ಪುಟಗಳು

22.3.15

sujet

ಸೂಜೆಟ್ ಕತ್ರೀನಾ ಜೊರ್ಡಾನ್- ಆಕೆ ಹಾಗೆಂದೇ ಎಲ್ಲರೂ ಅವಳನ್ನು ಗುರುತಿಸಬೇಕೆಂದು ಬಯಸಿದ್ದಳು. ಜೊತೆಗೆ ಒಬ್ಬ ತಾಯಿ, ತಂಗಿ, ಮಗಳಾಗಿ ನನ್ನ ಗುರುತಿಸಿ ಎಂದು ಗೋಗರೆದಿದ್ದಳು. ಆದರೆ ಆ ಗೋಗರೆತಕ್ಕೆ ಗೊರಕೆ ಹೊಡೆದ ಸಮಾಜ, ಕಡೆಗೂ ಅವಳನ್ನು ‘ಪಾರ್ಕ್ ಸ್ಟ್ರೀಟ್’ ಹೆಸರಿನಲ್ಲೇ ಕರೆದು, ಅವಳ ನೋವಿನ ಬೆಂಕಿಗೆ ತುಪ್ಪ ಸುರಿದು ಇಂಚಿಂಚಾಗಿ ಅವಳನ್ನು ಕೊಂದಿತು. ಒಬ್ಬ ಮಹಿಳೆಯ ಗೌರವ, ಮನುಷ್ಯಬದುಕಿನ ಘನತೆ ಗರಿಷ್ಠ ಎಷ್ಟು ಬಾರಿ ಅತ್ಯಾಚಾರಕ್ಕೊಳಗಾಗಬಹುದು ಎಂಬುದಕ್ಕೆ ಸೂಜೆಟ್ ಜೀವನವೇ ಒಂದು ವ್ಯಂಗ್ಯಚಿತ್ರ.
೪೦ ವರ್ಷದ ಸೂಜೆಟ್ ಶುಕ್ರವಾರ ಇಹಲೋಕ ವ್ಯಾಪಾರ ಮುಗಿಸಿದ್ದಾಳೆ. ಮೆನಿಂಜೋಸಿಫಲೈಟಿಸ್‌ಗೆ ಬಲಿಯಾದಳೆಂಬುದು ವೈದ್ಯರು ಬರೆದ ಶರಾ. ಆದರೆ ಆಕೆಯ ಸಾವಿನಲ್ಲಿ ಈ ಅಸ್ವಸ್ಥ ಸಮಾಜದ ಭಾಗವಾದ ನಮ್ಮೆಲ್ಲರ ಪಾಲಿದೆ ಎಂಬ ಸತ್ಯಕ್ಕೆ ತಲೆ ತಗ್ಗಿಸುವಷ್ಟಾದರೂ ಮಾನವೀಯತೆಯನ್ನು ಉಳಿಸಿಕೊಂಡಿದ್ದೇವೆಯೇ?
ದಿಟ್ಟತನಕ್ಕೆ ‘ಕೆಟ್ಟ’ ಪಟ್ಟ ಕಟ್ಟುವ ಸಮಾಜ ನಮ್ಮದು. ಆಕೆ ಪೋಲಿಪುಂಡರಿಗೆ ಹೊಡೆದರೆ ‘ಗಂಡುಬೀರಿ’, ಸಿಂಗಲ್ ಪೇರೆಂಟ್ ಆಗಿ ಅವಳ ಪಾಡಿಗೆ ಅವಳು ಸ್ವಾಭಿಮಾನದಿಂದ ಮಕ್ಕಳನ್ನು ಬೆಳೆಸುತ್ತಿದ್ದರೆ ‘ಗಂಡನ ಬಿಟ್ಟೋಳು, ಹೇಗೆ ಹಣ ಸಂಪಾದಿಸುತ್ತಾಳೋ’, ಅತ್ಯಾಚಾರವಾಗಿದೆ ನ್ಯಾಯ ಕೊಡಿಸಿ ಎಂದರೆ ‘ನೀನೇಕೆ ಅಷ್ಟೊತ್ತಿಗೆ ಕ್ಲಬ್ಬಿಗೆ ಹೋಗಿದ್ದೆ, ನಿನ್ನದೇ ತಪ್ಪು’, ನನ್ನ ತಪ್ಪಿಲ್ಲದ್ದಕ್ಕೆ ನಾನೇಕೆ ಗುರುತು ಮುಚ್ಚಿಟ್ಟುಕೊಂಡು ಓಡಾಡಬೇಕು ಎಂದರೆ ‘ಮಾನಗೆಟ್ಟವಳು’... ಹೆಣ್ಣಿನ ವಿಷಯದಲ್ಲಿ ವಿಷಯ ತಿಳಿಯದೆಯೂ ತೀರ್ಪು ಕೊಡುವ ಸ್ವಾತಂತ್ರ್ಯ ನಮ್ಮ ದೇಶದಲ್ಲಿ!
೨೦೧೨ ಫೆಬ್ರವರಿಯ ಒಂದು ರಾತ್ರಿ ೫ ಜನ ಕಾಮುಕಪಿಶಾಚಿಗಳು ಕಾರಿನಲ್ಲಿ ಸೂಜೆಟ್‌ಳನ್ನು ಬಳಸಿ, ರಸ್ತೆ ಬದಿ ಬಿಸಾಡಿ ಹೋಗಿದ್ದರು. ರಕ್ತಸಿಕ್ತಳಾಗಿದ್ದ ಆಕೆ ಅದಾಗಿ ಮೂರು ದಿನಗಳ ನಂತರ ಎಫ್‌ಐಆರ್ ದಾಖಲಿಸಲು ಪೊಲೀಸ್ ಸ್ಟೇಶನ್‌ಗೆ ಹೋದಳು. ‘ಕತೆ’ ಕೇಳಿದ ಪೊಲೀಸರು ಗಹಗಹಿಸಿ ನಕ್ಕರು, ‘ನಾವೂ ನೈಟ್‌ಕ್ಲಬ್‌ಗೆ ಹೋದರೆ ನಮಗೂ ಅದೃಷ್ಟ ಖುಲಾಯಿಸುತ್ತದೇನೋ, ಇದು ಅತ್ಯಾಚಾರವೇ ಅಂತ ಹೇಗೆ ಹೇಳ್ತೀಯಾ’ ಎಂದು ವ್ಯಂಗ್ಯವಾಡಿದರು. ಇವನ್ನೆಲ್ಲ ನಾವು ಸಿನಿಮಾಗಳಲ್ಲಿ ನೋಡಿರಬಹುದು. ಆದರೆ ಬದುಕು ಸಿನಿಮಾಗಿಂತ ಕ್ರೂರ. ಕೊನೆಗೂ ಎಫ್‌ಐಆರ್ ದಾಖಲಿಸಲು ಐದು ಗಂಟೆಗಳು ಆಕೆ ಪೊಲೀಸರ ‘ಮಾತಿನ ಅತ್ಯಾಚಾರ’ವನ್ನು ತಾಳಬೇಕಾಯಿತು.
