ಶಾಶ್ವತ್ ಬಂದಿದ್ದ. ತನ್ನ ಎರಡನೇ ಮಗು ನಾಮಕರಣಕ್ಕೆ ಕರೆಯೋಕೆ. ಕಾಲೇಜ್‌ನಲ್ಲಿ ನನ್ನ ಸೀನಿಯರ್ ಅವ್ನ. ಮೊನ್ನೆ ಕತ್ರಿಗುಪ್ಪೆ ವಾಟರ್‌ಟ್ಯಾಂಕ್ ಹತ್ರ ಸಿಕ್ಕ ಮೇಲೆ ಮತ್ತೆ ನಂಬರ್‌ಗಳು ಎಕ್ಸ್‌ಚೇಂಜ್ ಆದವು. ಏನ್ ಹೆಸ್ರು ಇಡ್ತಿದೀರೋ ಕೇಳಿದ್ದಕ್ಕೆ ‘‘ನನ್ನ ಹೆಸರಿನ ಶಾ, ಅವಳ ಹೆಸರಿನ ನ್ವಿ ಸೇರಿಸಿ ಶಾನ್ವಿ ಅಂತಿಡೋಣ ಅಂತಾ’’ ಎಂದ.
‘‘ಏನು ನಿಮ್ಮನೆಯೋರ ಹೆಸರು?‘‘
‘‘ಮಾನ್ವಿ.’’
ಆ ಒಂದು ಹೆಸರು ಅದೆಷ್ಟು ನೆನಪುಗಳನ್ನು ಮೇಲಕ್ಕೆಳೆದು ತಂತೋ! ಕೆಳಗೆ ಹೋಗಿದ್ದರೆ ತಾನೇ ಮೇಲೆ ಬರಲು. ಮಾನ್ವಿ, ನನ್ನ ಪ್ರೀತಿಯ ಮಾನು ಪ್ರತಿದಿನ ಕಾಲೇಜಿಗೆ ಹೋಗುವ ಸಮಯ. ಬೆಳಗ್ಗೆ 8.30ಕ್ಕೆ ಆ ಹನುಮಾನ್ ಬಸ್ಸಿನ ಮುಂದಿನಿಂದ ನಾಲ್ಕನೇ ಸೀಟಿನ ಕಿಟಕಿ ಪಕ್ಕ ಅವಳು ಇದ್ದೇ ಇರುತ್ತಿದ್ದಳು. ಅದಕ್ಕೆಂದೇ 10 ಗಂಟೆಯ ಕ್ಲಾಸಿಗೆ ಒಂದೂವರೆ ಗಂಟೆ ಮುಂಚೆಯೇ ಬಸ್ಸು ಹತ್ತುತ್ತಿದ್ದೆ. ಚೆಂದದ ಚೂಡಿಧಾರ್ ಹಾಕಿ ಕುಳಿತುಕೊಂಡಿರುತ್ತಿದ್ದ ಅವಳು ಬಹಳ ಡೀಸೆಂಟ್ ಎನಿಸುತ್ತಿದ್ದಳು. ತೆಳ್ಳಗೆ, ಬೆಳ್ಳಗೆ, ಉದ್ದಕೆ... ಆಹಾ! ಇನ್ನೂ ಆ ರೂಪ ಕಣ್ಮುಂದೆ ಕಟ್ಟಿದಂತಿದೆ. ಅವಳ ಉದ್ದ ರೆಪ್ಪೆಯ ಕಂದು ಬಣ್ಣದ ಕಣ್ಣುಗಳು ಹೊರಗೆಲ್ಲೋ ನೋಡುತ್ತಿದ್ದರೂ ನನ್ನನ್ನೇ ಗಮನಿಸುತ್ತಿದ್ದಾಳೆಂದು ನನಗನ್ನಿಸುತ್ತಿದ್ದಿದ್ದರಿಂದ ನನ್ನೊಳಗೆ ದಿನ ದಿನ ಸಂಭ್ರಮ ಉಕ್ಕೇರುತ್ತಿತ್ತು. ಕೈಗೊಂದು ಅಗಲ ಮುಖದ ವಾಚ್. ಅವಳ ಉದ್ದ ಜೆಡೆ- ಬಸ್ಸಿಳಿದು ನಡೆವಾಗ ಆ ಕಡೆ ಈ ಕಡೆ ಆಡುವ ರೀತಿ ನನಗೇ ಟಾಟಾ ಮಾಡುತ್ತಿದ್ದಾವೆನೋ ಎನಿಸುತ್ತಿತ್ತು. ಮತ್ತೆ ಸಂಜೆ ಮನೆಗೆ ಹೋಗುವಾಗ ಇವೇ ಸೀನ್‌ಗಳು ರಿಪೀಟ್ ಆಗುತ್ತಿದ್ದವು.
