ಪುಟಗಳು

ನೇಮಿಚಂದ್ರ- ನನ್ನ ಮನಸ್ಸಿನ ಅತ್ಯಾಪ್ತ ಲೇಖಕಿ..ನಂಗೊಂದು ಹವ್ಯಾಸವಿದೆ, ಪುಸ್ತಕ ಓದುವಾಗಲೆಲ್ಲಾ ನನಗಿಷ್ಟವಾಗುವ ಸಾಲುಗಳನ್ನೆಲ್ಲಾ ಡೈರಿಯೊಂದರಲ್ಲಿ ಬರೆದುಕೊಳ್ಳುವುದು..ನನ್ನ ಸೀನಿಯರ್ ಒಮ್ಮೆ ನೋಡಿ ಏನೆಲ್ಲಾ ವಿಚಿತ್ರ ಹವ್ಯಾಸಗಳಿರುತ್ತಪ್ಪಾ ಜನಗಳಿಗೆ ಅಂತಿದ್ರು?!ಆ ಡೈರಿಯ ಮ್ಯಾ಼ಕ್ಸಿಮಮ್ ಪುಟಗಳು ನೇಮಿಚಂದ್ರರ ಬರಹದ ಸಾಲುಗಳಿಗೇ ಮೀಸಲು:) ಅವರ ಬರಹಗಳನ್ನು ಓದುವಾಗ ಯಾವ ಸಾಲುಗಳನ್ನ ಬರೆದುಕೊಳ್ಳದೆ ಬಿಡಲಿ ಎಂಬುದೇ ದೊಡ್ಡ ಪ್ರಶ್ನೆ! 'ಬದುಕು ಬದಲಿಸಬಹುದು' , 'ಪೆರುವಿನ ಪವಿತ್ರ ಕಣಿವೆಯಲ್ಲಿ', 'ನೂರು ಸಾವಿರ ಸಾವಿನ ನೆನಪು','ನೇಮಿಚಂದ್ರರ ಈವರೆಗಿನ ಕತೆಗಳು'-ಎಲ್ಲವೂ ಬರಹದ ಶೈಲಿ ಹಾಗೂ ವಸ್ತುಗಳಿಂದಾಗಿಯೇ ಓದಿಸಿಕೊಂಡು ಹೋಗುತ್ತವೆ.ಅದರಲ್ಲೂ 'ಬದುಕು ಬದಲಿಸಬಹುದು'ಪುಸ್ತಕವನ್ನು ಲೆಕ್ಕವಿಲ್ಲದಷ್ಟು ಬಾರಿ ಓದುತ್ತೇನೆ..ಪ್ರತಿ ಬಾರಿಯೂ ಅದು ನನಗೆ ಮತ್ತಷ್ಟು ಅಚ್ಚುಮೆಚ್ಚಾಗುತ್ತಲೇ ಹೋಗುತ್ತದೆ. ನನ್ನನ್ನು ಆಳವಾಗಿ ಗಮನಿಸಿಕೊಂಡಷ್ಟೂ ಅದರಿಂದ ನನ್ನಲ್ಲಾದ ಸಣ್ಣ ಪುಟ್ಟ ಬದಲಾವಣೆಗಳು ಗೋಚರವಾಗುತ್ತದೆ ಹಾಗೂ ಅವು ನನಗೆ ದೊಡ್ಡ ತರದಲ್ಲೇ ಒಂದಲ್ಲಾ ಒಂದು ಬಾರಿ ಸಹಾಯಕವಾಗುತ್ತವೆ..ನನ್ನಲ್ಲಿ ಧನಾತ್ಮಕ ಯೋಚನೆಗಳನ್ನು ತುಂಬುತ್ತವೆ..     
