ಅವನಿದ್ದಾನೆ!
ಅಲ್ಲೊಂದು ಕಣಿವೆಯಿದೆ. ಅದೇ ಆ ಕಪ್ಪುಗಡಲಿನ ಮಧ್ಯೆ ಇರುವ ದ್ವೀಪದಲ್ಲಿ. ಕಡಲಿಗಿಂತ ಆಳ, ಆಗಸಕ್ಕಿಂತ ಅಗಾಧ. ಅಲ್ಲಿ ಪ್ರತಿದಿನ ಕನಸು ಮಾರುವವರು ಸಾವಿರಗಟ್ಟಲೆ ಜನ. ಸಂತೆ ನಡೆಸಲು ಹಾಸಿ ಕೂರುತ್ತಾರೆ ಬೃಹತ್ ಬಿಳಿ ಬಟ್ಟೆ. ಅದರ ಮೇಲೆ ಹರಡುತ್ತಾರೆ ವಿವಿಧ ಕನಸು. ಕಂತೆಗಟ್ಟಲೆ ಕನಸು, ಬಣ್ಣಬಣ್ಣದ ಕನಸು. ಅಲ್ಲೊಬ್ಬ ಇದ್ದಾನೆ ನೀಲಿಕಂಗಳ ಹುಡುಗ. ಅವನು ಮಾರುವ ಕನಸು ಥೇಟ್ ನಕ್ಷತ್ರಗಳನ್ನೇ ಕಿತ್ತು ತಂದಂತೆ. ಅವನ ಕಣ್ಣುಗಳು ಪ್ರತಿಫಲಿಸಿದಂತೆ ಫಳಫಳನೆ ಹೊಳೆಯುತ್ತವೆ... ಅವಳು ಹೇಳುತ್ತಲೇ ಹೋದಳು... ಕಣಿವೆ ಇರುವ ದ್ವೀಪದ ಸುತ್ತಲೂ ಹೂವಿನ ಗಿಡಗಳದ್ದೇ ಬೇಲಿ. ದ್ವೀಪದ ಮಧ್ಯದ ದೊಡ್ಡ ಆಲದ ಮರದ ರೆಂಬೆಗಳ ಮೇಲೆ ಕಾಮನಬಿಲ್ಲು ಕಾಲು ಚಾಚಿ ಮಲಗಿದೆ. ಎಷ್ಟು ಚೆನ್ನಾಗಿದೆ ಎಂದರೆ.. ಮರದ ಬುಡದಲ್ಲೊಂದು ನದಿ. ಕಾಮನಬಿಲ್ಲಿನ ಪ್ರತಿಬಿಂಬವನ್ನು ಅರೆದು ಕುಡಿದು ತರಹೇವಾರಿ ಬಣ್ಣಗಳಲ್ಲಿ ತರಂಗತರಂಗವಾಗಿ ಮೆಲ್ಲನೆ ಸರಿದಾಡುವ ನೀರು. ಹಕ್ಕಿಗಳ ಚಿಲಿಪಿಲಿಯಂತೂ ಕಿವಿ ತುಂಬುತ್ತದೆ. ದೇವಲೋಕವೇ ತುಂಡಾಗಿ ಭೂಮಿಗೆ ಬಿದ್ದಂತಿದೆ...ಅವಳು ಹೇಳುತ್ತಲೇ ಇದ್ದಳು. ನಾ ಮಾತ್ರ ನೀಲಿ ಕಣ್ಣಿನ ಹುಡುಗ, ನಕ್ಷತ್ರಗಳಂಥ ಕನಸು ಮಾರುವ ಹುಡುಗನ ಗುಂಗಿಗೆ ವಶಳಾಗಿದ್ದೆ. ಮುಂದಿನದೇನೂ ಕೇಳಲೇ ಇಲ್ಲ. ಗೆಳತಿ ಹೋದದ್ದೂ ತಿಳಿಯಲಿಲ್ಲ.ಈ ಹುಡುಗನಿಗೊಂದು ರೂಪ ಒಡಮೂಡತೊಡಗಿತು.
