First Published: 23 Apr 2014 02:00:00 AM IST
ಅಲೆವ ಮನಗಳಿಗೆ ಒನ್ ವೇ ಟಿಕೆಟ್
ಅಂದು ನನಗೆ ನಾ
ಸ್ಕೂಟಿ ಕೊಂಡು, ಮೊದಲ ಬಾರಿ ಬೆಂಗಳೂರಿನ ಟ್ರಾಫಿಕ್‌ಗಳ ಮಧ್ಯೆ ನುಗ್ಗಿಸಿ ಓಡಿಸಿದಷ್ಟೇ
ಖುಷಿಯಾಗಿತ್ತು. ತಳಮಳವೆಲ್ಲ ಕರಗಿ ಆತ್ಮವಿಶ್ವಾಸವಾಗಿ ಬದಲಾಗುತ್ತಿರುವ ಆ ಚಟಪಟ ಕುದಿತ,
ಒಳಗಿನ ಬೇಗುದಿ ಅರಿವಿಗೆ ಬರುತ್ತಿತ್ತು. ಸಂಜೆಯ ಹೊತ್ತು, ರಾಜಧಾನಿ ಎಕ್ಸ್‌ಪ್ರೆಸ್
ರೈಲಿನಲ್ಲಿದ್ದೆ, ಒಬ್ಬಳೇ. ಹೊರಟದ್ದೆಲ್ಲಿಗೆ? ಟಿಕೆಟ್ ಏನೋ ದೆಹಲಿಗಿತ್ತು.
ಆದರೆ ನನ್ನ ಗುರಿ ಅದೆಲ್ಲಿಗೋ ಅದೆಲ್ಲಿಗೋ, ಗೊತ್ತಿರಲಿಲ್ಲ. ಆದರೆ ಎಲ್ಲಿಗೋ
ಹೋಗುವೆನೆಂಬುದು ಖಾತ್ರಿಯಾಗಿತ್ತು. ಎಲ್ಲೂ ಹೋಗಲಾಗದಿದ್ದರೆ ತಿರುಗಿಯಂತೂ ಬರಬಲ್ಲೆನೆಂಬ
ವಿಶ್ವಾಸವಿತ್ತು. ಊರು ನೋಡುವುದು ನನ್ನ ಗುರಿಯಾಗಿರಲಿಲ್ಲ, ಬದುಕು ನೋಡಬೇಕಿತ್ತು.
ಹಾಗಾಗಿ ಸಿದ ್ಧಮಾದರಿ ರಚಿಸಿಕೊಂಡಿರಲಿಲ್ಲ. ಕೈಯ್ಯಲ್ಲಿ ಒಂದು ತಿಂಗಳ ರಜೆ,
ಎಟಿಎಂನಲ್ಲಿ ಒಂದಿಡೀ ವರ್ಷದ ಸಂಬಳದಲ್ಲಿ ಹೀಗೆ ಗೊತ್ತುಗುರಿ ಇಲ್ಲದೆ ಅಲೆಯಲೆಂದೇ
ಎತ್ತಿಟ್ಟ ಹಣ, ಮೊಬೈಲ್, ಮತ್ತೊಂದು ಬ್ಯಾಕ್‌ಪ್ಯಾಕ್.
ಹೊರಡುವ ಮೊದಲಿನ ಒಂದು
ತಿಂಗಳು ಅಪ್ಪಅಮ್ಮನನ್ನು ಒಪ್ಪಿಸಲು ನಡೆಸಿದ ಅಳು, ಜಗಳ, ಕೋಪ, ಹಟ, ಕೆಲಸದ ಕಿರಿಕಿರಿ,
ಅಜ್ಜನ ಆನಾರೋಗ್ಯ, ಅವನ ದಬ್ಬಾಳಿಕೆ ಎಲ್ಲವೂ ನೆನಪಿನ ರೈಲನ್ನೇರಿ, ಕಂಬಿಯಲ್ಲಿ
ನನ್ನೊಂದಿಗೆ ಓಡಲು ಹವಣಿಸುತ್ತಿದ್ದವು. ಆದರೆ ನಾನು ಒಬ್ಬಳೇ ಹೋಗಬೇಕಿತ್ತು.
ಯಾವುದೆಲ್ಲದರಿಂದ ದೂರ ಓಡಲು ಪ್ರಯತ್ನಿಸಿದ್ದೆನೋ ಅವೇ ಬೆನ್ನು ಬಿದ್ದರೆ?!
