ಪುಟಗಳು

4.10.13

ಕಾಡ ಹೂ

ಸ್ಯಾಕ್ಸೋಫೋನ್ ಸಾಧಕಿ
ಒಂದಷ್ಟು ಜನ ಬದುಕುವುದಕ್ಕಾಗಿ ಉಸಿರನ್ನು ಶ್ವಾಸಕೋಶಕ್ಕೆ ತುಂಬಲೇ ಹೆಣಗುತ್ತಾರೆ. ಆದರೆ ಕೆಲವರಿರುತ್ತಾರೆ, ಉಸಿರನ್ನೇ ಹಾಡಾಗಿ ಪರಿವರ್ತಿಸುವ ಮಾಂತ್ರಿಕರು. ಇಲ್ಲೊಬ್ಬ ಕಿನ್ನರಿ ಇದ್ದಾಳೆ ನಿರ್ಜೀವವಾಗಿ ಕುಳಿತ ಸ್ಯಾಕ್ಸಫೋನ್‌ಗೂ ಉಸಿರು ತುಂಬಿ ಹಾಡು ಕಲಿಸಿ ರಾಗಗಳನ್ನು ಅಲೆಅಲೆಯಾಗಿ ಗಾಳಿಗೆ ಬಿಡುವವಳು. ಹೀಗೆ ಹತ್ತು ವರ್ಷದಿಂದ ಮಲೆನಾಡಿನ ತೀರ್ಥಹಳ್ಳಿ ಬದಿಯ ಮೂಲೆಮೂಲೆಯಲ್ಲೂ ಗಾಳಿಗೆ ಗುಂಗು ಹತ್ತಿಸಿ ಮದುವೆಮನೆ, ಧಾರ್ಮಿಕ ಕಾರ್ಯಕ್ರಮದ ರಂಗು ನೀಡಿ ಸಂಭ್ರಮ ಹೆಚ್ಚಿಸುತ್ತಿರುವುದು ಪ್ರಥಮ ಬಿಕಾಂ ವಿದ್ಯಾರ್ಥಿನಿ ಸೌಮ್ಯ.
ಈ ಭಾಗದ ಯಾವುದೇ ಶುಭಕಾರ್ಯಗಳಿಗೆ ಹೋದರೆ ಗಂಟೆಗಟ್ಟಲೆ ಬಿಡುವಿಲ್ಲದೆ, ಭಕ್ತಿಗೀತೆ, ಚಿತ್ರಗೀತೆ ಸೇರಿದಂತೆ ಸಂದರ್ಭಕ್ಕೆ ತಕ್ಕಂತೆ ವಾದ್ಯದಲ್ಲಿ ಖಾದ್ಯ ಬಡಿಸುತ್ತಾ ಗಾನ ಸರಸ್ವತಿಯಂತೆ ಕುಳಿತಿರುವ ಈಕೆಯನ್ನು ನೋಡಿದರೆ 'ಮುತ್ತಿನಂತ ಹೆಂಡತಿ'ಯಲ್ಲಿ ಸ್ಯಾಕ್ಸಾಫೋನ್ ನುಡಿಸುವ ಮಾಲಾಶ್ರೀ ಕಣ್ಮುಂದೆ ಬರುತ್ತಾಳೆ. ತನ್ನ ತಂದೆ ನಾಗೇಶ್ ಅವರ ಗರಡಿಯಲ್ಲಿ ಪಳಗಿ, ನಂತರ ಶಿವಪ್ರಸಾದ್, ಕರುಣಾಕರ, ಸಾಲಿಗ್ರಾಮ ಸತೀಶ್ ದೇವಾಡಿಗ ಅವರ ಗುರು ಗಾರುಡಿಯಲ್ಲಿ ಮಿಂದೆದ್ದು ಪಕ್ಕಾ ವಾದ್ಯದಲ್ಲಿ ಪರಿಣತಿ ಸಾಧಿಸಿರುವ ಈಕೆ ಇದುವರೆಗೆ 250ಕ್ಕೂ ಹೆಚ್ಚು ಕಡೆ ಕಾರ್ಯಕ್ರಮ ನೀಡಿದ್ದಾಳೆ. 
ಎಸ್ಸೆಸ್ಸೆಲ್ಸಿ ಓದುತ್ತಿರುವ ಈಕೆಯ ತಂಗಿ ರಮ್ಯಾ ಕೂಡ ಹಿರಿಯಕ್ಕನ ಹಾದಿಯಲ್ಲಿ ಸಾಗುತ್ತಿದ್ದಾಳೆ.  ಇಷ್ಟಾದರೂ ಈ ಹಳ್ಳಿ ಹೂವಿನ ಪ್ರತಿಭೆಗೆ ಇದುವರೆಗೆ ಯಾವುದೇ ಪ್ರಶಸ್ತಿ ಫಲಕಗಳು ಲಭಿಸದಿರುವುದು ವಿಪರ್ಯಾಸವೇ ಸೈ. ಈ ಬಗ್ಗೆ ಈಕೆಯ ಪರಿಚಿತರನ್ನು ಕೇಳಿದಾಗ 'ಇಲ್ಲಿ ನಗರದಂತೆ ಇದನ್ನೆಲ್ಲ ಪ್ರತಿಭೆಯೆಂದು ನೋಡುವುದಿಲ್ಲ. ಅವಳು ಸ್ಯಾಕ್ಸಾಫೋನ್ ನುಡಿಸುತ್ತಾಳಂತೆ ಎಂಬುದು ಒಂದು ಸಾಮಾನ್ಯ ವಿಚಾರವೆಂಬಂತೆ ಜನ ನೋಡುತ್ತಾರೆ' ಎಂದು ವಿಷಾದಿಸುತ್ತಾರೆ. ಸೌಮ್ಯಳಿಗೊಂದು ಅಭಿನಂದನೆ ಹೇಳಬೇಕೆನಿಸಿದರೆ 9448106837ಗೆ ಕರೆ ಮಾಡಿ.- 
ರೇಶ್ಮಾ

2 ಕಾಮೆಂಟ್‌ಗಳು:

ಕನಸು ಕಂಗಳ ಹುಡುಗ ಹೇಳಿದರು...

ರೇಶ್ಮಾ..
ಇಂತಹ ಕಾಡು ಹೂಗಳು ನಮ್ಮಲ್ಲೆಷ್ಟೋ ಜನರಿದ್ದಾರೆ...
ವಿದ್ಯೆ ಎನ್ನುವುದು ಎಲ್ಲರಿಗೂ ಲಭಿಸುವುದಿಲ್ಲ.....
ಇದ್ದವರನ್ನು ನಾವು ಗುರುತಿಸುವುದಿಲ್ಲ...

ಆ ಕೆಲಸ ನೀವು ಮಾಡಿದ್ದೀರ....
ಒಳ್ಳೆಯದು.......

Reshma Rao ಹೇಳಿದರು...

DHANYAVADAGALU KANASUKANGALA HUDUGANIGE :)