First Published: 10 Apr 2014 02:00:00 AM IST
ವಡ್ನಾಗರದ ಟೀ ಮಾರುವ ಹುಡುಗ
50 ವರ್ಷಗಳ ಹಿಂದೆ..ಗುಜರಾತ್‌ನ
ಗಿಜಿಗುಡುವ ವಾಡ್ನಾಗರ್ ಪಟ್ಟಣದ ಮಧ್ಯದಲ್ಲೊಂದು ಕಿರಿದಾದ ಓಣಿಯಲ್ಲಿ ಹಾದು ಹೋದರೆ
ಅಲ್ಲಿರುವುದು ತೀರಾ ಸಾಮಾನ್ಯವಾದ 3 ಕೋಣೆಗಳ ಮಣ್ಣಿನ ಮನೆ. ಟೀಸ್ಟಾಲ್ ನಡೆಸಿ ತಮ್ಮ
ಹೆಂಡತಿ ಹಾಗೂ 8 ಮಕ್ಕಳ ಹೊಟ್ಟೆ ಹೊರೆಯುವ ಕಷ್ಟಜೀವಿ ಮನೆಯ ಯಜಮಾನ. ಕೆಲವೊಮ್ಮೆ ತನ್ನ
ಮಕ್ಕಳನ್ನೂ ಕರೆದು ತಟ್ಟೆ ತುಂಬಾ ಬಿಸಿ ಬಿಸಿ ಟೀ ಕಪ್ ಇಟ್ಟು ಮಾರಿಕೊಂಡು ಬರಲು ರೈಲ್ವೇ
ಸ್ಟೇಷನ್‌ಗೆ ಓಡಿಸುವ. ಹಾಗೆ 'ಚಾಯ್ ಚಾಯ್' ಎಂದು ಕೂಗಿಕೊಳ್ಳುತ್ತಾ ಪ್ರಯಾಣಿಕರ ಬಳಿ
ತಗೊಳ್ಳಿ ಅನ್ನೋ ದೈನೇಸಿ ಮುಖದಲ್ಲಿ ನೋಡುತ್ತಿದ್ದ ಚಹಾ ಮಾಡುವವನ ಮೂರನೇ ಮಗನಾತ,
ಭಗವತಾಚಾರ್ಯ ನಾರಾಯಣಾಚಾರ್ಯ ಶಾಲೆಯ ತೀರಾ ಸಾಮಾನ್ಯ ವಿದ್ಯಾರ್ಥಿ. ಆ ಹುಡುಗ ಅದೊಂದು
ದಿನ ಮನೆ ಬಿಟ್ಟು ಓಡಿಹೋದ. ಎಲ್ಲಿ ಹೋದನೋ, ಹಿಂದಿರುಗಿದ್ದು ಅಪ್ಪನ ಶವಸಂಸ್ಕಾರಕ್ಕೆ.
ಇಂಥ ಈತ ಅದ್ಯಾವುದೋ ಮಾಯದಲ್ಲಿ ಆರ್‌ಎಸ್‌ಎಸ್ ತೆಕ್ಕೆಗೆ ಬಂದು ಬಿದ್ದ. ಅಲ್ಲಿಂದ
ಎದ್ದುದು ನಾಯಕನಾಗಿ... ನಂತರ ಗುಜರಾತ್ ಮುಖ್ಯಮಂತ್ರಿಯಾದ ಮೇಲೆ ಅಭಿವೃದ್ಧಿ ಮಾಡಿ
ತೋರಿಸಿ ಸಮರ್ಥ ನಾಯಕನಾಗಿ... ಮತ್ತೀಗ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ
ನಾಯಕ ಅಭ್ಯರ್ಥಿಯಾಗಿ ಸ್ಪರ್ಧೆಗೆ ನಿಂತಿದ್ದಾರೆ!ಬದುಕಿಗಿಂತಾ ದೊಡ್ಡ, ಉತ್ತಮ ಕಲ್ಪನಾ ಮಟ್ಟದ ಫೇರಿಟೇಲ್ ಇರಲು ಸಾಧ್ಯವಿಲ್ಲವೆಂಬುದಕ್ಕೆ 63 ವರ್ಷದ ನರೇಂದ್ರ ಮೋದಿಯವರ ಈ ಯಶೋಗಾಥೆ ಸಾಕ್ಷಿಯಲ್ಲವೇ?
