ಪುಟಗಳು

10.10.15

ಸಾತ್ವಿಕ ಸಿಟ್ಟು ಪ್ರದರ್ಶನದ ‘ಮಧ್ಯಮ ಮಾರ್ಗ’





- ರೇಶ್ಮಾರಾವ್ ಸೊನ್ಲೆ
‘‘ಆಯುಧವಿಲ್ಲದ, ಆಸ್ತಿಯಿಲ್ಲದ ಜನರ ಮೇಲೆ ಅಧಿಕಾರ ಬಳಸಿ, ದೌರ್ಜನ್ಯ ಎಸಗುವುದು ಹೀನಕೆಲಸ. ಪಂಜಾಬ್‌ನ ನನ್ನ ಸಹೋದರರು ಅನುಭವಿಸಿದ ಅವಮಾನ ಹಾಗೂ ಹಿಂಸೆಗಳು ಕಟ್ಟಿದ ಬಾಯಿಗಳಿಂದಲೇ ಮೌನವಾಗಿ ಹಬ್ಬಿ ದೇಶದ ಮೂಲೆ ಮೂಲೆಯನ್ನೂ ತಲುಪಿದೆ. ಆಂಗ್ಲೋ-ಇಂಡಿಯನ್ ಪತ್ರಿಕೆಗಳು ನಮ್ಮ ಮೇಲಿನ ದೌರ್ಜನ್ಯವನ್ನು ತಮಾಷೆಯ ವಸ್ತುವಿನಂತೆ ಬರೆದು ಸಂತೋಷ ಪಟ್ಟಿವೆ. ಈ ಹಿನ್ನೆಲೆಯಲ್ಲಿ ಬ್ರಿಟನ್ ಸರ್ಕಾರ ಗೌರವವೆಂದು ನೀಡಿದ ಬ್ಯಾಡ್ಜ್ ಅಣಕಿಸುತ್ತಿದೆ. ನನ್ನ ದೇಶಕ್ಕಾಗಿ, ಕೋಟ್ಯಂತರ ಜನರ ಮೂಕ ಪ್ರತಿಭಟನೆಗೆ ದನಿ ನೀಡುವ ಸಲುವಾಗಿ ನಾನು ಮಾಡಬಹುದಾದ ಕನಿಷ್ಠ ಕೆಲಸವಾಗಿ, ನನಗೆ ನೀಡಿದ ‘ನೈಟ್‌ಹುಡ್’(‘ಸರ್’ ನಾಮಾಂಕಿತ) ಬಿರುದನ್ನು ಹಿಂಪಡೆಯಲು par ಕೋರುತ್ತೇನೆ.’’ಘಿ- ಇದು 1919ರ ಮೇನಲ್ಲಿ ನೊಬೆಲ್ ಪುರಸ್ಕೃತ ಕವಿ ರವೀಂದ್ರನಾಥ್ ಠಾಗೋರ್ ಬ್ರಿಟಿಷ್ ವೈಸ್‌ರಾಯ್‌ಗೆ ಬರೆದಿದ್ದ ಪತ್ರದ ಸಾರಾಂಶ.
1919ರ ಏಪ್ರಿಲ್ 13ರಂದು ಪಂಜಾಬ್‌ನಲ್ಲಿ ನಡೆದ ಜಲಿಯನ್‌ವಾಲಾಭಾಗ್ ಹತ್ಯಾಕಾಂಡವನ್ನು ಖಂಡಿಸುವುದಕ್ಕಾಗಿಯೇ ಠಾಗೋರ್ ಅವರು, ಬ್ರಿಟಿಷ್ ಸರ್ಕಾರ ನೀಡಿದ್ದ ಅತ್ಯಂತ ಗೌರವಾನ್ವಿತವಾದ ನೈಟ್‌ಹುಡ್ ಬಿರುದನ್ನು ಮುಲಾಜಿಲ್ಲದೆ ಹಿಂತಿರುಗಿಸಿದ್ದರು. ಆ ಮೂಲಕ ಮಾನವೀಯತೆಯ ಮೇಲಿನ ಅತ್ಯಾಚಾರವನ್ನು ಖಂಡಿಸಿದ್ದರು. ಭಾರತದಲ್ಲಿ ಗೌರವವನ್ನು ಹಿಂದಿರುಗಿಸುವ ಮೂಲಕ ಅಗೌರವ ತೋರುವುದನ್ನು ಪ್ರತಿಭಟನೆಯ ಪ್ರಕಾರವಾಗಿ ಬಳಸಬಹುದೆಂದು ತೋರಿಸಿಕೊಟ್ಟವರಲ್ಲಿ ಠಾಗೋರ್ ಮೊದಲಿಗರು.