 ಅವರ ಕೆಲವು ಬರಹದ ಸಾಲುಗಳು ಈ ಕೆಳಗೆ ಸುಮ್ಮನೇ ಓದಿಕೊಳ್ಳಲು..,
" ಎಷ್ಟು ಬದುಕನ್ನು ವ್ಯರ್ಥವಾಗಿ ಕಳೆದದ್ದಿದೆ, ಪ್ರೀತಿಸದೆ, ಬಯಸಿದ್ದನ್ನು ಮಾಡದೇ, 'ಅಯ್ಯೋ ಟೈಮೇ ಇಲ್ಲ' ಎಂಬ ಸಬೂಬುಗಳನ್ನು ಮುಸುಕು ಹಾಕಿ ಮಲಗಿದ್ದಿದೆ? "
"ಸಮಯವಿಲ್ಲವೇ ಹೇಳಿ? ಕೈ ತೆರೆದು ಬಂದ ಮಗುವನ್ನು ಅಪ್ಪಿಕೊಳ್ಳಲು, ಪುರಭವನದ ಎದುರು ಪ್ಲಕಾರ್ಡ್ ಹಿಡಿದು 'ಯುದ್ಧ ಬೇಡ' ವೆಂದು ಕೂಗು ಹಾಕಲು, ಮರೆತು ಹೋದ ಕೈಗೆ ಕುಂಚ ಹಿಡಿಸಲು, ಕತೆ ಬರೆಯಲು, ಹೆಂಡತಿ ಮಕ್ಕಳೊಡನೆ ಒಂದು ಸುಂದರ ಸಂಜೆ ಕಳೆಯಲು...ಸಮಯವಿಲ್ಲವೇ ಹೇಳು,ಮಾಡಬೇಕಾದದ್ದನ್ನು ಈಗ ಮಾಡು."
"ಬದುಕು ಭರವಸೆಯನ್ನು ಬೇಡುತ್ತದೆ.ಪರಸ್ಪರರ ಮೇಲಿನ ನಂಬುಗೆ, ಭರವಸೆಯಲ್ಲಿ ಬದುಕಿದೆ"
"ಎಷ್ಟು ಬಾರಿ ನಮ್ಮ ಬದುಕಿಗೆ ಇಲ್ಲದ ಬೇಲಿ, ಸರಹದ್ದು, ಎಲ್ಲೆಗಳನ್ನು ಹಾಕಿಕೊಳ್ಳುತ್ತೇವೆ.ಕಾಲ್ಪನಿಕ ಮಿತಿಗಳಲ್ಲಿ ಕನಸು ಕಾಣಲೂ ಹೆದರುತ್ತೇವೆ.ಮಿತಿಗಳಿರುವುದು ನಿಜ.ಆದರೆ ಅವು ಹೊರಗಿನ ಜಗತ್ತಿನಲ್ಲಿಲ್ಲ, ನಮ್ಮ ಮನಸ್ಸಿನ್ನಲ್ಲಿದೆ. "
"ನೋವಿನ ಕ್ಷಣಗಳು ನಮಗೆ ನಮ್ಮೊಳಕ್ಕೆ ಇಳಿಯಲು ಪ್ರೇರೇಪಿಸುತ್ತವೆ. ನೊವಿನ ಕ್ಷಣಗಳು ನಮ್ಮೊಳಗಿನ ಆಂತರ್ಯದ ಶಕ್ತಿಯನ್ನು ನಮಗೇ ಪರಿಚಯಿಸುತ್ತವೆ. ಬದುಕು ನಿಜಕ್ಕೂ 'ನಮಗೇನಾಯಿತು' ಎಂಬುದಲ್ಲ, 'ನಮಗಾದದ್ದಕ್ಕೆ ನಾವು ಹೆಗೆ ಪ್ರತಿಕ್ರಿಯಿಸಿದೆವು, ನಮಗಾದದ್ದನ್ನು ನಾವು ಹೇಗೆ ಸ್ವೀಕರಿಸಿದೆವು' ಎಂಬುದಾಗಿದೆ.
"ನಮ್ಮ ಕನಸುಗಳಿಗೆ ಎಂಥ ಶಕ್ತಿ ಇದೆ!ಕನಸು ಕಂಡರೆ ಸಾಕು, ರೆಕ್ಕೆ ಮೊಳೆಯುತ್ತವೆ ಹಾರಲು. ಕನಸುಗಳು ನಮ್ಮನ್ನು ಕೊಂಡೊಯ್ಯುತ್ತವೆ ಸಪ್ತ ಸಮುದ್ರದಾಚೆಗೆ, ಹಿಮಾಲಯದೆತ್ತರಕ್ಕೆ, ಕೆಲವೊಮ್ಮೆ ಕನಸುಗಳು ಕೊಂಡೊಯ್ಯಬಲ್ಲವು, ಕಲ್ಪನಾರಂತೆ ಅಂತರಿಕ್ಷಕ್ಕೂ! "
"ಬರುವವರು, ಹೋಗುವವರು ಎಷ್ಟೊಂದು ಮಂದಿ.ಆದರೆ ಅದೇಕೋ ಬಂದವರಿಗಿಂತ ಹೋದವರೇ ಹೆಚ್ಚು ಪ್ರಿಯರಾಗುತ್ತಾರೆ."
