ಪುಟಗಳು

28.4.14

ಪಾಪಸ್

ಪದ್ಯಪ್ರದೇಶ
ಸುಡುಬಿಸಿಲು ಜಡಿಮಳೆಗೆ
ಕೊರೆವ ಚಳಿಗೂ
ಹೂ ಹೊತ್ತು ನಿಂತು ನಗುವ  
ಪಾಪಸ್ ಜಾತಿಯ ಗಿಡದ ಹೆಸರು ತಿಳಿದಿಲ್ಲ
ನೀರು ಹಾಕದ ಮನೆಯೊಡತಿಯನ್ನೂ
 ಹೂ ಬೇಕೇ ಕೇಳುತ್ತದೆ
ಬಾಬ್ಕಟ್ ತಲೆಯ ಆಕೆಗಲಿಬಿಲಿಗೊಳ್ಳುತ್ತಾಳೆ
ಯೋಚಿಸುತ್ತಾಳೆ ಹೂ ಯಾರಿಗೆ?
ತಡವರಿಸುತ್ತಾಳೆ,ನಮ್ಮ ಮನೆಯ 
ಆಧುನಿಕ ದೇವರು ಹೂ ಮುಡಿಯುವುದಿಲ್ಲ!
ಸಂಜೆ ನೋಡುತ್ತಾಳೆಬರಗಾಲದಲ್ಲೂ
 ನಿತ್ಯ ಕೊಡಪಾನ ಕಾವೇರಿ ಕುಡಿವ ತುಳಸಿಗೆ
ಚಿಗುರುವ ಮನಸ್ಸೇ ಇಲ್ಲ
ಎಂದೋ ತಂದಿಟ್ಟ ದಿನದಿಂದಲೂ 
ನೀರು ಕೇಳದ 'ಪಾಪ'ಸ್ ಹೂ
' ಹಿಡಿದು ಕುಳಿತಿದ್ದಾಳೆ
ಮರಳುಗಾಡಿನ ಗಿಡಕೆ ಕೊನೆಗೂ 
ಮಲೆನಾಡಿನ ಕಾವೇರಿ ಸ್ಪರ್ಶ
ಪುಳಕಗೊಂಡಿದ್ದು ಜೀವಜಲವೇ
ಪಾಪಸ್ ನಿರ್ಲಿಪ್ತ, ಸಂತೃಪ್ತ.
-ರೇಶ್ಮಾ ರಾವ್ ಸೋನ್ಲೆ

15.4.14

ಪ್ರೇ'ರೇಪ್‌'ಣೆ

ಪುಢಾರಿಗಳು ಎಂಥ ಮಾತಾಡ್ತಾರೆ ನೋಡಿ!
ಹಿಂದುಸ್ತಾನ ಇತ್ತೀಚೆಗೆ ರೇಪಿಸ್ತಾನವಾಗಿದೆ. ಸ್ತ್ರೀಯರ ಮೇಲೆ ನಿಜವಾಗಿಯೂ ನಡೆಯುವ ಅತ್ಯಾಚಾರಗಳ ಜತೆಗೆ, ರಾಜಕಾರಣಿಗಳ ಮಾತಿನ ಅತ್ಯಾಚಾರಗಳೂ ಹೆಚ್ಚುತ್ತಿವೆ. ಚುನಾವಣೆ ಕಣದಲ್ಲಿ ಇಂಥ ಮಾತುಗಳದೇ ವರಸೆ. ಮುಲಾಯಂ ಸಿಂಗ್‌ರಂಥವರೇ ರೇಪಿಸ್ಟ್‌ಗಳನ್ನು 'ಪ್ರೇರೇಪಿಸು'ವ ಮಾತನಾಡುತ್ತಾರೆ. 
ಅತ್ಯಾಚಾರದ ಬಗ್ಗೆ ಇಲ್ಲೊಂದಿಷ್ಟು ರಾಜಕೀಯ ವಿದ್ವಾಂಸರು ಜನ ಮೆ(ಚ)ಚ್ಚುವಂತೆ ಮಾತನಾಡಿದ್ದಾರೆ. ಇವರ ಈ ತಿಳಿವಳಿಕೆ ದೇಶದ ಹೆಣ್ಮಕ್ಕಳಿಗೆಲ್ಲ ಇದ್ದಿದ್ದರೆ ಭಾರತದಲ್ಲಿ ಎಂದೂ ಅತ್ಯಾಚಾರ ಎಂಬ ಪದಪ್ರಯೋಗವೇ ಇರುತ್ತಿರಲಿಲ್ಲ! ವಿಧವಿಧದ ಕಾರಣಗಳನ್ನೂ, ಅದಕ್ಕೆ ಪರಿಹಾರವನ್ನೂ ಆವಿಷ್ಕರಿಸಿರುವ ಇಂಥವರಿಂದ ನಮ್ಮ ದೇಶದ ಸಂಸ್ಕಾರ, ಆಚಾರ ವಿಚಾರಗಳು ಉದ್ದೀಪನಗೊಳ್ಳಬೇಕಿದೆ!
ವಾಸ್ತವವಾಗಿ, ರೇಪ್ ಎಂಬುದು ಇಂದು ಗಂಡಸು, ಸ್ತ್ರೀಯನ್ನು ಶೋಷಿಸುವ ಅಸ್ತ್ರವಾಗಿಯಷ್ಟೇ ಉಳಿದಿಲ್ಲ. ಅದು ಹೆಣ್ಣು ಕುಲವನ್ನು ಗಂಡು ಕುಲ ಆಳುತ್ತಿರುವ, ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕಲು ಇನ್ನೊಂದು ಪಾರ್ಟಿಯವರು ದುರುಪಯೋಗಿಸುತ್ತಿರುವ ಅಸ್ತ್ರವಾಗಿದೆ. ಮಾನಭಂಗದ ಪ್ರಕರಣಗಳು ಸರ್ಕಾರಗಳನ್ನೇ ಅಲುಗಾಡಿಸಿದ್ದನ್ನೂ, ಬೀಳಿಸಿದ್ದನ್ನೂ ನಾವು ನೋಡಬಹುದು. ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ನಿರ್ಭಯ ಮೇಲೆ ನಡೆದ ದಾರುಣ ಅತ್ಯಾಚಾರವನ್ನೂ, ತದನಂತರ ಅಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿ ಆಪ್ ಪ್ರತಿಷ್ಠಾಪನೆಯಾದದ್ದನ್ನೂ ಗಮನಿಸಬಹುದು. ಈಗ ರೇಪಿಸ್ಟ್‌ಗಳನ್ನು ಸಮರ್ಥಿಸಿಕೊಳ್ಳುತ್ತಿರುವ ಮುಲಾಯಂನನ್ನು ಅಲ್ಲಿನ ಮತದಾರರು ಚುನಾವಣೆಯಲ್ಲಿ ಚಚ್ಚಿ ಬಿಸಾಕಲು ಇದೊಂದು ಕಾರಣ ಸಾಕು. ದುರಂತವೆಂದರೆ, ತೃತೀಯ ರಂಗದ ಸರ್ಕಾರದ ಕನಸಿನಲ್ಲಿರುವ ಮಾನ್ಯ ದೇವೇಗೌಡರು ಕೂಡ ಮುಲಾಯಂ ಮಾತನ್ನು ಬಾಯ್ಮುಚ್ಚಿಕೊಂಡು ಸ್ವಾಗತಿಸಿರುವುದು!
ಮುಲಾಯಂ ಸಿಂಗ್ ಯಾದವ್
ಅತ್ಯಾಚಾರಿಗಳ ಬಾಳು ಬೆಳಕಾಗಿಸುವಂಥ ವಿಚಾರಸರಣಿಯೊಂದನ್ನು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ತಮ್ಮ ಎದೆಯಾಳದಿಂದ ಹೊರಹಾಕಿದ್ದಾರೆ. ಅತ್ಯಾಚಾರದ ಬಗ್ಗೆ ರ್ಯಾಲಿಯೊಂದರಲ್ಲಿ ಮಾತನಾಡುತ್ತಾ, 'ಹುಡುಗರು ತಪ್ಪು ಮಾಡುವುದು ಸಹಜ. ಹಾಗೆಂದು ಅವರನ್ನು ನೇಣಿಗೇರಿಸುವುದು ಸರಿಯಲ್ಲ' ಎಂದಿದ್ದಾರೆ. ವಾವ್! ಅದೆಂತಾ ಕರುಣಾಮಯಿ, ವಿಶಾಲ, ಕ್ಷಮಾಶೀಲ ಮನಸ್ಸು ನಿಮ್ಮದು ಮುಲಾಯಂ? ಏನೋ ಕೆಟ್ಟ ಗಳಿಗೆ, ಅವನು ಹಾಗೆ ಮಾಡಿದ ಎಂದು ಹುಡುಗಿಯರು ಎದ್ದೋಗ್ತಾ ಇರಬೇಕಲ್ಲವೇ?
ಬನ್ವಾರಿ ಲಾಲ್ ಸಿಂಘಾಲ್
ಅತ್ಯಾಚಾರವೇ? ತಪ್ಪು ಆಕೆ ತೊಟ್ಟಿದ್ದ ಉಡುಗೆಯದೇ ಆಗಿರುತ್ತದೆ! ಅಂದ ಹಾಗೆ ಯಾವ ಬಟ್ಟೆ ತೊಟ್ಟಿದ್ದಳು?ರಾಜಸ್ತಾನದ ಬಿಜೆಪಿ ಶಾಸಕ ಸಿಂಘಾಲ್ ಹೇಳುತ್ತಾರೆ, ಶಾಲಾ ಹುಡುಗಿಯರು ಧರಿಸುವ ಯೂನಿಫಾರಂ ಸ್ಕರ್ಟ್ ಹುಡುಗರನ್ನು ಕೆಟ್ಟ ಕೃತ್ಯ ಮಾಡಲು ಪ್ರೇರೇಪಿಸುತ್ತದಂತೆ. ಹಾಗಾದರೆ ಬುರ್ಖಾ ತೊಡುವ ಸೌದಿ ಅರೇಬಿಯಾದಲ್ಲೂ ರೇಪ್ ನಡೆಯುತ್ತಲ್ಲಾ, ಅಲ್ಲಿನ ಹುಡುಗರಿಗೆ ಬುರ್ಖಾದೊಳಗೆ ನೋಡುವ ಎಕ್ಸ್ ರೇ ಕಣ್ಣುಗಳಿರುತ್ತವೆಯೇ?!
ಟಿ. ತ್ಯಾಗರಾಜನ್
ಪುದುಚೆರಿಯ ಶಿಕ್ಷಣ ಮಂತ್ರಿ ತ್ಯಾಗರಾಜನ್ ಕೂಡಾ ಹುಡುಗಿಯರ ಬಟ್ಟೆಗಳು ಹುಡುಗರ ಸಹಜಾಕಾಂಕ್ಷೆಗಳನ್ನು ಕೆರಳಿಸುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲ, ಶಿಕ್ಷಣ ಮಂತ್ರಿಗಳಾಗಿ ಈ ಬಗ್ಗೆ ಕ್ರಮ ಕೈಗೊಳ್ಳಬೇಡವೇ? ಹಾಗಾಗಿ ಶಾಲೆಗಳಲ್ಲಿ ಹುಡುಗಿಯರು ಕೋಟ್ ಧರಿಸಿ ಬರಬೇಕಂತೆ, ಅದೂ ಅತಿ ಶಾಖವನ್ನು ಹೊಂದಿರುವ ಪುದುಚೆರಿ ನಗರದಲ್ಲಿ. ವಾಟ್ ಆ್ಯನ್ ಐಡಿಯಾ ಸರ್‌ಜಿ?! ಮಹಿಳೆಯರನ್ನು ರಕ್ಷಿಸುವ ಬಗ್ಗೆ ಅದೇನು ಕಾಳಜಿ? 
ಓಂ ಪ್ರಕಾಶ್ ಚೌಟಾಲಾ
ಹರಿಯಾಣದ ಕಾಪ್ ಪಂಚಾಯಿತಿ ಈ ಅತ್ಯಾಚಾರ ನಿಗ್ರಹಕ್ಕೆ ತನ್ನದೊಂದು ಅಭೂತಪೂರ್ವ ಕಾಣಿಕೆ ನೀಡಲು ಮುಂದಾಯಿತು. ಅದರ ಪ್ರಕಾರ ಹುಡುಗಿಯರಿಗೆ ಮದುವೆಯ ವಯಸ್ಸನ್ನು ಇಳಿಸಬೇಕಂತೆ. ಇದರಿಂದ ಅತ್ಯಾಚಾರ ಪ್ರಕರಣಗಳು ನಿಲ್ಲುವುದಂತೆ. ಅದು ಮದುವೆಯೆಂದರೇನೆಂದೇ ಗೊತ್ತಿರದ ಪ್ರತಿ ಹುಡುಗಿಯ ಮೇಲೂ ಅತ್ಯಾಚಾರ ನಡೆಸಲು ಇವರೇ ಪ್ರೇರೇಪಿಸಿದಂತಲ್ಲವೇ? ನಮಗೆ ಹಾಗೆನಿಸುತ್ತದೆ. ಆದರೆ ಹರ್ಯಾಣದ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾಗೆ ಹಾಗೆನಿಸಲಿಲ್ಲ! ಅವರು ಈ ಸಲಹೆ ಅತ್ಯುತ್ತಮವಾದುದೆಂದು ಹಾಡಿಹೊಗಳಿ ದೇಶಾದ್ಯಂತ ಛೀಮಾರಿ ಹಾಕಿಸಿಕೊಂಡರು. ಜಿತೇಂದರ್ ಚಾತರ್
ಹರಿಯಾಣದ ಕಾಪ್ ಪಂಚಾಯಿತಿಯ ಜಿತೇಂದರ್ ಚಾತರ್ ಅತ್ಯಾಚಾರದ ಮೂಲಕಾರಣವನ್ನೇ ಕಂಡುಹಿಡಿದರೂ ಅವರಿಗೆ ಜ್ಞಾನಪೀಠ ನೀಡದಿದ್ದುದು ತಪ್ಪಲ್ಲವೇ? ಅವರ ಪ್ರಕಾರ ಫಾಸ್ಟ್‌ಫುಡ್‌ಗಳನ್ನು ತಿನ್ನುವುದೇ ಅತ್ಯಾಚಾರಕ್ಕೆ ಕಾರಣವಂತೆ! 
ಶೀಲಾ ದೀಕ್ಷಿತ್
ದೆಹಲಿಯ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅತ್ಯಾಚಾರ ತಡೆಗಟ್ಟುವ ಸಲುವಾಗಿ ಹುಡುಗಿಯರಿಗೆ ಸಾಹಸಬುದ್ಧಿ ಪ್ರದರ್ಶಿಸದಂತೆ ಎಚ್ಚರಿಕೆ ನೀಡುತ್ತಾರೆ. ಓರ್ವ ಮಹಿಳೆಯಾಗಿ ಮಹಿಳೆಯರಿಗದೆಷ್ಟು ಚೆನ್ನಾಗಿ ಬುದ್ಧಿ ಹೇಳಿದಿರಿ ಶೀಲಾ? ಕಿವಿ ಹಿಂಡಿ ಹೇಳಬೇಕಿತ್ತು, ಅರ್ಥವಾಗುವುದಿಲ್ಲ ಬಡ್ಡೆತ್ತುಗಳಿಗೆ!
ವಿಜಯ್ ವಾರ್ಗಿಯ
ಮಧ್ಯಪ್ರದೇಶದ ಬಿಜೆಪಿ ನಾಯಕ ವಿಜಯ್ ವಾರ್ಗಿಯಾ ಒಂದುತ್ತಮ ಉದಾಹರಣೆಯೊಂದಿಗೆ ಅತ್ಯಾಚಾರಕ್ಕೆ ಕಾರಣವನ್ನೂ, ಪರಿಹಾರವನ್ನೂ ಸೂಚಿಸುತ್ತಾರೆ. ರಾಮಾಯಣದಲ್ಲಿ ಸೀತೆಗೆ ಗೆರೆ ದಾಟಬೇಡವೆಂದರೂ ದಾಟಿದ್ದುದೇ ಅವಳನ್ನು ರಾವಣ ಅಪಹರಣ ಮಾಡಲು ಕಾರಣ. ಹಾಗೆಯೇ ಮಹಿಳೆಯರು ತಮ್ಮ ಬೌಂಡರಿ ದಾಟಿ ಹೊರಬಂದರೆ ತೊಂದರೆ ಅನುಭವಿಸುತ್ತಾರೆ. ಅದರೊಳಗೇ ಇರಬೇಕಂತೆ. ಈಗ ಬೌಂಡರಿಗಳನ್ನು ಎಲ್ಲೆಲ್ಲಾ ಹಾಕೋಣ? 
ಅಸಾರಾಂ ಬಾಪು
ರಾಜಕಾರಣಿಯಲ್ಲದಿದ್ದರೂ ಅತ್ಯಾಚಾರದ ಬಗೆಗಿನ ಅವರ ಕಳಕಳಿಯ ಬಗ್ಗೆ ಇಲ್ಲಿ ಬರೆಯದಿದ್ದರೆ ಮೋಸ ಮಾಡಿದಂತಾದೀತು. ನಮಗೆಲ್ಲ ಈ ಐಡಿಯಾ ಈ ಮೊದಲೇ ಹೇಗೆ ಬರಲಿಲ್ಲವೆಂಬುದೇ ಅರ್ಥವಾಗುತ್ತಿಲ್ಲ. ಅತ್ಯಾಚಾರ ನಡೆವಾಗ ಹುಡುಗಿಯರು ಕೂಗಿ ಕಿರುಚುವುದನ್ನು ಬಿಟ್ಟು, ದೇವರನ್ನು ನೆನೆದು ಅತ್ಯಾಚಾರ ಮಾಡುವವನನ್ನು 'ಅಣ್ಣಾ' ಎಂದು ಕರೆಯಬೇಕಂತೆ. ಆಗ ಅವನು ದೇವರು ಕೊಟ್ಟ ತಂಗಿಯೆಂದು ಅತ್ಯಾಚಾರ ಮಾಡುವುದನ್ನು ನಿಲ್ಲಿಸುತ್ತಾನಂತೆ!
ಮೋಹನ್ ಭಾಗ್ವತ್
ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್ ಭಾಗ್ವತ್ ಪ್ರಕಾರ ಅತ್ಯಾಚಾರಕ್ಕೆ ಕಾರಣ, ಪಾಶ್ಚಾತ್ಯರ ಅನುಕರಣೆಯಂತೆ! ದೇಶದ ಶೇ.75 ಅತ್ಯಾಚಾರ ಪ್ರಕರಣಗಳು ಹಳ್ಳಿಯಲ್ಲೇ ಆಗುತ್ತಿವೆ. ಹಾಗಾದರೆ ನಮ್ಮ ಹಳ್ಳಿ ಹುಡುಗಿಯರು ಅಷ್ಟೊಂದು ಪಾಶ್ಚಾತ್ಯರ ಉಡುಗೆತೊಡುಗೆಗೆ ಮೊರೆ ಹೋದರೆ?
ಅಬು ಅಜ್ಮಿ
ಮುಲಾಯಂ ಅವರ ಪಕ್ಷದಲ್ಲಿದ್ದ ಮೇಲೆ ಅವರ ಹೃದಯ ವೈಶಾಲ್ಯ ಇನ್ನೊಬ್ಬರಿಗೂ ಹರಡಿರಬೇಕಲ್ಲವೇ? ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಮುಖಂಡ ಅಬು ಅಜ್ಮಿ ಪ್ರಕಾರ, ಅತ್ಯಾಚಾರ ನಡೆದರೆ ಹುಡುಗಿಯರನ್ನೇ ನೇಣಿಗೇರಿಸಬೇಕು. ಕೇವಲ ಅತ್ಯಾಚಾರವಲ್ಲ, ಮದುವೆಯಾಗದೆ ಸೆಕ್ಸ್ ಹೊಂದುವ ಹುಡುಗಿಯರೆಲ್ಲರನ್ನೂ ನೇಣಿಗೇರಿಸಬೇಕು. ಆಹ್! ನಮ್ಮ ದೇಶದಲ್ಲಿರುವ ಹುಡುಗಿಯರ ಜನಸಂಖ್ಯೆ ಇನ್ನಷ್ಟು ಕಡಿಮೆ ಮಾಡಲು ಎಂಥಾ ಉಪಾಯ! ಅತ್ಯಾಚಾರ ಮಾಡಿದ ಹುಡುಗರಿಗೆ ಸನ್ಮಾನ ಮಾಡಬೇಕೆಂದು ಹೇಳಲು ಮರೆತು ಹೋಯಿತೇನೋ? ಇದೇ ಪುಣ್ಯಾತ್ಮ ಹಿಂದೆ ಕೂಡ ಒಂದು ಉತ್ತಮ ಸಲಹೆ ನೀಡಿದ್ದ. ಹುಡುಗಿಯರು ಹುಡುಗರು ಇರುವ ಪ್ರದೇಶದಲ್ಲಿ ಕಾಲು ಕಾಣುವಂತೆ ಬಟ್ಟೆ ಧರಿಸದಂತೆ ಆಜ್ಞೆ ಹೊರಡಿಸಬೇಕೆಂದಿದ್ದ. -ರೇಶ್ಮಾರಾವ್ ಸೊನ್ಲೆ

