ಹೇಳೀ ಕೇಳೀ ಇದು ಬೆಂದಕಾಳೂರು. ಅಂದ ಮೇಲೆ ಯಾರೂ ತಮ್ಮ ಬೇಳೆಯನ್ನು ಇಲ್ಲಿ ಬೇಯಿಸಿಕೊಳ್ಳಬಹುದು!
ವಲಸಿಗರು ಬಂದು ಸೇರುತ್ತಲೇ ಇದ್ದಾರೆ. ಹೀಗಾಗಿ ಜಿಮ್ಗೆ ಹೋಗುವ ಯುವಕನಂತೆ ಬೆಂಗಳೂರು
ತನ್ನ ತೆಕ್ಕೆಗೆ ಪಾಳ್ಯ, ದೊಡ್ಡಿ, ಹಳ್ಳಿಗಳನ್ನೆಲ್ಲ ಎಳೆದುಕೊಳ್ಳುತ್ತಾ
ಮಾಂಸಖಂಡಗಳನ್ನು ಹುರಿಗೊಳಿಸಿಕೊಳ್ಳುತ್ತಲೇ ಇದೆ. ಅಷ್ಟದಿಕ್ಕುಗಳಲ್ಲೂ ಅಷ್ಟಾವಕ್ರನಾಗಿ
ಹರಡಿ ಬೆರಳೆಣಿಕೆಯಷ್ಟು ಮೂಲಬೆಂಗಳೂರಿಗರನ್ನು ಹೊತ್ತು ಕನ್ನಡ, ಎಕ್ಕಡ, ಎನ್ನಡಗಳಿಗೆ
ಇಂಗ್ಲಿಷ್ ಹೊದಿಕೆ ಹಾಸಿದೆ. ನಮನಮೂನೆಯ ವೇಷಭಾಷೆ ಬದುಕನ್ನು ತನ್ನೊಡಲಿಗೆ ಹಾಕಿಕೊಂಡು
ಕಳೆದುಕೊಂಡ ಸ್ವಂತಿಗೆಗಾಗಿ ಪರಿತಪಿಸುತ್ತಿದೆ. ಸ್ವಂತಿಕೆಯೇ ಇಲ್ಲದ ಊರಲ್ಲಿ
ಸ್ವಂತಕ್ಕೆಂದು ಸಾವಿರ ಮಾಡಿಕೊಂಡರೂ ಸುಖ ಮರೀಚಿಕೆಯೇ! ಸಣ್ಣ ಹಳ್ಳಿಯಲ್ಲೆಲ್ಲೋ
ಹುಟ್ಟಿದ ಕೂಸು ಪಟ್ಟಣದಲ್ಲಿ ಶಾಲೆ ಕಲಿತು, ನಗರದಲ್ಲಿ ಎಂಜಿನಿಯರಿಂಗ್ ಮಾಡಿ ಶುಭದಿನ
ನೋಡಿ ಮಹಾನಗರಕ್ಕೆ ಪದಾರ್ಪಣೆ ಮಾಡಿ ಎಂಎನ್ಸಿಗಳ ಎಸಿ ಕೊಠಡಿಯಲ್ಲಿ ಕುಳಿತು ಅಮೆರಿಕ,
ಆಸ್ಟ್ರೇಲಿಯಾ ಎಂದು ಕುಳಿತಲ್ಲೇ ವ್ಯವಹರಿಸಿ ಕ್ಷಣಮಾತ್ರದಲ್ಲಿ ವಿಶ್ವಮಾನವನಾಗಿ
ಬಿಡುತ್ತದೆ! ತಿಂಗಳು ತಿಂಗಳು ಲಕ್ಷಗಟ್ಟಲೆ ಎಣಿಸಿಯೂ ಮನೆಯನೆಂದೂ ಕಟ್ಟಲಾಗದೇ,
ಕೊನೆಯನೆಂದೂ ಮುಟ್ಟಲಾಗದೇ ಅನಂತವಾಗಿ ಬಿಡುವ ಜನಜೀವನ!- ಇದು ಬೆಂಗಳೂರು. ಅಜ್ಜಿ
ಬರುತ್ತಾಳೆ ಮೊಮ್ಮಗಳು ಬಸುರಿ ಎಂದು. ಮೊಮ್ಮಗಳ ಬಾಣಂತನ ಮಾಡುವಾಗಾಗಲೇ ಶತಶತಮಾನಗಳಿಂದ
ವಂಶವಾಹಿನಿಯಲ್ಲಿ ಹರಿದು ಬಂದ ಸಂಪ್ರದಾಯ, ತಿಂಡಿತೀರ್ಥಗಳನ್ನು ಕಚ್ಚೆಸೀರೆಯಲ್ಲಿ
ಹೊತ್ತು ತಂದಿದ್ದ ಅಜ್ಜಿಯ ವಯಸ್ಸು, ಅನುಭವ ತಾನು ಧರಿಸಿದ ನೈಟಿಯೊಳಗೆ ಅವಿತಿರುತ್ತದೆ!
