ಪುಟಗಳು

9.4.14

ಒಬಾಮ ತಂತ್ರ

First Published: 09 Apr 2014 02:00:00 AM IST
ಭಾರತದ ಚುನಾವಣೆಯಲ್ಲಿ ಅಮೆರಿಕದ ಸೂತ್ರ
2014ರ ಭಾರತದ ಚುನಾವಣಾ ಪ್ರಚಾರ ಕಾರ್ಯಕ್ಕೆ ಅಮೆರಿಕ ಅಧ್ಯಕ್ಷ ಒಬಾಮಾ ಸದ್ದಿಲ್ಲದೆ ಕೈಜೋಡಿಸಿದ್ದಾರೆ. ಅರೆರೆ ಇದೇನಿದು ಹಾಟ್ ನ್ಯೂಸ್ ಅಂತ ಕಣ್ಣರಳಿಸುತ್ತಿದ್ದೀರಾ? ಅಲ್ಲಾರೀ, ಇದು ವೋಟ್ ನ್ಯೂಸ್. 
ಅಮೆರಿಕದಲ್ಲಿ ನಡೆದ 2008ರ ಅಧ್ಯಕ್ಷೀಯ ಚುನಾವಣೆ ಸಂದರ್ಭ ಮತಗಳಿಕೆಯ ಪ್ರಚಾರ ಕಲೆಯಲ್ಲಿ ಬರಾಕ್ ಒಬಾಮ ತೋರಿದ್ದ ಬಹುಪರಾಕ್ರಮಗಳಿಗೆ ಬಹುಪರಾಕ್ ಎನ್ನುತ್ತಿವೆ ಭಾರತದ ರಾಜಕೀಯ ಪಕ್ಷಗಳು. ಮಂತ್ರಕ್ಕೆ ಮಾವಿನಕಾಯಿ ಉದುರದಿದ್ದರೂ ಒಬಾಮಾ ತಂತ್ರಕ್ಕೆ ಭಾರತೀಯ ಮತಯಂತ್ರಗಳಲ್ಲಿ ಮತಗಳಂತೂ ಉದುರಲಿವೆ ಎನ್ನುತ್ತಿವೆ ಸಮೀಕ್ಷೆಗಳು. ಹೀಗೆ ಅಮೆರಿಕದ ಪ್ರಚಾರತಂತ್ರಗಳನ್ನು ಆಮದು ಮಾಡಿಕೊಂಡು ಅವುಗಳಿಗೆ ದೇಸೀಭಾಷೆ, ಸಂಸ್ಕೃತಿ, ನಂಬಿಕೆಯ ಸ್ಪರ್ಶ ನೀಡಿ ಇಲ್ಲಿನ ಮಣ್ಣಿಗೆ ಒಗ್ಗಿಸಿಕೊಳ್ಳುವ ಕಾರ್ಯ ವೇಗವಾಗಿ ನಡೆಯುತ್ತಿದೆ. ಅದರಲ್ಲೂ ಈ ಒಬಾಮಾಫಿಕೇಶನ್‌ಗೆ ದೇಶೀಯ ಸ್ಪರ್ಶ ನೀಡಿ 'ಮೋಡಿ'ಫಿಕೇಶನ್ ಮಾಡುವಲ್ಲಿ ಮುಂಚೂಣಿಯಲ್ಲಿರುವ ನಾಯಕರು, ಇದಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳನ್ನು ಕಂಡು ಖುಷಿಯಾಗಿ ಬರಾಕ್ ಒಬಾಮಾಗೆ 'ನಮೋ' ನಮಃ ಎನ್ನುತ್ತಿದ್ದಾರೆ. 
 -     2008ರಲ್ಲಿ ಒಬಾಮ ಬಳಸಿದ 'ಎಸ್, ವಿ ಕ್ಯಾನ್‌' (ನಾವು ಸಾಧಿಸಬಲ್ಲೆವು) ಎಂಬ ಮಂತ್ರವನ್ನು 2013ರ ಸೆಪ್ಟೆಂಬರ್‌ನಲ್ಲಿ ಹೈದರಾಬಾದ್‌ಗೆ ಭೇಟಿ ನೀಡಿದಾಗ ಮೋದಿ ಪ್ರಥಮ ಬಾರಿಗೆ ಪ್ರತಿಧ್ವನಿಸಿದ್ದರು. ತದನಂತರ ತಮ್ಮ ಭಾಷಣಗಳಲ್ಲೆಲ್ಲ ಮೋದಿ 'ಎಸ್ ವಿ ಕ್ಯಾನ್‌' ಬಳಸೀ ಬಳಸಿ ಜನಗಮನ ಸೆಳೆದು ಸಾಧಿಸಿದರು! 
