ಪುಟಗಳು

21.2.15

ಕಿಂಡಿಯಲಿ ಕoಡ ಬೆಳಕು

ರೇಶ್ಮಾರಾವ್ ಸೊನ್ಲೆ
ಒಳಗೆ, ದಿಡ್ಡಿ ಬಾಗಿಲು ಮುಚ್ಚಿದ ಕೋಣೆಯೊಳಗೆ ಅದೇನೇನು ನಡೆಯುತ್ತಿದೆಯೋ? ಬಾಗಿಲ ಸಂದಿಯಲಿ, ಬೀಗ ಜಡಿಯುವ ಕಿಂಡಿಯಲಿ ಸಣ್ಣದಾಗಿ ಹಳದಿ ಬೆಳಕು ಹೊಳೆಯುತ್ತಿದೆ. ಮುಚ್ಚಿಡಲಾಗದ ಮಿನುಗು, ಕಣ್ಣ ರೆಪ್ಪೆಯ ಸೋಲಿಸಿ ಅಲ್ಲಿಗೂ ರಾಚಿದೆ. ಹೊರಗಿನಿಂದ ಹೋಗಿ ಒಳಗೇ ಬಂಧಿಯಾದ ಬೆಳಕು. ಇಷ್ಟು ವರ್ಷದ ಕತ್ತಲ ಕೋಣೆಗೆ ದೊಂದಿ ಹಚ್ಚಲಾಗಿದೆ. ಕಪ್ಪನ್ನು ಓಡಿಸಿದ್ದಾಯಿತು. ಆದರೆ ತನ್ನೊಳಗಿನ ದಿಗ್ದರ್ಶನ ಮಾಡಿಸಿದ ಬೆಳಕನ್ನು ಹಿಡಿದಿಡಬೇಡವೇ? ಅದಕ್ಕೇ ಕಾವಲು ಕೂತಿರುವುದು. ಕಾವಲಲ್ಲೇ ಕಾಲಹರಣ. ದಿನದಂತಿದ್ದೇನೆ ಎಂಬ ಪ್ರಯತ್ನಪೂರ್ವಕ ಮುಖಚರ್ಯೆಯಲೂ ಏರುಮುಖದಲಿ ಸಾಗುತ್ತಿರುವ ಸಂಭ್ರಮದ ಸಂಭ್ರಮವನ್ನು ಹಿಡಿಯುವವರಿಲ್ಲ. ಏನಿಲ್ಲ, ಏನಿಲ್ಲ ಎಂಬ ನಾಲಗೆಯ ಸುಳ್ಳಿಗೆ ತುಟಿ ಸಣ್ಣದಾಗಿ ನಗುತ್ತಿದೆ. ಜಗತ್ತು ಕುಗ್ಗುತ್ತಾ ಕುಗ್ಗುತ್ತಾ ಒಂದೇ ಜೀವದ ಸುತ್ತ ಮನಸ್ಸು ಹಿಗ್ಗುತ್ತಿದೆ.
ಮೊದಲಿನಿಂದಲೂ ಮನಸ್ಸಿಗೆ ಮುಖ ಕನ್ನಡಿಯಾಗದಿರಲಿ ಎಂದೇ ಎಚ್ಚರ ವಹಿಸಿ, ಈಗ ಅದರಲ್ಲೇನೋ ನಾಚಿಕೆಯ ಸಡಗರ ಸೇರಿದ ಮೇಲೆ, ಯಾರು ನೋಡಿಬಿಟ್ಟಾರೋ ಎಂಬ ಆತಂಕದಲಿ, ನೋಡಲಿ ಎಂಬ ಒಳಗೊಳಗೇ ಕಂಡೂಕಾಣದ ಸಣ್ಣ ಅಲ್ಲವೆಂಬ ಆಸೆಯಲಿ ಭಾವನೆಗಳನ್ನು ಇನ್ನಷ್ಟು ಭದ್ರಗೊಳಿಸಿ ಇಟ್ಟಾಗಿದೆ. ಬೆಳಕಿನ ಕೈಗೆ ಸಿಕ್ಕ ಒಂದೊಂದೇ ಭಾವನೆಯನ್ನು ತಿರುಗಿಸಿಮುರುಗಿಸಿ ನೋಡುವ ಸುಖ ಈಗ... ಎಲ್ಲವೂ ಹೊಸತರಂತೆ, ತನ್ನೊಳಗಿಲ್ಲದ್ದೇನೋ ಆವಾಹಿಸಿಕೊಂಡಂತೆ ಕಾಣುತ್ತಿವೆ. ಇನ್ನೂ ಬಚ್ಚಿಟ್ಟ ಜೀವದೊಂದಿಗೆ ಮಾತನಾಡಿಲ್ಲ. ಈಗ ಮಾತು ಬೇಕಿಲ್ಲ. ಅಪಹರಣ ಮಾಡಿದ್ದೇನೆಂದುಕೊಂಡೇ ಸಿಕ್ಕಿಬೀಳದಿರಲು ಇಷ್ಟೆಲ್ಲ ಎಚ್ಚರ ವಹಿಸಬೇಕಾಗಿದೆ. ತಪ್ಪಿಸಿಕೊಳ್ಳದಂತೆಯೂ ನೋಡಬೇಕಲ್ಲ...