ಅವರ
ಖ್ಯಾತಿ ಗುಜರಾತ್‌ನ ಉದ್ದಕ್ಕೂ ಒಂದಿಷ್ಟು ಕತೆಗಳನ್ನು ಹುಟ್ಟುಹಾಕಿದೆ. ಯಾವುದು
ಸತ್ಯವೋ, ಯಾವುದು ಸುಳ್ಳೋ ಮೋದಿ ಈ ಬಗ್ಗೆ ಬಾಯಿ ಬಿಚ್ಚುವುದಿಲ್ಲ. ಅದರಲ್ಲೊಂದು
ಹೀಗಿದೆ.. ಗೆಳೆಯನ ಬಳಿ ಕಟ್ಟಿದ ಬಾಜಿಗಾಗಿ ಮೋದಿ ಎಂಬ ಪುಟ್ಟ ಹುಡುಗ ಮೊಸಳೆಗಳಿದ್ದ
ಹೊಳೆಯೊಂದರ ಮಧ್ಯದಲ್ಲಿ ಮುಳುಗಿ ಹೋಗಿದ್ದ ದೇವಸ್ಥಾನದವರೆಗೆ ಈಜಿ ಹೋಗಿ ಬಂದಿದ್ದನಂತೆ!
ಅದು ಮೋದಿಯ ಛಲ, ಧೈರ್ಯ ಎನ್ನುತ್ತಾರೆ ಕತೆ ಹೇಳುವವರು. ಇದರಲ್ಲಿ ಕೆಲವು
ಉತ್ಪ್ರೇಕ್ಷೆಗಳೂ ಇರಬಹುದು. ಮೋದಿಯ ಕುಟುಂಬ, ಗೆಳೆಯರು, ಮನೆ ಸುತ್ತಮುತ್ತ ವಾಸವಿದ್ದ
ಜನರ ನೆನಪುಗಳನ್ನು ಕೆದಕಿದ ಸುದ್ದಿಸಂಸ್ಥೆ ರಾಯ್ಟರ್ಸ್‌ಗೆ ಸಿಕ್ಕಿದ್ದಿಷ್ಟು...
ಗುಜರಾತ್‌ನ
ರಾಜಧಾನಿ ಅಹಮದಾಬಾದ್‌ನಲ್ಲಿ ಅಂಗಡಿಯಿಟ್ಟುಕೊಂಡು ಕಾರುಗಳ ಟೈರ್‌ಗಳನ್ನು ಮಾರಾಟ
ಮಾಡುತ್ತಿರುವ ಮೋದಿಯ ಅಣ್ಣ ಪ್ರಹ್ಲಾದ್ ಮೋದಿ ತಾನು ಮತ್ತು ತಮ್ಮ ಚಹಾ ಮಾರಾಟ ಮಾಡಲು
ಹತ್ತಿರದ ರೈಲ್ವೇ ಸ್ಟೇಷನ್‌ಗೆ ಓಡುತ್ತಿದ್ದ ಕತೆಯನ್ನು ಬಿಚ್ಚಿಡುತ್ತಾರೆ. ಆದರೆ
ರೈಲ್ವೇ ಸ್ಟೇಷನ್ ಹತ್ತಿರದ ವಾಸಿಗಳು ಈ ಕತೆಯನ್ನು ಅಲ್ಲಗಳೆದು ಮೋದಿಯನ್ನು ಆಮ್ ಆದ್ಮಿ
ಎಂದು ಬಿಂಬಿಸಲು ಹೀಗೆಲ್ಲ ಕಾಗಕ್ಕ ಗುಬ್ಬಕ್ಕ ಎಂದು ಕತೆ ಹೇಳುತ್ತಿದ್ದಾರೆ. ಅವರ ತಂದೆ
ಉಪ್ಪು ಪುಡಿ ಮಾಡುವ ವ್ಯಾಪಾರ ಮಾಡುತ್ತಿದ್ದರು ಎನ್ನುತ್ತಾರೆ.
