ಪುಟಗಳು

5.4.14

ಗೇಮ್ ಟೈಮ್

st Published: 05 Apr 2014 02:00:00 AM IST
ಆಡೂ ಆಟ ಆಡೂ
ಎಲೆಕ್ಷನ್‌ಗಿನ್ನೇನು 15 ದಿನಗಳು ಬಾಕಿ ಉಳಿದಿವೆ. ದೇಶಾದ್ಯಂತ ರಾಜಕೀಯಕ್ಕೆ ಸಂಬಂಧಪಟ್ಟ ಪ್ರತಿಯೊಂದೂ ಜನರ ಆಸಕ್ತಿ ಕೆರಳಿಸುತ್ತಿದೆ. ಮಾಧ್ಯಮಗಳು ರಾಜಕೀಯ ರಸದೌತಣವನ್ನೇ ಉಣಬಡಿಸುತ್ತಿವೆ. ಫೇಸ್ಬುಕ್, ಟ್ವಿಟ್ಟರ್‌ಗಳಲ್ಲೂ ರಾಜಕೀಯ ಮಿತಿ ಮೀರಿದೆ. ವಾಟ್ಸ್‌ಆಪ್ ವಿಡಿಯೋಗಳೂ ಮೋದಿ, ಮನಮೋಹನ್, ರಾಹುಲ್‌ರನ್ನು ಕುಣಿಸಿ ಮಜಾ ತೆಗೆದುಕೊಳ್ಳುತ್ತಿವೆ. ಇಂಥ ಸಂದರ್ಭದಲ್ಲಿ ಮೊಬೈಲ್ ಹಾಗೂ ವೆಬ್‌ಗೇಮ್‌ಗಳು ಹಿಂದುಳಿದರೆ ಎಲ್ಲ ಶೇಮ್ ಶೇಮ್ ಅನ್ನೋಲ್ಲವೇ?ಗೇಮ್ಸ್ ಟು ವಿನ್‌ನಂಥ ಗೇಮ್ ಡೆವಲಪರ್ಸ್ ಭಾರತದ ರಾಜಕಾರಣಿಗಳನ್ನು ತಮ್ಮ ಗೇಮ್‌ಗಳ ಹೀರೋ ಮಾಡಿ 'ಗ್ರೇಟ್ ಇಂಡಿಯನ್ ಕಾಮಿಡಿ ಸರ್ಕಸ್‌' ನಡೆಸುತ್ತಾ ಜನಮನ ರಂಜಿಸುತ್ತಿವೆ. ಈ ಮೂಲಕ ನಮ್ಮನ್ನಾಡಿಸುವ ಕೈಗಳನ್ನು ನಾವೂ ಆಡಿಸಬಹುದು. ಹೀಗೆ ಸಿದ್ಧವಾಗಿ ಪ್ರಸಿದ್ಧವಾದ ಕೆಲವು ರಾಜಕೀಯ ಸಂಬಂಧಿ ಆಟಗಳು ಇಲ್ಲಿವೆ.
ಆಮ್ ಆದ್ಮಿ ರನ್ನರ್
ಗ್ರೀಡೀಗೇಮ್ ಸಂಸ್ಥೆಯ ಇಬ್ಬರು ಐಐಟಿ ವಿದ್ಯಾರ್ಥಿಗಳು 'ಆಪ್‌' ಒಪ್ಪಿಗೆಯೊಂದಿಗೆ ಅಭಿವೃದ್ಧಿಪಡಿಸಿರುವ ಈ ಗೇಮ್‌ನಲ್ಲಿ ಕೇಜ್ರಿವಾಲ್ ಕ್ಯಾರೆಕ್ಟರ್ ಅನ್ನು ಆಡುವವನು ಕಂಟ್ರೋಲ್ ಮಾಡುತ್ತಾನೆ. ಇದರ ಮೊದಲನೇ ಲೆವೆಲ್‌ನಲ್ಲಿ ಕೇಜ್ರಿ ಸಾಹೇಬ್ರು ಪೊರಕೆ ಹಿಡಿದು ಓಡುತ್ತಾರೆ. ದಾರಿ ಮಧ್ಯೆ ನೀರಿನ ಗುಂಡಿ ಹಾಗೂ ಭ್ರಷ್ಟ ರಾಜಕಾರಣಿಗಳು ಸಿಕ್ಕಾಗ ಹಾರಿ ಮುಂದೋಡಬೇಕು. ಎರಡನೇ ಲೆವೆಲ್‌ನಲ್ಲಿ ಮತ ಕಲೆ ಹಾಕುತ್ತಾ ಓಡಬೇಕು. ಹೆಚ್ಚು ಮತ ಸಿಕ್ಕಷ್ಟೂ ಸ್ಕೋರ್ ಹೆಚ್ಚುತ್ತದೆ. ಆ್ಯಂಡ್ರಾಯ್ಡ್ ಮೊಬೈಲ್‌ಗಳು ಈ ಗೇಮ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಮೋದಿ ರನ್