ಪಂಜಾಬ್‌ನ ಖುಷವಂತ್‌ಸಿಂಗ್ ಹೆಸರಾಂತ ಭಾರತೀಯ ಕಾದಂಬರಿಕಾರರಲ್ಲಿ ಒಬ್ಬರು. ಪ್ರಖ್ಯಾತ ಪತ್ರಕರ್ತ ಕೂಡಾ. 1974ರಲ್ಲಿ ಖುಷ್‌ವಂತ್ ಸಾಧನೆಗೆ ಖುಷಿಯಾದ ಸರ್ಕಾರ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿತು. ಆದರೆ ದಶಕಗಳ ಬಳಿಕ ಇಂದಿರಾ ಗಾಂಧಿ ಸರ್ಕಾರವು ಅಮೃತಸರದ ಗೋಲ್ಡನ್ ಟೆಂಪಲ್‌ನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ನಡೆಸಿದ ಆಪರೇಷನ್ ಬ್ಲೂಸ್ಟಾರ್ ವಿರೋಧಿಸಿ, ಖುಷವಂತ್ ತಮಗೆ ನೀಡಿದ ಪ್ರಶಸ್ತಿಯನ್ನು ಹಿಂದಿರುಗಿಸಿದರು. 2007ರಲ್ಲಿ ಸರ್ಕಾರ, ದೇಶದ ಎರಡನೇ ಅತಿ ದೊಡ್ಡ ಗೌರವವಾದ ಪದ್ಮ ವಿಭೂಷಣ ನೀಡಿತು.
ನವ್ಯ ಹಿಂದಿ ಸಾಹಿತ್ಯದ ಮೇರು ಬರಹಗಾರ ಫಣೀಶ್ವರನಾಥ್ ರೇಣು, 1970ರಲ್ಲಿ ತಮಗೆ ನೀಡಿದ್ದ ಪದ್ಮಶ್ರೀ ಪುರಸ್ಕಾರವನ್ನು ತುರ್ತು ಪರಿಸ್ಥಿತಿಯನ್ನು ಖಂಡಿಸಿ ಹಿಂದಿರುಗಿಸಿದ್ದರು.

ದೇಶದ ಹಿತ ಕಾಯಲಾಗದ ನಿಮಗೆ ಪ್ರಶಸ್ತಿ ಕೊಡುವ ಅರ್ಹತೆಯೂ ಇಲ್ಲ ಎಂದು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಯತ್ನವಿದು. ಅನಂತರದಲ್ಲಿ ಅನೇಕ ರಂಗಗಳಲ್ಲಿ ತಜ್ಞರೆನಿಕೊಂಡ ಹಲವರು ಸರ್ಕಾರ ತಮಗೆ ನೀಡಿದ ಪ್ರಶಸ್ತಿಗಳನ್ನು ಪ್ರತಿಭಟನಾ ಬತ್ತಳಿಕೆಯ ಆಯುಧವಾಗಿ ಬಳಸಿ ಹಿಂದಿರುಗಿಸಿದರಾದರೂ, ಹೆಚ್ಚಿನ ಬಾರಿ ದೇಶದ ಕಾಳಜಿಗಿಂತ ಸ್ವಹಿತಾಸಕ್ತಿಯೇ ಮೇಲುಗೈ ಸಾಧಿಸಿದೆ. ಇಂಥ ಸಮಯದಲ್ಲಿ ದಾದ್ರಿಯಲ್ಲಿ ಅಲ್ಪಸಂಖ್ಯಾತನ ಕೊಲೆ, ವಿಚಾರವಾದಿಗಳಾದ ಎಂ.ಎಂ. ಕಲಬುರ್ಗಿ, ಗೋವಿಂದ ಪಾನ್ಸರೆ ಹಾಗೂ ನರೇಂದ್ರ ದಾಬೋಲ್ಕರ್ ಹತ್ಯೆ  ಇತ್ಯಾದಿ ಘಟನೆಗಳನ್ನು ಪ್ರತಿಭಟಿಸುವ ಸಲುವಾಗಿ, ಮತ್ತೊಮ್ಮೆ ಠಾಗೋರರ ಅಸ್ಟ್ರಗಳು ಪ್ರಯೋಗವಾಗತೊಡಗಿವೆ. ಇನ್ನೂ ಈ ಅಸ್ತ್ರಗಳು ಮೊದಲಿನ ಮೊನಚನ್ನೇ ಉಳಿಸಿಕೊಂಡಿವೆಯೇ?

