ಪುಟಗಳು

15.4.14

ಪ್ರೇ'ರೇಪ್‌'ಣೆ

ಪುಢಾರಿಗಳು ಎಂಥ ಮಾತಾಡ್ತಾರೆ ನೋಡಿ!
ಹಿಂದುಸ್ತಾನ ಇತ್ತೀಚೆಗೆ ರೇಪಿಸ್ತಾನವಾಗಿದೆ. ಸ್ತ್ರೀಯರ ಮೇಲೆ ನಿಜವಾಗಿಯೂ ನಡೆಯುವ ಅತ್ಯಾಚಾರಗಳ ಜತೆಗೆ, ರಾಜಕಾರಣಿಗಳ ಮಾತಿನ ಅತ್ಯಾಚಾರಗಳೂ ಹೆಚ್ಚುತ್ತಿವೆ. ಚುನಾವಣೆ ಕಣದಲ್ಲಿ ಇಂಥ ಮಾತುಗಳದೇ ವರಸೆ. ಮುಲಾಯಂ ಸಿಂಗ್‌ರಂಥವರೇ ರೇಪಿಸ್ಟ್‌ಗಳನ್ನು 'ಪ್ರೇರೇಪಿಸು'ವ ಮಾತನಾಡುತ್ತಾರೆ. 
ಅತ್ಯಾಚಾರದ ಬಗ್ಗೆ ಇಲ್ಲೊಂದಿಷ್ಟು ರಾಜಕೀಯ ವಿದ್ವಾಂಸರು ಜನ ಮೆ(ಚ)ಚ್ಚುವಂತೆ ಮಾತನಾಡಿದ್ದಾರೆ. ಇವರ ಈ ತಿಳಿವಳಿಕೆ ದೇಶದ ಹೆಣ್ಮಕ್ಕಳಿಗೆಲ್ಲ ಇದ್ದಿದ್ದರೆ ಭಾರತದಲ್ಲಿ ಎಂದೂ ಅತ್ಯಾಚಾರ ಎಂಬ ಪದಪ್ರಯೋಗವೇ ಇರುತ್ತಿರಲಿಲ್ಲ! ವಿಧವಿಧದ ಕಾರಣಗಳನ್ನೂ, ಅದಕ್ಕೆ ಪರಿಹಾರವನ್ನೂ ಆವಿಷ್ಕರಿಸಿರುವ ಇಂಥವರಿಂದ ನಮ್ಮ ದೇಶದ ಸಂಸ್ಕಾರ, ಆಚಾರ ವಿಚಾರಗಳು ಉದ್ದೀಪನಗೊಳ್ಳಬೇಕಿದೆ!
ವಾಸ್ತವವಾಗಿ, ರೇಪ್ ಎಂಬುದು ಇಂದು ಗಂಡಸು, ಸ್ತ್ರೀಯನ್ನು ಶೋಷಿಸುವ ಅಸ್ತ್ರವಾಗಿಯಷ್ಟೇ ಉಳಿದಿಲ್ಲ. ಅದು ಹೆಣ್ಣು ಕುಲವನ್ನು ಗಂಡು ಕುಲ ಆಳುತ್ತಿರುವ, ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕಲು ಇನ್ನೊಂದು ಪಾರ್ಟಿಯವರು ದುರುಪಯೋಗಿಸುತ್ತಿರುವ ಅಸ್ತ್ರವಾಗಿದೆ. ಮಾನಭಂಗದ ಪ್ರಕರಣಗಳು ಸರ್ಕಾರಗಳನ್ನೇ ಅಲುಗಾಡಿಸಿದ್ದನ್ನೂ, ಬೀಳಿಸಿದ್ದನ್ನೂ ನಾವು ನೋಡಬಹುದು. ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ನಿರ್ಭಯ ಮೇಲೆ ನಡೆದ ದಾರುಣ ಅತ್ಯಾಚಾರವನ್ನೂ, ತದನಂತರ ಅಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಉರುಳಿ ಆಪ್ ಪ್ರತಿಷ್ಠಾಪನೆಯಾದದ್ದನ್ನೂ ಗಮನಿಸಬಹುದು. ಈಗ ರೇಪಿಸ್ಟ್‌ಗಳನ್ನು ಸಮರ್ಥಿಸಿಕೊಳ್ಳುತ್ತಿರುವ ಮುಲಾಯಂನನ್ನು ಅಲ್ಲಿನ ಮತದಾರರು ಚುನಾವಣೆಯಲ್ಲಿ ಚಚ್ಚಿ ಬಿಸಾಕಲು ಇದೊಂದು ಕಾರಣ ಸಾಕು. ದುರಂತವೆಂದರೆ, ತೃತೀಯ ರಂಗದ ಸರ್ಕಾರದ ಕನಸಿನಲ್ಲಿರುವ ಮಾನ್ಯ ದೇವೇಗೌಡರು ಕೂಡ ಮುಲಾಯಂ ಮಾತನ್ನು ಬಾಯ್ಮುಚ್ಚಿಕೊಂಡು ಸ್ವಾಗತಿಸಿರುವುದು!
