First Published: 06 Feb 2014 02:00:00 AM IST
ಲೆಕ್ಕದಿ ದಾಖಲೆ ಬರೆದ ಸೊನ್ಲೆ
'ನಿಮ್ಗೆ ಯಾವೂರಾಯ್ತು?'
'ಸೊನ್ಲೆ'
'ಸೊನ್ಲೆನಾ? ಏನ್ರೀ ನಿಮ್ಮೂರ್ ಹೈಸ್ಕೂಲು?! ಈ ವರ್ಷದ್ ಬ್ಯಾಚ್ ಹೆಂಗಿದೆಯಂತೆ?'
'ಬ್ಯಾಚ್ ಹೆಂಗಿದ್ರೂ ತಯಾರ್ ಮಾಡ್ಬಿಡ್ತಾರೆ ಸಾರ್ ನಮ್ ಮೇಷ್ಟ್ರುಗಳು. ಈ ವರ್ಷನೂ 100ರ್ ಗ್ಯಾರಂಟಿ.'
- ಹೌದು,
ಹೀಗೆ ಸರ್ಕಾರಿ ಶಾಲೆಯೊಂದರಿಂದ ಊರೊಂದು ಗುರುತಿಸಿಕೊಂಡು ಊರಿನವರಿಗೆ ಹೆಮ್ಮೆ
ತರುತ್ತಿರುವುದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸೊನಲೆಯಲ್ಲಿ. ಈ ಭಾಗದಲ್ಲಿ ಯಾರ
ಬಳಿಯೇ ಸೊನಲೆ ಹೆಸರೆತ್ತಿದರೂ ಶಾಲೆಯ ಪ್ರಸ್ತಾಪವಿಲ್ಲದೆ ಮಾತು ಮುಗಿಯುವುದೇ ಇಲ್ಲ. ಇಲ್ಲಿನ
ಸರ್ಕಾರಿ ಪ್ರೌಢಶಾಲೆ 5 ಬಾರಿ ಸತತವಾಗಿ ಸೇರಿದಂತೆ ಕಳೆದ 9 ವರ್ಷಗಳಲ್ಲಿ 7 ಬಾರಿ 100
ಶೇ. ಫಲಿತಾಂಶ ಕೊಟ್ಟಿದ್ದು ರಾಜ್ಯದ ಮಟ್ಟಿಗೆ ಒಂದು ದಾಖಲೆಯೇ ಸರಿ. ಎರಡು ಬಾರಿ
ತಪ್ಪಿದಾಗಲೂ 90ರಿಂದ ನೂರು ವಿದ್ಯಾರ್ಥಿಗಳಿರುವ ಎಸ್ಸೆಸ್ಸೆಲ್ಸಿ ತರಗತಿಯಲ್ಲಿ ಒಬ್ಬರೋ
ಇಬ್ಬರೋ ಒಂದು ವಿಷಯದಲ್ಲಿ ನಪಾಸಾಗಿದ್ದು ಇಲ್ಲಿನ ಶಿಕ್ಷಕರ ಮನಸ್ಸಿನಲ್ಲಿ ಸದಾ ಕೊರೆವ
ವಿಷಾದ.
ಸೊನಲೆ ಒಂದು ಪುಟ್ಟ ಗ್ರಾಮ. ಬಹುತೇಕ ರೈತರೇ ವಾಸವಾಗಿರುವ ಈ ಭಾಗದಲ್ಲಿ ಮಕ್ಕಳನ್ನು ಶಿಕ್ಷಣದತ್ತ ಪ್ರೇರೇಪಿಸುವ ಕೆಲಸ ಒಂದು ಸವಾಲೇ ಸರಿ. ಅಂಥ
ಸವಾಲಿಗೆ ಎದೆಯೊಡ್ಡಿದವರು ಸೊನಲೆ ಪ್ರೌಢಶಾಲೆಯ ಶಿಕ್ಷಕರು. ಹೌದು, ಇವರೆಲ್ಲರಲ್ಲೂ
ಕನಸಿದೆ. ಇವರ ಪ್ರತಿ ಮಾತಿನಲ್ಲೂ ಅದು ಇಣುಕುತ್ತದೆ. ಆ ಕನಸಿನಲ್ಲಿ ಮಕ್ಕಳ ಉನ್ನತ
ಭವಿಷ್ಯವಿದೆ. ಇಂಥಹ ಉತ್ಸಾಹಿ ಸಮಾನ ಮನಸ್ಕ ಶಿಕ್ಷಕರು ಒಂದೆಡೆಯೇ ಒಟ್ಟಾದ ಮೇಲೆ ಅದರ ಫಲ
ಮಕ್ಕಳು ಹಾಗೂ ಸಮುದಾಯಕ್ಕೆ ಸಿಕ್ಕೇಸಿಗುತ್ತದೆ.
