6.1.17
ಉಡುಪಿನ ಲೋಪ ಹುಡುಕುವ ನಿಮ್ಮ ಮನಸ್ಥಿತಿಗೆ ಧಿಕ್ಕಾರ
ಅದು ವಾಘಾ ಬಾರ್ಡರ್. ಭಾರತ ಪಾಕಿಸ್ತಾನದ ಗಡಿ ಬಾಗಿಲನ್ನು ತೆರೆವ ಸಮಯ. ಈ ಕಡೆಯಿಂದ ಇಂಡಿಯಾ ಜಿಂದಾಬಾದ್ ಕೂಗು, ಆ ಕಡೆಯಿಂದ ಪಾಕಿಸ್ತಾನ್ ಜಿಂದಾಬಾದ್, ಭಾರತ್ ಮುರ್ದಾಬಾದ್ ಅಬ್ಬರ... ಎಂಥವರ ಮೈಯ್ಯಲ್ಲೂ ದೇಶಭಕ್ತಿಯೆಂಬುದು ಜಾಗೃತವಾಗಿ ಉಕ್ಕುವಂಥ ಸನ್ನಿವೇಶ. ಜನಸಂದಣಿಯ ಸುತ್ತಲೂ ನಮ್ಮ ಸೈನಿಕರು, ನಡುವೆ ತಲೆ ಹಾಕಿ ಪಾಕಿಸ್ತಾನವನ್ನು ನೋಡುವ ಕಾತರದಲ್ಲಿ ಒದ್ದಾಡುತ್ತಿದ್ದ ನಾವು.... ಇದ್ದಕ್ಕಿದ್ದಂತೆ ನನ್ನ ಗೆಳತಿ, ಬೇಗ ಹೊರಗೆ ಹೋಗಣ... ಇಲ್ಯಾರೂ ಸರಿಯಿಲ್ಲ ಎನ್ನಲು ಶುರು ಮಾಡಿದಳು. ಯಾಕೆಂದು ನೋಡುವ ಹೊತ್ತಿಗೆ ಸಿಕ್ ಮೈಂಡೆಡ್ ಯುವಕನೊಬ್ಬ ಅವಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಮುಖ ಮಾತ್ರ ಎತ್ತರಿಸಿಕೊಂಡು ಗಡಿಯ ಗೇಟ್ ಬಳಿ ನೋಡುತ್ತಾ ಸಭ್ಯನಂತೆ ನಿಂತಿದ್ದ. ಭಾಷೆ ಬರದ ನಾವು ಅತ್ತೂ ಕರೆದು, ಸೈನಿಕರೊಬ್ಬರ ಸಹಾಯ ಪಡೆದು ಜನಜಂಗುಳಿಯಿಂದಾಚೆ ಹೋದೆವು.
ಇಷ್ಟಕ್ಕೂ ಆಕೆಯೇನೂ ಪ್ರಚೋದನಾಕಾರಿ ಉಡುಗೆ ಧರಿಸಿರಲಿಲ್ಲ. ಅಮೃತಸರದಲ್ಲಿ ಆಗಿದ್ದ ಚಳಿ 9 ಡಿಗ್ರಿ ಸೆಲ್ಶಿಯಸ್. ದಪ್ಪ ಕೋಟ್ ಹಾಕದೆ ನೆಟ್ಟಗೆ ನಿಲ್ಲುವುದೂ ಸಾಧ್ಯವಿರಲಿಲ್ಲ. ಅದೇನು ಹೊಸ ವರ್ಷದ ಪಾರ್ಟಿಯೂ ಅಲ್ಲ, ರಾತ್ರಿಯೂ ಅಲ್ಲ, ಯಾರೂ ಕುಡಿದಿರಲೂ ಇಲ್ಲ, ಉಡುಪಿನಲ್ಲೂ ಲೋಪವಿರಲಿಲ್ಲ... ಹಾಗಿದ್ದೂ ಆ ಸ್ಫುರದ್ರೂಪಿ, ವಿದ್ಯಾವಂತನಂತೆ ಕಾಣುತ್ತಿದ್ದ ವಿಕೃತನಿಗೆ ಅವಳ ಬಟ್ಟೆ ಮೇಲೆ ಕೈಯಾಡಿಸುವ ವಾಂಛೆ ಹುಟ್ಟಿದ್ದು ಹೇಗೆ?