ಇದನ್ನು ಒಪ್ಪುವ
ಪ್ರಹ್ಲಾದ್ ಮೋದಿ, ಮೊದಲು ಚಹಾ ಮಾರುತ್ತಿದ್ದರು. ಹಲವು ವರ್ಷಗಳ ಬಳಿಕ ಉಪ್ಪಿನ
ವ್ಯಾಪಾರಕ್ಕೆ ತೊಡಗಿದರು ಎಂದು ಸಮಜಾಯಿಷಿ ನೀಡುತ್ತಾರೆ. ಮೋದಿ ಮತ್ತು ಕುಟುಂಬದ
ಬಾಂಧವ್ಯದ ಬಗ್ಗೆ ಕೆದಕಿದಾಗ, ಒಮ್ಮೆ ಮೋದಿ ಹೇಳಿದ್ದರಂತೆ, ಸಾರ್ವಜನಿಕ
ವ್ಯಕ್ತಿಯಾಗುತ್ತಿದ್ದಂತೆ ಕುಟುಂಬದೊಂದಿಗಿನ ಎಳೆ ತೆಳ್ಳಗೆ ಇಟ್ಟುಕೊಳ್ಳಬೇಕಾಗುತ್ತದೆ
ಎಂದು. ನಾವಿದನ್ನು ಒಪ್ಪಿಕೊಂಡಿದ್ದೇವೆ ಎನ್ನುತ್ತಾರೆ ಅವರು.
ಆರ್‌ಎಸ್‌ಎಸ್ ಸೇರಿದ
ಮೇಲೆ ವಿರಾಗಿಯಂತೆ ಬದುಕಿದ ಮೋದಿ ಈಗಲೂ ಒಂಟಿಯಾಗಿ ಬದುಕುತ್ತಿದ್ದಾರೆ. ಎಲ್ಲೋ
ಅಪರೂಪಕ್ಕೆ ಅಮ್ಮನನ್ನು ನೋಡಲು ಮನೆಗೆ ಹೋಗುತ್ತಾರೆ.ಮೋದಿ ಓದಿದ ಶಾಲೆಯ ಶಿಕ್ಷಕ
ಗೋಸ್ವಾಮಿ ಮೋದಿ ನಾಟಕದಲ್ಲಿ ಭಾಗವಹಿಸಿದ್ದನ್ನು ನೆನೆಸಿಕೊಂಡು ಶಾಲೆಯ ಹಳೆ
ದಾಖಲೆಗಳೊಂದಿಗಿದ್ದ ಮೋದಿ ಬಾಲ್ಯದ ಫೋಟೋವನ್ನು ತೆಗೆದು ಹೆಮ್ಮೆಯಿಂದ ತೋರಿಸುತ್ತಾರೆ.
ಹದಿಹರೆಯದಲ್ಲಿ ಆರ್‌ಎಸ್‌ಎಸ್‌ನಲ್ಲಿ ಮೋದಿಯ ಗೆಳೆಯರಾಗಿದ್ದ ಚಂದೂಬಾಯಿ ರಾಮಿ ಮೋದಿಯ
ವ್ಯಕ್ತಿತ್ವದಲ್ಲಿದ್ದ ವಿಶೇಷ ಗುಣವೊಂದನ್ನು ನೆನೆಯುತ್ತಾರೆ. ಆರ್‌ಎಸ್‌ಎಸ್‌ನಲ್ಲಿ
ತರಬೇತಿ ಹೊಂದುವಾಗ ಸ್ವರಕ್ಷಣಾ ಕಲೆ ತರಗತಿಯಲ್ಲಿ ತನ್ನ ಎದುರಾಳಿಯನ್ನು ಎಡದಿಂದ
ಅಟ್ಯಾಕ್ ಮಾಡಿದರೆ ಆತನಿಗೆ ಕಷ್ಟವಾಗುತ್ತಿದ್ದುದನ್ನು ತಕ್ಷಣ ಗುರುತಿಸಿಕೊಂಡಿದ್ದರಂತೆ.
ಇನ್ನೊಬ್ಬರ ವೀಕ್‌ನೆಸ್‌ಗಳನ್ನು ಗುರುತಿಸುವುದರಲ್ಲಿ ಪಂಟರಾಗಿದ್ದ ಮೋದಿ ಅದನ್ನು ತಮ್ಮ
ಗೆಲವಿಗೆ ಸಮರ್ಥವಾಗಿ ಬಳಸಿಕೊಳ್ಳುತ್ತಿದ್ದರು ಎನ್ನುತ್ತಾರೆ ಅವರು.