ಆಗುತ್ತಿದ್ದುದು ಇಷ್ಟೇ ಆದರೂ ನಾನಾಗಲೇ ಅವಳ ಬಗ್ಗೆ ನೂರಾರು ಕನಸು ಕಂಡಿದ್ದೆ. ಇವಳ ಧ್ವನಿ ಯಾವಾಗ ಕೇಳುವೆನೋ ಎಂದು ಕಾತರದಲ್ಲಿ ಕಾಯುತ್ತಿದ್ದೆ. ಪಾಸ್ ಇರುತ್ತಿದ್ದುದ್ದರಿಂದ ಟಿಕೆಟ್‌ಗಾಗಿ ಕೂಡಾ ಅವಳು ಬಾಯಿ ಬಿಡಬೇಕಾದ ಸಂದರ್ಭ ಬರುತ್ತಿರಲಿಲ್ಲ. ಅದೊಂದು ದಿನ, ಕೇವಲ ದಿನವಲ್ಲ, ಸುದಿನ- ಮನೆಯ ಫೋನ್ ರಿಂಗಾದಾಗ ಎಂದಿನಂತೆ ನಾನೇ ಮುಂಚೆ ಓಡಿ ರಿಸೀವ್ ಮಾಡಿದ್ದೆ.
‘‘ಹಲೋ ನಚಿಕೇತ್, ನಿಮಗೆ ಬಯಾಲಜಿ ಎರಡನೇ ಚಾಪ್ಟರ್ ನೋಟ್ಸ್ ಬೇಕು ಅಂತಿದ್ರಲ್ಲಾ, ನನ್ನ ಹತ್ರ ಇದೆ. ಕಾಲೇಜ್ ಹತ್ರ ಬಂದು ಕಲೆಕ್ಟ್ ಮಾಡಿಕೊಳ್ಳಿ. ಬಸ್‌ನಲ್ಲಿ ಬೇಡ, ಯಾರಾದರೂ ನೋಡಿದರೆ ಕಷ್ಟ’’
‘‘ಯಾರಿದು?’’
‘‘ನಾನು ಮಾನ್ವಿ.’’
ಮಾನ್ವಿನಾ!!!!!!
ನನಗೆ ತಲೆಗೆ ಹೋಗುವಷ್ಟರಲ್ಲಿ ಅವಳು ಕಾಲ್ ಕಟ್ ಮಾಡಿದ್ದಳು. ಮಾನ್ವಿನೇ ನನಗೆ ಕಾಲ್ ಮಾಡಿದಳಾ? ನನ್ನ ಮಾನು?! ಜಾನು.... ನಾನಂತೂ ಅವತ್ತು ಈ ಭೂಮಿಯ ಮೇಲೆ ಇರಲಿಲ್ಲ. ಪ್ರತಿದಿನ ನೋಡಿದರೂ ಕೇಳದ ಧ್ವನಿಯನ್ನು ಫೋನ್‌ನಲ್ಲಿ ಕೇಳಿದ್ದೆ.
ತಲೆ ತುಂಬ ನೋಟ್ಸ್ ತೆಗೆದುಕೊಳ್ಳುವಾಗಿನ ಸಂದರ್ಭದ ನೂರು ನೂರು ಕನಸು. ಏನು ಮಾತಾಡಬೇಕು, ಯಾವ ಬಟ್ಟೆ ಹಾಕಿಕೊಂಡು ಹೋಗಬೇಕು ಇತ್ಯಾದಿ ಯೋಚನೆಗಳು.
ಮರುದಿನ ಬಸ್ ಹತ್ತಿದಾಗ ಅವಳೆಡೆ ನೋಡಿದೆ. ನನ್ನತ್ತ ಕಣ್ಣು ಹಾಯಿಸಿ ಚಿಕ್ಕದೊಂದು ನಗೆ ಸೂಸಿದವಳು, ನಂತರ ಎಂದಿನಂತೆ ಹೊರಗೆ ನೋಡುತ್ತಾ ಕುಳಿತಳು.
ಕಮಲಾ ನೆಹರೂ ಕಾಲೇಜ್ ಸ್ಟಾಪ್‌ನಲ್ಲಿ ಇಳಿದಳು. ನಾನೂ ಇಳಿದೆ. ಅವಳು ತಿರುಗಿ ನೋಡಲಿಲ್ಲ. ಸೀದಾ ಕಾಲೇಜ್ ಕ್ಯಾಂಪಸ್‌ನೊಳಗೆ ನಡೆದು ಹೋದಳು.