(ಇದು ಬೆಂಗಳೂರಿನ ನೀರು.) ಯಾರ ಬಾಣಂತನ ಯಾರು ಮಾಡುತ್ತಿದ್ದಾರೆಂಬ ಅನುಮಾನ ಬರಬಹುದೇನೋ
ನೆರೆಮನೆಯವನು ನೋಡಿದರೆ! ಆದರೆ ಆತ ನೋಡುವುದಿಲ್ಲ. ಅವನಿಗೆ ತಿಂಗಳಿಗೊಮ್ಮೆ ಬದ ಚಯ
ಬೇಕಾಗಿಲ್ಲ. ಕಂಪ್ಯೂಟರ್, ಟಿವಿ, ಸೋಷಿಯಲ್ ನೆಟ್ವರ್ಕ್ಗಳು ಮನೆಯೊಳಗೇ ವಿಶ್ವದ ಕಾಲು
ಮುರಿದು ತಂದೆಸೆದಿರುವಾಗ ಹೆಂಡತಿಮಕ್ಕಳ ಮುಖವೇ ಕಾಣುವುದಕ್ಕೆ ಸಮಯವಿಲ್ಲ. ಅಂಥದರಲ್ಲಿ
ಪಕ್ಕದ ಮನೆಯವರ ಗೊಡವೆಯೇಕೇ?(ಬೆಂಗಳೂರಿನ ಮನೋಧರ್ಮ) ಬೆಳದಿಂಗಳಿರುಳುಗಳನ್ನೂ,
ಅಮಾವಾಸ್ಯೆಯ ಕಾರ್ಮುಗಿಲನ್ನೂ ನುಂಗಿ ಕುಳಿತ ನಿಯಾನ್ ಲೈಟ್ಗಳಲ್ಲಿ ಕವಿತ್ವ
ಜಡವಾಗುತ್ತದೆ. ಕಪಿತ್ವ ಮಾತ್ರ ಆಧುನಿಕ ಬಟ್ಟೆ ಧರಿಸಿ ಹೆಂಡ ಕುಡಿದಂತೆ ಪಬ್ಗಳಲ್ಲಿ,
ಹಾದಿಬೀದಿಗಳಲ್ಲಿ ತೂರಾಡುತ್ತದೆ, ಹಾರಾಡುತ್ತದೆ. ಅದಕ್ಕೆ ಯಾವ ಅರ್ಥವೂ ಇಲ್ಲ.