10.4.14

ನಮೋ ಮಿಸ್ಟರಿ

ವಡ್ನಾಗರದ ಟೀ ಮಾರುವ ಹುಡುಗ
50 ವರ್ಷಗಳ ಹಿಂದೆ..ಗುಜರಾತ್‌ನ ಗಿಜಿಗುಡುವ ವಾಡ್ನಾಗರ್ ಪಟ್ಟಣದ ಮಧ್ಯದಲ್ಲೊಂದು ಕಿರಿದಾದ ಓಣಿಯಲ್ಲಿ ಹಾದು ಹೋದರೆ ಅಲ್ಲಿರುವುದು ತೀರಾ ಸಾಮಾನ್ಯವಾದ 3 ಕೋಣೆಗಳ ಮಣ್ಣಿನ ಮನೆ. ಟೀಸ್ಟಾಲ್ ನಡೆಸಿ ತಮ್ಮ ಹೆಂಡತಿ ಹಾಗೂ 8 ಮಕ್ಕಳ ಹೊಟ್ಟೆ ಹೊರೆಯುವ ಕಷ್ಟಜೀವಿ ಮನೆಯ ಯಜಮಾನ. ಕೆಲವೊಮ್ಮೆ ತನ್ನ ಮಕ್ಕಳನ್ನೂ ಕರೆದು ತಟ್ಟೆ ತುಂಬಾ ಬಿಸಿ ಬಿಸಿ ಟೀ ಕಪ್ ಇಟ್ಟು ಮಾರಿಕೊಂಡು ಬರಲು ರೈಲ್ವೇ ಸ್ಟೇಷನ್‌ಗೆ ಓಡಿಸುವ. ಹಾಗೆ 'ಚಾಯ್ ಚಾಯ್‌' ಎಂದು ಕೂಗಿಕೊಳ್ಳುತ್ತಾ ಪ್ರಯಾಣಿಕರ ಬಳಿ ತಗೊಳ್ಳಿ ಅನ್ನೋ ದೈನೇಸಿ ಮುಖದಲ್ಲಿ ನೋಡುತ್ತಿದ್ದ ಚಹಾ ಮಾಡುವವನ ಮೂರನೇ ಮಗನಾತ, ಭಗವತಾಚಾರ್ಯ ನಾರಾಯಣಾಚಾರ್ಯ ಶಾಲೆಯ ತೀರಾ ಸಾಮಾನ್ಯ ವಿದ್ಯಾರ್ಥಿ. ಆ ಹುಡುಗ ಅದೊಂದು ದಿನ ಮನೆ ಬಿಟ್ಟು ಓಡಿಹೋದ. ಎಲ್ಲಿ ಹೋದನೋ, ಹಿಂದಿರುಗಿದ್ದು ಅಪ್ಪನ ಶವಸಂಸ್ಕಾರಕ್ಕೆ. 
ಇಂಥ ಈತ ಅದ್ಯಾವುದೋ ಮಾಯದಲ್ಲಿ ಆರ್‌ಎಸ್‌ಎಸ್ ತೆಕ್ಕೆಗೆ ಬಂದು ಬಿದ್ದ. ಅಲ್ಲಿಂದ ಎದ್ದುದು ನಾಯಕನಾಗಿ... ನಂತರ ಗುಜರಾತ್ ಮುಖ್ಯಮಂತ್ರಿಯಾದ ಮೇಲೆ ಅಭಿವೃದ್ಧಿ ಮಾಡಿ ತೋರಿಸಿ ಸಮರ್ಥ ನಾಯಕನಾಗಿ... ಮತ್ತೀಗ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ನಾಯಕ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿಂತಿದ್ದಾರೆ!ಬದುಕಿಗಿಂತಾ ದೊಡ್ಡ, ಉತ್ತಮ ಕಲ್ಪನಾ ಮಟ್ಟದ ಫೇರಿಟೇಲ್ ಇರಲು ಸಾಧ್ಯವಿಲ್ಲವೆಂಬುದಕ್ಕೆ 63 ವರ್ಷದ ನರೇಂದ್ರ ಮೋದಿಯವರ ಈ ಯಶೋಗಾಥೆ ಸಾಕ್ಷಿಯಲ್ಲವೇ?
ಅವರ ಖ್ಯಾತಿ ಗುಜರಾತ್‌ನ ಉದ್ದಕ್ಕೂ ಒಂದಿಷ್ಟು ಕತೆಗಳನ್ನು ಹುಟ್ಟುಹಾಕಿದೆ. ಯಾವುದು ಸತ್ಯವೋ, ಯಾವುದು ಸುಳ್ಳೋ ಮೋದಿ ಈ ಬಗ್ಗೆ ಬಾಯಿ ಬಿಚ್ಚುವುದಿಲ್ಲ. ಅದರಲ್ಲೊಂದು ಹೀಗಿದೆ.. ಗೆಳೆಯನ ಬಳಿ ಕಟ್ಟಿದ ಬಾಜಿಗಾಗಿ ಮೋದಿ ಎಂಬ ಪುಟ್ಟ ಹುಡುಗ ಮೊಸಳೆಗಳಿದ್ದ ಹೊಳೆಯೊಂದರ ಮಧ್ಯದಲ್ಲಿ ಮುಳುಗಿ ಹೋಗಿದ್ದ ದೇವಸ್ಥಾನದವರೆಗೆ ಈಜಿ ಹೋಗಿ ಬಂದಿದ್ದನಂತೆ! ಅದು ಮೋದಿಯ ಛಲ, ಧೈರ್ಯ ಎನ್ನುತ್ತಾರೆ ಕತೆ ಹೇಳುವವರು. ಇದರಲ್ಲಿ ಕೆಲವು ಉತ್ಪ್ರೇಕ್ಷೆಗಳೂ ಇರಬಹುದು. ಮೋದಿಯ ಕುಟುಂಬ, ಗೆಳೆಯರು, ಮನೆ ಸುತ್ತಮುತ್ತ ವಾಸವಿದ್ದ ಜನರ ನೆನಪುಗಳನ್ನು ಕೆದಕಿದ ಸುದ್ದಿಸಂಸ್ಥೆ ರಾಯ್ಟರ್ಸ್‌ಗೆ ಸಿಕ್ಕಿದ್ದಿಷ್ಟು...
ಗುಜರಾತ್‌ನ ರಾಜಧಾನಿ ಅಹಮದಾಬಾದ್‌ನಲ್ಲಿ ಅಂಗಡಿಯಿಟ್ಟುಕೊಂಡು ಕಾರುಗಳ ಟೈರ್‌ಗಳನ್ನು ಮಾರಾಟ ಮಾಡುತ್ತಿರುವ ಮೋದಿಯ ಅಣ್ಣ ಪ್ರಹ್ಲಾದ್ ಮೋದಿ ತಾನು ಮತ್ತು ತಮ್ಮ ಚಹಾ ಮಾರಾಟ ಮಾಡಲು ಹತ್ತಿರದ ರೈಲ್ವೇ ಸ್ಟೇಷನ್‌ಗೆ ಓಡುತ್ತಿದ್ದ ಕತೆಯನ್ನು ಬಿಚ್ಚಿಡುತ್ತಾರೆ. ಆದರೆ ರೈಲ್ವೇ ಸ್ಟೇಷನ್ ಹತ್ತಿರದ ವಾಸಿಗಳು ಈ ಕತೆಯನ್ನು ಅಲ್ಲಗಳೆದು ಮೋದಿಯನ್ನು ಆಮ್ ಆದ್ಮಿ ಎಂದು ಬಿಂಬಿಸಲು ಹೀಗೆಲ್ಲ ಕಾಗಕ್ಕ ಗುಬ್ಬಕ್ಕ ಎಂದು ಕತೆ ಹೇಳುತ್ತಿದ್ದಾರೆ. ಅವರ ತಂದೆ ಉಪ್ಪು ಪುಡಿ ಮಾಡುವ ವ್ಯಾಪಾರ ಮಾಡುತ್ತಿದ್ದರು ಎನ್ನುತ್ತಾರೆ. 
ಇದನ್ನು ಒಪ್ಪುವ ಪ್ರಹ್ಲಾದ್ ಮೋದಿ, ಮೊದಲು ಚಹಾ ಮಾರುತ್ತಿದ್ದರು. ಹಲವು ವರ್ಷಗಳ ಬಳಿಕ ಉಪ್ಪಿನ ವ್ಯಾಪಾರಕ್ಕೆ ತೊಡಗಿದರು ಎಂದು ಸಮಜಾಯಿಷಿ ನೀಡುತ್ತಾರೆ. ಮೋದಿ ಮತ್ತು ಕುಟುಂಬದ ಬಾಂಧವ್ಯದ ಬಗ್ಗೆ ಕೆದಕಿದಾಗ, ಒಮ್ಮೆ ಮೋದಿ ಹೇಳಿದ್ದರಂತೆ, ಸಾರ್ವಜನಿಕ ವ್ಯಕ್ತಿಯಾಗುತ್ತಿದ್ದಂತೆ ಕುಟುಂಬದೊಂದಿಗಿನ ಎಳೆ ತೆಳ್ಳಗೆ ಇಟ್ಟುಕೊಳ್ಳಬೇಕಾಗುತ್ತದೆ ಎಂದು. ನಾವಿದನ್ನು ಒಪ್ಪಿಕೊಂಡಿದ್ದೇವೆ ಎನ್ನುತ್ತಾರೆ ಅವರು. 
ಆರ್‌ಎಸ್‌ಎಸ್ ಸೇರಿದ ಮೇಲೆ ವಿರಾಗಿಯಂತೆ ಬದುಕಿದ ಮೋದಿ ಈಗಲೂ ಒಂಟಿಯಾಗಿ ಬದುಕುತ್ತಿದ್ದಾರೆ. ಎಲ್ಲೋ ಅಪರೂಪಕ್ಕೆ ಅಮ್ಮನನ್ನು ನೋಡಲು ಮನೆಗೆ ಹೋಗುತ್ತಾರೆ.ಮೋದಿ ಓದಿದ ಶಾಲೆಯ ಶಿಕ್ಷಕ ಗೋಸ್ವಾಮಿ ಮೋದಿ ನಾಟಕದಲ್ಲಿ ಭಾಗವಹಿಸಿದ್ದನ್ನು ನೆನೆಸಿಕೊಂಡು ಶಾಲೆಯ ಹಳೆ ದಾಖಲೆಗಳೊಂದಿಗಿದ್ದ ಮೋದಿ ಬಾಲ್ಯದ ಫೋಟೋವನ್ನು ತೆಗೆದು ಹೆಮ್ಮೆಯಿಂದ ತೋರಿಸುತ್ತಾರೆ. ಹದಿಹರೆಯದಲ್ಲಿ ಆರ್‌ಎಸ್‌ಎಸ್‌ನಲ್ಲಿ ಮೋದಿಯ ಗೆಳೆಯರಾಗಿದ್ದ ಚಂದೂಬಾಯಿ ರಾಮಿ ಮೋದಿಯ ವ್ಯಕ್ತಿತ್ವದಲ್ಲಿದ್ದ ವಿಶೇಷ ಗುಣವೊಂದನ್ನು ನೆನೆಯುತ್ತಾರೆ. ಆರ್‌ಎಸ್‌ಎಸ್‌ನಲ್ಲಿ ತರಬೇತಿ ಹೊಂದುವಾಗ ಸ್ವರಕ್ಷಣಾ ಕಲೆ ತರಗತಿಯಲ್ಲಿ ತನ್ನ ಎದುರಾಳಿಯನ್ನು ಎಡದಿಂದ ಅಟ್ಯಾಕ್ ಮಾಡಿದರೆ ಆತನಿಗೆ ಕಷ್ಟವಾಗುತ್ತಿದ್ದುದನ್ನು ತಕ್ಷಣ ಗುರುತಿಸಿಕೊಂಡಿದ್ದರಂತೆ. ಇನ್ನೊಬ್ಬರ ವೀಕ್‌ನೆಸ್‌ಗಳನ್ನು ಗುರುತಿಸುವುದರಲ್ಲಿ ಪಂಟರಾಗಿದ್ದ ಮೋದಿ ಅದನ್ನು ತಮ್ಮ ಗೆಲವಿಗೆ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದರು ಎನ್ನುತ್ತಾರೆ ಅವರು.
ವಿಮರ್ಶಕರು ಏನೇ ಹೇಳಲಿ, ಟೀ ಮಾರಿದ್ದು ಕಟ್ಟುಕತೆ ಎನ್ನಲಿ, ಆದರೆ ಗುಜರಾತ್ ಜನತೆ ಮಾತ್ರ ಮುಖ್ಯಮಂತ್ರಿ ಮೋದಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಮೋದಿ ಹೀರೋ ಆಗುವುದು ಟೀ ಮಾರಿದ್ದರಿಂದಲ್ಲ. ಗುಜರಾತ್‌ನಲ್ಲಿ ಮಾಡಿದ ಅದ್ಭುತ ಅಭಿವೃದ್ಧಿಯಿಂದ ಎನ್ನುತ್ತಾರೆ.
15 ವರ್ಷಗಳ ಹಿಂದೆ ಜೆಂಟಿಬಾಯಿ ಥ್ಯಾಕರ್ ಭುಜ್ ಪ್ರದೇಶದಲ್ಲಿ ತನ್ನ ಕುಟುಂಬದ 5 ಎಕರೆ ಜಮೀನನ್ನು ನೋಡಿಕೊಂಡಿದ್ದ ಸಾಮಾನ್ಯ ರೈತ. ಆದರೆ 2001ರಲ್ಲಿ ಭುಜ್ ಹಾಗೂ ಕಚ್ ಪ್ರದೇಶ ಹಿಂದೆಂದೂ ಕಂಡರಿಯದ ಭೂಕಂಪಕ್ಕೆ ಚಿಂದಿಯಾಯ್ತು. ಸುಮಾರು 20,000 ಮಂದಿ ಪ್ರಾಣ ತೆತ್ತರು. 400,000 ಮನೆಗಳು ತಲೆ ಕೆಳಗಾಗಿ ಮಣ್ಣಿನೊಂದಿಗೆ ಬೆರೆತುಹೋದವು. ಆಗ ತಾನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ, ಈ ಎಲ್ಲ ಜಾಗಗಳಲ್ಲಿ ಓಡಾಡಿ ಮತ್ತೆ ಹೊಸಪಟ್ಟಣವೊಂದನ್ನು ಕಟ್ಟಿದರು. ಅಷ್ಟೇ ಅಲ್ಲ, ವಾಣಿಜ್ಯೋದ್ಯಮಿಗಳನ್ನು ಈ ಪ್ರದೇಶಕ್ಕೆ ಆಕರ್ಷಿಸುವಲ್ಲಿ ಸಫಲರಾದರು. ಇಂದು ಅಲ್ಲಿ ಭೂಕಂಪದ ಕುರುಹೂ ಸಿಗುವುದಿಲ್ಲ. ಅಲ್ಲದೆ ಜೆಂಟಿಬಾಯಿ ಥ್ಯಾಕರ್ ಈಗ 1300 ಎಕರೆಗಳ ಮಾಲೀಕರಾಗಿ ಮೋದಿ ತಂದ ಕೃಷಿ ತಂತ್ರಜ್ಞಾನಕ್ಕೆ ಥ್ಯಾಂಕ್ಸ್ ಹೇಳುತ್ತಾರೆ. ನೀರಾವರಿ ಪದ್ಧತಿ ಹಾಗೂ 24 ಗಂಟೆಗಳ ವಿದ್ಯುತ್ ಸೇವೆಯನ್ನು ನೆನೆಯುತ್ತಾರೆ. ಅಲ್ಲದೆ ತನ್ನ ಜಮೀನಿನಲ್ಲಿ ಹೆಲಿಪ್ಯಾಡ್ ನಿರ್ಮಾಣದ ಕನಸು ಕಾಣುತ್ತಿದ್ದಾರೆ. ಹೆಲಿಕ್ಯಾಪ್ಟರ್‌ನಿಂದಲೇ ತಮ್ಮ ಜಮೀನಿಗೆ ರಾಸಾಯನಿಕ ಸಿಂಪಡಿಸುವ ಯೋಚನೆ ಅವರದು! ಈಗಂತೂ ಮೋದಿ ಫ್ಯಾನ್ ಆಗಿ ತಮ್ಮ ಬಿಡುವಿನ ವೇಳೆಯನ್ನು ಬಿಜೆಪಿ ಪ್ರಚಾರಕಾರ್ಯದಲ್ಲಿ ಕಳೆಯುತ್ತಿದ್ದಾರೆ.
ಮೋದಿ ಮುಖ್ಯಮಂತ್ರಿಯಾದ ಮೇಲೆ ಗುಜರಾತ್‌ನಲ್ಲಿ ಭಾರತದ ಎಲ್ಲ ರಾಜ್ಯಗಳಿಗಿಂತ ಹೆಚ್ಚು ಇಂಡಸ್ಟ್ರಿಗಳು ಹೂಡಿಕೆ ಮಾಡಿದ್ದು, ರಾಜ್ಯಕ್ಕೆ ಆರ್ಥಿಕ ಸುಭದ್ರತೆಯನ್ನೊದಗಿಸಿದೆ. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಉದ್ದಿಮೆದಾರರು ಗುಜರಾತ್‌ನಲ್ಲಿ ಹೂಡಿಕೆ ಮಾಡಲು ಮುಂದೆ ಬರುತ್ತಾರೆ. ಶ್ರೀಮಂತ ವಾಣಿಜ್ಯೋದ್ಯಮಿ ಅನಿಲ್ ಅಂಬಾನಿ, 'ಮೋದಿ ಸಾಮಾನ್ಯರಲ್ಲಿ ರಾಜ, ನಾಯಕರಿಗೆ ನಾಯಕ ಮತ್ತು ರಾಜರಲ್ಲಿ ಚಕ್ರವರ್ತಿಯಂಥ ವ್ಯಕ್ತಿತ್ವ ಉಳ್ಳವರು' ಎಂದು ಬಣ್ಣಿಸುತ್ತಾರೆ. 
ವಿರೋಧಿಗಳು ಅವರನ್ನು ಅಧಿಕಾರದಾಹಿ, ಸರ್ವಾಧಿಕಾರಿ ಏನೇ ಟೀಕಿಸಿದರೂ, ಮೋದಿ ತಮ್ಮನ್ನು ಗುಂಪಿನ ಸದಸ್ಯನಾಗಿಯೇ ಹೇಳಿಕೊಳ್ಳುತ್ತಾರೆ. ನನಗೆ ಆರ್‌ಎಸ್‌ಎಸ್‌ನಲ್ಲಿ ದೇವರನ್ನು ಮರೆಯಿರಿ, ಇರುವುದು ಭಾರತಮಾತೆಯೊಬ್ಬಳೇ ಎನ್ನುತ್ತಿದ್ದರು. ಅದನ್ನೇ ನಂಬಿದ್ದೇನೆ. ಎಲ್ಲರ ಮಾತನ್ನೂ ಕೇಳಿ ನಿರ್ಧಾರಕ್ಕೆ ಬನ್ನಿ. ನಿರ್ಧಾರ ತೆಗೆದುಕೊಂಡ ಮೇಲೆ ಅದು ಅನುಷ್ಠಾನವಾಗಿದೆಯೇ ಎಂದು ನೋಡಿಕೊಳ್ಳಿ ಎಂದು ಹೇಳಿಕೊಟ್ಟಿದ್ದರು. ಅದನ್ನೂ ಪಾಲಿಸಿದ್ದೇನೆ ಎನ್ನುತ್ತಾರೆ.
- ರೇಶ್ಮಾರಾವ್ ಸೊನ್ಲೆ