ನನಗೆ ಭಯ ಆಗಲು ಶುರುವಾಯಿತು. ನಿಜವಾಗಿಯೂ ಇವಳೇ ಫೋನ್ ಮಾಡಿದ್ದಾ ಅಥವಾ ಬೇರೆ ಯಾರೋ ಆಟ ಆಡ್ಸೋಕೆ ಹೀಗೆ ಮಾಡಿದ್ರಾ? ಅವಳೇ ಮಾಡಿದ್ದಾದ್ರೆ ಹೀಗೆ ಇಲ್ಲಿ ನನ್ನ ನೋಡದವಳಂತೆ ಒಳ ಹೋಗುತ್ತಿದ್ದಳೇ? ಫೋನ್ ಮಾಡಿದವಳು ಇವಳಲ್ಲದಿದ್ದರೆ ಬಸ್‌ನಲ್ಲಿ ಸ್ಮೈಲ್ ಏಕೆ ಕೊಡುತ್ತಿದ್ದಳು? ನನಗೆ ಭಯ ಆಗಲು ಇನ್ನೊಂದು ಕಾರಣವಿತ್ತು. ಅದು ಕೇವಲ ಹುಡುಗಿಯರ ಕಾಲೇಜ್. ಮೊದಲೇ ಹುಡುಗಿಯರ ಪ್ರಪಂಚ ಅರಿಯದ ವಯಸ್ಸು. ಸುಮ್ಮನೇ ಅವಳ ಟಾಟಾ ಮಾಡುವ ಜೆಡೆ ನೋಡುತ್ತಾ ನಿಂತೆ. ಕಾಲೇಜ್ ಕಟ್ಟಡದ ಹತ್ತಿರ ಹೋದವಳು ಒಮ್ಮೆ ತಿರುಗಿ ನೋಡಿ ಬಾ ಎಂಬಂತೆ ಸನ್ನೆ ಮಾಡಿದಳು. ನಾನು ಒಳಗೊಳಗೇ ಹಾರಾಡುತ್ತಾ, ಎದುರಿಗೆ ಮಾತ್ರ ಡೀಸೆಂಟ್ ಆಗಿ ನಡೆದುಹೋದೆ.
ಅಲ್ಲಲ್ಲಿ ಕುಳಿತ ಹುಡುಗಿಯರ ಗುಂಪು ಕಾಮೆಂಟ್ ಪಾಸ್ ಮಾಡಿ ನಗುತ್ತಿದ್ದರು. ಬಹುಸಂಖ್ಯಾತರಿದ್ದೀರಾ, ಮಾಡಿ, ಮಾಡಿ... ನಂಗೂ ಒಂದೂ ಕಾಲ ಬರುತ್ತಂತ ಅಂದುಕೊಳ್ಳುತ್ತಾ ಮುಂದೆ ಹೋದೆ.
ನೋಟ್ಸ್ ಕೊಟ್ಟಳು.
‘‘ನಿನಗೆ ಹೇಗೆ ಗೊತ್ತಾಯ್ತು ನನಗೆ ಈ ನೋಟ್ಸ್ ಬೇಕಂತ?’’
‘‘ಮೊನ್ನೆ ಸಂಜೆ ನೀನು ಬಸ್‌ನಲ್ಲಿ ಫ್ರೆಂಡ್ಸ್ ಹತ್ರ ಕೇಳ್ತಿದ್ಯಲ್ಲಾ....’’
‘‘ನಮ್ಮನೆ ನಂಬರ್ ಎಲ್ಲಿ ಸಿಕ್ತು?’’
‘‘ಫೋನ್ ಡೆರೆಕ್ಟರಿಲಿ.’’
ಮುಂದೇನು ಕೇಳೋದೋ ಗೊತ್ತಾಗದೇ ‘‘ಥ್ಯಾಂಕ್ಸ್’’ ಎಂದೆ. ‘‘ವೆಲ್‌ಕಮ್’’ ಎಂದಳು.
ನಾ ತಿರುಗಿ ನಡೆದೆ. ಅವತ್ತು ಕಾಲೇಜ್‌ಗೆ ಹೋಗಲೇ ಇಲ್ಲ.