ಆತನಿಗೆ ಕುಟುಂಬದಿಂದ ಒಳ್ಳೆಯ ಸಂಸ್ಕಾರ ಸಿಕ್ಕಿರಲಿಲ್ಲ ಇಲ್ಲವೇ ಆತನೊಬ್ಬ ಸೈಕೋಪಾತ್ ಎಂಬುದರ ಹೊರತಾಗಿ ನನಗಿನ್ಯಾವ ಕಾರಣವೂ ಇಲ್ಲಿ ಸಿಗುತ್ತಿಲ್ಲ.
ಬೆಂಗಳೂರಿನ ಹೊಸ ವರ್ಷಾಚರಣೆಯ ಕಹಿ ಘಟನೆ, ಕಮ್ಮನಹಳ್ಳಿಯ ಗ್ರೋಪಿಂಗ್ ಪ್ರಕರಣದ ಬಳಿಕ, ಇಂಥ ಕೆಟ್ಟ ಘಟನೆಗಳು ಕರಗದಲ್ಲಾಗಲ್ಲ, ಕಡ್ಲೆಕಾಯಿ ಪರಿಷೆಯಲ್ಲಾಗಲ್ಲ, ಅವರೆಕಾಳು ಮೇಳದಲ್ಲಾಗಲ್ಲ, ಕನ್ನಡಿಗರು ಇದ್ದಲ್ಲಾಗಲ್ಲ ಅಂತೆಲ್ಲ ಹೊಸ ತರದಾದ ವಿಚಿತ್ರ ಸಮರ್ಥನೀಯ ವಾದಗಳು ಹುಟ್ಟಿಕೊಂಡಿವೆ. ಯಾರು ಸ್ವಾಮಿ ಹೇಳಿದ್ದು ಕರಗದಲ್ಲಾಗಲ್ಲ ಅಂತ? ಕರಗದಲ್ಲೂ ಆಗುತ್ತೆ, ಪರಿಷೆಯಲ್ಲೂ ಆಗುತ್ತೆ, ಬಸ್ನಲ್ಲೂ ಆಗುತ್ತೆ, ಬಸ್ಸ್ಟ್ಯಾಂಡ್ನಲ್ಲೂ ಆಗುತ್ತೆ. ಅಷ್ಟೇ ಏಕೆ? ಮನೆಯೊಳಗೇ ಎಷ್ಟೊಂದೆಲ್ಲ ಆಗುತ್ತದೆ, ಹೊರಜಗತ್ತಿಗೆ ಎಂದಿಗೂ ಬಹಿರಂಗವಾಗದ್ದು... ಯಾರೂ ಬಂದು ನಿಮಗೆ ಹೇಳಿಕೊಳ್ಳೋಲ್ಲ ಅಷ್ಟೆ. ಏಕೆಂದರೆ ಇಂಥ ಕೃತ್ಯದಲ್ಲಿ ತೊಡಗುವ ಗಂಡಸರಿಗೆ ಮಾನವಿಲ್ಲವೆಂಬುದು ಹೆಣ್ಣುಮಕ್ಕಳಿಗೆ ಗೊತ್ತು. ಸಂತ್ರಸ್ತೆಯಾದರೂ ತಮ್ಮ ಮೇಲೆ ಗೂಬೆ ಕೂರಿಸಿ ಮಾನ ತೆಗೆಯುತ್ತಾರೆಂಬುದೂ ಗೊತ್ತು. ಹೀಗಾಗಿ ಬಾಯ್ಬಿಡದೆ ತಮ್ಮೊಳಗೇ ಕಹಿಯೊಂದನ್ನು ಹೂತು ಹಾಕುವ ಹೆಣ್ಮಕ್ಕಳೇ ಹೆಚ್ಚು. ಒಂದು ವೇಳೆ ಪೋಷಕರಲ್ಲಿ ಹೇಳಿಕೊಂಡರೂ, ಮದುವೆಯಾಗಬೇಕಾದ ಹುಡುಗಿ, ಯಾರು ಹೆಣ್ಣು ಕೊಡುತ್ತಾರೆ, ಮನೆ ಮಾನ ಹೋಗುತ್ತದೆ ಇತ್ಯಾದಿ ಆತಂಕಗಳಿಂದ ತಾವೂ ಕೊರಗಿ, ಅವಳಲ್ಲೂ ಆತಂಕ ಹುಟ್ಟಿಸಿ ಬಾಯಿ ಮುಚ್ಚಿಸಿಬಿಡುತ್ತಾರೆ.