ಇದಾಗಿ ೮ ದಿನಗಳ ನಂತರ(ಅಷ್ಟರಲ್ಲಿ ಸಾಕ್ಷ್ಯ ನಾಶವಾಗುವ ಎಲ್ಲ ಸಾಧ್ಯತೆಗಳಿತ್ತು?!) ಮೆಡಿಕಲ್ ಎಕ್ಸಾಮಿನೇಶನ್‌ಗೆ ಕರೆ ಬಂತು. ಇದು ಕಾಟಾಚಾರದ ತನಿಖೆ ಎಂಬುದಕ್ಕೆ ಇಷ್ಟು ಸಾಕಲ್ಲವೇ? ಅಲ್ಲಿ ನಾಲ್ವರು ಮಹಿಳಾ ಪೊಲೀಸರು, ಮೂವರು ವೈದ್ಯರು, ಒಬ್ಬರು ಅಸಿಸ್ಟೆಂಟ್ ಎದುರು ನಗ್ನವಾಗಿ ನಿಲ್ಲಿಸಿ, ಅವಳನ್ನು ಪರೀಕ್ಷೆ ಮಾಡಿ- ಅಂತೂ ‘ಪ್ರೈವೇಟ್ ಅಂಗಗಳಲ್ಲಿ ಗಾಯಗಳಿವೆ’ ಎಂದು ಬರೆದು ಅವಳ ದೂರಿಗೊಂದು ಸಾಕ್ಷ್ಯ ಒದಗಿಸಿದರು. ಆದರೆ ಮಹಿಳೆಯೊಬ್ಬಳನ್ನು ಅಷ್ಟು ಜನರೆದುರು ನಗ್ನ ನಿಲ್ಲಿಸುವಾಗ ಅವಳಿಗಾದ ಮಾನಸಿಕ ಘಾಸಿಗಳು ಅವರ ಪರೀಕ್ಷಾ ಫಲಿತಾಂಶದ ಲೆಕ್ಕಕ್ಕೆ ಸೇರಲಿಲ್ಲ ಬಿಡಿ.
ಅಷ್ಟೇ ಅಲ್ಲ, ನಂತರದ ಸರದಿ ಸರ್ಕಾರದ್ದು. ಮಮತಾ ಬ್ಯಾನರ್ಜಿ ಅವಳನ್ನು ‘ರಾಜ್ಯದ ಶತ್ರು’ ಎಂದು ಕರೆದಿದ್ದಲ್ಲದೆ, ‘ತೃಣಮೂಲ ಕಾಂಗ್ರೆಸ್ ಸರ್ಕಾರದ ಹೆಸರಿಗೆ ಕಳಂಕ ತರಲು ತನ್ನ ಅತ್ಯಾಚಾರದ ಬಗ್ಗೆ ಸುಳ್ಳು ಹೇಳುತ್ತಿದ್ದಾಳೆ. ಅವಳ ಗ್ರಾಹಕ ಸ್ವಲ್ಪ ರೂಡ್ ಆಗಿ ನಡೆದುಕೊಂಡಿದ್ದಾನಷ್ಟೆ’ ಎಂದು ಆರೋಪಿಸುವ ಮೂಲಕ ತನ್ನನ್ನು ‘ದೀದಿ’ ಎಂದು ನಂಬಿ ಬಂದವರಿಗೆ ಸರಿಯಾಗಿಯೇ ಮಾನಹಾನಿ ಮಾಡಿದ್ದರು.
ಇಷ್ಟೆಲ್ಲ ಆದ ಮೇಲೆ ತನ್ನದೂ ಒಂದು ಪಾಲಿರಲಿ ಎಂದು ಕೋರ್ಟ್ ಕೂಡಾ ಅವಳ ಬಗ್ಗೆ ತಿರಸ್ಕಾರ ಭಾವನೆಯಲ್ಲಿ ನಡೆದುಕೊಂಡಿತು. ಮಹಿಳಾ ನ್ಯಾಯಾಧೀಶೆ ಅವಳಿಗೊಂದು ಮನಸ್ಸಿದೆ ಎಂಬುದನ್ನು ಗ್ರಹಿಸಲೇ ಇಲ್ಲ. ಮತ್ತೆ ಮತ್ತೆ ಅತ್ಯಾಚಾರದ ವಿವರಣೆಯನ್ನು ಕೇಳಿ ಹೇಳಿಕೆಯಲ್ಲಿ ವ್ಯತ್ಯಾಸ ಕಾಣುವುದೇ ಎಂದು ಚೆಕ್ ಮಾಡಲಾಯಿತು. ಲಾಯರ್ ಕೋಲಿನ ತುದಿಯಲ್ಲಿ ಆಕೆ ಅತ್ಯಾಚಾರವಾದ ದಿನದಂದು ಧರಿಸಿದ್ದ ಒಳಉಡುಪನ್ನು ಪ್ರದರ್ಶಿಸಿ, ಇದೇನಾ ನೀವು ಅಂದು ಧರಿಸಿದ್ದು ಎಂದು ಕೇಳಿದಾಗ, ದುಃಖ ತಡೆಯಲಾಗದೆ ಬ್ರೇಕ್ ಕೊಡಿ ಎಂದರೂ ನ್ಯಾಯಾಧೀಶರು ನಿಶ್ಕರುಣಿಗಳಂತೆ ವರ್ತಿಸಿದ ಘಟನೆ ಆಕೆಯನ್ನು ಸಂಪೂರ್ಣ ಜರ್ಝರಿತಗೊಳಿಸಿತ್ತು. ಈ ಬಗ್ಗೆ ಅವಳು ನಾನು ಕೋರ್ಟ್‌ನಲ್ಲಿ ಮತ್ತೆ ಮತ್ತೆ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದೆ ಎಂದು ನೊಂದುಕೊಳ್ಳುತ್ತಿದ್ದಳು.
ಅಲ್ಲಿಗೇ ಮುಗಿಯಲಿಲ್ಲ ಅವಳ ಮೇಲಿನ ಮಾನಸಿಕ ಅತ್ಯಾಚಾರಗಳು, ಅತ್ಯಾಚಾರಕ್ಕೊಳಗಾದವಳು ಎಂಬ ಕಾರಣಕ್ಕೆ ರೆಸ್ಟೋರೆಂಟ್ ಒಳಗೆ ಆಕೆಯನ್ನು ಬಿಡಲಿಲ್ಲ. ದಾರಿಯಲ್ಲಿ ಹೋಗುತ್ತಿದ್ದರೆ ಪಾರ್ಕ್‌ಸ್ಟ್ರೀಟ್, ರೇಪ್ ಎಂಬ ಪದಗಳು ಜನರ ಬಾಯಿಂದ ಪದೇ ಪದೆ ಹೊರಟು, ಅವಳೊಂದು ಪ್ರಾಣಿಯೆಂಬಂತೆ ಜನ ನೋಡತೊಡಗಿದರು. ಪಾರ್ಟಿ ಅಟೆಂಡ್ ಮಾಡಲು ‘ರೇಟ್’ ಕೇಳತೊಡಗಿದರು. ಕೆಲಸ ಕೇಳಲು ಹೋದರೆ ಅತ್ಯಾಚಾರಕ್ಕೊಳಗಾದವಳಿಗೆ ಕೆಲಸ ಸಾಧ್ಯವಿಲ್ಲ ಎಂದಿದ್ದಷ್ಟೇ ಅಲ್ಲ, ಆಕೆಯ ಅಕ್ಕ, ಕುಟುಂಬದ ಸದಸ್ಯರು ಎಲ್ಲರೂ ಕೆಲಸ ವಂಚಿತರಾದರು. ಮೀಡಿಯಾಗಳಲ್ಲಿ ಅತ್ಯಾಚಾರಕ್ಕಿಂತ ಹೆಚ್ಚಾಗಿ ಮತ್ತೆ ಮತ್ತೆ ಅಂದು ರಾತ್ರಿ ಹೊರಗೆ ಹೋದದ್ದು ಅವಳ ತಪ್ಪೋ ಅಲ್ಲವೋ ಎಂಬ ಬಗ್ಗೆ ಚರ್ಚೆ ಆಯಿತು. ಮನೆಯ ದೂರವಾಣಿಗೆ ಅವಿರತ ಬ್ಲ್ಯಾಂಕ್‌ಕಾಲ್‌ಗಳು ಬರತೊಡಗಿದವು.