9.4.14

ಸಾಂಗ್ ಪರಿವಾರ

ಹಾಡುಗಳ ಹಳಿ ಮೇಲೆ ಪ್ರಚಾರದ ರೈಲು
ಚಾಮುಂಡಿ ತಾಯಿಯಾಣೆ ನಾನೆಂದು ನಿಮ್ಮೋನೆ..ಇನ್ನೆಲ್ಲ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ..ಪ್ರೀತ್ಸೋದು ಎಂದೂ ನಿಮ್ಮನ್ನೇ....ಸಿಂಹ, ಪ್ರತಾಪ್ ಸಿಂಹ...ಹೀಗೊಂದು ರೆಕಾರ್ಡೆಡ್ ಹಾಡನ್ನು ಹೊತ್ತ ಆಟೋವೊಂದು ಮೈಸೂರಿನ ಎಲ್ಲ ಬೀದಿಗಳಲ್ಲಿ ಒಮ್ಮೆ ಓಡಾಡಿದ್ದಷ್ಟೆ. ಐದೇ ನಿಮಿಷದಲ್ಲಿ ಹಲವರು ಹಾಡತೊಡಗಿದ್ದರು, ತಮ್ಮಲ್ಲೇ ಗುನುಗತೊಡಗಿದ್ದರು!
ಹಾಡಿಗಿರುವ ಶಕ್ತಿಯೇ ಅದು. ಹಾಗಾಗೇ ಚುನಾವಣೆ ಘೋಷಣೆಯಾದ ದಿನದಿಂದಲೂ ಅಣಕುಗೀತೆ ರಚನೆಕಾರರು ಹಾಗೂ ಹಾಡುಗಾರರಿಗೆ ಎಲ್ಲಿಲ್ಲದ ಬೇಡಿಕೆ. ಜನಪ್ರಿಯ ಚಿತ್ರಗೀತೆಗಳ ರಾಗಕ್ಕೆ ಹೊಂದುವಂತೆ ಅಭ್ಯರ್ಥಿಗಳನ್ನು ಹೆಸರು, ಪಕ್ಷ, ಸಾಧನೆಯೊಂದಿಗೆ ಹೊಗಳಿ, ಪ್ರತಿಪಕ್ಷಗಳನ್ನು ತೆಗಳಿ ಬರೆದು ಹಾಡುವುದು ಒಂದು ಉತ್ತಮ ಪ್ರಚಾರ ವಿಧಾನ. ಭಾಷಣಗಳಲ್ಲಿ ಗಂಟೆಗಟ್ಟಲೆ ಕೊರೆಯುವುದನ್ನೇ 3ರಿಂದ 4 ನಿಮಿಷ ಇಂಪಾಗಿ ಹಾಡುಗಳಲ್ಲಿ ಹೇಳಿದರೆ ಅದು ಹೆಚ್ಚು ಪರಿಣಾಮಕಾರಿಯಾಗಿ ಜನರನ್ನು ತಲುಪುತ್ತದೆ. ಹೀಗೆ ಹಾಡನ್ನು ಬರೆಯುವಾಗ ಗ್ರಾಮೀಣ ಪ್ರದೇಶಗಳಿಗೆಂದು ಸಾಮಾನ್ಯವಾಗಿ ಹಳೆಯ ರಾಜ್‌ಕುಮಾರ್, ವಿಷ್ಣುವರ್ಧನ್ ಹಾಡುಗಳ ರಾಗವನ್ನು, ನಗರದ ಯುವಕರಿಗಾಗಿ ಸದ್ಯದ ಟ್ರೆಂಡ್ ಕ್ರಿಯೇಟ್ ಮಾಡಿದಂಥ ಯೋಗ್‌ರಾಜ್ ಭಟ್ಟರ ಪ್ರಸಿದ್ಧ ಹಾಡುಗಳ ರಾಗವನ್ನು ಬಳಸಿಕೊಂಡು ಗೀತೆ ಬರೆಯಲಾಗುತ್ತಿದೆ. 
ಇನ್ನೊಂದು ಲಾಭವೆಂದರೆ ಜನ ಮನೆಯಿಂದ ಹೊರಬರಲೂ ಬೇಕಿಲ್ಲ. ಕೆಲಸ ಬಿಟ್ಟು ಭಾಷಣ ಕೇಳಿಸಿಕೊಳ್ಳಬೇಕಿಲ್ಲ. ಅಣಕುಗೀತೆಗಳು ತಮ್ಮ ಪಾಡಿಗೆ ತಾವು ಕಿವಿಗೆ ಬೀಳುತ್ತಿರುತ್ತವೆ. ಈ ಪ್ರಚಾರತಂತ್ರ ಬಹುತೇಕ ಎಲ್ಲ ರಾಜ್ಯಗಳಲ್ಲೂ ಜನಪ್ರಿಯವಾಗಿದ್ದು, ಕೇರಳದ ಪ್ರಖ್ಯಾತ ಅಣಕುಗೀತೆಗಳ ತಂಡದ ಮುಖ್ಯಸ್ಥ ಅಶ್ರಫ್ ಕೊಡುವಳ್ಳಿ ಹೇಳುತ್ತಾರೆ, ಹಾಡುಗಳನ್ನು ಬರೆವಾಗ ಅದು ಕೇಳುವ ಊರುಗಳ ಜನರ ಮನಸ್ಥಿತಿ, ಇಷ್ಟಕಷ್ಟಗಳನ್ನು ಅಧ್ಯಯನ ನಡೆಸಿ ಬರೆಯಬೇಕು. ಆಗ ಹೆಚ್ಚು ಸುಲಭವಾಗಿ ಅವರನ್ನು ತಲುಪುತ್ತದೆ ಎಂದು. ಈ ಬಾರಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ಎರಡರ ಅಭ್ಯರ್ಥಿಗಳಿಗೂ ಅವರೇ ಬರೆದು ಹಾಡುತ್ತಿದ್ದಾರಂತೆ! ಇವರೂ ಸೇರಿದಂತೆ ಇವರ ತಂಡದ ಪ್ರತಿಯೊಬ್ಬರೂ ಕಳೆದ ಬಾರಿಯ ಚುನಾವಣೆಯಲ್ಲಿ 5 ಲಕ್ಷಕ್ಕಿಂತಲೂ ಅಧಿಕ ಸಂಪಾದಿಸಿದ್ದರಂತೆ! ಹವ್ಯಾಸಿ ಹಾಡುಗಾರರು ಸಹ ಆನ್‌ಲೈನ್‌ನಲ್ಲಿ ಅಣಕುಗೀತೆಗಳನ್ನು ಮಾಡಿ ಹರಿಯಬಿಡುತ್ತಿದ್ದಾರೆ. ಇದು ಸಹ ಸಾಮಾಜಿಕ ಜಾಲತಾಣಗಳ ಬಳಕೆದಾರರನ್ನು ಸೆಳೆಯುತ್ತಿದೆ.
- ರೇಶ್ಮಾ

