ಇಳಿ ಪಾಠ!
First Published: 28 Oct 2013 02:00:00 AM IST
ತಿದ್ದಿಕೊಳ್ಳೋಣ ನಾವೂ
ಸಾವು
ಅದೆಷ್ಟೊಂದನ್ನು ಕಲಿಸುತ್ತದೆ, ಬದುಕು ಕಲಿಸಲಾಗದಿದ್ದನ್ನೂ! ಆದರೆ ಆ ಕಲಿಕೆಗಳನ್ನು
ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಮಯ ನೀಡದೆ ತನ್ನ ಸುಳಿಗೆ ಸೆಳೆದುಕೊಂಡು ಬಿಡುತ್ತದೆ.
ಹೀಗೆ ಜ್ಞಾನೋದಯ ಹೊಂದಿದ ಬಿಳಿತಲೆಗಳ ಅನುಭವವನ್ನು ನಾವು ಕಿರಿಯರು ಅನುಭಾವವಾಗಿ
ಪರಿಗಣಿಸಿದರೆ ಹಿರಿಯರ ಹಾದಿಯ ಮುಳ್ಳುಗಳು ನಮ್ಮ ದಾರಿಗೆ ಅಡ್ಡ ಬರದಂತೆ ಜತನ ಮಾಡಬಹುದು.
ನನಗೂ ಸಾವಿಗೂ ಒಡನಾಟ ಬಹಳ ವರ್ಷಗಳದ್ದು. ಆದರೆ ಅದೂ ಅನುಭಾವವಷ್ಟೇ. ಏಕೆಂದರೆ
ನಾನೊಬ್ಬಳು ಜೀವವನ್ನು ಕೈಲಿಡಿದು ಕೊನೆ ದಿನಗಳನ್ನು ಎಣಿಸುವಂಥ ರೋಗಿಗಳನ್ನು
ನೋಡಿಕೊಳ್ಳುವ ದಾದಿ. ಅದೆಷ್ಟೋ ಹಿರಿಜೀವಗಳ ಬದುಕಿನ ಕೊನೆ ದಿನಗಳಲ್ಲಿ ಅವರೊಂದಿಗಿದ್ದ
ಸಮಾಧಾನವೂ, ಚೇತನಗಳು ಕ್ಷಣಮಾತ್ರದಲ್ಲಿ ನಿಸ್ತೇಜವಾಗುವುದನ್ನು ದಿನಂಪ್ರತಿ ನೋಡಬೇಕಾದ
ಅಸಮಾಧಾನವೂ ನನ್ನದು.ಇವರೆಲ್ಲರನ್ನೂ ನೋಡಿದಾಗ ನನಗೆ ನನ್ನ ಪ್ರತಿ ಉಸಿರಿನಲ್ಲೂ
ಸಾವಿರುವುದು ಗೋಚರವಾಗುತ್ತದೆ. ಅದು ಯಾವಾಗ ಬೇಕಾದರೂ ನಿಲ್ಲಬಹುದು. ಹಾಗಾಗೇ ನಮ್ಮ
ಆಸ್ಪತ್ರೆಯಲ್ಲಿ ಸೇರುವ ಪ್ರತಿ ಹಿರಿಜೀವಕ್ಕೂ ಪ್ರಶ್ನಿಸುತ್ತೇನೆ, ನಿಮ್ಮ ಜೀವನವನ್ನು
ಪುನಾರಂಭಿಸುವ ವರ ಸಿಕ್ಕಿದರೆ ಏನು ಬದಲಾವಣೆ ಮಾಡಿಕೊಳ್ಳಬಯಸುತ್ತೀರೆಂದು. ನನ್ನ ಈ
ಪ್ರಶ್ನೆಗೆ ಉತ್ತರ ತಡಕುವಾಗ ಜೀವನದಲ್ಲಿ ತಾವು ಮಾಡಿದ ತಪ್ಪುಗಳು ಪಶ್ಚಾತ್ತಾಪಗಳಾಗಿ,
ಸಾಧಿಸಲಾರದ ಗುರಿಗಳು ಅತೃಪ್ತವಾಗಿ ಅವರನ್ನು ಕಾಡುತ್ತವೆ. ಮತ್ತು ಅವು ನನಗೆ ಬದುಕಿನ
ಪಾಠ ಹೇಳುತ್ತವೆ. ಹೀಗೆ ನನ್ನ ಪ್ರಶ್ನೆಗೆ ಬಂದ ನೂರಾರು ಉತ್ತರಗಳಲ್ಲಿ ಅತ್ಯಂತ
ಸಾಮಾನ್ಯವಾಗಿರುವುದನ್ನು ಭಟ್ಟಿ ಇಳಿಸಿದಾಗ ನನ್ನಲ್ಲಿ ಉಳಿದಿದ್ದಿಷ್ಟು;
ಅವರಿವರ ನಿರೀಕ್ಷೆಯನ್ನು ಪೂರೈಸಲು ಹೆಣಗದೆ ನಾನು ನಾನಾಗಿ, ನನಗನ್ನಿಸಿದಂತೆ ಬದುಕಬೇಕಿತ್ತು.
ಇದು ಅತ್ಯಂತ ಸಾಮಾನ್ಯ ಪಶ್ಚಾತ್ತಾಪವಾಗಿತ್ತು. ನಮ್ಮ ಬದುಕು ಮುಗಿಯುತ್ತಿದೆ ಎಂದಾಗ
ಹಿಂದಿರುಗಿ ನೋಡಿದ ಶೇ.80ರಷ್ಟು ಮಂದಿಯ 50 ಪ್ರತಿಶತ ಕನಸುಗಳೂ ಸಾಕಾರವಾಗಿರಲಿಲ್ಲ.
ಮತ್ತು ಇದು ಅವರೇ ಮಾಡಿಕೊಂಡ ಕೆಲವು ಆಯ್ಕೆಗಳು ಇಲ್ಲವೇ ಮಾಡಿಕೊಳ್ಳದ ಆಯ್ಕೆಗಳ
ಫಲವಾಗಿತ್ತು. ಅವರಿವರ ನಿರೀಕ್ಷೆಯ ಭಾರಕ್ಕೆ ತಮ್ಮ ಕನಸುಗಳು ಅಪ್ಪಚ್ಚಿಯಾಗಿ
ಬಿಟ್ಟಿದ್ದವು. ನಮ್ಮ ಕನಸುಗಳನ್ನು ನಾವು ಪ್ರೀತಿಸದಿದ್ದರೆ, ಅವಕ್ಕೆ ಕನಿಷ್ಠ ಗೌರವ ನೀಡದಿದ್ದರೆ ಇನ್ನಾರು ನೀಡಬೇಕು?
ನಾನು ಅಷ್ಟೊಂದು ಕಷ್ಟ ಪಡುವ ಅವಶ್ಯಕತೆ ಇರಲಿಲ್ಲ. ಹೆಚ್ಚಾಗಿ
ಕೆಲಸಕ್ಕೆ ಹೋಗುವ ಎಲ್ಲ ರೋಗಿಗಳದೂ ಇದೇ ಕೊರಗಾಗಿತ್ತು. ಏಕೆಂದರೆ ಅವರು ತಮ್ಮ ಮಗುವಿಗೆ
ದಿನಕ್ಕೊಂದು ಐಷಾರಾಮಿ ಬಟ್ಟೆ ತೊಡಿಸುವ ಹುರುಪಿನಲ್ಲಿ ಆ ಮಗುವಿನ ಚೇಷ್ಟೆ,
ಅಂಬೆಗಾಲಿಕ್ಕಿ ಬರುವ ಚೆಂದ, ಅದು ಹೇಗೆ ಬೆಳೆದು ದೊಡ್ಡವಾಯಿತೋ ಆ ಸಂತಸವನ್ನು
ಕಣ್ತುಂಬಿಕೊಂಡಿರಲಿಲ್ಲ. ಪ್ರತಿ ವಾರ ತಮ್ಮ ಹೆಂಡತಿ ಬಂದು ರಾಗ ಎಳೆದು ಸಿನಿಮಾಗೆ
ಹೋಗೋಣವೇ ಎಂದು ಕೇಳಿದಾಗೆಲ್ಲ ಕೆಲಸವಿದೆ, ಮುಂದಿನ ವಾರ ನೋಡೋಣ ಎಂದೇ ಸಾಗ ಹಾಕಿದ್ದರು.