ನಿರ್ದಯಿಯಾಗಲು ನಿರ್ಧರಿಸಿದೆ. ಎಲ್ಲವನ್ನೂ ನನ್ನೆಲ್ಲ ಶಕ್ತಿ ಒಗ್ಗೂಡಿಸಿ ಹೊರ
ತಳ್ಳಿದೆ. ಕಂಬಿಗಳಡಿಯಲ್ಲಿ ಸಾವನ್ನಪ್ಪಿದ ಅವುಗಳ ಬಗ್ಗೆ ನನಗೆ ಕಿಂಚಿತ್ತೂ
ಬೇಸರವಾಗಲಿಲ್ಲ. ಭಯ, ಕೀಳರಿಮೆಗಳನ್ನು ನನ್ನ ಕನಸು, ಧೈರ್ಯ, ನನ್ನ ಮೇಲಿನ
ನಂಬಿಕೆಗಳು ತಟ್ಟಿ ಮಲಗಿಸಿದವು. ಇದೀಗ ಮನಸ್ಸು ಓಡುತ್ತಿತ್ತು, ಕನಸು ಕಾಣುತ್ತಿತ್ತು,
ರೈಲಿಗಿಂತಲೂ ವೇಗವಾಗಿ.
ನಾನಿದ್ದ ಬೋಗಿಯಲ್ಲೇ ಇದ್ದರು ಬಿಹಾರದ ಆ ಆಂಟಿ ತಮ್ಮ
ಮಗುವಿನೊಡನೆ. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಮಗುವಿನ ಕ್ಯಾನ್ಸರ್‌ಗೆ ಚಿಕಿತ್ಸೆ
ಕೊಡಲು ಕರೆದುಕೊಂಡು ಹೋದವರು. ರಜೆಗೆ ಮನೆಗೆ ತೆರಳುತ್ತಿರುವ ಚೆನ್ನೈನಲ್ಲಿ ಓದುತ್ತಿರುವ
ರಾಜಸ್ತಾನದ ಆ ಹುಡುಗ, ದಕ್ಷಿಣ ಭಾರತ ಪ್ರವಾಸ ಕೈಗೊಂಡ ಪಂಜಾಬ್‌ನ ಕುಟುಂಬ- ಒಂದು ಮಿನಿ
ಭಾರತವೇ ಬೋಗಿಯೊಳಗೆ ಬಂಧಿಯಾಗಿತ್ತು. ಮತ್ತು ದಿನವೊಂದರ ಪಯಣದಲ್ಲಿ ಅವರೆಲ್ಲರ ಬದುಕು
ನನ್ನ ಬದುಕಿನಲ್ಲಿ ಪಾಲು ಪಡೆದಿದ್ದವು. ಮೊದಲು ಕಷ್ಟಸುಖ ಹಂಚಿಕೊಂಡೆವು, ನಂತರ
ಹರಟಿದೆವು, ಕಿಚಾಯಿಸಿದೆವು, ಅಂತ್ಯಾಕ್ಷರಿ ಆಡಿದೆವು, ಟೀಯನ್ನು ಒಬ್ಬರಿಗೊಬ್ಬರು
ಕೊಡಿಸಿ ಒಟ್ಟಿಗೆ ಕುಡಿದೆವು. ಗೆಳೆಯರೊಡನೆ ಬಂದಿದ್ದರೆ ಅಪರಿಚಿತರೊಡನೆ, ವಯಸ್ಸಿನ
ಹಂಗಿಲ್ಲದೆ, ಮೇಲು ಕೀಳು, ಬಡವಶ್ರೀಮಂಥ ಬೇಧವಿಲ್ಲದೆ ಈ ಪರಿಯ ಬಾಂಧವ್ಯವೊಂದು
ಹುಟ್ಟಿಕೊಳ್ಳಲು ಸಾಧ್ಯವಿತ್ತೇ? ನನ್ನನ್ನು ನಾನು ಈ ಮಟ್ಟಿಗೆ ಸುತ್ತಲಿನ
ಸಮಾಜಕ್ಕೊಡ್ಡುವ ಅವಕಾಶವಿತ್ತೇ? ಯೋಚಿಸುತ್ತಿದ್ದೆ.