ತನ್ನ ತಪ್ಪಿಲ್ಲದೆಯೂ ಅತ್ಯಾಚಾರಕ್ಕೊಳಗಾದವಳು ಇಷ್ಟೆಲ್ಲ ದೂಷಣೆಗಳನ್ನು ಕೇಳುವಾಗ ಅತ್ತ ಅತ್ಯಾಚಾರಿಗಳಲ್ಲಿ ಇಬ್ಬರು ರಾಜಾರೋಷವಾಗಿ ಓಡಾಡಿಕೊಂಡು ಹಾಯಾಗಿದ್ದರು. ಇನ್ನು ಜೈಲು ಸೇರಿದ ಉಳಿದವರು, ಅಲ್ಲಿಂದಲೇ(!) ಸ್ಮಾರ್ಟ್‌ಫೋನ್ ಬಳಸಿ ಫೇಸ್‌ಬುಕ್‌ಗೆ ತಮ್ಮ ಬೈಸೆಪ್‌ಗಳ ಫೋಟೋ ಹಾಕಿ ನಾನು ವಿಲ್ಲನ್ ತರಾ ಕಾಣುತ್ತೇನಾ ಎಂದು ಕೇಳಿ ಒಂದಿಷ್ಟು ‘ಲೈಕ್’ಗಳನ್ನು ಪಡೆದುಕೊಳ್ಳುವಲ್ಲಿ ಸಫಲರಾದರು!
ಅಬ್ಬಬ್ಬಾ! ೧೬, ೧೮ ವರ್ಷದ ಹೆಣ್ಣುಮಕ್ಕಳ ತಾಯಿಯೊಬ್ಬಳಿಗೆ ಇಷ್ಟೆಲ್ಲವನ್ನು ಕೇಳಿಕೊಂಡೂ ಎದುರಿಸುವ ಧೈರ್ಯ ಬಂದಿದ್ದಾದರೂ ಎಲ್ಲಿಂದ? ಆಕೆ ಮುದುರಿ ಕೂರಲಿಲ್ಲ. ಬದಲಿಗೆ ಕೂಗಿ ಹೇಳಿದಳು, ‘ನನ್ನ ತಪ್ಪಿಲ್ಲದಿರುವಾಗ ನಾನೇಕೆ ನನ್ನ ಐಡೆಂಟಿಟಿ ಮುಚ್ಚಿಡಲಿ? ನಾನು ಮಾಡದ ತಪ್ಪಿಗೆ ನಾನೇಕೆ ನಾಚಿಕೆ ಪಡಲಿ? ನಾನು ಹಿಂಸೆ ಹಾಗೂ ಅತ್ಯಾಚಾರಕ್ಕೊಳಗಾಗಿದ್ದೇನೆ. ಇದರ ವಿರುದ್ಧ ಹೋರಾಡುತ್ತೇನೆ’ ಎಂದು. ನಾನು ‘ಪಾರ್ಕ್ ಸ್ಟ್ರೀಟ್’ ಅಲ್ಲ, ನಾನು ಸೂಜೆಟ್ ಜೊರ್ಡಾನ್ ಎಂದು. ತನ್ನ ಹೆಸರನ್ನು ವಾಪಸ್ ಪಡೆಯುವುದಷ್ಟೇ ಅಲ್ಲ, ತನ್ನಂಥ ಇತರರ ಹೆಸರನ್ನೂ ಗಳಿಸಿಕೊಡಲು ಹೋರಾಡಿದಳು. ಸರಣಿ ಅತ್ಯಾಚಾರ ಹತ್ಯೆಗಳನ್ನು ಖಂಡಿಸಿ ಬೀದಿಗಿಳಿದಳು. ಅಬಲೆಯರಿಗೆ, ಗಂಡಸಿನ ಕೈಯ್ಯಲ್ಲಿ ನುಜ್ಜುಗುಜ್ಜಾದವರಿಗೆ ಸ್ವತಃ ಹೋಗಿ ಸಾಂತ್ವಾನ ಹೇಳಿದಳು. ಅವರಿಗಾಗಿ ಹೆಲ್ಪ್‌ಲೈನ್ ತೆರೆದಳು.
ಭಾರತದಲ್ಲೇ ೨೦೦೬ರಿಂದ ೨೦೧೧ರವರೆಗೆ ಎರಡನೇ ಅತಿ ಹೆಚ್ಚು ಅತ್ಯಾಚಾರ ಪ್ರಕರಣಗಳು ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು, ೨೦೧೨ರಲ್ಲಿ ಈ ವಿಷಯದಲ್ಲಿ ನಂ.೧ ಪಟ್ಟ ತಲುಪಿದ ರಾಜ್ಯವೊಂದರ ಸಾಧನೆಯ ಹಿಂದಿನ ಗುಟ್ಟು ತಿಳಿಯಲು ಈ ಒಬ್ಬ ಹೆಣ್ಣುಮಗಳ ವಿಷಯದಲ್ಲಿ ಅದು ನಡೆದುಕೊಂಡ ರೀತಿಯೇ ಸಾಕಲ್ಲವೇ?
‘ಅವಳು ಹೋರಾಟಗಾರ್ತಿ. ಆದರೆ ಜನ ಅವಳ ಧೈರ್ಯವನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸಿದರು. ಅವಳಿಗೂ ಅಳಬೇಕಿತ್ತು, ದುಃಖ ತೋಡಿಕೊಳ್ಳಬೇಕಿತ್ತು. ಇನ್ನೊಬ್ಬರಿಗೆ ಮಾದರಿಯಾಗುವುದಕ್ಕಿಂತ ಹೆಚ್ಚಾಗಿ ತನ್ನನ್ನು ಮನುಷ್ಯಳಾಗಿ ಕಾಣಲಿ ಎಂಬ ಆಸೆಯಿತ್ತು. ಆದರೆ ಅವಳು ಕೇವಲ ಅತ್ಯಾಚಾರದ ಬಲಿಪಶುವಾಗದೆ, ಅದನ್ನು ವಿರೋಧಿಸಿದ್ದಕ್ಕಾಗಿ ವ್ಯವಸ್ಥೆಯ ಬಲಿಪಶುವಾದಳು’ ಎನ್ನುತ್ತಾನೆ ಆಕೆಯ ಆಪ್ತ ಗೆಳೆಯ. ಖಿನ್ನತೆಯೇ ಕಾಯಿಲೆಗಳನ್ನು ಆಹ್ವಾನಿಸುತ್ತದೆ. ಹಾಗೆಯೇ ಬಂದದ್ದು ಮೆನಿಂಜೋಸಿಫಲೈಟಿಸ್ ಕೂಡಾ. ಅಟ್‌ಲೀಸ್ಟ್, ನಾವವಳನ್ನು ಸಂತೋಷವಾಗಿ ಸಾಯಲೂ ಬಿಡಲಿಲ್ಲ.
ಅವಳ ಮೇಲೆ ಕೇವಲ ಕೆಲ ಪುಂಡಪೋಕರಿಗಳಲ್ಲ, ಸಮಾಜ, ಕಾನೂನು, ಸರ್ಕಾರ, ಮೀಡಿಯಾ, ಅವಳ ಕತೆಯನ್ನು ನಂಬದವರೆಲ್ಲರೂ ಅತ್ಯಾಚಾರವೆಸಗಿದ್ದಾರೆ. ಭಾರತ ಅತ್ಯಾಚಾರಕ್ಕೊಳಗಾದವರೆಡೆಗಿನ ತನ್ನ ಮನಸ್ಥಿತಿಯಿಂದಾಗಿ ಯಶಸ್ವಿಯಾಗಿ ಹೆಣ್ಣುಮಗಳೊಬ್ಬಳನ್ನೂ, ಅವಳ ಗೌರವವನ್ನೂ ಕೊಂದಿದೆ.

