ಪುಟಗಳು

9.4.14

ಮತವೇ ಮಾಧ್ಯಮ

ವೋಟ್ ಫಾರ್ ಮೀಡಿಯಾ
ರಾಜಕಾರಣವೆಂಬುದು ಹಿಂದೂ ಇಂದೂ ಮುಂದೂ ಹೀಗೇ, ಈ ದೇಶ ಬದಲಾಗೋಲ್ಲ...ಎಂಬ ತಾತ್ಸಾರ ಮನೋಭಾವ ಎಲ್ಲರಲ್ಲೂ ಬೆಳೆದಿದ್ದ ಕಾಲಕ್ಕೇ ಬದಲಾವಣೆಯ ಬೆಳಕೊಂದು ಸಣ್ಣಗೆ ಮಿಂಚುತ್ತಿದೆ. ಇದು ಭ್ರಷ್ಟಾಚಾರ ನಿರ್ಮೂಲನೆ ಹೋರಾಟದಿಂದಲೇ ಹುಟ್ಟಿಕೊಂಡು ದೇಶದಲ್ಲಿ ಸಂಚಲನ ಮೂಡಿಸಿದ ಆಮ್ ಆದ್ಮಿ ಪಕ್ಷ ಹಾಗೂ ಗುಜರಾತ್‌ನ ಅಭಿವೃದ್ಧಿಯ ಹರಿಕಾರರಾಗಿ ಸಾಧಿಸಿ ತೋರಿಸಿದ ನರೇಂದ್ರ ಮೋದಿಯವರ ಗಟ್ಟಿ ವ್ಯಕ್ತಿತ್ವ ತಂದ ಬೆಳಕು. ಹೀಗಾಗಿ ಬದಲಾವಣೆಗಾಗಿ ಹಾತೊರೆಯುತ್ತಿದ್ದ ಹಲವು ಮನಸುಗಳು ಮಿಂಚುಹುಳುಗಳಂತೆ ಈ ಬೆಳಕಿನೆಡೆಗೆ ಆಕರ್ಷಿತವಾಗುತ್ತಿವೆ. ಇದರಲ್ಲಿ ತಮ್ಮ ಕೊಡುಗೆಯೂ ಇರಲಿ ಎಂಬ ಸದಾಶಯ ಎಲ್ಲರದ್ದು. ಆದ್ದರಿಂದಲೇ ಇದುವರೆಗೂ ರಾಜಕೀಯದ ಕೆಸರನ್ನು ಕಲಕಿ ಅದರಲ್ಲಿ ಸೇರಿರುವ ಎಲ್ಲ ಕಲ್ಮಶಗಳನ್ನೂ ಎತ್ತಿ ತೋರಿಸುತ್ತಿದ್ದ ಪತ್ರಕರ್ತರು ಈ ಬಾರಿ ಕೆಸರಲ್ಲಿ ಕಮಲವೂ ಇದೆ ಎಂದು ಕಂಡುಕೊಂಡಿದ್ದಾರೆ. ಅಲ್ಲದೆ ಕಸ ಇದೆ ಎಂದು ತೋರಿಸಿದರೆ ಯಾರೂ ಸ್ವಚ್ಛಗೊಳಿಸುವುದಿಲ್ಲ. ನಮ್ಮ ಮನೆಯ ಕಸ ನಾವೇ ಎತ್ತಿ ಹಾಕಬೇಕು ಎಂದು ಸಾರಿ ಕೆಲವರು ಪೊರಕೆಯನ್ನೂ ಹಿಡಿದಿದ್ದಾರೆ.
ಈ ಹಿಂದೆಯೂ ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕರಾಗಿದ್ದಅರುಣ್ ಶೌರಿ, ಶಿವಸೇನೆಯ ಮುಖ್ಯಸ್ಥ, ವ್ಯಂಗ್ಯಚಿತ್ರಕಾರ ಬಾಳಾ ಠಾಕ್ರೆಯಂಥ ನಾಯಕರು ಮೀಡಿಯಾದಿಂದ ರಾಜಕಾರಣಕ್ಕಿಳಿದು ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಆದರೆ ಈ ಬಾರಿ 20ಕ್ಕಿಂತಲೂ ಅಧಿಕ ಪತ್ರಕರ್ತರು ಈ ಬಾರಿ ಲೇಖನಿ ಬದಿಗಿಟ್ಟು ರಾಜಕೀಯ ಅಖಾಡಕ್ಕಿಳಿದಿದ್ದಾರೆ. ಹೋದಹೋದಲ್ಲಿ ಮೈಕ್ ಹಿಡಿದು ಓದುಗರನ್ನು ತಮ್ಮ ಮತದಾರರನ್ನಾಗಿ ಬದಲಾಯಿಸಿಕೊಳ್ಳಲು ಹೆಣಗುತ್ತಿದ್ದಾರೆ. ಈ ಎಲ್ಲ ಪತ್ರಕರ್ತರನ್ನೂ ರಾಜಕೀಯದೆಡೆ ಅಸಹ್ಯ ಹಾಗೂ ಬದಲಾವಣೆಯ ಹಸಿವೇ ರಾಜಕೀಯಕ್ಕೆಳೆ ತಂದಿದೆ.