ವಿಮರ್ಶಕರು
ಏನೇ ಹೇಳಲಿ, ಟೀ ಮಾರಿದ್ದು ಕಟ್ಟುಕತೆ ಎನ್ನಲಿ, ಆದರೆ ಗುಜರಾತ್ ಜನತೆ ಮಾತ್ರ
ಮುಖ್ಯಮಂತ್ರಿ ಮೋದಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಮೋದಿ ಹೀರೋ ಆಗುವುದು
ಟೀ ಮಾರಿದ್ದರಿಂದಲ್ಲ. ಗುಜರಾತ್‌ನಲ್ಲಿ ಮಾಡಿದ ಅದ್ಭುತ ಅಭಿವೃದ್ಧಿಯಿಂದ ಎನ್ನುತ್ತಾರೆ.
15
ವರ್ಷಗಳ ಹಿಂದೆ ಜೆಂಟಿಬಾಯಿ ಥ್ಯಾಕರ್ ಭುಜ್ ಪ್ರದೇಶದಲ್ಲಿ ತನ್ನ ಕುಟುಂಬದ 5 ಎಕರೆ
ಜಮೀನನ್ನು ನೋಡಿಕೊಂಡಿದ್ದ ಸಾಮಾನ್ಯ ರೈತ. ಆದರೆ 2001ರಲ್ಲಿ ಭುಜ್ ಹಾಗೂ ಕಚ್ ಪ್ರದೇಶ
ಹಿಂದೆಂದೂ ಕಂಡರಿಯದ ಭೂಕಂಪಕ್ಕೆ ಚಿಂದಿಯಾಯ್ತು. ಸುಮಾರು 20,000 ಮಂದಿ ಪ್ರಾಣ
ತೆತ್ತರು. 400,000 ಮನೆಗಳು ತಲೆ ಕೆಳಗಾಗಿ ಮಣ್ಣಿನೊಂದಿಗೆ ಬೆರೆತುಹೋದವು. ಆಗ ತಾನೇ
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನರೇಂದ್ರ ಮೋದಿ, ಈ ಎಲ್ಲ ಜಾಗಗಳಲ್ಲಿ ಓಡಾಡಿ
ಮತ್ತೆ ಹೊಸಪಟ್ಟಣವೊಂದನ್ನು ಕಟ್ಟಿದರು. ಅಷ್ಟೇ ಅಲ್ಲ, ವಾಣಿಜ್ಯೋದ್ಯಮಿಗಳನ್ನು ಈ
ಪ್ರದೇಶಕ್ಕೆ ಆಕರ್ಷಿಸುವಲ್ಲಿ ಸಫಲರಾದರು. ಇಂದು ಅಲ್ಲಿ ಭೂಕಂಪದ ಕುರುಹೂ ಸಿಗುವುದಿಲ್ಲ.
ಅಲ್ಲದೆ ಜೆಂಟಿಬಾಯಿ ಥ್ಯಾಕರ್ ಈಗ 1300 ಎಕರೆಗಳ ಮಾಲೀಕರಾಗಿ ಮೋದಿ ತಂದ ಕೃಷಿ
ತಂತ್ರಜ್ಞಾನಕ್ಕೆ ಥ್ಯಾಂಕ್ಸ್ ಹೇಳುತ್ತಾರೆ. ನೀರಾವರಿ ಪದ್ಧತಿ ಹಾಗೂ 24 ಗಂಟೆಗಳ
ವಿದ್ಯುತ್ ಸೇವೆಯನ್ನು ನೆನೆಯುತ್ತಾರೆ. ಅಲ್ಲದೆ ತನ್ನ ಜಮೀನಿನಲ್ಲಿ ಹೆಲಿಪ್ಯಾಡ್
ನಿರ್ಮಾಣದ ಕನಸು ಕಾಣುತ್ತಿದ್ದಾರೆ. ಹೆಲಿಕ್ಯಾಪ್ಟರ್‌ನಿಂದಲೇ ತಮ್ಮ ಜಮೀನಿಗೆ ರಾಸಾಯನಿಕ
ಸಿಂಪಡಿಸುವ ಯೋಚನೆ ಅವರದು! ಈಗಂತೂ ಮೋದಿ ಫ್ಯಾನ್ ಆಗಿ ತಮ್ಮ ಬಿಡುವಿನ ವೇಳೆಯನ್ನು
ಬಿಜೆಪಿ ಪ್ರಚಾರಕಾರ್ಯದಲ್ಲಿ ಕಳೆಯುತ್ತಿದ್ದಾರೆ.