ಮತವೇ ಮಾಧ್ಯಮ

ವೋಟ್ ಫಾರ್ ಮೀಡಿಯಾ
ರಾಜಕಾರಣವೆಂಬುದು ಹಿಂದೂ ಇಂದೂ ಮುಂದೂ ಹೀಗೇ, ಈ ದೇಶ ಬದಲಾಗೋಲ್ಲ...ಎಂಬ ತಾತ್ಸಾರ ಮನೋಭಾವ ಎಲ್ಲರಲ್ಲೂ ಬೆಳೆದಿದ್ದ ಕಾಲಕ್ಕೇ ಬದಲಾವಣೆಯ ಬೆಳಕೊಂದು ಸಣ್ಣಗೆ ಮಿಂಚುತ್ತಿದೆ. ಇದು ಭ್ರಷ್ಟಾಚಾರ ನಿರ್ಮೂಲನೆ ಹೋರಾಟದಿಂದಲೇ ಹುಟ್ಟಿಕೊಂಡು ದೇಶದಲ್ಲಿ ಸಂಚಲನ ಮೂಡಿಸಿದ ಆಮ್ ಆದ್ಮಿ ಪಕ್ಷ ಹಾಗೂ ಗುಜರಾತ್‌ನ ಅಭಿವೃದ್ಧಿಯ ಹರಿಕಾರರಾಗಿ ಸಾಧಿಸಿ ತೋರಿಸಿದ ನರೇಂದ್ರ ಮೋದಿಯವರ ಗಟ್ಟಿ ವ್ಯಕ್ತಿತ್ವ ತಂದ ಬೆಳಕು. ಹೀಗಾಗಿ ಬದಲಾವಣೆಗಾಗಿ ಹಾತೊರೆಯುತ್ತಿದ್ದ ಹಲವು ಮನಸುಗಳು ಮಿಂಚುಹುಳುಗಳಂತೆ ಈ ಬೆಳಕಿನೆಡೆಗೆ ಆಕರ್ಷಿತವಾಗುತ್ತಿವೆ. ಇದರಲ್ಲಿ ತಮ್ಮ ಕೊಡುಗೆಯೂ ಇರಲಿ ಎಂಬ ಸದಾಶಯ ಎಲ್ಲರದ್ದು. ಆದ್ದರಿಂದಲೇ ಇದುವರೆಗೂ ರಾಜಕೀಯದ ಕೆಸರನ್ನು ಕಲಕಿ ಅದರಲ್ಲಿ ಸೇರಿರುವ ಎಲ್ಲ ಕಲ್ಮಶಗಳನ್ನೂ ಎತ್ತಿ ತೋರಿಸುತ್ತಿದ್ದ ಪತ್ರಕರ್ತರು ಈ ಬಾರಿ ಕೆಸರಲ್ಲಿ ಕಮಲವೂ ಇದೆ ಎಂದು ಕಂಡುಕೊಂಡಿದ್ದಾರೆ. ಅಲ್ಲದೆ ಕಸ ಇದೆ ಎಂದು ತೋರಿಸಿದರೆ ಯಾರೂ ಸ್ವಚ್ಛಗೊಳಿಸುವುದಿಲ್ಲ. ನಮ್ಮ ಮನೆಯ ಕಸ ನಾವೇ ಎತ್ತಿ ಹಾಕಬೇಕು ಎಂದು ಸಾರಿ ಕೆಲವರು ಪೊರಕೆಯನ್ನೂ ಹಿಡಿದಿದ್ದಾರೆ.
ಈ ಹಿಂದೆಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕರಾಗಿದ್ದಅರುಣ್ ಶೌರಿ, ಶಿವಸೇನೆಯ ಮುಖ್ಯಸ್ಥ, ವ್ಯಂಗ್ಯಚಿತ್ರಕಾರ ಬಾಳಾ ಠಾಕ್ರೆಯಂಥ ನಾಯಕರು ಮೀಡಿಯಾದಿಂದ ರಾಜಕಾರಣಕ್ಕಿಳಿದು ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಆದರೆ ಈ ಬಾರಿ 20ಕ್ಕಿಂತಲೂ ಅಧಿಕ ಪತ್ರಕರ್ತರು ಈ ಬಾರಿ ಲೇಖನಿ ಬದಿಗಿಟ್ಟು ರಾಜಕೀಯ ಅಖಾಡಕ್ಕಿಳಿದಿದ್ದಾರೆ. ಹೋದಹೋದಲ್ಲಿ ಮೈಕ್ ಹಿಡಿದು ಓದುಗರನ್ನು ತಮ್ಮ ಮತದಾರರನ್ನಾಗಿ ಬದಲಾಯಿಸಿಕೊಳ್ಳಲು ಹೆಣಗುತ್ತಿದ್ದಾರೆ. ಈ ಎಲ್ಲ ಪತ್ರಕರ್ತರನ್ನೂ ರಾಜಕೀಯದೆಡೆ ಅಸಹ್ಯ ಹಾಗೂ ಬದಲಾವಣೆಯ ಹಸಿವೇ ರಾಜಕೀಯಕ್ಕೆಳೆ ತಂದಿದೆ.
ತೆಹಲ್ಕಾದಲ್ಲಿ ತನಿಖಾ ಪತ್ರಕರ್ತರಾಗಿದ್ದ ಆಶಿಶ್ ಕೇತನ್ ಮೂರು ಭಯೋತ್ಪಾದಕ ಬ್ಲಾಸ್ಟ್‌ಗಳ ಕುರಿತು ತನಿಖೆ ನಡೆಸಿ ಮಹತ್ತರ ಸತ್ಯಗಳನ್ನು ಬಯಲಿಗೆಳೆದಿದ್ದರು. ನಿರ್ಭೀತ ಪತ್ರಕರ್ತರೆಂದೇ ಹೆಸರಾದ ಆಶಿಶ್ ಈ ಬಾರಿ ಆಪ್‌ನಿಂದ ದೆಹಲಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ಭಾರತೀಯ ಮಾಧ್ಯಮದಲ್ಲಿ ನಿಷ್ಠುರ ಹಾಗೂ ಸ್ವತಂತ್ರ ಬರಹಗಳಿಗೆ ಜಾಗವಿಲ್ಲದ್ದರಿಂದ ಪತ್ರಿಕೋದ್ಯಮ ತ್ಯಜಿಸಿದ್ದಾಗಿ ಘೋಷಿಸಿದ ಅವರು, ನೇರವಾಗಿಯಾದರೂ ಸರಿ, ಹಿನ್ನೆಲೆಯಲ್ಲಿದ್ದರೂ ಸರಿ, ರಾಜಕೀಯಕ್ಕೆ ಮಹತ್ವಾಕಾಂಕ್ಷೆ ಹಾಗೂ ದೂರದೃಷ್ಟಿ ಹೊಂದಿರುವವರು ಬರಲು ಇದು ಸಕಾಲವಾಗಿದೆ ಎನ್ನುತ್ತಾರೆ.
ಕೃತಿಕಾರ, ಇಂಗ್ಲಿಷ್‌ನ ದಿ ಟೆಲಿಗ್ರಾಫ್, ಸಂಡೆ ಪತ್ರಿಕೆಗಳನ್ನು ಬೆಳೆಸಿದ ಮಾಜಿ ಸಂಪಾದಕ, ಸಂಡೆ ಗಾರ್ಡಿಯನ್ ಪತ್ರಿಕೆಯ ಮಾಜಿ ಸಂಪಾದಕೀಯ ನಿರ್ದೇಶಕ, ಹೆಸರಾಂತ ಪತ್ರಕರ್ತ ಎಂ.ಜೆ.ಅಕ್ಬರ್ ತಮ್ಮ ಯಾವತ್ತೂ ನಿಲುವಲ್ಲಿ ಕಾಂಗ್ರೆಸ್‌ನತ್ತ ವಾಲಿದವರು. 1989ರಲ್ಲಿ ಕಾಂಗ್ರೆಸ್ ಸೇರಿ ಗೆದ್ದು ಲೋಕಸಭಾ ಪ್ರವೇಶಿಸಿದ್ದರು. 1991ರಲ್ಲಿ ರಾಜಕಾರಣಕ್ಕೆ ಬೈಬೈ ಹೇಳಿ ಪತ್ರಿಕೋದ್ಯಮಕ್ಕೆ ಮರಳಿದ್ದರು. ಆದರೆ ಈ ಬಾರಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಲ್ಲದೆ ರಾಷ್ಟ್ರೀಯ ಬಿಜೆಪಿ ವಕ್ತಾರರಾಗಿ ಸ್ಥಾನ ಪಡೆದಿದ್ದಾರೆ.
ಉತ್ತರ ಪ್ರದೇಶದ ಪತ್ರಿಕೆಯೊಂದರಲ್ಲಿ ವರದಿಗಾರರಾಗಿ ಕೆಲಸ ಆರಂಭಿಸಿ, ಟಿವಿ ಆ್ಯಂಕರ್ ಆಗಿ, ಪತ್ರಿಕಾ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದ ರಾಜೀವ್ ಶುಕ್ಲಾ 2000ದಲ್ಲಿ ಕಾಂಗ್ರೆಸ್‌ನಿಂದ ರಾಜ್ಯಸಭೆ ಪ್ರವೇಶಿಸಿದ್ದರು. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಮಂತ್ರಿಯಾಗಿ, ಐಪಿಎಲ್ ಮುಖ್ಯಸ್ಥರಾಗಿದ್ದ ಅವರು, ಕಳೆದ ವರ್ಷ ಸ್ಪಾಟ್ ಫಿಕ್ಸಿಂಗ್ ಇನ್ನಿತರೆ ಐಪಿಎಲ್ ಹಗರಣಗಳು ಬಯಲಿಗೆ ಬಂದಾಗ ರಾಜಿನಾಮೆ ನೀಡಿದ್ದರು. ಅವರ ಪ್ರಕಾರ ರಾಜಕಾರಣಕ್ಕೆ ಬರುತ್ತಿರುವ ಬಹುತೇಕ ಪತ್ರಕರ್ತರು ರಾಜಕೀಯ ವರದಿಗಾರರು. ಅವರ ಒಡನಾಟ ಹೆಚ್ಚಾಗಿ ರಾಜಕಾರಣಿಗಳೊಂದಿಗಿರುತ್ತದೆ. ಹೀಗಾಗಿ ರಾಜಕಾರಣದತ್ತ ಸುಲಭ ಒಲವು ಬೆಳೆದುಬರುತ್ತದೆ.
ಪಯೋನೀರ್ ದಿನಪತ್ರಿಕೆಯ ದೆಹಲಿ ಕೇಂದ್ರದ ಸಂಪಾದಕರಾಗಿರುವ ಚಂದನ್ ಮಿತ್ರ ಈ ಬಾರಿ ಪಶ್ಚಿಮ ಬಂಗಾಳದ ತಮ್ಮ ಸ್ವಕ್ಷೇತ್ರ ಹೂಗ್ಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಮೋದಿ ನಾಯಕತ್ವದಲ್ಲಿ ಪ.ಬಂಗಾಳದ ಚಿತ್ರಣವೇ ಬದಲಾಗುವುದಾಗಿ ಹೇಳುತ್ತಿರುವ ಅವರು, 2003ರಿಂದ 2009ರವರೆಗೆ ರಾಜ್ಯಸಭಾ ಸದಸ್ಯರಾಗಿ, 2010ರಲ್ಲಿ ಮಧ್ಯಪ್ರದೇಶದಿಂದ ಸಂಸದರಾಗಿ ಕಾರ್ಯ ನಿರ್ವಹಿಸಿದ್ದಾರೆ. 
15 ವರ್ಷಗಳ ಕಾಲ ಕನ್ನಡ ಪತ್ರಿಕೋದ್ಯಮದಲ್ಲಿ ಅಂಕಣ ಬರಹಗಾರರಾಗಿ ಪ್ರಖ್ಯಾತರಾಗಿದ್ದ ಪ್ರತಾಪ್‌ಸಿಂಹ ತಮ್ಮ ರಾಷ್ಟ್ರೀಯ ನಿಲುವುಗಳಿಂದ ಜನಮನ ಗೆದ್ದಿದ್ದರು. ಈ ಬಾರಿ ಮೈಸೂರು- ಕೊಡಗು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರತಾಪ್ 'ಪತ್ರಿಕೋದ್ಯಮದಲ್ಲಿ ಜಾಗೃತಿ ಮೂಡಿಸಬಹುದು. ಆದರೆ ವಾಸ್ತವದಲ್ಲಿ ಬದಲಾವಣೆ ತರಬೇಕಾದ್ದು ರಾಜಕೀಯ ಕ್ಷೇತ್ರ. ಯಾರನ್ನೋ ದೂರುವ ಬದಲು ನಾವೇ ಏಕೆ ಜನರ ನೋವಿಗೆ, ಸ್ಪಂದಿಸಬಾರದು?' ಎನ್ನುತ್ತಾರೆ. 
ಸ್ಟಾರ್ ನ್ಯೂಸ್‌ನ ಮಾಜಿ ನಿರೂಪಕಿ, ಕಾರ್ಯಕ್ರಮ ನಿರ್ಮಾಪಕಿ ಶಾಜಿಯಾ ಅಣ್ಣಾ ಚಳುವಳಿಯ ಮಾಧ್ಯಮ ವಕ್ತಾರೆಯಾಗಿದ್ದರು. ಈಗ ಆಪ್‌ನಿಂದ ಉತ್ತರಪ್ರದೇಶದ ಘಜಿಯಾಬಾದ್‌ನ ಅಭ್ಯರ್ಥಿಯಾಗಿ, ಸೈನ್ಯದ ಮಾಜಿ  ಮುಖ್ಯಸ್ಥ, ಬಿಜೆಪಿ ಅಭ್ಯರ್ಥಿ ವಿ.ಕೆ.ಸಿಂಗ್ ಹಾಗೂ ಮಾಜಿ ಸಂಸದ, ಹೆಸರಾಂತ ನಟ, ಕಾಂಗ್ರೆಸ್ ಅಭ್ಯರ್ಥಿ ರಾಜ್ ಬಬ್ಬರ್ ಎದುರಾಳಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಹಿಂದಿ ನ್ಯೂಸ್ ಚಾನಲ್‌ಗಳ ಪರಿಚಿತ ಮುಖ, ಆಶುತೋಷ್ ಆಪ್‌ನ ಟಿಕೆಟ್ ಪಡೆದು ಚಾಂದಿನಿ ಚೌಕ್‌ನಿಂದ ಕಾನೂನು ಸಚಿವ ಕಣಕ್ಕಿಳಿದಿದ್ದಾರೆ. 23 ವರ್ಷಗಳ ಮಾಧ್ಯಮದ ಒಡನಾಟ ನಿಲ್ಲಿಸಿ ಅಖಾಡಕ್ಕಿಳಿದಿರುವ ಅವರು 'ಅಣ್ಣಾ: ದೇಶವನ್ನೆಬ್ಬಿಸಿದ ಆ 13 ದಿನಗಳು' ಎಂಬ ಪುಸ್ತಕ ಬರೆದಿದ್ದಾರೆ. ರಾಜಕೀಯವನ್ನು ಯಾವತ್ತೂ ದ್ವೇಷಿಸುತ್ತಿದ್ದ ನನಗೆ ಅಣ್ಣಾ ಚಳುವಳಿ ಮೂಲಕ ಹುಟ್ಟಿಕೊಂಡ ಆಪ್ ಹೆಚ್ಚು ಆಪ್ಯಾಯಮಾನವಾಗಿ ಕಂಡಿತು. ಅದಕ್ಕಾಗಿಯೇ ಸೇರಿದ್ದೇನೆ ಎನ್ನುತ್ತಾರೆ.
2009ರಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಸರ್ಕಾರದ ಕಾರ್ಯನಿರ್ವಹಣೆಗೆ ಅಸಮಾಧಾನಗೊಂಡು ಹಣಕಾಸು ಮಂತ್ರಿ ಚಿದಂಬರಂ ಮುಖದತ್ತ ಚಪ್ಪಲಿ ಎಸೆದ ಜರ್ನೈಲ್ ಸಿಂಗ್ ಕೂಡಾ ಮೊದಲು ಪತ್ರಕರ್ತರಾಗಿದ್ದವರು. ನಾನು ಮಾಡಿದ್ದು ತಪ್ಪೇ ಆಗಿದ್ದರೂ ನನ್ನ ರೋಷ ನಿಜವಾದುದಾಗಿತ್ತು ಎನ್ನುವ ಜರ್ನೈಲ್ ಸಿಂಗ್ ಈಗ ಆಪ್‌ನ ಅಭ್ಯರ್ಥಿ.
ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದ ಮಲೆಯಾಳಿ ಪತ್ರಕರ್ತೆ ಅನಿತಾ ಪ್ರತಾಪ್ ಆಪ್ ಅಭ್ಯರ್ಥಿಯಾಗಿ ಕೇರಳದ ಎರ್ನಾಕುಳಂ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರು ಇಂಡಿಯನ್ ಎಕ್ಸ್‌ಪ್ರೆಸ್, ಇಂಡಿಯಾ ಟುಡೆಗಳಲ್ಲಿ ಪತ್ರಕರ್ತೆಯಾಗಿ ಹೆಸರು ಮಾಡಿ, ಸಿಎನ್‌ಎನ್ ನ್ಯೂಸ್ ಚಾನೆಲ್‌ನ ಸೌತ್ ಏಶಿಯಾ ಬ್ಯೂರೋ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸಿದ್ದರು.
- ರೇಶ್ಮಾರಾವ್ ಸೊನ್ಲೆ