ಸರ್ಕಾರಿ ಕೆಲಸ, ಏನೋ 10ರಿಂದ
5ರವರೆಗೆ ಪಾಠ ಮಾಡಿ ಮನೆಗೆ ಹೋದರಾಯಿತು ಎಂಬ ಉದಾಸೀನ ಧೋರಣೆ ಹುಡುಕಿದರೂ ಸಿಗುವುದಿಲ್ಲ.
ಸುತ್ತಲ ಹತ್ತಾರು ಹಳ್ಳಿಗಳ ಮನೆಮನೆಗೆ ಹೋಗಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ
ತಿಳಿವಳಿಕೆ ನೀಡುತ್ತಾರೆ. ಮನೆಯಲ್ಲಿ ಕರೆಂಟ್ ಇಲ್ಲ, ಅಪ್ಪ ಕೆಲಸ ಹೇಳಿದರು ಎಂಬ ನೆಪ
ನಡೆಯುವುದಿಲ್ಲ. ಏಕೆಂದರೆ ಪಾಠ ಮುಗಿದ ಮೇಲೆ ಪ್ರತಿ ರಾತ್ರಿ ಊರಿನ ಹುಡುಗರು ಶಾಲೆಯಲ್ಲೇ
ಇದ್ದು ಓದಬೇಕು. ಶಿಕ್ಷಕರು ಮೇಲ್ವಿಚಾರಣೆ ನಡೆಸುತ್ತಾರೆ. ಈ ನಿಯಮ ಹುಡುಗಿಯರಿಗಿಲ್ಲ.
ಆದರೆ ಅವರು ಪ್ರತಿ ರಾತ್ರಿ ತಾವು ಮಲಗುವ ಮೊದಲು (ಕನಿಷ್ಠ ಪಕ್ಷ10.30ಕ್ಕೆ)
ಶಿಕ್ಷಕರಿಗೆ ಮಿಸ್ಕಾಲ್ ಕೊಟ್ಟು ತಾವು ಇನ್ನೂ ಓದುತ್ತಿರುವುದನ್ನು ಸೂಚಿಸಬೇಕು.
ಬೆಳಿಗ್ಗೆ 5 ಗಂಟೆಗೆ ಮತ್ತೊಮ್ಮೆ ಮಿಸ್ಕಾಲ್ ಕೊಡಬೇಕು. ಮಿಸ್ಕಾಲ್ ಕೊಟ್ಟು ಮತ್ತೆ
ಮಲಗುವಂತಿಲ್ಲ. ಯಾವುದೇ ಸಮಯದಲ್ಲಿ ಬೇಕಾದರೂ ಶಿಕ್ಷಕರು ಕರೆ ಮಾಡಿ ಏನು ಓದಿದರೆಂದು
ವಿಚಾರಿಸಬಹುದು. ರಜಾ ದಿನಗಳಲ್ಲಿ ಮಕ್ಕಳ ಮನೆಗಳಿಗೆ ಸರ್ಪ್ರೈಸ್ ಭೇಟಿ ನೀಡುತ್ತಾರೆ.
