ಪುಟಗಳು

21.5.13



ಆಂಟಿ ವೈರಸ್

ಬೇಕು ಅನ್ನುವರುಂಟೆ ನಿನ್ನ...
'ಆಂಟೀ..'ಸುತ್ತಲೂ ನೋಡಿದೆ. ಯಾವ ಆಂಟಿಯೂ ಉತ್ತರಿಸಲಿಲ್ಲ. ನಿಮಿಷವೂ ಆಗಿರಲಿಲ್ಲ. ಆ 11ರ ಹುಡುಗಿ ಮತ್ತೆ ಆಂಟೀ ಅಂದಿತು. ಯಾಕೋ ಬಸ್‌ನಲ್ಲಿರುವ ಹುಡುಗರೆಲ್ಲ ನನ್ನನ್ನೇ ನೋಡುತ್ತಿದ್ದಾರೆನಿಸಿತು. ನಿಧಾನವಾಗಿ ಹುಡುಗಿಯೆಡೆ ತಿರುಗಿದೆ. ಅರೆ! ನನ್ನೇ ನೋಡುತ್ತಿದ್ದಾಳೆ. 'ಆಂಟೀ ನಂಗೆ ವಿಂಡೋ ಸೀಟ್ ಕೊಡ್ತೀರಾ?' ಎವೆ ಇಕ್ಕದೆ ನೋಡುತ್ತಾ ಕೇಳಿದಳು. 
ಅಯ್ಯೋ ನಾನಾ ಆಂಟೀ?! ಕೊಡುತ್ತಿದ್ದೆನೇನೋ ಅಕ್ಕ ಅಂದಿದ್ದರೆ. ಹಿಂದಿದ್ದ ಆ ಚೆಂದದ ಹುಡುಗ ಬೇರೆ ಕಿಸಕ್ ಅಂದ. 'ನನ್ಗೆ ವಾಮಿಟಿಂಗ್ ಸೆನ್ಸೇಷನ್. ಸೋ ಹಿಂದೆ ಕುಳಿತಿರೋ ಅಂಕಲ್‌ಗೆ ಕೇಳು, ಬಿಟ್‌ಕೊಡ್ತಾರೆ' ಅಂದೆ ಮುಯ್ಯಿ ತೀರಿಸುವಂತೆ. ಅವಳು ಹೋಗಿ ಕೇಳಿದಳು. 'ಆಂಟಿ ಬರ್ತಾರಂದ್ರೆ ಬಿಟ್ ಕೊಡ್ತೀನಿ. ನೀ ಅಲ್ಲಿ ಕೂತ್ಕೋ ಪುಟ್ಟಿ' ಅಂದ!
ಈಗಿನ ಕತೆ ಹಾಳಾಗಿ ಹೋಗ್ಲಿ, ಆರನೇ ತರಗತಿಯಲ್ಲಿದ್ದಾಗ ಎದುರು ಮನೆಯ ಆಗ ತಾನೇ ಮಾತು ಕಲಿತ ಹುಡುಗನನ್ನು ಪ್ರಿ ಕೆಜಿಗೆ ನಮ್ಮ ಶಾಲೆಗೇ ಸೇರಿಸಿದರು. ಬಸ್ಸಿನಲ್ಲಿ ಶಾಲೆಗೆ ಅರ್ಧ ಗಂಟೆಯ ಪ್ರಯಾಣ. ಹೀಗಾಗಿ ಆತನನ್ನು ನನ್ನ ಸುಪರ್ದಿಯಲ್ಲಿ ಬಿಟ್ಟು, 'ಆಂಟಿ ಕೈ ಹಿಡ್ಕೊಂಡೇ ರೋಡ್ ದಾಟ್ಬೇಕು ಆಯ್ತಾ?' ಎಂದು ಗಿಣಿಗೆ ಹೇಳಿದಂಗೆ ಹೇಳಿಕೊಟ್ಟರು. ಆ ಹುಡುಗನೂ ಅದನ್ನು ಗಿಣಿಯಂತೇ ಕಲಿತೂ ಬಾಯಿ ಬಿಟ್ಟರೆ ಆಂಟಿ ಎನ್ನತೊಡಗಿದ. ಅದೆಂಥ ಅವಮಾನವೆನಿಸುತ್ತಿತ್ತೆಂದರೆ ಒಬ್ಬಳೇ ಸಿಕ್ಕಾಗೆಲ್ಲ 'ಅಕ್ಕಾ' ಎನ್ನಬೇಕೆಂದು ಮುದ್ದಿನಿಂದ, ಗುದ್ದಿನಿಂದ ಸಾವಿರ ಬಾರಿ ಹೇಳಿಯಾಯಿತು. ಊಹ್ಞೂಂ, ಹುಡುಗ ಮಾತೃವಾಕ್ಯ ಪರಿಪಾಲಕನ ರೀತಿ ಆಂಟಿ ಎನ್ನುವುದನ್ನು ಬಿಡಲಿಲ್ಲ. ಹುಡುಗನ ದೂರಾಲೋಚನೆ ಗಮನಿಸಿದಿರಾ? ದೊಡ್ಡ ಆದ ಮೇಲೆ 'ಆಂಟಿ ಪ್ರೀತ್ಸೆ' ಎನ್ನಬಹುದು. 'ಅಕ್ಕಾ ಪ್ರೀತ್ಸೆ' ಎನ್ನಲಾದೀತೇ? ಈ ಹುಡುಗರ ಬುದ್ಧಿಯೇ ಹೀಗೆ!
ವರ್ಷದ ಹಿಂದೆ ಓದು ಮುಗಿದು ಕಾಲೇಜೊಂದರಲ್ಲಿ ಲೆಕ್ಚರರ್ ಆಗಿ ಸೇರಿಕೊಂಡೆ. ಸೀರೆ ಉಡುವುದು ಕಡ್ಡಾಯವಾಗಿತ್ತು. ಆಗ ತಾನೇ ಸೀರೆ ಉಟ್ಟು ನಡೆಯಲು ಕಲಿಯುತ್ತಿದ್ದ ನನ್ನದೇ ವಯಸ್ಸಿನ ನಾಲ್ವರು ಹೆಣ್ಣುಮಕ್ಕಳು (?) ಜ್ಯೂಸ್ ಕುಡಿಯಲೆಂದು ಹೋಟೆಲ್‌ಗೆ ಹೋದೆವು. 20ರ ಹರೆಯದ ಸರ್ವರ್ ಬಂದು 'ಏನ್ ಬೇಕು ಆಂಟಿ?' ಎಂದು ಗೆಳತಿಯ ಮುಖ ನೋಡುತ್ತಾ ಕೇಳಿದ. ಎಲ್ಲರಿಗೂ ಇರಿಸುಮುರಿಸು. 