ಪುಟಗಳು

27.3.14

ಕಣ್ಕಟ್ ಬಾಯ್ಕಟ್First Published: 27 Mar 2014 02:00:00 AM IST
ಪವರ್ ಶಿರೋಮಣಿಯರ ಫ್ರೀ ಸ್ಟೈಲ್
ಅಧಿಕಾರದಲ್ಲಿರುವ ಮಹಿಳೆಯರೇಕೆ ಬಾಯ್ಕಟ್ಗೆ ಮೊರೆ ಹೋಗುತ್ತಾರೆ?ಮಹಿಳೆ ಎಂದರೆ ನೀಳ ಕೇಶರಾಶಿ, ಹಣೆಗೆ ಕುಂಕುಮ, ಕೈತುಂಬ ಬಳೆ, ಭೂಮಿಯೆಡೆಗೆ ನೋಟವಿಟ್ಟ ನಡಿಗೆ...ಹೀಗೆ ವರ್ಣಿಸಿ ವರ್ಣಿಸಿಯೇ ಆಕೆಯನ್ನು ಈ ಸ್ಟಿಗ್ಮಾಕ್ಕೆ ಅಂಟಿಸಿರುವುದು ಭಾರತೀಯ ಪುರುಷ ಪ್ರಧಾನ ಸಮಾಜ. ಇದರಲ್ಲಿ ತಮ್ಮ ಕಲ್ಪನೆಯ ಹುಡುಗಿಯನ್ನು ತೆರೆದಿಡುವುದರೊಂದಿಗೆ ಮಹಿಳೆಯರು ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳಬಾರದೆಂಬ ಧೋರಣೆಯೂ, ತಮ್ಮನ್ನು ಮೀರಿ ಬೆಳೆವ ಭಯವೂ ಪುರುಷರ ಕಳ್ಳ ಮನಸ್ಸಿನಲ್ಲಿ ಹುಳ್ಳಹುಳ್ಳಗೆ ಇರುತ್ತದೆ. ಇಂಥ ಬಹುಸಂಖ್ಯಾತ, ಬಲಾಢ್ಯ ಪುರುಷ ಜಾತಿಯ ಕಟ್ಟುಕಟ್ಟಳೆಗಳನ್ನು ಮೀರಲು ಸಹಜವಾಗಿಯೇ ಭಯವೂ, ಪುರುಷರ ಮೆಚ್ಚುಗೆ ಕಣ್ಗಳಿಂದ ದೂರವಾಗುವ ಆತಂಕವೂ ಮಹಿಳೆಯ ಆತ್ಮಕ್ಕೇ ಬೇಲಿ ಹಾಕಿರುತ್ತದೆ. 
ಇಂಥ ವಾತಾವರಣದಲ್ಲಿ ಈ ಬೇಲಿ ದಾಟುವ ಆಕೆಯ ಯಾವುದೇ ಸಣ್ಣ ಪ್ರಯತ್ನವೂ ಬಹುಶೀಘ್ರವಾಗಿ ಸಮಾಜದ ಗಮನ ಸೆಳೆಯಬಲ್ಲದು. ಹಾಗಾಗಿಯೇ ಅಧಿಕಾರಯುತ ಮಹಿಳೆಯ ಬಾಯ್ಕಟ್ ಆಕೆಯ ವ್ಯಕ್ತಿತ್ವವನ್ನೇ ಬದಲಿಸಬಲ್ಲದು. ಒಬ್ಬಳು ಮಧ್ಯವಯಸ್ಸಿನ ಮಹಿಳೆ ಬಾಯ್ಕಟ್ ಮಾಡಿಕೊಂಡಿದ್ದಾಳೆಂದರೆ ಓದಿದವಳು, ದಿಟ್ಟೆ, ಅಧಿಕಾರಯುತಸ್ಥಾನದಲ್ಲಿರಬೇಕು.. ಇತ್ಯಾದಿ ಊಹೆಗಳು ನೋಡುವವರ ಕಣ್ಗಳಲ್ಲಿ ಆಕೆಯ ತೂಕವನ್ನು ಹೆಚ್ಚಿಸುತ್ತವೆ. (ತೀರ್ಥಕ್ಷೇತ್ರಗಳಲ್ಲಿ ಕಾಣಸಿಗುವವರನ್ನು ಹೊರತುಪಡಿಸಿ) ಆದ್ದರಿಂದಲೇ ಬಹುತೇಕ ರಾಜಕೀಯ ಕ್ಷೇತ್ರದಲ್ಲಿರುವ ಮಹಿಳೆಯರು ಬಾಯ್ಕಟ್ ಮೊರೆ ಹೋಗುತ್ತಾರೆ. 