ಅಪ್ಪನೇ ಮಗಳ ಮೇಲೆ ಅತ್ಯಾಚಾರವೆಸಗಿದ್ದು, ಅಣ್ಣನಿಂದಲೇ ತಂಗಿ ಬಸಿರಾದದ್ದು, ಶಿಕ್ಷ ಕನೇ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, 2 ವರ್ಷದ ಕೂಸಿನ ಮೇಲೆ ಅತ್ಯಾಚಾರದಂಥ ಘಟನೆಗಳು ಆಗಾಗ ರಿಪೋರ್ಟ್ ಆಗುತ್ತವಲ್ಲಾ... ಅದು ಹೇಗೆ ಆ ಮಗು ಇವರನ್ನು ಪ್ರಚೋದಿಸಿರುತ್ತದೆ? ಅದು ಹೇಗೆ ಪ್ರತಿ ವರ್ಷ ರಾಖಿ ಕಟ್ಟಿಸಿಕೊಂಡ ಅಣ್ಣನಿಗೆ ತಂಗಿಯ ಮೇಲೆ ಅಂಥದೊಂದು ಯೋಚನೆ ಹುಟ್ಟುತ್ತದೆ? ಬಸ್ನಲ್ಲಿ ಹೆಣ್ಣಿನ ಪಕ್ಕ ಕುಳಿತು ಡೀಸೆಂಟ್ ಮುಖ ಹಾಕಿಕೊಂಡು ಕೈಕಟ್ಟಿ ನಿದ್ದೆ ಮಾಡುವ ಸೋಗಿನ ಅದೆಷ್ಟು ಅಂಕಲ್ಗಳು 'ಕರಕುಶಲ ಕಲೆ'ಯಲ್ಲಿ ನಿಸ್ಸೀಮರೆಂಬುದು ಹುಡುಗಿಯರ ಜಗತ್ತಿಗೆ ಗೊತ್ತಿದೆ. ರಶ್ಶಿದೆ ಎಂಬ ಮಾತ್ರಕ್ಕೆ ಹುಡುಗಿಯ ಮೈಗೆ ವಾಲಿಕೊಂಡು ನಿಲ್ಲುವ ಹುಡುಗರ ಭಂಡತನದ ಬಗ್ಗೆಯೂ ಹುಡುಗಿಯರಿಗೆ ಗೊತ್ತಿದೆ. ಸೆಲ್ಫೀ ತೆಗೆದುಕೊಳ್ಳುವ ನೆಪದಲ್ಲಿ ರಸ್ತೆಯಲ್ಲಿ ಫೋಟೋ ತೆಗೆದುಕೊಂಡು ಹೋದ ಹುಡುಗನ ಕೆಲಸ ಆಕೆಗೆ ತಿಳಿಯುತ್ತದೆ. ಆದರೆ, ಇಲ್ಲೆಲ್ಲ ಪಕ್ಕಾ ಪರ್ಫೆಕ್ಟ್ ಆಗಿ ವಾದಿಸಲಾಗದಂತೆ ಹುಡುಗರು ಚಾಲಾಕಿತನ ಮೆರೆದಿರುತ್ತಾರೆ. ನನ್ನ ಫೋಟೋ ತೆಗೆದೆ ಎಂದರೆ, ತಾನು ಸೆಲ್ಫೀ ತೆಗೆದುಕೊಂಡೆನೆಂದು ಆಗ ತಾನೇ ತೆಗೆದ ಮತ್ತೊಂದು ಫೋಟೋ ತೋರಿಸುತ್ತಾನೆ, ಮೈಮೇಲೆ ಬೀಳಬೇಡವೆಂದರೆ ತಳ್ಳುತ್ತಿದ್ದಾರೆನ್ನುತ್ತಾನೆ... ಸುಳ್ಳಿಗೇ ನಿಲ್ಲುವುದಿಲ್ಲವಲ್ಲ ಆತನ ಓರಲ್ ಡಯೇರಿಯಾ... ಜೊತೆಗೆ ಒಂದಿಷ್ಟು ಕೆಟ್ಟ ಪದಗಳನ್ನುಗುಳಿ ಆಕೆಯ ನಡತೆ ಮೇಲೆ ಗೂಬೆ ಕೂರಿಸಿದರೆ ಮತ್ತೆ ಜನರ್ಯಾರೂ ಅವಳ ಮಾತನ್ನು ನಂಬುವುದಿಲ್ಲ. ಇದಕ್ಕೇ ಆಕೆ ಬಾಯಿ ತೆಗೆಯಲು ಹೆದರುವುದು. ಅಂಥದರಲ್ಲಿ ಇಲ್ಲಿ ಕೆಲವು ಹುಡುಗಿಯರು ಬಾಯಿ ತೆರೆದಿದ್ದಾರೆ. ತನ್ನ ತಪ್ಪಿಲ್ಲವೆಂಬ ಧೈರ್ಯದಿಂದಲೇ ಹೇಳುತ್ತಿದ್ದೇನೆ ಎಂದು ಕೂಡಾ ದೌರ್ಜನ್ಯಕ್ಕೊಳಗಾದ ಯುವತಿಯೊಬ್ಬಳು ಹೆಸರು ಸಮೇತ ತಿಳಿಸಿದ್ದಾಳೆ. ಹಾಗೆ ಹೇಳಲು ಅದೆಷ್ಟು ಧೈರ್ಯ, ನೈತಿಕತೆ ಬೇಕು? ಅವಳು ಗೋಳು ಹೇಳಿಕೊಳ್ಳುತ್ತಿದ್ದರೆ, ಅವಳು ಯಾವ ಬಟ್ಟೆ ತೊಟ್ಟಿದ್ದಳು? ಗಂಟೆ ಎಷ್ಟಾಗಿತ್ತು? ಇವಳೇಕೆ ಅಲ್ಲಿ ಹೋಗಬೇಕಿತ್ತು? ಕುಡಿದಿದ್ದಳಾ? ಇತ್ಯಾದಿ ಪ್ರಶ್ನೆಗಳು ನಿಮಗೆ ಮೂಡಿದ್ದರೆ ದಯವಿಟ್ಟು ನಿಮ್ಮ ಮನಸ್ಥಿತಿ ಬದಲಿಸಿಕೊಳ್ಳಿ.
