First Published: 01 Mar 2014 02:00:00 AM IST
ಅದು 1992.
ಅಪಘಾತದಲ್ಲಿ ಕಾಲಿಗೆ ತೀವ್ರ ಸುಟ್ಟ ಏಟಾಗಿ ಸಿ.ಆರ್.ಸಿಂಹ ಎಂಬ ಚೈತನ್ಯ ಹಾಸಿಗೆಯಲ್ಲೇ
ಕಾಲ ಕಳೆಯಬೇಕಾದ ಅನಿವಾರ್ಯವಿತ್ತು. ಅಷ್ಟೇ ಅಲ್ಲ, ಅವರು ಮತ್ತೆ ಚೇತರಿಸಿಕೊಳ್ಳುವ
ಭರವಸೆ ಕೊಡಲು ವೈದ್ಯರು ಧೈರ್ಯ ಮಾಡಲಿಲ್ಲ. ಹೀಗಾಗಿ ಖಿನ್ನತೆಗೊಳಗಾದ ಸಿಂಹ ಅದರಿಂದ ಹೊರ
ಬರುವ ಪ್ರಯತ್ನವಾಗಿ ಕುವೆಂಪು ಸಾಹಿತ್ಯದ ಮೊರೆ ಹೊಕ್ಕರು. ಅಂದಿನಿಂದ ಅವರ ಬದುಕಿನಲ್ಲಿ
ಕುವೆಂಪು ಹಾಸುಹೊಕ್ಕಾದರು.
ಎದ್ದು ಓಡಾಡುವಂತಾದ ಕೂಡಲೇ ಕುವೆಂಪುರನ್ನು
ಭೇಟಿಯಾಗಲು ಯತ್ನಿಸಿ ಕೊನೆಗೂ ಸಾಹಿತ್ಯದ ಮೂಲಕವೇ ಅವರನ್ನು ಗ್ರಹಿಸಿ, ಸಿಂಹ ಅವರೇ
ಬರೆದು ನಿರ್ದೇಶಿಸಿ ರಂಗದ ಮೇಲೆ 'ರಸಋಷಿ ಕುವೆಂಪು'ವಿನ ಮುಖಕ್ಕೆ ಬೆಳಕು ಹಾಯಿಸೇ
ಬಿಟ್ಟರು. ಆ ಬೆಳಕು, ನೋಡಲು ಕುಪ್ಪಳಿಯ ಪುಟ್ಟಪ್ಪನ ದೇಹಾಕಾರಕ್ಕೆ ಹೊಂದುತ್ತಿದ್ದ
ಕುವೆಂಪು ಪಾತ್ರಾಧಾರಿ ಸಿಂಹರ ಮುಖದ ಮೇಲೆ 100ಕ್ಕೂ ಹೆಚ್ಚು ಬಾರಿ ಬಿದ್ದು ಅಭೂತಪೂರ್ವ
ಯಶಸ್ಸು ತಂದುಕೊಟ್ಟಿತು. ಕುವೆಂಪು ಬದುಕಿದ್ದಾಗಲೇ ಈ ರಂಗಪ್ರಯೋಗವಾಯಿತಾದರೂ
ಅನಾರೋಗ್ಯದಿಂದಾಗಿ ಕುವೆಂಪು ನಾಟಕ ನೋಡಲಾಗಲಿಲ್ಲ.