ಒಬಾಮ ತಂತ್ರ

First Published: 09 Apr 2014 02:00:00 AM IST
ಭಾರತದ ಚುನಾವಣೆಯಲ್ಲಿ ಅಮೆರಿಕದ ಸೂತ್ರ
2014ರ ಭಾರತದ ಚುನಾವಣಾ ಪ್ರಚಾರ ಕಾರ್ಯಕ್ಕೆ ಅಮೆರಿಕ ಅಧ್ಯಕ್ಷ ಒಬಾಮಾ ಸದ್ದಿಲ್ಲದೆ ಕೈಜೋಡಿಸಿದ್ದಾರೆ. ಅರೆರೆ ಇದೇನಿದು ಹಾಟ್ ನ್ಯೂಸ್ ಅಂತ ಕಣ್ಣರಳಿಸುತ್ತಿದ್ದೀರಾ? ಅಲ್ಲಾರೀ, ಇದು ವೋಟ್ ನ್ಯೂಸ್. 
ಅಮೆರಿಕದಲ್ಲಿ ನಡೆದ 2008ರ ಅಧ್ಯಕ್ಷೀಯ ಚುನಾವಣೆ ಸಂದರ್ಭ ಮತಗಳಿಕೆಯ ಪ್ರಚಾರ ಕಲೆಯಲ್ಲಿ ಬರಾಕ್ ಒಬಾಮ ತೋರಿದ್ದ ಬಹುಪರಾಕ್ರಮಗಳಿಗೆ ಬಹುಪರಾಕ್ ಎನ್ನುತ್ತಿವೆ ಭಾರತದ ರಾಜಕೀಯ ಪಕ್ಷಗಳು. ಮಂತ್ರಕ್ಕೆ ಮಾವಿನಕಾಯಿ ಉದುರದಿದ್ದರೂ ಒಬಾಮಾ ತಂತ್ರಕ್ಕೆ ಭಾರತೀಯ ಮತಯಂತ್ರಗಳಲ್ಲಿ ಮತಗಳಂತೂ ಉದುರಲಿವೆ ಎನ್ನುತ್ತಿವೆ ಸಮೀಕ್ಷೆಗಳು. ಹೀಗೆ ಅಮೆರಿಕದ ಪ್ರಚಾರತಂತ್ರಗಳನ್ನು ಆಮದು ಮಾಡಿಕೊಂಡು ಅವುಗಳಿಗೆ ದೇಸೀಭಾಷೆ, ಸಂಸ್ಕೃತಿ, ನಂಬಿಕೆಯ ಸ್ಪರ್ಶ ನೀಡಿ ಇಲ್ಲಿನ ಮಣ್ಣಿಗೆ ಒಗ್ಗಿಸಿಕೊಳ್ಳುವ ಕಾರ್ಯ ವೇಗವಾಗಿ ನಡೆಯುತ್ತಿದೆ. ಅದರಲ್ಲೂ ಈ ಒಬಾಮಾಫಿಕೇಶನ್‌ಗೆ ದೇಶೀಯ ಸ್ಪರ್ಶ ನೀಡಿ 'ಮೋಡಿ'ಫಿಕೇಶನ್ ಮಾಡುವಲ್ಲಿ ಮುಂಚೂಣಿಯಲ್ಲಿರುವ ನಾಯಕರು, ಇದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳನ್ನು ಕಂಡು ಖುಷಿಯಾಗಿ ಬರಾಕ್ ಒಬಾಮಾಗೆ 'ನಮೋ' ನಮಃ ಎನ್ನುತ್ತಿದ್ದಾರೆ. 
 -     2008ರಲ್ಲಿ ಒಬಾಮ ಬಳಸಿದ 'ಎಸ್, ವಿ ಕ್ಯಾನ್‌' (ನಾವು ಸಾಧಿಸಬಲ್ಲೆವು) ಎಂಬ ಮಂತ್ರವನ್ನು 2013ರ ಸೆಪ್ಟೆಂಬರ್‌ನಲ್ಲಿ ಹೈದರಾಬಾದ್‌ಗೆ ಭೇಟಿ ನೀಡಿದಾಗ ಮೋದಿ ಪ್ರಥಮ ಬಾರಿಗೆ ಪ್ರತಿಧ್ವನಿಸಿದ್ದರು. ತದನಂತರ ತಮ್ಮ ಭಾಷಣಗಳಲ್ಲೆಲ್ಲ ಮೋದಿ 'ಎಸ್ ವಿ ಕ್ಯಾನ್‌' ಬಳಸೀ ಬಳಸಿ ಜನಗಮನ ಸೆಳೆದು ಸಾಧಿಸಿದರು! 
-     ಒಬಾಮಾ ಪ್ರಚಾರ ಕಾರ್ಯತಂತ್ರದ ಸದಸ್ಯರು ಅಂದು 'ಮೈಬೋ' ಎಂಬ ಬ್ರ್ಯಾಂಡ್ ಹುಟ್ಟುಹಾಕಿ 'ಕೀಪ್ ಇಟ್ ರಿಯಲ್, ಕೀಪ್ ಇಟ್ ಲೋಕಲ್‌' ಎಂಬ ಅಡಿಬರಹ ನೀಡಿ ಒಬಾಮ ಹೆಸರಿನಲ್ಲಿ ಹಲವು ವಸ್ತುಗಳನ್ನು ಮಾರಾಟಕ್ಕಿಟ್ಟಿದ್ದರು. ಇದು ಬಹಳ ಜನಪ್ರಿಯತೆ ಪಡೆದಿತ್ತು. ಅಂತೆಯೇ ಮೋದಿ ಆನ್‌ಲೈನ್‌ನಲ್ಲಿ 'ನಮೋ' ಸ್ಟೋರ್ ತೆಗೆದಿದ್ದಾರೆ. ಅಲ್ಲಿ ಮೋದಿ ಚಿತ್ರ, ತತ್ವಗಳನ್ನೊಳಗೊಂಡ ಟಿ ಶರ್ಟ್‌ಗಳು, ಕಾಫಿ ಮಗ್‌ಗಳು, ಪುಸ್ತಕ, ಪೆನ್‌ಡ್ರೈವ್ ಇತ್ಯಾದಿ ವಸ್ತುಗಳು ರಿಯಾಯಿತಿ ದರದಲ್ಲಿ ಸಿಗುತ್ತವೆ. ಅಲ್ಲದೆ ಇದರಲ್ಲಿ ಯುವಜನತೆಯನ್ನು ತೊಡಗಿಸಲು ನಮೋ ಸ್ಲೋಗನ್ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಇದರಿಂದ ಪ್ರಚಾರವೂ ಆಯ್ತು, ವ್ಯಾಪಾರವೂ ಆಯ್ತು.
-     2012ರ ಮರು ಚುನಾವಣಾ ಪ್ರಚಾರದಲ್ಲಿ ಪಕ್ಷದ ಪರ ಸ್ವಯಂಸೇವಕರನ್ನು ಒಗ್ಗೂಡಿಸಲು ದಿ ಬರಾಕ್ ಒಬಾಮ ಡ್ಯಾಶ್‌ಬೋರ್ಡ್ ಎಂಬ ರಾಷ್ಟ್ರ ಮಟ್ಟದ ಆನ್‌ಲೈನ್ ವೇದಿಕೆ ಸಿದ್ಧಪಡಿಸಲಾಗಿತ್ತು. ಇಲ್ಲಿ ಸಕ್ರಿಯವಾಗಿ ತೊಡಗಿಕೊಂಡವರನ್ನು ಅಂಕ ನೀಡಿ ಆಯ್ಕೆ ಮಾಡಿ ತಳಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲು ಬಳಸಿಕೊಂಡಿತು. ಇಲ್ಲಿ ಆಯ್ಕೆಯಾದ ಸ್ವಯಂಸೇವಕರಿಗೆ ಒಬಾಮಾ ಜೊತೆ ನೇರ ಮಾತುಕತೆಗೆ ಅವಕಾಶ ನೀಡಲಾಗಿತ್ತು. ಅಂತೆಯೇ 2013ರಲ್ಲಿ ಮೋದಿ ಆರಂಭಿಸಿದ 'ಇಂಡಿಯಾ 272೤ ' ಕೂಡಾ ಒಬಾಮಾ ಡ್ಯಾಶ್‌ಬೋರ್ಡನ್ನೇ ಹೋಲುತ್ತಿತ್ತು. ಇಲ್ಲೂ ಕೂಡಾ ಪಾಯಿಂಟ್ಸ್ ಆಧಾರದ ಮೇಲೆ ಮತಗಳನ್ನು ತಳಮಟ್ಟದಿಂದ ಬಿಜೆಪಿಗೆ ತಿರುಗಿಸಬಲ್ಲ ಸ್ವಯಂಸೇವಕರಿಗೆ ಮೋದಿಯೊಂದಿಗೆ ನೇರ ಮಾತುಕತೆಗೆ ಅವಕಾಶ ನೀಡಲಾಗಿತ್ತು.
-     ಮರುಚುನಾವಣೆಯ ಸಮಯದಲ್ಲಿ ಒಬಾಮಾ ಗೂಗಲ್ ಪ್ಲಸ್ ಹ್ಯಾಂಗ್‌ಔಟ್‌ನಲ್ಲಿ ಭಾಗವಹಿಸಿ 'ಏನು ಬೇಕಾದರೂ ಕೇಳಿ' ಎಂಬ ನೇರ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿದ್ದರು. 2 ಲಕ್ಷ ಅಮೆರಿಕನ್ ಪ್ರಜೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಲಾಗಿನ್ ಆಗಿದ್ದರು. ಇದರಿಂದ ಪ್ರೇರಿತರಾದ ನರೇಂದ್ರ ಮೋದಿ ಕೂಡಾ 2012 ಸೆಪ್ಟೆಂಬರ್‌ನಲ್ಲಿ ಗೂಗಲ್ ಪ್ಲಸ್ ಹ್ಯಾಂಗ್‌ಔಟ್‌ನಲ್ಲಿ ಭಾಗವಹಿಸಿದ್ದರು. ಈ ಆನ್‌ಲೈನ್ ಸಮಾವೇಶ 20,000 ಪ್ರಶ್ನೆಗಳಿಗೆ ಸಾಕ್ಷಿಯಾಯಿತಲ್ಲದೆ ಸುಮಾರು 40 ಲಕ್ಷ ಜನ ಇದನ್ನು ವೆಬ್‌ಸೈಟ್ ಹಾಗೂ ಟಿವಿಗಳಲ್ಲಿ ವೀಕ್ಷಿಸಿದರು.
 -     ವಿವಿಧೆಡೆಯ ಮತದಾರರನ್ನು ಓಲೈಸಲು ಒಬಾಮಾ ಟೀಂ ಟ್ವಿಟ್ಟರ್‌ನಲ್ಲಿ ರಾಜ್ಯಕ್ಕೊಂದರಂತೆ ಬೇರೆ ಬೇರೆ ಟ್ವಿಟ್ಟರ್ ಖಾತೆ ತೆರೆದಿದ್ದರು. ಈ ವಿಷಯವನ್ನೂ ಪಕ್ಕನೆ ಹಿಡಿದುಕೊಂಡ ಟೀಂ ಮೋದಿ ಕೂಡಾ ಅಸ್ಸಾಮೀಸ್, ಕನ್ನಡ, ಮಣಿಪುರಿ, ತೆಲುಗು, ಮಲೆಯಾಳಂ, ಒರಿಯಾ, ಮರಾಠಿ ಸೇರಿದಂತೆ ಭಾರತದ ವಿವಿಧ ಭಾಷೆಗಳಲ್ಲಿ ಆಯಾ ರಾಜ್ಯದಲ್ಲಿ ಟ್ವಿಟ್ಟರ್ ಖಾತೆ ತೆರೆದಿದ್ದಾರೆ. ಈ ಟ್ವಿಟ್ಟರ್‌ನಲ್ಲಿ ಬೇರೆ ಬೇರೆ ರಾಜ್ಯದ ಬೆಂಬಲಿಗರ ಅಭಿಪ್ರಾಯ ಸೂಚನೆಗಳನ್ನು ಚೆನ್ನಾಗಿ ಬಳಸಿಕೊಳ್ಳುವ ಮೋದಿ, ಅಲ್ಲಿನ ಮತದಾರರ ಬೇಕುಬೇಡಗಳ, ಇಷ್ಟಕಷ್ಟಗಳ ಬಗ್ಗೆ ಇದರಿಂದ ತಿಳಿದುಕೊಳ್ಳುತ್ತಾರೆ. ಆಯಾ ರಾಜ್ಯಕ್ಕೆ ಹೋದಾಗ ಆ ವಿಷಯಗಳ ಬಗ್ಗೆ ತಮ್ಮ ಭಾಷಣಗಳಲ್ಲಿ ಪ್ರಸ್ತಾಪಿಸುತ್ತಾರೆ.
ಬೆಂಗಳೂರು ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಕೂಡಾ ಒಬಾಮಾಫಿಕೇಶನ್ ಮೋಡಿಗೆ ಒಳಗಾದವರು. ಅವರು 'ಮಾದರಿ ಬೆಂಗಳೂರು' ನಿರ್ಮಿಸಲು ಟ್ವಿಟ್ಟರ್‌ನಲ್ಲಿ ಬೆಂಗಳೂರಿಗರಿಂದ ಸಲಹೆ ಆಹ್ವಾನಿಸಿದರು. ಈ ಮೂಲಕ ಅಂಥ ಬೆಂಗಳೂರು ಕಲ್ಪನೆ ಬಗೆಗೆ ತಮಗಿರುವ ಕಾಳಜಿ ವ್ಯಕ್ತಪಡಿಸಿ ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರವನ್ನು ಒಬಾಮಾ ಮೈಕ್ರೋ ಲಿಸ್‌ನಿಂಗ್ ಅಪ್ರೋಚ್ ಎಂಬ ಹೆಸರಿನಲ್ಲಿ ಮಾಡಿದ್ದರು.  
ಇದೇ ತಂತ್ರವನ್ನು ರಾಹುಲ್‌ಗಾಂಧಿಯೂ ಆಫ್‌ಲೈನ್‌ನಲ್ಲಿ ಬಳಸಿಕೊಂಡಿದ್ದಾರೆ. ಚಿಕ್ಕ ಚಿಕ್ಕ ಗುಂಪುಗಳಲ್ಲಿ ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಕೇಳಿ ಸಲಹೆಗಳನ್ನೂ ಆಹ್ವಾನಿಸಿದ್ದರು.ಈ ಎಲ್ಲ ಅಮೇರಿಕರಣವೂ ಭಾರತದಲ್ಲಿ ಸೀಮಿತ ಉಪಯೋಗವನ್ನಷ್ಟೇ ಹೊಂದಿವೆ. ಏಕೆಂದರೆ ಭಾರತದಲ್ಲಿ ಆನ್‌ಲೈನ್ ಬಳಕೆದಾರರ ಸಂಖ್ಯೆ ತುಂಬ ಕಡಿಮೆಯಿದೆ. ಆದರೆ ಶಿಕ್ಷಿತ ಯುವಮತದಾರರನ್ನು, ಈಗ ತಾನೇ 18 ತುಂಬಿದ ಹೊಸ ಮತದಾರರನ್ನು ಸೆಳೆಯುವಲ್ಲಿ ಈ ಆನ್‌ಲೈನ್ ಪ್ರಚಾರ ಚೆನ್ನಾಗಿಯೇ ಕಾರ್ಯನಿರ್ವಹಿಸಿದೆ.
- ರೇಶ್ಮಾರಾವ್ ಸೊನ್ಲೆ

