ಪುಟಗಳು

8.12.11

ಮೂಲ

ಕಲಾವಿದ ಕುಂಚಕ್ಕೆ ಕೊಟ್ಟ ಅರ್ಥ
ಉದಿಸಿತು;
ಕವಿಯಲ್ಲಿ ಹೊಸ ಕಾವ್ಯ
ಪಡೆದಿತ್ತು ;
ಕತೆಯಲ್ಲಿ ಹೊಸ ಜೀವ
ಕತೆಗೇನು ಗೊತ್ತು ಕವಿತೆಯೊಳಗಿನ ನೋವು
ಹಂಗಿಸಿತು ನಿನಗಿಲ್ಲವೆಂದು ನನ್ನ ಸೊಬಗು
ಕವಿತೆ ಕಾಣಲಿಲ್ಲ ಕತೆಯ ಹೊಳಹು
ಛೇಡಿಸಿತು, ನೀ ಕೊಡಬಲ್ಲೆಯಾ
ನನ್ನಂತೆ ಮಧುರ ಕಾವು?

ಕತೆ ಮೆಚ್ಚಿ ಬಂದವರು
ಕವಿತೆ ಮೆಚ್ಚಿ ಬಂದವರು
ತಿಳಿಯದಾದರು
ಎರಡಕ್ಕೂ ಒಂದೇ ತಾಯಿಬೇರು
ಅವರಿಟ್ಟ ಹೆಸರಿನಲ್ಲಿ
ಇವರು ಕೊಟ್ಟ ಪ್ರಶಂಸೆಯಲ್ಲಿ
ತನ್ನರ್ಥವ ಹುಡುಕುತ್ತಾ
ಮೌನವಾಗಿ ನೋಡುತ್ತಿತ್ತು
ಎರಡಕ್ಕೂ ಜನ್ಮ ನೀಡಿದ ಕುಂಚ ಕೃತಿ
ಹಲವು ಭಾವಗಳ ಸೂಸುತ್ತಾ
ತನ್ನಲ್ಲೇ ಗುನುಗುತಿತ್ತು ಹೊಸ ಶ್ರುತಿ..

7.12.11

ಸುತ್ತ ಸುತ್ತಿದ ಕತ್ತಲೆಗೆ
ಮನವು ಮುದುಡಿ ಮಲಗಿದೆ
ಹೊಸ್ತಿಲಾಚೆ ಬೆಳಕಿಹುದು
ಎದ್ದು ನಡೆಯಬೇಕಿದೆ
ಕವಿದ ಕತ್ತಲೆಗೂ
ಹೊಸಜಗದ ನಿರೀಕ್ಷೆ
ಬೆಳಕಿನಲೆಗೆ
ತನ್ನನ್ನೊಡ್ಡಿ
ಕಳೆದು ಹೋಗೊ ಆಕಾಂಕ್ಷೆ