ಪ್ರಶಸ್ತಿ ನನ್ನ ಅರ್ಹತೆಗೆ ತಕ್ಕುದಲ್ಲ ಎಂದವರು!
ಖ್ಯಾತ ಸಿತಾರ್ ವಾದಕ ಉಸ್ತಾದ್ ವಿಲಾಯತ್‌ಖಾನ್ ಅವರಿಗೆ 1964ರಲ್ಲಿ ಪದ್ಮಶ್ರೀಯನ್ನೂ, 1968ರಲ್ಲಿ  ಪದ್ಮಭೂಷಣವನ್ನೂ ನೀಡಲಾಯಿತು. ‘‘ಆದರೆ ನನ್ನ ಸಂಗೀತವನ್ನು ವಿಶ್ಲೇಷಿಸಲು ಅನರ್ಹವಾದ ಅವಾರ್ಡ್ ಕಮಿಟಿ ನೀಡುವ ಪ್ರಶಸ್ತಿ ನನಗೆ ಬೇಡ,’’ ಎಂದು ಹೇಳುವ ಮೂಲಕ ವಿಲಾಯತ್‌ಖಾನ್ ಪ್ರಶಸ್ತಿಗಳನ್ನು ಧಿಕ್ಕರಿಸಿದ್ದರು. 2000ದಲ್ಲಿ ಅವರಿಗೆ ಪದ್ಮವಿಭೂಷಣ ನೀಡಿದಾಗಲೂ, ‘‘ಈ ಪ್ರಶಸ್ತಿ ಬಂದಿದೆ ಎಂಬುದೇ ಅವಮಾನ,’’ ಎಂದು ಜರಿದು, ‘‘ಭಾರತದಲ್ಲಿ ಸಿತಾರ್‌ಗೆಂದೇ ಯಾವುದಾದರೂ ಪ್ರಶಸ್ತಿ ನೀಡಿದರೆ ಅದು ಮೊದಲು ನನಗೇ ಬರಬೇಕು. ಅನರ್ಹರಿಗೇ ಅವಾರ್ಡ್‌ಗಳನ್ನು ಕೊಡುವ ಈ ದೇಶದಲ್ಲಿ ಅದನ್ನು ಸ್ವೀಕರಿಸುವುದೇ ಅವಮಾನ,’’ ಎಂದು ಸರ್ಕಾರದ ಪ್ರಶಸ್ತಿಗಳಿಗೆ ಮೂಗು ಮುರಿದರು.
ಕಥಕ್ ನೃತ್ಯಪಟು ಸಿತಾರಾ ದೇವಿಯವರಿಗೆ ‘ಪದ್ಮಭೂಷಣ’ ಒಲಿದಾಗ  ‘‘ಇದು ಗೌರವವಲ್ಲ, ಸರ್ಕಾರ ಮಾಡುತ್ತಿರುವ ಅವಮಾನ. ಹೆಸರೇ ಕೇಳದವರಿಗೆ, ಸಣ್ಣ ವಯಸ್ಸಿನವರಿಗೆಲ್ಲ ಪದ್ಮ ವಿಭೂಷಣ ಕೊಡುವಾಗ, ನನ್ನ ಸಾಧನೆಗೆ ಭಾರತರತ್ನ ಹೊರತುಪಡಿಸಿ ಇನ್ನಾವುದೇ ಅವಾರ್ಡ್ ನೀಡಿದರೂ ನನಗೆ ಬೇಡ,’’ ಎಂದು ಧಿಕ್ಕರಿಸಿದ್ದರು.
ಅವಾರ್ಡ್‌ಗಳ ಹೊದಿಕೆಯನ್ನೇ ಹೊದ್ದಿರುವ ಗಾಯಕಿ ಎಸ್. ಜಾನಕಿಯವರಿಗೆ 2013ರಲ್ಲಿ ಪದ್ಮಭೂಷಣ ಘೋಷಿಸಿದಾಗ, ತುಂಬಾ ತಡವಾಯಿತು ಹಾಗೂ ಪ್ರಶಸ್ತಿಗೆ ಪರಿಗಣಿಸುವಾಗ ದಕ್ಷಿಣದವರನ್ನು ಸದಾ ಕಾಲ ಕಡೆಗಣಿಸಲಾಗುತ್ತದೆ ಎಂಬ ಕಾರಣ ನೀಡಿ ಅವರದನ್ನು ತಿರಸ್ಕರಿಸಿದರು.
