ಪುಟಗಳು

30.1.14

ಮರೆವು ಮರೆಸಿ

First Published: 27 Jan 2014 02:00:00 AM IST
ಬೊಚ್ಚು ಬಾಯಿಯ ನನ್ನಜ್ಜಿ ನಕ್ಕರೆ ಪುಟ್ಟ ಪಾಪಚ್ಚಿಯೊಂದು ನಕ್ಕಂತೆಯೇ ಕಾಣುತ್ತಾಳೆ. ಅವಳ ನಗು ಅಷ್ಟೇ ನಿಷ್ಕಲ್ಮಶ ಕೂಡಾ. ಅನುಭವದ ಖಜಾನೆಯಿಂದ ಅಪ್ಪಅಮ್ಮನಿಗೆ ಆಪತ್ಕಾಲದಲ್ಲಿ ಉತ್ತಮ ಸಲಹೆ ನೀಡುವ, ಮೊಮ್ಮಕ್ಕಳನ್ನು ಕೂರಿಸಿಕೊಂಡು ಕತೆ ಹೇಳುವ, ತನ್ನ ಬಾಲ್ಯದ ನೆನಪುಗಳ ಬಿಚ್ಚಿ ಜೀವನಪಾಠ ಹೇಳುವ ಈ ಮುದ್ದಿನ  ಸುಬ್ಬಮ್ಮ ನಮ್ಮೆಲ್ಲರನ್ನೂ ದಿಗಿಲುಗೊಳಿಸತೊಡಗಿದ್ದು ಇತ್ತೀಚೆಗೆ ಏನೋ ಹೇಳಲು ಬಂದು ಏಕೆ ಬಂದೆನೆಂದೇ ನೆನಪಾಗದೇ ತಡಕಾಡತೊಡಗಿದಾಗ, ತಾನು ನಿತ್ಯ ಅದೇ ಮರದ ಕಪಾಟಿನ ಮೂರನೇ ಡಬ್ಬಿಯಲ್ಲಿಡುವ ಮಾತ್ರೆಗಳಿಗಾಗಿ ಮನೆಯೆಲ್ಲಾ ಹುಡುಕಾಡತೊಡಗಿದಾಗ. ಹೊರಗೆ ಸುತ್ತಲು ಹೋದ ಅಜ್ಜಿ ಎಷ್ಟು ಹೊತ್ತಾದರೂ ಬರದಿದ್ದುದನ್ನು ಕಂಡು ಅಪ್ಪ ಹುಡುಕಹೋದರೆ ಮನೆ ದಾರಿ ತಿಳಿಯದೆ ಮಧ್ಯರಸ್ತೆಯಲ್ಲಿ ತಡವರಿಸುತ್ತಾ ನಿಂತಿದ್ದ ಅಜ್ಜಿಯನ್ನು ಕಂಡಾಗ.ಅಜ್ಜಿಗೆ ಈ ಪರಿ ಮರೆವು ಆವರಿಸುತ್ತಿದ್ದುದನ್ನು ನೋಡಿ ಅಪ್ಪ ಅಮ್ಮ ಚಿಂತಿಸತೊಡಗಿದರೆ ನನ್ನ ಮನಸ್ಸು ಮಾತ್ರ ಮರೆವಿಗೆ ಕಾರಣ ಹುಡುಕುತ್ತಿತ್ತು. ಓದಿದ್ದನ್ನು ಥಳಕು ಹಾಕಿಕೊಂಡ ನನ್ನ ಕಲ್ಪನೆ ಅಜ್ಜಿಯ ಮೆದುಳನ್ನು ಪೋಸ್ಟ್‌ಮಾರ್ಟಂ ಮಾಡುತ್ತಿತ್ತು. ಅಜ್ಜಿಯ ಮೆದುಳಿನ ಹಿಪ್ಪೋಕ್ಯಾಂಪಸ್‌ನಲ್ಲಿ ಕೋಶಗಳು ನಶಿಸತೊಡಗಿದ್ದವು. ಗ್ರೇ ಮ್ಯಾಟರ್(ಮೆದುಳಿನ ಬೂದು ಬಣ್ಣದ ಭಾಗ) ಕಡಿಮೆಯಾಗಿ ಮೆದುಳಿನ ಬಣ್ಣವೇ ಬದಲಾದಂತೆ ಕಂಡಿತು. ಇವೆಲ್ಲಕ್ಕೂ ಅಜ್ಜಿಗೆ ವಯಸ್ಸಾದದ್ದೇ ಕಾರಣ, ವಯಸ್ಸಾದಂತೆಲ್ಲ ಕೋಶಗಳು ಆಹಾರದಲ್ಲಿನ ಸತ್ವಗಳನ್ನು ಹೀರಿಕೊಳ್ಳುವುದು ನಿಧಾನಗತಿಯಾಗುತ್ತದೆ ಎಂಬುದನ್ನು ಕೂಡಾ ಮೈಕ್ರೋಸ್ಕೋಪ್‌ನಲ್ಲಿ ನೋಡಿದಂತೆ ಕಲ್ಪಿಸಿಕೊಂಡೆ. ಆದರೂ ಇದು ವಯೋಸಹಜ ಬಂದ ಮರೆವೋ ಅಥವಾ ಅಜ್ಜಿಗೆ ಅಲ್ಜೀಮರ್ಸ್ ಬರುತ್ತಿದೆಯೇ ಎಂಬ ಸಂಶಯ ತಲೆ ತಿನ್ನತೊಡಗಿತು.