-     ಒಬಾಮಾ ಪ್ರಚಾರ ಕಾರ್ಯತಂತ್ರದ ಸದಸ್ಯರು ಅಂದು 'ಮೈಬೋ' ಎಂಬ ಬ್ರ್ಯಾಂಡ್ ಹುಟ್ಟುಹಾಕಿ 'ಕೀಪ್ ಇಟ್ ರಿಯಲ್, ಕೀಪ್ ಇಟ್ ಲೋಕಲ್‌' ಎಂಬ ಅಡಿಬರಹ ನೀಡಿ ಒಬಾಮ ಹೆಸರಿನಲ್ಲಿ ಹಲವು ವಸ್ತುಗಳನ್ನು ಮಾರಾಟಕ್ಕಿಟ್ಟಿದ್ದರು. ಇದು ಬಹಳ ಜನಪ್ರಿಯತೆ ಪಡೆದಿತ್ತು. ಅಂತೆಯೇ ಮೋದಿ ಆನ್‌ಲೈನ್‌ನಲ್ಲಿ 'ನಮೋ' ಸ್ಟೋರ್ ತೆಗೆದಿದ್ದಾರೆ. ಅಲ್ಲಿ ಮೋದಿ ಚಿತ್ರ, ತತ್ವಗಳನ್ನೊಳಗೊಂಡ ಟಿ ಶರ್ಟ್‌ಗಳು, ಕಾಫಿ ಮಗ್‌ಗಳು, ಪುಸ್ತಕ, ಪೆನ್‌ಡ್ರೈವ್ ಇತ್ಯಾದಿ ವಸ್ತುಗಳು ರಿಯಾಯಿತಿ ದರದಲ್ಲಿ ಸಿಗುತ್ತವೆ. ಅಲ್ಲದೆ ಇದರಲ್ಲಿ ಯುವಜನತೆಯನ್ನು ತೊಡಗಿಸಲು ನಮೋ ಸ್ಲೋಗನ್ ಸ್ಪರ್ಧೆಗಳನ್ನು ಏರ್ಪಡಿಸುತ್ತಾರೆ. ಇದರಿಂದ ಪ್ರಚಾರವೂ ಆಯ್ತು, ವ್ಯಾಪಾರವೂ ಆಯ್ತು.
-     2012ರ ಮರು ಚುನಾವಣಾ ಪ್ರಚಾರದಲ್ಲಿ ಪಕ್ಷದ ಪರ ಸ್ವಯಂಸೇವಕರನ್ನು ಒಗ್ಗೂಡಿಸಲು ದಿ ಬರಾಕ್ ಒಬಾಮ ಡ್ಯಾಶ್‌ಬೋರ್ಡ್ ಎಂಬ ರಾಷ್ಟ್ರ ಮಟ್ಟದ ಆನ್‌ಲೈನ್ ವೇದಿಕೆ ಸಿದ್ಧಪಡಿಸಲಾಗಿತ್ತು. ಇಲ್ಲಿ ಸಕ್ರಿಯವಾಗಿ ತೊಡಗಿಕೊಂಡವರನ್ನು ಅಂಕ ನೀಡಿ ಆಯ್ಕೆ ಮಾಡಿ ತಳಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸಲು ಬಳಸಿಕೊಂಡಿತು. ಇಲ್ಲಿ ಆಯ್ಕೆಯಾದ ಸ್ವಯಂಸೇವಕರಿಗೆ ಒಬಾಮಾ ಜೊತೆ ನೇರ ಮಾತುಕತೆಗೆ ಅವಕಾಶ ನೀಡಲಾಗಿತ್ತು. ಅಂತೆಯೇ 2013ರಲ್ಲಿ ಮೋದಿ ಆರಂಭಿಸಿದ 'ಇಂಡಿಯಾ 272೤ ' ಕೂಡಾ ಒಬಾಮಾ ಡ್ಯಾಶ್‌ಬೋರ್ಡನ್ನೇ ಹೋಲುತ್ತಿತ್ತು. ಇಲ್ಲೂ ಕೂಡಾ ಪಾಯಿಂಟ್ಸ್ ಆಧಾರದ ಮೇಲೆ ಮತಗಳನ್ನು ತಳಮಟ್ಟದಿಂದ ಬಿಜೆಪಿಗೆ ತಿರುಗಿಸಬಲ್ಲ ಸ್ವಯಂಸೇವಕರಿಗೆ ಮೋದಿಯೊಂದಿಗೆ ನೇರ ಮಾತುಕತೆಗೆ ಅವಕಾಶ ನೀಡಲಾಗಿತ್ತು.