ಹೊರಗೆ ಪ್ರಕೃತಿ ತನ್ನ
ರೀಲನ್ನು ಬಿಚ್ಚಿಕೊಳ್ಳುತ್ತಲೂ, ಚಿತ್ರಗಳನ್ನು ಬದಲಾಯಿಸುತ್ತಲೂ, ರಾಜ್ಯ ಬದಲಾದಂತೆ
ಮಣ್ಣಿನ ಪರಿಮಳದಲ್ಲೇ ಸೂಚನೆ ನೀಡುತ್ತಲೂ ಹರವಿಕೊಂಡಿತ್ತು. ದೆಹಲಿಯಲ್ಲಿ ಬೆನ್ನ
ಮೇಲೆ ಬೇತಾಳದಂತೆ ಬ್ಯಾಕ್‌ಪ್ಯಾಕ್ ಹೊತ್ತು ಹೇಳಲು ಕತೆ ಹುಡುಕುತ್ತಾ ನಡೆಯತೊಡಗಿದೆ.
ಚಾಂದಿನಿ ಚೌಕ್‌ನ ಗಲ್ಲಿಯಲ್ಲಿ ಹಾದೆ. ಯಾವುದೋ ಹೈವೇಯಲ್ಲಿ ತೆರಳುವ ಅಲಂಕೃತ ಲಾರಿಯಂತೆ
ಚಾಂದಿನಿ ಚೌಕ್‌ನ ಪುಟ್ಟ ಗಲ್ಲಿ ಜಿಗಮಗ ಎನ್ನುತ್ತ ತುಂಬಿ ತುಳುಕುತ್ತಿತ್ತು. ಅಲ್ಲೇ
ಹೊಟೇಲ್ ಒಂದರ ರೂಂ ಬುಕ್ ಮಾಡಿ ಲಗೇಜನೆಲ್ಲ ಇಳಿಸಿ ಸುತ್ತಲು ಹೋದೆ. ನಂತರದ ಇಪ್ಪತ್ತು
ದಿನ ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶ, ಉತ್ತರಾಂಚಲ್‌ಗಳಲ್ಲಿ ಅಲೆದೆ. ಪ್ರೇಕ್ಷಣೀಯ
ಸ್ಥಳಗಳಿಗಿಂತಲೂ ಊರೂರು ಸುತ್ತಿದೆ. ಅಲೆದದ್ದರ, ಕಂಡಿದ್ದರ ಕತೆ ಇನ್ನೊಮ್ಮೆ ಹೇಳುವೆ.
ಹೇಳಹೊರಟಿದ್ದು ಕಲಿತದ್ದರ ಬಗ್ಗೆ.
ಮೊದಲೆಲ್ಲ ಖಾಲಿ ಎನಿಸುತ್ತಿದ್ದ ಮನಸ್ಸು
ಒಳಗಿನಿಂದ ತುಂಬಿಕೊಂಡ ಅನುಭವ. ನನ್ನ ಅಧೈರ್ಯ, ಕೀಳರಿಮೆಗಳು ನಾನು ತಿನ್ನಿಸುವ ಮೊದಲೇ
ಅವೇ ಸೈನೈಡ್ ತಗೊಂಡಿದ್ದವು. ಪ್ರತಿ ಕ್ಷಣವೂ ಎಚ್ಚರಿಕೆಯಿಂದ, ಮೈಮೇಲೆ ಪ್ರಜ್ಞೆ
ಇಟ್ಟುಕೊಂಡೇ ಇರುವುದು, ಎಲ್ಲಿಲ್ಲಿ ಖರ್ಚನ್ನು ಮಿತಿಗೊಳಿಸಬಹುದೋ ಅಲ್ಲೆಲ್ಲ
ಮಿತಿಗೊಳಿಸುವುದು, ಮೊದಲೇ ಯೋಜಿಸಿದ್ದಲ್ಲದ್ದರಿಂದ ಪ್ರತಿಕ್ಷಣ ನಿರ್ಧಾರ
ತೆಗೆದುಕೊಂಡಿದ್ದು ಎಲ್ಲವೂ ನನ್ನ ಸಾಮರ್ಥ್ಯವನ್ನು ಹಿಗ್ಗಿಸಿದ್ದವು. ದಾರಿಯಲ್ಲಿ
ಸಿಕ್ಕ ಒಂದಿಷ್ಟು ಗೆಳೆಯ ಗೆಳತಿಯರು ನನ್ನಂತೆಯೇ ಒಬ್ಬರೇ ಬಂದವರಿದ್ದರು, ತಿರುಗಾಟದ
ರುಚಿ ಹತ್ತಿ ಲಕ್ಷಗಟ್ಟಲೆ ಸಂಬಳದ ಕೆಲಸವನ್ನೇ ಬಿಟ್ಟು ವರ್ಷದಿಂದ
ಅಲೆಮಾರಿಗಳಾದವರಿದ್ದರು, ಹಾಗೆ ಅಲೆಯುತ್ತಾ ಅದಾವುದೋ ಹಳ್ಳಿಯೊಂದರಲ್ಲಿ ಬಡ ಮಕ್ಕಳಿಗೆ
ಪಾಠ ಹೇಳುತ್ತಾ ನೆಲೆ ನಿಂತ ಸಾಫ್ಟ್‌ವೇರ್ ಎಂಜಿನಿಯರ್ ಸಿಕ್ಕರು. ಇನ್ನೊಬ್ಬರು ಹಿಮಾಲಯದ
ಸಾಧುಗಳ ಬಳಿ ಹೊರಟವರು ವೈರಾಗ್ಯದಿಂದ. ಬದುಕಿನೋಟದಲ್ಲಿ ಅವರವರ ನೆಮ್ಮದಿಯನ್ನು
ಹುಡುಕಿಕೊಂಡು ಅಲೆವವರು..