ಮುಲಾಯಂ ಸಿಂಗ್ ಯಾದವ್
ಅತ್ಯಾಚಾರಿಗಳ ಬಾಳು ಬೆಳಕಾಗಿಸುವಂಥ ವಿಚಾರಸರಣಿಯೊಂದನ್ನು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ತಮ್ಮ ಎದೆಯಾಳದಿಂದ ಹೊರಹಾಕಿದ್ದಾರೆ. ಅತ್ಯಾಚಾರದ ಬಗ್ಗೆ ರ್ಯಾಲಿಯೊಂದರಲ್ಲಿ ಮಾತನಾಡುತ್ತಾ, 'ಹುಡುಗರು ತಪ್ಪು ಮಾಡುವುದು ಸಹಜ. ಹಾಗೆಂದು ಅವರನ್ನು ನೇಣಿಗೇರಿಸುವುದು ಸರಿಯಲ್ಲ' ಎಂದಿದ್ದಾರೆ. ವಾವ್! ಅದೆಂತಾ ಕರುಣಾಮಯಿ, ವಿಶಾಲ, ಕ್ಷಮಾಶೀಲ ಮನಸ್ಸು ನಿಮ್ಮದು ಮುಲಾಯಂ? ಏನೋ ಕೆಟ್ಟ ಗಳಿಗೆ, ಅವನು ಹಾಗೆ ಮಾಡಿದ ಎಂದು ಹುಡುಗಿಯರು ಎದ್ದೋಗ್ತಾ ಇರಬೇಕಲ್ಲವೇ?
ಬನ್ವಾರಿ ಲಾಲ್ ಸಿಂಘಾಲ್
ಅತ್ಯಾಚಾರವೇ? ತಪ್ಪು ಆಕೆ ತೊಟ್ಟಿದ್ದ ಉಡುಗೆಯದೇ ಆಗಿರುತ್ತದೆ! ಅಂದ ಹಾಗೆ ಯಾವ ಬಟ್ಟೆ ತೊಟ್ಟಿದ್ದಳು?ರಾಜಸ್ತಾನದ ಬಿಜೆಪಿ ಶಾಸಕ ಸಿಂಘಾಲ್ ಹೇಳುತ್ತಾರೆ, ಶಾಲಾ ಹುಡುಗಿಯರು ಧರಿಸುವ ಯೂನಿಫಾರಂ ಸ್ಕರ್ಟ್ ಹುಡುಗರನ್ನು ಕೆಟ್ಟ ಕೃತ್ಯ ಮಾಡಲು ಪ್ರೇರೇಪಿಸುತ್ತದಂತೆ. ಹಾಗಾದರೆ ಬುರ್ಖಾ ತೊಡುವ ಸೌದಿ ಅರೇಬಿಯಾದಲ್ಲೂ ರೇಪ್ ನಡೆಯುತ್ತಲ್ಲಾ, ಅಲ್ಲಿನ ಹುಡುಗರಿಗೆ ಬುರ್ಖಾದೊಳಗೆ ನೋಡುವ ಎಕ್ಸ್ ರೇ ಕಣ್ಣುಗಳಿರುತ್ತವೆಯೇ?!