ಗುಂಗುರು ಕೂದಲು, ಕಪ್ಪು ಎನ್ನಬಹುದಾದ ಕಪ್ಪಲ್ಲದ
ಬಣ್ಣ, ಕೋಲು ಮುಖ, ಎಲ್ಲಕ್ಕಿಂತಾ ಹೆಚ್ಚಾಗಿ ಮಿನುಗುವ ಕಣ್ಗಳು! ಅವನು ಅತ್ಯಂತ
ಸುಂದರನಾಗಿದ್ದ. ಅವ ಆಕಾಶದಿಂದಲೇ ಹೆಕ್ಕಿ ತರುತ್ತಾನೆಯೇ ನೀಲಿ ನಕ್ಷತ್ರಗಳಂಥ
ಕನಸುಗಳನ್ನು? ಅವನೊಬ್ಬ ಮಾರು ವೇಶದಲ್ಲಿರುವ ಕಿನ್ನರಿಯೇ? ಅಲ್ಲದಿದ್ದರೆ ಅವನ ಕಣ್ಗಳೇಕೆ
ಹಾಗೆ ಮಿನುಗುತ್ತಿದ್ದವು? ಅಯ್ಯೋ ನನಗೇನಾಗಿದೆ? ಗೆಳತಿ ಹೇಳಿದ ಕಟ್ಟುಕತೆಯ
ಪಾತ್ರವೊಂದು ನನ್ನನ್ನು ಹೀಗೆ ಆವರಿಸುತ್ತಿರುವುದೇಕೆ? ಗೆಳೆಯ ಇಂದ್ರ ಕಾರಣ ಹೇಳದೇ
ದೂರಾದಾಗಿನಿಂದ ಕನಸುಗಳೇ ಹುಟ್ಟಿಲ್ಲ. ಶೂನ್ಯಳಾಗಿ ವರ್ಷದ ಮೇಲೆ ಆರು ತಿಂಗಳಾಗುತ್ತಾ
ಬಂತು. ಈಗ, ಈ ಕ್ಷಣದಲ್ಲಿ ಮನಸ್ಸಿನೊಳಗೇನೋ ಬದಲಾವಣೆ. ಸದ್ದಿಲ್ಲದೆ ಯಾರೋ ಬಂದು
ಕುಳಿತಂತೆ. ಹೌದು, ಇಂದ್ರನೇಕೆ ನನ್ನ ಬಿಟ್ಟು ಹೋದ??ಮಾತ್ರೆಗಳ ಹೊರತು ನಿದ್ದೆ ಸುಳಿಯದೇ ಯಾವುದೋ ಕಾಲವಾಗಿದ್ದ ನನಗೆ ಇಂದೇಕೋ ನಿದ್ದೆ ಒತ್ತರಿಸಿಕೊಂಡು ಬರುತ್ತಿದೆ.
ಮಲಗುತ್ತೇನೆ.ಯಾರೋ ಕರೆದಂತಾಗಿ ಎಚ್ಚರವಾಯಿತು. ಅರೆ! ಇದು..ಇದು.. ಅವನೇ!! ಆ ನೀಲಿ.. ಈತ ನಿಜವಾಗಿಯೂ ಇರುವನೇ? ನಾನಂದುಕೊಂಡಂತೇ ಇರುವನಲ್ಲಾ...ಗಲ್ಲದಲ್ಲೊಂದು ಮಚ್ಚೆ ಬೇರೆ. ಇದೇನು ಪೂರ್ವಜನ್ಮದ ಸ್ಮರಣೆಯಲ್ಲವಷ್ಟೇ. ಎಂಥಾ ನಗು ಮುಖ.'ನೀನು.. ಇಲ್ಲಿ?' ಪ್ರಶ್ನಿಸಿದೆ. ಮುಖದಲ್ಲಿ ನಗು ಮಾಸದೇ ಉತ್ತರಿಸಿದ, 'ನೀ ಕರೆದೆ, ನಾ ಬಂದೆ'. ಅವನ ಕಣ್ಣಿಗೆ ದೃಷ್ಟಿ ತಾಕಿಸಿದೆ. ನನ್ನ ಕಣ್ಣಿನಲ್ಲೂ ನೀಲಿ ಕಿರಣಗಳು ಮಿಂಚಿ ರೋಮಾಂಚನವಾಯಿತು. 