ಅಪರಿಚಿತರೊಂದಿಗೆ ಮಾತನಾಡಬೇಡ ಎಂದೇ ಕೇಳಿ ಬೆಳೆದಿದ್ದ
ನನಗೆ ಮೊದಲ ಬಾರಿಗೆ ಅಪರಿಚಿತ ಜಗತ್ತು ಎಷ್ಟು ಸುಂದರವಾಗಿದೆ ಎಂಬ ಅರಿವು ಉಂಟಾಯಿತು.
ದಾರಿಯಲ್ಲಿ ಪರಿಚಿತರಾದವರು ಕೆಲವರು ಟಾಟಾ ಹೇಳಿ ಹೋದರು. ಕೆಲವರು ನಂಬರು, ಇಮೇಲ್ ಐಡಿ
ನೀಡಿ ನನ್ನ ಸೋಷಿಯಲ್ ನೆಟ್‌ವರ್ಕ್ ಬೆಳೆಸಿದರು. ಎಲ್ಲೋ ಹುಟ್ಟಿ ಬೆಳೆದವರ ಬದುಕಿನ ಕೆಲ
ಹೊತ್ತಿನ ಪಾಲು ನನಗೆ ದಕ್ಕಿತ್ತು. ಹಂಚಿಕೊಂಡು ಬದುಕುವ ಹಾಗೂ ಬದುಕು ಹಂಚಿಕೊಳ್ಳುವ
ವಿಶಿಷ್ಟ ಗುಣವನ್ನು ಈ ಪ್ರವಾಸ ಕಲಿಸಿತ್ತು. ಕೆಟ್ಟ ಅನುಭವಗಳೂ ಆದವು. ಆದರೆ
ಅನುಭವಗಳಿಂದ ತಾನೇ ಕಲಿಯಲು ಸಾಧ್ಯ?
ಬಿಸಿಲು, ಮಂಜು, ಮಳೆ, ಚಳಿ, ಏಕಾಂತ- ಆದರೆ
ಏಕಾಂಗಿಯಲ್ಲ... ಯೋಚನೆಗಳು ವಿಸ್ತಾರರೂಪ ಪಡೆದಿದ್ದವು, ಸಮಯವಿದೆಯೆಂದು ಎಲ್ಲವನ್ನೂ
ಒಂದೇ ದಿನ ನೋಡುವ ಹಪಹಪಿಗೆ ಬೀಳಲಿಲ್ಲ. ಒಂದೊಂದು ದಿನ ಒಬ್ಬಳೇ ಸುಮ್ಮನೇ ಯೋಚಿಸುತ್ತಾ,
ಕನಸು ಕಾಣುತ್ತಾ ಕಳೆದೆ. ಆ ಸಮಯವೂ ತಿರುಗಾಡಿದಷ್ಟೇ ಅಮೂಲ್ಯ. ಏಕೆಂದರೆ ಸಮಯದ ಹಿಂದೆ ನಾ
ಓಡುತ್ತಿರಲಿಲ್ಲ. ತಿರುಗಿ ಬೆಂಗಳೂರಿಗೆ ಬರುವಾಗ ಜಗ ಸುತ್ತುವ ಕನಸು ಅರಳುತ್ತಿತ್ತು. ಬಂದೊಡನೆಯೇ ವರ್ಷಗಳಿಂದ ಮುಂದೂಡುತ್ತಿದ್ದ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದೆ.
ರೇಶ್ಮಾರಾವ್ ಸೊನ್ಲೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