ಪುಟಗಳು

19.6.13

ಅಪ್ಪನಿಗೇನೂ ಗೊತ್ತಿಲ್ಲ!

ಮೊನ್ನೆ (ಜೂ.16) ಅಪ್ಪಂದಿರ ದಿನ. ಈ ಹಿನ್ನೆಲೆಯಲ್ಲಿ ಇದೊಂದು ಲಹರಿ...
ಹುಟ್ಟಿ ಎರಡು ದಶಕಗಳಲ್ಲಿ ಐದೂವರೆ ಅಡಿ ಬೆಳೆದಿದ್ದೇನೆ. ಭುಜಕ್ಕೆ ಭುಜ ತಾಗಿಸಿ ನಿಂತರೂ ಅಪ್ಪ ಮಾತ್ರ ಹೆಗಲಲ್ಲಿದ್ದೇನೋ ಎಂಬಂತೆ ಜಾಗರೂಕತೆ ವಹಿಸುತ್ತಾರೆ. ಊಟಕ್ಕೆ ಕುಳಿತಾಗೆಲ್ಲ ಹೇಗೆ ಊಟ ಮಾಡಬೇಕೆಂದು ಹೇಳುವ ಅಪ್ಪನ ಪರಿಪಾಠ ನನಗೀಗ ಬಾಯಿಪಾಠವೇ ಆಗಿಹೋಗಿದೆ. ಅಪ್ಪನಿಗೆ ಮಗಳು ಬೆಳೆದಿದ್ದಾಳೆಂಬುದೇ ಗೊತ್ತಿಲ್ಲ.
ಚೂರು ಎಡವಿದರೂ ಕಿರುಚುವುದು ಅಭ್ಯಾಸವೆಂಬಷ್ಟು ಸಹಜವಾಗಿದ್ದರೂ, ಕಿರುಚಿದ ಸದ್ದಿಗಿಂತಾ ಜೋರಾಗಿ ಹೆಜ್ಜೆ ಸಪ್ಪಳ ಮಾಡಿಕೊಂಡು ಓಡಿ ಬರುವ ಅಪ್ಪ ಹತ್ತಿರ ಬಂದ ಮೇಲೆ ಅದೇನಾಗಿ ಹೋಗಿದೆಯೋ ಎಂಬ ಭಯಕ್ಕೆ ನನ್ನೆಡೆಗೆ ನೋಡುವುದೇ ಇಲ್ಲ. ಆಗೆಲ್ಲ ಇಷ್ಟು ಸಣ್ಣದಕ್ಕೆ ಅಷ್ಟು ದೊಡ್ಡದಾಗಿ ಕಿರುಚಿದೆನೆಂಬ ಪಾಪಪ್ರಜ್ಞೆ, ಅದಕ್ಕಾಗಿ ಅತಿಯಾಗಿ ಪ್ರತಿಕ್ರಿಯಿಸಿದ ಅಪ್ಪನ ಬಗ್ಗೆ ಕೋಪ ಮತ್ತು ಅವರ ಕಾಳಜಿಯ ಬಗ್ಗೆ ಹೆಮ್ಮೆ ಎಲ್ಲವೂ ಒಟ್ಟೊಟ್ಟಿಗೇ ಆಗುತ್ತದೆ. ಆದರೂ ತಾವು ಬರಲೆಂದೇ ಮಗಳು ಕಡ್ಡಿ ಗುಡ್ಡ ಮಾಡುತ್ತಾಳೆಂದು ಅಪ್ಪನಿಗೆ ಗೊತ್ತಿಲ್ಲ.
ನನಗೆ ಸಣ್ಣದಾಗಿ ತರಚಿದರೂ ಎಣ್ಣೆ, ಆಯಿಂಟ್‌ಮೆಂಟ್ ತಂದು ನಿಲ್ಲುವ ಅಪ್ಪನ ಅಂಗಾಲು ಮಾತ್ರ ಐನೂರು ಬಿರುಕು ಬಿಟ್ಟು ತಮಗಿಲ್ಲದ ಎಣ್ಣೆ, ವ್ಯಾಸಲೀನ್ ಭಾಗ್ಯಕ್ಕೆ ಕರುಬುತ್ತಾ ಬಾಯಿ ಬಾಯಿ ಬಿಡುತ್ತಿರುತ್ತವೆ. ಆದರೂ ಅಪ್ಪನಿಗೆ ಔಷಧ ಬೇಕಾಗಿರುವುದು ಅವರಿಗೇ ಎಂದು ಗೊತ್ತಿಲ್ಲ.