ಆದರೀಗದೇಕೋ ಅಪಹರಣ ಪಡಲ್ಪಟ್ಟ ಸೂಚನೆಗಳು ದಿಗಿಲಿಗೀಡು ಮಾಡಿ, ತಳಮಳ ಹುಟ್ಟಿಸಿವೆ.
ಈ ಅಪಹರಣ ಆಪರೇಶನ್‌ಗಾಗಿ ತೆತ್ತ ಮೊತ್ತವೆಂದರೆ ನಿದ್ರೆ. ಕಣ್ಗಳನ್ನು ಮುಚ್ಚದೇ ಒಳಗನ್ನು ನೋಡುತ್ತಾ, ಕಾಯುತ್ತಾ, ಕನವರಿಸುತ್ತಾ, ಮುಚ್ಚಿಡುತ್ತಾ, ಅವುಗಳ ಮೇಲೆ ತೆವಳುತ್ತಾ ಕೂರಬೇಕಿದೆ. ಇದು ನಿದಿರೆಗಿಂತ ಹೆಚ್ಚು ಮದಿರೆ ಕುಡಿದ ಅಮಲು. ಆಡಿ ಬಿಟ್ಟ ಮಾತುಗಳು ಮರೆತು ಹೋಗದಂತೆ ಹಿಡಿದಿಡುವ ಭರದಲ್ಲಿ ಗೊತ್ತಿಲ್ಲದೆಯೇ ಕಚ್ಚಿಸಿಕೊಳ್ಳುವ ತುಟಿಗಳು. ವರ್ಷಗಳ ಕಹಿಯನ್ನು ಪ್ರವಾಹದಂತೆ ಕೊಚ್ಚಿ ಸಿಹಿನೆನಪುಗಳಾಗುತ್ತಿರುವ ಕ್ಷಣಗಳು. ಜೀವವನ್ನು ಒಳಗೆಳೆದುಕೊಳ್ಳುವ, ಜೀವಕ್ಕೆ ಜೀವವಾಗಿಸಿಕೊಳ್ಳುವ ಪ್ರಕ್ರಿಯೆ ಇದೇ ಏನೋ.
ತೀರಾ ಸಾಮಾನ್ಯವಾದ ಹಲವುಗಳನ್ನು ಅಸಾಮಾನ್ಯವೆಂದು ನೋಡುವ, ವಿಶೇಷವೆನಿಸುವಂತೆ ಮಾಡುವ ಈ ಬೆಳಕಿನ ಚಮತ್ಕಾರ ಸಿದ್ಧಿಗೆ ಅಗೋಚರ, ಅನಿರ್ದಿಷ್ಟ, ಅಸ್ಪಷ್ಟ ಹಾದಿಯಲ್ಲಿ ಇಪ್ಪತ್ನಾಲ್ಕು ವರ್ಷಗಳ ತಪಸ್ಸು ನಡೆದಿದೆ. ಪ್ರಪಂಚದ ಮೂರೂವರೆ ಬಿಲಿಯನ್ ಗಂಡು ಜನ್ಮದಲ್ಲಿ, ವಯಸ್ಸು ಹೊಂದುವಂಥ ಅಂದರೆ ನಲವತ್ತು ಶೇ. ಜನರಲ್ಲಿ ಈ ಜೀವದ ಆತ್ಮಬಂಧುವನ್ನು ಹುಡುಕಿಕೊಳ್ಳುವುದು ಅತಿ ಕ್ಲಿಷ್ಟಕರ ಜಿಗ್‌ಸಾ ಪಜಲ್ ಅಲ್ಲವೇ? ಅದನ್ನೀಗ ಬಿಡಿಸಿದ ತೃಪ್ತಿಗೆ ಗೆದ್ದ ಟ್ರೋಫಿ ಜೀವನದುದ್ದಕ್ಕೂ ಜೊತೆ ಇರುವ, ಬರುವ ಈ ಬೆಳಕು.