16.3.15

ಸೀರಿಯಲ್‌ಗಳಿಲ್ಲದ ಲೋಕದಲ್ಲಿ


ಭಾಮತ್ತೆಗೆ ಬಿತ್ತು ಬೆಡಗಿನ ಕನಸು



ಭಾಮತ್ತೆಗೆ ಧಾರಾವಾಹಿಗಳೇ ಪ್ರಪಂಚ. ಮಧ್ಯಾಹ್ನ ೧ರಿಂದ ಎರಡೂವರೆವರೆಗೆ ಊಟ ಮಾಡುತ್ತಲೇ ಧಾರಾವಾಹಿ ನೋಡುವ ಭಾಮತ್ತೆ, ನಂತರ ಮಲಗೆದ್ದು ಶಾಲೆಯಿಂದ ಬಂದ ಮಕ್ಕಳಿಗೆ ಕಾಫಿ ಮಾಡಿದರೆ ಮತ್ತೆ ೬ರಿಂದ ೧೦ರವರೆಗೂ ಒಂದರ ಹಿಂದೊಂದು ಬರುವ ಸೀರಿಯಲ್‌ಗಳ ಮುಂದೆ ರಿಮೋಟ್ ಹಿಡಿದು ಸೋಫಾಕ್ಕೆ ಆತುಬಿಡುತ್ತಾಳೆ. ಅದಕ್ಕಾಗೇ ಅವಳ ದೇಹದಲ್ಲಿ ಬೊಜ್ಜು ಅಡ್ಡಡ್ಡವಾಗಿ ಇಣುಕಲು ತೊಡಗಿದೆ.
ಈ ಸೀರಿಯಲ್ ಸಂಭ್ರಮದಲ್ಲಿ ಬಡಪಾಯಿ ಗಂಡ ಯಾವಾಗ ಮನೆಗೆ ಬಂದನೋ, ತಿಂದನೋ ಬಿಟ್ಟನೋ ಅವಳಿಗರಿವಿರುವುದಿಲ್ಲ. ಆತ ಕ್ರಿಕೆಟ್ ಸ್ಕೋರ್‌ಗಳನ್ನು  ಮೊಬೈಲ್‌ಫೋನ್‌ನಲ್ಲೇ ನೋಡಿ ತೃಪ್ತಿ ಹೊಂದುತ್ತಿದ್ದಾನೆ. ಇನ್ನು ಇವಳು ಧಾರಾವಾಹಿ ನೋಡುವಾಗ ಮಕ್ಕಳು ಬಂದರೆ ಬಯ್ಸಿಕೊಳ್ಳುತ್ತಾರೆ, ರೂಂನಲ್ಲಿ ಕುಳಿತು ಓದಿಕೊಳ್ಳಬೇಕೆಂದು. ಒಂದು ವೇಳೆ ಕರೆಂಟ್ ಕೈ ಕೊಟ್ಟರೆ ಅವಳಿಗೆ ಕೈಕಾಲಾಡುವುದಿಲ್ಲ. ಮರುಬೆಳಗ್ಗೆ ಬರುವ ರಿಟೆಲಿಕ್ಯಾಸ್ಟ್ ನೋಡಲು ಚಡಪಡಿಸುತ್ತಾಳೆ. ಅದೂ ತಪ್ಪಿ ಹೋಯಿತೋ ನೆಂಟರಿಷ್ಟರ ಮನೆಗೆ ಫೋನ್ ಮಾಡಿ, ‘ಜಲಸಾಕ್ಷಿ ನೋಡಿದ್ರಾ, ಅರಿಶಿನಭಾಗ್ಯ ನೋಡಿದ್ರಾ, ಏನಾಯ್ತು? ಅವಳ ಗಂಡ ಬಂದ್ನಾ? ಅವಳ್ಯಾವ ಬಣ್ಣದ ಸೀರೆ ಉಟ್ಟಿದ್ಲು’ ಎಂದೆಲ್ಲ ಪ್ರಶ್ನೆಗಳನ್ನು ಹಾಕಿ ಒಂದಿಂಚೂ ಮುಂದಕ್ಕೇ ಹೋಗಿರದ ಧಾರಾವಾಹಿಯ ಅದೇ ಕತೆಯನ್ನು ಕೇಳಿ ಸಮಾಧಾನ ಪಟ್ಟುಕೊಳ್ಳುತ್ತಾಳೆ. ಅಡುಗೆ ಮಾಡುವಾಗ ಇದ್ದಕ್ಕಿದ್ದಂತೆ ಬದುಕು ಧಾರಾವಾಹಿಯ ಕತೆ ನೆನೆಯುತ್ತಾ ಛೇ ಎಂದು ಸ್ವಗತದಲ್ಲಿ ನೊಂದುಕೊಳ್ಳುತ್ತಾಳೆ. ಧಾರಾವಾಹಿ ನೋಡುತ್ತಾ ನೋಡುತ್ತಾ ಕಣ್ಣೀರು ಹಾಕುವ, ಅವಳಿಗೆ ಹಾಗೇ ಆಗಬೇಕೆಂದು ಶಾಪ ಹಾಕುವ, ಇದ್ದಕ್ಕಿದ್ದಂತೆ ಧಾರಾವಾಹಿಯ ಪಾತ್ರವೊಂದರ ಮೇಲೆ ಅಸಾಧ್ಯ ಸಿಟ್ಟು ಹುಟ್ಟಿಸಿಕೊಂಡು ಒಬ್ಬೊಬ್ಬಳೇ ಎದ್ದು ಹೊಡೆಯುವ ಮಟ್ಟಿಗೆ ಬಿಪಿ ಏರಿಸಿಕೊಳ್ಳುವ ಭಾಮತ್ತೆಗೆ ಧಾರಾವಾಹಿ ನೋಡುವ ಸಮಯದಲ್ಲಿ ಮನೆಗೆ ನೆಂಟರೋ, ಅಕ್ಕಪಕ್ಕದವರೋ ಬಂದರೆ ವಿಪರೀತ ಕಿರಿಕಿರಿ. ಅವರನ್ನು ಸಾಗಹಾಕುವ ಎಲ್ಲ ಪ್ರಯತ್ನಗಳನ್ನೂ ಮಾಡಿದ ಮೇಲೆಯೂ ಅವರು ಹೋಗಲಿಲ್ಲವೆಂದಾದರೆ, ಕ್ಷೇಮಸಮಾಚಾರ ಕೇಳುವುದು ಬಿಟ್ಟು ತನ್ನ ಪಾಡಿಗೆ ತಾನು ಧಾರಾವಾಹಿ ನೋಡುತ್ತಾಳೆ. ಒಂದು ಚಾನೆಲ್‌ನಲ್ಲಿ ಜಾಹಿರಾತು ಬಂದರೆ ಮತ್ತೊಂದು ಹಾಕುತ್ತಾಳೆ. ಬಂದವರ ಪುಣ್ಯದ ಅಕೌಂಟ್ ಭರ್ತಿಯಿದ್ದರೆ, ಎರಡರಲ್ಲೂ ಜಾಹಿರಾತು ಬರುತ್ತಿದ್ದರೆ ಎದ್ದು ಹೋಗಿ ಕಾಫಿ ತಿಂಡಿ ತಂದು ಕೊಡುತ್ತಾಳೆ! ಭಾಮತ್ತೆಯ ಬ್ಲೌಸ್‌ಗಳೆಲ್ಲವೂ ಇತ್ತೀಚೆಗೆ ತರತರ ಚಿತ್ತಾರದಲ್ಲಿ ನೋಡುಗರ ಕಣ್ಸೆಳೆಯುತ್ತವೆ. ಆಕೆ ‘ಸೌಭಾಗ್ಯ’ ಧಾರಾವಾಹಿಯನ್ನು ನೋಡುವುದೇ ಅದರಲ್ಲಿ ಸೌಭಾಗ್ಯ ಹಾಕಿಕೊಳ್ಳುವ ಹೊಸ ನಮೂನೆಯ ಸೀರೆ ಬ್ಲೌಸುಗಳಿಗಾಗಿ ಎಂಬುದು ಆಕೆಯ ಟೈಲರ್ ಕಂಡುಕೊಂಡ ಸತ್ಯ.