ದೂರದ ಊರಲ್ಲಿರುವ ಮಗಳು ಕುಳಿತರೂ ನಿಂತರೂ ಊರಿನಲ್ಲೆಲ್ಲ ಸುದ್ದಿ ಹರಡುವುದು ಹೇಗೆಂದು ಅಮ್ಮ ಕೇಳುವಾಗೆಲ್ಲ ಅಪ್ಪನ ಕರಿಮೀಸೆಯ ಮಧ್ಯ ಮಧ್ಯ ಅಡಗಿ ಕುಳಿತ ಬಿಳಿಕೂದಲು ಕಿಸಕ್ ಎಂದು ಶಬ್ದ ಮಾಡದೆ ನಕ್ಕ ವಿಷಯ ಫೋನಿನಲ್ಲಿ ನನಗೆ ಕೇಳುತ್ತದೆ. ಆದರೂ ಅಪ್ಪನಿಗೂ ಅದು ಹೇಗೆ ವಿಷಯ ಹಬ್ಬಿತೆಂದು ಗೊತ್ತಿಲ್ಲ! 
ಮಕ್ಕಳು ಮನೆಗೆ ಬರುತ್ತಿದ್ದಾರೆ ಎಂಬ ವಿಷಯ ತಿಳಿಯುವುದರೊಳಗೆ ಕೆಜಿಗಟ್ಟಲೆ ಹಣ್ಣು, ತರಕಾರಿ, ತಿಂಡಿ ಮಾಡಲು ಸಾಮಾನು ತಂದು ಮನೆಯ ತುಂಬಾ ರಾಶಿ ಹಾಕುವ ಅಪ್ಪನಿಗೆ ಮಕ್ಕಳ ಹೊಟ್ಟೆಯ ಗಾತ್ರ ಸಣ್ಣದೆಂದು ಇನ್ನೂ ಗೊತ್ತಿಲ್ಲ.
ಒಂದು ತಿಂಗಳು ಡ್ರೈವಿಂಗ್ ಕ್ಲಾಸ್‌ಗೆ ಹೋದ ಮಗಳು ಕಾರು ಓಡಿಸಬಲ್ಲಳೆಂದು ಗೊತ್ತಿಲ್ಲ. ನಲ್ವತ್ತಕ್ಕಿಂತ ಜೋರಾಗಿ ಸ್ಕೂಟಿ ಓಡಿಸಬೇಡ ಎನ್ನುವ ಅಪ್ಪನಿಗೆ ಟ್ರಾಫಿಕ್ ಸಿಗ್ನಲ್ ಹಾರಿಸುತ್ತೇನೆಂದು ಗೊತ್ತಿಲ್ಲ, ಅನ್ನ ಸಾಂಬಾರ್ ತಿಂದೆನೆಂದು ಹೇಳಿ ಸ್ಯಾಂಡ್‌ವಿಚ್ ತಿಂದು ಮಲಗುವುದು ಗೊತ್ತಿಲ್ಲ. ಇಷ್ಟೆಲ್ಲ ಆದ್ಮೇಲೂ ಅಪ್ಪ ನನಗೇ ಬೈತಾರೆ, ಎಂಥ ಗೊತ್ತಿಲ್ಲದಿದ್ದರೂ 'ಎಲ್ಲ ಗೊತ್ತಿದೆ' ಅನ್ನೋಕ್ಕೊಂದು ಗೊತ್ತು ಅಂತ!- 
 (ಕನ್ನಡಪ್ರಭದ ರಂಗೋಲಿಯಲ್ಲಿ ಪ್ರಕಟ)
ರೇಶ್ಮಾ ರಾವ್ ಸೊನ್ಲೆ

1 ಕಾಮೆಂಟ್‌:

Badarinath Palavalli ಹೇಳಿದರು...

ಮನಮುಟ್ಟುವ ಲೇಖನ.