17.2.15

ಗಾಂಧೀ ನಗರದಲ್ಲಿ ಗಂಗಾಧರ


ಶಿವರಾತ್ರಿ ಬಂದರೆ ಊರಿನ ರಂಗಮಂದಿರದಲ್ಲಿ ಹಲವು ವರ್ಷಗಳಿಂದ ಶ್ರೀ ಮಂಜುನಾಥ ಫಿಕ್ಸು. ಭಂಗಿ ಕುಡಿದು ಭಂಗಿಭಂಗಿಯಲ್ಲಿ ಕುಣಿಯೋ ಶಿವನನ್ನು ನೋಡಲು ತಾವೂ ಕುಡಿದು ಹೋಗಿ ವಾಲಾಡಿದರೆ ಭಕ್ತಿ ಹೆಚ್ಚಾಗಿ ಶಿವ ಒಲಿಯುವ ಸಂಭಾವ್ಯ ಜಾಸ್ತಿ ಎಂಬ ನಂಬಿಕೆ ಊರ ಗಂಡಸರದು. ಹೀಗಾಗಿ ಹೆಣ್ಣುಮಕ್ಕಳು ಮನೆಯಲ್ಲೇ ಉಳಿಯಬೇಕಾದುದು ಅನಿವಾರ್ಯ. ಚಿಂತೆಯಿಲ್ಲ, ಈಗ ಎಲ್ಲರ ಮನೆಯಲ್ಲೂ ಟಿವಿಯಿದೆ. ಹಬ್ಬವೆಂದರೆ ನಾಲ್ಕು ಚಾನೆಲ್‌ಗಳಲ್ಲಿ ದಿನಕ್ಕೆ ಕನಿಷ್ಠ ನಾಲ್ಕು ಶಿವನ ಚಿತ್ರಗಳನ್ನು ಹಾಕುವಾಗ ಹೊರಾಂಗಣದಲ್ಲಿ ಚಳಿ ಹೊಡೆಸಿಕೊಂಡು ನೋಡುವ ಪಡಿಪಾಟಲೇಕೆ? ಅದೇನೇ ಇರಲಿ, ಶಿವರಾತ್ರಿಯಂದು ಟಿವಿ ನೋಡುವಾಗ ಎನಿಸುತ್ತದೆ, ನೃತ್ಯದಲ್ಲಿ, ಸಿಟ್ಟಿನಲ್ಲಿ ಸೈ ಎನಿಸಿಕೊಂಡಿರುವ ಈ ಶಿವ, ಚಲನಚಿತ್ರಗಳಿಗೂ ಎಂಟ್ರಿ ಕೊಟ್ಟುಬಿಟ್ಟನಲ್ಲಾ... ಕಲೆ ಹಾಗೂ ತಂತ್ರಜ್ಞಾನಗಳಿಗೆ ಎಷ್ಟು ಚೆನ್ನಾಗಿ ಅಪ್‌ಡೇಟ್ ಆಗಿದ್ದಾನೆ. ವೆರಿ ಮಾಡ್ರನ್ ಮೈಂಡೆಡ್ ನೋ?