ತಮ್ಮ ಭಾಷಣಗಳಲ್ಲೆಲ್ಲ
ಕುವೆಂಪುವಿನ ಕತೆ, ಕವಿತೆ, ಕಾದಂಬರಿಯ ಸಾಲುಗಳನ್ನು ಅನಾಯಾಸವಾಗಿ ಉದುರಿಸುತ್ತಿದ್ದ
ಸಿಂಹ ಈ ಬಹುಮುಖಿ ವ್ಯಕ್ತಿತ್ವದೆಡೆಗೆ ಅದೆಷ್ಟು ಆಕರ್ಷಿತರಾಗಿದ್ದರೆಂದರೆ ತಮ್ಮ
ಎಂಟರ್‌ಪ್ರೈಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ರಸಋಷಿ ಕುವೆಂಪು ಎಂಬ
ಚಲನಚಿತ್ರವನ್ನೂ ತಂದರು. ತಮ್ಮ ಮಗ ಋತ್ವಿಕ್ ನಿರ್ದೇಶಿಸಿದ ಈ ಚಿತ್ರದಲ್ಲೂ ತಾವೇ
ಕುವೆಂಪುವಿನ ಪಾತ್ರಧಾರಿಯಾದರು. ಆದರೆ ಅವರೆಲ್ಲೂ ಅಭಿನಯಿಸಲಿಲ್ಲ. ಅವರೇ ಹೇಳುವಂತೆ ಕುವೆಂಪುವೇ ಆಗಬೇಕಾದ ಅದಮ್ಯ ಆಸೆ ಹಾಗು ಅನಿವಾರ್ಯತೆ ಇತ್ತು.
ರಂಗಗಾಥೆ
1942ರಲ್ಲಿ
ಹುಟ್ಟಿದ ಸಿಂಹ 12ನೇ ವಯಸ್ಸಿಗೇ ವೇದಿಕೆ ಏರಿದವರು. ಬಸವನಗುಡಿಯ ನ್ಯಾಷನಲ್ ಕಾಲೇಜಿನ
ವಿದ್ಯಾರ್ಥಿಯಾಗಿ ಹಾಗೂ ಹಳೆ ವಿದ್ಯಾರ್ಥಿಯಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ತಮ್ಮ
ಮೂವತ್ತನೇ ವಯಸ್ಸಿನಲ್ಲಿ ಗೆಳೆಯರನ್ನೆಲ್ಲ ಸೇರಿಸಿಕೊಂಡು 'ನಟರಂಗ' ಎಂಬ
ರಂಗಸಂಸ್ಥೆಯೊಂದನ್ನು ಹುಟ್ಟುಹಾಕಿದರು. ಕಾಕನಕೋಟೆ, ತಲೆದಂಡ, ತುಘಲಕ್, ಸಂಕ್ರಾಂತಿ
ಮುಂತಾದ ನಾಟಕಗಳ ಪ್ರಖ್ಯಾತಿಗೆ ನಿರ್ದೇಶಕ ಮತ್ತು ನಟನಾಗಿ ಓನಾಮ ಹಾಕುತ್ತಲೇ ಸಾಗಿದರು.
30ಕ್ಕೂ ಹೆಚ್ಚು ವರ್ಷ ತುಘಲಕ್ ಆಗಿ ರಂಗದರ್ಬಾರು ಮೆರೆಸಿದ ಹೆಗ್ಗಳಿಕೆ ಸಿಂಹ ಅವರದ್ದು.
ಸಿನಿಮಾರಂಗದಿಂದ
ತಮ್ಮನ್ನು ಗುರುತಿಸುವವರ ಸಂಖ್ಯೆ ಹೆಚ್ಚಿದ್ದರೂ ರಂಗಭೂಮಿಯನ್ನೇ ಕರ್ಮಭೂಮಿ, ಧರ್ಮಭೂಮಿ
ಎಂದು ಭಾವಿಸಿದ ಸಿಂಹ 1983ರಲ್ಲಿ ಮತ್ತೊಂದು ರಂಗಗುಂಪು 'ವೇದಿಕೆ' ಹುಟ್ಟು ಹಾಕಿದರು.
ಏಕವ್ಯಕ್ತಿ ಪ್ರದರ್ಶಕರಾಗಿ 'ಟಿಪಿಕಲ್ ಟಿ.ಪಿ.ಕೈಲಾಸಂ'ನ್ನು ಅಮೆರಿಕ, ಕೆನಡ,
ಇಂಗ್ಲೆಂಡ್ ಮತ್ತಿತರೆ ವಿದೇಶಿ ನೆಲಕ್ಕೂ ಕೊಂಡೊಯ್ದದ್ದು ನಮ್ಮ ರಂಗಭೂಮಿಗೆ ದೊಡ್ಡ
ಮಟ್ಟದ ಯಶಸ್ಸೇ.