ಇಲ್ಲಿ ನಡೆದ ಮೂರು ಮತ್ತೊಂದು ಸಂಭಾಷಣೆಯನ್ನು ಮೆಲುಕು ಹಾಕಲು ಮನಕ್ಕೆ ಅರ್ಜೆಂಟ್ ಆಗಿತ್ತು. ಆ ದಿನ ಹೇಗೆ ಕಳೆದೆನೋ ಗೊತ್ತಾಗಲೇ ಇಲ್ಲ.
ಮರುದಿನದಿಂದ ಬಸ್‌ನಲ್ಲಿ ಒಂದು ಸ್ಮೈಲ್, ಆಗಾಗ ಒಂದೊಂದು ಮಾತು ಶುರುವಾಯಿತು. ಆಗೆಲ್ಲ ನನ್ನ ಹೃದಯ ದೇಹದಿಂದ ಹೊರ ಬಂದು ಕಿವಿ ಪಕ್ಕ ನಿಂತು ಬಡಿದುಕೊಳ್ಳುತ್ತಿದೆಯೇನೋ ಅನ್ನಿಸುವುದು. ಆಗಿನ ಹಾಗೂ ಇಲ್ಲೀವರೆಗಿನ ನನ್ನ ಪ್ರಪಂಚದಲ್ಲಿ ಸುಂದರಿ ಎಂಬುದರ ಮೂರ್ತರೂಪ ಮಾನ್ವಿ ಒಬ್ಬಳೇ. ಯಾರು ಯಾರ ಬಗ್ಗೆಯೇ ಸುಂದರಿ ಎನ್ನಲೀ, ನನಗೆ ಮಾನ್ವಿಯ ರೂಪ ಕಣ್ಮುಂದೆ ನಿಲ್ಲುತ್ತದೆ.
ಇದು ಹೀಗೆಯೇ ಒಂದು ವರ್ಷ ಕಳೆಯಿತು. ಪಿಯುಸಿ ಮುಗಿದಿತ್ತು. ನಾ ಮುಂದಿನ ಓದಿಗೆ ಬೆಂಗಳೂರಿನತ್ತ ಮುಖ ಮಾಡಿದ್ದೆ. ಮೊಬೈಲ್ ಫೋನ್ ಇರಲಿಲ್ಲ. ಊರಿಗೆ ಹೋದಾಗ ಮಾನ್ವಿಗೆ ಕಾಲ್ ಮಾಡುತ್ತಿದ್ದೆ. ಅವರಪ್ಪನೋ, ಅಮ್ಮನೋ ಎತ್ತಿದರೆ ಕಾಲ್ ಕಟ್ ಮಾಡುತ್ತಿದ್ದೆ. ಹಾಗಾಗಿ ನಂತರದ ವರ್ಷಗಳಲ್ಲಿ ಒಂದೆರಡು ಬಾರಿ ಮಾತಾಡಿದೆವೇನೋ. ಹಾಗಂತ ಮಾನ್ವಿ ನನ್ನ ಎಂದಿನ ಕನಸಿನ ಹುಡುಗಿಯಾಗಿ ಉಳಿದಿದ್ದಳು.
ಬಳಿಕ ಒಂದು ದಿನ ಊರಿಗೆ ಹೋದಾಗ ಮನೆಗೆ ನನ್ನ ಹುಡುಕಿಕೊಂಡು ಒಬ್ಬ ಯುವಕ ಬಂದಿದ್ದ.
‘‘ನಾನು ಮಾನ್ವಿಯ ತಮ್ಮ. ಅಕ್ಕ ಇದನ್ನು ನಿಮಗೆ ಕೊಟ್ಟುಬರಲು ಹೇಳಿದಳು’’ ಎಂದು ಹೇಳಿ ಕಾರ್ಡ್ ನೀಡಿದ. ಮಾನ್ವಿಯ ಮದುವೆಯದು! ಯಾಕೋ ಗೊತ್ತಿಲ್ಲ, ನಾ ಆ ಕಾರ್ಡನ್ನು ಡೇಟ್ ಕೂಡಾ ನೋಡದೆ ಅಲ್ಲೇ ಹರಿದುಬಿಟ್ಟೆ. ಇದಾಗಿ ವರ್ಷಗಳೇ ಕಳೆದವು.
-----
ಶಾಶ್ವತ್ ಮನೆಯ ಫಂಕ್ಷನ್‌ಗೆ ಹೋದೆ. ಕಣ್ಣುಗಳು ಅವನ ಹೆಂಡತಿಯನ್ನು ನೋಡಲು ಕಾತರಿಸಿದವು. ಪರಿಚಯ ಮಾಡಿಸಲು ಆತ ಅವಳನ್ನು ಕರೆದ.
