ಭಾಮತ್ತೆಗೆ ಬಿತ್ತು ಬೆಡಗಿನ ಕನಸು
ಭಾಮತ್ತೆಗೆ ಧಾರಾವಾಹಿಗಳೇ ಪ್ರಪಂಚ. ಮಧ್ಯಾಹ್ನ ೧ರಿಂದ ಎರಡೂವರೆವರೆಗೆ ಊಟ ಮಾಡುತ್ತಲೇ ಧಾರಾವಾಹಿ ನೋಡುವ ಭಾಮತ್ತೆ, ನಂತರ ಮಲಗೆದ್ದು ಶಾಲೆಯಿಂದ ಬಂದ ಮಕ್ಕಳಿಗೆ ಕಾಫಿ ಮಾಡಿದರೆ ಮತ್ತೆ ೬ರಿಂದ ೧೦ರವರೆಗೂ ಒಂದರ ಹಿಂದೊಂದು ಬರುವ ಸೀರಿಯಲ್‌ಗಳ ಮುಂದೆ ರಿಮೋಟ್ ಹಿಡಿದು ಸೋಫಾಕ್ಕೆ ಆತುಬಿಡುತ್ತಾಳೆ. ಅದಕ್ಕಾಗೇ ಅವಳ ದೇಹದಲ್ಲಿ ಬೊಜ್ಜು ಅಡ್ಡಡ್ಡವಾಗಿ ಇಣುಕಲು ತೊಡಗಿದೆ.
ಈ ಸೀರಿಯಲ್ ಸಂಭ್ರಮದಲ್ಲಿ ಬಡಪಾಯಿ ಗಂಡ ಯಾವಾಗ ಮನೆಗೆ ಬಂದನೋ, ತಿಂದನೋ ಬಿಟ್ಟನೋ ಅವಳಿಗರಿವಿರುವುದಿಲ್ಲ. ಆತ ಕ್ರಿಕೆಟ್ ಸ್ಕೋರ್‌ಗಳನ್ನು ಮೊಬೈಲ್‌ಫೋನ್‌ನಲ್ಲೇ ನೋಡಿ ತೃಪ್ತಿ ಹೊಂದುತ್ತಿದ್ದಾನೆ. ಇನ್ನು ಇವಳು ಧಾರಾವಾಹಿ ನೋಡುವಾಗ ಮಕ್ಕಳು ಬಂದರೆ ಬಯ್ಸಿಕೊಳ್ಳುತ್ತಾರೆ, ರೂಂನಲ್ಲಿ ಕುಳಿತು ಓದಿಕೊಳ್ಳಬೇಕೆಂದು. ಒಂದು ವೇಳೆ ಕರೆಂಟ್ ಕೈ ಕೊಟ್ಟರೆ ಅವಳಿಗೆ ಕೈಕಾಲಾಡುವುದಿಲ್ಲ. ಮರುಬೆಳಗ್ಗೆ ಬರುವ ರಿಟೆಲಿಕ್ಯಾಸ್ಟ್ ನೋಡಲು ಚಡಪಡಿಸುತ್ತಾಳೆ. ಅದೂ ತಪ್ಪಿ ಹೋಯಿತೋ ನೆಂಟರಿಷ್ಟರ ಮನೆಗೆ ಫೋನ್ ಮಾಡಿ, ‘ಜಲಸಾಕ್ಷಿ ನೋಡಿದ್ರಾ, ಅರಿಶಿನಭಾಗ್ಯ ನೋಡಿದ್ರಾ, ಏನಾಯ್ತು? ಅವಳ ಗಂಡ ಬಂದ್ನಾ? ಅವಳ್ಯಾವ ಬಣ್ಣದ ಸೀರೆ ಉಟ್ಟಿದ್ಲು’ ಎಂದೆಲ್ಲ ಪ್ರಶ್ನೆಗಳನ್ನು ಹಾಕಿ ಒಂದಿಂಚೂ ಮುಂದಕ್ಕೇ ಹೋಗಿರದ ಧಾರಾವಾಹಿಯ ಅದೇ ಕತೆಯನ್ನು ಕೇಳಿ ಸಮಾಧಾನ ಪಟ್ಟುಕೊಳ್ಳುತ್ತಾಳೆ. ಅಡುಗೆ ಮಾಡುವಾಗ ಇದ್ದಕ್ಕಿದ್ದಂತೆ ಬದುಕು ಧಾರಾವಾಹಿಯ ಕತೆ ನೆನೆಯುತ್ತಾ ಛೇ ಎಂದು ಸ್ವಗತದಲ್ಲಿ ನೊಂದುಕೊಳ್ಳುತ್ತಾಳೆ. ಧಾರಾವಾಹಿ ನೋಡುತ್ತಾ ನೋಡುತ್ತಾ ಕಣ್ಣೀರು ಹಾಕುವ, ಅವಳಿಗೆ ಹಾಗೇ ಆಗಬೇಕೆಂದು ಶಾಪ ಹಾಕುವ, ಇದ್ದಕ್ಕಿದ್ದಂತೆ ಧಾರಾವಾಹಿಯ ಪಾತ್ರವೊಂದರ ಮೇಲೆ ಅಸಾಧ್ಯ ಸಿಟ್ಟು ಹುಟ್ಟಿಸಿಕೊಂಡು ಒಬ್ಬೊಬ್ಬಳೇ ಎದ್ದು ಹೊಡೆಯುವ ಮಟ್ಟಿಗೆ ಬಿಪಿ ಏರಿಸಿಕೊಳ್ಳುವ ಭಾಮತ್ತೆಗೆ ಧಾರಾವಾಹಿ ನೋಡುವ ಸಮಯದಲ್ಲಿ ಮನೆಗೆ ನೆಂಟರೋ, ಅಕ್ಕಪಕ್ಕದವರೋ ಬಂದರೆ ವಿಪರೀತ ಕಿರಿಕಿರಿ. ಅವರನ್ನು ಸಾಗಹಾಕುವ ಎಲ್ಲ ಪ್ರಯತ್ನಗಳನ್ನೂ ಮಾಡಿದ ಮೇಲೆಯೂ ಅವರು ಹೋಗಲಿಲ್ಲವೆಂದಾದರೆ, ಕ್ಷೇಮಸಮಾಚಾರ ಕೇಳುವುದು ಬಿಟ್ಟು ತನ್ನ ಪಾಡಿಗೆ ತಾನು ಧಾರಾವಾಹಿ ನೋಡುತ್ತಾಳೆ. ಒಂದು ಚಾನೆಲ್‌ನಲ್ಲಿ ಜಾಹಿರಾತು ಬಂದರೆ ಮತ್ತೊಂದು ಹಾಕುತ್ತಾಳೆ. ಬಂದವರ ಪುಣ್ಯದ ಅಕೌಂಟ್ ಭರ್ತಿಯಿದ್ದರೆ, ಎರಡರಲ್ಲೂ ಜಾಹಿರಾತು ಬರುತ್ತಿದ್ದರೆ ಎದ್ದು ಹೋಗಿ ಕಾಫಿ ತಿಂಡಿ ತಂದು ಕೊಡುತ್ತಾಳೆ! ಭಾಮತ್ತೆಯ ಬ್ಲೌಸ್‌ಗಳೆಲ್ಲವೂ ಇತ್ತೀಚೆಗೆ ತರತರ ಚಿತ್ತಾರದಲ್ಲಿ ನೋಡುಗರ ಕಣ್ಸೆಳೆಯುತ್ತವೆ. ಆಕೆ ‘ಸೌಭಾಗ್ಯ’ ಧಾರಾವಾಹಿಯನ್ನು ನೋಡುವುದೇ ಅದರಲ್ಲಿ ಸೌಭಾಗ್ಯ ಹಾಕಿಕೊಳ್ಳುವ ಹೊಸ ನಮೂನೆಯ ಸೀರೆ ಬ್ಲೌಸುಗಳಿಗಾಗಿ ಎಂಬುದು ಆಕೆಯ ಟೈಲರ್ ಕಂಡುಕೊಂಡ ಸತ್ಯ.
ಇಂಥ ಭಾಮತ್ತೆಯ ಬದುಕಿನಲ್ಲಿ ಅಂದು ಒಂದು ಮಹತ್ತರ ಘಟನೆ ಕನಸಿನ ಮೂಲಕ ನಡೆಯಿತು. ಭಾಮತ್ತೆಗೆ ಬಿದ್ದದ್ದು ಅಂತಿಂತಾ ಕನಸಲ್ಲ, ಅವಳ ಪಾಲಿಗೆ ದುಸ್ವಪ್ನವಾಗುವಂಥದು. ಅದರಲ್ಲಿ ದಿನ ಬೆಳಗಾಗುವುದರಲ್ಲಿ ಲೋಕದಲ್ಲಿ ಸೀರಿಯಲ್‌ಗಳು ಬ್ಯಾನ್ ಆಗಿದ್ದವು!
ಭಾಮತ್ತೆಯ ಗಾಬರಿ ಹೇಳತೀರದು. ಟಿವಿಯ ಯಾವ ಚಾನೆಲ್‌ನಲ್ಲೂ ಸೀರಿಯಲ್‌ಗಳೇ ಇಲ್ಲ! ಅತ್ತೆಗೆ ಸಮಯವೇ ಹೋಗುತ್ತಿಲ್ಲ. ದಿನವೊಂದು ಯುಗದಂತೆನಿಸುತ್ತಿದೆ. ಏನು ಮಾಡುವುದು ತೋಚದೆ ಮನೆಕೆಲಸಗಳನ್ನೇ ಹೆಚ್ಚು ಸಮಯ ಕೊಟ್ಟು ಆಸಕ್ತಿಯಿಂದ ಮಾಡತೊಡಗಿದಳು. ಮಕ್ಕಳು ಬಂದೊಡನೆ ಅವರ ಶಾಲೆಯ ಕತೆಗಳನ್ನೆಲ್ಲ ಕೇಳುತ್ತಾ ತಿಂಡಿ ಮಾಡಿಕೊಟ್ಟಳು. ನಂತರ ಏನು ಮಾಡುವುದು ತಿಳಿಯಲಿಲ್ಲ. ಹೀಗಾಗಿ ಕುಳಿತು ಹೋಂವರ್ಕ್ ಮಾಡಿಸಿದಳು. ಅಷ್ಟರಲ್ಲಿ ಮನೆಗೆ ಬಂದ ಗಂಡನನ್ನು ನೋಡಿ ಭಾಮತ್ತೆಯ ಮುಖ ಅರಳಿತು. ಬೆಳಗ್ಗೆಯಿಂದ ಮಾತನಾಡಲು ಯಾರೂ ಸಿಕ್ಕಿರಲಿಲ್ಲವಾಗಿ ಗಂಡನೊಡನೆ ಕುಳಿತು ಮಾತನಾಡಿದಳು. ಅವನ ದಿನಚರಿ ಕೇಳಿದಳು. ಆತನಿಗೋ ಹೆಂಡತಿಗೇನಾಗಿ ಹೋಯ್ತಪ್ಪ ಎಂಬ ಆತಂಕ. ಜೊತೆಗೇ ವಿಚಿತ್ರ ಸಂತೋಷ. ಮನೆ ಎಲ್ಲ ಲಕಲಕ ಎನ್ನುತ್ತಿದೆ. ಇದನ್ನು ಅರಗಿಸಿಕೊಳ್ಳುವುದೇ ಕಷ್ಟವಾಗಿರುವಾಗ, ಮನೆಯಲ್ಲಿ ಬೋರಾಗುತ್ತಿದೆ. ವಾಕಿಂಗ್ ಹೋಗೋಣ ಎಂದ ಪತ್ನಿ! ಸೀರಿಯಲ್ ಇಲ್ಲದ ಲೋಕದಲ್ಲಿ ದಿನಚರಿ ಹೀಗೇ ಮುಂದುವರೆಯುತ್ತಿರಲಾಗಿ, ವಾಕಿಂಗ್‌ನಿಂದ ಶಟಲ್ ಬ್ಯಾಡ್ಮಿಂಟನ್ ಇತ್ಯಾದಿ ಆಟಗಳಲ್ಲಿ ಕಳೆವ ಸಂಜೆಗಳು ಭಾಮತ್ತೆ ಬೊಜ್ಜನ್ನೂ ಕರಗಿಸಿ ಸುಂದರವಾಗಿಸಿದವು.
