ಪುಟಗಳು

20.6.13

ಹೌದು ಸ್ವಾಮಿ...



ಹುಟ್ಟಿದ ಎರಡೂವರೆ ತಿಂಗಳಲ್ಲಿ ಬಹುತೇಕ ಕನ್ನಡಿಗರ ದಿನಚರಿಯಲ್ಲೊಂದಾದ ಬಿಗ್‌ಬಾಸ್ ಜೂ.29ರಂದು ತನ್ನ ಮನೆಯೊಳಗಿನ ಸದಸ್ಯರೊಬ್ಬರ ತೆಕ್ಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡದ ಮೇರು ತಾರೆಗಳ ಸಮ್ಮುಖದಲ್ಲಿ 50 ಲಕ್ಷ ನೀಡಿ ಅಂತರ್ಧಾನವಾಗಲಿದೆ. 
ಅಯ್ಯೋ ಮುಗಿಯಿತೇ.. ಎಂದು ಬೇಸರಿಸಿಕೊಳ್ಳಬೇಕಿಲ್ಲ. ಬಿಗ್‌ಬಾಸ್2 ತಯಾರಿಸುವ ಯೋಜನೆಗಳು ಚಾಲ್ತಿಯಲ್ಲಿವೆ. ಆದರೆ ಅದಕ್ಕಾಗಿ ಒಂದು ವರ್ಷ ಕಾಯಬೇಕಷ್ಟೇ. ಯಾಕೆಂದರೆ ಈಗಾಗಲೇ ಬಾಂಗ್ಲಾದಲ್ಲಿ ಶೋ ತಯಾರಿ ನಡೆದಿದೆ. ನಂತರ ಹಿಂದಿ, ಮತ್ತೆ ಕನ್ನಡ. ಇವೆಲ್ಲಕ್ಕೂ ಇರುವುದೊಂದೇ ಮನೆ. ಹಾಗಾಗಿ ಕಾಯಬೇಕಷ್ಟೇ.
ಪುಣೆ ಸಮೀಪದ ಲೋನಾವಾಲಾದ ಹಳೆಯ ಕಾರ್ಖಾನೆಯೊಂದರಲ್ಲಿ ಬಿಗ್‌ಬಾಸ್ ಮನೆಯನ್ನು ಏಳು ಸುತ್ತಿನ ಕೋಟೆಯಂತೆ ಒಳಗಿನವರಿಗೆ ಹೊರ ಜಗತ್ತಿನ ಸಂಪರ್ಕವಿಲ್ಲದಂತೆ ನಿರ್ಮಿಸಲಾಗಿದೆ. ಯೋಗರಾಜ್ ಭಟ್ ಬರೆದಂತೆ ಹೊರಗಡೆಯಿಂದ ಅರಮನೆ, ಒಳಗಡೆ ಹೋದರೆ ಸೆರೆಮನೆಯೇ ಸೈ. ಮನೆಯಲ್ಲಿರುವ ಸೆಲೆಬ್ರಿಟಿ ಸದಸ್ಯರ ಪ್ರತಿ ಉಸಿರಾಟವನ್ನು 55 ಕ್ಯಾಮೆರಾಗಳು ಕೇಳುತ್ತವೆ, ರಾಜ್ಯದ ಜನತೆ ನೋಡುತ್ತಾರೆ. ಇಲ್ಲಿ ವ್ಯಕ್ತಿತ್ವದ ಪೊಳ್ಳುತನ, ಗಟ್ಟಿತನವನ್ನು ಪರೀಕ್ಷೆಗೊಡ್ಡಲಾಗುತ್ತದೆ. ಎಲ್ಲ ಪರೀಕ್ಷೆಗಳಲ್ಲಿ ಜನಮನವನ್ನು ಗೆಲ್ಲುವವನೇ 50 ಲಕ್ಷಗಳ ಒಡೆಯ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಚಾನೆಲ್‌ಗಳಲ್ಲಿ ಜನಪ್ರಿಯವಾಗಿ ಮೊದಲ ಬಾರಿಗೆ ಪ್ರಾದೇಶಿಕ ಭಾಷೆಯೊಂದರಲ್ಲಿ ತಯಾರಾಗುವಾಗ ಈ ರಿಯಾಲಿಟಿ ಶೋ ಹೆಗಲಿನ ಮೇಲೆ ಇತ್ತೀಚೆಗೆ ಈಟಿವಿ ಕಳೆದುಕೊಂಡ ಕೆಲವು ವೀಕ್ಷಕರನ್ನು ಮರಳಿ ತಂದುಕೊಡುವ ಹಾಗೂ ಬೇರೆ ಚಾನೆಲ್ ರಿಯಾಲಿಟಿ ಶೋಗಳಿಂದ ಕೆಲವು ವೀಕ್ಷಕರನ್ನು ಸೆಳೆದುಕೊಳ್ಳುವ ಜವಾಬ್ದಾರಿ ಇತ್ತು. ಮತ್ತು ಆ ಕೆಲಸವನ್ನು ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡಿದೆ ಎನ್ನುತ್ತಿದೆ ಟಿಆರ್‌ಪಿ.