ಅಂತರ್ಜಾಲದಲ್ಲಿ ತಡಕಾಡಿದೆ. ಅಜ್ಜಿ ಏನೇ ಮರೆತರೂ ಮೊದಲಿನಿಂದ ಮಾಡಿಕೊಂಡು ಬಂದ ನಿತ್ಯದ ಕಾರ್ಯಗಳಾದ ಊಟ, ಸ್ನಾನ, ಪೂಜೆಗಳನ್ನು ಮಾಡುತ್ತಿದ್ದುದರಿಂದ ಇದು ಅಲ್ಜೀಮರ್ಸ್ ಅಲ್ಲ ಎಂದುಕೊಂಡೆ. ಅಲ್ಲದೆ ತನಗೇನು ಮರೆತುಹೋಗುತ್ತದೆ ಎಂದು ಕೇಳಿದರೆ ಅಜ್ಜಿ 'ಈ ಮಾತ್ರೆ ಒಂದ್ ಎಲ್ ಇಡ್ತೀನೇನ ಮಾರಾಯ್ತಿ, ಹಾಳು ಮರೆವು, ನೆನ್ಪೇ ಆಗಲ್ಲ', 'ಒಂದ್ ದಿನ ಬಿಡ್ದೆ ಕುಂಕುಮಭಾಗ್ಯ ಧಾರಾವಾಹಿ ನೋಡ್ತೀನಿ. ಸರಸ್ವತಿ ಕೇಳ್ದಾಗ ಧಾರವಾಹಿ ಹೆಸ್ರೇ ಬರ್‌ಬಾರ್ದನೇ ಬಾಯಿಗೆ', 'ಹೊರಗೆ ಯಾರನ್ನಾದರೂ ನೋಡಿ ಮಾತಾಡ್ಕಂಡು ಬಂದಿರ್ತೀನಿ. ಯಾರು ಅಂತನೇ ನೆನ್ಪಾಗಲ್ಲ' ಎನ್ನುತ್ತಿದ್ದಳು. ಡಿಮೆನ್ಷಿಯಾ, ಅಲ್ಜೀಮರ್ಸ್ ಇದ್ದಿದ್ದರೆ ತನಗೇನು ಮರೆತುಹೋಗುತ್ತದೆ ಎಂಬುದನ್ನೂ ಅವಳಿಂದ ಹೇಳಲಾಗುತ್ತಿರಲಿಲ್ಲ, ಸಂಬಂಧಗಳನ್ನೂ ಗುರುತಿಸಲಾಗುತ್ತಿರಲಿಲ್ಲ ಎಂದು ಸಮಾಧಾನ ತಂದುಕೊಂಡೆ.ಅಜ್ಜಿಯ ಮರೆವು ಹೋಗಿಸಲು ಏನಾದರೂ ಮಾಡಲೇಬೇಕೆನಿಸಿತ್ತು. ಏಕೆಂದರೆ ನಾಳೆ ನನ್ನ ಹೆಸರು ಏನೆಂದು ಕೇಳಿದರೆ ನನಗದನ್ನು ಸಹಿಸಲಾಗುತ್ತಿರಲಿಲ್ಲ. ಯಥಾಪ್ರಕಾರ ಎಲ್ಲ ಬಲ್ಲವ ಅಂತರ್ಜಾಲನೆಂಬ ಪುಣ್ಯಾತ್ಮ ಇದ್ದ. ವಾರಕ್ಕೆ ಕನಿಷ್ಠ 6- 9 ಕಿ.ಮೀ. ನಡೆವವರ ಮೆದುಳಿನಲ್ಲಿ ಗ್ರೇ ಮ್ಯಾಟರ್ ಹೆಚ್ಚಾಗುತ್ತದೆ, ಮೆದುಳು ಚುರುಕಾಗುತ್ತದೆ ಎಂದ. ಅಜ್ಜಿಯನ್ನು ಪ್ರತಿದಿನ 2 ಕಿ.