ಳೆದ ವರ್ಷದ ಜುಲೈನಲ್ಲಿ ಹೊರಬಂದ ಮೋದಿ ರನ್ ಮತ್ತೊಂದು ಉಚಿತ ಆ್ಯಂಡ್ರಾಯ್ಡ್ ಗೇಮ್. ಇದರಲ್ಲಿ ಮೋದಿ ಭಾರತದ ಎಲ್ಲ ರಾಜ್ಯಗಳಲ್ಲೂ ಸಪೋರ್ಟ್ ಬೇಡುತ್ತಾ ಓಡುತ್ತಾರೆ. ಎಲ್ಲೆಡೆಯಿಂದ ಸಪೋರ್ಟ್ ಸಿಕ್ಕಿದ ಮೇಲೆ ಪ್ರಧಾನಮಂತ್ರಿ ಆಗುತ್ತಾರೆ. ಅಮೆರಿಕ ಮೂಲದ ಡೆಟಾಕ್ಸಿ ಸಂಸ್ಥೆ ಈ ಗೇಮನ್ನು ಅಭಿವೃದ್ಧಿಪಡಿಸಿದ್ದು, ಇದುವರೆಗೂ 10 ಲಕ್ಷಕ್ಕೂ ಹೆಚ್ಚು ಡೌನ್‌ಲೋಡ್ ಆಗಿದೆ.
ಆ್ಯಂಗ್ರಿ ಅಣ್ಣಾ
ಅಣ್ಣಾ ಹಜಾರೆ ರಾಮಲೀಲಾ ಮೈದಾನದಲ್ಲಿ ಬೃಹತ್ ಭ್ರಷ್ಟಾಚಾರ ವಿರೋಧಿ ರ್ಯಾಲಿಗಳನ್ನು ಹಮ್ಮಿಕೊಂಡ ಸಮಯದಲ್ಲಿ ಹೊರಬಂದ ಆಟ ಆ್ಯಂಗ್ರಿ ಅಣ್ಣಾ. ಪ್ರಖ್ಯಾತ ಆ್ಯಂಗ್ರಿ ಬರ್ಡ್ಸ್ ಆಟದ ಮಾದರಿಯಲ್ಲೇ ಸಾಗುವ ಈ ಗೇಮ್‌ನಲ್ಲಿ ಅಣ್ಣಾ ಹಜಾರೆ, ಅರವಿಂದ ಕೇಜ್ರಿವಾಲ್ ಹಾಗೂ ಕಿರಣ್ ಬೇಡಿ ಆ್ಯಂಗ್ರಿ ಬರ್ಡ್ಸ್‌ನಂತೆ ಭ್ರಷ್ಟ ರಾಜಕಾರಣಿಗಳ ಮೇಲೆರಗುತ್ತಾರೆ. ಇದು ಕೂಡಾ ಉಚಿತ ಅಪ್ಲಿಕೇಶನ್ ಆಗಿದೆ.
ದಿ ಶೇಮ್ ಗೇಮ್
ಈ ಆಟದಲ್ಲಿ ಆಟಗಾರ ಡಯಾಸ್‌ನ ಹಿಂದೆ ಅಡಗಿಕೊಳ್ಳಲೆತ್ನಿಸುವ ರಾಜಕಾರಣಿಯೆಡೆಗೆ ಚಪ್ಪಲಿ ಎಸೆಯುತ್ತಾನೆ. ಇದು ಕೇವಲ ಅಂತರ್ಜಾಲದಲ್ಲಿ ಲಭ್ಯವಿದ್ದು, ಸ್ವಲ್ಪ ಒರಟಾಗಿದೆ ಹಾಗೂ ಕಷ್ಟವಾಗಿದೆ. ಆದರೂ ಆಟಗಾರರು 30 ಸೆಕೆಂಡ್‌ಗಳಲ್ಲಿ 229 ಎಸೆತ ಮಾಡುವಲ್ಲಿ ಸಫಲರಾಗಿದ್ದಾರೆ.
ಮೇರಾ ಪಿಎಂ ಕೌನ್?
ಪುಣೆ ಮೂಲದ ನೀತಿ ಸಲ್ಯೂಷನ್ಸ್ ಅಭಿವೃದ್ಧಿಪಡಿಸಿರುವ ಉಚಿತ ಗೇಮ್ ಅಪ್ಲಿಕೇಶನ್ ಇದಾಗಿದ್ದು, ಇಲ್ಲಿ ಪ್ರಧಾನಿ ಕುರ್ಚಿಯ ಅಕ್ಕಪಕ್ಕದಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಕ್ಯಾರೆಕ್ಟರ್ ನಿಂತಿರುತ್ತಾರೆ. ಮಮತಾ ಬ್ಯಾನರ್ಜಿ, ಜಯಲಲಿತಾ, ಅರವಿಂದ ಕೇಜ್ರಿವಾಲ್ ಕುರ್ಚಿಯ ಕೆಳಗಿರುತ್ತಾರೆ. ಇದರಲ್ಲಿ ಆಟಗಾರ ಉರಿಯುವ ಕಲ್ಲಿದ್ದಲಿನಂತಾ ವಸ್ತುವನ್ನು ಇಷ್ಟು ಮಂದಿಯಲ್ಲಿ ಯಾರೆಡೆಗೆ ಬೇಕಾದರೂ ತಿರುಗಿಸಬಹುದು. ಅವರು ಆ ಪರಿಸ್ಥಿತಿಯನ್ನು ಎಷ್ಟು ಚೆನ್ನಾಗಿ ನಿಭಾಯಿಸಬಲ್ಲರೆಂಬುದು ಆಟ. ಆಟಕ್ಕಿಂತಾ ಹೆಚ್ಚಾಗಿ ಕ್ವಿಜ್ ಮಾದರಿಯಲ್ಲಿ ಸಾಗುವ ಮೇರಾ ಪಿಎಂ ಕೌನ್?ನಲ್ಲಿ ಮತದಾರರ ಒಲವು ಯಾರೆಡೆ ಇದೆ ಎಂಬುದೂ ತಿಳಿಯುತ್ತದೆ. ಇದುವರೆಗೂ ಆಡಿರುವ ಮಂದಿ ಎಷ್ಟು, ಯಾರಿಗೆ ಎಷ್ಟು ಮತಗಳು ಬಿದ್ದಿದ್ದಾವೆಂಬುದನ್ನು ಸಹ ನೋಡಬಹುದು. 