ಈಗ ‘ಇಡೀ ದಿನ ಮನೆಯಲ್ಲೇ ಇರ್ತಿ, ಆದ್ರೂ ಬಟ್ಟೆ ಒಗೆದಿಲ್ಲ, ತಿನ್ನೋಕ್ ಒಂದ್ ಐಟಂ ಇರಲ್ಲ, ನನ್ ಬಟ್ಟೆ ಯಾವ್ದೆ ಇಸ್ತ್ರಿ ಆಗಿಲ್ಲ, ನೀ ನಂಗ್ ಕೇರ್ ಮಾಡೋದೇ ಇಲ್ಲ’ ಎಂದೆಲ್ಲ ಕ್ಯಾತೆ ತೆಗೆದು ಜಗಳವಾಡಲು ಗಂಡನಿಗೆ ವಿಷಯಗಳೇ ಇರಲಿಲ್ಲ. ಜೊತೆಗೆ ಸುಂದರಿಯಾದ ಕಳಕಳಿಯುಳ್ಳ ಪತ್ನಿ. ಅವರಿಬ್ಬರ ಸಂಬಂಧ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಾಯಿತು. ಮಕ್ಕಳಿಗೆ ಹೋಂವರ್ಕ್ ಮಾಡಿಸೋಕೆ ಸಮಯವಾಗದ ಬಗ್ಗೆ ಪಶ್ಚಾತ್ತಾಪ ಕಾಡುತ್ತಿರಲಿಲ್ಲ. ಅವರ ಪ್ರಾಜೆಕ್ಟ್‌ಗಳಲ್ಲೂ ತುಕ್ಕು ಹಿಡಿದಿದ್ದ ತನ್ನ ಸೃಜನಶೀಲತೆಯನ್ನು ಬಳಸತೊಡಗಿದಳು. ಅಮ್ಮನ ನಿಗಾ ಶುರುವಾದ ಮೇಲೆ ಮಕ್ಕಳು ತರಗತಿಗೆ ಮೊದಲು ಬರತೊಡಗಿದವು.
ಸಮಯ ಕಳೆಯಲು ಅಕ್ಕಪಕ್ಕದವರ ಪರಿಚಯವಾಯಿತು. ಅವರ ಕಷ್ಟಸುಖಗಳಲ್ಲಿ ಭಾಗಿಯಾಗುವ ಮಟ್ಟಿಗೆ ಭಾಮತ್ತೆಗೆ ಸಮಯ ಸಿಕ್ಕಿತು. ಅದಕ್ಕಾಗಿ ಸೀರಿಯಲ್ ಕತೆ ಕೇಳಲೆಂದು ಅತ್ತಿಗೆಗೋ, ನಾದಿನಿಗೋ ಫೋನ್ ಮಾಡಬೇಕಾದ ಅವಶ್ಯಕತೆ ಇರುತ್ತಿರಲಿಲ್ಲ. ಬದಲಿಗೆ ಕ್ಷೇಮಸಮಾಚಾರ ವಿಚಾರಿಸಲು ಫೋನ್‌ಗಳು ಬಳಕೆಯಾಗುತ್ತಿದ್ದವು. ಸಂತೋಷವೂ ಸಿಕ್ಕಿತು. ತಾನು ಸೀರಿಯಲ್‌ಗಳಲ್ಲಿ ನೋಡುತ್ತಿದ್ದ ಪಾತ್ರಗಳೆಲ್ಲ ತನ್ನ ಸುತ್ತಲೇ ಇರುವಂತೆನಿಸಿ, ತಾನೇ ಕಥಾನಾಯಕಿಯಾದಂತೆ ಭಾಸವಾಗತೊಡಗಿತು. ಹೆಂಡತಿಯ ಸೀರೆ, ಬ್ಲೌಸು, ಮ್ಯಾಚಿಂಗ್ ಆಭರಣಗಳ ಬೇಡಿಕೆ ಕುಗ್ಗಿದ್ದರಿಂದ ಆ ಹಣ ಸೇವಿಂಗ್ಸ್‌ಗೆ ಹೋಗತೊಡಗಿತು.