ತೆಹಲ್ಕಾದಲ್ಲಿ ತನಿಖಾ ಪತ್ರಕರ್ತರಾಗಿದ್ದ ಆಶಿಶ್ ಕೇತನ್ ಮೂರು ಭಯೋತ್ಪಾದಕ ಬ್ಲಾಸ್ಟ್‌ಗಳ ಕುರಿತು ತನಿಖೆ ನಡೆಸಿ ಮಹತ್ತರ ಸತ್ಯಗಳನ್ನು ಬಯಲಿಗೆಳೆದಿದ್ದರು. ನಿರ್ಭೀತ ಪತ್ರಕರ್ತರೆಂದೇ ಹೆಸರಾದ ಆಶಿಶ್ ಈ ಬಾರಿ ಆಪ್‌ನಿಂದ ದೆಹಲಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದಾರೆ. ಭಾರತೀಯ ಮಾಧ್ಯಮದಲ್ಲಿ ನಿಷ್ಠುರ ಹಾಗೂ ಸ್ವತಂತ್ರ ಬರಹಗಳಿಗೆ ಜಾಗವಿಲ್ಲದ್ದರಿಂದ ಪತ್ರಿಕೋದ್ಯಮ ತ್ಯಜಿಸಿದ್ದಾಗಿ ಘೋಷಿಸಿದ ಅವರು, ನೇರವಾಗಿಯಾದರೂ ಸರಿ, ಹಿನ್ನೆಲೆಯಲ್ಲಿದ್ದರೂ ಸರಿ, ರಾಜಕೀಯಕ್ಕೆ ಮಹತ್ವಾಕಾಂಕ್ಷೆ ಹಾಗೂ ದೂರದೃಷ್ಟಿ ಹೊಂದಿರುವವರು ಬರಲು ಇದು ಸಕಾಲವಾಗಿದೆ ಎನ್ನುತ್ತಾರೆ.
ಕೃತಿಕಾರ, ಇಂಗ್ಲಿಷ್‌ನ ದಿ ಟೆಲಿಗ್ರಾಫ್, ಸಂಡೆ ಪತ್ರಿಕೆಗಳನ್ನು ಬೆಳೆಸಿದ ಮಾಜಿ ಸಂಪಾದಕ, ಸಂಡೆ ಗಾರ್ಡಿಯನ್ ಪತ್ರಿಕೆಯ ಮಾಜಿ ಸಂಪಾದಕೀಯ ನಿರ್ದೇಶಕ, ಹೆಸರಾಂತ ಪತ್ರಕರ್ತ ಎಂ.ಜೆ.ಅಕ್ಬರ್ ತಮ್ಮ ಯಾವತ್ತೂ ನಿಲುವಲ್ಲಿ ಕಾಂಗ್ರೆಸ್‌ನತ್ತ ವಾಲಿದವರು. 1989ರಲ್ಲಿ ಕಾಂಗ್ರೆಸ್ ಸೇರಿ ಗೆದ್ದು ಲೋಕಸಭಾ ಪ್ರವೇಶಿಸಿದ್ದರು. 1991ರಲ್ಲಿ ರಾಜಕಾರಣಕ್ಕೆ ಬೈಬೈ ಹೇಳಿ ಪತ್ರಿಕೋದ್ಯಮಕ್ಕೆ ಮರಳಿದ್ದರು. ಆದರೆ ಈ ಬಾರಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಗೆ ತಮ್ಮ ಬೆಂಬಲವನ್ನು ಘೋಷಿಸಿದ್ದಲ್ಲದೆ ರಾಷ್ಟ್ರೀಯ ಬಿಜೆಪಿ ವಕ್ತಾರರಾಗಿ ಸ್ಥಾನ ಪಡೆದಿದ್ದಾರೆ.