ಇಂಥ ಭಾಮತ್ತೆಯ ಬದುಕಿನಲ್ಲಿ ಅಂದು ಒಂದು ಮಹತ್ತರ ಘಟನೆ ಕನಸಿನ ಮೂಲಕ ನಡೆಯಿತು. ಭಾಮತ್ತೆಗೆ ಬಿದ್ದದ್ದು ಅಂತಿಂತಾ ಕನಸಲ್ಲ, ಅವಳ ಪಾಲಿಗೆ ದುಸ್ವಪ್ನವಾಗುವಂಥದು. ಅದರಲ್ಲಿ ದಿನ ಬೆಳಗಾಗುವುದರಲ್ಲಿ ಲೋಕದಲ್ಲಿ ಸೀರಿಯಲ್‌ಗಳು ಬ್ಯಾನ್ ಆಗಿದ್ದವು!
ಭಾಮತ್ತೆಯ ಗಾಬರಿ ಹೇಳತೀರದು. ಟಿವಿಯ ಯಾವ ಚಾನೆಲ್‌ನಲ್ಲೂ ಸೀರಿಯಲ್‌ಗಳೇ ಇಲ್ಲ! ಅತ್ತೆಗೆ ಸಮಯವೇ ಹೋಗುತ್ತಿಲ್ಲ. ದಿನವೊಂದು ಯುಗದಂತೆನಿಸುತ್ತಿದೆ. ಏನು ಮಾಡುವುದು ತೋಚದೆ ಮನೆಕೆಲಸಗಳನ್ನೇ ಹೆಚ್ಚು ಸಮಯ ಕೊಟ್ಟು ಆಸಕ್ತಿಯಿಂದ ಮಾಡತೊಡಗಿದಳು. ಮಕ್ಕಳು ಬಂದೊಡನೆ ಅವರ ಶಾಲೆಯ ಕತೆಗಳನ್ನೆಲ್ಲ ಕೇಳುತ್ತಾ ತಿಂಡಿ ಮಾಡಿಕೊಟ್ಟಳು. ನಂತರ ಏನು ಮಾಡುವುದು ತಿಳಿಯಲಿಲ್ಲ. ಹೀಗಾಗಿ ಕುಳಿತು ಹೋಂವರ್ಕ್ ಮಾಡಿಸಿದಳು. ಅಷ್ಟರಲ್ಲಿ ಮನೆಗೆ ಬಂದ ಗಂಡನನ್ನು ನೋಡಿ ಭಾಮತ್ತೆಯ ಮುಖ ಅರಳಿತು. ಬೆಳಗ್ಗೆಯಿಂದ ಮಾತನಾಡಲು ಯಾರೂ ಸಿಕ್ಕಿರಲಿಲ್ಲವಾಗಿ ಗಂಡನೊಡನೆ ಕುಳಿತು ಮಾತನಾಡಿದಳು. ಅವನ ದಿನಚರಿ ಕೇಳಿದಳು. ಆತನಿಗೋ ಹೆಂಡತಿಗೇನಾಗಿ ಹೋಯ್ತಪ್ಪ ಎಂಬ ಆತಂಕ. ಜೊತೆಗೇ ವಿಚಿತ್ರ ಸಂತೋಷ. ಮನೆ ಎಲ್ಲ ಲಕಲಕ ಎನ್ನುತ್ತಿದೆ. ಇದನ್ನು ಅರಗಿಸಿಕೊಳ್ಳುವುದೇ ಕಷ್ಟವಾಗಿರುವಾಗ, ಮನೆಯಲ್ಲಿ ಬೋರಾಗುತ್ತಿದೆ. ವಾಕಿಂಗ್ ಹೋಗೋಣ ಎಂದ ಪತ್ನಿ! ಸೀರಿಯಲ್ ಇಲ್ಲದ ಲೋಕದಲ್ಲಿ ದಿನಚರಿ ಹೀಗೇ ಮುಂದುವರೆಯುತ್ತಿರಲಾಗಿ, ವಾಕಿಂಗ್‌ನಿಂದ ಶಟಲ್ ಬ್ಯಾಡ್ಮಿಂಟನ್ ಇತ್ಯಾದಿ ಆಟಗಳಲ್ಲಿ ಕಳೆವ ಸಂಜೆಗಳು ಭಾಮತ್ತೆ ಬೊಜ್ಜನ್ನೂ ಕರಗಿಸಿ ಸುಂದರವಾಗಿಸಿದವು.
ಈಗ ‘ಇಡೀ ದಿನ ಮನೆಯಲ್ಲೇ ಇರ್ತಿ, ಆದ್ರೂ ಬಟ್ಟೆ ಒಗೆದಿಲ್ಲ, ತಿನ್ನೋಕ್ ಒಂದ್ ಐಟಂ ಇರಲ್ಲ, ನನ್ ಬಟ್ಟೆ ಯಾವ್ದೆ ಇಸ್ತ್ರಿ ಆಗಿಲ್ಲ, ನೀ ನಂಗ್ ಕೇರ್ ಮಾಡೋದೇ ಇಲ್ಲ’ ಎಂದೆಲ್ಲ ಕ್ಯಾತೆ ತೆಗೆದು ಜಗಳವಾಡಲು ಗಂಡನಿಗೆ ವಿಷಯಗಳೇ ಇರಲಿಲ್ಲ. ಜೊತೆಗೆ ಸುಂದರಿಯಾದ ಕಳಕಳಿಯುಳ್ಳ ಪತ್ನಿ. ಅವರಿಬ್ಬರ ಸಂಬಂಧ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಾಯಿತು. ಮಕ್ಕಳಿಗೆ ಹೋಂವರ್ಕ್ ಮಾಡಿಸೋಕೆ ಸಮಯವಾಗದ ಬಗ್ಗೆ ಪಶ್ಚಾತ್ತಾಪ ಕಾಡುತ್ತಿರಲಿಲ್ಲ. ಅವರ ಪ್ರಾಜೆಕ್ಟ್‌ಗಳಲ್ಲೂ ತುಕ್ಕು ಹಿಡಿದಿದ್ದ ತನ್ನ ಸೃಜನಶೀಲತೆಯನ್ನು ಬಳಸತೊಡಗಿದಳು. ಅಮ್ಮನ ನಿಗಾ ಶುರುವಾದ ಮೇಲೆ ಮಕ್ಕಳು ತರಗತಿಗೆ ಮೊದಲು ಬರತೊಡಗಿದವು.
ಸಮಯ ಕಳೆಯಲು ಅಕ್ಕಪಕ್ಕದವರ ಪರಿಚಯವಾಯಿತು. ಅವರ ಕಷ್ಟಸುಖಗಳಲ್ಲಿ ಭಾಗಿಯಾಗುವ ಮಟ್ಟಿಗೆ ಭಾಮತ್ತೆಗೆ ಸಮಯ ಸಿಕ್ಕಿತು. ಅದಕ್ಕಾಗಿ ಸೀರಿಯಲ್ ಕತೆ ಕೇಳಲೆಂದು ಅತ್ತಿಗೆಗೋ, ನಾದಿನಿಗೋ ಫೋನ್ ಮಾಡಬೇಕಾದ ಅವಶ್ಯಕತೆ ಇರುತ್ತಿರಲಿಲ್ಲ. ಬದಲಿಗೆ ಕ್ಷೇಮಸಮಾಚಾರ ವಿಚಾರಿಸಲು ಫೋನ್‌ಗಳು ಬಳಕೆಯಾಗುತ್ತಿದ್ದವು. ಸಂತೋಷವೂ ಸಿಕ್ಕಿತು. ತಾನು ಸೀರಿಯಲ್‌ಗಳಲ್ಲಿ ನೋಡುತ್ತಿದ್ದ ಪಾತ್ರಗಳೆಲ್ಲ ತನ್ನ ಸುತ್ತಲೇ ಇರುವಂತೆನಿಸಿ, ತಾನೇ ಕಥಾನಾಯಕಿಯಾದಂತೆ ಭಾಸವಾಗತೊಡಗಿತು. ಹೆಂಡತಿಯ ಸೀರೆ, ಬ್ಲೌಸು, ಮ್ಯಾಚಿಂಗ್ ಆಭರಣಗಳ ಬೇಡಿಕೆ ಕುಗ್ಗಿದ್ದರಿಂದ ಆ ಹಣ ಸೇವಿಂಗ್ಸ್‌ಗೆ ಹೋಗತೊಡಗಿತು.
