ಈ ಬಾರಿ ನೀವು ವೋಟ್ ಮಾಡುತ್ತೀರೋ, ನೋಟಾ ಅನ್ನುತ್ತೀರೋ? ಭಾರತದ
ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಮತದಾರನ ಅಮೂಲ್ಯ ಮತದ ಮೌಲ್ಯವನ್ನು ಮತ್ತಷ್ಟು
ಹೆಚ್ಚಿಸಲು ಮತಪಟ್ಟಿಯಲ್ಲಿ 'ಮೇಲಿನ ಆಯ್ಕೆಗಳಲ್ಲಿ ಯಾವುದೂ ಅಲ್ಲ' (none of the
above- NOTA) ಎಂಬ ಆಯ್ಕೆ ನೀಡಿದೆ. ರಾಜಕೀಯ ಪಕ್ಷಗಳ ವಿರೋಧದ ನಡುವೆಯೂ ಸುಪ್ರೀಂ
ಕೋರ್ಟ್ ಈ 'ನೋಟಾ' ಆಯ್ಕೆಗೆ ಸಮ್ಮತಿ ನೀಡಿದೆ. ಅಭ್ಯರ್ಥಿಗಳಲ್ಲಿ ಯಾರೂ ನನ್ನ
ಮತ ಪಡೆಯುವ ಅರ್ಹತೆ ಹೊಂದಿಲ್ಲ, ನನ್ನ ಪ್ರತಿನಿಧಿಯಾಗಬಲ್ಲವ ಇವರ್ಯಾರೂ ಅಲ್ಲ ಎಂದು
ಹೇಳುವ ಹಕ್ಕನ್ನು ಮತದಾರನಿಗೆ ನೀಡುವ ಮೂಲಕ ಪಕ್ಷಗಳಿಗೆ ಸ್ವಚ್ಛ ಅಭ್ಯರ್ಥಿಯನ್ನು
ನಿಲ್ಲಿಸುವಲ್ಲಿ ಜವಾಬ್ದಾರಿ ಹೆಚ್ಚಿಸಿದೆ. ಆದರೆ ಭಾರತದಲ್ಲಿ ಈ ಆಯ್ಕೆ ಮೂಲಕ
ಅಭ್ಯರ್ಥಿಯನ್ನು ತಿರಸ್ಕರಿಸಲಾಗುವುದಿಲ್ಲ. ಏಕೆಂದರೆ 'ಮೇಲಿನ ಆಯ್ಕೆಗಳಲ್ಲಿ ಯಾವುದೂ
ಅಲ್ಲ' ಎಂಬ ನಮ್ಮ ಮತ ಮತದಾರನ ಮನಸ್ಸನ್ನು ತಿಳಿಯಲು ಮಾತ್ರವೇ ಹೊರತು
ಎಣಿಕೆಗೊಳಪಡುವುದಿಲ್ಲ.
ಸದ್ಯದ ಸರ್ವೆಯ ಪ್ರಕಾರ, ಎಲ್ಲ ಅಭ್ಯರ್ಥಿಗಳನ್ನು
ತಿರಸ್ಕರಿಸಬಹುದಾದ ಆಯ್ಕೆಯನ್ನು 2014ರ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಶೇ.1 ಮಂದಿ
ಮತದಾರರು ಮಾತ್ರ ಬಳಸಿಕೊಳ್ಳಲಿದ್ದಾರೆ. ಇದಕ್ಕೆ ಈ ಆಯ್ಕೆಯ ಬಗ್ಗೆ ಹೆಚ್ಚು ತಿಳಿವಳಿಕೆ
ಇಲ್ಲದಿರುವುದು ಮೊದಲ ಕಾರಣ. ಇದರಿಂದ ನಮ್ಮ ಒಂದೇ ಒಂದು ಮತ ಎಣಿಕೆಗಿಲ್ಲದೆ
ವ್ಯರ್ಥವಾಗುತ್ತದೆ ಎಂಬುದು ಮತ್ತೊಂದು ಕಾರಣ. ಬೇರೆ ದೇಶಗಳಲ್ಲಾದರೆ ಹೆಚ್ಚು
ಮಂದಿ ನೋಟಾ ಆಯ್ಕೆ ಬಳಸಿದರೆ ಮರುಚುನಾವಣೆ ನಡೆಯುತ್ತದೆ. ಆದರೆ ಭಾರತದಲ್ಲಿ ಇದು ಕೇವಲ
ಅಂಕಿಅಂಶಗಳಿಗೆ ಸೀಮಿತವಾಗಿ ಕುಳಿತುಕೊಳ್ಳುತ್ತದೆ. ನೋಟಾ ಭಾರತದ ಚುನಾವಣೆಯ ಮೇಲೆ
ಹೆಚ್ಚೇನೂ ಪರಿಣಾಮ ಬೀರುವುದಿಲ್ಲವಂತೆ. ಏಕೆಂದರೆ ಸರ್ವೆಗಳಲ್ಲಿ ನೋಟಾ
ಬಳಸುತ್ತೇವೆಂದವರು ಒಂದು ವೇಳೆ ಈ ಆಯ್ಕೆಯೇ ಇಲ್ಲದಿದ್ದರೆ ಮತ ನೀಡುತ್ತಿದ್ದುದೇ ಅನುಮಾನ
ಎನ್ನುತ್ತಾರೆ ವಿಶ್ಲೇಷಕರು.