6.12.11

ಪುಟ್ಟಿ

'ಪ್ರಜಾವಾಣಿ' ಯ ಭಾನುವಾರದ 'ಸಾಪ್ತಾಹಿಕ ಪುರವಣಿ'ಯ "ಪುಟ್ಟಿ" ನಾನೇ ಆಗಿದ್ರೆ ಚೆನ್ನಾಗಿರ್ತಿತ್ತು ಅಂತ ಯಾವಾಗ್ಲೂ ಅನ್ಕೋತೀನಿ..ನಾ ಚಿಕ್ಕವಳಿದ್ದಾಗ ಎಷ್ಟು ದೊಡ್ಡವಳಾಗಿದ್ದಳೋ 'ಪುಟ್ಟಿ' ಈಗ್ಲೂ ಅಷ್ಟೇ ಚಿಕ್ಕವಳಾಗಿದ್ದಾಳೆ !!!ಎಲ್ಲರೂ ಕಳೆದುಕೊಳ್ಳುವ ಬಾಲ್ಯವೇ ಪುಟ್ಟಿಯ ವ್ಯಕ್ತಿತ್ವ!! ಒಂದು ವೇಳೆ ಆಕೆ ಬೆಳೆದರೆ 'ಪುಟ್ಟಿ'ಯ ಅಸ್ತಿತ್ವ ಇರುತ್ತಲೇ ಇರಲಿಲ್ಲ ಅಲ್ವ??!
ಜಿರಲೆದ್ವೇಶ
'ಅಮ್ಮಾ' ಕಿರುಚಿಕೊಂಡೆ. ನಂಗೊತ್ತು ,ನಾ ಕಿರುಚಿದರೂ ಅರಚಿದರೂ ಮನೇಲಿರೋ ಯಾವ ಜೀವಿಯೂ ಇದ್ದಲ್ಲಿಂದ ಕದಲುವುದಿಲ್ಲ ಅಂತ. ಯಾಕೆ ಅಂದ್ರೆ ಅವರಿಗೆಲ್ಲ ಗೊತ್ತು, ನಾ ಕೂಗೋದು ಒಂದು ಜಿರಲೆನ ನೋಡಿದಾಗಲೇ ಅಂತ. ಆದರೂ ಅದು ನನ್ನ ಮೊದಲ ಪ್ರತಿಕ್ರಿಯೆ.ಮುಂದಿನ ಕ್ರಿಯೇನೂ ಕರಗತವಾಗಿ ಹೋಗಿದೆ.,ಕಡ್ಡಿಹಿಡಿ ಹಿಡಿದುಕೊಂಡು 'ಸಾಯಿ,ಪಾಪಿ ನೆಗುದ್ಬಿದ್ ಹೋಗು' ಅಂತ ಶಾಪ ಹಾಕಿಕೊಂಡು 'ಟಪ್' ಅಂತ ಹೊಡೆದರೆ ಒಂದೇ ಏಟಿಗೆ ಕೀಟ ಖಲಾಸ್.
ಈ ಜಿರಲೆದ್ವೇಶ ಶುರುವಾದದ್ದು ಹೀಗೆ. ನಾನಾಗ ಪಿಯುಸಿ. ನಮಗೆ ಜೀವಶಾಸ್ತ್ರದಲ್ಲಿ ಜಿರಳೆ ಕೊಯ್ಯಲು ಇರ್ತಿತ್ತು. ಎಲ್ಲರೂ ಕೈಯ್ಯಲ್ಲಿ ಹಿಡ್ಕೊಳ್ತಿದ್ರು. ನಾ ಮಾತ್ರ ಇಕ್ಕಳದಲ್ಲಿ ಈ ಹಕ್ಕಳೆನ ಇಟ್ಟುಕೊಂಡು ಹಿಂದೂಮುಂದೂ ತಿರುಗ್ಸ್ತಿದ್ದಾಗ್ಲೆ ಅದರ ಸೊಂಟ ಎಲ್ಲ ಮುರಿದುಹೋಗಿ ಉಪನ್ಯಾಸಕರ ಹತ್ರ ಧರ್ಮದ ಬೈಗುಳ ಕೇಳ್ತಿದ್ದೆ. ಅಲ್ಲೀವರೆಗೆ ಕೇವಲ ಅಸಹ್ಯ ಎನಿಸುತ್ತಿದ್ದ ಪ್ರಾಣಿ ಆಗಿನಿಂದ ನನ್ನ ಶತ್ರುವೇ ಆಗಿಹೋಯಿತು. ಆಗ್ಲೇ ಇನ್ನು ಮುಂದೆ ಎಲ್ಲೇ ಕಂಡರೂ ಈ ಜಿರಲೆನ ಪ್ರಾಣಸಹಿತ ಬಿಡೋದಿಲ್ಲ ಅಂತ ಶಪಥ ಮಾಡಿದೆ. ನನ್ನ ಶಪಥ ಕೇಳಿದ್ಮೇಲೆ ಅದಕ್ಕೂ ಹಠ ಬಂತು. ಹಾಸ್ಟೆಲ್ನಲ್ಲಿ ಊಟಕ್ಕೆ ಕುಳಿತರೆ ನನ್ನ ತಟ್ಟೆಲೇ ಬಿದ್ದು ಸತ್ತಿರ್ತಿತ್ತು, 'ನಾನು ಸತ್ರೂ ಸರಿ, ನಿನಗಿವತ್ತು ಊಟ ಮಾಡಕ್ಕೆ ಬಿಡೋಲ್ಲ' ಎಂಬಂತೆ!! ಡಿಗ್ರೀಯಲ್ಲಿ ಹೊಸವರ್ಷಕ್ಕೆ ನಾವು ಸ್ನೇಹಿತ-ಸ್ನೇಹಿತೆಯರೆಲ್ಲಾ ಹೊಸ ಬಟ್ಟೆ ಹಾಕಿಕೊಂಡು ಹೋಗುವ ಮಾತುಕತೆಯಾಡಿಕೊಂಡು ,ಹಾಸ್ಟೆಲ್ಗೆ ಬಂದು ಕಪಾಟಿನಲ್ಲಿದ್ದ ನನ್ನ ಹೊಸಾ ರೇಷ್ಮೆ ಲಂಗವನ್ನೊಮ್ಮೆ ನೋಡಿ, ಅದನ್ನು ತೊಟ್ಟುಕೊಂಡು ಹೋಗುವ ಸಂಭ್ರಮದ ಕನಸುಗಳನ್ನೆಲ್ಲಾ ಕಂಡಿದ್ದೆ. ಕನಸು ನನಸಾಗುವ ದಿನವೂ ಬಂತು. ಇನ್ನಿಲ್ಲದ ಸಡಗರದಿಂದ ಹೊಸಬಟ್ಟೆಯನ್ನು ಹೊರತೆಗೆದೆ. ನೋಡುತ್ತಿದ್ದಂತೆಯೇ ಸಂಭ್ರಮವೆಲ್ಲಾ ಇಳಿದುಹೋಯ್ತು.,ನನ್ನ ಪ್ರೀತಿಯ ಲಂಗದ ತುಂಬಾ ತೂತು ತೂತು. ನೋಡಿ,ಚೋಟುದ್ದ ಇಲ್ಲ ,ನನ್ನ ಮೇಲೆ ಹೇಗೆ ಹಗೆ ಸಾಧಿಸುತ್ತೆ ಅಂತ.ಕೋಪ ನೆತ್ತಿಗೇರಿತು. ಆ ದಿನವೇ ಪೇಟೆಯಿಂದ ಲಕ್ಷ್ಮಣರೇಖೆ ತಂದು ಕಪಾಟಿನ ತುಂಬಾ ಗೆರೆ ಎಳೆದೆ. ನಂತರದ ಹತ್ತು - ಹದಿನೈದು ದಿನ ಕಣ್ಮರೆಯಾಗಿದ್ದ ಈ ನನ್ನ ಶತ್ರು ಇದ್ದಕ್ಕಿದ್ದಂತೆ ಒಂದು ದಿನ ನನ್ನ ಹಾಸಿಗೆಯ ಮೇಲೆ ಪ್ರತ್ಯಕ್ಷವಾಯ್ತು. ನನ್ನನ್ನು ನೋಡುತ್ತಿದ್ದಂತೆಯೇ ವೀರಪ್ಪನ್ ಮೀಸೆಯಂತಿರುವ ತನ್ನ ಮೀಸೆಯನ್ನೊಮ್ಮೆ ತಿರುಗಿಸಿ, ದುರುದುರು ನೋಡಿ, ಓಡಲು ಶುರುವಿಟ್ಟಿತು. ಒಮ್ಮೆಲೇ ನನಗೆ ಜೀವಶಾಸ್ತ್ರದ ಉಪನ್ಯಾಸಕರು, ಹಾಸ್ಟೆಲ್ ಊಟ , ನನ್ನ ಪ್ರೀತಿಯ ರೇಷ್ಮೆ ಲಂಗ -ಎಲ್ಲವೂ ಕಣ್ಮುಂದೆ ಸುಳಿಯಿತು. ಪಕ್ಕದಲ್ಲೇ ಇದ್ದ ಹಿಡಿಸುಡಿಯನ್ನೆತ್ತಿಕೊಂಡು ಒನಕೆ ಓಬವ್ವನ ಹಾಗೆ ಒಂದು ಪೋಸ್ ಕೊಟ್ಟೆ. ಅಷ್ಟರಲ್ಲಿ ನನ್ನ ಟೇಬಲ್ ಹತ್ತಿದ್ದ ಈ ಕೀಟದೆಡೆಗೆ ಇದ್ದಬದ್ದ ಸಿಟ್ಟನ್ನೆಲ್ಲಾ ಕೂಡಿಸಿಕೊಂಡು ಹಿಡಿ ಬೀಸಿದೆ. ಕೀಟವೇನೋ ಸತ್ತುಹೋಯ್ತು. ಜೊತೆಗೆ ನನ್ನ ಗೆಳತಿ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ನೀಡಿದ್ದ ಗಾಜಿನ ಹೂದಾನಿಯೂ ಒಡೆದುಹೊಯ್ತು!!