‘‘ಅಧಿಕಾರಿಗಳು ಹಾಗೂ ಪತ್ರಕರ್ತರು ಸರ್ಕಾರ ನೀಡುವ ಗೌರವಗಳನ್ನು ಸ್ವೀಕರಿಸಬಾರದು. ಸ್ವೀಕರಿಸಿದರೆ ಅಲ್ಲಿ ಲಾಭಿಯ ವಾಸನೆ ಬಡಿಯುತ್ತದೆ’’ ಎಂಬ ಕಾರಣ ಮಂಡಿಸುವ ಮೂಲಕ ರಕ್ಷಣಾ ವಿಶ್ಲೇಷಕ ಕೃಷ್ಣಸ್ವಾಮಿ ಸುಬ್ರಮಣ್ಯಂ 1999ರಲ್ಲಿ ತಮಗೆ ಒಲಿದ ಪದ್ಮಭೂಷಣವನ್ನು ದೂರ ತಳ್ಳಿದರು.
ಇಲ್ಲಿ ಹಲವರ ಧೋರಣೆ ಮೇಲ್ನೋಟಕ್ಕೆ ಸ್ವಾರ್ಥ, ಅಹಂ ಎಂದೆನಿಸಿದರೂ, ಅದು ಸರ್ಕಾರದ ಪ್ರಶಸ್ತಿ ಆಯ್ಕೆ ಯ ಅಸಮಂಜಸ ಪ್ರಕ್ರಿಯೆಯನ್ನು ಎತ್ತಿ ಹಿಡಿದು ಧಿಕ್ಕಾರ ಕೂಗುವ ಯತ್ನವೂ ಆಗಿದೆ.

ಮತ್ತೆ ಹಳೇ ಅಸ್ತ್ರ ಪ್ರಯೋಗ
ಇದೀಗ ಅವಾರ್ಡ್ ಹಿಂದಿರುಗಿಸುವ ಮೂಲಕ ಮತ್ತೆ ಸುದ್ದಿಯಲ್ಲಿರುವವರು ನೆಹರೂ ಸೋದರಸೊಸೆ, ಭಾರತೀಯ ಆಂಗ್ಲ ಲೇಖಕಿ, ಲಲಿತ ಕಲಾ ಅಕಾಡೆಮಿಯ ಮಾಜಿ ಅಧ್ಯಕ್ಷೆ ನಯಂತಾರಾ ಸೆಹೆಗಲ್. ದಾದ್ರಿ ಪ್ರಕರಣ, ಎಂಎಂ ಕಲಬುರ್ಗಿ ಹತ್ಯೆ, ಗೋವಿಂದ ಪನ್ಸ್ಸಾರೆ ಹಾಗೂ ನರೇಂದ್ರ ದಾಭೋಲ್ಕರ್ ಹತ್ಯೆ ಖಂಡಿಸಿ, ನಿರಾಕರಣೆ ಹಕ್ಕನ್ನು ಪ್ರತಿಪಾದಿಸಿ, ತಮ್ಮ ‘ರಿಚ್ ಲೈಕ್ ಅಸ್’ ಪುಸ್ತಕಕ್ಕೆ 1986ರಲ್ಲಿ ನೀಡಿದ ಸಾಹಿತ್ಯ ಅಕಾಡೆಮಿ ಅವಾರ್ಡ್‌ನ್ನು ಹಿಂದಿರುಗಿಸಿದ್ದಾರೆ. ಮೋದಿ ಆಡಳಿತದಲ್ಲಿ ದೇಶ ಹಿಂದೆ ಓಡುತ್ತಿದೆ (ಅನ್‌ಮೇಕಿಂಗ್ ಆಫ್ ಇಂಡಿಯಾ) ಎಂದಿರುವ ಅವರು, ದೇಶದಲ್ಲಿ ಸದ್ದು ಮಾಡುತ್ತಿರುವ ಪ್ರಕರಣಗಳ ಬಗ್ಗೆ ಪ್ರಧಾನಿ ಮೋದಿ ಹಾಗೂ ಸಾಹಿತ್ಯ ಅಕಾಡೆಮಿಯ ಮೌನ ಖಂಡಿಸಿ ಪ್ರಶಸ್ತಿ ತಿರುಗಿಸಿರುವುದಾಗಿ ಹೇಳಿದ್ದಾರೆ. 88 ವರ್ಷದ ಸೆಹೆಗಲ್ ಅವರು ತಮ್ಮ ಸೋದರ ಸಂಬಂಧಿ ಇಂದಿರಾ ಗಾಂಧಿಯ ಆಡಳಿತ ಸಮಯದಲ್ಲಿ ಹೇರಲಾದ ತುರ್ತು ಪರಿಸ್ಥಿತಿಯನ್ನೂ ಕಠಿಣವಾಗಿ ವಿರೋಧಿಸಿದ್ದರು.