'ಹೇಳು ಏಕೆ ಕರೆದೆ? ಏನು ಬೇಕು?' ಗೊತ್ತಿದ್ದೂ ಕೇಳುತ್ತಿರುವವನೇನೋ..'ಕನಸು ಮಾರುತ್ತೀಯಂತೆ. ನಾನು ಬರಿದಾಗಿರುವೆ. ನನಗೆ ಕನಸುಗಳು ಬೇಕು' 'ಎಂಥ ಕನಸುಗಳು ಬೇಕು ನಿನಗೆ? ನೀನು ರಾಣಿಯಾಗುವ ಕನಸು, ಇಡಿ ಪ್ರಪಂಚ ಸುತ್ತುವ ಕನಸು, ಶತ್ರುಗಳಿಗೆ ಶಾಸ್ತಿ ಮಾಡಿಸುವ ಕನಸು, ಸಮಾರಂಭವೊಂದರ ಕೇಂದ್ರಬಿಂದುವಾಗುವ ಕನಸು... ನನ್ನ ಬತ್ತಳಿಕೆಯಲ್ಲಿ ಕೋಟಿಗಟ್ಟಲೆ ಕನಸಿದೆ. ನಿನ್ನ ಬರಿದಾದ ಮನಸ್ಸನ್ನು ನಾ ತುಂಬುತ್ತೇನೆ. ಕೇಳು ಯಾವ ಕನಸು ಬೇಕು ನಿನಗೆ?'ಚೂರೂ ತಡವರಿಸದೆ ಹೇಳಿದೆ, 'ಅದೇ.. ನನ್ನ ಬರಿದಾದ ಮನಸ್ಸನ್ನು ನೀ ತುಂಬುವ ಕನಸು'. ಅವನ ಹುಬ್ಬು ಕಿರಿದಾಯಿತು. ಸ್ಪಷ್ಟವಾಗಲಿಲ್ಲವೆಂಬಂತೆ. ಅದೇ ದೃಢದನಿಯಲ್ಲೆಂದೆ, 'ಕನಸು ಮಾರುವ ಹುಡುಗ ನನ್ನವನಾಗಬೇಕು'. ನಸುನಕ್ಕು ತಿದ್ದಿದ, 'ನಿನ್ನವನಾಗುವ ಕನಸು'.ಹೌದಲ್ಲಾ... ಕನಸು ಮಾತ್ರ! ನಿಟ್ಟುಸಿರಿಟ್ಟು ತಲೆಯಾಡಿಸಿದೆ. 'ಇದರ ಬದಲಿಗೆ ಪ್ರಪಂಚದ ಸುಂದರ, ಶಕ್ತ, ಶ್ರೀಮಂತ, ಸರ್ವವಿದ್ಯಾಪಾರಂಗತ ನಿನ್ನವನಾಗಿ ನಿನ್ನನ್ನು ಜೀವನ ಪೂರ್ತಿ ಪ್ರೀತಿಯಲ್ಲಿ ಮುಳುಗಿಸುವ ಕನಸು ಕೊಡಲೇ?' ವ್ಯಾಪಾರಿಯಂತೆ ಕೇಳಿದ. ಅರೆ, ಇವ ವ್ಯಾಪಾರಿಯೇ ತಾನೇ... 'ನನ್ನ ಬಳಿ ಬಂದವರಾರೂ ನಿರಾಶೆಯಿಂದ ಹಿಂದಿರುಗಿಲ್ಲ. ಆದರೆ ಏಕೆ ನಿನಗೆ ಇದೇ ಕನಸು ಬೇಕೆಂದು ಕೇಳಬಹುದೇ?, ಕುತೂಹಲಕ್ಕಷ್ಟೇ'.'