First Published: 21 Oct 2013 02:00:00 AM IST
ಕಳೆದುಹೋದ ಕಥಾಸಂಕಲನ
ಒಂದಾನೊಂದು ಕಾಲದಲ್ಲಿ ಒಂದೂರಲ್ಲಿ ಒಬ್ಬಳು ಅಜ್ಜಿ ಇದ್ದಳು. ಸಮಯ ಸಿಕ್ಕಾಗೆಲ್ಲ ಮೊಮ್ಮಕ್ಕಳನ್ನು, ಆಚೀಚೆ ಮನೆ ಮಕ್ಕಳನ್ನು ಸುತ್ತಲೂ ಕೂರಿಸಿಕೊಂಡು, ತನ್ನ ಬೊಚ್ಚು ಬಾಯಿಯಲ್ಲಿ ಎಲೆಅಡಕೆ ಜಗಿಯುತ್ತಾ ಕತೆ ಹೇಳುತ್ತಿದ್ದಳು. ಅವಳ ಕತೆಗಳು ಅದೆಷ್ಟು ರೋಚಕವಾಗಿರುತ್ತಿದ್ದವೆಂದರೆ ಪುಣ್ಯಕೋಟಿ ಹುಲಿರಾಜನ ಬಳಿಗೆ ಹೊರಟಾಗ ಮಕ್ಕಳು ಬಿಕ್ಕಿ ಬಿಕ್ಕಿ ಅಳುತ್ತಿದ್ದವು. ಆಗ ಅಜ್ಜಿ ಅವುಗಳಿಗೆ ಸಮಾಧಾನ ಹೇಳಿ, ಸತ್ಯ ಹೇಗೆ ಗೆಲ್ಲುತ್ತದೆ ನೋಡ್ದನೋ ಪೋರ ಎಂದು ಕತೆ ಕೇಳುತ್ತಿದ್ದ ಗುಂಡನ ಬೆನ್ನು ಸವರುವಳು.
ಮಕ್ಕಳ ಮೆಚ್ಚಿನ ಇನ್ನೊಂದು ಕತೆ ಇತ್ತು. ಅದು ಒಂದು ಕೂದಲಿನ ರಾಜಕುಮಾರಿಯದು. ಅದನ್ನು ಹೇಳೆಂದು ಅಜ್ಜಿಯನ್ನು ಮಕ್ಕಳು ಒತ್ತಾಯಿಸುತ್ತಿದ್ದವು. ಅಜ್ಜಿಗೂ ಸ್ವಲ್ಪ ಆಟ ಆಡಿಸುವ ಎನಿಸುವುದು. ಅವಳು ಹುಗ್ಗಿ ಹರಿದು ಊರು ಮುಳುಗುವ ಕತೆ ಶುರು ಹಚ್ಚುವಳು. ಅದು ಮುಗಿಯುವವರೆಗೂ ಬಾಯಿ ಕಳೆದು ಕೇಳುತ್ತಿದ್ದ ಮಕ್ಕಳು ಮತ್ತೆ ರಾಜಕುಮಾರಿ ಕತೆಗೆ ಗೋಗರೆವವು. ಎಲೆ ಅಡಕೆ ತುಪ್ಪಿ ಬಂದ ಅಜ್ಜಿ ಮಾಳಿಗೆಯಲ್ಲಿಟ್ಟ ಡಬ್ಬಿ ತೆಗೆದು ಮಕ್ಕಳಿಗೆಲ್ಲ ಚಕ್ಕುಲಿ ಕೊಡುವಳು. ಮತ್ತೆ ಆ ರಾಜಕುಮಾರಿಗೆ ಒಂದು ಕೂದಲೆಂದು ರಾಜನ ಎರಡು ಕೂದಲಿನ ಎರಡನೇ ಹೆಂಡತಿಯೂ, ರಾಜನೂ ಸೇರಿ ಅವಳನ್ನು ಮನೆಯಿಂದ ಹೊರ ಹಾಕಿದ್ದನ್ನು ಅಜ್ಜಿ ವರ್ಣಿಸುವಳು. ಅವಳ ಒಳ್ಳೆತನ ಮೆಚ್ಚಿ ಮಾಟಗಾತಿ ತಲೆ ತುಂಬಾ ಕೂದಲು ಬರುವಂತೆ ಮಾಡುವಾಗಂತೂ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಕೇಕೆ ಹಾಕಿ ಚಪ್ಪಾಳೆ ತಟ್ಟಿ ನಗುವುವು. ಅಜ್ಜಿ ಕತೆ ಹೇಳದ ದಿನ ಮಕ್ಕಳು ನಿದ್ದೆ ಮಾಡುವುದಿಲ್ಲವೆಂದು ರಚ್ಚೆ ಹಿಡಿಯುತ್ತಿದ್ದವು. ಶಾಲೆಗೆ ಹೋಗಿ,