ರೇಶ್ಮಾ ರಾವ್

3 ಕಾಮೆಂಟ್‌ಗಳು:

Pradeep Rao ಹೇಳಿದರು...

ಅರೆರೆ! ಇಂಥ ಆಟಗಳೂ ಅಂತರ್ಜಾಲದಲ್ಲಿ ಲಭ್ಯವಿದೆಯೆಂದು ಇದೇ ಮೊದಲು ನನಗೆ ತಿಳಿದದ್ದು. ಮೊದಲು ಇದು ನಿಮ್ಮ ಕಲ್ಪನೆ ಇರಬಹುದು ಎನ್ನಿಸಿತ್ತಾದರೂ ಎಲ್ಲೆಲ್ಲಿ ಲಭ್ಯವಿದೆ ಎಂಬ ಮಾಹಿತಿ ನೋಡಿದಾಗಲೇ ನಂಬಿಕೆ ಆಗಿದ್ದು. ಒಳ್ಳೆ ಮಾಹಿತಿ ನೀಡಿದ್ದೀರಿ ಇಂದೇ ಒಂದೆರಡು ಡೌನ್‍ಲೋಡ್ ಮಾಡಿ ಆಡಿ ನೋಡುವೆ. :) ಧನ್ಯವಾದಗಳು!

Badarinath Palavalli ಹೇಳಿದರು...

ರಾಜಕೀಯ ಸಂಬಂಧಿ ಆಟಗಳು ರೋಚಕವಾಗಿವೆ.

reshma ಹೇಳಿದರು...

thanq pradeep rao n badari sir :)