ಅವನೇಕೆ ಅಷ್ಟು ಹೊತ್ತಿನಲ್ಲಿ ಅಲ್ಲಿದ್ದ? ಕುಡಿದದ್ದು ತಪ್ಪಲ್ಲವಾ? ಅದ್ಯಾವ ಭಂಡತನದಿಂದ ಅವನು ಹುಡುಗಿಯ ಮೈಮೇಲೆ ಕೈ ಹಾಕಬಲ್ಲ? ಅಷ್ಟು ರಾತ್ರಿಯಲ್ಲೂ ಎಂಥ ಪಾರ್ಟಿ? ಅವನು ಅವಕಾಶಕ್ಕಾಗಿ ಕಾಯುತ್ತಲೇ ಅಲ್ಲಿ ಹೋಗಿದ್ದನಾ? ಇಂಥ ಪ್ರಶ್ನೆಗಳನ್ನು ಮೊದಲು ಕೇಳಿಕೊಳ್ಳಿ.
ನಿಜವಾಗಿಯೂ ಬಟ್ಟೆ ಅಥವಾ ನಡತೆ ಪ್ರಚೋದನಾಕಾರಿಯಾಗಿರಬೇಕಿಲ್ಲ, ಅಲ್ಲಿರುವುದು ಹುಡುಗಿ ಎಂಬ ಒಂದು ವಿಷಯ ಸಾಕು, ಇವರು ಪ್ರಚೋದನೆಗೊಳಗಾಗಲು. ತಾವು ಮಾಡುವುದು ಯಾರಿಗೂ ಗೊತ್ತಾಗುವುದಿಲ್ಲವೆಂದರೆ, ಅವಕಾಶ ಸಿಕ್ಕಿತೆಂದರೆ ಅದೆಷ್ಟು 'ಗೋಮುಖ'ದ ದೇಹದಿಂದ 'ವ್ಯಾಘ್ರ'ಮನಸ್ಥಿತಿಗಳು ಹೊರಬರುತ್ತವೋ ತಿಳಿಯದು. ಬಟ್ಟೆ ಗಿಡ್ಡಕೆ ಹಾಕುವುದು ನಮ್ಮ ಸಂಸ್ಕೃತಿಯಲ್ಲ. ಸರಿ, ಹಾಗೆಯೇ ಪಾಶ್ಚಾತ್ಯ ಉಡುಗೆ ಹಾಕಿದ ಹೆಣ್ಮಕ್ಕಳನ್ನು ಬೇಕೆಂದಂತೆ ಮುಟ್ಟುವುದು ನಮ್ಮ ಸಂಸ್ಕೃತೀನಾ?
ಅವಳಿಗೆ ಅರ್ಧ ರಾತ್ರಿ ಹೊರ ಹೋಗಬೇಡ ಎನ್ನುವುದು ಸರಿಯೆಂದೇ ಒಪ್ಪಿಕೊಳ್ಳೋಣ. ಆದರೆ ಅದನ್ನು ಅವನಿಗೂ ಹೇಳಿ. ಅವಳು ಕುಡಿಯುತ್ತಾಳೆಂದರೆ ನಡತೆಗೆಟ್ಟವಳೆಂದು ತೀರ್ಪು ನೀಡುವ ನಿಮ್ಮ ಮನಸ್ಸು ಅವನು ಕುಡಿಯುತ್ತಾನೆಂದಾಗಲೂ ನಡತೆಗೆಟ್ಟವನೆಂದು ತೀರ್ಪು ನೀಡಲಿ. ಅವಳು ಬಾಯ್ಫ್ರೆಂಡ್ ಜೊತೆಗೆ ಪಾರ್ಟಿ ಮಾಡಿದಳೆಂದ ಮಾತ್ರಕ್ಕೆ ಹಿಂದೂಮುಂದೂ ಯೋಚಿಸದೆ ಅವಳನ್ನು 'ಪ್ರಾಸ್ಟಿಟ್ಯೂಟ್' ಎನ್ನುವ ನಾಲಿಗೆಗಳಿಗೆ, ಪ್ರಾಸ್ಟಿಟ್ಯೂಟ್ಗಳದ್ದೂ ಸೇರಿಸಿ ಯಾರೊಬ್ಬರ ದೇಹವನ್ನೂ ಮತ್ತೊಬ್ಬ ವ್ಯಕ್ತಿ ಆಕೆಯ ಅನುಮತಿ ಇಲ್ಲದೆ ಮುಟ್ಟುವ ಹಕ್ಕಿಲ್ಲ ಎಂಬ ಕಾಮನ್ಸೆನ್ಸ್ ಹೇಳಿಕೊಡುವವರಾರಯರು? ಅರ್ಧರಾತ್ರಿಯಲ್ಲಿ ಪಾರ್ಟಿ ಮಾಡುತ್ತಿದ್ದಾಳೆಂಬ ಕಾರಣಕ್ಕೆ ಅವಳನ್ನು ಮುಟ್ಟುವ, ಅವಳ ಬಗ್ಗೆ ಕೆಟ್ಟದಾಗಿ ಮಾತಾಡುವ ಹಕ್ಕು ನೀಡಿದವರಾರು?