ಉತ್ತರ ಪ್ರದೇಶದ ಪತ್ರಿಕೆಯೊಂದರಲ್ಲಿ ವರದಿಗಾರರಾಗಿ ಕೆಲಸ ಆರಂಭಿಸಿ, ಟಿವಿ ಆ್ಯಂಕರ್ ಆಗಿ, ಪತ್ರಿಕಾ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದ ರಾಜೀವ್ ಶುಕ್ಲಾ 2000ದಲ್ಲಿ ಕಾಂಗ್ರೆಸ್‌ನಿಂದ ರಾಜ್ಯಸಭೆ ಪ್ರವೇಶಿಸಿದ್ದರು. ಮನಮೋಹನ್ ಸಿಂಗ್ ಸರ್ಕಾರದಲ್ಲಿ ಮಂತ್ರಿಯಾಗಿ, ಐಪಿಎಲ್ ಮುಖ್ಯಸ್ಥರಾಗಿದ್ದ ಅವರು, ಕಳೆದ ವರ್ಷ ಸ್ಪಾಟ್ ಫಿಕ್ಸಿಂಗ್ ಇನ್ನಿತರೆ ಐಪಿಎಲ್ ಹಗರಣಗಳು ಬಯಲಿಗೆ ಬಂದಾಗ ರಾಜಿನಾಮೆ ನೀಡಿದ್ದರು. ಅವರ ಪ್ರಕಾರ ರಾಜಕಾರಣಕ್ಕೆ ಬರುತ್ತಿರುವ ಬಹುತೇಕ ಪತ್ರಕರ್ತರು ರಾಜಕೀಯ ವರದಿಗಾರರು. ಅವರ ಒಡನಾಟ ಹೆಚ್ಚಾಗಿ ರಾಜಕಾರಣಿಗಳೊಂದಿಗಿರುತ್ತದೆ. ಹೀಗಾಗಿ ರಾಜಕಾರಣದತ್ತ ಸುಲಭ ಒಲವು ಬೆಳೆದುಬರುತ್ತದೆ.
ಪಯೋನೀರ್ ದಿನಪತ್ರಿಕೆಯ ದೆಹಲಿ ಕೇಂದ್ರದ ಸಂಪಾದಕರಾಗಿರುವ ಚಂದನ್ ಮಿತ್ರ ಈ ಬಾರಿ ಪಶ್ಚಿಮ ಬಂಗಾಳದ ತಮ್ಮ ಸ್ವಕ್ಷೇತ್ರ ಹೂಗ್ಲಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಮೋದಿ ನಾಯಕತ್ವದಲ್ಲಿ ಪ.ಬಂಗಾಳದ ಚಿತ್ರಣವೇ ಬದಲಾಗುವುದಾಗಿ ಹೇಳುತ್ತಿರುವ ಅವರು, 2003ರಿಂದ 2009ರವರೆಗೆ ರಾಜ್ಯಸಭಾ ಸದಸ್ಯರಾಗಿ, 2010ರಲ್ಲಿ ಮಧ್ಯಪ್ರದೇಶದಿಂದ ಸಂಸದರಾಗಿ ಕಾರ್ಯ ನಿರ್ವಹಿಸಿದ್ದಾರೆ. 
15 ವರ್ಷಗಳ ಕಾಲ ಕನ್ನಡ ಪತ್ರಿಕೋದ್ಯಮದಲ್ಲಿ ಅಂಕಣ ಬರಹಗಾರರಾಗಿ ಪ್ರಖ್ಯಾತರಾಗಿದ್ದ ಪ್ರತಾಪ್‌ಸಿಂಹ ತಮ್ಮ ರಾಷ್ಟ್ರೀಯ ನಿಲುವುಗಳಿಂದ ಜನಮನ ಗೆದ್ದಿದ್ದರು. ಈ ಬಾರಿ ಮೈಸೂರು- ಕೊಡಗು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರತಾಪ್ 'ಪತ್ರಿಕೋದ್ಯಮದಲ್ಲಿ ಜಾಗೃತಿ ಮೂಡಿಸಬಹುದು. ಆದರೆ ವಾಸ್ತವದಲ್ಲಿ ಬದಲಾವಣೆ ತರಬೇಕಾದ್ದು ರಾಜಕೀಯ ಕ್ಷೇತ್ರ. ಯಾರನ್ನೋ ದೂರುವ ಬದಲು ನಾವೇ ಏಕೆ ಜನರ ನೋವಿಗೆ, ಸ್ಪಂದಿಸಬಾರದು?' ಎನ್ನುತ್ತಾರೆ. 