ರಾತ್ರಿಗಳಲ್ಲೂ ಕಪ್ಪಗಾಗದ ಬೆಂಗಳೂರಿನ ಆಕಾಶ ಕುರುಡು. ಅದಕ್ಕೆ ತನ್ನ ಬುಡದಲ್ಲೇ ನಡೆಯುವ
ಕಾಳದಂಧೆಗಳು ಕಾಣುವುದೇ ಇಲ್ಲ!- (ಇದು ಬೆಂಗಳೂರಿನ ಆಕಾಶ.) ಕಾವಿ ಬಟ್ಟೆ
ಕಂಡರೆ ಸಾಕು, ಕಲಿತ ವಿದ್ಯೆಯನ್ನೆಲ್ಲ ಮರೆತು ಪರಮದೈವಿಕರಾಗುವ ಜನತೆ! ಸ್ವಾಮಿ
ನಿತ್ಯಾನಂದ, ಸತ್ಯಾನಂದ, ಭೋಗಾನಂದ- ಯಾವುದೇ ಆನಂದ ಎಂಬ ಹೆಸರು ಕೇಳಿದರೂ ತಮ್ಮ ಜೀವನದ
ಆನಂದದ ಕೀಲಿಕೈ ಸಿಕ್ಕಿತೆಂಬಂತೆ ಸತ್ಸಂಗ ಮಾಡುತ್ತಾ ಕುಳಿತುಬಿಡುವ ಭಕ್ತಾನಂದರು! (ಇದು
ಬೆಂಗಳೂರಿನ ಅಧ್ಯಾತ್ಮ) ಶಾಲೆಯಲ್ಲಿದ್ದಾಗ ಬೆಂಗಳೂರಿಗೆ ಟೂರ್ ಬಂದು ಊರಗಲ
ಕಣ್ಣು ಹೊರಳಿಸಿ ತುಂಬಿಕೊಂಡು ಊರಿಗೆ ಮರಳಿ 'ನಾ ವಿಧಾನಸೌಧದ ಬಾಗಿಲು ಮುಟ್ಟಿ ಬಂದೆ'
ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದ ಕುವರ 'ದೊಡ'್ಡವನಾಗಿ ಇಲ್ಲೇ ಬಂದು ನೆಲೆ ನಿಂತ ಮೇಲೆ
ಮಾಲ್ಗಳು, ಥಿಯೇಟರ್ ಹಾಲ್ಗಳಲ್ಲಿ ಕಾಲ ಕಳೆಯುತ್ತಾ ವಿಧಾನಸೌಧದೊಳಗೇನಾದರೆ
ತನಗೇನಾಗಬೇಕು? ಭ್ರಷ್ಟ ರಾಜಕಾರಣಿಗಳಿಗೂ ತನಗೂ ಸಂಬಂಧವಿಲ್ಲವೆಂದು ಘೋಷಿಸಿ ನಿರಾಳ
ನಿರ್ಲಿಪ್ತನಾಗುತ್ತಾನೆ. ಕೈಲಿ ದುಡ್ಡು, ಬಾಯಲ್ಲಿ ಬ್ರಿಟಿಷರ ಭಾಷೆ, ತುರುಸಿಕೊಳ್ಳಲೂ
ಪುರುಸೊತ್ತಿಲ್ಲದಂತೆ ಪಾಶ್ಚಾತ್ಯ ಕಂಪನಿಗಳ ಉದ್ಧಾರಕ್ಕೆ ದುಡಿಯುವ ಅವನಿಗೆ ದೇಶದ
ಬೆಳವಣಿಗೆಯಿಂದೇನಾಗಬೇಕಿದೆ? ಆದ್ಯತೆ ಬಾದ್ಯತೆಗಳನ್ನೇ ಬದಲಾಯಿಸಿಬಿಡುವುದು ಬೆಂಗಳೂರು
(ಇದು ಬೆಂಗಳೂರಿಗರ ಪಾಲಿಟಿಕ್ಸ್). ವಾರಕ್ಕೆರಡು ಬರ್ತ್ಡೇ ಪಾರ್ಟಿ, ಆಗಾಗ್ಗೆ