ಟಿ. ತ್ಯಾಗರಾಜನ್
ಪುದುಚೆರಿಯ ಶಿಕ್ಷಣ ಮಂತ್ರಿ ತ್ಯಾಗರಾಜನ್ ಕೂಡಾ ಹುಡುಗಿಯರ ಬಟ್ಟೆಗಳು ಹುಡುಗರ ಸಹಜಾಕಾಂಕ್ಷೆಗಳನ್ನು ಕೆರಳಿಸುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲ, ಶಿಕ್ಷಣ ಮಂತ್ರಿಗಳಾಗಿ ಈ ಬಗ್ಗೆ ಕ್ರಮ ಕೈಗೊಳ್ಳಬೇಡವೇ? ಹಾಗಾಗಿ ಶಾಲೆಗಳಲ್ಲಿ ಹುಡುಗಿಯರು ಕೋಟ್ ಧರಿಸಿ ಬರಬೇಕಂತೆ, ಅದೂ ಅತಿ ಶಾಖವನ್ನು ಹೊಂದಿರುವ ಪುದುಚೆರಿ ನಗರದಲ್ಲಿ. ವಾಟ್ ಆ್ಯನ್ ಐಡಿಯಾ ಸರ್‌ಜಿ?! ಮಹಿಳೆಯರನ್ನು ರಕ್ಷಿಸುವ ಬಗ್ಗೆ ಅದೇನು ಕಾಳಜಿ? 
ಓಂ ಪ್ರಕಾಶ್ ಚೌಟಾಲಾ
ಹರಿಯಾಣದ ಕಾಪ್ ಪಂಚಾಯಿತಿ ಈ ಅತ್ಯಾಚಾರ ನಿಗ್ರಹಕ್ಕೆ ತನ್ನದೊಂದು ಅಭೂತಪೂರ್ವ ಕಾಣಿಕೆ ನೀಡಲು ಮುಂದಾಯಿತು. ಅದರ ಪ್ರಕಾರ ಹುಡುಗಿಯರಿಗೆ ಮದುವೆಯ ವಯಸ್ಸನ್ನು ಇಳಿಸಬೇಕಂತೆ. ಇದರಿಂದ ಅತ್ಯಾಚಾರ ಪ್ರಕರಣಗಳು ನಿಲ್ಲುವುದಂತೆ. ಅದು ಮದುವೆಯೆಂದರೇನೆಂದೇ ಗೊತ್ತಿರದ ಪ್ರತಿ ಹುಡುಗಿಯ ಮೇಲೂ ಅತ್ಯಾಚಾರ ನಡೆಸಲು ಇವರೇ ಪ್ರೇರೇಪಿಸಿದಂತಲ್ಲವೇ? ನಮಗೆ ಹಾಗೆನಿಸುತ್ತದೆ. ಆದರೆ ಹರ್ಯಾಣದ ಮುಖ್ಯಮಂತ್ರಿ ಓಂ ಪ್ರಕಾಶ್ ಚೌಟಾಲಾಗೆ ಹಾಗೆನಿಸಲಿಲ್ಲ! ಅವರು ಈ ಸಲಹೆ ಅತ್ಯುತ್ತಮವಾದುದೆಂದು ಹಾಡಿಹೊಗಳಿ ದೇಶಾದ್ಯಂತ ಛೀಮಾರಿ ಹಾಕಿಸಿಕೊಂಡರು. ಜಿತೇಂದರ್ ಚಾತರ್
ಹರಿಯಾಣದ ಕಾಪ್ ಪಂಚಾಯಿತಿಯ ಜಿತೇಂದರ್ ಚಾತರ್ ಅತ್ಯಾಚಾರದ ಮೂಲಕಾರಣವನ್ನೇ ಕಂಡುಹಿಡಿದರೂ ಅವರಿಗೆ ಜ್ಞಾನಪೀಠ ನೀಡದಿದ್ದುದು ತಪ್ಪಲ್ಲವೇ? ಅವರ ಪ್ರಕಾರ ಫಾಸ್ಟ್‌ಫುಡ್‌ಗಳನ್ನು ತಿನ್ನುವುದೇ ಅತ್ಯಾಚಾರಕ್ಕೆ ಕಾರಣವಂತೆ! 