ಒಮ್ಮೆ ಕಣ್ಣು ಮುಚ್ಚಿ ಭಕ್ತಿಯಿಂದ ಶಿವನ ರೂಪ ಕಲ್ಪಿಸಿಕೊಂಡು ನೋಡಿ, ನಟ ಚಿರಂಜೀವಿಯೋ, ಶ್ರೀಧರ‌್ರೋ, ಸಂಜೈ, ಶ್ರೀನಿವಾಸಮೂರ್ತಿ ಇಲ್ಲವೇ ಅಣ್ಣಾ ರಾಜಣ್ಣರ ರೂಪವೇ ಕಣ್ಮುಂದೆ ಬರುತ್ತದಲ್ಲವೇ? ನಾವು ಶಿವನನ್ನು ನೋಡಿರುವುದೇ ಹಾಗೆ, ಬೇಡರ ಕಣ್ಣಪ್ಪ, ಭೂಕೈಲಾಸ, ಶ್ರೀಮಂಜುನಾಥ, ಶಿವಪಾರ್ವತಿ, ಭಕ್ತ ಮಾರ್ಕಂಡೇಯ, ಭಕ್ತಸಿರಿಯಾಳ, ಶ್ರೀನಂಜುಂಡೇಶ್ವರ ಮಹಿಮೆ, ಶ್ರೀ ಧರ್ಮಸ್ಥಳ ಮಹಾತ್ಮೆಯಂಥ ಸಿನಿಮಾ ಮಹಾತ್ಮೆ ಇದು!
ಕಣ್ಣಿಗೆ ಕಾಣದವನನ್ನು ಹೀಗಿದ್ದಾನೆ ಎಂದು ಯಾರಾದರೂ ತೋರಿಸಿದರೆ, ನೋಡಿಬಂದಂತೆ ಹೇಳಿದರೆ ನಂಬದೇ ವಿಧಿ ಇದೆಯೇ? ನಿರ್ದೇಶಕರು ಕೊಟ್ಟ ರೂಪಕ್ಕೆ, ಈ ನಟರು ವೇಷ ತೊಟ್ಟು ಪರಕಾಯ ಪ್ರವೇಶವನ್ನೇ ಮಾಡಿದ್ದಾರೆ. ನಟ ಶ್ರೀಧರ್ ‘ಶಂಕರ ಶಶಿಧರ ಗಜಚರ್ಮಾಂಬರ’ ಹಾಡಿಗೆ ತ್ರಿಶೂಲ ಹಿಡಿದು, ಬೂದಿ ಬಳಿದುಕೊಂಡು ಹಾರಿ ತಿರುಗಿ ಕುಣಿಯುತ್ತಿದ್ದರೆ, ನಾಟ್ಯಪ್ರವೀಣ ಶಿವ ಹಾಗಿರದೆ ಬೇರೆ ರೂಪದಲ್ಲಿರಲು ಸಾಧ್ಯವೆಂದು ಯೋಚಿಸಲೂ ಮೆದುಳು ತಯಾರಿರುವುದಿಲ್ಲ. ಹಾಗಾಗೇ ಶಿವನ ಚಿತ್ರ ಎಂದರೇ ಶ್ರೀಧರ್ ಪ್ರತ್ಯಕ್ಷನಾಗಲೇಬೇಕಾದ ಜಮಾನವಿತ್ತು.
ಇನ್ನು ‘ಬೇಡರ ಕಣ್ಣಪ್ಪ’ದಲ್ಲಿ ಶಿವ ಪಾತ್ರಧಾರಿ ಎಚ್.ಆರ್. ರಾಮಚಂದ್ರಶಾಸ್ತ್ರಿ  ಪ್ರತ್ಯಕ್ಷನಾಗುತ್ತಿದ್ದಂತೆ ಇಡೀ ಸಿನಿಮಾ ಟೆಂಟಿನಲ್ಲಿ ಕುಳಿತಿದ್ದವರೆಲ್ಲ ಎದ್ದು ನಿಂತು ಕೈ ಮುಗಿದೋ, ಅಡ್ಡ ಬಿದ್ದೋ, ಹರಹರ ಮಹದೇವ ಘೋಷಣೆ ಕೂಗಿಯೋ ಭಕ್ತಿಯ ಪರಾಕಾಷ್ಠೆಯಲ್ಲಿ ಅಕ್ಷರಶಃ ಕಣ್ತುಂಬಿಕೊಳ್ಳುತ್ತಿದ್ದರು. ಬೇಡರ ಕಣ್ಣಪ್ಪನಾಗಿ ಶಿವಭಕ್ತನಾಗಿದ್ದ ರಾಜ್‌ಕುಮಾರ್, ‘ಗಂಗೆಗೌರಿ’, ‘ಪಾರ್ವತಿ ಕಲ್ಯಾಣ’ಗಳಲ್ಲಿ ತಾನೇ ಸ್ವತಃ ಶಿವ ವೇಷ ಹಾಕಿದಾಗ, ಶಿವ ಹೀಗೆಯೇ ಇರುತ್ತಾನೆ ಎಂದು ಅನಿಸಿದುದರಲ್ಲಿ ಪವಾಡವೇನೂ ಇಲ್ಲ. ಎಷ್ಟೇ ಆದರೂ ಪಾತ್ರಧಾರಿ ನಟ ಸಾರ್ವಭೌಮ ತಾನೇ?