-     ಮರುಚುನಾವಣೆಯ ಸಮಯದಲ್ಲಿ ಒಬಾಮಾ ಗೂಗಲ್ ಪ್ಲಸ್ ಹ್ಯಾಂಗ್‌ಔಟ್‌ನಲ್ಲಿ ಭಾಗವಹಿಸಿ 'ಏನು ಬೇಕಾದರೂ ಕೇಳಿ' ಎಂಬ ನೇರ ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿದ್ದರು. 2 ಲಕ್ಷ ಅಮೆರಿಕನ್ ಪ್ರಜೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಲಾಗಿನ್ ಆಗಿದ್ದರು. ಇದರಿಂದ ಪ್ರೇರಿತರಾದ ನರೇಂದ್ರ ಮೋದಿ ಕೂಡಾ 2012 ಸೆಪ್ಟೆಂಬರ್‌ನಲ್ಲಿ ಗೂಗಲ್ ಪ್ಲಸ್ ಹ್ಯಾಂಗ್‌ಔಟ್‌ನಲ್ಲಿ ಭಾಗವಹಿಸಿದ್ದರು. ಈ ಆನ್‌ಲೈನ್ ಸಮಾವೇಶ 20,000 ಪ್ರಶ್ನೆಗಳಿಗೆ ಸಾಕ್ಷಿಯಾಯಿತಲ್ಲದೆ ಸುಮಾರು 40 ಲಕ್ಷ ಜನ ಇದನ್ನು ವೆಬ್‌ಸೈಟ್ ಹಾಗೂ ಟಿವಿಗಳಲ್ಲಿ ವೀಕ್ಷಿಸಿದರು.
 -     ವಿವಿಧೆಡೆಯ ಮತದಾರರನ್ನು ಓಲೈಸಲು ಒಬಾಮಾ ಟೀಂ ಟ್ವಿಟ್ಟರ್‌ನಲ್ಲಿ ರಾಜ್ಯಕ್ಕೊಂದರಂತೆ ಬೇರೆ ಬೇರೆ ಟ್ವಿಟ್ಟರ್ ಖಾತೆ ತೆರೆದಿದ್ದರು. ಈ ವಿಷಯವನ್ನೂ ಪಕ್ಕನೆ ಹಿಡಿದುಕೊಂಡ ಟೀಂ ಮೋದಿ ಕೂಡಾ ಅಸ್ಸಾಮೀಸ್, ಕನ್ನಡ, ಮಣಿಪುರಿ, ತೆಲುಗು, ಮಲೆಯಾಳಂ, ಒರಿಯಾ, ಮರಾಠಿ ಸೇರಿದಂತೆ ಭಾರತದ ವಿವಿಧ ಭಾಷೆಗಳಲ್ಲಿ ಆಯಾ ರಾಜ್ಯದಲ್ಲಿ ಟ್ವಿಟ್ಟರ್ ಖಾತೆ ತೆರೆದಿದ್ದಾರೆ. ಈ ಟ್ವಿಟ್ಟರ್‌ನಲ್ಲಿ ಬೇರೆ ಬೇರೆ ರಾಜ್ಯದ ಬೆಂಬಲಿಗರ ಅಭಿಪ್ರಾಯ ಸೂಚನೆಗಳನ್ನು ಚೆನ್ನಾಗಿ ಬಳಸಿಕೊಳ್ಳುವ ಮೋದಿ, ಅಲ್ಲಿನ ಮತದಾರರ ಬೇಕುಬೇಡಗಳ, ಇಷ್ಟಕಷ್ಟಗಳ ಬಗ್ಗೆ ಇದರಿಂದ ತಿಳಿದುಕೊಳ್ಳುತ್ತಾರೆ. ಆಯಾ ರಾಜ್ಯಕ್ಕೆ ಹೋದಾಗ ಆ ವಿಷಯಗಳ ಬಗ್ಗೆ ತಮ್ಮ ಭಾಷಣಗಳಲ್ಲಿ ಪ್ರಸ್ತಾಪಿಸುತ್ತಾರೆ.