ಶೀಲಾ ದೀಕ್ಷಿತ್
ದೆಹಲಿಯ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಅತ್ಯಾಚಾರ ತಡೆಗಟ್ಟುವ ಸಲುವಾಗಿ ಹುಡುಗಿಯರಿಗೆ ಸಾಹಸಬುದ್ಧಿ ಪ್ರದರ್ಶಿಸದಂತೆ ಎಚ್ಚರಿಕೆ ನೀಡುತ್ತಾರೆ. ಓರ್ವ ಮಹಿಳೆಯಾಗಿ ಮಹಿಳೆಯರಿಗದೆಷ್ಟು ಚೆನ್ನಾಗಿ ಬುದ್ಧಿ ಹೇಳಿದಿರಿ ಶೀಲಾ? ಕಿವಿ ಹಿಂಡಿ ಹೇಳಬೇಕಿತ್ತು, ಅರ್ಥವಾಗುವುದಿಲ್ಲ ಬಡ್ಡೆತ್ತುಗಳಿಗೆ!
ವಿಜಯ್ ವಾರ್ಗಿಯ
ಮಧ್ಯಪ್ರದೇಶದ ಬಿಜೆಪಿ ನಾಯಕ ವಿಜಯ್ ವಾರ್ಗಿಯಾ ಒಂದುತ್ತಮ ಉದಾಹರಣೆಯೊಂದಿಗೆ ಅತ್ಯಾಚಾರಕ್ಕೆ ಕಾರಣವನ್ನೂ, ಪರಿಹಾರವನ್ನೂ ಸೂಚಿಸುತ್ತಾರೆ. ರಾಮಾಯಣದಲ್ಲಿ ಸೀತೆಗೆ ಗೆರೆ ದಾಟಬೇಡವೆಂದರೂ ದಾಟಿದ್ದುದೇ ಅವಳನ್ನು ರಾವಣ ಅಪಹರಣ ಮಾಡಲು ಕಾರಣ. ಹಾಗೆಯೇ ಮಹಿಳೆಯರು ತಮ್ಮ ಬೌಂಡರಿ ದಾಟಿ ಹೊರಬಂದರೆ ತೊಂದರೆ ಅನುಭವಿಸುತ್ತಾರೆ. ಅದರೊಳಗೇ ಇರಬೇಕಂತೆ. ಈಗ ಬೌಂಡರಿಗಳನ್ನು ಎಲ್ಲೆಲ್ಲಾ ಹಾಕೋಣ? 
ಅಸಾರಾಂ ಬಾಪು
ರಾಜಕಾರಣಿಯಲ್ಲದಿದ್ದರೂ ಅತ್ಯಾಚಾರದ ಬಗೆಗಿನ ಅವರ ಕಳಕಳಿಯ ಬಗ್ಗೆ ಇಲ್ಲಿ ಬರೆಯದಿದ್ದರೆ ಮೋಸ ಮಾಡಿದಂತಾದೀತು. ನಮಗೆಲ್ಲ ಈ ಐಡಿಯಾ ಈ ಮೊದಲೇ ಹೇಗೆ ಬರಲಿಲ್ಲವೆಂಬುದೇ ಅರ್ಥವಾಗುತ್ತಿಲ್ಲ. ಅತ್ಯಾಚಾರ ನಡೆವಾಗ ಹುಡುಗಿಯರು ಕೂಗಿ ಕಿರುಚುವುದನ್ನು ಬಿಟ್ಟು, ದೇವರನ್ನು ನೆನೆದು ಅತ್ಯಾಚಾರ ಮಾಡುವವನನ್ನು 'ಅಣ್ಣಾ' ಎಂದು ಕರೆಯಬೇಕಂತೆ. ಆಗ ಅವನು ದೇವರು ಕೊಟ್ಟ ತಂಗಿಯೆಂದು ಅತ್ಯಾಚಾರ ಮಾಡುವುದನ್ನು ನಿಲ್ಲಿಸುತ್ತಾನಂತೆ!