ಆರಂಭದ ದಿನವೇ 4.5 ಟಿಆರ್‌ಪಿಯೊಂದಿಗೆ ಭರವಸೆ ಮೂಡಿಸಿದ ಬಿಗ್‌ಬಾಸ್ ವಾರದ ಕೊನೆಯಲ್ಲಿ 6.8ರ ದಾಖಲೆ ಟಿಆರ್‌ಪಿ ಕಂಡು ಅಚ್ಚರಿ ಮೂಡಿಸಿದೆ. ಜೊತೆಗೆ 5.8 ಆವ್‌ರೇಜ್ ಟಿಆರ್‌ಪಿಯನ್ನು ಕಾಯ್ದುಕೊಂಡು ಬಂದಿದೆ.ಎಲ್ಲದರಲ್ಲೂ ಒಳ್ಳೆಯದು, ಕೆಟ್ಟದ್ದು ಇದ್ದೇ ಇರುತ್ತದೆ. ಒಳ್ಳೆಯದಕ್ಕೆ ಮಾತ್ರ ಪಂಚೇಂದ್ರಿಯಗಳನ್ನು ತೆರೆದಿಟ್ಟು ನೋಡಿದರೆ ಹುಚ್ಚು ಮನಸ್ಸಿನ ಹತ್ತು ಹಲವು ಮುಖಗಳ ಅನಾವರಣಕ್ಕೆ ವೇದಿಕೆಯಾಗಿರುವ ಬಿಗ್‌ಬಾಸ್ ಮನುಷ್ಯನ ವರ್ತನೆ ಬಗ್ಗೆ ತಿಳಿಯಬಯಸುವವರಿಗೆ ಸಹಾಯಕ. ಜೊತೆಗೆ ನಮ್ಮೊಳಗಿನ ಮಂಕೀ ಮ್ಯಾನ್‌ಗೆ ಹಿಡಿದ ಕನ್ನಡಿಯಾಗಿಯೂ ಕಾರ್ಯಕ್ರಮವನ್ನು ಸ್ವೀಕರಿಸಿದ್ದಾರೆ ಕನ್ನಡದ ಜನ.
ರಾಷ್ಟ್ರೀಯ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿದ್ದ ಹಿಂದಿಯ ಬಿಗ್‌ಬಾಸ್‌ನ ವೋಟಿಂಗ್ ಸಮಯದಲ್ಲಿ ಸದಸ್ಯರಿಗೆ ಬೀಳುತ್ತಿದ್ದ ಮತಗಳು ಹೆಚ್ಚೆಂದರೆ 35,000. ಆದರೆ ಕನ್ನಡದ ಮಣ್ಣಿಗೆ ಸೀಮಿತವಾಗಿರುವ ಕನ್ನಡದ ಬಿಗ್‌ಬಾಸ್‌ನ ಸದಸ್ಯರು ಗಳಿಸುತ್ತಿರುವ ಮತಗಳು ತಲಾ 46,000ಕ್ಕೂ ಹೆಚ್ಚು. ಇದು ಕನ್ನಡದ ಪ್ರೇಕ್ಷಕ ತನ್ನನ್ನು ತಾನು ಕಾರ್ಯಕ್ರಮದ ಒಂದು ಭಾಗವಾಗಿ ಗುರುತಿಸಿಕೊಂಡಿರುವುದನ್ನು ಸೂಚಿಸುತ್ತದೆ.
