ಪುಟಗಳು

9.4.14

ಸಾಂಗ್ ಪರಿವಾರ

ಹಾಡುಗಳ ಹಳಿ ಮೇಲೆ ಪ್ರಚಾರದ ರೈಲು
ಚಾಮುಂಡಿ ತಾಯಿಯಾಣೆ ನಾನೆಂದು ನಿಮ್ಮೋನೆ..ಇನ್ನೆಲ್ಲ ಜನ್ಮದಲ್ಲೂ ಹುಟ್ಟೋದು ಇಲ್ಲೇನೇ..ಪ್ರೀತ್ಸೋದು ಎಂದೂ ನಿಮ್ಮನ್ನೇ....ಸಿಂಹ, ಪ್ರತಾಪ್ ಸಿಂಹ...ಹೀಗೊಂದು ರೆಕಾರ್ಡೆಡ್ ಹಾಡನ್ನು ಹೊತ್ತ ಆಟೋವೊಂದು ಮೈಸೂರಿನ ಎಲ್ಲ ಬೀದಿಗಳಲ್ಲಿ ಒಮ್ಮೆ ಓಡಾಡಿದ್ದಷ್ಟೆ. ಐದೇ ನಿಮಿಷದಲ್ಲಿ ಹಲವರು ಹಾಡತೊಡಗಿದ್ದರು, ತಮ್ಮಲ್ಲೇ ಗುನುಗತೊಡಗಿದ್ದರು!
ಹಾಡಿಗಿರುವ ಶಕ್ತಿಯೇ ಅದು. ಹಾಗಾಗೇ ಚುನಾವಣೆ ಘೋಷಣೆಯಾದ ದಿನದಿಂದಲೂ ಅಣಕುಗೀತೆ ರಚನೆಕಾರರು ಹಾಗೂ ಹಾಡುಗಾರರಿಗೆ ಎಲ್ಲಿಲ್ಲದ ಬೇಡಿಕೆ. ಜನಪ್ರಿಯ ಚಿತ್ರಗೀತೆಗಳ ರಾಗಕ್ಕೆ ಹೊಂದುವಂತೆ ಅಭ್ಯರ್ಥಿಗಳನ್ನು ಹೆಸರು, ಪಕ್ಷ, ಸಾಧನೆಯೊಂದಿಗೆ ಹೊಗಳಿ, ಪ್ರತಿಪಕ್ಷಗಳನ್ನು ತೆಗಳಿ ಬರೆದು ಹಾಡುವುದು ಒಂದು ಉತ್ತಮ ಪ್ರಚಾರ ವಿಧಾನ. ಭಾಷಣಗಳಲ್ಲಿ ಗಂಟೆಗಟ್ಟಲೆ ಕೊರೆಯುವುದನ್ನೇ 3ರಿಂದ 4 ನಿಮಿಷ ಇಂಪಾಗಿ ಹಾಡುಗಳಲ್ಲಿ ಹೇಳಿದರೆ ಅದು ಹೆಚ್ಚು ಪರಿಣಾಮಕಾರಿಯಾಗಿ ಜನರನ್ನು ತಲುಪುತ್ತದೆ. ಹೀಗೆ ಹಾಡನ್ನು ಬರೆಯುವಾಗ ಗ್ರಾಮೀಣ ಪ್ರದೇಶಗಳಿಗೆಂದು ಸಾಮಾನ್ಯವಾಗಿ ಹಳೆಯ ರಾಜ್‌ಕುಮಾರ್, ವಿಷ್ಣುವರ್ಧನ್ ಹಾಡುಗಳ ರಾಗವನ್ನು, ನಗರದ ಯುವಕರಿಗಾಗಿ ಸದ್ಯದ ಟ್ರೆಂಡ್ ಕ್ರಿಯೇಟ್ ಮಾಡಿದಂಥ ಯೋಗ್‌ರಾಜ್ ಭಟ್ಟರ ಪ್ರಸಿದ್ಧ ಹಾಡುಗಳ ರಾಗವನ್ನು ಬಳಸಿಕೊಂಡು ಗೀತೆ ಬರೆಯಲಾಗುತ್ತಿದೆ. 
ಇನ್ನೊಂದು ಲಾಭವೆಂದರೆ ಜನ ಮನೆಯಿಂದ ಹೊರಬರಲೂ ಬೇಕಿಲ್ಲ. ಕೆಲಸ ಬಿಟ್ಟು ಭಾಷಣ ಕೇಳಿಸಿಕೊಳ್ಳಬೇಕಿಲ್ಲ. ಅಣಕುಗೀತೆಗಳು ತಮ್ಮ ಪಾಡಿಗೆ ತಾವು ಕಿವಿಗೆ ಬೀಳುತ್ತಿರುತ್ತವೆ. ಈ ಪ್ರಚಾರತಂತ್ರ ಬಹುತೇಕ ಎಲ್ಲ ರಾಜ್ಯಗಳಲ್ಲೂ ಜನಪ್ರಿಯವಾಗಿದ್ದು, ಕೇರಳದ ಪ್ರಖ್ಯಾತ ಅಣಕುಗೀತೆಗಳ ತಂಡದ ಮುಖ್ಯಸ್ಥ ಅಶ್ರಫ್ ಕೊಡುವಳ್ಳಿ ಹೇಳುತ್ತಾರೆ, ಹಾಡುಗಳನ್ನು ಬರೆವಾಗ ಅದು ಕೇಳುವ ಊರುಗಳ ಜನರ ಮನಸ್ಥಿತಿ, ಇಷ್ಟಕಷ್ಟಗಳನ್ನು ಅಧ್ಯಯನ ನಡೆಸಿ ಬರೆಯಬೇಕು. ಆಗ ಹೆಚ್ಚು ಸುಲಭವಾಗಿ ಅವರನ್ನು ತಲುಪುತ್ತದೆ ಎಂದು. ಈ ಬಾರಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷ ಎರಡರ ಅಭ್ಯರ್ಥಿಗಳಿಗೂ ಅವರೇ ಬರೆದು ಹಾಡುತ್ತಿದ್ದಾರಂತೆ! ಇವರೂ ಸೇರಿದಂತೆ ಇವರ ತಂಡದ ಪ್ರತಿಯೊಬ್ಬರೂ ಕಳೆದ ಬಾರಿಯ ಚುನಾವಣೆಯಲ್ಲಿ 5 ಲಕ್ಷಕ್ಕಿಂತಲೂ ಅಧಿಕ ಸಂಪಾದಿಸಿದ್ದರಂತೆ! ಹವ್ಯಾಸಿ ಹಾಡುಗಾರರು ಸಹ ಆನ್‌ಲೈನ್‌ನಲ್ಲಿ ಅಣಕುಗೀತೆಗಳನ್ನು ಮಾಡಿ ಹರಿಯಬಿಡುತ್ತಿದ್ದಾರೆ. ಇದು ಸಹ ಸಾಮಾಜಿಕ ಜಾಲತಾಣಗಳ ಬಳಕೆದಾರರನ್ನು ಸೆಳೆಯುತ್ತಿದೆ.
- ರೇಶ್ಮಾ

1 ಕಾಮೆಂಟ್‌:

Badarinath Palavalli ಹೇಳಿದರು...

ಪ್ರಸಿದ್ಧ ಗೀತೆಗಳ ಟ್ಯೂನಿನಲ್ಲಿ ರೂಪಗೊಳ್ಳುವ ಪ್ರಚಾರ ಗೀತೆಗಳು ರಾಜಕೀಯ ಪಕ್ಷಗಳಿಗೆ ಮೂಲಾದಾರ.