5.4.14

ಗೇಮ್ ಟೈಮ್

st Published: 05 Apr 2014 02:00:00 AM IST
ಆಡೂ ಆಟ ಆಡೂ
ಎಲೆಕ್ಷನ್‌ಗಿನ್ನೇನು 15 ದಿನಗಳು ಬಾಕಿ ಉಳಿದಿವೆ. ದೇಶಾದ್ಯಂತ ರಾಜಕೀಯಕ್ಕೆ ಸಂಬಂಧಪಟ್ಟ ಪ್ರತಿಯೊಂದೂ ಜನರ ಆಸಕ್ತಿ ಕೆರಳಿಸುತ್ತಿದೆ. ಮಾಧ್ಯಮಗಳು ರಾಜಕೀಯ ರಸದೌತಣವನ್ನೇ ಉಣಬಡಿಸುತ್ತಿವೆ. ಫೇಸ್ಬುಕ್, ಟ್ವಿಟ್ಟರ್‌ಗಳಲ್ಲೂ ರಾಜಕೀಯ ಮಿತಿ ಮೀರಿದೆ. ವಾಟ್ಸ್‌ಆಪ್ ವಿಡಿಯೋಗಳೂ ಮೋದಿ, ಮನಮೋಹನ್, ರಾಹುಲ್‌ರನ್ನು ಕುಣಿಸಿ ಮಜಾ ತೆಗೆದುಕೊಳ್ಳುತ್ತಿವೆ. ಇಂಥ ಸಂದರ್ಭದಲ್ಲಿ ಮೊಬೈಲ್ ಹಾಗೂ ವೆಬ್‌ಗೇಮ್‌ಗಳು ಹಿಂದುಳಿದರೆ ಎಲ್ಲ ಶೇಮ್ ಶೇಮ್ ಅನ್ನೋಲ್ಲವೇ?ಗೇಮ್ಸ್ ಟು ವಿನ್‌ನಂಥ ಗೇಮ್ ಡೆವಲಪರ್ಸ್ ಭಾರತದ ರಾಜಕಾರಣಿಗಳನ್ನು ತಮ್ಮ ಗೇಮ್‌ಗಳ ಹೀರೋ ಮಾಡಿ 'ಗ್ರೇಟ್ ಇಂಡಿಯನ್ ಕಾಮಿಡಿ ಸರ್ಕಸ್‌' ನಡೆಸುತ್ತಾ ಜನಮನ ರಂಜಿಸುತ್ತಿವೆ. ಈ ಮೂಲಕ ನಮ್ಮನ್ನಾಡಿಸುವ ಕೈಗಳನ್ನು ನಾವೂ ಆಡಿಸಬಹುದು. ಹೀಗೆ ಸಿದ್ಧವಾಗಿ ಪ್ರಸಿದ್ಧವಾದ ಕೆಲವು ರಾಜಕೀಯ ಸಂಬಂಧಿ ಆಟಗಳು ಇಲ್ಲಿವೆ.
ಆಮ್ ಆದ್ಮಿ ರನ್ನರ್
ಗ್ರೀಡೀಗೇಮ್ ಸಂಸ್ಥೆಯ ಇಬ್ಬರು ಐಐಟಿ ವಿದ್ಯಾರ್ಥಿಗಳು 'ಆಪ್‌' ಒಪ್ಪಿಗೆಯೊಂದಿಗೆ ಅಭಿವೃದ್ಧಿಪಡಿಸಿರುವ ಈ ಗೇಮ್‌ನಲ್ಲಿ ಕೇಜ್ರಿವಾಲ್ ಕ್ಯಾರೆಕ್ಟರ್ ಅನ್ನು ಆಡುವವನು ಕಂಟ್ರೋಲ್ ಮಾಡುತ್ತಾನೆ. ಇದರ ಮೊದಲನೇ ಲೆವೆಲ್‌ನಲ್ಲಿ ಕೇಜ್ರಿ ಸಾಹೇಬ್ರು ಪೊರಕೆ ಹಿಡಿದು ಓಡುತ್ತಾರೆ. ದಾರಿ ಮಧ್ಯೆ ನೀರಿನ ಗುಂಡಿ ಹಾಗೂ ಭ್ರಷ್ಟ ರಾಜಕಾರಣಿಗಳು ಸಿಕ್ಕಾಗ ಹಾರಿ ಮುಂದೋಡಬೇಕು. ಎರಡನೇ ಲೆವೆಲ್‌ನಲ್ಲಿ ಮತ ಕಲೆ ಹಾಕುತ್ತಾ ಓಡಬೇಕು. ಹೆಚ್ಚು ಮತ ಸಿಕ್ಕಷ್ಟೂ ಸ್ಕೋರ್ ಹೆಚ್ಚುತ್ತದೆ. ಆ್ಯಂಡ್ರಾಯ್ಡ್ ಮೊಬೈಲ್‌ಗಳು ಈ ಗೇಮ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಮೋದಿ ರನ್
ಳೆದ ವರ್ಷದ ಜುಲೈನಲ್ಲಿ ಹೊರಬಂದ ಮೋದಿ ರನ್ ಮತ್ತೊಂದು ಉಚಿತ ಆ್ಯಂಡ್ರಾಯ್ಡ್ ಗೇಮ್. ಇದರಲ್ಲಿ ಮೋದಿ ಭಾರತದ ಎಲ್ಲ ರಾಜ್ಯಗಳಲ್ಲೂ ಸಪೋರ್ಟ್ ಬೇಡುತ್ತಾ ಓಡುತ್ತಾರೆ. ಎಲ್ಲೆಡೆಯಿಂದ ಸಪೋರ್ಟ್ ಸಿಕ್ಕಿದ ಮೇಲೆ ಪ್ರಧಾನಮಂತ್ರಿ ಆಗುತ್ತಾರೆ. ಅಮೆರಿಕ ಮೂಲದ ಡೆಟಾಕ್ಸಿ ಸಂಸ್ಥೆ ಈ ಗೇಮನ್ನು ಅಭಿವೃದ್ಧಿಪಡಿಸಿದ್ದು, ಇದುವರೆಗೂ 10 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್ ಆಗಿದೆ.
ಆ್ಯಂಗ್ರಿ ಅಣ್ಣಾ
ಅಣ್ಣಾ ಹಜಾರೆ ರಾಮಲೀಲಾ ಮೈದಾನದಲ್ಲಿ ಬೃಹತ್ ಭ್ರಷ್ಟಾಚಾರ ವಿರೋಧಿ ರ್ಯಾಲಿಗಳನ್ನು ಹಮ್ಮಿಕೊಂಡ ಸಮಯದಲ್ಲಿ ಹೊರಬಂದ ಆಟ ಆ್ಯಂಗ್ರಿ ಅಣ್ಣಾ. ಪ್ರಖ್ಯಾತ ಆ್ಯಂಗ್ರಿ ಬರ್ಡ್ಸ್ ಆಟದ ಮಾದರಿಯಲ್ಲೇ ಸಾಗುವ ಈ ಗೇಮ್‌ನಲ್ಲಿ ಅಣ್ಣಾ ಹಜಾರೆ, ಅರವಿಂದ ಕೇಜ್ರಿವಾಲ್ ಹಾಗೂ ಕಿರಣ್ ಬೇಡಿ ಆ್ಯಂಗ್ರಿ ಬರ್ಡ್ಸ್‌ನಂತೆ ಭ್ರಷ್ಟ ರಾಜಕಾರಣಿಗಳ ಮೇಲೆರಗುತ್ತಾರೆ. ಇದು ಕೂಡಾ ಉಚಿತ ಅಪ್ಲಿಕೇಶನ್ ಆಗಿದೆ.
ದಿ ಶೇಮ್ ಗೇಮ್
ಈ ಆಟದಲ್ಲಿ ಆಟಗಾರ ಡಯಾಸ್‌ನ ಹಿಂದೆ ಅಡಗಿಕೊಳ್ಳಲೆತ್ನಿಸುವ ರಾಜಕಾರಣಿಯೆಡೆಗೆ ಚಪ್ಪಲಿ ಎಸೆಯುತ್ತಾನೆ. ಇದು ಕೇವಲ ಅಂತರ್ಜಾಲದಲ್ಲಿ ಲಭ್ಯವಿದ್ದು, ಸ್ವಲ್ಪ ಒರಟಾಗಿದೆ ಹಾಗೂ ಕಷ್ಟವಾಗಿದೆ. ಆದರೂ ಆಟಗಾರರು 30 ಸೆಕೆಂಡ್‌ಗಳಲ್ಲಿ 229 ಎಸೆತ ಮಾಡುವಲ್ಲಿ ಸಫಲರಾಗಿದ್ದಾರೆ.
ಮೇರಾ ಪಿಎಂ ಕೌನ್?
ಪುಣೆ ಮೂಲದ ನೀತಿ ಸಲ್ಯೂಷನ್ಸ್ ಅಭಿವೃದ್ಧಿಪಡಿಸಿರುವ ಉಚಿತ ಗೇಮ್ ಅಪ್ಲಿಕೇಶನ್ ಇದಾಗಿದ್ದು, ಇಲ್ಲಿ ಪ್ರಧಾನಿ ಕುರ್ಚಿಯ ಅಕ್ಕಪಕ್ಕದಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಕ್ಯಾರೆಕ್ಟರ್ ನಿಂತಿರುತ್ತಾರೆ. ಮಮತಾ ಬ್ಯಾನರ್ಜಿ, ಜಯಲಲಿತಾ, ಅರವಿಂದ ಕೇಜ್ರಿವಾಲ್ ಕುರ್ಚಿಯ ಕೆಳಗಿರುತ್ತಾರೆ. ಇದರಲ್ಲಿ ಆಟಗಾರ ಉರಿಯುವ ಕಲ್ಲಿದ್ದಲಿನಂತಾ ವಸ್ತುವನ್ನು ಇಷ್ಟು ಮಂದಿಯಲ್ಲಿ ಯಾರೆಡೆಗೆ ಬೇಕಾದರೂ ತಿರುಗಿಸಬಹುದು. ಅವರು ಆ ಪರಿಸ್ಥಿತಿಯನ್ನು ಎಷ್ಟು ಚೆನ್ನಾಗಿ ನಿಭಾಯಿಸಬಲ್ಲರೆಂಬುದು ಆಟ. ಆಟಕ್ಕಿಂತಾ ಹೆಚ್ಚಾಗಿ ಕ್ವಿಜ್ ಮಾದರಿಯಲ್ಲಿ ಸಾಗುವ ಮೇರಾ ಪಿಎಂ ಕೌನ್?ನಲ್ಲಿ ಮತದಾರರ ಒಲವು ಯಾರೆಡೆ ಇದೆ ಎಂಬುದೂ ತಿಳಿಯುತ್ತದೆ. ಇದುವರೆಗೂ ಆಡಿರುವ ಮಂದಿ ಎಷ್ಟು, ಯಾರಿಗೆ ಎಷ್ಟು ಮತಗಳು ಬಿದ್ದಿದ್ದಾವೆಂಬುದನ್ನು ಸಹ ನೋಡಬಹುದು. 

ರೇಶ್ಮಾ ರಾವ್

ವೋಟ್ ಆ್ಯಪ್!

ಮತ ಹಾಕುವವರಿಗೆ ಆಪ್ತವಾಗುವು ಆ್ಯಪ್‌ಗಳು
ಹಿಂದಿನೆಲ್ಲ ಬಾರಿಗಿಂತ ಈ ಬಾರಿ ಯುವಜನತೆ ಚುನಾವಣಾ ಪ್ರಕ್ರಿಯೆಯ ಮೇಲೆ ವಿಶೇಷ ಅಸ್ಥೆ ತಾಳಿದ್ದಾರೆ. ಪ್ರತಿಕ್ಷಣದ ಆಗುಹೋಗುಗಳನ್ನು ಗಮನಿಸಿ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಪ್ರತಿದಿನ ಹರಿಬಿಡುತ್ತಿದ್ದಾರೆ. ಅದಕ್ಕೆ ಬರುವ ಪ್ರತಿಕ್ರಿಯೆಗಳಿಗೆ ಉತ್ತರಿಸುತ್ತ ಚರ್ಚೆಗೆ ವೇದಿಕೆ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ. ಟ್ವಿಟ್ಟರ್‌ನಲ್ಲಿ ರಾಜಕೀಯ ನೇತಾರರನ್ನು ಫಾಲೋ ಮಾಡುತ್ತಾ ಅವರ ಎಲ್ಲ ಚಾಟು ಚಟಾಕಿಗಳನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಿದ್ದಾರೆ. ಇಲ್ಲೆಲ್ಲ ಒಬ್ಬರ ಅಭಿಪ್ರಾಯಗಳು ಇನ್ನೊಬ್ಬರದೊಂದಿಗೆ ಸೇರಿ ಕಲಸುಮೇಲೋಗರವಾಗುತ್ತಿವೆ. ಹೀಗಾಗಿ ಹೆಚ್ಚು ನಿಖರವಾಗಿ ನಿಮ್ಮನ್ನೊಬ್ಬರನ್ನು ಮಾತ್ರ ತಲುಪಿ, ಚುನಾವಣೆ ವಿಷಯಗಳಲ್ಲಿ ಸದಾಕಾಲ ಅಪ್‌ಡೇಟ್ ಇಡುವ ಹಲವಾರು ಆ್ಯಪ್‌ಗಳು ನಿಮ್ಮ ಕೈಬೆರಳ ತುದಿಯಲ್ಲಿವೆ. ಆ್ಯಂಡ್ರಾಯ್ಡ್ ಫೋನ್ ನಿಮ್ಮದಾಗಿರಬೇಕಷ್ಟೆ.
ಈ ಬಾರಿಯ ಚುನಾವಣಾ ವಿಶೇಷವನ್ನೊಳಗೊಂಡ ಟಾಪ್ 7 ಅಪ್ಲಿಕೇಶನ್‌ಗಳನ್ನು ಕೆಳಗೆ ನೀಡಲಾಗಿದೆ.
ಇಂಡಿಯನ್ ಎಲೆಕ್ಷನ್
ಚುನಾವಣಾ ಆಯೋಗದ ಅಧಿಕೃತ ಅಪ್ಲಿಕೇಶನ್ ಇದಾಗಿದ್ದು, ನಿಮ್ಮ ಮನೆಗೆ ಅತಿ ಸಮೀಪವಿರುವ ಮತಗಟ್ಟೆ ಹುಡುಕಲು ಸಹಾಯಕವಾಗಿದೆ. ಅಲ್ಲದೆ ಮತಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ ಎಂದು ಖಚಿತಪಡಿಸಿಕೊಳ್ಳಬಹುದು. ಅಷ್ಟೇ ಅಲ್ಲ, ತಪ್ಪಿದ್ದರೆ ಇಲ್ಲವೇ ಹೊಸತೇನಾದರೂ ಸೇರಿಸಬೇಕಿದ್ದರೆ ಕೂಡಾ ಈ ಅಪ್ಲಿಕೇಶನ್ ಮುಖಾಂತರ ಮನೆಯಲ್ಲೇ ಕುಳಿತು ಬದಲಾಯಿಸಬಹುದು.
ಎಲೆಕ್ಷನ್ ವಾಚ್ ರಿಪೋರ್ಟರ್
ಯಾವುದಾದರೂ ಪಕ್ಷದ ಇಲ್ಲವೇ ಅಭ್ಯರ್ಥಿಯ ವಿರುದ್ಧ ಸಮರ್ಥ ಕಾರಣಗಳುಳ್ಳ ದೂರುಗಳಿದ್ದರೆ ಈ ಆ್ಯಪ್ ಮುಖಾಂತರ ನೋಂದಣಿ ಮಾಡಬಹುದು. ಆದರೆ ಪ್ರತಿ ದೂರಿನ ಜೊತೆಗೆ ಸಂಬಂಧಿತ ಫೋಟೋ, ಮ್ಯಾಪ್ ಲೊಕೇಶನ್, ಮತ್ತು ವಿವರಣೆ ಇರಲೇಬೇಕು.
ಎಲೆಕ್ಷನ್ ಇಂಡಿಯಾ
ವಿವಿಧ ಪಕ್ಷಗಳ ಇತಿಹಾಸ, ಅಭ್ಯರ್ಥಿಗಳ ವಿವರ, ಇತ್ತೀಚಿನ ವಿದ್ಯಮಾನಗಳ ಬಗ್ಗೆ ನಿಖರವಾಗಿ ತಿಳಿಯಲು ಈ ಅಪ್ಲಿಕೇಶನ್ ಸಹಾಯಕವಾಗಿದೆ.ವೋಟರ್ ರಿಜಿಸ್ಟ್ರೇಶನ್ ಇಂಡಿಯಾನಿಮ್ಮಲ್ಲಿ ಚುನಾವಣಾ ಕಾರ್ಡ್ ಇಲ್ಲದಿದ್ದರೆ ಚಿಂತಿಸಬೇಕಿಲ್ಲ, ವೋಟರ್ ರಿಜಿಸ್ಟ್ರೇಶನ್ ಇಂಡಿಯಾ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಿ. ಅಲ್ಲಿ ನೀಡುವ ಅರ್ಜಿ ನಮೂನೆಯನ್ನು ತುಂಬಿಸಿ, ನಿಮ್ಮದೊಂದು ಫೋಟೋ ಅಪ್‌ಲೋಡ್ ಮಾಡಿ. ತಿಂಗಳೊಳಗೆ ನಿಮ್ಮ ಚುನಾವಣಾ ಗುರುತಿನ ಚೀಟಿ ರೆಡಿಯಾಗುತ್ತದೆ.
ಇಂಡಿಯನ್ ಎಲೆಕ್ಷನ್
 20141947ರಿಂದ 2014ರವರೆಗಿನ ಪ್ರಜಾಪ್ರಭುತ್ವ ಭಾರತದ ಸಂಪೂರ್ಣ ಇತಿಹಾಸ ತಿಳಿಯಲು ಈ ಆ್ಯಪ್ ಸಹಾಯಕ. ಪಕ್ಷಗಳು, ಅವುಗಳ ಸಿದ್ಧಾಂತ ಸೇರಿದಂತೆ ರಾಜಕೀಯ ವಿಷಯಗಳನ್ನು ತಿಳಿಯಲು ರಾಜಮಾರ್ಗ ಒದಗಿಸುತ್ತದೆ.
ಲೈವ್ ಇಂಡಿಯಾ ಎಲೆಕ್ಷನ್ ರಿಸಲ್ಟ್ಸ್
ಚುನಾವಣಾ ಸಂಬಂಧಿ ಪ್ರಸ್ತುತ ವಿದ್ಯಮಾನಗಳೆಲ್ಲವೂ ಕ್ಷಣಕ್ಷಣಕ್ಕೂ ಅಪ್‌ಡೇಟ್ ಆಗುತ್ತಾ ನಿಮ್ಮನ್ನು ಮಾಹಿತಿಪೂರ್ಣರನ್ನಾಗಿಡುತ್ತದೆ.ಇಂಡಿಯಾ ಎಲೆಕ್ಷನ್ಸ್ಇದು ಮತ್ತೊಂದು ಅದ್ಭುತ ಅಪ್ಲಿಕೇಶನ್ ಆಗಿದ್ದು, ಅಭ್ಯರ್ಥಿಗಳು ಮತ್ತು ಪಕ್ಷಗಳ ಎಲ್ಲ ಕಾರ್ಯಚಟುವಟಿಕೆಗಳೂ ನಿಮ್ಮ ಮುಂದೇ ನಡೆಯಿತೇನೋ ಎಂಬಷ್ಟು ಪ್ರಖರವಾಗಿ ಮಾಹಿತಿ ನೀಡುತ್ತದೆ.