ವರ್ಷಗಳುರುಳಿವೆ ಕನಸುಗಳಿಲ್ಲದೆ. ಅವ, ಇಂದ್ರ, ನನ್ನ ಹೇಳದೇ ಕೇಳದೇ ಬಿಟ್ಟು ಹೋದ. ಕನಸುಗಳಿಲ್ಲದ ಬದುಕು ಬದುಕೇ ಅಲ್ಲ. ಜೀವತ್‌ಶವವಾಗಿದ್ದೇನೆ. ಆದರೆ ಇದೀಗ ನೀ ಸಿಕ್ಕಿದ್ದಿ. ಕನಸು ಮಾರುವ ಹುಡುಗ. ನೀ ನನ್ನವನಾದರೆ ನಿನ್ನೆಲ್ಲ ಕನಸುಗಳೂ ನನ್ನವೇ ತಾನೇ?''ಹಮ್...ಜಾಣೆ. ಆದರೆ ಇದೂ ಕನಸೆಂಬುದನ್ನು ಮರೆಯದಿರು. ಕನಸಿಗೂ ಭ್ರಮೆಗೂ ಅಂತರ ಬಹಳ ಕಡಿಮೆ.' ಎಚ್ಚರಿಸಿಯೇ ಕೊಟ್ಟ.ಅಂದಿನಿಂದ ನನ್ನ ಬದುಕೇ ಬದಲಾಯಿತು. ಒಂದೇ ಕಡೆ ಜಡ್ಡುಗಟ್ಟಿದಂತೆ ಕುಳಿತಿರುತ್ತಿದ್ದ ನಾನು ಚಿಗರೆಯಂತೆ ಓಡಾಡತೊಡಗಿದೆ. ಅವ ಪ್ರತಿದಿನ ಬರುತ್ತಿದ್ದ ನನ್ನೊಡನೆ ಮಾತಾಡಲು. ಅವನ ನೀಲಿ ಕಂಗಳಲ್ಲಿ ಕಳೆದು ಹೋಗುತ್ತಿದ್ದೆ. ಕಣ್ಣಲ್ಲಿ ನೀರು ಜಿನುಗುವಷ್ಟು ನಗಿಸುತ್ತಿದ್ದ. ಅವನ ಪ್ರೀತಿಯಂತೂ ಹುಚ್ಚುಕೋಡಿಯಾಗಿ ಹರಿಯುತ್ತಿತ್ತು. ಹಳೆಯದೆಲ್ಲವನ್ನೂ ಮರೆತೆ. ನನ್ನೇ ನಾನು ಮರೆತೆ. ತಿಂಗಳಾಗಿರಬಹುದು.
ಒಂದು ದಿನ ಆತ ನನ್ನನ್ನು ಅವನ ಕಣಿವೆಯಿರುವ ದ್ವೀಪಕ್ಕೆ ಕರೆದೊಯ್ಯುವುದಾಗಿ ಹೇಳಿದ. ನನ್ನ ಖುಷಿಗೆ ಪಾರವೇ ಇರಲಿಲ್ಲ. 'ನಿಮ್ಮೂರಲ್ಲಿ ಕಾಮನಬಿಲ್ಲು ಮರದ ಮೇಲೆ ಕಾಲು ಚಾಚಿ ಮಲಗಿರುವುದಂತೆ. ಎಲ್ಲೆಲ್ಲೂ ಹೂವಿನ ಬೇಲಿಯಂತೆ.. ಹೌದೇ? ಮತ್ತೆ... ಕನಸು ಮಾರುವವರ ಸಂತೆಗೆ ಕರೆದೊಯ್ಯುತ್ತೀಯಲ್ಲಾ? ಹ್ಞಾಂ, ಹಾಗೇ ನೀನು ಮಾರುವ ನಕ್ಷತ್ರಗಳಂತಾ ಕನಸುಗಳನ್ನೆಲ್ಲಾ ತೋರಿಸಬೇಕು.'ನನ್ನ ಕಾತರತೆ ನೋಡಿ ಪ್ರೀತಿಯಿಂದ ಮೈ ಸವರಿದ. ಅದಾವ ಮಾಯದಲ್ಲಿ ಕರೆದೊಯ್ದನೋ ಗೊತ್ತಿಲ್ಲ. ನಾನಲ್ಲಿ, ನನ್ನ ಹುಡುಗನ ಊರಲ್ಲಿ ನಿಂತಿದ್ದೆ. ಅಬ್ಬಾ! ಅದೊಂತೂ ದೇವನಗರಿಯೇ ಸೈ. ಗೆಳತಿಯ ಮಾತುಗಳಿಗೆ ಸಂಪೂರ್ಣ ನಿಲುಕಿರದ ಸೌಂದರ್ಯ. ಅದಾವುದೋ ಪರಿಮಳ, ಸಣ್ಣದಾಗಿ ಹರಿದು ಬರುವ ಸಂಗೀತ, ಅಸಾಧಾರಣ ಪ್ರಾಕೃತಿಕ ಚೆಲುವು, ಎಲ್ಲೆಲ್ಲೂ ಹೂಹಣ್ಣುಗಳನ್ನು ಹೊತ್ತ ಗಿಡಮರಬಳ್ಳಿ, ಜೊತೆಗೆ ನನ್ನಿನಿಯನ ಸಾಂಗತ್ಯ. ಇನ್ನೇನು ಬೇಕು ನನಗೆ?ಆ ದಿನವಿಡೀ ಅವನೂರಿನಲ್ಲಿ ಅಲೆದೆ. ಕನಸಿನ ಸಂತೆಗೆ ಹೋದೆ. ಪುಟ್ಟ ಮಗುವೊಂದು ಅಪ್ಪ- ಅಮ್ಮ ಕೆಲಸ ಕಳೆದುಕೊಳ್ಳುವ ಕನಸು ಖರೀದಿಸುತ್ತಿತ್ತು. ತಾತ ಒಬ್ಬರು ಮೊಮ್ಮಕ್ಕಳೊಂದಿಗೆ ಸಮಯ ಕಳೆವ ಕನಸಿಗಾಗಿ ಬಾರ್ಗೇನ್ ಮಾಡುತ್ತಿದ್ದರು. 30ರ ಹರೆಯದವನೊಬ್ಬ ತನ್ನ ಹೆಂಡತಿಗೆ ಡೈವೋರ್ಸ್ ಕೊಟ್ಟು ತನ್ನ ಆಫೀಸಿನ 18ರ ಚೆಲುವೆಯೊಂದಿಗೆ ಬದುಕುವ ಕನಸಿಗಾಗಿ ಅಂಗಡಿ ಅಂಗಡಿ ಅಲೆಯುತ್ತಿದ್ದ, ಹುಡುಗಿಯೊಬ್ಬಳು ತನ್ನ ಗಂಡನೊಡನೆ ವಿದೇಶಕ್ಕೆ ಹಾರುವ ಕನಸನ್ನು ಕೊಂಡು ತೇಲಾಡುತ್ತಿದ್ದಳು. ಜನವೋ ಜನ. ಯುವಕ ಯುವತಿಯರಂತೂ ನಶೆಯಲ್ಲಿದ್ದಂತೆ ಸಂತೆಬೀದಿಯಲ್ಲಿ ಅಲೆದಾಡುತ್ತಿದ್ದರು.'ನೀನು ಈ ದಿನ ಅಂಗಡಿ ತೆರೆಯುವುದಿಲ್ಲವೇ?' ಕೇಳಿದೆ. 'ಹೇಗೆ ತೆರೆಯಲಿ? ನನ್ನ ಕನಸುಗಳನ್ನೆಲ್ಲ ನಿನಗೇ ಕಾದಿರಿಸಿದ್ದೇನಲ್ಲಾ...'ಮೋಡಿ ಮಾತಿನಲ್ಲಿ ಚತುರ. ಆ ರಾತ್ರಿ ಅವನ ಸ್ವಚ್ಛ ಬಿಳಿ ಬಣ್ಣದ ಹತ್ತಿಯಿಂದ ಮಾಡಿದಂತಾ ಮನೆಯೊಳಗೆ ಮಲಗಿದೆ. ಬೆಳಗ್ಗೆ ನನ್ನ ಮನೆಯಲ್ಲಿದ್ದೆ. ಇತ್ತೀಚೆಗಂತೂ ನನ್ನನ್ನು ಒಂದು ಕ್ಷಣವೂ ಬಿಟ್ಟಿರಲಾರ. ನಾ ಯಾವಾಗ ಅವನೂರಿನಲ್ಲಿರುತ್ತೇನೋ, ನನ್ನ ಮನೆಯಲ್ಲಿರುತ್ತೇನೋ ನನಗಂತೂ ತಿಳಿಯುವುದೇ ಇಲ್ಲ. ಆ ದಿನ ಹಾಗೇ ಮಾತನಾಡುತ್ತಾ ಕುಳಿತಿದ್ದೆವು. ಮನೆಯ ಕರೆಗಂಟೆ ಬಾರಿಸಿತು. ನೋಡುವಾಗ ಗೆಳತಿ. ಖುಷಿಯಾಯಿತು. ಎಷ್ಟೇ ಆದರೂ ನೀಲಿ ಕಂಗಳ ಹುಡುಗನ ಬಗ್ಗೆ ನನಗೆ ಮೊದಲು ಹೇಳಿದವಳಲ್ಲವೇ?!'