ಇವೆಲ್ಲ ಭಾಮತ್ತೆಯ ವೈಯಕ್ತಿಕ ಜೀವನ ಮಟ್ಟದಲ್ಲಾದರೆ, ಸಾಮಾಜಿಕ ಮಟ್ಟದಲ್ಲಿ ಬೇರೆಯದೇ ಬದಲಾವಣೆಗಳು ಕಂಡವು. ಈ ಸೀರಿಯಲ್‌ಗಳಿಲ್ಲದ ಲೋಕದಲ್ಲಿ ಯಾರೂ ಹೊಸ ಡಿಸೈನ್ ನೋಡುತ್ತಲೂ ಇರಲಿಲ್ಲ. ಹಾಗಾಗಿ ಕೇಳುತ್ತಿರಲಿಲ್ಲವಾದ್ದರಿಂದ ೧೦೦೦ ರು. ಕೇಳುತ್ತಿದ್ದ ಟೈಲರ್‌ಗಳು ೩೦ ರುಪಾಯಿಗೆಲ್ಲ ಬ್ಲೌಸ್ ಹೊಲೆಯತೊಡಗಿದರು. ಈ ಮೂಲಕ ಅಲ್ಲೊಬ್ಬ ಇಲ್ಲೊಬ್ಬ ಹೆಣ್ಣುಮಗಳ ಸ್ಟೈಲಿನ ಜಂಭಕ್ಕೆ ಕಾರಣವಿಲ್ಲದಂತೆ ಸಮಾನತೆ ತರುತ್ತಿದ್ದರು.
ರಿಸೆಪ್ಶನ್‌ಗಳು ಬಾಲಿವುಡ್ ಫಿಲ್ಮಫೇರ್ ಅವಾರ್ಡ್ ಫಂಕ್ಷನ್‌ಗಳಂತೆ ಕಾಣದೆ ಅದ್ಧೂರಿತನಕ್ಕೆ ಕಡಿವಾಣ ಬಿದ್ದಿತು. ಹೀಗಾಗಿ ಕಾಸ್ಟ್ಲಿ ಬಟ್ಟೆಗಳು ಕೊಳ್ಳುವವರಿಲ್ಲದೆ ಬಟ್ಟೆಬರೆಯ ಬೆಲೆ ಕುಸಿತವಾಯಿತು. ಬ್ರಾಂಡೆಡ್ ವಸ್ತುಗಳು ಸಾಮಾನ್ಯರಿಗಲ್ಲ. ಅದೇನಿದ್ದರೂ ಸೆಲೆಬ್ರಿಟಿಗಳ ಸ್ವತ್ತು ಎನಿಸತೊಡಗಿತು. ಎಷ್ಟೇ ಆದರೂ ಸಿನಿಮಾ ಮಂದಿ ತಾರೆಯರು. ಸೀರಿಯಲ್ ಮಂದಿ ಸಾಮಾನ್ಯರಾಗಿದ್ದರಲ್ಲವೇ?
 ಫೇರ್‌ನೆಸ್ ಕಂಪನಿಗಳು, ಮೇಕಪ್ ತಯಾರಕರು ತೋಪೆದ್ದು ಹೋಗಿ, ಅಮ್ಮಂದಿರ ಕಾಲದಂತೆ ಇನ್ನೂ ಫೇರ್ ಅಂಡ್ ಲೌವ್ಲಿಯ ೫ ರು. ಪ್ಯಾಕ್‌ನೊಂದಿಗೆ ಮನೆ ಮಹಿಳೆಯರು ತೃಪ್ತಕಾಂತಿ ಹೊಂದುತ್ತಿದ್ದರು. ಹೀಗಾಗಿ ಹೆಣ್ಣುಮಕ್ಕಳು ತಮ್ಮ ಅತೃಪ್ತ ಆತ್ಮವನ್ನು ತೊರೆದು, ಅಂದಚೆಂದದ ಬಗೆಗಿನ ಕೀಳರಿಮೆಯಿಂದ ಹೊರಬಂದರು. ಗ್ಲಿಸರಿನ್ ಕಂಪನಿಗಳು ಕೇಳುವವರಿಲ್ಲದೆ ತಾವೇ ಗ್ಲಿಸರಿನ್ ಇಲ್ಲದೆ ಕಣ್ಣೀರು ಹರಿಸುತ್ತಾ ಕುಳಿತುಕೊಳ್ಳಬೇಕಾದ ಸ್ಥಿತಿ ತಲುಪಿದರು. ಪತಿಪರಮೇಶ್ವರರ ಅನೈತಿಕ ಸಂಬಂಧಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿತು. ಮಕ್ಕಳಲ್ಲಿ ಒಂಟಿತನ ಇನ್ನಿತರೆ ಮಾನಸಿಕ ಸಮಸ್ಯೆಗಳು ಕಡಿಮೆಯಾದವು. ಹೀಗಾಗಿ ಬೀದಿಗೊಂದು ಹುಟ್ಟಿಕೊಂಡಿದ್ದ ಕೌನ್ಸೆಲಿಂಗ್ ಸೆಂಟರ್‌ಗಳು ಮರೆಯಾಗತೊಡಗಿದವು. ಲೈಬ್ರರಿಯ ಬಳಕೆ ಹೆಚ್ಚತೊಡಗಿತು. ಸಹಜವಾಗೇ ಜನರ ಚಿಂತನಾ ಸಾಮರ್ಥ್ಯ ಹೆಚ್ಚತೊಡಗಿತು. ಈಗ ಎಲ್ಲೆಡೆ ಸಂಜೆ ಸೂರ್ಯ ಮುಳುಗುವುದು ವಿಷಯವಾಗುತ್ತಿತ್ತು. ಸಂಬಂಧಗಳು ಸುಧಾರಿಸಿದ್ದರಿಂದ ಆರೋಗ್ಯವಂತ ಸಮಾಜ ಸೃಷ್ಟಿಯಾಗತೊಡಗಿತು. ವಿಚಿತ್ರ ನೆಮ್ಮದಿಯಲ್ಲಿ ತೇಲುತ್ತಿದ್ದ ಭಾಮತ್ತೆಗೆ ಎಚ್ಚರವಾಯಿತು. ಅರೆ! ತಾನು ಕಂಡಿದ್ದು ಕನಸೆಂದು ತಿಳಿದು ಚಡಪಡಿಸತೊಡಗಿದಳು. ಆ ದಿನ ಸಂಜೆ ಭಾಮತ್ತೆಯ ಮನೆಯ ಟಿವಿ ಹಾಗೂ ರಿಮೋಟ್ ಎಂದೂ ಕಾಣದ ವಿಶ್ರಾಂತಿ ಅನುಭವಿಸಿದವು. ಕಂಡ ಕನಸನ್ನು ತನ್ನ ಮನೆಯ ಮಟ್ಟಿಗೆ ನನಸಾಗಿಸುವ ಯತ್ನದಲ್ಲಿ ಭಾಮತ್ತೆ ತೊಡಗಿಕೊಂಡಳು.