ಇಂದಿರಾ ಗಾಂಧಿ
50ರ ದಶಕದಲ್ಲಿ ಮಧ್ಯೆ ಬೈತಲೆ ತೆಗೆದು ಸಣ್ಣ ಜುಟ್ಟು ಕಟ್ಟಿ ಪಾರ್ಲಿಮೆಂಟ್ಗೆ ಹಾಜರಾಗುತ್ತಿದ್ದ ಇಂಧಿರಾ ಗಾಂಧಿ 60ರ ದಶಕಕ್ಕೆ ಕಾಲಿಡುತ್ತಿದ್ದಂತೆ ಬೊಫ್ಯಾಂಟಿಶ್ ಸ್ಟೈಲ್(ಬಾಯ್ಕಟ್)ಗೆ ಮೊರೆ ಹೋದರು. ಮಹಿಳೆಯನ್ನು ಸದಾ ಮನೆಯೊಳಗಡಗಿಸುವ ಸಂಸ್ಕೃತಿ ಹೊತ್ತಿದ್ದ ಭಾರತದ ತೊಟ್ಟಿಲು ತೂಗುವ ಕೈ ತನ್ನ ಹುಡುಗರ ಶೈಲಿಯ ಕೇಶರಾಶಿಯ ಮೇಲೆ ಕೈಯಾಡಿಸುತ್ತಿದ್ದರೆ ಅಧಿಕಾರಯುತ ಪುರುಷ ಪುಂಗವರು ಇವರ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದರು! ತಂದೆಯಿಂದಲೇ ಫ್ಯಾಷನ್ ಪ್ರೀತಿಯನ್ನು ಎರವಲು ಪಡೆದಿದ್ದ ಇಂದಿರಾ ತಲೆ ಸಂಪೂರ್ಣ ಬೆಳ್ಳಗಾಗತೊಡಗಿದಾಗ ಪ್ಯಾರಿಸ್ಗೆ ಹಾರಿ ಒಂದೆಳೆಯನ್ನು ಬಿಳಿಯಾಗಿಯೇ ಬಿಟ್ಟು ಉಳಿದ ಕೂದಲನ್ನು ಕಪ್ಪಾಗಿಸಿಕೊಂಡು ಬಂದಿದ್ದರು. ಮಹಿಳೆಯ ಈ ವಿಶಿಷ್ಟ ಕೇಶಶೈಲಿಗೆ ಭಾರತ ಸಾಕ್ಷಿಯಾದದ್ದು ಅದೇ ಮೊದಲಿರಬೇಕು. ತುರ್ತು ಸಂದರ್ಭದಲ್ಲಿ ಇಂದಿರಾ ತಲೆಯ ಅರ್ಧಬಿಳಿ, ಅರ್ಧ ಕಪ್ಪು ಕೂದಲು ಆಕೆಯ ವಿಕೃತ ಮನಸ್ಸಿನ ಕುರೂಪವೆಂದು ವಿಶೇಷ ಅರ್ಥ ಪಡೆದುಕೊಂಡಿದ್ದು ಸಹ ಗಮನಾರ್ಹ.