ಹೆಂಡತಿಯೊಂದಿಗೆ ಒಂದು ಸಿನಿಮಾವನ್ನೂ ನೋಡಲಾಗದಷ್ಟು ಬ್ಯುಸಿಯಾಗಿ ತಾನು ಹಗಲೂ ರಾತ್ರಿ
ದುಡಿದು ಸಾಧಿಸಿದ್ದೇನು ಎಂಬ ಕೊರಗು ಅವರನ್ನು ಕಾಡುತ್ತಿತ್ತು. ಬದುಕನ್ನು ಸರಳಗೊಳಿಸಿಕೊಂಡಿದ್ದರೆ, ಆಯ್ಕೆಗಳನ್ನು ಪ್ರಜ್ಞಾಪೂರ್ವಕವಾಗಿ ಮಾಡಿದ್ದರೆ ಆತ್ಮೀಯರೊಂದಿಗಿನ ಸುಂದರ ಕ್ಷಣಗಳು ಅವರದಾಗುತ್ತಿತ್ತಲ್ಲವೇ?!
ನನಗನ್ನಿಸಿದ್ದನ್ನೆಲ್ಲ ಹೇಳುವ ಧೈರ್ಯ ತೋರಬೇಕಿತ್ತು.
ಇನ್ನೊಬ್ಬರೊಂದಿಗೆ ಹೊಂದಿಕೊಳ್ಳುವ ಭರದಲ್ಲಿ ನಮ್ಮ ಹಲವು ಆಕಾಂಕ್ಷೆಗಳನ್ನು,
ನಮಗನ್ನಿಸಿದ್ದನ್ನು ಹೇಳದೇ ಒಳಗೊಳಗೆ ತಳ್ಳುತ್ತಾ ಹೋಗುತ್ತೇವೆ. ಮತ್ತೆ ಆ ಅನಿಸಿಕೆ
ಹುಟ್ಟದಂತೆ ಹೆಡೆ ಮೆಟ್ಟಿ ನಿಲ್ಲುತ್ತೇವೆ. ಇದರಿಂದ ನಾವು ಏನಾಗಲು ಸಾಧ್ಯವಿತ್ತೋ ಅದು
ಸಾಧ್ಯವಿಲ್ಲದೆ ಮುಖವಾಡದ ಬದುಕೊಂದನ್ನು ನಮಗೆ ಗೊತ್ತಿಲ್ಲದೆಯೇ ಬದುಕಿಬಿಟ್ಟಿರುತ್ತೇವೆ.
ಅಲ್ಲದೆ ಇದು ಹಲವು ಮಾನಸಿಕ ಅಸಮತೋಲನಕ್ಕೂ ಕಾರಣವಾಗಿರುತ್ತದೆ. ಜೀವನದಲ್ಲಿ
ಇನ್ನೊಬ್ಬರ ಪ್ರತಿಕ್ರಿಯೆಯನ್ನು ನಿಯಂತ್ರಿಸಲು, ಎಲ್ಲರನ್ನು ಮೆಚ್ಚಿಸಲು ಯಾರಿಂದಲೂ
ಸಾಧ್ಯವಿಲ್ಲ. ಅದಕ್ಕಾಗಿ ತಲೆಕೆಡಿಸಿಕೊಳ್ಳದೆ ನಮಗನ್ನಿಸಿದಂತೆ ಪ್ರಾಮಾಣಿಕವಾಗಿ
ಬದುಕೋಣ
ನನ್ನ ಗೆಳೆಯರೆಲ್ಲರನ್ನೂ ಕೊನೆಯವರೆಗೂ ಕಾಪಾಡಿಕೊಳ್ಳಬೇಕಿತ್ತು.