ಯಾರೊಂದಿಗೋ ಮಾತಾಡುತ್ತಿದ್ದೆಯಲ್ಲಾ? ಯಾರಿದ್ದಾರೆ ಮನೆಯಲ್ಲಿ?' ಕೇಳಿದಳು. ಆ ಪ್ರಶ್ನೆಗೇ ಉತ್ತರಿಸಲು ಕಾತರಿಸುತ್ತಿದ್ದೆ.'ನಿನಗೊಂದು ಆಶ್ಚರ್ಯ ಕಾದಿದೆ. ನೀ ಆ ದಿನ ಕನಸು ಮಾರುವ ಹುಡುಗನ ಬಗ್ಗೆ ಹೇಳಿದೆಯಲ್ಲ, ಅವನಿದ್ದಾನೆ.ಅವನೀಗ ನನ್ನ ಪ್ರೇಮಿ' ನಾಚಿದೆ.'ತಲೆ ಕೆಟ್ಟಿದೆಯೆನೇ? ನಾನೇನೋ ಕಟ್ಟುಕತೆಯೊಂದನ್ನು ನಿನಗೆ ಹೇಳಿದರೆ ಆ ಪಾತ್ರದೊಂದಿಗಿದ್ದೀನಿ ಎನ್ನುವೆಯಲ್ಲಾ'.'ಇಲ್ಲವೇ ಅವನಿದ್ದಾನೆ. ಬಾ ಪರಿಚಯ ಮಾಡಿಸುತ್ತೇನೆ. ಆಮೇಲೆ ನಂಬುತ್ತಿ' ಎಂದು ಎಳೆದೊಯ್ದೆ. ಸೋಫಾ ಮೇಲೆ ಸುಮ್ಮನೆ ಕುಳಿತಿದ್ದ ಹುಡುಗ ನಕ್ಕ. 'ನೋಡು ಇಲ್ಲಿದ್ದಾನೆ. ಇವನೇ ಅವನು. ಗುರುತು ಸಿಗುತ್ತಿಲ್ಲವೇ?' ಎಂದೆ.'ಇಲ್ಲಾರೂ ಇಲ್ಲವಲ್ಲೇ...ಏನಾಗಿದೆ ನಿನಗೆ? ಮನಸ್ಸಿಗೇನೋ ಹಚ್ಚಿಕೊಂಡು ಮನೆಯಲ್ಲಿ ಒಬ್ಬಳೇ ಇರುತ್ತಿ. ಎಂಥ ಕೇಳಿದರೂ ಹೇಳಿಕೊಳ್ಳುವುದಿಲ್ಲ... ನಿನ್ನ ಸಂತೋಷವಾಗಿಡಬೇಕೆಂದೇ ಅಲ್ಲವೇನೇ ನಾ ಕತೆ ಹೇಳುತ್ತಿದ್ದುದು?..'ಬೆದರುಗಣ್ಣುಗಳಲ್ಲಿ ಬಯ್ಯತೊಡಗಿದಳು.'ನಿನ್ನ ಕಣ್ಣುಗಳಿಗೇನಾಗಿದೆ? ನೋಡು ನಿನಗೆ ಹಾಯ್ ಎನ್ನುತ್ತಿದ್ದಾನೆ'. ಒಂದೆರಡು ನಿಮಿಷ ಸುಮ್ಮನಿದ್ದ ಗೆಳತಿ 'ಹೇಗೆ ಸಿಕ್ಕ' ಎಂದಳು. ನಡೆದ ಕತೆಯೆಲ್ಲ ಹೇಳಿದೆ. ಆ ದ್ವೀಪ ನೀನು ಹೇಳಿದುದಕ್ಕಿಂತ ಸುಂದರವಾಗಿದೆ ಎಂದು ವರ್ಣಿಸಿದೆ. ಅವಳೇಕೋ ಭಯಗೊಂಡಂತೆ ಕಂಡಳು. ಅಥವಾ ಹೊಟ್ಟೆಕಿಚ್ಚಿರಬಹುದೇ ನನ್ನ ಸಂತೋಷ ನೋಡಿ. 