ಹೆಚ್ಚು ನೃತ್ಯವಿಲ್ಲದ ಶಿವನ ಪಾತ್ರವೆಂದರೆ ಅಲ್ಲಿ ಶ್ರೀನಿವಾಸಮೂರ್ತಿಯ ಮುಖ ಪ್ರಸನ್ನವದನ ಗಂಗಾಧರನಾಗಲೂ ಸೈ, ಮುನಿಸಿನ ‘ಮೂರ್ತಿ’ಯಾಗಲೂ ಸೈ. ಅವರಲ್ಲದೆ ಒಮ್ಮೆ ‘ವಿಷ್ಣು’ವರ್ಧನ ‘ಶಿವ’ವದನನಾಗಿದ್ದೂ ಉಂಟು. ಇದೆಲ್ಲ ನಮ್ಮ ಅಪ್ಪ ಅಮ್ಮ ಕಂಡ ಶಿವನಾಯಿತು. ಈಗಿನ ಯುವಜನರ ಬಳಿ ಶಿವ ಹೇಗಿರುತ್ತಾನೆಂದರೆ ಚಿರಂಜೀವಿಯ ಹೊರತು ಬೇರೆ ಮುಖ ವರ್ಣನೆ ಮಾಡಲು, ಕಲ್ಪಿಸಿಕೊಳ್ಳಲೂ ಅವರಿಂದ ಸಾಧ್ಯವಿಲ್ಲ. ಏಕೆಂದರೆ ನಾವು ಶಿವನನ್ನು ನೋಡಿರುವುದೇ ‘ಶ್ರೀ ಮಂಜುನಾಥ’ದ ಶಿವನನ್ನು. ಈ ಸ್ಫುರದ್ರೂಪಿ ಶಿವನಿಗೆ ಸಾಟಿ ಬೇರಿಲ್ಲ ಎಂಬ ಮಟ್ಟಿಗೆ ಕಣ್‌ಕಪ್ಪು, ಜಟೆ, ವಿಭೂತಿ, ಗಟ್ಟಿಧ್ವನಿ, ಜೊತೆಗೆ ದೃಢಕಾಯ ಚಿರಂಜೀವಿಯನ್ನು ಕೈಲಾಸವಾಸಿಯಾಗಿಸುತ್ತವೆ.
ಭಕ್ತಿಪ್ರಧಾನ ಚಿತ್ರಗಳು ಮೂಲೆಗುಂಪಾಗಿರುವ ಈ ದಿನಗಳಲ್ಲಿ ಶಿವ, ಲಿಂಗ, ಲಿಂಗೇಶ ಎಂಬ ಹೀರೋಗಳ ಹೆಸರಿಗಷ್ಟೇ ಶಿವ ಸೀಮಿತನಾಗಿದ್ದಾನೆ. ಅಂಥದರಲ್ಲೂ ಯಾರಾದರೂ ಶಿವ ಪಾತ್ರವನ್ನಿಟ್ಟುಕೊಂಡು ಸಿನಿಮಾ ಮಾಡಿ ನಟರನ್ನು ಹುಡುಕ ಹೊರಟರೆ ಗಣಪತಿ, ಸುಬ್ರಹ್ಮಣ್ಯ, ನಾರದ ಎಲ್ಲರ ಪಾತ್ರಕ್ಕೂ ಈಗಿನ ಹೀರೋಗಳ ಚಹರೆ ಮ್ಯಾಚ್ ಆಗಬಹುದು. ಆದರೆ ಶಿವನ ಪಾತ್ರಕ್ಕೆ ಯಾರಿದ್ದಾರೆ?!