'ನಾಲ್ಕು ಮೂಸಂಬಿ ಜ್ಯೂಸ್ ತಗೊಂಬಾ ಮರೀ' ಎಂದಳು. ಅವನು ತಿರುಗಿ ಬಂದ ಬಾಣಕ್ಕೆ ಹೆದರಿ ಒಳಹೋದ ನಂತರ ಮತ್ತೆ ನಾಲ್ಕು ಬಾರಿ 'ಮರೀ ಜ್ಯೂಸ್ ಇನ್ನೂ ಆಗಿಲ್ವಾ?' ಎಂದು ಬೇಕೆಂದೇ ಕೇಳಿದೆವು. ಮತ್ತಾತ ಎದುರಿಗೆ ಬರಲೇ ಇಲ್ಲ. ಬೇರೊಬ್ಬ ಸರ್ವರ್ ಜ್ಯೂಸ್ ತಂದಿಟ್ಟ. ತಕ್ಕ ಶಾಸ್ತಿ ಮಾಡಿದ ಸಂಭ್ರಮದೊಂದಿಗೆ ಹೊರ ಬಂದೆವು. ಅಲ್ಲಾ, ಈ ಹುಡುಗ್ರು ನಾಟೀ ಅನ್ನಲಿ, ತುಂಟಿ, ಪಂಟಿ, ಬಂಟಿ ಅನ್ನಲಿ, ಹೋಗ್ಲಿ ಘಾಟಿ ಅಂತನೇ ಅನ್ಲಿ- ಒಳಗೊಳಗೇ ಬೀಗಿಬಿಡುತ್ತೇವೆ. ಆದರೆ ಈ ಆಂಟಿ ಅಂತಾರಲ್ಲಾ ಮೈ ಎಲ್ಲ ಪರಚಿಕೊಳ್ಳುವ ಹಾಗಾಗುತ್ತೆ. ಹೀಗಾಗಿ ಈ ಹುಡುಗರೆಂಬ ಅಂಕಲ್‌ಗಳು ನಮ್ಮ ಕಷ್ಟವನ್ನು ಅರ್ಥಮಾಡಿಕೊಳ್ಳಬೇಕಾಗಿ ಈ ಮೂಲಕ ವಿನಂತಿ.ನಮ್ಮಮ್ಮನೇ ಇನ್ನೂ ಆಂಟೀ ಪಟ್ಟದಿಂದ ಪ್ರಮೋಶನ್ ಪಡೆದಿಲ್ಲ. ಅಂಥದ್ದರಲ್ಲಿ ಪ್ರತಿ ವರ್ಷವೂ ಸ್ವೀಟ್ ಸಿಕ್ಸ್‌ಟೀನ್‌ನ ಬರ್ತ್‌ಡೇ ಆಚರಿಸಿಕೊಳ್ಳುವ ನಮಗೆ ಆಂಟೀ ಅಂದ್ರೆ ಹೇಗೆ ಸಹಿಸೋಣ ಹೇಳಿ?!
- ರೇಶ್ಮಾ ರಾವ್ ಸೊನ್ಲೆ (ಕನ್ನಡಪ್ರಭದಲ್ಲಿ ಮೇ 21, 2013 ರಂದು ಪ್ರಕಟ )