ಉದರದ ಒಳಗಿನ ಸೌಂದರ್ಯವನ್ನು ವೃದ್ಧಿಸುವ ಪಿಜ್ಜಾಬರ್ಗರ್, ದಿನಂಪ್ರತಿ ಉಪಹಾರ
ದರ್ಶಿನಿಗಳಲ್ಲಿ ಊಟತಿಂಡಿ, ಗೂಡಂಗಡಿಗಳ ಬೈಟೂ ಟೀ. ವೀಕೆಂಡ್ಗಳಲ್ಲಿ ದೊಡ್ಡ ದೊಡ್ಡ
ಹೋಟೆಲ್ಗಳೆದುರು ಕ್ಯೂನಲ್ಲಿ ನಿಲ್ಲುವ ಜನರ ಮನೆಯ ಅಡುಗೆಕೋಣೆಯೆಂಬ ಶೋಕೇಸಿನಲ್ಲಿ
ತೆಪ್ಪಗೆ ಕುಳಿತ ಎಂದೂ ಹೊತ್ತದ ಗ್ಯಾಸ್ ಒಲೆ! (ಬೆಂಗಳೂರಿಗರ ಆಹಾರಶೈಲಿ). ಬೆಳಗ್ಗೆ
ಎಂಟು ಗಂಟೆಗೆ ಬಾಗಿಲು ತೆರೆದು ಮೈ ಮುರಿಯುವ ಮನೆಗಳೆದುರು ರಾತ್ರಿ 11ಕ್ಕೇ ಹರಡಿ ನಿಂತ
ರಂಗೋಲಿ. ಕೋಟಿ ಬೆಲೆ ಬಾಳುವ ಅಂಗಳವಿಲ್ಲದ ಮನೆಯ ನೆತ್ತಿ, ಬಗಲಲ್ಲಿ ಹತ್ತಿ ಕುಳಿತ
ಪಾಟ್ಗಳಲ್ಲಿ ಅರಳುವ ದಿನಕ್ಕೊಂದು ಕೆಂಪು ಗುಲಾಬಿ! ಇಬ್ಬರೂ ಕೆಲಸಕ್ಕೆ ಹೋಗುವ ಗಡಿಯಾರದ
ಒಂದು ನಿಮಿಷವೂ ವ್ಯರ್ಥವಾಗದ ಮನೆಗಳಲ್ಲಿ ಪ್ಲೇಹೋಂ ಒಡತಿಯ ಜೇಬು ತುಂಬಲೆಂದೇ ಯಾವುದೋ
ಮಾಯದಲ್ಲಿ ಹುಟ್ಟುವ ಕೂಸು. ನೈತಿಕತೆಯ ತೇಗನ್ನು ಗ್ಯಾಸ್ಟ್ರಿಕ್ ಮಾತ್ರೆ ನುಂಗಿ
ಶಮನಗೊಳಿಸುವ ಮಂದಿಗೆ ಸ್ವಾರ್ಥದ ಬೊಜ್ಜನ್ನು ಕರಗಿಸಲು ಅಶಕ್ತವಾಗುವ ಬೆಳಗಿನ ವಾಕಿಂಗ್,
ಜಿಮ್ಮಿಂಗ್, ಸ್ವಿಮ್ಮಿಂಗ್. ಇರುವ ಮಚ್ಚೆ, ಮೊಡವೆ, ಕಲೆಗಳನ್ನು ಮುಚ್ಚಲು ಹಾದಿಗೆ
ನಾಲ್ಕರಂತೆ ಹಬ್ಬಿ ನಿಂತ ಬ್ಯೂಟಿಪಾರ್ಲರ್ಗಳು! ಬೆಂಗಳೂರು ಬೆಳೆದಿದೆ, ಬದುಕು ಬದಲಾಗಿದೆ.
(ಕನ್ನಡಪ್ರಭದ ಸಾಪ್ತಾಹಿಕದಲ್ಲಿ 21- 4 - 2013 ರಂದು ಪ್ರಕಟ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