2.4.14

ಸಿಂಗಲ್ ಈಸ್ ಕಿಂಗ್!

ಪಾಲಿಟಿಕ್ಸೇ ಇವರಿಗೆ ಪತಿ, ಪತ್ನಿ ಎಲ್ಲ...
ನೀವು ಬಾಲಿವುಡ್‌ನ ಬ್ಯಾಚುಲರ್‌ಗಳ ಬಗ್ಗೆ ಮೇಲಿಂದ ಮೇಲೆ ಕೇಳಿರಬಹುದು. ಅದಕ್ಕಿಂತಲೂ ಮೇಲ್ದರ್ಜೆಯ ಬ್ಯಾಚುಲರ್‌ಗಳು ರಾಜಕೀಯದಲ್ಲಿ ಕಾಣಿಸುತ್ತಾರೆ. ಇವರೆಲ್ಲ ಅಜನ್ಮ ಬ್ರಹ್ಮಚಾರಿಗಳು. ರಾಜಕಾರಣದ ಸಂದಿಗೊಂದಿಯಲ್ಲೂ ಹಾದು ಪ್ರಸ್ತುತ ಒಂದು ಹಂತ ತಲುಪಿ ನಾಯಕತ್ವದ ಪಟ್ಟ ಅಲಂಕರಿಸಿರುವ ಈ ದಿಗ್ಗಜರು ಹೆಂಡತಿಯ/ ಗಂಡನ ಜುಟ್ಟು ಹಿಡಿಯುವ ಸಾಹಸಕ್ಕೆ ಹೋಗಲಿಲ್ಲ. ಆದರೆ ದೇಶದ ಜುಟ್ಟನ್ನು ಭದ್ರವಾಗಿ ಹಿಡಿಯಲು ಪೈಪೋಟಿಗೆ ಬಿದ್ದಿದ್ದಾರೆ. ರಾಜಕೀಯದೊಂದಿಗೇ ಇವರ ಎಲ್ಲ ಸರಸ, ವಿರಸ, ಅಪರೂಪಕ್ಕೊಮ್ಮೊಮ್ಮೆ ಸಮರಸ ಕೂಡ. ಆಡಳಿತ ನಡೆಸುವುದು ಹೆಂಡತಿಯನ್ನಾಳುವುದಕ್ಕಿಂತಲೂ ಸುಲಭವೆಂಬುದು ಇವರ ಬಾಯಲ್ಲಿ ಬರಬಹುದಾದ ವಕ್ರತುಂಡೋಕ್ತಿ...
ಎಪಿಜೆ ಅಬ್ದುಲ್ ಕಲಾಂ
ದೇಶ ಕಂಡ ಅತ್ಯಂತ ಜನಾನುರಾಗಿ, ಸಮರ್ಥ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ. ಬಡ ಕುಟುಂಬದಲ್ಲಿ ಹುಟ್ಟಿದ ಈ ವಿಜ್ಞಾನಿ, ಈ ರಾಷ್ಟ್ರಪತಿಯ ಸಾಧನೆಯ ಹಿಂದೆ ಹೆಣ್ಣಿಲ್ಲ. 'ಇಂಡಿಯಾ 2020' ಎಂಬ ಪುಸ್ತಕ ಬರೆದಿರುವ ಕಲಾಂ 2020ರಲ್ಲಿ ಪ್ರಕಾಶಿಸುವ ಭಾರತವನ್ನು ನೋಡುವ ಕನಸು ಕಂಡವರು. ಇವರ ಆತ್ಮಕತೆ 'ವಿಂಗ್ಸ್ ಆಫ್ ಫೈರ್‌'ನಲ್ಲೂ ಹೆಣ್ಣಿನ ಪ್ರೀತಿಯ ಪರಿಮಳವನ್ನು ನೀವು ಕಾಣಲಾರಿರಿ.
ರಾಹುಲ್ ಗಾಂಧಿ 
ಇನ್ನೂ ಯುವಕನೆಂದೇ ಎಲ್ಲೆಡೆ ಬಿಂಬಿತವಾಗುತ್ತಿರುವ 44ರ ರಾಹುಲ್ 2004ರಿಂದಲೇ ವೆನಿಜುವೆಲಾದ ಗರ್ಲ್‌ಫ್ರೆಂಡ್ ವೆರೋನಿಕ ಜೊತೆ ಡೇಟಿಂಗ್ ನಡೆಸುತ್ತಿದ್ದರೂ ಅದೇಕೋ, ಕಂಕಣಭಾಗ್ಯ ಮಾತ್ರ ಕೂಡಿಬರುತ್ತಿಲ್ಲ. ಕಾಂಗ್ರೆಸ್‌ನಿಂದ ಪ್ರಧಾನಿ ಅಭ್ಯರ್ಥಿಯಾಗಿ ನಿಂತು, ಮಾಧ್ಯಮಗಳು ಏನೇ ಪ್ರಶ್ನೆ ಕೇಳಿದರೂ ತಾನು ಬಾಯಿಪಾಠ ಮಾಡಿದ್ದನ್ನು ಮಾತ್ರ ಉದುರಿಸಿ 'ಪಪ್ಪು' ಪಟ್ಟ ಅಲಂಕರಿಸಿರುವ ರಾಹುಲ್‌ಗೆ 'ಪಪ್ಪ' ಆಗುವ ಇಚ್ಛೆ ಇದ್ದಂತಿಲ್ಲ.
ಉಮಾ ಭಾರತಿ
ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಕೂಡಾ ಇಂದಿಗೂ ಕುಮಾರಿ. ಆರೆಸ್ಸೆಸ್‌ನೊಂದಿಗೆ ಗಟ್ಟಿ ಸಂಬಂಧ ಹೊಂದಿದ್ದ ಉಮಾ, ವಾಜಪೇಯಿ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ.
ಕೆ.ಎನ್. ಗೋವಿಂದಾಚಾರ್ಯ
ಪರಿಸರವಾದಿ, ಸಮಾಜವಾದಿ, ಬುದ್ಧಿಜೀವಿ ಎಂದು ಹೆಸರಾದ ಗೋವಿಂದಾಚಾರ್ಯ, ಜಯಪ್ರಕಾಶ ನಾರಾಯಣರ 'ಸಂಪೂರ್ಣ ಕ್ರಾಂತಿ'ಯಲ್ಲಿ ಪ್ರಖರಗೊಂಡವರು. ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ 2000ದವರೆಗೂ ಕಾರ್ಯನಿರ್ವಹಿಸಿದ್ದರು. ಮದುವೆಗೆ ಗೋವಿಂದಾ ಎಂದು ಬ್ರಹ್ಮಾಚಾರ್ಯವನ್ನೇ ಅಪ್ಪಿಕೊಂಡವರು.
ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮೊದಲ ಹಾಗೂ ಹಾಲಿ ಮುಖ್ಯಮಂತ್ರಿ ಮಮತಾ 1970ರಲ್ಲೇ ಕಾಂಗ್ರೆಸ್‌ಗೆ ಸೇರುವ ಮೂಲಕ ರಾಜಕೀಯಕ್ಕೆ ಧುಮುಕಿದವರು. ಅನಂತರ ಎರಡು ಅವಧಿಗೆ ರೇಲ್ವೆ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ದೇಶಾದ್ಯಂತ 'ದೀದೀ' (ಅಕ್ಕ) ಎಂದೇ ಪ್ರಸಿದ್ಧರಾದದ್ದಕ್ಕೂ, ಮಮತಾ ಮದುವೆಯಾಗದಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ಅವರು ಕೊಡದಿದ್ದರೂ ಸ್ಪಷ್ಟನೆಯಾಗಿಯೇ ಉಳಿಯಬಹುದಾದ ಮಾತು.
ಮಾಯಾವತಿ
ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ದಲಿತರ ಪ್ರತಿನಿಧಿಯಾಗಿ ಅವರನ್ನು ಮೇಲೆತ್ತುವ ಕಾರ್ಯಗಳಿಂದ ಪ್ರಸಿದ್ಧರಾದವರು. ಬಹುಜನ ಸಮಾಜ ಪಕ್ಷದ ನೇತಾರೆಯಾಗಿರುವ ಮಾಯಾಗೂ 'ಬೆಹನ್‌ಜೀ' (ಅಕ್ಕ) ಎಂಬ ವಿಶೇಷಣ ಸೇರಿದ್ದು, ಅವರೂ ವಿವಾಹವಾಗಿಲ್ಲ.
ಜಯಲಲಿತಾ
'ಅಕ್ಕತಂಗಿ'ಯರು ಮದುವೆಯಾಗದಿದ್ದರೆ ವಿಶೇಷವಿಲ್ಲ. ಆದರೆ ಚಲನಚಿತ್ರ ತಾರೆಯಾಗಿದ್ದ ಈ ಸುಂದರಿ 'ಅಮ್ಮ'ನೂ ಮದುವೆಯಾಗದೆ ಉಳಿದಿರುವುದು ಆಶ್ಚರ್ಯವೇ ಸರಿ. 1991ರಲ್ಲಿ ಮೊದಲ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಜಯಾ ಇಂದಿಗೂ 'ಹಾಲಿ' ಪಟ್ಟ ಉಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕೇಂದ್ರದಲ್ಲೂ ಹೆಚ್ಚಿನ ಪ್ರಭಾವ ಬೀರಿ ತಾವಂದುಕೊಂಡಿದ್ದರಲ್ಲಿ 'ಜಯಾ' ಗಳಿಸುತ್ತಾರೆ. 
ನರೇಂದ್ರ ಮೋದಿ
ಭಾರತದಾದ್ಯಂತ ತನ್ನ ಪ್ರಭಾವಶಾಲಿ ವ್ಯಕ್ತಿತ್ವದಿಂದ ಮೋಡಿ ಮಾಡಿರುವ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಇಂದು ಅವರನ್ನು ಪ್ರಧಾನಿ ಪಟ್ಟದ ಮೆಟ್ಟಿಲನ್ನೇರಿಸಲು ತುದಿಗಾಲಲ್ಲಿ ನಿಂತಿವೆ. ಇವರು ಮದುವೆಯಾಗಿದ್ದರಾದರೂ ಹೆಂಡತಿಯೊಂದಿಗೆ ಬಾಳು ನಡೆಸದೆ ಅಜನ್ಮ ಬ್ರಹ್ಮಚಾರಿಯಾಗಿಯೇ ಗುರುತಿಸಿಕೊಂಡಿದ್ದಾರೆ. 
ಅಟಲ್ ಬಿಹಾರಿ ವಾಜಪೇಯಿ
1996ರಿಂದ 2004ರವರೆಗೆ 3 ಅವಧಿಗೆ ಪ್ರಧಾನಮಂತ್ರಿಯಾಗಿ ಇಂದಿಗೂ ತಮ್ಮ ಸಚ್ಚಾರಿತ್ರ್ಯ ಹಾಗೂ ಅಭಿವೃದ್ಧಿ ಕೆಲಸಗಳಿಂದ ಜನಮನದಲ್ಲಿ ನೆಲೆಯೂರಿರುವ ವಾಜಪೇಯಿ ಕೂಡಾ ಭವಬಂಧನಕ್ಕೆ ಬೀಳಲಿಲ್ಲ. ಬಿಜೆಪಿಯ ಅತ್ಯುತ್ತಮ ರಾಜಕಾರಣಿಯಾಗಿದ್ದ ವಾಜಪೇಯಿ ಕವಿಯಾಗಿಯೂ ಹೆಸರು ಮಾಡಿದ್ದರು.
ನವೀನ್ ಪಟ್ನಾಯಕ್
ಒರಿಸ್ಸಾದ ಮಾಜಿ ಸಿಎಂ ಬಿಜು ಪಟ್ನಾಯಕ್ ಅವರ ಮಗ ನವೀನ್ ಕೂಡಾ ಅಪ್ಪನನ್ನೇ ಹಿಂಬಾಲಿಸಿ 1997ರಲ್ಲಿ ರಾಜಕೀಯ ಅಖಾಡಕ್ಕಿಳಿದವರು. ನಂತರ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಜನಮೆಚ್ಚುಗೆ ಗಳಿಸಿದ ನವೀನ್, 2000ದಲ್ಲಿ ಒರಿಸ್ಸಾದ ಸಿಎಂ ಪದವಿ ಗಳಿಸುವಲ್ಲಿ ಸಫಲರಾದರು.
 ರೇಶ್ಮಾರಾವ್ ಸೊನ್ಲೆ