ದೆಹಲಿ, ರಾಜಸ್ತಾನ, ಚತ್ತೀಸ್ಘಡ, ಮಧ್ಯಪ್ರದೇಶ
ನಾಲ್ಕು ರಾಜ್ಯಗಳಲ್ಲಿ ನಡೆಸಿದ ಸರ್ವೆ ಹೇಳುವಂತೆ 115 ದಶಲಕ್ಷ ಜನರಲ್ಲಿ 1.67 ದಶಲಕ್ಷ
ಜನರು ಮಾತ್ರ 'ನೋಟಾ' ಆಯ್ಕೆ ಬಳಸುವುದಾಗಿ ತಿಳಿಸಿದ್ದಾರೆ. ದೆಹಲಿಯಲ್ಲಿ ಈ ಆಯ್ಕೆಯ
ಬಗ್ಗೆ ಒಲವು ತೋರಿದವರ ಸಂಖ್ಯೆ ಶೇ.1ಕ್ಕಿಂತಲೂ ಕಡಿಮೆ. ದೆಹಲಿಯಲ್ಲಿ
ಭ್ರಷ್ಟಾಚಾರದ ವಿರುದ್ಧ ಸಮರ ಸಾರಲು ಹುಟ್ಟಿಕೊಂಡಿರುವ ಪಕ್ಷವೆಂಬಂತೆ ಆಪ್
ಬಿಂಬಿಸಿಕೊಂಡಿರುವುದರಿಂದ, ಆಪ್ಗೆ ನೀಡುವ ಮತವೇ ಉಳಿದ ಪಕ್ಷಗಳೆಡೆ ಮತದಾರರು ತಮ್ಮ
ಸಿಟ್ಟನ್ನು ವ್ಯಕ್ತಪಡಿಸುವ ಬಗೆಯಾಗಿದೆ. ಹೀಗಾಗಿ ದೆಹಲಿಯಲ್ಲಿ ನೋಟಾ ಮತದಾರರು ಕಡಿಮೆ
ಎನ್ನುವುದು ತಜ್ಞರ ವಿಶ್ಲೇಷಣೆ.
ಈ ನನ್ ಆಫ್ ದಿ ಎಬೌ ಆಯ್ಕೆ ವಿವಿಧ ದೇಶಗಳಲ್ಲಿ ವಿವಿಧ ರೀತಿಯಲ್ಲಿ ಜಾರಿಯಲ್ಲಿದ್ದು ಕೆಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿದೆ.
ಯುನೈಟೆಡ್ ಕಿಂಗ್ಡಮ್
2000,
ನವೆಂಬರ್ನಲ್ಲಿ ಯುಕೆಯಲ್ಲಿ ನೋ ಕ್ಯಾಂಡಿಡೇಟ್ ಡಿಸರ್ವ್ಸ್ ಮೈ ವೋಟ್(ನನ್ನ ಮತ
ಪಡೆದುಕೊಳ್ಳುವ ಅರ್ಹತೆ ಯಾವ ಅಭ್ಯರ್ಥಿಗೂ ಇಲ್ಲ) ಎಂಬ ಹೆಸರಿನಲ್ಲೇ ಹೊಸ ಪಕ್ಷವೊಂದು
ಅಧಿಕೃತವಾಗಿ ಸೃಷ್ಟಿಯಾಯಿತು! ಈ ಪಕ್ಷದ ಮುಖ್ಯ ಉದ್ದೇಶ ದೇಶದಲ್ಲಿ ಗ್ರಾಮ ಮಟ್ಟದಿಂದ
ದೇಶಮಟ್ಟದವರೆಗೆ ನಡೆವ ಪ್ರತೀ ಚುನಾವಣೆಯಲ್ಲೂ 'ನನ್ ಆಫ್ ದಿ ಎಬೌ' ಆಯ್ಕೆ
ಅಳವಡಿಸಬೇಕೆಂಬುದಾಗಿತ್ತು! ಇನ್ನೊಂದು ಸ್ವಾರಸ್ಯವೆಂದರೆ 2010ರಲ್ಲಿ ಎರಿಕ್ ಮಚ್ ಎಂಬಾತ
ತನ್ನ ಹೆಸರನ್ನು ಬದಲಿಸಿಕೊಂಡು 'ಜೀರೋ, ನನ್ ಆಫ್ ದಿ ಎಬೌ' ಎಂಬ ಹೆಸರಿನಲ್ಲಿ
ಕಣಕ್ಕಿಳಿದು ಅಚ್ಚರಿ ಮೂಡಿಸಿದ್ದ. ಆ ಮೂಲಕವಾದರೂ ತನ್ನ ದೇಶದ ಮತದಾರರಿಗೆ 'ನನ್ ಆಫ್ ದಿ
ಎಬೌ' ಆಯ್ಕೆ ನೀಡುವ ಉದ್ದೇಶ ಅವನದಾಗಿತ್ತು!