ಸೆಹೆಗಲ್ ನಿರ್ಧಾರದ ಬೆನ್ನಿಗೇ ಹಿಂದಿಯ ಕವಿ, ಪ್ರಬಂಧಕಾರ, ವಿಮರ್ಶಕ 74 ವರ್ಷದ ಅಶೋಕ್ ವಾಜಪೇಯಿ ಕೂಡಾ ತಮ್ಮ ‘ಕಹಿ ನಹೀ ವಹೀ’ ಕವನ ಸಂಕಲನಕ್ಕೆ ಒಲಿದ ಸಾಹಿತ್ಯ ಅಕಾಡೆಮಿ ಅವಾರ್ಡ್ ಹಿಂದಿರುಗಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಲಲಿತ ಕಲಾ ಅಕಾಡೆಮಿಯ ರಾಷ್ಟ್ರೀಯ ಕಲಾ ವಿಭಾಗದ ಅಧ್ಯಕ್ಷರಾಗಿದ್ದವರು. ಬಹುಸಂಖ್ಯಾತರ ರಕ್ಷಣೆಗೆ ಸರ್ಕಾರ ನಿಂತಿದೆ ಎಂಬುದನ್ನು ವಾಚಾಳಿ ಮೋದಿ ಹೇಳದೆಯೇ ಸಮರ್ಥಿಸುತ್ತಿದ್ದಾರೆ ಎಂದು ಆರೋಪಿಸಿರುವ ವಾಜಪೇಯಿ, ಜೀವನ ಹಾಗೂ ಅಭಿವ್ಯಕ್ತಿ ಸ್ವಾತಂತ್ಯದ ಹಕ್ಕಿಗೆ ಧಕ್ಕೆ ಬಂದಿದೆ ಎಂದು ತಮ್ಮ ನಿರ್ಧಾರಕ್ಕೆ ವಿವರಣೆ ನೀಡಿದ್ದಾರೆ.

ಉದಯ್‌ರಿಂದ ಶುರುವಾಯಿತು
ಕಲಬುರ್ಗಿ ಹತ್ಯೆ ಹಿನ್ನೆಲೆಯಲ್ಲಿ ಪ್ರಶಸ್ತಿ ಹಿಂದಿರುಗಿಸಿದವರಲ್ಲಿ ಮೊದಲಿಗರು ಹಿಂದಿ ಬರಹಗಾರ ಉದಯ್ ಪ್ರಕಾಶ್. 2010ರಲ್ಲಿ ‘ಮೋಹನದಾಸ್’ ಕೃತಿಗೆ ಪಡೆದ ಸಾಹಿತ್ಯ ಅಕಾಡೆಮಿ ಅವಾರ್ಡ್‌ನ 1 ಲಕ್ಷ ಮೊತ್ತ, ಫಲಕ ಹಾಗೂ ಶಾಲನ್ನು ಹಿಂದಿರುಗಿಸಿದ್ದಾರೆ. ಇದು ಅಕಾಡೆಮಿಯನ್ನು ಎಚ್ಚರಿಸುವ ಪ್ರಯತ್ನ. ಹೀಗಾದರೂ ಅಕಾಡೆಮಿ ಕಲಬುರ್ಗಿ ವಿಷಯದಲ್ಲಿ ಮಾತನಾಡಲಿ ಎಂದು ಪ್ರತಿಪಾದಿಸಿದ್ದಾರೆ.