ಮೋದಿ ಮುಖ್ಯಮಂತ್ರಿಯಾದ ಮೇಲೆ
ಗುಜರಾತ್‌ನಲ್ಲಿ ಭಾರತದ ಎಲ್ಲ ರಾಜ್ಯಗಳಿಗಿಂತ ಹೆಚ್ಚು ಇಂಡಸ್ಟ್ರಿಗಳು ಹೂಡಿಕೆ
ಮಾಡಿದ್ದು, ರಾಜ್ಯಕ್ಕೆ ಆರ್ಥಿಕ ಸುಭದ್ರತೆಯನ್ನೊದಗಿಸಿದೆ. ರಾಷ್ಟ್ರ ಹಾಗೂ
ಅಂತಾರಾಷ್ಟ್ರೀಯ ಮಟ್ಟದ ಹೆಸರಾಂತ ಉದ್ದಿಮೆದಾರರು ಗುಜರಾತ್‌ನಲ್ಲಿ ಹೂಡಿಕೆ ಮಾಡಲು
ಮುಂದೆ ಬರುತ್ತಾರೆ. ಶ್ರೀಮಂತ ವಾಣಿಜ್ಯೋದ್ಯಮಿ ಅನಿಲ್ ಅಂಬಾನಿ, 'ಮೋದಿ ಸಾಮಾನ್ಯರಲ್ಲಿ
ರಾಜ, ನಾಯಕರಿಗೆ ನಾಯಕ ಮತ್ತು ರಾಜರಲ್ಲಿ ಚಕ್ರವರ್ತಿಯಂಥ ವ್ಯಕ್ತಿತ್ವ ಉಳ್ಳವರು' ಎಂದು
ಬಣ್ಣಿಸುತ್ತಾರೆ.
ವಿರೋಧಿಗಳು ಅವರನ್ನು ಅಧಿಕಾರದಾಹಿ, ಸರ್ವಾಧಿಕಾರಿ ಏನೇ
ಟೀಕಿಸಿದರೂ, ಮೋದಿ ತಮ್ಮನ್ನು ಗುಂಪಿನ ಸದಸ್ಯನಾಗಿಯೇ ಹೇಳಿಕೊಳ್ಳುತ್ತಾರೆ. ನನಗೆ
ಆರ್‌ಎಸ್‌ಎಸ್‌ನಲ್ಲಿ ದೇವರನ್ನು ಮರೆಯಿರಿ, ಇರುವುದು ಭಾರತಮಾತೆಯೊಬ್ಬಳೇ
ಎನ್ನುತ್ತಿದ್ದರು. ಅದನ್ನೇ ನಂಬಿದ್ದೇನೆ. ಎಲ್ಲರ ಮಾತನ್ನೂ ಕೇಳಿ ನಿರ್ಧಾರಕ್ಕೆ ಬನ್ನಿ.
ನಿರ್ಧಾರ ತೆಗೆದುಕೊಂಡ ಮೇಲೆ ಅದು ಅನುಷ್ಠಾನವಾಗಿದೆಯೇ ಎಂದು ನೋಡಿಕೊಳ್ಳಿ ಎಂದು
ಹೇಳಿಕೊಟ್ಟಿದ್ದರು. ಅದನ್ನೂ ಪಾಲಿಸಿದ್ದೇನೆ ಎನ್ನುತ್ತಾರೆ.
- ರೇಶ್ಮಾರಾವ್ ಸೊನ್ಲೆ
1 ಕಾಮೆಂಟ್:
ಮೋದಿಯವರ ಹಿನ್ನಲೆ ಮತ್ತು ವ್ಯಕ್ತಿತ್ವವನ್ನು ಮುಂದಿಟ್ಟುಕೊಂಡು ಗುಜರಾತ್ ಅಭಿವೃದ್ಧಿಯನ್ನು ವಿಶ್ಲೇಷಿಸಿದ ರೀತಿ ಚೆನ್ನಾಗಿದೆ.
ಕಾಮೆಂಟ್ ಪೋಸ್ಟ್ ಮಾಡಿ