ಸ್ಟಾರ್ ನ್ಯೂಸ್‌ನ ಮಾಜಿ ನಿರೂಪಕಿ, ಕಾರ್ಯಕ್ರಮ ನಿರ್ಮಾಪಕಿ ಶಾಜಿಯಾ ಅಣ್ಣಾ ಚಳುವಳಿಯ ಮಾಧ್ಯಮ ವಕ್ತಾರೆಯಾಗಿದ್ದರು. ಈಗ ಆಪ್‌ನಿಂದ ಉತ್ತರಪ್ರದೇಶದ ಘಜಿಯಾಬಾದ್‌ನ ಅಭ್ಯರ್ಥಿಯಾಗಿ, ಸೈನ್ಯದ ಮಾಜಿ  ಮುಖ್ಯಸ್ಥ, ಬಿಜೆಪಿ ಅಭ್ಯರ್ಥಿ ವಿ.ಕೆ.ಸಿಂಗ್ ಹಾಗೂ ಮಾಜಿ ಸಂಸದ, ಹೆಸರಾಂತ ನಟ, ಕಾಂಗ್ರೆಸ್ ಅಭ್ಯರ್ಥಿ ರಾಜ್ ಬಬ್ಬರ್ ಎದುರಾಳಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಹಿಂದಿ ನ್ಯೂಸ್ ಚಾನಲ್‌ಗಳ ಪರಿಚಿತ ಮುಖ, ಆಶುತೋಷ್ ಆಪ್‌ನ ಟಿಕೆಟ್ ಪಡೆದು ಚಾಂದಿನಿ ಚೌಕ್‌ನಿಂದ ಕಾನೂನು ಸಚಿವ ಕಣಕ್ಕಿಳಿದಿದ್ದಾರೆ. 23 ವರ್ಷಗಳ ಮಾಧ್ಯಮದ ಒಡನಾಟ ನಿಲ್ಲಿಸಿ ಅಖಾಡಕ್ಕಿಳಿದಿರುವ ಅವರು 'ಅಣ್ಣಾ: ದೇಶವನ್ನೆಬ್ಬಿಸಿದ ಆ 13 ದಿನಗಳು' ಎಂಬ ಪುಸ್ತಕ ಬರೆದಿದ್ದಾರೆ. ರಾಜಕೀಯವನ್ನು ಯಾವತ್ತೂ ದ್ವೇಷಿಸುತ್ತಿದ್ದ ನನಗೆ ಅಣ್ಣಾ ಚಳುವಳಿ ಮೂಲಕ ಹುಟ್ಟಿಕೊಂಡ ಆಪ್ ಹೆಚ್ಚು ಆಪ್ಯಾಯಮಾನವಾಗಿ ಕಂಡಿತು. ಅದಕ್ಕಾಗಿಯೇ ಸೇರಿದ್ದೇನೆ ಎನ್ನುತ್ತಾರೆ.
2009ರಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಸರ್ಕಾರದ ಕಾರ್ಯನಿರ್ವಹಣೆಗೆ ಅಸಮಾಧಾನಗೊಂಡು ಹಣಕಾಸು ಮಂತ್ರಿ ಚಿದಂಬರಂ ಮುಖದತ್ತ ಚಪ್ಪಲಿ ಎಸೆದ ಜರ್ನೈಲ್ ಸಿಂಗ್ ಕೂಡಾ ಮೊದಲು ಪತ್ರಕರ್ತರಾಗಿದ್ದವರು. ನಾನು ಮಾಡಿದ್ದು ತಪ್ಪೇ ಆಗಿದ್ದರೂ ನನ್ನ ರೋಷ ನಿಜವಾದುದಾಗಿತ್ತು ಎನ್ನುವ ಜರ್ನೈಲ್ ಸಿಂಗ್ ಈಗ ಆಪ್‌ನ ಅಭ್ಯರ್ಥಿ.
ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿದ್ದ ಮಲೆಯಾಳಿ ಪತ್ರಕರ್ತೆ ಅನಿತಾ ಪ್ರತಾಪ್ ಆಪ್ ಅಭ್ಯರ್ಥಿಯಾಗಿ ಕೇರಳದ ಎರ್ನಾಕುಳಂ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಇವರು ಇಂಡಿಯನ್ ಎಕ್ಸ್‌ಪ್ರೆಸ್, ಇಂಡಿಯಾ ಟುಡೆಗಳಲ್ಲಿ ಪತ್ರಕರ್ತೆಯಾಗಿ ಹೆಸರು ಮಾಡಿ, ಸಿಎನ್‌ಎನ್ ನ್ಯೂಸ್ ಚಾನೆಲ್‌ನ ಸೌತ್ ಏಶಿಯಾ ಬ್ಯೂರೋ ಮುಖ್ಯಸ್ಥೆಯಾಗಿ ಕಾರ್ಯ ನಿರ್ವಹಿಸಿದ್ದರು.
- ರೇಶ್ಮಾರಾವ್ ಸೊನ್ಲೆ

1 ಕಾಮೆಂಟ್‌:

Badarinath Palavalli ಹೇಳಿದರು...

ರಾಜಕೀಯ ಮತ್ತು ಪತ್ರಕರ್ತರ ನಡುವಿನ ನಂಟು. ಬಲು ಹತ್ತಿರದ್ದು ಅಲ್ಲವೇ!