1.4.14

ಎಲೆಕ್ಷನ್ ಇಲೆವೆನ್

ಇದು Epl ಎಲೆಕ್ಷನ್ ಪ್ರಿಮಿಯರ್ ಲೀಗ್
11 ದೇಶಗಳ ಹಣೆಬರಹ ಬರೆಯಲು 2014 ಎಂಬ ಬ್ರಹ್ಮ ಸಿದ್ಧನಾಗಿ ಕುಳಿತಿದ್ದಾನೆ. ಈ ವರ್ಷ 11 ಪ್ರಮುಖ ದೇಶಗಳಲ್ಲಿ ರಾಷ್ಟ್ರಮಟ್ಟದ ಚುನಾವಣೆ ನಡೆಯಲಿದೆ. ಆದರೆ ಈ ಗಾಳಿ ಎಷ್ಟು ಕಡೆ ತಂಗಾಳಿಯಾಗಿ ದೇಶದ ಹಿತ ಕಾಯುವುದೋ, ಎಷ್ಟು ಕಡೆ ಬಿರುಗಾಳಿಯಾಗಿ ಮತ್ತಿಷ್ಟು ಹಗರಣಗಳ ಭಾರ ಏರಿಸುವುದೋ ಕಾದು ನೋಡಬೇಕಿದೆ. ಜನರೇನೋ ಬಲು ಉತ್ಸಾಹದಲ್ಲಿ ಹೊಸತನ್ನು ಆಹ್ವಾನಿಸಲು ಕಾದಿದ್ದಾರೆ. ಆದರೆ ರಾಜಕೀಯದಲ್ಲಿ ಕೆಲವೊಂದಿಷ್ಟು ಬೇಡದ್ದೂ ಸಾಂಕ್ರಾಮಿಕವಾಗಿ ಹರಡುತ್ತದೆ.
ಭಾರತ (ಏ.17)
1.3 ದಶಲಕ್ಷ ಮತಯಂತ್ರಗಳನ್ನು ಬಳಸಿಕೊಂಡು, ಒಟ್ಟು 800,000 ಮತಕೇಂದ್ರಗಳಲ್ಲಿ ಸುಮಾರು 700 ದಶಲಕ್ಷ ಜನ ಮತ ಚಲಾಯಿಸಿ ಪ್ರಧಾನಿಯನ್ನು ಆಯ್ಕೆ ಮಾಡುವುದನ್ನು ಉಳಿದ ದೇಶಗಳು ಕಲ್ಪಿಸಿಕೊಳ್ಳುವುದೂ ಕಷ್ಟದ ಮಾತೇ ಸರಿ. ಇದು ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ನಮ್ಮ ದೇಶದ ಹೆಗ್ಗಳಿಕೆ. ಈ ಬಾರಿ ಏ.17ರಂದು ದೇಶಾದ್ಯಂತ ಮತದಾನ ನಡೆಯಲಿದ್ದು 10 ವರ್ಷದ ಯುಪಿಎ ಆಡಳಿತಕ್ಕೆ ತೆರೆ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಸಮೀಕ್ಷೆಗಳು ಮೋದಿ ಅಲೆಯನ್ನು ಖಚಿತಪಡಿಸುತ್ತಿವೆ. 1989ರಿಂದ ನಂತರ ಒಂದೇ ಪಕ್ಷಕ್ಕೆ ಬಾಹ್ಯ ಬೆಂಬಲವಿಲ್ಲದೆ ಕೇಂದ್ರಾಡಳಿತದ ಕೀಲಿ ಹಿಡಿಯಲು ಸಾಧ್ಯವಾಗಿಲ್ಲ. ಈ ಬಾರಿಯೂ ಅದು ಮುಂದುವರಿಯಲಿದೆ ಎನ್ನುತ್ತಿವೆ ಸಮೀಕ್ಷೆಗಳು.
ಅಫ್ಘಾನಿಸ್ತಾನ (ಏ.5)
ಬರುವ ಏ.5ರಂದು ಆಫ್ಘಾನಿಸ್ತಾನದ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಹಿಂದಿನ ಎರಡು ಅವಧಿಗೆ ಪದವಿ ಅಲಂಕರಿಸಿದ್ದ ಹಮೀದ್ ಕರ್ಜಾಯ್‌ಗೆ 3ನೇ ಬಾರಿಗೆ ಅದೃಷ್ಟಪರೀಕ್ಷೆಗೊಡ್ಡಲು ಕಾನೂನು ಅಡ್ಡಗಾಲಾಗಿದೆ. ಹೀಗಾಗಿ 2009ರ ಚುನಾವಣೆಯಲ್ಲಿ 2, 3ನೇ ಸ್ಥಾನ ಗಳಿಸಿದ್ದ ಅಬ್ದುಲ್ಲಾ ಅಬ್ದುಲ್ಲಾ, ಅಶ್ರಫ್ ಘಾನಿ ಅಹ್ಮದ್‌ಜಾಯ್ ಮುಂಚೂಣಿಯಲ್ಲಿರುವ ಆಕಾಂಕ್ಷಿ ಅಭ್ಯರ್ಥಿಗಳು ಸೇರಿ ಒಟ್ಟು 11 ಮಂದಿ ಕಣದಲ್ಲಿದ್ದಾರೆ.
ಇರಾಕ್ (ಏ.30)
ಇಲ್ಲಿನ ಸಂಸತ್ ಚುನಾವಣೆಗೆ ಏ.30ರಂದು ಮುಹೂರ್ತ ನಿಗದಿಯಾಗಿದೆ. ಹಾಲಿ ಪ್ರಧಾನಿ ನೌರಿ ಅಲ್- ಮಲ್ಲಿಕ್ ಮೂರನೇ ಬಾರಿಗೂ ಪಟ್ಟದಲ್ಲೇ ಮುಂದುವರಿಯಲು ಆಕಾಂಕ್ಷಿಯಾಗಿದ್ದಾರೆ. ಆದರೆ ಇಲ್ಲಿನ ಸುಪ್ರೀಂ ಕೋರ್ಟ್ 3ನೇ ಬಾರಿ ಅವಕಾಶ ನೀಡುವುದಿಲ್ಲವೆಂದು ಆದೇಶಿಸುವ ಸಂಭವವಿದೆ. ಶಿಯಾ ಸುನ್ನಿ ಪಂಗಡಗಳ ನಡುವಿನ ಆಂತರಿಕ ಕಲಹದಿಂದ ಬೆಂದಿರುವ ಇರಾಕ್ ನೌರಿ ಅಲ್- ಮಲ್ಲಿಕ್ ಆಡಳಿತದಲ್ಲಿ ನಿಯಂತ್ರಣದಲ್ಲಿದೆ. ಬದಲಾದರೆ ಅನಿಶ್ಚಿತತೆ ಮೂಡಬಹುದೆಂಬ ಭಯದಿಂದ ಪ್ರತಿಪಕ್ಷಗಳು ಮಲ್ಲಿಕ್ ಮುಂದುವರಿಯಲಿ ಎಂದರೆ ಮಾತ್ರ ಮತ್ತೆ ಮುಂದಿನ ಐದು ವರ್ಷಗಳಿಗೆ ನೌರಿ ಅಲ್ ಮಲ್ಲಿಕ್ ಪ್ರಧಾನಿಯಾಗುವ ಅವಕಾಶವಿದೆ.
ಬ್ರೆಜಿಲ್ (ಅ.5)
ಹಾಲಿ ರಾಷ್ಟ್ರಪತಿ ಡಿಲ್ಮಾ ರುಸೆಫ್ ಮುಂದಿನ ಅವಧಿಗೂ ಮುಂದುವರಿಯುವ ಸಂಭವ ಹೆಚ್ಚಾಗಿದೆ. ಅಲ್ಲದೆ ಪ್ರತಿಪಕ್ಷಗಳು ಮಾಡಿದ ಹಲವು ಎಡವಟ್ಟುಗಳು ಆಕೆಯ ಜನಪ್ರಿಯತೆಯನ್ನು ಹೆಚ್ಚಿಸಿರುವುದು ಡಿಲ್ಮಾಗೆ ವರದಾಯಕವಾಗಲಿದೆ.ಯುಎಸ್ (ನ.4)ಬರುವ ನವೆಂಬರ್‌ನಲ್ಲಿ ಅಮೆರಿಕದಲ್ಲಿ ಕಾಂಗ್ರೆಶ್ನಲ್ ಚುನಾವಣೆ ನಡೆಯಲಿದ್ದು, ಇದು 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರು ಅಭ್ಯರ್ಥಿಯಾಗಬಹುದೆಂಬ ನಿರ್ಣಾಯಕ ಚುನಾವಣೆಯಾಗಿರಲಿದೆ. ಹೀಗಾಗಿ ಒಬಾಮ ಭವಿಷ್ಯದ ದೃಷ್ಟಿಯಿಂದಲೂ ಈ ಚುನಾವಣೆ ಮಹತ್ವದ್ದೆನಿಸಿದೆ.
ಸೌತ್ ಆಫ್ರಿಕಾ (ಏ- ಜೂನ್ ನಡುವೆ)
ಈ ಬಾರಿ ದಕ್ಷಿಣಾ ಆಫ್ರಿಕಾದ 5ನೇ ಲೋಕಸಭಾ ಚುನಾವಣೆ ನಡೆಯಲಿದ್ದು, ಜನರು ಮಂತ್ರಿಗಳನ್ನು ಚುನಾಯಿಸಲಿದ್ದು, ಮಂತ್ರಿಗಳು ತಮ್ಮ ಪ್ರಧಾನಿಯನ್ನು ಆಯ್ಕೆ ಮಾಡಲಿದ್ದಾರೆ. 1994ರಿಂದ ಆಡಳಿತದ ಚುಕ್ಕಾಣಿ ಹಿಡಿದಿರುವ ದಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್(ಎಎನ್‌ಸಿ), ಡೆಮೊಕ್ರಟಿಕ್ ಅಲೈಯನ್ಸ್ ನಡುವೆ ಸ್ಪರ್ಧೆ ಇದೆ. ಕಳೆದ ಕೆಲ ವರ್ಷಗಳಿಂದ ನಿರುದ್ಯೋಗ, ಆರ್ಥಿಕ ಕುಸಿತ, ಭ್ರಷ್ಟಾಚಾರದಿಂದ ಬೇಸತ್ತಿರುವ ಪ್ರತಿಪಕ್ಷಗಳು ರಾಷ್ಟ್ರಪತಿ ಜೇಕಬ್ ಜುಮಾ ಅವರನ್ನು ಸ್ಥಾನದಿಂದ ಕೆಳಗಿಳಿಸಲು ಸಂಚು ರೂಪಿಸಿವೆ. ಆದರೆ ಹೊಸ ಪಕ್ಷ ದಿ ಎಕನಾಮಿಕ್ ಫ್ರೀಡಮ್ ಫೈಟರ್ಸ್ ಮಾತ್ರ ಕರಿಯರ ಗೌರವಘನತೆ ಉಳಿಸಲು ಎಎನ್‌ಸಿಯನ್ನು ಬೆಂಬಲಿಸಲು ಕೋರಿದೆ.
ಯೂರೋಪ್  (ಮೇ 22- 25)
ತೀವ್ರ ಆರ್ಥಿಕ ಮುಗ್ಗಟ್ಟು, ಮಿತಿ ಮೀರಿದ ನಿರುದ್ಯೋಗ ಸೇರಿದಂತೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಂಬಿಕೆಗಳನ್ನೇ ಕಳೆದುಕೊಂಡಿರುವ ಯೂರೋಪ್‌ನ ಸದ್ಯದ ಪರಿಸ್ಥಿತಿಯಲ್ಲಿ ಮೇನಲ್ಲಿ ನಡೆಯುವ ಚುನಾವಣೆ ಒಂದು ಆಶಾಕಿರಣದಂತೆ ಬಿಂಬಿತವಾಗಿದೆ. ಯುಕೆ ಇಂಡಿಪೆಂಡೆನ್ಸ್ ಪಕ್ಷ, ಟ್ರೂ ಫಿನ್ಸ್, ಫ್ರಂಟ್ ನ್ಯಾಷನಲ್ ಪಕ್ಷಗಳು ಗದ್ದುಗೆ ಅಲಂಕರಿಸಲು ಮುಂಚೂಣಿಯಲ್ಲಿವೆ. 
ಕೊಲಂಬಿಯಾ (ಮೇ 25)
ಇಲ್ಲಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿಯೂ ಹಾಲಿ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ಮರು ಆಯ್ಕೆಯಾಗುವ ಸಂಭವವೇ ಹೆಚ್ಚಿದೆ. ಜುವಾನ್‌ರೊಂದಿಗೆ ಬಂಡಾಯವೆದ್ದ ಪ್ರಮುಖ ರಾಜಕಾರಣಿ ಯೂರಿಬ್ ಹೊಸ ಪಕ್ಷ ಸ್ಥಾಪಿಸಿ ಆಸ್ಕರ್ ಇವಾನ್ ಜುಲಾಂಗಾರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಹಾಗಾಗಿ ಅಧ್ಯಕ್ಷೀಯ ಚುನಾವಣೆ ಕಳೆಗಟ್ಟಿದೆ.
ಇಂಡೋನೇಷ್ಯಾ (ಜು.9)
ಜಕಾರ್ತದ ಗವರ್ನರ್ ಜೋಕೋ ವಿಡೊಡೊ ಜಕಾರ್ತದ ಒಬಾಮ ಎಂದೇ ಬಿಂಬಿತವಾಗಿದ್ದು ಅವರು ಈ ಬಾರಿಯ ಅಧ್ಯಕ್ಷೀಯ ಚುನಾವಣೆಗೆ ನಿಲ್ಲಬೇಕೆಂಬುದು ಇಲ್ಲಿನ ಜನರ ಒಮ್ಮತವಾಗಿದೆ. ಆದರೆ ಅವರ ಪಕ್ಷದ ನೇತಾರೆ, ಎರಡು ಬಾರಿ ಸೋಲನ್ನನುಭವಿಸಿರುವ ಮೇಘಾವತಿ ಸುಕರ್ನೋಪುತ್ರಿ ಕಣಕ್ಕಿಳಿಯುವುದಾದರೆ ವಿಡೊಡೊ ಸ್ಪರ್ಧಿಸುವುದಿಲ್ಲ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರು ಅಧ್ಯಕ್ಷಗಾದಿ ಹಿಡಿಯುವುದು ಖಚಿತವಾಗಿದೆ.
ಟರ್ಕಿ (ಆಗಸ್ಟ್)
ಇಲ್ಲಿನ ರಾಷ್ಟ್ರಪತಿ ಹುದ್ದೆಗೆ ಆಗಸ್ಟ್‌ನಲ್ಲಿ ಚುನಾವಣೆ ನಡೆಯಲಿದ್ದು ಹಾಲಿ ಪ್ರಧಾನಮಂತ್ರಿ ರಿಸೆಪ್ ಎರ್ಡೋಗನ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಅವರ ಪ್ರಧಾನಮಂತ್ರಿ ಅವಧಿ 2015ಕ್ಕೆ ಮುಗಿಯಲಿರುವುದು. ಮಾರ್ಚ್‌ನಲ್ಲಿ ನಡೆವ ಪ್ರಾಂತೀಯ ಚುನಾವಣೆಯಲ್ಲಿ ಎರ್ಡೋಗನ್‌ರ ಎಕೆಪಿ ಪಕ್ಷ ಉತ್ತಮ ಫಲಿತಾಂಶ ಪಡೆದರೆ ಅವರ ರಾಷ್ಟ್ರಪತಿ ಕನಸು ನನಸಾಗುವುದರಲ್ಲಿ ಅನುಮಾನವಿಲ್ಲ.
ಈಜಿಪ್ಟ್ (ಮೇ- ಆಗಸ್ಟ್)
ಸರ್ವಾಧಿಕಾರಿ ಧೋರಣೆ ತೋರಿದ ಮೊಹಮ್ಮದ್ ಮೊರ್ಸಿಯನ್ನು ಬಲವಂತವಾಗಿ ಕೆಳಕ್ಕಿಳಿಸಿದ ನಂತರ ಈಜಿಪ್ಟ್ ಹೊಸ ಅಧ್ಯಕ್ಷರ ಹುಡುಕಾಟದಲ್ಲಿ ತೊಡಗಿದೆ. ಬೇಸಿಗೆ ಮುಗಿಯುತ್ತಿದ್ದಂತೆ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ ಎಂದು ವಿದೇಶಾಂಗ ಸಚಿವ ನೆಬಿಲ್ ಫಾಮಿ ತಿಳಿಸಿದ್ದಾರೆ. ಇದುವರೆಗೂ ದಿನಾಂಕ ಹಾಗೂ ಅಭ್ಯರ್ಥಿಗಳ ಆಯ್ಕೆ ಘೋಷಣೆಯಾಗಿಲ್ಲ.