ಶಾಲೆಯಲ್ಲಿ ಹಿಂದಿನ ದಿನ ಓದಿದ ಪಠ್ಯದ ಪ್ರಶ್ನೋತ್ತರ ಸಮಯವೂ ಇರುತ್ತದೆ.ಹಳೆಯ
ವಿದ್ಯಾರ್ಥಿಯೊಬ್ಬ ತಾನು ಶಾಲೆಯಲ್ಲಿ ಪಡೆದ ಗಟ್ಟಿ ತಳಪಾಯದಿಂದ ವಾಲಿಬಾಲ್ನಲ್ಲಿ
ರಾಷ್ಟ್ರೀಯ ಕ್ರೀಡಾ ಶಾಲೆಗೂ ಆಯ್ಕೆಯಾಗಿದ್ದಾನೆ. ಶಾಲೆಯ ಸುತ್ತಲೂ ಮಕ್ಕಳ ಶ್ರಮದಾನದ
ಫಲವಾಗಿ ತರಕಾರಿ, ಹೂವಿನ ತೋಟ ಉದ್ಯಾನವನವಾಗಿ ಅರಳಿ ನಿಂತು ಪರಿಸರವನ್ನು ಹಸಿರಾಗಿಸಿದೆ.
ಸಭಾಭವನ ಬೇಕಿದೆ...ಇದುವರೆಗೂ ಶಾಲೆಗೆ ಜಿಪಂ, ತಾಪಂ,
ಗ್ರಾಪಂನಿಂದ ಬಂದ ಅನುದಾನ ಹಾಗೂ ದಾನಿಗಳ ನೆರವಿನಿಂದ ಬಂದ ಒಂದೊಂದು ಪೈಸೆಯೂ ಶಾಲೆಗೆ
ಉತ್ತಮ ಕಟ್ಟಡ, ಕಾಂಪೌಂಡ್, ಆಟದ ಮೈದಾನ, ಕುಡಿವ ನೀರಿನ ಟ್ಯಾಂಕ್ ಹಾಗೂ ಶೌಚಾಲಯ
ನಿರ್ಮಾಣಕ್ಕೆ ಸದ್ವಿನಿಯೋಗವಾಗಿದೆ. ಇಲ್ಲಿನ ಗ್ರಾಮ ಪಂಚಾಯ್ತಿಯಂತೂ ಶಾಲೆಯ ವಿಷಯದಲ್ಲಿ
ನಿರ್ಲಕ್ಷ್ಯ ತೋರಿದ್ದಿಲ್ಲ. ಹಾಗಂತ ಅನವಶ್ಯಕ ಹಸ್ತಕ್ಷೇಪವೂ ಇಲ್ಲ. ಎಸ್ಡಿಎಂಸಿ
ಸದಸ್ಯರು ಕೂಡಾ ವಿಶೇಷ ಆಸಕ್ತಿಯಿಂದ ಶಾಲೆಗೆ ವಿದ್ಯಾರ್ಥಿಗಳಷ್ಟೇ ಹಾಜರಿ ನೀಡುತ್ತಾರೆ.
ಆದರೆ ಶಿಕ್ಷಕರ ಒಂದೇ ಕೊರಗೆಂದರೆ 280 ಮಕ್ಕಳಿರುವ ಶಾಲೆಯಲ್ಲಿ ಬಿಸಿಯೂಟ ಬಡಿಸಲು
ಸರಿಯಾದ ಸ್ಥಳಾವಕಾಶವಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ರಂಗ ಮಂದಿರವಿಲ್ಲ.
ಮಳೆಗಾಲದಲ್ಲಂತೂ ಮಕ್ಕಳು ಪ್ರಾರ್ಥನೆಗೆ ನಿಲ್ಲಲು, ಊಟ ಮಾಡಲು ಒಂದು ಸಭಾಭವನದ ಕೊರತೆ
ಕಾಡುತ್ತಿದೆ. ಈಗಾಗಲೇ ಜಿಪಂನಿಂದ ಬಂದ ಅನುದಾನ ಹಾಗೂ ಉತ್ತಮ ಶಾಲೆ ಎಂದು ಗೋವಿಂದೇಗೌಡ
ಪ್ರಶಸ್ತಿ ಲಭಿಸಿದ್ದಾಗಿ ಸಿಕ್ಕ ಹಣವನ್ನೂ ಸೇರಿಸಿ ಸಭಾಭವನಕ್ಕೆ ತಳಪಾಯ ಹಾಕಲಾಗಿದೆ.
