ಪುಟಗಳು

12.5.13

ಮರಳಿ ಮರೆಯಾಗಿ..

ಅವನ ಪ್ರೀತಿನೇ ಹಾಗೆ.. ಬೆಂಗಳೂರಿನ ಮಳೆ ತರಾ. ಸುರಿದಿದ್ದು ಮಳೆನೋ, ಪ್ರೀತಿನೋ ಅಂತ ತಲೆಗೆ ಹೋಗೋದ್ರೊಳಗೆ ಗುರುತೇ ಸಿಗದಂತೆ ನೆಲದ ಪಸೆ ಆರಿರತ್ತೆ... ಆಗಸದ ಒಡಲು ತೀರಿರತ್ತೆ .
ಪ್ರೀತಿ! ಅದೇಕೆ ಅಷ್ಟು ಆಟವಾಡಿಸುತ್ತೆ ಅಂತಾನೆ ಗೊತ್ತಾಗಲ್ಲ.. ಬೇಡವೆಂದು  ದೂರವಿದ್ದಾಗ  ಭೋರ್ಗರೆದು ಸುರಿಯುತ್ತೆ... ಪ್ರವಾಹೋಪಾದಿಯಲ್ಲಿ ಹರಿಯುತ್ತೆ.. ಪ್ರವಾಹ ಪರಿಪರಿಯಾಗಿ ಕಾಡಿ, ಅದರೊಳಗೇ ಮುಳುಗುವ ಬಯಕೆಯಲ್ಲಿ ತೇಲುವಾಗಾಗಲೇ ಅದರ ಒಡಲು ಬತ್ತಿ ಬರಗಾಲದ ಬರಡು ಭೂಮಿ ಧುತ್ತೆಂದು ಎದುರಾಗುತ್ತೆ..
ಮತ್ತೆ ಹೇಳಿಕೊಳ್ಳಲಾಗದ ಅವ್ಯಕ್ತ ಭಯ, ಮಣ್ಣೊಳಗೆ ಮುದುಡಿ ಕೂರುವ ಅಗೋಚರ ಬಯಕೆಗಳು. ಬಲಹೀನ ಮನಸ್ಸಿಗೆ ಬೆಂಬಲವಾಗಿ ನಿಲ್ಲುವ ಪ್ರೀತಿಯೇ ಮತ್ತೊಮ್ಮೆ ದುರ್ಬಲಗೊಳಿಸಿ ದಿಗಿಲುಗೊಲಿಸುತ್ತೆ.
ಪ್ರೀತಿಸಲೇಬೇಕೆಂಬ ಹುಚ್ಚಿತ್ತು. ಹುಚ್ಚು ಹೆಚ್ಚಾಗಿ ಹುಚ್ಚುಚ್ಚಾಗಿ ಹಚ್ಚಿಕೊಂಡು ಹಚೀ ಎಂದರೂ ನಿಲ್ಲಲಾರದ ಒರತೆ. ಆ ಕಡೆ ಚಿಮ್ಮಲಾರದ ಚಿಲುಮೆ. ಬ್ರೇಕ್ ಫೇಲ್ ಆದಂತೆ ಓಡುತ್ತಿರುವ ಪ್ರೀತಿಯನ್ನು ನಿಲ್ಲಿಸದೆ ವಿಧಿಯಿಲ್ಲ. ನಿಲ್ಲಿಸಿದರೆ ಅಪಘಾತ ಗ್ಯಾರಂಟೀ!
ಬದುಕಿನಲಿ ಎಲ್ಲವೂ ಹೊಸತೆನಿಸುವ ಹೊತ್ತಿಗಾಗಲೇ ಹಲಸಿ ಹೋದ ಸಂಬಂಧಗಳು ..ತುಯ್ದಾಟ , ಮತ್ತೊಂದು ಘಳಿಗೆ ಹೊಯ್ದಾಟ, ಕಾದಾಟದ ಕಾಟವಂತೂ ತಪ್ಪಿದ್ದೇ ಇಲ್ಲ.
ಸಣ್ಣ ತೊರೆಯೊಂದ ನೋಡಿ ನದಿಯೆಂದು ಬಗೆದೆ. ಕಲ್ಪನೆಯ ಹುಚ್ಚು ಮೋಡ ಸುರಿದೇ ಸುರಿಯಿತು .. ನದಿ ಕಡಲಾಯಿತು. ಕಡಲ ಒಡಲಿನಲಿ ಈಜಾಡಿ ಹಲವು ದ್ವೀಪಗಳಲ್ಲಿ ಸುತ್ತಾಡಿ, ಮುತ್ತುರತ್ನಹವಳಗಳನ್ನು ಬಾಚಿಕೊಳ್ಳುತ್ತಿದ್ದ ಆ ಸಂಭ್ರಮದ ತುತ್ತತುದಿಯಲ್ಲಿದ್ದಾಗಲೇ ತಳ್ಳಿದಂತಾಯಿತು. ತೊರೆಯ ಬುಡದಲ್ಲಿ ನಿಂತಿದ್ದೆ .. ನನ್ನ ಕಲ್ಪನೆಯಿಂದ ತೊರೆ ಕದಲಾಯಿತೆ ಹೊರತು  ಆತ ಅಲುಗಿರಲಿಲ್ಲ.. ನೈಜತೆಯ ಅರಿವಾದರೂ ಛಿದ್ರ ಛಿದ್ರಗೊಂಡ ಕಲ್ಪನೆಯ ಲಹರಿ ಸುತ್ತಲೂ ಮುಳ್ಳಿನಂತೆ ಚುಚ್ಚತೊಡಗಿತು. ಮುಳ್ಳುಗಳನ್ನೇ ಬಿಟ್ಟೂಬಿಡದೆ ಸುರಿವ ಕಂಬನಿಗೆ ಬೇಲಿಯಾಗಿಸ ಹೊರಟೆ. ಯಾರಿಗೂ ಕಣ್ಣ ಪಸೆ ಕಾಣದಂತೆ ಮುಚ್ಚುವ ಹಂಬಲ. ಮುಳ್ಳಿನ ಬೇಲಿಗೆ ಕಣ್ ಕಡಲೇನು ಭೋರ್ಗರೆವುದ ಬಿಡಲಿಲ್ಲ .. ಕಣ್ಣ ಮಿಂಚು ಕೂಡಾ ಹರಿದು ಹೋದ ಅಶ್ರು ಧಾರೆಯಲ್ಲೆಲ್ಲೋ ಅದೃಶ್ಯವಾಗಿತ್ತು.
ಆಗಮನದ ಬೆನ್ನಲ್ಲೇ ನಿರ್ಗಮಿಸಿದ ಸೂರ್ಯನ ಆಟ ಗ್ರಹಣದಂತೆ ತೋರಿತ್ತು..ಕಿರಣವಿಲ್ಲದ ಅರುಣ ಕತ್ತಲ ಕೂಪಕ್ಕೆ ನೂಕಿಯಾಗಿತ್ತು.. ಬಯಕೆಗಳ ಬಣವೆಗೆ ಬೆಂಕಿ ತಗುಲಿ ಹೊತ್ತಿ ಉರಿಯತೊಡಗಿತು.
ಆದರೆ ಪ್ರೀತಿಯ ಪರಿಯೇ ಹಾಗೆ. ಪರಿಪರಿಯಾಗಿ ಬಂದು ಅಚ್ಚರಿ ಹುಟ್ಟಿಸುತ್ತೆ. ಅದೆಲ್ಲಿತ್ತೋ ಮುಳುಗುವ ಮನದಲ್ಲಿ ಚೈತನ್ಯ! ಅದು ಸ್ವ ಪ್ರೀತಿ. ಫೀನಿಕ್ಸ್ನಂತೆ ಎದ್ದು ನಿಲ್ಲುವ ಅದಮ್ಯ ಆಸೆಯೊಂದನ್ನು ಹುಟ್ಟು ಹಾಕಿತ್ತು. ಅಷ್ಟೇ ಸಾಕಿತ್ತು. ಕಳೆದುಕೊಂಡ ಆತ್ಮಗೌರವವನ್ನು ಮರಳಿ ಪಡೆಯಲು.. ಎದೆಯೋಳಗೊಂದು ದೀಪ ಹೊತ್ತಿತು. ಆತನಿಗಾಗಿ  ಆತ್ಮಗೌರವವನ್ನು ಮಾತ್ರವಲ್ಲ, ಎಲ್ಲವನ್ನೂ ಪ್ರೀತಿಗಾಗಿ ಕಳೆದುಕೊಳ್ಳಬಲ್ಲ ನನ್ನ ಮನಸ್ಸಿನ ತಾಕತ್ತೇ ಆತ್ಮಾಭಿಮಾನವನ್ನು ಮೂಡಿಸಿತು. ಮತ್ತೆ ಕವಿತೆಗಳು ಹುಟ್ಟತೊಡಗಿದವು, ಭಾವಗೀತೆಗಳು ಹತ್ತಿರಾದವು, ಕತೆ ಕನಸನ್ನು ಹುಟ್ಟಿಸತೊಡಗಿತು, ಅವನ ಹೊರತಾಗಿಯೂ....
ಅವನೊಬ್ಬ ಪಾತ್ರಧಾರಿ 
ಬಂದು ಹೋದ ಲಹರಿ 
ಕನಸಿನೋಟಕ್ಕೊಂದು ಗುರಿ 
ನಿಲುವುಗನ್ನಡಿಯಲ್ಲಿ ಕಂಡ ಮುಖ 
ಛಾಯಾಚಿತ್ರವೆಂಬ ಭ್ರಮೆ  ಹುಟ್ಟಿಸಿದ್ಯಾಕೆ?


ಚಿತ್ರವೇ  ಆದರೂ ಇನ್ನೇನ ಉಳಿಸೀತು 
ಸಿಹಿಯೋ, ಕಹಿಯೋ, ನೆನಪುಗಳ ಹೊರತು?

-ರೇಶ್ಮಾ  ರಾವ್ (ಕನ್ನಡಪ್ರಭದಲ್ಲಿ ಪ್ರಕಟ)

1 ಕಾಮೆಂಟ್‌:

Badarinath Palavalli ಹೇಳಿದರು...

'ಬಂದು ಹೋದ ಲಹರಿ' ಎನ್ನುವಂತಾಗಿರುವ ಇಂದಿನ ಪ್ರೇಮ ಪ್ರಕರಣಗಳನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದೀರ. ಮನ ಮುಟ್ಟಿದ ಕಾವ್ಯಮಯ ಬರಹ.