ಹೀಗೆ ಈ ಜಿರಲೆದ್ವೇಶ ನನ್ನಲ್ಲಿ ತಾರಕಕ್ಕೇರಿತು.
ಇಲ್ಲಿಯವರೆಗೆ ಸುಮಾರು ನೂರೈವತ್ತರಿಂದ ಇನ್ನೂರು ಜಿರಲೆಗಳ ಹತ್ಯೆ ಮಾಡಿದ್ದೀನಿ.ಈ ಸಂಕ್ಯೆಯನ್ನು ಸಾವಿರಕ್ಕೆ ಮುಟ್ಟಿಸುವುದು ನನ್ನ ಸದ್ಯದ ಗುರಿ.
ಮೊನ್ನೆ ರಾತ್ರಿ ಹಾಗೆ ಆಯಿತು. ತುಂಬಾ ಆಸಕ್ತಿಯಿಂದ ಟಿ.ವಿ. ನೋಡ್ತಾ ಕುಳಿತಿದ್ದೆ. ಅದೆಲ್ಲಿತ್ತೋ ಶನಿ, ಇದರಿಂದ ಓಡಿಬಂದು ನನ್ನ ನೋಡಿ ಮೀಸೆ ತಿರುಗಿಸಿ ಸೋಫಾ ಕೆಳಗೆ ಹೋಯ್ತು. ಆಮೇಲಿಂದ ಟಿ.ವಿ.ಲಿ ಏನು ಬರ್ತಿತ್ತೋ ,ನನಗಂತೂ ಚೂರೂ ತಲೆಗೆ ಹತ್ಲಿಲ್ಲ. ಆ ದಿನ ರಾತ್ರಿ ಸೆಖೆ ಅಂತ ನೆಲದ ಮೇಲೆ ಮಲಗಿದೆ. ನಿದ್ದೆ ಬರ್ಲಿಲ್ಲ,ಎಲ್ಲಿ ಆ ಜಿರಳೆ ಬಂದು ಮೈಮೇಲೆ ಹತ್ತುತ್ತೋ ಅನ್ನೋ ಚಿಂತೇನೆ ತುಂಬಿತ್ತು. ನಂತರ ಕನಸು, ನಾನು ಆ ಸೋಫಾನೆತ್ತಿ ಕಳೆದು ಹೋದ ಜಿರಳೆಗಾಗಿ ಶೋಧಿಸಿದಂತೆ, ಅದು ಅಲ್ಲೆಲ್ಲೋ ಅಡುಗೆಮನೆ ಬಳಿ ಓಡಿದಂತೆ, ನಾನೂ ಮನೆ ತುಂಬಾ ಓಡಿ ಓಡಿ ಕೊನೆಗೆ ಸೀಮೆ ಎಣ್ಣೆ ಹಾಕಿ ಅದನ್ನು ಸಾಯಿಸಿದಂತೆ. ಬೆಳಿಗ್ಗೆ ಎದ್ದು ಅಕ್ಕನ ಬಳಿ ಕನಸು ಹೇಳಿದ್ರೆ 'ನಮಗೆಲ್ಲಾ ಹೃತಿಕ್ , ಶಾರುಕ್ ಕನಸ್ನಲ್ಲಿ ಬಂದ್ರೆ ನಿಂಗೆ ಜಿರ್ಲೇನಾ?' ಅಂತ ಛೇಡಿಸಿದ್ಲು. ಹೌದು, ಎಲ್ಲರ ಕನಸ್ನಲ್ಲಿ ನಾಯಕರು ಬಂದ್ರೆ ನನ್ ಕನಸ್ನಲ್ಲಿ ಮಾತ್ರ ನನ್ ಪಾಲಿನ ಖಳನಾಯಕ!!
ಈಗ ಯಾರೋ ಹೇಳಿದ್ರು, ಪ್ರಪಂಚದ ಯಾವ ಮೂಲೆಗೆ ಹೋದ್ರೂ ಈ ಜಿರಳೆಗಳು ಇರ್ತಾವೆ, ಪ್ರಳಯ ಆದರೂ ಇವು ಮಾತ್ರ ಬದುಕಿರ್ತಾವಂತೆ.,ಅದೇನೋ ಹೇಳ್ತಾರಲ್ಲ, 'ಪಾಪಿ ಚಿರಾಯು' ಅಂತ, ಹಾಗೆ!!!