ಹಾಗೆಂದು ಎಲ್ಲ ಗಂಡಸರೂ ಹಾಗೆಯೇ ಎನ್ನುತ್ತಿಲ್ಲ. ಆದರೆ, ಬದಲಾಗಬೇಕಾದ್ದು ಬಹಳಷ್ಟಿದೆ.
ಕೀಚಕರಿದ್ದಾರೆ ಎಂದು ಮಗಳಿಗೆ ತಿಳಿಸುವಾಗ ಅವರನ್ನು ಎದುರಿಸುವುದು ಹೇಗೆಂಬುದನ್ನೂ ತಿಳಿಸಿ. ಅಂತೆಯೇ ಮಗನಿಗೆ ಮಹಿಳೆಯರನ್ನು ಗೌರವಿಸುವ, ರಕ್ಷಿಸುವ, ಅವರೊಂದಿಗೆ ಹೇಗೆ ವರ್ತಿಸಬೇಕೆಂಬುದರ ಸಂಸ್ಕಾರವನ್ನು ಮೊದಲು ಕಲಿಸಿ. ಒಮ್ಮೆ ಕಲ್ಪಿಸಿಕೊಳ್ಳಿ, ಎಲ್ಲ ಗಂಡ್ಮಕ್ಕಳೂ ಸಂಸ್ಕಾರವಂತರಾದರೆ, ಹೆಣ್ಮಕ್ಕಳ ಮೇಲೆ ಬಟ್ಟೆ, ರಾತ್ರಿ ಎಂದು ನೀವೀಗ ಕೂರಿಸುವ ಗೂಬೆಗಳೆಲ್ಲ ಇನ್ನಾವುದೋ ಗ್ರಹಕ್ಕೆ ಹಾರಿಹೋಗುವುದರಲ್ಲಿ ಸಂಶಯವಿಲ್ಲ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
1 ಕಾಮೆಂಟ್:
ಎಲ್ಲ ಗಂಡ್ಮಕ್ಕಳೂ ಸಂಸ್ಕಾರವಂತರಾದರೆ, ಹೆಣ್ಮಕ್ಕಳ ಮೇಲೆ ಬಟ್ಟೆ, ರಾತ್ರಿ ಎಂದು ನೀವೀಗ ಕೂರಿಸುವ ಗೂಬೆಗಳೆಲ್ಲ ಇನ್ನಾವುದೋ ಗ್ರಹಕ್ಕೆ ಹಾರಿಹೋಗುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಎಲ್ಲಾ ಹೆಣ್ಣುಮಕ್ಕಳೂ ಸಂಸ್ಕಾರವಂತೆಯರಾದರೆ ಕೂರಿಸಲು ಗೂಬೆಗಳೇ ಇರುವುದಿಲ್ಲ! :-)
ಕಾಮೆಂಟ್ ಪೋಸ್ಟ್ ಮಾಡಿ