ಮೋಹನ್ ಭಾಗ್ವತ್
ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್ ಭಾಗ್ವತ್ ಪ್ರಕಾರ ಅತ್ಯಾಚಾರಕ್ಕೆ ಕಾರಣ, ಪಾಶ್ಚಾತ್ಯರ ಅನುಕರಣೆಯಂತೆ! ದೇಶದ ಶೇ.75 ಅತ್ಯಾಚಾರ ಪ್ರಕರಣಗಳು ಹಳ್ಳಿಯಲ್ಲೇ ಆಗುತ್ತಿವೆ. ಹಾಗಾದರೆ ನಮ್ಮ ಹಳ್ಳಿ ಹುಡುಗಿಯರು ಅಷ್ಟೊಂದು ಪಾಶ್ಚಾತ್ಯರ ಉಡುಗೆತೊಡುಗೆಗೆ ಮೊರೆ ಹೋದರೆ?
ಅಬು ಅಜ್ಮಿ
ಮುಲಾಯಂ ಅವರ ಪಕ್ಷದಲ್ಲಿದ್ದ ಮೇಲೆ ಅವರ ಹೃದಯ ವೈಶಾಲ್ಯ ಇನ್ನೊಬ್ಬರಿಗೂ ಹರಡಿರಬೇಕಲ್ಲವೇ? ಮಹಾರಾಷ್ಟ್ರದ ಸಮಾಜವಾದಿ ಪಕ್ಷದ ಮುಖಂಡ ಅಬು ಅಜ್ಮಿ ಪ್ರಕಾರ, ಅತ್ಯಾಚಾರ ನಡೆದರೆ ಹುಡುಗಿಯರನ್ನೇ ನೇಣಿಗೇರಿಸಬೇಕು. ಕೇವಲ ಅತ್ಯಾಚಾರವಲ್ಲ, ಮದುವೆಯಾಗದೆ ಸೆಕ್ಸ್ ಹೊಂದುವ ಹುಡುಗಿಯರೆಲ್ಲರನ್ನೂ ನೇಣಿಗೇರಿಸಬೇಕು. ಆಹ್! ನಮ್ಮ ದೇಶದಲ್ಲಿರುವ ಹುಡುಗಿಯರ ಜನಸಂಖ್ಯೆ ಇನ್ನಷ್ಟು ಕಡಿಮೆ ಮಾಡಲು ಎಂಥಾ ಉಪಾಯ! ಅತ್ಯಾಚಾರ ಮಾಡಿದ ಹುಡುಗರಿಗೆ ಸನ್ಮಾನ ಮಾಡಬೇಕೆಂದು ಹೇಳಲು ಮರೆತು ಹೋಯಿತೇನೋ? ಇದೇ ಪುಣ್ಯಾತ್ಮ ಹಿಂದೆ ಕೂಡ ಒಂದು ಉತ್ತಮ ಸಲಹೆ ನೀಡಿದ್ದ. ಹುಡುಗಿಯರು ಹುಡುಗರು ಇರುವ ಪ್ರದೇಶದಲ್ಲಿ ಕಾಲು ಕಾಣುವಂತೆ ಬಟ್ಟೆ ಧರಿಸದಂತೆ ಆಜ್ಞೆ ಹೊರಡಿಸಬೇಕೆಂದಿದ್ದ. -ರೇಶ್ಮಾರಾವ್ ಸೊನ್ಲೆ

1 ಕಾಮೆಂಟ್‌:

Badarinath Palavalli ಹೇಳಿದರು...

ಹೀಗೆಲ್ಲ ಮಾತನಾಡಲು ರಾಜಕಾರಣಿಗಳಿಗೆ ಮಾತ್ರ ಸಾಧ್ಯವೇನೋ?