(ಪ್ರಿಯಾಂಕ ಮಾಸ ಪತ್ರಿಕೆಯಲ್ಲಿ ಪ್ರಕಟ )

31.8.11

ಅರಿಕೆ

ಮತ್ತೆ ಮರಳದ ಇರುಳೆ
ಸ್ವಪ್ನದಲೂ ಅರಿಕೆಯಿದು,
ಬಂಧಿಸಿಡು ನಿನ ಬಾಹುಗಳಲಿ
ಬೆಳಕು ಬಂದೊಡನೆ ...
ಸಿಹಿಗನಸು ಬೀಳುತಿದೆ
ಅರ್ಧದಲಿ ಕದದಿರು ,
ಹೆಚ್ಚು ಕಾಯಿಸೆನು ನಿನ್ನ
ಹೇಳುವೆನು ಮುಗಿದೊಡನೆ ...

29.8.11

ಲಂಚ

ನೋಟಿನೊಳಗೆ ಕುಳಿತು ನಗುವ
ಬೊಚ್ಚು ಬಾಯಿಯ ಮುದುಕ ಗಾಂಧಿ
ಕಳ್ಳನಂತೆ ಟೇಲ್ಲಿನ್ನಡಿ ನುಸುಳಿದರು..
ಎಳೆದುಕೊಂಡ ಗಾಂಧೀ ಟೋಪಿಯವ
ತಾತನ ಬೋಳುತಲೆ ಕಂಡಾಗಲೇ
ಎದುರಿನವನ ತಲೆ ಬೋಳಿಸಿದ
ಅನುಭವದಿ ಸುಖ ಪಟ್ಟ!!
ಬೋಳಿಸಿಕೊಂಡ ಭೂಪ ಮುಜುಗರದಿ ಹೊರಬಂದ
ತನ್ನನೇ ಎಲ್ಲರೂ ನೋಡುತ್ತಿರುವ ಭ್ರಮೆಗೆ
ಸುತ್ತಲೂ ಕಳ್ಳ ದೃಷ್ಟಿ ಬೀರಿದ..
ಹಾದಿಬೀದಿಯ ತುಂಬಾ ಜನಜಂಗುಳಿ
ಎಲ್ಲರ ತಲೆಯಲ್ಲೂ ಬೋಳನ್ನು ಮುಚ್ಚಿದ
ಟೋನ್ನುಗಳು ಕಂಡಂತಾಯಿತು ..
ಎಲ್ಲರೊಳಗೊಂದಾದ ಖುಷಿಗೆ
ಅವನ ತಲೆಯಲ್ಲೂ ಟೋನ್ನಿನಂತೆ
ಕೂದಲು ಕುಳಿತಿತ್ತು!!!

11.8.11

kuruchalu mara: ನೇಮಿಚಂದ್ರ- ನನ್ನ ಮನಸ್ಸಿನ ಅತ್ಯಾಪ್ತ ಲೇಖಕಿ..ನಂಗೊಂದು ಹವ...

kuruchalu mara: ನೇಮಿಚಂದ್ರ- ನನ್ನ ಮನಸ್ಸಿನ ಅತ್ಯಾಪ್ತ ಲೇಖಕಿ..ನಂಗೊಂದು ಹವ...: "ನೇಮಿಚಂದ್ರ- ನನ್ನ ಮನಸ್ಸಿನ ಅತ್ಯಾಪ್ತ ಲೇಖಕಿ..ನಂಗೊಂದು ಹವ್ಯಾಸವಿದೆ, ಪುಸ್ತಕ ಓದುವಾಗಲೆಲ್ಲಾ ನನಗಿಷ್ಟವಾಗುವ ಸಾಲುಗಳನ್ನೆಲ್ಲಾ ಡೈರಿಯೊಂದರಲ್ಲಿ ಬರೆದುಕೊಳ್ಳುವುದು..ನ..."

29.7.11

ಮೈ ಡಿಪಾರ್ಟ್ಮೆಂಟ್

ಬೆವರ ನಾತಕ್ಕೆ
ಮೈ ಕೊಳೆಯಾಗಿರುವ ಅನುಭವದಿ
ನನ್ನನೇ ನಾ ಅಸಹ್ಯವೆಂದು
ಶುಚಿಯಾಗಲು ಬಯಸಿದೆ..