ಮೀ. ವಾಕಿಂಗ್ ಕರೆದೊಯ್ಯತೊಡಗಿದೆ. ಅಜ್ಜಿಯೊಂದಿಗೆ ಕುಳಿತು ಸುಡೊಕು, ಪದಬಂಧ ಬಿಡಿಸುವುದು, ಒಗಟು ಕೇಳುವುದು, ವಸ್ತು ಮುಚ್ಚಿಟ್ಟು ಹುಡುಕಲು ಹೇಳುವುದು - ಹೀಗೆ ಮೆದುಳಿಗೆ ಕೆಲಸ ಕೊಡುವ ಹಲವಾರು ಆಟವಾಡಿದೆ. ವಿಟಮಿನ್ ಬಿ12 ಹೆಚ್ಚಿರುವ ಹಾಲು, ಮೊಟ್ಟೆ, ಇತರೆ ಆಹಾರಗಳನ್ನು ಹೆಚ್ಚು ಹೆಚ್ಚು ತಯಾರಿಸಲು ಅಮ್ಮನಿಗೆ ಹೇಳಿದೆ. ಏನೇ ನಿಂದು ಅಜ್ಜಿ ಮೇಲೆ ಪ್ರಯೋಗ ಎಂದಳು. ಪ್ರಯೋಗವಲ್ಲವ್ಮು, ಆಹಾರ, ವ್ಯಾಯಾಮ ಹೇಗೆ ದೈಹಿಕ ಆರೋಗ್ಯವನ್ನು ಫಿಟ್ ಆಗಿ ಇಡುತ್ತದೋ, ಹಾಗೇ ಮಾನಸಿಕ ಆರೋಗ್ಯವನ್ನೂ ಚುರುಕಾಗಿಡುತ್ತವೆ. ವಯಸ್ಸಾದ ಮೇಲೂ ಕೋಶಗಳು ಹುಟ್ಟುತ್ತವೆ, ಸ್ವಲ್ಪ ಹಟ ಮಾಡಬೇಕಷ್ಟೇ. ನೋಡ್ತಿರು ಅಜ್ಜಿಗೆ ಮರೆವೆಂದರೇನೆಂದೇ ಮರೆತು ಹೋಗುತ್ತದೆ ಎಂದು ಭಾಷಣ ಬಿಗಿದೆ. ಅದೊಂದು ದಿನ ಅವನ ಕೈ ಹಿಡಿದು ಪಾರ್ಕ್‌ನಲ್ಲಿ ಬರುವಾಗ ವಾಕಿಂಗ್‌ಗೆ ಬಂದ ಅಜ್ಜಿ ನೋಡೇಬಿಟ್ಟಳು. ಎದೆ ಧಸಕ್ ಎಂದಿತು. ಅಲ್ಲಿಂದ ಬಿರಬಿರನೆ ನಡೆದು ತಪ್ಪಿಸಿಕೊಂಡು ಹೇಗಪ್ಪಾ ಮನೆಗೆ ಹೋಗುವುದು, ಅಲ್ಲೇನು ರಣರಂಗವೇ ಕಾದಿದೆಯೋ ಎಂದು ಭಯ ಪಡುತ್ತಾ ಕಳ್ಳಬೆಕ್ಕಿನಂತೆ ಹೆಜ್ಜೆ ಹಾಕಿದೆ. ಅಪ್ಪ ಅಮ್ಮ ಎಲ್ಲರೂ ನಿತ್ಯದಂತೇ ಮಾತನಾಡುತ್ತಿದ್ದಾರೆ, ಅಜ್ಜಿಯು ಕೂಡಾ!ಉಸ್ಸಪ್ಪಾ ಅಜ್ಜಿಗೆ ವಿಷಯ ಮರೆತುಹೋಗಿದೆ ಎಂಬ ಸಂಭ್ರಮ ಉಕ್ಕಿ ಅಜ್ಜಿಯ ಮರೆವಿಗೂ, ಅಜ್ಜಿಗೂ ಸೇರಿ ಎರಡು ಮುತ್ತು ಕೊಟ್ಟೆ. 'ಹುಡುಗ ಚೆಂದ ಇದಾನೇ ಪುಟ್ಟಕ್ಕ' ಎನ್ನುತ್ತಾ ಕಿವಿ ಹಿಂಡಿದಳು. ಅಜ್ಜಿಯ ಮೆದುಳಲ್ಲಿ ನೆನಪುಗಳನ್ನು ಮುದ್ರಿಸಿಕೊಳ್ಳುತ್ತಾ ಕುಳಿತ ಹಿಪ್ಪೋಕ್ಯಾಂಪಸ್ ಕಣ್ಣ ಮುಂದೆ ಸುಳಿಯಿತು.
( ಕನ್ನಡಪ್ರಭದಲ್ಲಿ ಪ್ರಕಟ )

2 ಕಾಮೆಂಟ್‌ಗಳು:

Badarinath Palavalli ಹೇಳಿದರು...

ಹಿಪ್ಪೋಕ್ಯಾಂಪಸ್ ಬಗ್ಗ ಒಳ್ಳೆಯ ಸವಿವರವಾದ ಲೇಖನ.

reshma ಹೇಳಿದರು...

thanq sir :)