ಸೋವಿಯತ್ ಯೂನಿಯನ್
1991ರಲ್ಲಿ
ಸೋವಿಯತ್ ಸಂಯುಕ್ತ ರಾಷ್ಟ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಜನತೆ ನೋಟಾ ಬಟನ್
ಒತ್ತಿದ್ದರಿಂದ ಕಮ್ಯೂನಿಸ್ಟ್ ಪಕ್ಷದ 100ಕ್ಕೂ ಹೆಚ್ಚು ಅಭ್ಯರ್ಥಿಗಳು ಅನರ್ಹರೆಂದು
ರಾಜಕೀಯ ಕ್ಷೇತ್ರದಿಂದ ಹೊರಹೋಗಬೇಕಾಯಿತು. ಅಲ್ಲದೆ ಮರುಚುನಾವಣೆ ನಡೆಯಲು ಕಾರಣವಾಯಿತು. ಈ
ಮೂಲಕ ಪ್ರಜಾಪ್ರಭುತ್ವದ ಅರ್ಥ ಹೆಚ್ಚು ಕಳೆಗಟ್ಟಿತು.
ಸ್ಪೇನ್
ಇಲ್ಲಿನ
ಮತನಿಯಮಗಳ ಪ್ರಕಾರ ಯಾವುದೇ ಅಭ್ಯರ್ಥಿಗೆ ಮತ ಹಾಕಲು ಇಷ್ಟವಿಲ್ಲದಿದ್ದರೆ ಖಾಲಿ
ಬಾಕ್ಸ್ವೊಂದನ್ನು ಆಯ್ಕೆ ಮಾಡುವ ಅಧಿಕಾರ ಮತದಾರನಿಗಿದೆ. ಇಲ್ಲಿ ಖಾಲಿ ಬಾಕ್ಸ್ಗೆ ಬಿದ್ದ
ಮತಗಳ ಸಂಖ್ಯೆ 5 ಶೇಕಡ ದಾಟಿದರೆ ಆ ಪಕ್ಷವನ್ನು ಹೆಚ್ಚು ಗಂಭೀರವಾಗಿ
ಪರಿಗಣಿಸಲಾಗುವುದಿಲ್ಲ. ಅಲ್ಲದೆ ಹಾಗೆ ಮತದಾರರಿಂದ ತಿರಸ್ಕರಿಸಲ್ಪಟ್ಟ ಅಭ್ಯರ್ಥಿಗಳ
ಸ್ಥಾನವನ್ನು ಮಂತ್ರಿಮಂಡಲದಲ್ಲೂ ಮರುಚುನಾವಣೆ ನಡೆವವರೆಗೆ ಖಾಲಿ ಬಿಡಲಾಗುತ್ತದೆ.
ಯುಎಸ್
ಅಮೆರಿಕ
ಸಂಯುಕ್ತ ರಾಷ್ಟ್ರಗಳಲ್ಲಿ ನೆವಾಡ ರಾಜ್ಯದಲ್ಲಿ ಮಾತ್ರ 1978ರಿಂದಲೇ 'ನೋಟಾ' ಆಯ್ಕೆಯ
ಅನುಕೂಲವಿದೆ. 1999ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನೋಟಾ ಬೇಕೆಂಬ ಕೂಗು ಕೇಳಿಬಂದು ಅದರ
ಪ್ರಚಾರಕ್ಕಾಗಿ 987000 ಡಾಲರ್ಗಳನ್ನು ವ್ಯಯಿಸಲಾಯಿತಾದರೂ 2000ನೇ ಇಸವಿಯಲ್ಲಿ ನಡೆದ
ಚುನಾವಣೆಯಲ್ಲಿ ಅಭ್ಯರ್ಥಿ ಅತ್ಯಧಿಕ ಮತ ಗಳಿಸುವ ಮೂಲಕ ನೋಟಾ ಮತದಾರರಿಂದಲೇ
ತಿರಸ್ಕರಿಸಲ್ಪಟ್ಟಿತು.