'ಬಾ ಹೊರ ಹೋಗಿ ಬರೋಣ' ಎಂದಳು. 'ಇವನನ್ನು ಬಿಟ್ಟು ಎಲ್ಲಿಗೂ ಬರಲ್ಲ' ಎಂದೆ. 'ಅವನೂ ಬರಲಿ' ಎಂದಳು. ಸೀದಾ ಹೋಗಿದ್ದು ಆಸ್ಪತ್ರೆಗೆ. ಎಲ್ಲಿಲ್ಲದ ಕೋಪ ಬಂತು. ಚೀರಿದೆ, 'ನಾನು ಸರಿಯಾಗಿಯೇ ಇದ್ದೇನೆ'ಡಾಕ್ಟರ್ ಮಾತನಾಡಿದರು, 'ಅದು ನಮಗೆ ಗೊತ್ತಮ್ಮ, ಇವಳು ನನ್ನ ಗೆಳತಿ. ಆಗಾಗ ಮಾತಾಡಿಸಲು ಬರುತ್ತಿರುತ್ತಾಳೆ. ಹಾಗೆ ಇವತ್ತು ನಿನ್ನೊಂದಿಗೆ ಬಂದಿದ್ದಾಳೆ ಅಷ್ಟೇ.' ಸಮಾಧಾನವಾಯಿತು. ನನ್ನ ಹುಡುಗನನ್ನು ಪರಿಚಯಿಸಿದೆ. ಹಾಯ್ ಎಂದರು. ನಾ ಇಲ್ಲೇ 4 ದಿನ ಇರಲು ಹೇಳಿದರು. ನಾನೇಕೆ ಇಲ್ಲಿರಬೇಕು? ಮನೆಗೆ ಹೋಗುತ್ತೇನೆಂದೆ. ಇಬ್ಬರು ಸಿಸ್ಟರ್ಸ್ ಬಂದು ಎಳೆದೊಯ್ದರು. ಎಲ್ಲ ಮೋಸ. ನನ್ನ ಸಂತೋಷ ನೋಡಲಾರದ ಗೆಳತಿಯ ಪಿತೂರಿ. ಈ ಬಗ್ಗೆ ನನ್ನ ಹುಡುಗನಿಗೆ ಹೇಳುತ್ತಿದ್ದೆ. ಅಷ್ಟರಲ್ಲಿ ಡಾಕ್ಟರ್ ಬಂದರು. 'ಯಾರ ಬಳಿ ಮಾತಾಡುತ್ತಿದ್ದೀಯಮ್ಮಾ?' ಎಂದರು. 'ಕಣ್ಣು ಕಾಣುವುದಿಲ್ಲವೇ? ನನ್ನ ಹುಡುಗನ ಬಳಿ'. ಅವನ ಬಗ್ಗೆ ಒಂದಿಷ್ಟು ಪ್ರಶ್ನೆ ಕೇಳಿದರು.
ಉತ್ತರಿಸಿದೆ. ಕೊನೆಯಲ್ಲಿ ನನಗಾರೂ
ಕಾಣುತ್ತಿಲ್ಲವಲ್ಲಮ್ಮಾ ಎಂದರು. ಇವರಿಗೇನು ಲೂಸಾ? ಎಂದುಕೊಳ್ಳುವಷ್ಟರಲ್ಲೇ ಇಂಜೆಕ್ಷನ್
ಕೊಟ್ಟರು. ಕರೆಂಟ್ ಶಾಕ್ ಕೊಟ್ಟರು. ನಾ ರಗಳೆ ಮಾಡಿಕೊಂಡಿದ್ದನ್ನು ನೋಡಿದ
ಗೆಳೆಯ ಅವನೂರಿಗೆ ಕರೆದೊಯ್ದ. ಆ ಸಂತೋಷದಲ್ಲಿದ್ದಾಗಲೇ ಕಟುಕ ಡಾಕ್ಟರ್ ಅಲ್ಲಿಗೂ ಬಂದ.