12.5.13

ಮರಳಿ ಮರೆಯಾಗಿ..

ಅವನ ಪ್ರೀತಿನೇ ಹಾಗೆ.. ಬೆಂಗಳೂರಿನ ಮಳೆ ತರಾ. ಸುರಿದಿದ್ದು ಮಳೆನೋ, ಪ್ರೀತಿನೋ ಅಂತ ತಲೆಗೆ ಹೋಗೋದ್ರೊಳಗೆ ಗುರುತೇ ಸಿಗದಂತೆ ನೆಲದ ಪಸೆ ಆರಿರತ್ತೆ... ಆಗಸದ ಒಡಲು ತೀರಿರತ್ತೆ .
ಪ್ರೀತಿ! ಅದೇಕೆ ಅಷ್ಟು ಆಟವಾಡಿಸುತ್ತೆ ಅಂತಾನೆ ಗೊತ್ತಾಗಲ್ಲ.. ಬೇಡವೆಂದು  ದೂರವಿದ್ದಾಗ  ಭೋರ್ಗರೆದು ಸುರಿಯುತ್ತೆ... ಪ್ರವಾಹೋಪಾದಿಯಲ್ಲಿ ಹರಿಯುತ್ತೆ.. ಪ್ರವಾಹ ಪರಿಪರಿಯಾಗಿ ಕಾಡಿ, ಅದರೊಳಗೇ ಮುಳುಗುವ ಬಯಕೆಯಲ್ಲಿ ತೇಲುವಾಗಾಗಲೇ ಅದರ ಒಡಲು ಬತ್ತಿ ಬರಗಾಲದ ಬರಡು ಭೂಮಿ ಧುತ್ತೆಂದು ಎದುರಾಗುತ್ತೆ..
ಮತ್ತೆ ಹೇಳಿಕೊಳ್ಳಲಾಗದ ಅವ್ಯಕ್ತ ಭಯ, ಮಣ್ಣೊಳಗೆ ಮುದುಡಿ ಕೂರುವ ಅಗೋಚರ ಬಯಕೆಗಳು. ಬಲಹೀನ ಮನಸ್ಸಿಗೆ ಬೆಂಬಲವಾಗಿ ನಿಲ್ಲುವ ಪ್ರೀತಿಯೇ ಮತ್ತೊಮ್ಮೆ ದುರ್ಬಲಗೊಳಿಸಿ ದಿಗಿಲುಗೊಲಿಸುತ್ತೆ.
ಪ್ರೀತಿಸಲೇಬೇಕೆಂಬ ಹುಚ್ಚಿತ್ತು. ಹುಚ್ಚು ಹೆಚ್ಚಾಗಿ ಹುಚ್ಚುಚ್ಚಾಗಿ ಹಚ್ಚಿಕೊಂಡು ಹಚೀ ಎಂದರೂ ನಿಲ್ಲಲಾರದ ಒರತೆ. ಆ ಕಡೆ ಚಿಮ್ಮಲಾರದ ಚಿಲುಮೆ. ಬ್ರೇಕ್ ಫೇಲ್ ಆದಂತೆ ಓಡುತ್ತಿರುವ ಪ್ರೀತಿಯನ್ನು ನಿಲ್ಲಿಸದೆ ವಿಧಿಯಿಲ್ಲ. ನಿಲ್ಲಿಸಿದರೆ ಅಪಘಾತ ಗ್ಯಾರಂಟೀ!
ಬದುಕಿನಲಿ ಎಲ್ಲವೂ ಹೊಸತೆನಿಸುವ ಹೊತ್ತಿಗಾಗಲೇ ಹಲಸಿ ಹೋದ ಸಂಬಂಧಗಳು ..ತುಯ್ದಾಟ , ಮತ್ತೊಂದು ಘಳಿಗೆ ಹೊಯ್ದಾಟ, ಕಾದಾಟದ ಕಾಟವಂತೂ ತಪ್ಪಿದ್ದೇ ಇಲ್ಲ.
ಸಣ್ಣ ತೊರೆಯೊಂದ ನೋಡಿ ನದಿಯೆಂದು ಬಗೆದೆ. ಕಲ್ಪನೆಯ ಹುಚ್ಚು ಮೋಡ ಸುರಿದೇ ಸುರಿಯಿತು .. ನದಿ ಕಡಲಾಯಿತು. ಕಡಲ ಒಡಲಿನಲಿ ಈಜಾಡಿ ಹಲವು ದ್ವೀಪಗಳಲ್ಲಿ ಸುತ್ತಾಡಿ, ಮುತ್ತುರತ್ನಹವಳಗಳನ್ನು ಬಾಚಿಕೊಳ್ಳುತ್ತಿದ್ದ ಆ ಸಂಭ್ರಮದ ತುತ್ತತುದಿಯಲ್ಲಿದ್ದಾಗಲೇ ತಳ್ಳಿದಂತಾಯಿತು. ತೊರೆಯ ಬುಡದಲ್ಲಿ ನಿಂತಿದ್ದೆ .. ನನ್ನ ಕಲ್ಪನೆಯಿಂದ ತೊರೆ ಕದಲಾಯಿತೆ ಹೊರತು  ಆತ ಅಲುಗಿರಲಿಲ್ಲ.. ನೈಜತೆಯ ಅರಿವಾದರೂ ಛಿದ್ರ ಛಿದ್ರಗೊಂಡ ಕಲ್ಪನೆಯ ಲಹರಿ ಸುತ್ತಲೂ ಮುಳ್ಳಿನಂತೆ ಚುಚ್ಚತೊಡಗಿತು. ಮುಳ್ಳುಗಳನ್ನೇ ಬಿಟ್ಟೂಬಿಡದೆ ಸುರಿವ ಕಂಬನಿಗೆ ಬೇಲಿಯಾಗಿಸ ಹೊರಟೆ. ಯಾರಿಗೂ ಕಣ್ಣ ಪಸೆ ಕಾಣದಂತೆ ಮುಚ್ಚುವ ಹಂಬಲ. ಮುಳ್ಳಿನ ಬೇಲಿಗೆ ಕಣ್ ಕಡಲೇನು ಭೋರ್ಗರೆವುದ ಬಿಡಲಿಲ್ಲ .. ಕಣ್ಣ ಮಿಂಚು ಕೂಡಾ ಹರಿದು ಹೋದ ಅಶ್ರು ಧಾರೆಯಲ್ಲೆಲ್ಲೋ ಅದೃಶ್ಯವಾಗಿತ್ತು.
ಆಗಮನದ ಬೆನ್ನಲ್ಲೇ ನಿರ್ಗಮಿಸಿದ ಸೂರ್ಯನ ಆಟ ಗ್ರಹಣದಂತೆ ತೋರಿತ್ತು..ಕಿರಣವಿಲ್ಲದ ಅರುಣ ಕತ್ತಲ ಕೂಪಕ್ಕೆ ನೂಕಿಯಾಗಿತ್ತು.. ಬಯಕೆಗಳ ಬಣವೆಗೆ ಬೆಂಕಿ ತಗುಲಿ ಹೊತ್ತಿ ಉರಿಯತೊಡಗಿತು.
ಆದರೆ ಪ್ರೀತಿಯ ಪರಿಯೇ ಹಾಗೆ. ಪರಿಪರಿಯಾಗಿ ಬಂದು ಅಚ್ಚರಿ ಹುಟ್ಟಿಸುತ್ತೆ. ಅದೆಲ್ಲಿತ್ತೋ ಮುಳುಗುವ ಮನದಲ್ಲಿ ಚೈತನ್ಯ! ಅದು ಸ್ವ ಪ್ರೀತಿ. ಫೀನಿಕ್ಸ್ನಂತೆ ಎದ್ದು ನಿಲ್ಲುವ ಅದಮ್ಯ ಆಸೆಯೊಂದನ್ನು ಹುಟ್ಟು ಹಾಕಿತ್ತು. ಅಷ್ಟೇ ಸಾಕಿತ್ತು. ಕಳೆದುಕೊಂಡ ಆತ್ಮಗೌರವವನ್ನು ಮರಳಿ ಪಡೆಯಲು.. ಎದೆಯೋಳಗೊಂದು ದೀಪ ಹೊತ್ತಿತು. ಆತನಿಗಾಗಿ  ಆತ್ಮಗೌರವವನ್ನು ಮಾತ್ರವಲ್ಲ, ಎಲ್ಲವನ್ನೂ ಪ್ರೀತಿಗಾಗಿ ಕಳೆದುಕೊಳ್ಳಬಲ್ಲ ನನ್ನ ಮನಸ್ಸಿನ ತಾಕತ್ತೇ ಆತ್ಮಾಭಿಮಾನವನ್ನು ಮೂಡಿಸಿತು. ಮತ್ತೆ ಕವಿತೆಗಳು ಹುಟ್ಟತೊಡಗಿದವು, ಭಾವಗೀತೆಗಳು ಹತ್ತಿರಾದವು, ಕತೆ ಕನಸನ್ನು ಹುಟ್ಟಿಸತೊಡಗಿತು, ಅವನ ಹೊರತಾಗಿಯೂ....
ಅವನೊಬ್ಬ ಪಾತ್ರಧಾರಿ 
ಬಂದು ಹೋದ ಲಹರಿ 
ಕನಸಿನೋಟಕ್ಕೊಂದು ಗುರಿ 
ನಿಲುವುಗನ್ನಡಿಯಲ್ಲಿ ಕಂಡ ಮುಖ 
ಛಾಯಾಚಿತ್ರವೆಂಬ ಭ್ರಮೆ  ಹುಟ್ಟಿಸಿದ್ಯಾಕೆ?