(ಯುಗಾದಿ ವಿಶೇಷಾಂಕ - ೨೦೧೫)
- ರೇಶ್ಮಾರಾವ್ ಸೊನ್ಲೆ

4.3.15

first time on opped :) rape

ನಮ್ಮ ನಡುವೆ ‘ನಾನು ಮುಖೇಶ್. ತುಂಬಾ ತಂಬಾಕು ಅಗೀತಿದ್ದೆ. ಬಾಯಿ ಕ್ಯಾನ್ಸರ್‌ಗೆ ಬಲಿಯಾದೆ’ ಎಂದು ತಂಬಾಕು ಸೇವನೆಗಾಗಿ ಪಶ್ಚಾತ್ತಾಪ ಪಡುವ ಮುಖೇಶ್ ಒಂದೆಡೆಯಾದರೆ, ‘ನಾನು ಮುಖೇಶ್. ನಿರ್ಭಯಾ ಅತ್ಯಾಚಾರ ಮಾಡಿದ್ದೆ. ಆದರೆ ರಾತ್ರಿ ಹೊತ್ತಿನಲ್ಲಿ ಹಾಗೆ ಕಣ್ಣಿಗೆ ಬಿದ್ದಿದ್ದು ಅವಳದ್ದೇ ತಪ್ಪು. ಅದರಲ್ಲೂ ಅತ್ಯಾಚಾರ ವಿರೋಧಿಸಿದ್ದು ಇನ್ನೂ ತಪ್ಪು. ಅದಕ್ಕಾಗಿಯೇ ಕೊಲೆ ಮಾಡಿದೆವು’ ಎಂದು ಸಮರ್ಥಿಸಿಕೊಳ್ಳುವ ಮುಖೇಶ್ ಇನ್ನೊಂದೆಡೆ.
ಒಬ್ಬನ ಬಾಯಿ ಕ್ಯಾನ್ಸರ್ ಗೆಡ್ಡೆಗಳಿಂದ ಕೊಳೆತಿದ್ದರೆ ಮತ್ತೊಬ್ಬನ ಮನಸ್ಸೇ ಕೊಳೆತು ಬಾಯಿ ಕಸವನ್ನು ಉಗುಳುತ್ತಿದೆ. ಅವನೇನೋ ವಿಕೃತ. ಆತನ ಮನಸ್ಥಿತಿಗೆ ಸರಿಯಾಗಿ ಒದರಿದ್ದಾನೆ. ಅತ್ಯಾಚಾರಿಗಳ ಕುರೂಪವನ್ನು ಜಗತ್ತಿಗೆ ತೋರಿದ್ದಾನೆ. ಆದರೆ ಅದನ್ನು ತೋರಿಸಬಾರದೆಂದು ಮೀಡಿಯಾದೆಡೆಗೆ ಅರಚಿದವರು ಮುಚ್ಚಿಡಲು ಹೋದದ್ದು ಏನನ್ನು? ನಮ್ಮ ದೇಶದ ಘನತೆಯನ್ನೇ? ಹೆಣ್ಮಕ್ಕಳ ಘನತೆಯನ್ನೇ?
ಇಷ್ಟಕ್ಕೂ ಅತ್ಯಾಚಾರಿಗಳು ಯಾವ ದೇಶದವರಾದರೂ ಒಂದೆಯೇ. ಅತ್ಯಾಚಾರವೆಂಬುದು ಭಾರತದ ಸಮಸ್ಯೆಯೊಂದೇ ಅಲ್ಲ, ಇದು ಜಾಗತಿಕ ಸಮಸ್ಯೆ. ವಿವಿಧ ದೇಶಗಳ ಅತ್ಯಾಚಾರಿಗಳ ಮನಸ್ಥಿತಿ ಅಧ್ಯಯನದ ಸಲುವಾಗಿಯೇ ಸಾಕ್ಷ್ಯಚಿತ್ರ ನಿರ್ಮಿಸಿತ್ತು ಬ್ರಿಟಿಷ್ ವಾಹಿನಿ. ಅದರ ಪ್ರಸಾರದಲ್ಲಿ ಕಮರ್ಷಿಯಲ್ ಅಂಶಗಳಿದ್ದರೂ, ಜೊತೆಗೇ ಅರ್ಥ ಮಾಡಿಸುವ, ಎಚ್ಚರಿಸುವ, ಕೆಚ್ಚನ್ನು ಹುಟ್ಟುಹಾಕುವ ಗಂಟೆಯೂ ಬಾರಿಸುತ್ತಿತ್ತು.
ಮಾ.೮, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ‘ಇಂಡಿಯಾಸ್ ಡಾಟರ್’(ಭಾರತದ ಮಗಳು) ಹೆಸರಿನಲ್ಲಿ ಕಾರ್ಯಕ್ರಮ ಭಿತ್ತರವಾಗುವುದೆಂದು ಬಿಬಿಸಿ ಹೇಳಿತ್ತು. ಇದರಲ್ಲಿ ೨೦೧೨ರ ಡಿಸೆಂಬರ್ ೧೬ರಂದು ಭೀಕರವಾಗಿ ನಡೆದ ನಿರ್ಭಯಾ ಅತ್ಯಾಚಾರದ ಕುರಿತು ಅತ್ಯಾಚಾರಿಗಳು, ಅವರ ಪರ ವಕೀಲರು ಹಾಗೂ ನಿರ್ಭಯಾಳ ಹೆತ್ತವರ ಸಂದರ್ಶನಗಳು ಇದ್ದವು. ಇದರಲ್ಲಿ ಅತ್ಯಾಚಾರಕ್ಕೊಳಗಾದವಳನ್ನೇ ದೂರಿದ ಮುಖೇಶನ ಮಾತುಗಳು ಮಹಿಳಾಪರ ಹೋರಾಟಗಾರರನ್ನು ಕೆರಳಿಸಿದ್ದವು. ಆದರೆ ಇದೀಗ ‘ದೇಶದ ಮರ್ಯಾದೆ’ಯ ನೆಪದಲ್ಲಿ ನ್ಯಾಯಾಲಯ ದೇಶದಲ್ಲಿ ಕಾರ್ಯಕ್ರಮ ಪ್ರಸಾರ ಮಾಡದಂತೆ ಆದೇಶಿಸಿದೆ. 
ದೇಶದಲ್ಲಿ ದಿನವೊಂದಕ್ಕೆ ಸಾವಿರಾರು ಹೆಣ್ಣುಮಕ್ಕಳು ಅವಮಾನ, ಮಾನಭಂಗಕ್ಕೊಳಗಾಗುತ್ತಾರೆ. ಅವರನ್ನು ಕಾಪಾಡಲಾಗದವರಿಗೆ ‘ಭಾರತದ ಅತ್ಯಾಚಾರಿ’ಯ ಘನಮಾನವನ್ನು ಕಾಪಾಡುವ ಹುಕಿ ಅದೇಕೋ? ಈ ಸಾಕ್ಷ್ಯಚಿತ್ರ ನಿರ್ಮಾಪಕಿ ಲೆಸ್ಲಿ ಉಡ್ವಿನ್ ಕೂಡಾ, ಭಾರತದ ಈ ವರ್ತನೆ ಅರ್ಥವೇ ಆಗುತ್ತಿಲ್ಲವೆಂದು ಹೇಳಿದ್ದಾರೆ. ಅತ್ಯಾಚಾರಿಯ ಮಾತುಗಳನ್ನು ಕೇಳಿಯೇ ಶಾಕ್‌ಗೆ ಒಳಗಾಗಿದ್ದ ಜಗತ್ತಿಗೆ, ಘನ ಉದ್ದೇಶಕ್ಕೆಂಬಂತೆ ಅದನ್ನು ಮುಚ್ಚಿಟ್ಟುಕೊಳ್ಳುವ ಹಪಹಪಿಗೆ ಬಿದ್ದವರನ್ನು ನೋಡಿ ಭಾರತದ ಮನೋವ್ಯಾಧಿಯ ಅರಿವಾಗದಿದ್ದೀತೇ?
ಸ್ಥಳೀಯ ಸುದ್ದಿವಾಹಿನಿಗಳಲ್ಲಿ ಮನೆಯೊಳಗಿನ ಅತ್ತೆಸೊಸೆ ಜಗಳ, ಗಂಡಹೆಂಡತಿ ಚಿಕ್ಕ ವಿಷಯಕ್ಕೆ ಕಿತ್ತಾಡಿದ್ದು ಕೂಡಾ ಪ್ರಸಾರವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯ ಸ್ವೇಚ್ಛೆಯಾಗಿ ಪೋಲಾಗಿ ಹರಿದುಹೋಗುತ್ತಿದ್ದರೂ ನೋಡಿ ಮಜಾ ತೆಗೆದುಕೊಳ್ಳುವ ನಾವು, ಘನಉದ್ದೇಶದಿಂದ ಉತ್ತಮ ಕಾರ್ಯಕ್ರಮವೊಂದನ್ನು ಮಾಡಿದ ವಾಹಿನಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣಕ್ಕೆ ಪಣ ತೊಡುವುದು ಎಷ್ಟು ಸರಿ? ನಮ್ಮ ಕುರೂಪವನ್ನು ತೋರಿದ ಕನ್ನಡಿಯನ್ನು ದೂರುವುದು ನಮಗೆ ಜನ್ಮಜಾತವಾಗಿದೆ. ಮುಖೇಶ್ ನಿರ್ಭಯಾಳ ಬಗ್ಗೆ ಸಾವಿರ ಅವಮಾನಕರ ಹೇಳಿಕೆ ನೀಡಿದರೂ ಅವನ ಮೇಲೆಯೇ ಜನರಿಗೆ ಅಸಹ್ಯ ಹುಟ್ಟುತ್ತದೆಯೇ ಹೊರತು ನಿರ್ಭಯಾಳ ಘನತೆ ಸಾಸಿವೆಯಷ್ಟೂ ಕುಂದುವುದಿಲ್ಲ.
ಇಷ್ಟಕ್ಕೂ ಇದೇನು ಒಬ್ಬ ಮುಖೇಶನ ಧೋರಣೆಯಲ್ಲ. ಹೆಣ್ಣುಮಕ್ಕಳ ಬಗೆಗೆ ಇಂಥದೇ ಧೋರಣೆಯುಳ್ಳ, ಅವಳ ಬೋಲ್ಡ್‌ನೆಸ್ ನೋಡಿ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡುವ, ‘ಅವಳು’ ಪುರುಷರ ಸ್ವತ್ತು. ಆತನಿಗೆ ಅವಳನ್ನೇನೂ ಮಾಡುವ ಅಧಿಕಾರವಿದೆ ಎನ್ನುವಂಥ ಹೇಳಿಕೆ ನೀಡುವ ರಾಜಕಾರಣಿಗಳು, ಪುಂಡಪೋಕರಿಗಳು, ಕಡೆಗೆ ಶಿಕ್ಷಿತರೂ ನಮ್ಮ ದೇಶದಲ್ಲಿ ಬೇಕಷ್ಟಿದ್ದಾರೆ. ವರ್ಷಗಟ್ಟಲೆ ಎಲ್‌ಎಲ್‌ಬಿ ಓದಿ ಘನ ಹುದ್ದೆ ಏರಿದ ನಿರ್ಭಯಾ ಅತ್ಯಾಚಾರಿಗಳ ಪರ ವಕೀಲ ಕೂಡಾ ‘ಸ್ವೀಟು ಸ್ಟ್ರೀಟಲ್ಲಿದ್ದರೆ ನಾಯಿ ಬಂದು ತಿನ್ನುವುದಿಲ್ಲವೇ’ ಎನ್ನುವ ಮೂಲಕ ತನ್ನ ವಾಕ್ಚಾತುರ್ಯವನ್ನೂ, ಸ್ಯಾಡಿಸ್ಟ್ ಧೋರಣೆಯನ್ನೂ ಪ್ರದರ್ಶಿಸುತ್ತಾನೆ. ಇವರೆಲ್ಲರ ಕಾಮಾಲೆ ಕಣ್ಣಿನ ಬಗ್ಗೆ ಸರ್ಕಾರಕ್ಕೆ ತಕರಾರಿಲ್ಲ. ಆದರೆ ಅದನ್ನು ವಾಹಿನಿ ಭಿತ್ತರಿಸಿದರೆ ಮಾತ್ರ ದೇಶದ ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜಾಗುತ್ತದೆ!
ಮುಖೇಶ್‌ನನ್ನು ಅಪರಾಧಿ ಎಂದು ಪರಿಗಣಿಸಿ, ಮರಣದಂಡನೆ ಶಿಕ್ಷೆಗೆ ಗುರಿಯಾಗಿಸಿದ್ದೇವೆ ಎಂಬುದೇ ಸಾಕು ನಮ್ಮ ದೇಶದಲ್ಲಿ ಇಂಥ ವಿಕಾರ ಮನಸ್ಥಿತಿಗೆ ಉಳಿಗಾಲವಿಲ್ಲ ಎನ್ನಲು. ಅಂದ ಮೇಲೆ ಅಂಥವನೊಬ್ಬನ ‘ಹೇಳಿಕೆಗಳು’ ದೇಶಕ್ಕೆ ಅವಮಾನವೆಸಗಲು ಸಾಧ್ಯವಿಲ್ಲ. ನಿಜವಾಗಿಯೂ ಅವಮಾನ ಪಡಬೇಕಾದದ್ದು ಅಂಥ ಅತ್ಯಾಚಾರಿಗಳು ಈ ಮಣ್ಣಿನಲ್ಲಿ ಹುಟ್ಟುತ್ತಿದ್ದಾರೆ ಎಂಬುದಕ್ಕೆ.
ಇಷ್ಟಕ್ಕೂ ಅವಮಾನಕರವೆಂದಾದಲ್ಲಿ ಬಿಬಿಸಿ ವಾಹಿನಿಗೆ ೨೦೧೩ರಲ್ಲಿ ಅತ್ಯಾಚಾರಿಯೊಂದಿಗೆ ಸಂದರ್ಶನಕ್ಕೆ ಗೃಹಮಂತ್ರಿಗಳು ಅನುಮತಿ ನೀಡಿದ್ದೇಕೆ? ಕಾರ್ಯಕ್ರಮದ ವಿಷಯ ಆಕ್ಷೇಪಾರ್ಹವೆಂದು ತಿಹಾರ್ ಜೈಲಿನ ಅಧಿಕಾರಿಗಳಿಗೆ ಆಗಲೇ ಹೊಳೆಯಲಿಲ್ಲವೇಕೆ?
ನಮ್ಮಲ್ಲಿ ಹೆಮ್ಮೆ ಪಡುವ ವಿಷಯಗಳೊಂದಿಗೆ ತಲೆ ತಗ್ಗಿಸುವ ಸಂಗತಿಗಳೂ ಸಾಕಷ್ಟಿವೆ. ಅದನ್ನು ತೋರಿಸಲು ಹೊರಟವರ ಬಾಯಿ ಮುಚ್ಚಿಸುವುದರಿಂದಾಗಿ ತಲೆ ಎತ್ತುವಂಥ ಸಂಗತಿಗಳೇನೂ ಘಟಿಸುವುದಿಲ್ಲ. ಸಮಸ್ಯೆಗಳೂ ಬಗೆಹರಿಯುವುದಿಲ್ಲ. ಇದ್ದುದನ್ನು ಒಪ್ಪಿಕೊಂಡು, ಅದನ್ನು ಬದಲಾಯಿಸುವತ್ತ ಚಿತ್ತ ಹರಿಸೋಣ.

3 tanti