ಮಾಯಾವತಿ
ಸಮಾಜವಾದಿ ಪಕ್ಷದ ನೇತಾರೆ, ಭಾರತದ ಮೊದಲ ಮಹಿಳಾ ದಲಿತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯ ಮಾಯಾವತಿ ವ್ಯಕ್ತಿತ್ವಕ್ಕೆ ಕೂಡಾ ಆಕೆಯ ಬಾಯ್ಕಟ್ ಹೇರ್ಸ್ಟೆ ೈಲ್ ವಿಶಿಷ್ಟ ದಿಟ್ಟತನವನ್ನೊದಗಿಸಿಕೊಟ್ಟಿದೆ. 2 ಬಾರಿ ಮುಖ್ಯಮಂತ್ರಿಯಾದಾಗಲೂ ಎಣ್ಣೆ ತೀಡಿ ಜೆಡೆ ಹೆಣೆದುಕೊಂಡು ಬರುತ್ತಿದ್ದ ಮಾಯಾ, 3ನೇ ಬಾರಿಗೆ ಮುಖ್ಯಮಂತ್ರಿಯಾಗುವಾಗ ಅವರ ಜಡೆಯೂ ಮಾಯ! 'ದಲಿತ' ಎಂಬ ಪಟ್ಟದಿಂದ ಹೊರಬಂದು ಮೇಲ್ವರ್ಗದವರೊಂದಿಗೆ ತನ್ನನ್ನು ತಾನು ಸಮೀಕರಿಸಿಕೊಳ್ಳಲು ಮಾಯಾವತಿಗೆ ಈ ಹೇರ್ಸ್ಟೈಲ್ ಮಹತ್ವದ್ದೆಂದೆನಿಸಿರಬಹುದು.
ಪ್ರಿಯಾಂಕ ಗಾಂಧಿ
ರಾಜಕೀಯ ಅಖಾಡಕ್ಕಿಳಿಯದಿದ್ದರೂ ನೆಹರೂ ಕುಟುಂಬದ ಕುಡಿಯಾಗಿದ್ದರಿಂದ ರಾಜಕೀಯವಾಗಿ ಗುರುತಿಸಿಕೊಂಡಿರುವವರು ಪ್ರಿಯಾಂಕ ಗಾಂಧಿ. ಈಕೆ ಮೊದಲಿಂದಲೂ ತನ್ನ ಅಜ್ಜಿಯ ಕೇಶಶೈಲಿಯನ್ನೇ ನೆಚ್ಚಿಕೊಂಡು ಬಂದವರು. ಆದರೂ ಈ ಫ್ಯಾಷನ್'ಪ್ರಿಯೆ'ಯ ಕೇಶಶೈಲಿ ಸದ್ದು ಮಾಡಿದ್ದು 2011ರಲ್ಲಿ. 40ರ ಹೊಸ್ತಿಲಲ್ಲಿದ್ದ ಪ್ರಿಯಾಂಕಳ ಕೇಶಶೈಲಿಯನ್ನು 20-25ರ ಯುವತಿಯರು ಟ್ರೆಂಡ್ ಆಗಿ ಸ್ವೀಕರಿಸಿ ಅನುಕರಿಸತೊಡಗಿದ್ದರು.
ಗೀತಾ ಶಿವರಾಜ್ ಕುಮಾರ್
ದೀಗ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ, ರಾಜ್ ಕುಟುಂಬದ ಗೀತಾ ಶಿವರಾಜ್ಕುಮಾರ್ ಕೂಡಾ ಬಾಯ್ಕಟ್ನೊಂದಿಗೇ ರಾಜಕೀಯ ಪ್ರವೇಶಿಸಿದ್ದು, ಈ ಹೇರ್ಸ್ಟೈಲ್ ಆಕೆಯ ರಾಜಕೀಯ ಜೀವನದಲ್ಲಿ ಯಾವ ಪಾತ್ರ ವಹಿಸಲಿದೆ ಕಾದು ನೋಡಬೇಕಿದೆ.
ಕಿರಣ್ ಬೇಡಿ
ರಾಜಕೀಯದ ಗಾಳಿಯನ್ನು ಹತ್ತಿರದಿಂದ ಸೇವಿಸಿ ಅದು ಕಾರುವ ವಿಷಕ್ಕೆ ಭಯಗೊಂಡು ದೂರ ಓಡಿದ ಭಾರತದ ಮೊಟ್ಟಮೊದಲ ಮಹಿಳಾ ಐಪಿಎಸ್ ಆಫೀಸರ್ ಕಿರಣ್ ಬೇಡಿ ವ್ಯಕ್ತಿತ್ವಕ್ಕೆ ವಿಶೇಷಣಗಳು ಅಂಟಿದ ದಿನದಿಂದಲೂ ಬಾಯ್ಕಟ್ ಆಕೆಯ ಬಾಯ್ಫ್ರೆಂಡ್ನ ಹಾಗೆ ಜೊತೆಗೇ ಇದೆ.