'ಗಕ್ಕನೆ' ಕೆಸರಿನಲಿ ಮಿಂದೆದ್ದ ಎಮ್ಮೆಗಳು
ಸುತ್ತಲೂ ನಿಂತವು,
ಕೆಸರೊಳಗೆ ಅವು ಸುಖ ಕಂಡ ಪರಿಗೆ
ಅಚ್ಚರಿಪಟ್ಟೆ!!
ತಾಗಿದರೆ ನನ್ನ ಶುಚಿತ್ವ
ಹಾಳಾಗುವ ಭಯದೊಂದಿಗೆ
ನನ್ನ ಅಸಹ್ಯದ ಭಾವನೆ
ಸ್ಥಾನ ಪಲ್ಲಟ ಮಾಡಿತ್ತು!!!

20.7.11




ಆಳವಾದದ್ದು ಎಂದಿಗೂ ಆಪ್ತವಾಗಿರುತ್ತದೆ... ಆಪ್ಯಾಯಮಾನವಾಗಿರುತ್ತದೆ..ಇದೋ ನನ್ನ ಗೆಳತಿ ನನ್ನಾಳದಲ್ಲಿ ಹುದುಗಿ ಕುಳಿತ ಪರಿ, ನನ್ನ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದದ್ದು ಹೀಗೆ...

11.5.11

ಅಜ್ಜನ ನಿಟ್ಟುಸಿರು ೨೦-೨-೧೧
ಒಂದರ ಬೆನ್ನಿಗೊಂದು ಮಳೆಗಾಲ


ಬೊಗಸೆಯೊಡ್ಡಿದಶ್ಟೂ ಸೋರಿ ಹೋಗುವ ಬಾಲ್ಯ


ಗೆಳೆಯರೆಲ್ಲರೂ ಕೂಡಿ ಕುಣಿದು ಕುಪ್ಪಳಿಸಿದ್ದು


ನಕ್ಕು ನಗಿಸಿದ್ದು..


ಬಿದ್ದಾಗ ಆಸರೆಯಾಗಿದ್ದು..


ಆಲಿಕಲ್ಲುಗಳ ಬಾಚಿ ತಿಂದದ್ದು..


ಬೆಳೆಯುವ ಬಿರುಸಿಗೆ,ಬಳಲಿಕೆಗೆ


ಚೈತನ್ಯದಂತೆ 'ದೋ'ಎಂದು ಸುರಿದದ್ದು


ಮಕ್ಕಳಾಟವ ಕ್ಂಡು ನೆನಪುಗಳ ಮರುಕಳಿಕೆ


ಮೊಮ್ಮಕ್ಕಳಾಟದಿ ತಣಿವ ತಿರುಗಿ ಬಾಲ್ಯಕ್ಕೆ ಹೊರಳುವಾ ಬಯಕೆ
ಹನಿಹನಿಯಲ್ಲೂ ನೆನೆದಿದ್ದ ಮುಗ್ದತೆ ಆರಿದೆ


ಉತ್ತರಗಳ ಕಂಡ ಪ್ರಶ್ನೆಗಳು ಮತ್ತೆ ಪ್ರಶ್ನೆಯಾಗುಳಿಯದ ದೌರ್ಬಲ್ಯಕ್ಕೆ!
ನಿಟ್ಟುಸಿರು ಕೇಳುತಿದೆ,ಸೋರುವ ಆಕಾಶ


ಹುಟ್ಟಿಸಿದ ಕನಸುಗಳು ಕೊತ್ತ ನೆನಪುಗಳ ಸಮತೂಗುವುದೇ?!


(ಸೋರುವ ಆಕಾಶಕ್ಕೆ ನೆರೆತ ಕೂದಲೂ ನೆನೆಯಬಲ್ಲದೇ?)

5.3.11

ವೈರುದ್ಯ..