ಚಿತ್ರವೇ  ಆದರೂ ಇನ್ನೇನ ಉಳಿಸೀತು 
ಸಿಹಿಯೋ, ಕಹಿಯೋ, ನೆನಪುಗಳ ಹೊರತು?

-ರೇಶ್ಮಾ  ರಾವ್ (ಕನ್ನಡಪ್ರಭದಲ್ಲಿ ಪ್ರಕಟ)

11.5.13

ಬಾಟಲ್ ಮನೆ ಕಟ್ಟಲ್!

ಸ್ವಂತದ್ದೊಂದು ಸೂರು ಬೇಕೆಂಬ ಕನಸು ಯಾರಿಗಿರುವುದಿಲ್ಲ ಹೇಳಿ? ಹಾಗೆಯೇ ಆಕೆಗೂ ಇತ್ತು. ವಯಸ್ಸು 73 ಆಗಿತ್ತು. ಪತಿಗೆ ಆಗಲೇ 95. ಕೇವಲ ಹತ್ತು ಡಾಲರಿನಲ್ಲಿ ವಾರ ಕಳೆಯುತ್ತಿದ್ದವರು ಬ್ರೆಜಿಲ್‌ನ ಈ ಜೋಡಿ. ಅದೂ ಇರುವ ಅಲ್ಪ ಜಮೀನಿನಲ್ಲಿ ಜೋಳ ಬೆಳೆದು.    
ಇಂಥ ಸಮಯದಲ್ಲಿ ಇನ್ನ್ಯಾರೇ ಆಗಿದ್ದರೂ ದುಬಾರಿ ಕನಸು ಈ ವಯಸ್ಸಿಗಲ್ಲ ಎಂದು ಸುಮ್ಮನೆ ಕುಳಿತುಬಿಡುತ್ತಿದ್ದರೇನೋ..? ಆದರೆ ಆಕೆ ಕುಳಿತುಕೊಳ್ಳಲಿಲ್ಲ. ಅದು 2005ನೇ ಇಸವಿ. ಬೀದಿಗಿಳಿದ ಅಜ್ಜಿ ಅಲ್ಲಿ ಇಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲ್‌ಗಳನ್ನು ಸಂಗ್ರಹಿಸತೊಡಗಿದಳು. ಮೂರೇ ತಿಂಗಳಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳನ್ನೇ ಗೋಡೆ, ಬಾಗಿಲು, ಕಿಟಕಿಯಾಗಿಸಿಕೊಂಡ ಆಕೆಯ ಕನಸಿನ ಅತಿ ಕಡಿಮೆ ವೆಚ್ಚದ ಮನೆ ನೋಡುಗರ ಕಣ್ ಕುಕ್ಕುವಂತೆ ಎದ್ದು ನಿಂತಿತು. ಈಗ ಆಕೆ
ಗೆ 80 ವಯಸ್ಸು, ಗಂಡನಿಗೆ 104. ತಮ್ಮದೇ ಮನೆಯ ಎದುರು ನಿಂತು ಪ್ರವಾಸಿಗರಿಗೆ ಕೈ ಬೀಸುತ್ತಾರೆ. ಅವರು ಕೊಡುವ ಪುಡಿಗಾಸಿನಲ್ಲಿ ಜೀವನ ನಿರ್ವಹಣೆ ಮಾಡುತ್ತಾರೆ. ಸ್ವಂತ ಸೂರನ್ನು ದಿಟ್ಟಿಸುತ್ತಾ ಜೀವನದ ಕಡೆಕ್ಷಣಗಳನ್ನು ಎಣಿಸುವುದು ಅದೆಷ್ಟು ನೆಮ್ಮದಿ ಎನಿಸುತ್ತದೆ! ಕನಸಿಗೆ ವಯಸ್ಸು, ಬಡತನ ಯಾವುದೂ ಮಿತಿ ಅಲ್ಲ ಅಲ್ಲವೇ? - (ಕೃಪೆ - ಅಂತರ್ಜಾಲ)
 
ರೇಶ್ಮಾ ರಾವ್ ಸೊನ್ಲೆ