'ವೇದಿಕೆ' ಮೀಸೆ ಬಂದೋರು, ಕರ್ಣ, ಭೈರವಿ, ಕೋಲ್ಮಿಂಚು, ಅಗ್ನಿ ಮತ್ತು
ಮಳೆ ಸೇರಿದಂತೆ ಹಲವಾರು ಹೊಸ ನಾಟಕಗಳಿಗೆ ವೇದಿಕೆಯಾಗಿ 'ಸಿಂಹ'ಘರ್ಜನೆ ಜೋರಾಗೇ
ಮೊಳಗಿತು.
ಕೊರಗು
ಸಿ.ಆರ್. ಸಿಂಹ ತಮ್ಮ ಇತ್ತೀಚಿನ ಭಾಷಣಗಳಲ್ಲಿ ರಂಗಭೂಮಿ
ಕಲಾವಿದರ ಹರಸಾಹಸದ ಹೊರತಾಗಿಯೂ ಜನ ರಂಗಭೂಮಿಯಿಂದ ದೂರ ಸರಿಯುತ್ತಿರುವುದರ ಬಗ್ಗೆ ಬೇಸರ
ವ್ಯಕ್ತಪಡಿಸುತ್ತಿದ್ದರು. ಎಪ್ಪತ್ತು ಎಂಬತ್ತರ ದಶಕದಲ್ಲಿ ನಾಟಕ ನೋಡಲು ಬಂದು ರಂಗಭೂಮಿಯ
ಸೀಟುಗಳಿಗೆ ತುಂಬಿ 'ತುಳುಕಿ' ಮರುಪ್ರದರ್ಶನಕ್ಕಾಗಿ ಹಾತೊರೆಯುತ್ತಿದ್ದ ಮಂದಿ
ತ್ತೊಂಬತ್ತರಿಂದೀಚೆಗೆ ಕಳೆದು ಹೋಗಿರುವ ವಿಷಾದ, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು
ಕ್ರಮಗಳನ್ನು ಸೂಚಿಸಿದರೂ ಯಾವುದೇ ಪ್ರತಿಕ್ರಿಯೆ ಸಿಗದ ಹತಾಶೆ ಬಗ್ಗೆ
ಹೇಳಿಕೊಳ್ಳುತ್ತಿದ್ದರು.
ವಯಸ್ಸು ಸಿಂಹದ ಬೇಟೆಯಾಡಿ ಆರ್ಭಟಕ್ಕೆ ಅಂತ್ಯ ಹಾಡಿದೆ. ಆದರೆ ಅಭಿಮಾನಿಗಳ ನೆನಪಿನ ಕಾಡೊಳಗೆ ಸಿಂಹದ ಓಡಾಟ ಗಾಂಭೀರ್ಯದೊಂದಿಗೆ ನಡೆದೇ ಇದೆ.
ರೇಶ್ಮಾ ರಾವ್ ಸೊನ್ಲೆ
2 ಕಾಮೆಂಟ್‌ಗಳು:
ಸಿ. ಆರ್. ಸಿಂಹ ಅವರು ಕುವೆಂಪು ಅವರ ಬಗ್ಗೆ ಇಟ್ಟಿದ್ದ ಅಭಿಮಾನದ ಬಗ್ಗೆ ನನಗೆ ತಿಳಿದಿರಲಿಲ್ಲ. ಒಳ್ಳೆ ಲೇಖನ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ
ಇತ್ತೀಚೆಗೆ ನಿಧನರಾದ ಪ್ರಬುದ್ಧ ನಟ - ಕನ್ನಡ ಕರ್ಮಿ ಸಿ.ಆರ್. ಸಿಂಹರ ಬಗೆಗೆ ಮಾಹಿತಿ ಪೂರ್ಣ ಬರಹ.
ಕಾಮೆಂಟ್ ಪೋಸ್ಟ್ ಮಾಡಿ