ಅದು ತೆಪ್ಪಗೆ ಮನೆಯೊಂದರ ಅಂಗಳದಲ್ಲಿ ತಲೆ ಕೆದರಿಕೊಂಡು ನಿಂತ ಮರ.ಎಳನೀರು ಗೊಂಚಲುಗಳ ಹೊತ್ತ ತುಂಬು ಬಸುರಿ..ಅದಕ್ಕೇ ಇರಬೇಕು ಕೂದಲನ್ನು ಕಟ್ಟಲೂ,ಅಥವಾ ಗಾಳಿಗೆ ಹಾರಿಬಿಡಲೂ ಉದಾಸೀನ!!ಯಾರಿಗೆ ಬೇಕು ದಿನ ಬೆಳಗಾದರೆ ಈ ಹೊಂಡಕೊಂಡದ ಟಾರು ರಸ್ತೆಯನ್ನು ನೋಡುತ್ತಾ ಕಾಲ ತಳ್ಳುವ ಈ ಜೀವನ ಎಂಬ ಜಿಗುಪ್ಸೆ ಇರಬಹುದು.'ಉಸ್ಸಪ್ಪಾ' ಎಂದು ನಿಟ್ಟುಸಿರು ಬಿಡುವಾಗಿನ ಮುಖಚಹರೆ.ಆ ಪಾಟಿ ಎಳನೀರು ಗೊಂಚಲುಗಳ ನೋಡಿದರೆ ಹಳ್ಳಿಗಾಡಿನ ಹೆಂಗಸಿನಂತೆ ಹುಟ್ಟುವುದೇ ಮಕ್ಕಳನ್ನು ಹಡೆಯಲು' ಎಂದು ಅದು ಭಾವಿಸಿದಂತಿದೆ!ಆದರೂ ಸಣ್ಣದಾಗಿ ಅಲ್ಲಿ ಆ ಕಳಾಹೀನ ಮುಖದಲ್ಲಿ 'ಮಾತ್ರುಮಮತೆ ' ಇಣುಕುತ್ತಿದೆಯಾ?,ಇರಬಹುದೇನೋ?!
ಬದುಕು ಎಷ್ಟು ವಿಪರ್ಯಾಸ ನೋಡಿ,ತದ್ವಿರುದ್ದಗಳನ್ನು ಒಟ್ಟಿಗೆ ಇಟ್ಟು ಮಜಾ ನೋಡುತ್ತದೆ. ಇಂತಾ ಈ ಮರ,ಸದ್ದಿಲ್ಲದೇ ಸಮಯ ಕಳೆಯುವ ಈ ಮರದೊಳಗೆ ಸಂಜೆಯಾದರೆ ಕಿಚಪಿಚವೆನ್ನುತ್ತಾ ಎಡೆಬಿಡದ ಜೀವನೋತ್ಸಾಹದಿಂದ ನಲಿವ ಪುಟ್ಟ ಪುಟ್ಟ ಕಂದು ಹಾಗೂ ಬೂದು ಮಿಶ್ರಿತ ಹಕ್ಕಿಗಳು..ರೆಂಬೆಯಿಂದ ರೆಂಬೆಗೆ ಹಾರಿ ಪುರುಸೊತ್ತಿಲ್ಲದೇ ವಟಗುಡುವ ,ಬದುಕು ಬಯಸುವ,ಮನಕ್ಕೆ ಉಲ್ಲಾಸ ತುಂಬುವ ಪುಟ್ಟ ಜೀವಗಳು..ಅವುಗಳ ಇರುವಿಕೆ ಜಗತ್ತಿನ ಉಸಿರಾಟದ ಸದ್ದಿನಂತೆ ಕಿವಿಗೆ ಬಂದು ಬಡಿಯುತ್ತದೆ.ಅದು ಸಂಗೀತದ ಅರಿವಿರದಿದ್ದರೂ ಹಳ್ಳಿಗಾಡಿನ ಜನಪದದಂತೆ ಇಂಪಾಗಿ ಮಾರ್ದನಿಸುತ್ತದೆ.ಅವು ಪರಸ್ಪರ kushalakshemagalannu ವಿಚಾರಿಸಿಕೊಳ್ಳುವಂತೆ ಭಾಸವಾಗುತ್ತದೆ.ಬದುಕು ಬೇಡವೆಂಬಂತೆ ನಿಂತ ಆ ಮರದಲ್ಲಿ ಈ ಹಕ್ಕಿಗಳು ಕುಳಿತು ಬದುಕಿನೆಡೆಗೆ ವಿಸ್ಮಯವನ್ನು ವ್ಯಕ್ತಪಡಿಸುತ್ತವೆ..ಸಂಜೆ ಕೆಂಪಾದಾಗ ನಡೆಯುವ ಈ ಸಂಭಾಷಣೆ ಇಂಪೋ ಇಂಪಾಗಿ ಮನಕೆ ತಂಪೆರೆಯುತ್ತದೆ..

(ಉದಯವಾಣಿ ಯಲ್ಲಿ ಪ್ರಕಟ)