ಬ್ರಿಟನ್
ಬ್ರಿಟನ್ ಸರ್ಕಾರ
ಯಾವುದೇ ಪಕ್ಷಗಳೂ 'ನನ್ ಆಫ್ ದಿ ಎಬೌ' ಎಂಬ ಹೆಸರಿಟ್ಟುಕೊಳ್ಳುವಂತಿಲ್ಲವೆಂದು ಆದೇಶ
ಹೊರಡಿಸಿತ್ತು. ಇದರಿಂದ ಕುಪಿತನಾದ ದೊಡ್ಡ ತಲೆಯ ಬ್ರಿಟಿಷ್ ವ್ಯಕ್ತಿಯೊಬ್ಬ 'ನನ್ ಆಫ್
ದಿ ಎಬೌ ಎಕ್ಸ್' ಎಂಬ ಹೆಸರಿನಲ್ಲಿ ಕಣಕ್ಕಿಳಿದಿದ್ದ. ಆ ಹೆಸರಿನಲ್ಲಿ ಪಕ್ಷವಿರಬಾರದೇ
ಹೊರತೂ, ಅಭ್ಯರ್ಥಿ ಇರಬಾರದೆದೇನಿಲ್ಲವಲ್ಲ, ನನ್ನ ಹೆಸರಿನ ಆಯ್ಕೆಯ ಸ್ವಾತಂತ್ರ್ಯವನ್ನು
ಜಾಹೀರುಗೊಳಿಸಲೋಸುಗವೇ ಹೀಗೆ ಚುನಾವಣೆಗೆ ನಿಂತಿದ್ದೇನೆ ಎಂದು ಸಾರಿದ್ದ. ಒಂದು ವೇಳೆ
'ನನ್ ಆಫ್ ದಿ ಎಬೌ'ಗೆ ಹೆಚ್ಚು ಮತ ಬಂದರೆ ಅವನು ಗೆಲ್ಲುತ್ತಿದ್ದನೋ, ಸೋಲುತ್ತಿದ್ದನೋ!?
ಪೋಲಂಡ್
1989ರ
ಚುನಾವಣೆಯಲ್ಲಿ ಪೋಲೆಂಡ್ನಲ್ಲಿ ಕಮ್ಯೂನಿಸ್ಟ್ ಪಕ್ಷದಿಂದ ನಿಂತಿದ್ದ ಏಕೈಕ ಅಭ್ಯರ್ಥಿಯ
ಹೆಸರನ್ನು ಮತದಾನದಂದು ಮತದಾರರೆಲ್ಲರೂ ಚಿತ್ತು ಹಾಕುವ ಮೂಲಕ ಅಂದಿನ ಪ್ರಧಾನಮಂತ್ರಿ
ಹಾಗೂ ಪ್ರಮುಖ ಕಮ್ಯೂನಿಸ್ಟ್ ನೇತಾರರನ್ನು ಅಧಿಕಾರದಿಂದ ಕೆಳಗಿಳಿಸಿದರು.
"ಈ ನನ್ ಆಫ್ ದಿ ಎಬೌ ಆಯ್ಕೆ ವಿವಿಧ ದೇಶಗಳಲ್ಲಿ ವಿವಿಧ ರೀತಿಯಲ್ಲಿ ಜಾರಿಯಲ್ಲಿದ್ದು ಕೆಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿದೆ’ ಎನ್ನುತ್ತಾ ಲೇಖಕಿ ವಿವಿದ ದೇಶಗಳ ಪಟ್ಟಿ ಮುಂದಿಟ್ಟಿದ್ದಾರೆ.
1 ಕಾಮೆಂಟ್:
"ಈ ನನ್ ಆಫ್ ದಿ ಎಬೌ ಆಯ್ಕೆ ವಿವಿಧ ದೇಶಗಳಲ್ಲಿ ವಿವಿಧ ರೀತಿಯಲ್ಲಿ ಜಾರಿಯಲ್ಲಿದ್ದು ಕೆಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿದೆ’ ಎನ್ನುತ್ತಾ ಲೇಖಕಿ ವಿವಿದ ದೇಶಗಳ ಪಟ್ಟಿ ಮುಂದಿಟ್ಟಿದ್ದಾರೆ.
ಕಾಮೆಂಟ್ ಪೋಸ್ಟ್ ಮಾಡಿ