- ರಾಘವ್ ಹುಣಸೂರು, ಈಟಿವಿ ಕಾರ್ಯಕ್ರಮ ಮುಖ್ಯಸ್ಥ
 
(ಚಿತ್ರ ಪ್ರಭದಲ್ಲಿ ಪ್ರಕಟ - ೧4 -6 - 2 0 1 3 )

ಬಿಗ್‌ಬಾಸ್ ಮನೆಯಂಗಳದಲ್ಲಿ




ಎಸ್, ಐ ಆ್ಯಮ್ ಅಲೂಫ್. ನಂಗೆ ಒಬ್ನೇ ಇರೋಕೆ ಇಷ್ಟ. ನನ್ನ ಫ್ಯಾಮಿಲಿ, ಚಿಕ್ಕ ಗೆಳೆಯರ ಬಳಗ ಇಷ್ಟರ ಮಧ್ಯೆ ಮಾತ್ರ ನಾ ತೆರೆದುಕೊಳ್ಳಬಲ್ಲೆ ಎನ್ನುತ್ತಾ ಆ್ಯಟಿಟ್ಯೂಡ್ ಪದಕ್ಕೆ ತದ್ಭವದಂತೆ ಕುಳಿತ ಕಿಚ್ಚನ ಖದರೇ ಅಂಥದು. ಯಾರನ್ನೂ ಓಲೈಸುವ ಸೋಗಿಲ್ಲದೆ, ಸ್ವಲ್ಪ ಸಿಡುಕುತ್ತಾ, ಪತ್ರಕರ್ತರಿಗೆ ತಿರುಗಿ ಕಾಲೆಳೆಯುತ್ತಲೇ ಕಾಫಿ ಕುಡೀರಿ ಎಂದು ಉಪಚರಿಸುತ್ತಾ ಬಿಗ್‌ಬಾಸ್, ಸಿನಿಮಾ, ಮನೆ, ನೆನಪು ಎಂದೆಲ್ಲ ಮನಬಿಚ್ಚಿ ಕುಳಿತದ್ದು ನಟ, ನಿರ್ದೇಶಕ, ಹಾಡುಗಾರ, ನಿರ್ಮಾಪಕ, ಮತ್ತು ಬಿಗ್‌ಬಾಸ್ ನಿರೂಪಕ ಕಿಚ್ಚ ಸುದೀಪ್.
ಸಿನಿಮಾ ಮಾಡಿದಾಗ ಜನರನ್ನು ಚಿತ್ರಮಂದಿರಕ್ಕೆ ಎಳೆದು ತರ್ಬೇಕು. ಆದರೆ ಬಿಗ್‌ಬಾಸ್‌ನಲ್ಲಿ ಹಾಗಲ್ಲ, ನಾವೇ ಜನರ ಮನೆಗೆ ಹೋಗ್ತೀವಿ. ಇದರಿಂದ ಜನ ನಮ್ಮೊಂದಿಗೆ ಹೆಚ್ಚು ನಿಕಟ ಸಂಬಂಧ ಗುರುತಿಸಿಕೊಳ್ಳುತ್ತಾರೆ. ಇದು ನನಗೆಷ್ಟು ಖುಷಿ ಕೊಡ್ತಿದೆ ಎಂದರೆ ಬೇರೆಲ್ಲ ಶೂಟಿಂಗ್‌ಗಳನ್ನೂ ಜುಲೈಗೆ ಮುಂದೆ ಹಾಕಿಕೊಂಡು ಕುಳಿತಿದ್ದೇನೆ. ಅದೂ ಅಲ್ಲದೆ ಹೊಸ ಅನುಭವಗಳಿಗೆ ತೆರೆದುಕೊಂಡಾಗಲೇ ಏಕತಾನತೆ ಹೋಗುವುದಲ್ಲವೇ? ಕಲೀಬೇಕು ಅನ್ನೋ ಮನಸ್ಸಿದ್ರೆ ಎಲ್ಲದರಲ್ಲೂ ಕಲಿಯೋಕಿರತ್ತೆ. ಈ ರಿಯಾಲಿಟಿ ಶೋ ಕೂಡಾ ಏನೇನೋ ಕಲಿಸುತ್ತದೆ.ಸಾಮಾಜಿಕ ಜಾಲತಾಣಗಳಲ್ಲಿ ಜನ ಅವ್ರು ಹೀಗ್ಮಾಡ್ಬಾರ್ದಿತ್ತು, ಇವ್ರು ಹೀಗ್ಮಾಡ್ಬೇಕಿತ್ತು ಎಂದೆಲ್ಲ ಸ್ಪಂದಿಸುವಾಗ ಖುಷಿಕೊಡತ್ತೆ. ಏಕೆಂದರೆ ಜನ ಅಷ್ಟರ ಮಟ್ಟಿಗೆ ಕಾರ್ಯಕ್ರಮದೊಳಕ್ಕೆ ಇಳಿದಿದ್ದಾರೆ ಎನ್ನುತ್ತಾರೆ 'ಬಚ್ಚನ್‌'. 
ಬಿಗ್‌ಬಾಸ್‌ಗೆ ಬಂದು ಚಂದ್ರಿಕಾರ ಮಗ ವಯಸ್ಸಿಗೆ ಮೀರಿದ ಮಾತನಾಡಿದ ದಿನ ತಮಗೇ ಗೊತ್ತಿಲ್ಲದಂತೆ ಮಗಳು ಸಾನ್ವಿಯೊಡನೆ ಎಂದಿಗಿಂತ ಒಂದು ಗಂಟೆ ಹೆಚ್ಚು ಕಳೆದರಂತೆ ಸುದೀಪ್. ಆದರೂ ಮಗಳಿಗಾಗಿ ಸಿಗರೇಟು ಬಿಡುವುದಾಗಿ ಹೇಳಿಕೊಂಡಿದ್ದ ಸುದೀಪ್ ಕೈಲಿ ಸಿಗರೇಟ್ ಕಿಡಿ ನರಳುತ್ತಿತ್ತು. ಈ ಪ್ರೆಶರ್‌ನಲ್ಲಿ ಅಷ್ಟು ಕಂಟ್ರೋಲ್ ಮಾಡಲಾಗುತ್ತಿಲ್ಲ. ಆದರೆ ಸಿಗರೇಟ್‌ಗೆ ಡೈವೋರ್ಸ್ ನೀಡುವುದಂತೂ ಖಂಡಿತ. ಕೊಂಚ ಸಮಯ ಬೇಕಷ್ಟೇ ಎಂದು ಮತ್ತೊಮ್ಮೆ ವಾಗ್ದಾನ ನೀಡುವುದನ್ನು ಮಾತ್ರ ಮರೆಯಲಿಲ್ಲ. 
ಸೆರೆಮನೆಯೊಳಗಿರುವ ಎಲ್ಲ ಸದಸ್ಯರಿಗೆ ಹೊರಜಗತ್ತಿನೊಂದಿಗೆ ಏಕಮಾತ್ರಕೊಂಡಿಯಾಗಿರುವ ತಾನು ಯಾರ ವರ್ತನೆ ಬಗ್ಗೆಯೂ ಜಡ್ಜ್‌ಮೆಂಟಲ್ ಆಗಿರಕೂಡದು ಹಾಗೂ ಆಗಿಲ್ಲ ಎಂಬುದು ಕಿಚ್ಚನ ಖಡಕ್ ನುಡಿ. ಜಿಮ್‌ಗೆ ಹೋಗಿ ಗಂಟೆಗಟ್ಟಲೆ ಕಳೆಯುವುದು ಅದೇಕೋ ಸುದೀಪ್‌ಗೆ ಆಗಿಬರಲ್ಲಂತೆ. ಬದಲಿಗೆ ಸೈಕ್ಲಿಂಗ್,  ಬ್ಯಾಡ್‌ಮಿಂಟನ್ ಆಡಿ ದೇಹ ದಂಡಿಸುತ್ತಾರೆ. ಪ್ರತಿದಿನ ಒಂದಾದರೂ ಸಿನಿಮಾ ನೋಡದೇ ಮಲಗಿದರೆ ನಿದ್ದೆ ಬರುವುದಿಲ್ಲ. ಅದೇ ಪುಸ್ತಕ ಹಿಡಿದುಕೊಂಡರೆ ಮಾತ್ರ ನಾಲ್ಕು ಪುಟಗಳನ್ನು ಮೀರಿ ಮುಂದೆ ಹೋಗುವುದಿಲ್ಲ. ವಿಷ್ಣುವರ್ಧನ್ ಅಂದರೆ ಅಚ್ಚುಮೆಚ್ಚು. ಕಾಲೇಜು ದಿನಗಳಲ್ಲಿ ನಾಟಕಗಳಿಗೆ ಸ್ಕ್ರಿಪ್ಟ್ ತಯಾರಿಸುತ್ತಿದ್ದ ತನಗೆ ಯಾರೂ ಮುಂದೆ ಹೋಗಲೇ ಬಿಡುತ್ತಿರಲಿಲ್ಲ. ಆಗೆಲ್ಲ ನಂಗೊಂದ್ ಸಣ್ಣ ಪಾತ್ರ ಸಿಕ್ಕಿದ್ರೆ ಅಂತ ಆಸೆಕಂಗಳಿಂದ ನೋಡ್ತಾ ಕನಸು ಕಾಣ್ತಿದ್ದೆ. ಆ ದಿನಗಳು ನಿಜಕ್ಕೂ ಚೆನ್ನಾಗಿತ್ತು ಎಂದು ನೆನಪಿಗೆ ಹೊರಳಿದ ಸುದೀಪ್ ಆಗಲೇ ಹಾಡು ಮತ್ತು ಗಿಟಾರ್‌ನಲ್ಲಿ ತೊಡಗಿಸಿಕೊಂಡಿದ್ದರಂತೆ.