ಹೆಚ್ಚುತ್ತಿರುವ ಅಸಹಿಷ್ಣುತೆ, ಬಲಪಂಥೀಯತೆ, ನಿರಂಕುಶ ಫ್ರಭುತ್ವ, ಧರ್ಮಗಳ ಆಧಾರದಲ್ಲಿ ದೇಶ ಒಡೆಯುವ ತಂತ್ರ ಖಂಡಿಸಿ, ನಾಲ್ಕು ಪುಸ್ತಕಗಳ ಒಡೆಯ, ಉರ್ದು ಬರಹಗಾರ ರಹಮಾನ್ ಅಬ್ಬಾಸ್ ಕೂಡಾ ಮಹಾರಾಷ್ಟ್ರ ಸರ್ಕಾರ ನೀಡಿದ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಪ್ರಕಟಿಸಿದ್ದಾರೆ. ಇವರ ‘ಖುದಾ ಕೆ ಸಾಯೇ ಮೆ ಆಂಖ್ ಮಿಚೋಲಿ’(ದೇವರ ನೆರಳಿನಲ್ಲಿ ಕಣ್ಣಾಮುಚ್ಚಾಲೆ) ಎಂಬ ಪುಸ್ತಕಕ್ಕೆ ಉರ್ದು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಉರ್ದುವಿನ ಪ್ರಮುಖ ಬರಹಗಾರರಾದ ಜಾವೇದ್ ಅಕ್ತರ್, ನಿದಾ ಫಜ್ಲಿ, ಸಲಾಂ ಬಿನ್ ರಜಾಕ್ ಅವರು ಕೂಡಾ ಧರ್ಮಗಳ ಆಧಾರದಲ್ಲಿ ದೇಶ ಒಡೆಯುವ ತಂತ್ರ ಖಂಡಿಸಿ ಅಕಾಡೆಮಿ ಅವಾಡ್ ರ್ ಹಿಂದಿರುಗಿಸಬೇಕು ಎಂದು  ಅಬ್ಬಾಸ್ ಒತ್ತಾಯಿಸಿದ್ದರು.
ಆದರೆ ಅಬ್ಬಾಸ್‌ನ ಕ್ರಮವನ್ನು ಮೂರ್ಖತನ ಎಂದಿರುವ ನಿದಾ ಫಜ್ಲಿ ‘‘ನನಗೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವಾಗ ಪದ್ಮಶ್ರೀ ಹಾಗೂ ಸಾಹಿತ್ಯ ಅಕಾಡೆಮಿ ಅವಾರ್ಡ್ ಬಂದಿದೆ. ಬಿಜೆಪಿ ಆಡಳಿತ ಖಂಡಿಸಿ ಅದನ್ನು ಹಿಂತಿರುಗಿಸುವುದು ಅರ್ಥವಿಲ್ಲದ ನಡೆ’’ ಎಂದು ತಿರುಗೇಟು ನೀಡಿದ್ದರು. ಇದಕ್ಕೆ ಉತ್ತರಿಸಿರುವ ಅಬ್ಬಾಸ್, ಅವಾರ್ಡನ್ನು ಬಿಡದಂತೆ ಹಿಡಿದಿರುವುದು ಉರ್ದು ಬರಹಗಾರರ ಅವಕಾಶವಾದಿತನ ಹಾಗೂ ಸ್ವಾರ್ಥವನ್ನು ತೋರುತ್ತದೆ ಎಂದು ಮಾತಿನ ಬಾಣ ಬಿಟ್ಟಿದ್ದಾರೆ.
ಇವರಲ್ಲನೇಕರ ನಡೆ ಸಮರ್ಥನೀಯವಾದರೂ, ಇನ್ನು ಕೆಲವರದು ‘ಬಹೋದ್ದೇಶ ಪ್ರಶಸ್ತಿ ತಿರಸ್ಕಾರ ಯೋಜನೆ’. ಪುಸ್ತಕ ಬರೆದಾಗ, ಪ್ರಶಸ್ತಿ ಸ್ವೀಕರಿಸಿದಾಗ ಹೆಸರಾಗದ ಕೆಲವರು ಪ್ರಶಸ್ತಿ ಹಿಂದಿರುಗಿಸಿ ಹೆಸರು ಮಾಡ್ತುತಿರುವುದು ವಿಪರ್ಯಾಸವೇ ಸರಿ!

1 ಕಾಮೆಂಟ್‌:

ವಿ.ರಾ.ಹೆ. ಹೇಳಿದರು...

ಒಳ್ಳೆಯ ಮಾಹಿತಿಪೂರ್ಣ ಬರಹ. ಇಂತಹ ಮಾಹಿತಿ ಕಲೆಹಾಕಿ ಕೊಟ್ಟಿದ್ದಕ್ಕೆ ಧನ್ಯವಾದಗಳು.