ಇನ್ನೂ ಅದೆಷ್ಟೋ ಸಾಲುಗಳು, ನನ್ನಾಳವನ್ನು ತಲುಪಿ ಪ್ರೀತಿಸಲ್ಪಡುವ ಸಾಲುಗಳು..ಬರೆದಷ್ಟೂ ಮುಗಿಯದ ಮುತ್ತುಗಳು, ಓದಿದಷ್ಟೂ ಓದಬೇಕಿನಿಸುವ ಪದವಿಲಾಸ..
 ಎಷ್ಟು ಬಾರಿ ನೇಮಿಚಂದ್ರರಿಗೆಂದು ಪತ್ರ ಬರೆಯುತ್ತೇನೆ,ಕಳಿಸಿ ಅದನ್ನು ಅವರು ಓದುವ ಖುಷಿಯಲ್ಲೇ ಕಾಲ ಕಳೆಯುತ್ತೇನೆ..ಆದರೆ ಕೊನೆಗೆ ನನ್ನ ಪತ್ರ ಚೈಲ್ಡಿಶ್ ಎನಿಸಿ ಕಳಿಸದೇ ಸುಮ್ಮನಾಗುತ್ತೇನೆ. ಆಕೆ ಸುಮ್ಮನೇ ಹೇಳುವುದಿಲ್ಲ, ಅವರ ಬದುಕನ್ನೂ ಬಯಸಿದಂತೆ ಚೆಂದಗಾಣಿಸಿಕೊಳ್ಳುತ್ತಾರೆ.
ಯಾರದೇ ಆಗಲಿ, ಬರಹದೊಂದಿಗೆ ಬೆಸೆದ ಬದುಕು ಎಂದಿಗೂ ವಿಸ್ಮಯವೆನಿಸುತ್ತದೆ. ಅಂತಹವರು ತಮ್ಮ ಅಂತರಂಗಕ್ಕೆ ತುಂಬಾ ನಿಕಟವಾಗಿ ಬದುಕುತ್ತಿದ್ದಾರೆ ಎಂಬ ಭಾವವೇ ಅವರೆಡೆಗೆ ಗೌರವವನ್ನು ಮೂಡಿಸುತ್ತದೆ. ಭಾವಗಳ ಒರತೆ ಅಕ್ಷರಗಳಲ್ಲಿ ಚಿಮ್ಮುವ ಪರಿಯೇ ಅಚ್ಚರಿ..!!
ಬದುಕಿನಿಂದ ದೂರ ಓಡುವ ಸಂದರ್ಭ ಬಂದಾಗಲೆಲ್ಲಾ ನೇಮಿಯವರ ಬರಹಗಳು ಬದುಕಿಗೆ ಮತ್ತೂ ಹತ್ತಿರವಾಗುವುದು ಹೇಗೆಂದು ಹೇಳುತ್ತವೆ. ಮೊನ್ನೆ ಫ಼ೇಸ್ ಬುಕ್ನಲ್ಲಿ ನೇಮಿಚಂದ್ರರನ್ನು ಕಂಡ ಕ್ಷಣ ಮೈ ಅಕ್ಷರಶಃ ರೋಮಾಂಚನಗೊಂಡಿದ್ದು ನಿಜ. ಅದರಲ್ಲಿ ನಾ ಕಳಿಸಿದ ಸಂದೇಶಕ್ಕೆ ಅವರಿಂದ ಬಂದ 'ಥ್ಯಾಂಕ್ಸ್' ಎಂಬ ಪ್ರತಿಕ್ರಿಯೆಯನ್ನು ಅದೆಷ್ಟು ಬಾರಿ ಓದಿ ಖುಷಿಪಟ್ಟೆನೋ ಲೆಕ್ಕವಿಲ್ಲ! ನನ್ನೊಳಗಿನ ಭಾವದೀಪ್ತಿಯಲಿ ಸುಮ್ಮನೇ ಬಂದು ಕುಳಿತ ನೇಮಿಗಿದೋ ನಮನ..!