- ರೇಶ್ಮಾ ರಾವ್

19.6.13

ಅಪ್ಪನಿಗೇನೂ ಗೊತ್ತಿಲ್ಲ!

ಮೊನ್ನೆ (ಜೂ.16) ಅಪ್ಪಂದಿರ ದಿನ. ಈ ಹಿನ್ನೆಲೆಯಲ್ಲಿ ಇದೊಂದು ಲಹರಿ...
ಹುಟ್ಟಿ ಎರಡು ದಶಕಗಳಲ್ಲಿ ಐದೂವರೆ ಅಡಿ ಬೆಳೆದಿದ್ದೇನೆ. ಭುಜಕ್ಕೆ ಭುಜ ತಾಗಿಸಿ ನಿಂತರೂ ಅಪ್ಪ ಮಾತ್ರ ಹೆಗಲಲ್ಲಿದ್ದೇನೋ ಎಂಬಂತೆ ಜಾಗರೂಕತೆ ವಹಿಸುತ್ತಾರೆ. ಊಟಕ್ಕೆ ಕುಳಿತಾಗೆಲ್ಲ ಹೇಗೆ ಊಟ ಮಾಡಬೇಕೆಂದು ಹೇಳುವ ಅಪ್ಪನ ಪರಿಪಾಠ ನನಗೀಗ ಬಾಯಿಪಾಠವೇ ಆಗಿಹೋಗಿದೆ. ಅಪ್ಪನಿಗೆ ಮಗಳು ಬೆಳೆದಿದ್ದಾಳೆಂಬುದೇ ಗೊತ್ತಿಲ್ಲ.
ಚೂರು ಎಡವಿದರೂ ಕಿರುಚುವುದು ಅಭ್ಯಾಸವೆಂಬಷ್ಟು ಸಹಜವಾಗಿದ್ದರೂ, ಕಿರುಚಿದ ಸದ್ದಿಗಿಂತಾ ಜೋರಾಗಿ ಹೆಜ್ಜೆ ಸಪ್ಪಳ ಮಾಡಿಕೊಂಡು ಓಡಿ ಬರುವ ಅಪ್ಪ ಹತ್ತಿರ ಬಂದ ಮೇಲೆ ಅದೇನಾಗಿ ಹೋಗಿದೆಯೋ ಎಂಬ ಭಯಕ್ಕೆ ನನ್ನೆಡೆಗೆ ನೋಡುವುದೇ ಇಲ್ಲ. ಆಗೆಲ್ಲ ಇಷ್ಟು ಸಣ್ಣದಕ್ಕೆ ಅಷ್ಟು ದೊಡ್ಡದಾಗಿ ಕಿರುಚಿದೆನೆಂಬ ಪಾಪಪ್ರಜ್ಞೆ, ಅದಕ್ಕಾಗಿ ಅತಿಯಾಗಿ ಪ್ರತಿಕ್ರಿಯಿಸಿದ ಅಪ್ಪನ ಬಗ್ಗೆ ಕೋಪ ಮತ್ತು ಅವರ ಕಾಳಜಿಯ ಬಗ್ಗೆ ಹೆಮ್ಮೆ ಎಲ್ಲವೂ ಒಟ್ಟೊಟ್ಟಿಗೇ ಆಗುತ್ತದೆ. ಆದರೂ ತಾವು ಬರಲೆಂದೇ ಮಗಳು ಕಡ್ಡಿ ಗುಡ್ಡ ಮಾಡುತ್ತಾಳೆಂದು ಅಪ್ಪನಿಗೆ ಗೊತ್ತಿಲ್ಲ.
