ಮಿಲ್ಲಿ ನಮ್ಮ ಹಾಸ್ಟೆಲ್ ಬೆಕ್ಕು.ವಯಸ್ಸಿನ್ನಲ್ಲಿ ನಮಗಿಂತಾ ಎಷ್ಟೋ ಚಿಕ್ಕದಾದರೂ ಈಗಾಗಲೇ ಹಲವು ಮರಿಗಳನ್ನು ಹೆತ್ತು ತಾನು ತುಂಬಾ ದೊಡ್ದವಳೆಂದು ಬೀಗಿದೆ.. ನಾಲ್ಕು ತಿಂಗಳ ಹಿಂದಷ್ಟೇ ಒಂದೊಂದೇ ಮರಿಗಳನ್ನು ಕಚ್ಚಿಕೊಂಡು ಬಂದು ನಮ್ಮ ಹಾಸ್ಟೆಲ್ ಒಳಗಿಟ್ಟು ನಮಗೆಲ್ಲಾ ತನ್ನ ಮರಿಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡಿತ್ತು. ಬಿಳಿಯ,ಚಿಕಣಿ ,ಕೆಂಪಿ,ಹುಲಿಯ ಎಂದು ಮರಿಗಳ ಬಣ್ಣ,ಆಕಾರದ ಮೇಲೆ ಹೆಸರಿತ್ತು ಆಟ ಆಡಿಕೊಂಡಿದ್ದ ನಮಗೆ ದಿನಗಳೆದಂತೆಲ್ಲಾ 5ಕಾಲಡಿ ಕೈಯ್ಯಡಿ ಸಿಕ್ಕುವಾಗ,ಅಷ್ಟನ್ನೂ ಇಟ್ಟುಕ್ಕೊಳ್ಳಲು ಸಾಧ್ಯವಾಗದೆ ಎರಡೆರಡು ಮರಿಗಳನ್ನು ಒಬ್ಬೊಬ್ಬರ ಮನೆಗೆ ಸಾಗಿಸಿದೆವು..ಅಷ್ಟಾಗಿ ಇನ್ನೂ ೩ ತಿಂಗಳಾಗಿಲ್ಲ,ಮತ್ತೆ ಮಿಲ್ಲಿ ಬಸುರಿ!ಮಿಲ್ಲಿಯ ರಸಿಕತೆಗೆ ಬೆರಗಾದೆವು..ಇದೀಗ ಇಂದು ಬೆಳಿಗ್ಗೆ ಎದ್ದಾಗಿನಿಂದ ವಿಚಿತ್ರವಾಗಿ ಕೂಗುತ್ತಿದ್ದ ಮಿಲ್ಲಿ ಸೈಲೆಂಟ್ ಆಗಿ ಮಲಗಿದ್ದನ್ನು ನೋಡಿ ಏನಾಯ್ತು ನೋಡುವಾಗ ಎದುರಿನಲ್ಲಿ ಕರಿ ಕಾಲು ಬಾಲದ ಪುಟ್ಟ ಮರಿ!ಅದು ಇಲಿಮರಿಯೋ ಬೆಕ್ಕಿನದೇ ಮರಿಯೋ endu ನೋಡುತ್ತಿರುವಾಗ ಕಣ್ಣೆದುರಿಗೇ ಮಿಲ್ಲಿ ಎದ್ದು 'ಪುಳಕ್ 'ಎಂದು ಮತ್ತೊಂದು ಕಪ್ಪು ಮರಿಯನ್ನು ಭೂಮಿಗಿಳಿಸಿ ನಮ್ಮನ್ನೆಲ್ಲಾ ಪುಳಕಗೊಲಿಸಿದಳು!! ಮತ್ತರ್ಧ ಗಂಟೆಯಲ್ಲಿ ಇನ್ನೆರಡು ಮರಿಗಳು ಹೊರಜಗತ್ತಿಗೆ ತಮ್ಮ ಪುಟ್ಟ ಪಾದಗಳನ್ನಿಳಿಸಿದವು.. ಕಳೆದ ಬಾರಿ ಎರಡು ಹುಲಿ ಬಣ್ಣದ ಎರಡು ಬಿಳಿ ಬಣ್ಣದ ಮರಿ ಹಾಕಿದ್ದ ಮಿಲ್ಲಿ ಈ ಬಾರಿ ಎರಡು ಕಪ್ಪು ಎರಡು ಬಿಳಿ ಮರಿಗಳನ್ನು ಹಾಕಿದ್ದಾಳೆ.ಯಾವಾಗಲೂ ಹಾಸ್ಟೆಲ್ ಹೊರಗೆ ಒಂದು ಬಿಳಿ ಹಾಗೂ ಒಂದು ಬೆಕ್ಕಿನ ಬಣ್ಣದ ಗಡವ ಬೆಕ್ಕುಗಳು ಓಡಾಡುತ್ತಿರುತ್ತವೆ.. ಇದರಲ್ಲಿ ಹೀಗೆ ಬಣ್ಣಬಣ್ಣದ ಮರಿಗಳನ್ನು ಹೆರುವ ಮಿಲ್ಲಿಯ ಗಂಡ ಯಾರೆಂಬುದೇ ಸಧ್ಯಕ್ಕೆ ನಮ್ಮನ್ನೆಲ್ಲಾ ಕಾಡುತ್ತಿರುವ ಪ್ರಶ್ನೆ!!
(ಉದಯವಾಣಿಯಲ್ಲಿ ಪ್ರಕಟ)