ಇವೆಲ್ಲ ಭಾಮತ್ತೆಯ ವೈಯಕ್ತಿಕ ಜೀವನ ಮಟ್ಟದಲ್ಲಾದರೆ, ಸಾಮಾಜಿಕ ಮಟ್ಟದಲ್ಲಿ ಬೇರೆಯದೇ ಬದಲಾವಣೆಗಳು ಕಂಡವು. ಈ ಸೀರಿಯಲ್‌ಗಳಿಲ್ಲದ ಲೋಕದಲ್ಲಿ ಯಾರೂ ಹೊಸ ಡಿಸೈನ್ ನೋಡುತ್ತಲೂ ಇರಲಿಲ್ಲ. ಹಾಗಾಗಿ ಕೇಳುತ್ತಿರಲಿಲ್ಲವಾದ್ದರಿಂದ ೧೦೦೦ ರು. ಕೇಳುತ್ತಿದ್ದ ಟೈಲರ್‌ಗಳು ೩೦ ರುಪಾಯಿಗೆಲ್ಲ ಬ್ಲೌಸ್ ಹೊಲೆಯತೊಡಗಿದರು. ಈ ಮೂಲಕ ಅಲ್ಲೊಬ್ಬ ಇಲ್ಲೊಬ್ಬ ಹೆಣ್ಣುಮಗಳ ಸ್ಟೈಲಿನ ಜಂಭಕ್ಕೆ ಕಾರಣವಿಲ್ಲದಂತೆ ಸಮಾನತೆ ತರುತ್ತಿದ್ದರು.
ರಿಸೆಪ್ಶನ್‌ಗಳು ಬಾಲಿವುಡ್ ಫಿಲ್ಮಫೇರ್ ಅವಾರ್ಡ್ ಫಂಕ್ಷನ್‌ಗಳಂತೆ ಕಾಣದೆ ಅದ್ಧೂರಿತನಕ್ಕೆ ಕಡಿವಾಣ ಬಿದ್ದಿತು. ಹೀಗಾಗಿ ಕಾಸ್ಟ್ಲಿ ಬಟ್ಟೆಗಳು ಕೊಳ್ಳುವವರಿಲ್ಲದೆ ಬಟ್ಟೆಬರೆಯ ಬೆಲೆ ಕುಸಿತವಾಯಿತು. ಬ್ರಾಂಡೆಡ್ ವಸ್ತುಗಳು ಸಾಮಾನ್ಯರಿಗಲ್ಲ. ಅದೇನಿದ್ದರೂ ಸೆಲೆಬ್ರಿಟಿಗಳ ಸ್ವತ್ತು ಎನಿಸತೊಡಗಿತು. ಎಷ್ಟೇ ಆದರೂ ಸಿನಿಮಾ ಮಂದಿ ತಾರೆಯರು. ಸೀರಿಯಲ್ ಮಂದಿ ಸಾಮಾನ್ಯರಾಗಿದ್ದರಲ್ಲವೇ?