'ನಾ ಹೇಳಿದರೆ ನಂಬಲಿಲ್ಲವಲ್ಲ, ಈಗ ನೋಡಿ ನನ್ನ ಹುಡುಗನ ಊರು' ಎಂದೆ. ಆದರೆ ಆ ಕ್ರೂರಿ
ಮತ್ತೆ ಆಸ್ಪತ್ರೆಗೆ ಎಳೆದೊಯ್ದ. ಗೆಳತಿ ಬಂದಳು. ಡಾಕ್ಟರ್ ಅವಳಿಗೆ ಹೇಳಿದರು,
'ಅವಳಿಗೇನೋ ಮಾನಸಿಕ ಆಘಾತವಾಗಿದೆ. ಈಗ ಆಕೆ ಸ್ಕೀಜೋಫ್ರೀನಿಯಾದಿಂದ ಬಳಲುತ್ತಿದ್ದಾಳೆ.
ಅದನ್ನೇ ಜನಸಾಮಾನ್ಯರು ಹುಚ್ಚು ಎನ್ನುವುದು. ಈಗಾಗಲೇ ಸೀವಿಯರ್ ಸ್ಟೇಜ್
ತಲುಪಿಬಿಟ್ಟಿದ್ದಾಳೆ. ಈಗವಳದ್ದು ಅವಳದೇ ಲೋಕ. ಅಲ್ಲಿನ ಕಾಲ್ಪನಿಕ ಪಾತ್ರಗಳನ್ನೇ
ನಿಜವೆಂದು ಭ್ರಮಿಸಿ ಅವರೊಂದಿಗೇ ಬದುಕುತ್ತಿರುತ್ತಾರೆ. ಈ ರೋಗದಲ್ಲಿ ರೋಗಿಗೆ ಇಲ್ಲದ
ವಾಸನೆ ಬರುವುದು, ಯಾವುದೋ ಶಬ್ದ ಕೇಳುವುದು, ಏನೋ ಕಣ್ಣಿಗೆ ಕಾಣುವುದು ಸಾಮಾನ್ಯ.
ಅದನ್ನೇ ಹ್ಯಾಲೂಸಿನೇಶನ್ ಎನ್ನುತ್ತೇವೆ....ಅನುಮಾನ ಪಡುವುದೂ...ಅರ್ಧದಲ್ಲೇ
ಕಿರುಚಿದೆ,
'ಯಾವಳಿಗೋ ಹುಚ್ಚು? ನನ್ನ ಹುಡುಗ ಇಲ್ಲೇ ಇದ್ದಾನೆ ಪಕ್ಕದಲ್ಲಿ. ಕಲ್ಪನೆ
ಅನ್ನುತ್ತೀಯಾ? ನೀವಿಬ್ಬರೂ ಸೇರಿ ನನ್ನ ವಿರುದ್ಧ ಸಂಚು ಮಾಡುತ್ತಿದ್ದೀರಿ. ನಿನಗೇ
ಹುಚ್ಚು' ಕೋಪ ನೆತ್ತಿಗೇರಿತ್ತು. ಚಪ್ಪಲಿ ತೆಗೆದು ಅವನತ್ತ ಎಸೆದೆ. ಥೂ, ಈ ದರಿದ್ರ
ಜಗತ್ತಿನಲ್ಲಿ ನಮ್ಮ ಪಾಡಿಗೆ ನಾವು ಕನಸು ಕಾಣಲೂ ಅವಕಾಶವಿಲ್ಲವೇ?! ಹುಡುಗನತ್ತ
ತಿರುಗಿದೆ, 'ನೀನಿಲ್ಲವಂತೆ. ನೀನಿಲ್ಲದಿದ್ದರೆ ನಾನೂ ಇರುತ್ತಿರಲಿಲ್ಲ. ನಿನ್ನ
ಪ್ರೀತಿಯೊಂದೇ ಉಳಿಸಿರುವುದು ನನ್ನನ್ನು. ಇವರು ಸಾವಿರ ಹೇಳಲಿ. ನೀ ಮಾತ್ರ ನನ್ನ ಬಿಟ್ಟು
ಹೋಗಬೇಡ, ಇಂದ್ರನಂತೆ' ಎಂದೆ. ಅವ ಸಮಾಧಾನಗೊಳಿಸುವಂತೆ ನಕ್ಕ. ಅವನ ಭುಜಕ್ಕೊರಗಿದೆ.
( 10-3 -1 3 ಸಾಪ್ತಾಹಿಕ ಪ್ರಭದಲ್ಲಿ ಪ್ರಕಟ)