ಜೀವನದ ಕೊನೆಕ್ಷಣಗಳಲ್ಲಿ ನಾವು ಗಳಿಸಿದ ದುಡ್ಡಿಗಿಂತಾ ನಮಗಾಗಿ ಅಳುವ, ಹಿತ ಬಯಸುವ
ಆತ್ಮೀಯರು ಎಷ್ಟಿದ್ದಾರೆಂಬುದೇ ಗಣನೆಗೆ ಬರುವುದು. ಹೆಚ್ಚಿನ ಮಂದಿ ತಮ್ಮದೇ ಬದುಕಿನ
ಜಂಜಡದಲ್ಲಿ ಎಷ್ಟು ಮುಳುಗಿ ಹೋಗಿರುತ್ತಾರೆಂದರೆ ಒಂದು ಕಾಲದಲ್ಲಿ ತಮ್ಮ ಜೀವದ
ಗೆಳೆಯರೆಂದುಕೊಂಡು ಹೆಗಲಿಗೆ ಹೆಗಲು ಕೂಡಿಸಿ ನಡೆದ ಆ ಗೆಳೆಯರು ಅದು ಯಾವಾಗ ಕಳೆದು
ಹೋದರೆಂಬುದು ಕೊನೆಯ ಕ್ಷಣದವರೆಗೂ ಗಮನಕ್ಕೇ ಬಂದಿರುವುದಿಲ್ಲ! ನಮ್ಮ ಆಸ್ತಿ
ಅಂತಸ್ತು ಏನೇ ಇದ್ದರೂ ಕೊನೆಗೂ ಮುಖ್ಯವಾಗುವುದು ಪ್ರೀತಿ ಮತ್ತು ನಾವು ಉಳಿಸಿಕೊಂಡು ಬಂದ
ಸಂಬಂಧಗಳು. ಅದಕ್ಕಾಗಿ ಯಾವ ಖರ್ಚೂ ಅಗತ್ಯವಿರುವುದಿಲ್ಲ, ನಮ್ಮ ಒಂದಿಷ್ಟು ಸಮಯ ಮತ್ತು
ಕಾಳಜಿಯ ಹೊರತಾಗಿ.-
ರೇಶ್ಮಾ ರಾವ್ ಸೊನ್ಲೆ
3 ಕಾಮೆಂಟ್ಗಳು:
ರೇಶ್ಮಾ ರವರೆ ಮೊದಲಿಗೆ ನನ್ನ ಬ್ಲಾಗ್ ಗೆ ಬ೦ದದ್ದಕ್ಕಾಗಿ ನಿಮಗೆ ಧನ್ಯವಾದಗಳು. ನಿಮ್ಮ ಲೇಖನ `ಇಳಿಪಾಠ' ಬಹಳ ಉಪಯುಕ್ತವಾಗಿದೆ. ಹಿರಿಜೀವಗಳ ಕಡೆಯ ದಿನಗಳ ಅನಿಸಿಕೆಯನ್ನು ಸ೦ಗ್ರಹಿಸಿ ನೀಡಿದ್ದಕ್ಕಾಗಿ ವ೦ದನೆಗಳು.
ನನ್ನ ಬ್ಲಾಗಿಗೆ ಬಂದಿದ್ದಕ್ಕೂ ಧನ್ಯವಾದ.. ಚೆಂದಿದ್ದು ಪೋಸ್ಟು :-)
thanq ಪ್ರಭಾಮಣಿ ಮೇಡಂ ಮತ್ತು ಪ್ರಶಾಂತಿ:)
ಕಾಮೆಂಟ್ ಪೋಸ್ಟ್ ಮಾಡಿ