ಆದರೆ 500 ಮಂದಿ ಕೂರುವಂಥ ಸಭಾಭವನದ ಅಂದಾಜು ವೆಚ್ಚ ಸುಮಾರು 20 ಲಕ್ಷಗಳು. ಉನ್ನತ
ಸ್ಥಾನ ತಲುಪಿರುವ ಶಾಲೆಯ ಹಳೆ ವಿದ್ಯಾರ್ಥಿಗಳು, ಶಿಕ್ಷಣ ಪ್ರೋತ್ಸಾಹಕರು, ದಾನಿಗಳು
ಮನಸ್ಸು ಮಾಡಿದರೆ ಇದೇನು ದೊಡ್ಡ ಮೊತ್ತವಲ್ಲ. ಉತ್ಸಾಹಿ ಶಿಕ್ಷಕರ ನಿಸ್ವಾರ್ಥ ಕನಸು
ಹಳ್ಳಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ, ಭವಿಷ್ಯಕ್ಕೆ ನಾಂದಿ ಹಾಡುವುದಾದರೆ ಅದಕ್ಕೆ ಕೈ
ಜೋಡಿಸುವಷ್ಟು ಹೊಣೆ ನಮ್ಮದೂ ಆಗಲಿ ಅಲ್ಲವೇ?
ದೇಣಿಗೆ ನೀಡುವವರು ನೇರವಾಗಿ
ಶಾಲೆಯ ಖಾತೆ ಸಂಖ್ಯೆ 10826100003057(ಐಎಫ್ಎಸ್ಸಿ ಕೋಡ್-
ಸಿಎನ್ಆರ್ಬಿ000ಪಿಜಿಬಿ1) ಪ್ರಗತಿ ಗ್ರಾಮೀಣ ಬ್ಯಾಂಕ್, ಸೊನಲೆ, ಹೊಸನಗರ ತಾಲೂಕು
ಇಲ್ಲಿಗೆ ಜಮಾ ಮಾಡಬಹುದು. ರಶೀದಿಯನ್ನು ತಮ್ಮ ವಿಳಾಸಕ್ಕೆ ಕಳಿಸಕೊಡಲಾಗುವುದು.
ಮಾಹಿತಿಗೆ ಸೋಮಶೇಖರ್ ಬಿ.ಪಿ. (9448885142) ಸಂಪರ್ಕಿಸಬಹುದು.
ನಮ್ಮದೊಂದು
ಕನಸಿದೆ, ಶಾಲೆಯನ್ನು ನವೋದಯ ಮಾದರಿ ಮಾಡಬೇಕೆಂದು. ಸದ್ಯ ಸಭಾಭವನವೊಂದು ನಿರ್ಮಾಣವಾದರೆ
ಮಕ್ಕಳಿಗೆ ಬಿಸಿಯೂಟ ಮಾಡಲು, ಮಳೆಗಾಲದಲ್ಲಿ ಪ್ರಾರ್ಥನೆಗೆ, ಸಾಂಸ್ಕೃತಿಕ ಕಾರ್ಯಕ್ರಮ
ನಡೆಸಲು, ಪರೀಕ್ಷೆ ಸಮಯದಲ್ಲಿ ರಾತ್ರಿವರೆಗೂ ಕುಳಿತು ಓದಲು ಅನುಕೂಲವಾಗುತ್ತದೆ.
ಇದಕ್ಕಾಗಿ ದೇಣಿಗೆ ಎತ್ತುವ ಚಿಂತನೆ ನಡೆಸಿದ್ದೇವೆ.
- ಪ್ರವೀಣ್ಕುಮಾರ್, ಮುಖ್ಯಶಿಕ್ಷಕ.
-ರೇಶ್ಮಾ ರಾವ್ ಸೊನ್ಲೆ
1 ಕಾಮೆಂಟ್:
ಸೊಸಲೆಯ ಸರಸ್ವತಿ ಅವಾಸಸ್ಥಾನ ಇಡೀ ರಾಜ್ಯಕೇ ಮಾದರಿಯಾಗಲಿ. ಸಭಾ ಭವನವುೂ ಬಲು ಬೇಗ ನನಸಾಗಲಿ.
ಕಾಮೆಂಟ್ ಪೋಸ್ಟ್ ಮಾಡಿ