ಪ್ರಿಯಾದತ್
ಸುನೀಲ್ದತ್ ಮತ್ತು ನರ್ಗೀಸ್ ಪುತ್ರಿ ಪ್ರಿಯಾ ದತ್ ರಾಜಕೀಯ ಅಖಾಡಕ್ಕಿಳಿದ ಕೆಲ ಸಮಯ ಬಾಯ್ಕಟ್ಗೆ ಮೊರೆ ಹೋದದ್ದು ಮತ್ತೊಮ್ಮೆ ರಾಜಕೀಯಕ್ಕೂ ಮಹಿಳೆಯ ಬಾಯ್ಕಟ್ಗೂ ಇರುವ ಸಂಬಂಧವನ್ನು ಪುಷ್ಟೀಕರಿಸುತ್ತದೆ.
ಮಾರ್ಗರೆಟ್ ಹಿಲ್ಡಾ ಥ್ಯಾಚರ್
ತಿ ಹೆಚ್ಚು ಕಾಲ ಬ್ರಿಟಿಷ್ ಪ್ರೈಮ್ ಮಿನಿಸ್ಟರ್ ಆಗಿದ್ದ ಮಾರ್ಗರೆಟ್ ಹಿಲ್ಡಾ ಥ್ಯಾಚರ್ ಕೂಡಾ ಕೆಂಪುಕೂದಲನ್ನು ಹೊರತುಪಡಿಸಿದರೆ ನಮ್ಮ ಇಂದಿರಾ ಗಾಂಧಿಯದೇ ಎನಿಸುವ ಹೇರ್ಸ್ಟೈಲ್ ಹೊಂದಿದ್ದರು. ಅದು ಈ ಉಕ್ಕಿನ ಮಹಿಳೆಯ ನಾಯಕತ್ವದ ವರ್ಚಸ್ಸನ್ನು ಹೆಚ್ಚಿಸಿತ್ತು.
ಹಿಲರಿ ಕ್ಲಿಂಟನ್
ಅಮೆರಿಕ ಸಂಯುಕ್ತ ಸಂಸ್ಥಾನದ ಕಾರ್ಯದರ್ಶಿಯಾಗಿ ಉತ್ತಮ ಹೆಸರು ಮಾಡಿರುವ, ಅಮೆರಿಕದ ಅತ್ಯುತ್ಕೃಷ್ಟ ವಕೀಲೆ ಎಂಬ ಖ್ಯಾತಿವೆತ್ತ ಹಿಲರಿ ಕ್ಲಿಂಟನ್ಗೆ ಕೂಡಾ ಬಾಯ್ಕಟ್ ವಿಶಿಷ್ಟ ಮೆರುಗು ನೀಡಿದೆ.
ಮಿಶೆಲ್ ಒಬಾಮ
ಅಮೆರಿಕ ಅಧ್ಯಕ್ಷ ಒಬಾಮ ಪತ್ನಿ ಸ್ವತಃ ವಕೀಲೆ ಮತ್ತು ಬರಹಗಾರ್ತಿಯಾಗಿ ಗುರುತಿಸಿಕೊಂಡಿರುವ ಮಿಶೆಲ್ ಬಾಯ್ಕಟ್ಗೆ ಸಮೀಪದ ಎಲ್ಲ ಹೇರ್ಸ್ಟೈಲ್ಗಳನ್ನು ತನ್ನ ಮೇಲೇ ಪ್ರಯೋಗಿಸಿಕೊಂಡು ನೋಡುಗರ ಗಮನ ಸೆಳೆಯುತ್ತಾರೆ.

1 ಕಾಮೆಂಟ್‌:

Badarinath Palavalli ಹೇಳಿದರು...

ಕೇಶ ವಿನ್ಯಾಸಗಳನ್ನು ಚೆನ್ನಾಗಿಯೇ ಗುರುತಿಸಿದಗದ್ದೀರ.
ಒಳ್ಳೆಯ ಸಂಶೋದನಾ ಲೇಖನ.