ಪುಟಗಳು

31.12.13

ಖಾಲಿ ಮನದಲ್ಲಿ ಮಗುಚಿದ ಕ್ಯಾಲೆಂಡರ್


ನನ್ನ ಆತ್ಮಸಾಕ್ಷಿ ನನ್ನ ತಲೆಗೆರಡು ಮೊಟಕಿ ಅವರಿದ್ದಲ್ಲಿಗೆ ನಡೆದೇ ಬಿಟ್ಟಿತ್ತು. ತಗ್ಗಿಸಿದ ತಲೆ ಎತ್ತಲಾಗಲಿಲ್ಲ. ಯಾವಾಗಲೂ ಹೀಗೆ. ಅವರು ಕಂಡರೆ ಸಾಕು, ನನ್ನಾತ್ಮಸಾಕ್ಷಿಯೇ ರೂಪವೆತ್ತಿ ಬಂದಂತೆ. ಪಾಪಪ್ರಜ್ಞೆ ಕಾಲು ನೀವಿಕೊಳ್ಳುತ್ತಾ ಎದುರು ಬಂದು ಕುಳಿತುಬಿಡುತ್ತದೆ. ತಪ್ಪಿತಸ್ಥ ಕಂಗಳು ದೃಷ್ಟಿ ತಪ್ಪಿಸುತ್ತವೆ. 
ಆಗಬೇಕಾದ್ದೇ. ಅವರ ನಿರೀಕ್ಷೆಗಳಿಗೆ ತಣ್ಣೀರೆರಚಿ ನನ್ನ ಮುಖಕ್ಕೆ ಮಸಿ ಬಳಿದು ಕುಳಿತುಕೊಂಡಿದ್ದು ತಪ್ಪಲ್ಲವೇ? ಆದರೆ ಅವರ ಆ ಬೆಟ್ಟದಷ್ಟು ಪ್ರೀತಿಯನ್ನೂ, ಅದರ ಮೈದಡವಿಕೊಂಡು ಭೋರ್ಗರೆವ ನಿರೀಕ್ಷೆಯ ಭಾರವನ್ನೂ ಹೊರುವ ಶಕ್ತಿ ನನ್ನಲ್ಲಿತ್ತೇ? ಬರೆಯಲಾಗದ ನೋವು ಬದುಕು ಬರಡಾಗಿಸಿದೆ. 
ಖಿನ್ನತೆಯ ಮೆಟ್ಟಿಲುಗಳು ಇವತ್ತು ಹತ್ತಿಸಿದರೆ ನಾಳೆ ಇಳಿಸುತ್ತವೆ. ಜೀವಕ್ಕೆ ಅಂಟಿಕೊಂಡೇ ಸಾಗುವ ಈ ವಿಚಿತ್ರ ಬರಡುಭಾವ ಎಂಥ ಬಿಸಿಲಿಗೂ, ಹೊಡೆದು ಬೀಸುವ ಗಾಳಿಗೂ ಬತ್ತುತ್ತಿಲ್ಲವೇಕೆ? ಪ್ರೀತಿಯ ಗೊಂದಲ, ಮನಸ್ಸು ಸದಾ ಚಂಚಲ, ಈ ನಡುವೆ ಸುಖಾಸುಮ್ಮನೆ ಭೀತಿಯೂ ಆವರಿಸಿಕೊಂಡಿದೆ. ಮನದ ಹಿಡಿತ ನನ್ನ ಬಿಗಿತದಿಂದ ನುಣುಚಿಕೊಂಡಿದೆ. ಆತ್ಮವಿಲ್ಲದ ದೇಹ, ಮನಸ್ಸಿಲ್ಲದ ಹೃದಯ ಇನ್ನೇನ ಬರೆದೀತು? ಚೈತನ್ಯದೊರತೆ ಎಲ್ಲಿದೆ ಎಂಬುದನ್ನೂ ಸಿಕ್ಕಸಿಕ್ಕಲ್ಲಿ ಹುಡುಕಿ ಸೋತು, ಅಂತರ್ಜಾಲದಲ್ಲಿ ತಡಕಾಡುವ ಹೀನಾಯ ಸ್ಥಿತಿ ಅವರಿಗೆ ಅರ್ಥವಾದೀತೇ?
ಅಕ್ಷರಗಳ ಒತ್ತು ಇಳಿ ಸೂತ್ರಗಳೆಲ್ಲ ಒಡಲು ಬಿರಿದುಕೊಂಡು ಬಿದ್ದಿವೆ. ಇನ್ನವುಗಳನ್ನು ಹೊಲಿದು ಕವನವಾಗಿಸುವ ಕಸುವು ಅದಾವ ನರನಾಡಿಯಲ್ಲಿ ಅಡಗಿ ಕುಳಿತಿದೆಯೋ?! ಇದೆಲ್ಲ ನನ್ನಾತ್ಮಸಾಕ್ಷಿಗೆ ತಿಳಿಯದ್ದೇನಲ್ಲ. ಇದೆಲ್ಲ ಯೋಚಿಸುವಾಗ ಈ ಆತ್ಮಸಾಕ್ಷಿಯನ್ನೇ ಬಡಿದು ಬಗ್ಗಿಸಬೇಕು ಇಲ್ಲವೇ ಸಾಯಿಸಬೇಕೆಂಬಷ್ಟು ಸಿಟ್ಟು ಬರುತ್ತದೆ. 
ಆದರೆ ಅದೇ ನನ್ನ ಸಾವೆಂಬ ಪ್ರಜ್ಞೆ ಚೂರೂ ಸಾಂತ್ವನ ಹೇಳದೆ ಅಮಾನವೀಯವಾಗಿ ವರ್ತಿಸುತ್ತದೆ. ಇಷ್ಟಾದರೂ ತಿಳಿಯದವರಂತೆ ಹುಡುಕುತ್ತಾರೆ ನನ್ನ ಅವರು. ಕಸಿವಿಸಿಗೊಂಡು ನಾನೂ ಹುಡುಕುತ್ತೇನೆ ಕಳೆದುಕೊಂಡಿರುವ ನನ್ನನ್ನು. ಸಂಜೆಗಳಿಲ್ಲದ ಊರು ನುಂಗಿಬಿಟ್ಟಿತೇ? ಅಥವಾ ಅವನ ನಿರಾಕರಣೆಯ ಕಹಿಸತ್ಯದೊಂದಿಗೆ ನಾನೂ ಕರಗಿಹೋದೆನೇ? ಜೀವದ ಗೆಳತಿ ಹಾದಿ ಬದಲಿಸುವಾಗ ನನ್ನ ದಾರಿ ತಪ್ಪಿತೇ? ಪ್ರಶ್ನೆಗಳು ಮತ್ತಷ್ಟು ಕೆಣಕುತ್ತವೆ. ನಾನು ಮತ್ತಷ್ಟು ಸೊರಗುತ್ತೇನೆ. ಬೇಡವೆಂದರೂ ಕ್ಯಾಲೆಂಡರ್ ಬದಲಾಗುತ್ತದೆ.-ರೇಶ್ಮಾ ರಾವ್ ಸೊನ್ಲೆ