ನನಗೆ ಸಣ್ಣದಾಗಿ ತರಚಿದರೂ ಎಣ್ಣೆ, ಆಯಿಂಟ್‌ಮೆಂಟ್ ತಂದು ನಿಲ್ಲುವ ಅಪ್ಪನ ಅಂಗಾಲು ಮಾತ್ರ ಐನೂರು ಬಿರುಕು ಬಿಟ್ಟು ತಮಗಿಲ್ಲದ ಎಣ್ಣೆ, ವ್ಯಾಸಲೀನ್ ಭಾಗ್ಯಕ್ಕೆ ಕರುಬುತ್ತಾ ಬಾಯಿ ಬಾಯಿ ಬಿಡುತ್ತಿರುತ್ತವೆ. ಆದರೂ ಅಪ್ಪನಿಗೆ ಔಷಧ ಬೇಕಾಗಿರುವುದು ಅವರಿಗೇ ಎಂದು ಗೊತ್ತಿಲ್ಲ.
ದೂರದ ಊರಲ್ಲಿರುವ ಮಗಳು ಕುಳಿತರೂ ನಿಂತರೂ ಊರಿನಲ್ಲೆಲ್ಲ ಸುದ್ದಿ ಹರಡುವುದು ಹೇಗೆಂದು ಅಮ್ಮ ಕೇಳುವಾಗೆಲ್ಲ ಅಪ್ಪನ ಕರಿಮೀಸೆಯ ಮಧ್ಯ ಮಧ್ಯ ಅಡಗಿ ಕುಳಿತ ಬಿಳಿಕೂದಲು ಕಿಸಕ್ ಎಂದು ಶಬ್ದ ಮಾಡದೆ ನಕ್ಕ ವಿಷಯ ಫೋನಿನಲ್ಲಿ ನನಗೆ ಕೇಳುತ್ತದೆ. ಆದರೂ ಅಪ್ಪನಿಗೂ ಅದು ಹೇಗೆ ವಿಷಯ ಹಬ್ಬಿತೆಂದು ಗೊತ್ತಿಲ್ಲ! 
ಮಕ್ಕಳು ಮನೆಗೆ ಬರುತ್ತಿದ್ದಾರೆ ಎಂಬ ವಿಷಯ ತಿಳಿಯುವುದರೊಳಗೆ ಕೆಜಿಗಟ್ಟಲೆ ಹಣ್ಣು, ತರಕಾರಿ, ತಿಂಡಿ ಮಾಡಲು ಸಾಮಾನು ತಂದು ಮನೆಯ ತುಂಬಾ ರಾಶಿ ಹಾಕುವ ಅಪ್ಪನಿಗೆ ಮಕ್ಕಳ ಹೊಟ್ಟೆಯ ಗಾತ್ರ ಸಣ್ಣದೆಂದು ಇನ್ನೂ ಗೊತ್ತಿಲ್ಲ.
ಒಂದು ತಿಂಗಳು ಡ್ರೈವಿಂಗ್ ಕ್ಲಾಸ್‌ಗೆ ಹೋದ ಮಗಳು ಕಾರು ಓಡಿಸಬಲ್ಲಳೆಂದು ಗೊತ್ತಿಲ್ಲ. ನಲ್ವತ್ತಕ್ಕಿಂತ ಜೋರಾಗಿ ಸ್ಕೂಟಿ ಓಡಿಸಬೇಡ ಎನ್ನುವ ಅಪ್ಪನಿಗೆ ಟ್ರಾಫಿಕ್ ಸಿಗ್ನಲ್ ಹಾರಿಸುತ್ತೇನೆಂದು ಗೊತ್ತಿಲ್ಲ, ಅನ್ನ ಸಾಂಬಾರ್ ತಿಂದೆನೆಂದು ಹೇಳಿ ಸ್ಯಾಂಡ್‌ವಿಚ್ ತಿಂದು ಮಲಗುವುದು ಗೊತ್ತಿಲ್ಲ. ಇಷ್ಟೆಲ್ಲ ಆದ್ಮೇಲೂ ಅಪ್ಪ ನನಗೇ ಬೈತಾರೆ, ಎಂಥ ಗೊತ್ತಿಲ್ಲದಿದ್ದರೂ 'ಎಲ್ಲ ಗೊತ್ತಿದೆ' ಅನ್ನೋಕ್ಕೊಂದು ಗೊತ್ತು ಅಂತ!- 
 (ಕನ್ನಡಪ್ರಭದ ರಂಗೋಲಿಯಲ್ಲಿ ಪ್ರಕಟ)
ರೇಶ್ಮಾ ರಾವ್ ಸೊನ್ಲೆ