಶವನ್ನೇ ಮಾಡಿದ್ದಾರೆ. ನಟ ಶ್ರೀಧರ್ ‘ಶಂಕರ ಶಶಿಧರ ಗಜಚರ್ಮಾಂಬರ’ ಹಾಡಿಗೆ ತ್ರಿಶೂಲ ಹಿಡಿದು, ಬೂದಿ ಬಳಿದುಕೊಂಡು ಹಾರಿ ತಿರುಗಿ ಕುಣಿಯುತ್ತಿದ್ದರೆ, ನಾಟ್ಯಪ್ರವೀಣ ಶಿವ ಹಾಗಿರದೆ ಬೇರೆ ರೂಪದಲ್ಲಿರಲು ಸಾಧ್ಯವೆಂದು ಯೋಚಿಸಲೂ ಮೆದುಳು ತಯಾರಿರುವುದಿಲ್ಲ. ಹಾಗಾಗೇ ಶಿವನ ಚಿತ್ರ ಎಂದರೇ ಶ್ರೀಧರ್ ಪ್ರತ್ಯಕ್ಷನಾಗಲೇಬೇಕಾದ ಜಮಾನವಿತ್ತು.
ಇನ್ನು ‘ಬೇಡರ ಕಣ್ಣಪ್ಪ’ದಲ್ಲಿ ಶಿವ ಪಾತ್ರಧಾರಿ ಎಚ್.ಆರ್. ರಾಮಚಂದ್ರಶಾಸ್ತ್ರಿ ಪ್ರತ್ಯಕ್ಷನಾಗುತ್ತಿದ್ದಂತೆ ಇಡೀ ಸಿನಿಮಾ ಟೆಂಟಿನಲ್ಲಿ ಕುಳಿತಿದ್ದವರೆಲ್ಲ ಎದ್ದು ನಿಂತು ಕೈ ಮುಗಿದೋ, ಅಡ್ಡ ಬಿದ್ದೋ, ಹರಹರ ಮಹದೇವ ಘೋಷಣೆ ಕೂಗಿಯೋ ಭಕ್ತಿಯ ಪರಾಕಾಷ್ಠೆಯಲ್ಲಿ ಅಕ್ಷರಶಃ ಕಣ್ತುಂಬಿಕೊಳ್ಳುತ್ತಿದ್ದರು. ಬೇಡರ ಕಣ್ಣಪ್ಪನಾಗಿ ಶಿವಭಕ್ತನಾಗಿದ್ದ ರಾಜ್‌ಕುಮಾರ್, ‘ಗಂಗೆಗೌರಿ’, ‘ಪಾರ್ವತಿ ಕಲ್ಯಾಣ’ಗಳಲ್ಲಿ ತಾನೇ ಸ್ವತಃ ಶಿವ ವೇಷ ಹಾಕಿದಾಗ, ಶಿವ ಹೀಗೆಯೇ ಇರುತ್ತಾನೆ ಎಂದು ಅನಿಸಿದುದರಲ್ಲಿ ಪವಾಡವೇನೂ ಇಲ್ಲ. ಎಷ್ಟೇ ಆದರೂ ಪಾತ್ರಧಾರಿ ನಟ ಸಾರ್ವಭೌಮ ತಾನೇ?
ಹೆಚ್ಚು ನೃತ್ಯವಿಲ್ಲದ ಶಿವನ ಪಾತ್ರವೆಂದರೆ ಅಲ್ಲಿ ಶ್ರೀನಿವಾಸಮೂರ್ತಿಯ ಮುಖ ಪ್ರಸನ್ನವದನ ಗಂಗಾಧರನಾಗಲೂ ಸೈ, ಮುನಿಸಿನ ‘ಮೂರ್ತಿ’ಯಾಗಲೂ ಸೈ. ಅವರಲ್ಲದೆ ಒಮ್ಮೆ ‘ವಿಷ್ಣು’ವರ್ಧನ ‘ಶಿವ’ವದನನಾಗಿದ್ದೂ ಉಂಟು. ಇದೆಲ್ಲ ನಮ್ಮ ಅಪ್ಪ ಅಮ್ಮ ಕಂಡ ಶಿವನಾಯಿತು. ಈಗಿನ ಯುವಜನರ ಬಳಿ ಶಿವ ಹೇಗಿರುತ್ತಾನೆಂದರೆ ಚಿರಂಜೀವಿಯ ಹೊರತು ಬೇರೆ ಮುಖ ವರ್ಣನೆ ಮಾಡಲು, ಕಲ್ಪಿಸಿಕೊಳ್ಳಲೂ ಅವರಿಂದ ಸಾಧ್ಯವಿಲ್ಲ. ಏಕೆಂದರೆ ನಾವು ಶಿವನನ್ನು ನೋಡಿರುವುದೇ ‘ಶ್ರೀ ಮಂಜುನಾಥ’ದ ಶಿವನನ್ನು. ಈ ಸ್ಫುರದ್ರೂಪಿ ಶಿವನಿಗೆ ಸಾಟಿ ಬೇರಿಲ್ಲ ಎಂಬ ಮಟ್ಟಿಗೆ ಕಣ್‌ಕಪ್ಪು, ಜಟೆ, ವಿಭೂತಿ, ಗಟ್ಟಿಧ್ವನಿ, ಜೊತೆಗೆ ದೃಢಕಾಯ ಚಿರಂಜೀವಿಯನ್ನು ಕೈಲಾಸವಾಸಿಯಾಗಿಸುತ್ತವೆ.
ಭಕ್ತಿಪ್ರಧಾನ ಚಿತ್ರಗಳು ಮೂಲೆಗುಂಪಾಗಿರುವ ಈ ದಿನಗಳಲ್ಲಿ ಶಿವ, ಲಿಂಗ, ಲಿಂಗೇಶ ಎಂಬ ಹೀರೋಗಳ ಹೆಸರಿಗಷ್ಟೇ ಶಿವ ಸೀಮಿತನಾಗಿದ್ದಾನೆ. ಅಂಥದರಲ್ಲೂ ಯಾರಾದರೂ ಶಿವ ಪಾತ್ರವನ್ನಿಟ್ಟುಕೊಂಡು ಸಿನಿಮಾ ಮಾಡಿ ನಟರನ್ನು ಹುಡುಕ ಹೊರಟರೆ ಗಣಪತಿ, ಸುಬ್ರಹ್ಮಣ್ಯ, ನಾರದ ಎಲ್ಲರ ಪಾತ್ರಕ್ಕೂ ಈಗಿನ ಹೀರೋಗಳ ಚಹರೆ ಮ್ಯಾಚ್ ಆಗಬಹುದು. ಆದರೆ ಶಿವನ ಪಾತ್ರಕ್ಕೆ ಯಾರಿದ್ದಾರೆ?!
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