'ಅಜ್ಜಿ ಎಂದರೆ ನಮ್ಮಜ್ಜಿ
ಕತೆಯನು ಹೇಳುವ ನಮ್ಮಜ್ಜಿ
ಉಪ್ಪು ಮೆಣಸು ಜಜ್ಜಿ
ಮಾಡಿದಳೊಂದು ಬಜ್ಜಿ' ಎಂದು ಪ್ರಾಸಬದ್ಧವಾಗಿ ಹಾಡು ಹೇಳುತ್ತಿದ್ದವು. ಇಂತಿಪ್ಪ ಮಕ್ಕಳ ಮೆಚ್ಚಿನ ಈ ಅಜ್ಜಿ ಸೌದೆ ತರಲೆಂದು ಒಂದು ದಿನ ಕಾಡಿಗೆ ಹೋದಳು. ಇಂದಿಗೂ ಸೌದೆಯೂ ಇಲ್ಲ, ಅಜ್ಜಿಯೂ ಇಲ್ಲ! ಬಹುಶಃ ಸೌದೆ ಸಿಗಲಿಲ್ಲವೇನೋ? ಅಕೇಶಿಯಾ, ನೀಲಗಿರಿ, ರಬ್ಬರ್ ಕಾಡಿನಲ್ಲಿ ಸೌದೆ ಎಲ್ಲಿಂದ ಬರಬೇಕು? ಅವೆಲ್ಲ ದುಡ್ಡಿನ ಮರಗಳಲ್ಲವೇ?!ಅಥವಾ 'ಇನ್ನೂ ಒಂದಾನೊಂದು ಕಾಲದಲ್ಲಿರುವ' ಅಜ್ಜಿಗೆ ಗ್ಯಾಸ್ ಸ್ಟೌ, ಕರೆಂಟ್ ಒಲೆಗಳ ಕತೆ ಹೇಳಿ ಮರಗಳೇ ಮೂದಲಿಸಿ ನಕ್ಕಿರಬಹುದು.
ಅಲ್ಲವೇ ಆಕೆ ತಿರುಗಿ ಬಂದೂ ಮೊಮ್ಮಕ್ಕಳಾರೂ ಗುರುತಿಸಿರಲಾರರು. ಅವುಗಳೋ ಒಂದು ದಿನದಲ್ಲಿ ಶತಮಾನದಷ್ಟು ಮುಂದೋಡುವವು. ಬಟನ್ ಒತ್ತಿದಷ್ಟೂ ಮನರಂಜನೆ ಒದಗಿಸುವ ಕಾರ್ಟೂನ್ ನೆಟ್‌ವರ್ಕ್‌ಗಳಿರಲು, 3 ವರ್ಷಕ್ಕೇ 30ರಂತೆ ಟೈ ಧರಿಸಿ ಶಾಲೆಗೆ ಓಡುವ ಧಾವಂತದಲ್ಲಿ ಅಜ್ಜಿ ನೆನಪಾದಾಳು ಹೇಗೆ?
ಒಂದು ವೇಳೆ ಗುರುತು ಸಿಕ್ಕರೂ ಎಲೆಅಡಕೆ ಜಗಿಯುತ್ತಾ, ಮಾಡರ್ನ್ ಕಲ್ಚರ್ ಗೊತ್ತಿಲ್ಲದ 'ದಟ್ ಡರ್ಟಿ ಅಗ್ಲಿ ವುಮನ್'ಗೆ ಅಜ್ಜಿ ಎಂದವಾದರೂ ಹೇಗೆ?!
ಹೀಗೆ ಒಂದಾನೊಂದು ಕಾಲದಲ್ಲಿ ಕತೆ ಹೇಳುತ್ತಿದ್ದ ನಮ್ಮ ನಿಮ್ಮೆಲ್ಲರ ಅಜ್ಜಿ ಇಂದು ಕತೆಯಾದಳು.
= ರೇಶ್ಮಾ ರಾವ್ ಸೊನ್ಲ್
(ಕನ್ನಡಪ್ರಭ ದಲ್ಲಿ ಪ್ರಕಟ)