ಕುತ್ತಿಗೆ ಸೊಂಟಗಳಲ್ಲಿ ಬೊಜ್ಜು ತುಂಬಿರುವ, ದಪ್ಪನೆಯ ಗರತಿ. ಬಾಬ್‌ಕಟ್ ಮಾಡಿಸಿಕೊಂಡಿದ್ದಾರೆ. ಮಗುವನ್ನು ಕಂಕುಳಲ್ಲಿ ಹಾಕಿಕೊಂಡು ಬಂದರು. ಹತ್ತಿರ ಬಂದಾಗಲೇ ಗೊತ್ತಾಗಿದ್ದು, ಅವಳೇ ಇವಳು!!
ಯಾಕೋ ಗೊತ್ತಿಲ್ಲ, ಇಬ್ಬರೂ ಪರಿಚಯವಿಲ್ಲದವರಂತೆ ನಟಿಸಿದೆವು. ಊಟ ಮಾಡಿ, ಮಗುವಿನ ಕೈಗೆ ದುಡ್ಡನ್ನಿತ್ತು ಮನೆಗೆ ಬಂದೆ.
ಇದುವರೆಗೂ ಅಮ್ಮ ಮದುವೆಯಾಗು ಎಂದಾಗಲೆಲ್ಲ ಬಸ್‌ನಲ್ಲಿ ಕುಳಿತು ಹೊರಗೆ ನೋಡುತ್ತಿದ್ದ ಮಾನ್ವಿಯೇ ಕಣ್ಮುಂದೆ ಬರುತ್ತಿದ್ದಳು. ಆದರೀಗ ಅದೇಕೋ ಒಂದೇ ದಿನದಲ್ಲಿ ಮಾನ್ವಿಯೆಡೆಗಿನ ನನ್ನ ಆಕರ್ಷಣೆಗಳೆಲ್ಲವೂ ಉದುರಿಬಿದ್ದವು. ಅವಳ ಕಳೆದು ಹೋದ ಆ ಜೆಡೆ ನನ್ನತ್ತ ನೋಡಿ ಕಡೆಯದಾಗಿ ಎಂಬಂತೆ ಜೋರಾಗಿ ಟಾಟಾ ಮಾಡುತ್ತಿತ್ತು.
ನಾ ಆಗಿನ್ನೂ ಪಿಯುಸಿ. ಪ್ರೀತಿಸಲು ಚೆಂದದಾಚೆಗೆ ಅವಳ ಬಗ್ಗೆ ಅಷ್ಟೊಂದು ಯೋಚಿಸಿಯೇ ಇರಲಿಲ್ಲ. ಹೀಗಾಗಿ ಹುಡುಗಿಯರ ಚೆಂದಕ್ಕೆ ಅವಳು ಮಾನದಂಡವಾಗಿದ್ದಳು. ಈಗ ಅಂದಚೆಂದಕ್ಕೆ ಕೂಡಾ ಅವಳನ್ನು ಕಲ್ಪಿಸಿಕೊಳ್ಳಲಾಗಲಿಲ್ಲ. ಅವಳ ಇನ್ಯಾವ ಗುಣಗಳೂ ನನಗೆ ಗೊತ್ತಿರಲಿಲ್ಲ. ಹಾಗಾಗಿಯೋ ಏನೋ ಮಾನ್ವಿ ಮನದ ಪರದೆಯಿಂದಾಚೆ ಸರಿದಳು ಎಂದುಕೊಳ್ಳುತ್ತಿದ್ದೆ. ಅಷ್ಟರಲ್ಲಿ ಅಮ್ಮ ಫೋಟೋವೊಂದನ್ನು ಹಿಡಿದು ತಂದು ಮುಂದಿಟ್ಟಳು.
‘‘ಶಾರದಮ್ಮನ ಅಕ್ಕನ ಮಗಳಂತೆ. ಸ್ವಲ್ಪ ಕಪ್ಪು. ಚೂರು ಕುಳ್ಳಗಿದ್ದಾಳೆ. ಆದ್ರೆ ಅಂದಚೆಂದ ಎಲ್ಲ ಎರಡು ಮಕ್ಕಳಾಗುವವರೆಗೆ. ಅದ್ರ ಬಗ್ಗೆ ಯೋಚಿಸ್ಬೇಡ. ಒಮ್ಮೆ ಭೇಟಿಯಾಗಿ ಗುಣ, ಶಿಕ್ಷಣ, ಮಾತು ಮನಸ್ಸು ನೋಡಿ ಓ.ಕೆ.ನಾ ಹೇಳು. ಸರೀನಾ?’’