ಫೇರ್‌ನೆಸ್ ಕಂಪನಿಗಳು, ಮೇಕಪ್ ತಯಾರಕರು ತೋಪೆದ್ದು ಹೋಗಿ, ಅಮ್ಮಂದಿರ ಕಾಲದಂತೆ ಇನ್ನೂ ಫೇರ್ ಅಂಡ್ ಲೌವ್ಲಿಯ ೫ ರು. ಪ್ಯಾಕ್‌ನೊಂದಿಗೆ ಮನೆ ಮಹಿಳೆಯರು ತೃಪ್ತಕಾಂತಿ ಹೊಂದುತ್ತಿದ್ದರು. ಹೀಗಾಗಿ ಹೆಣ್ಣುಮಕ್ಕಳು ತಮ್ಮ ಅತೃಪ್ತ ಆತ್ಮವನ್ನು ತೊರೆದು, ಅಂದಚೆಂದದ ಬಗೆಗಿನ ಕೀಳರಿಮೆಯಿಂದ ಹೊರಬಂದರು. ಗ್ಲಿಸರಿನ್ ಕಂಪನಿಗಳು ಕೇಳುವವರಿಲ್ಲದೆ ತಾವೇ ಗ್ಲಿಸರಿನ್ ಇಲ್ಲದೆ ಕಣ್ಣೀರು ಹರಿಸುತ್ತಾ ಕುಳಿತುಕೊಳ್ಳಬೇಕಾದ ಸ್ಥಿತಿ ತಲುಪಿದರು. ಪತಿಪರಮೇಶ್ವರರ ಅನೈತಿಕ ಸಂಬಂಧಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿತು. ಮಕ್ಕಳಲ್ಲಿ ಒಂಟಿತನ ಇನ್ನಿತರೆ ಮಾನಸಿಕ ಸಮಸ್ಯೆಗಳು ಕಡಿಮೆಯಾದವು. ಹೀಗಾಗಿ ಬೀದಿಗೊಂದು ಹುಟ್ಟಿಕೊಂಡಿದ್ದ ಕೌನ್ಸೆಲಿಂಗ್ ಸೆಂಟರ್‌ಗಳು ಮರೆಯಾಗತೊಡಗಿದವು. ಲೈಬ್ರರಿಯ ಬಳಕೆ ಹೆಚ್ಚತೊಡಗಿತು. ಸಹಜವಾಗೇ ಜನರ ಚಿಂತನಾ ಸಾಮರ್ಥ್ಯ ಹೆಚ್ಚತೊಡಗಿತು. ಈಗ ಎಲ್ಲೆಡೆ ಸಂಜೆ ಸೂರ್ಯ ಮುಳುಗುವುದು ವಿಷಯವಾಗುತ್ತಿತ್ತು. ಸಂಬಂಧಗಳು ಸುಧಾರಿಸಿದ್ದರಿಂದ ಆರೋಗ್ಯವಂತ ಸಮಾಜ ಸೃಷ್ಟಿಯಾಗತೊಡಗಿತು. ವಿಚಿತ್ರ ನೆಮ್ಮದಿಯಲ್ಲಿ ತೇಲುತ್ತಿದ್ದ ಭಾಮತ್ತೆಗೆ ಎಚ್ಚರವಾಯಿತು. ಅರೆ! ತಾನು ಕಂಡಿದ್ದು ಕನಸೆಂದು ತಿಳಿದು ಚಡಪಡಿಸತೊಡಗಿದಳು. ಆ ದಿನ ಸಂಜೆ ಭಾಮತ್ತೆಯ ಮನೆಯ ಟಿವಿ ಹಾಗೂ ರಿಮೋಟ್ ಎಂದೂ ಕಾಣದ ವಿಶ್ರಾಂತಿ ಅನುಭವಿಸಿದವು. ಕಂಡ ಕನಸನ್ನು ತನ್ನ ಮನೆಯ ಮಟ್ಟಿಗೆ ನನಸಾಗಿಸುವ ಯತ್ನದಲ್ಲಿ ಭಾಮತ್ತೆ ತೊಡಗಿಕೊಂಡಳು.
(ಯುಗಾದಿ ವಿಶೇಷಾಂಕ - ೨೦೧೫)
- ರೇಶ್ಮಾರಾವ್ ಸೊನ್ಲೆ
1 ಕಾಮೆಂಟ್:
ಅರೆರೇ ಜನ ಮತ್ತೆ ಜೀವನ್ಮುಖಿಗಳಾಗೋ ಸುವರ್ಣ ಸಾಧ್ಯತೆ ಇರುವ ಧಾರವಾಹಿ ವಿಹೀನ ದುನಿಯಾ ಎಷ್ಟು ಸೊಗಸಲ್ಲವೇ!
ಕಾಮೆಂಟ್ ಪೋಸ್ಟ್ ಮಾಡಿ