ಬೆಂಗಳೂರು ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ ನಂದನ್ ನಿಲೇಕಣಿ ಕೂಡಾ ಒಬಾಮಾಫಿಕೇಶನ್ ಮೋಡಿಗೆ ಒಳಗಾದವರು. ಅವರು 'ಮಾದರಿ ಬೆಂಗಳೂರು' ನಿರ್ಮಿಸಲು ಟ್ವಿಟ್ಟರ್‌ನಲ್ಲಿ ಬೆಂಗಳೂರಿಗರಿಂದ ಸಲಹೆ ಆಹ್ವಾನಿಸಿದರು. ಈ ಮೂಲಕ ಅಂಥ ಬೆಂಗಳೂರು ಕಲ್ಪನೆ ಬಗೆಗೆ ತಮಗಿರುವ ಕಾಳಜಿ ವ್ಯಕ್ತಪಡಿಸಿ ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರವನ್ನು ಒಬಾಮಾ ಮೈಕ್ರೋ ಲಿಸ್‌ನಿಂಗ್ ಅಪ್ರೋಚ್ ಎಂಬ ಹೆಸರಿನಲ್ಲಿ ಮಾಡಿದ್ದರು.  
ಇದೇ ತಂತ್ರವನ್ನು ರಾಹುಲ್‌ಗಾಂಧಿಯೂ ಆಫ್‌ಲೈನ್‌ನಲ್ಲಿ ಬಳಸಿಕೊಂಡಿದ್ದಾರೆ. ಚಿಕ್ಕ ಚಿಕ್ಕ ಗುಂಪುಗಳಲ್ಲಿ ಜನರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಕೇಳಿ ಸಲಹೆಗಳನ್ನೂ ಆಹ್ವಾನಿಸಿದ್ದರು.ಈ ಎಲ್ಲ ಅಮೇರಿಕರಣವೂ ಭಾರತದಲ್ಲಿ ಸೀಮಿತ ಉಪಯೋಗವನ್ನಷ್ಟೇ ಹೊಂದಿವೆ. ಏಕೆಂದರೆ ಭಾರತದಲ್ಲಿ ಆನ್‌ಲೈನ್ ಬಳಕೆದಾರರ ಸಂಖ್ಯೆ ತುಂಬ ಕಡಿಮೆಯಿದೆ. ಆದರೆ ಶಿಕ್ಷಿತ ಯುವಮತದಾರರನ್ನು, ಈಗ ತಾನೇ 18 ತುಂಬಿದ ಹೊಸ ಮತದಾರರನ್ನು ಸೆಳೆಯುವಲ್ಲಿ ಈ ಆನ್‌ಲೈನ್ ಪ್ರಚಾರ ಚೆನ್ನಾಗಿಯೇ ಕಾರ್ಯನಿರ್ವಹಿಸಿದೆ.
- ರೇಶ್ಮಾರಾವ್ ಸೊನ್ಲೆ

1 ಕಾಮೆಂಟ್‌:

Badarinath Palavalli ಹೇಳಿದರು...

ಯಾವತ್ತಿಗೂ ಭಾರತೀಯರು ತುಸು ಅಮೇರಿಕಾ ಪ್ರೇಮಿಗಳೇ, ಇದು ಒಪ್ಪಿಕೊಂಡರೂ ಬಾಯಿ ಬಿಟ್ಟು ಹೇಳದ ವಿಚಾರವಲ್ಲವೇ!

ಒಬಾಮಾ ಮತ್ತು ಭಾರತೀಯ ರಾಜಕಾರಣ ಇದೀಗ ಹೊಸ ಅವತರಣಿಕೆಯಷ್ಟೇ.