ಪುಟಗಳು

25.7.13

ಒಂದು ಫಾಲ್ಸ್ ರಿರ್ಪೋಟ್

ಈಗ ಜಲಪಾತ ನೋಡಲು ಸೂಕ್ತ ಸಮಯ
ಅದೊಂದು ಗೊಂಡಾರಣ್ಯ. ಪ್ರಾಣಿ ಪಕ್ಷಿಗಳ ಇಂಚರ ಅಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿತ್ತು. ಅಲ್ಲೊಬ್ಬಳು ರಾಜಕುಮಾರಿ. ಅನುರೂಪ ಸುಂದರಿ. ಪ್ರತಿದಿನ ಪುಟ್ಟ ಕೊಳವೊಂದರಲ್ಲಿ ಸ್ನಾನ ಮಾಡಿ ಸಿಹಿ ಹಾಲು ಸ್ವೀಕರಿಸುವುದು ಅವಳ ದಿನಚರಿ. ಅದೊಂದು ದಿನ ಆಕೆ ಸ್ನಾನ ಮಾಡಿ ಹಾಲು ಸೇವಿಸಲು ಬಂಗಾರದ ಚೊಂಬನ್ನು ಎತ್ತುತ್ತಿರುವಾಗ ರಾಜಕುಮಾರನೊಬ್ಬ ಎವೆಯಿಕ್ಕದೆ ತನ್ನನ್ನೇ ನೋಡುತ್ತಿರುವುದನ್ನು ನೋಡುತ್ತಾಳೆ. ನಾಚಿಕೆಯಿಂದ ತನ್ನ ನಗ್ನ ದೇಹ ಮುಚ್ಚಿಕೊಳ್ಳಲು ಹಾಲನ್ನು ಅಗಲವಾಗಿ ಚೆಲ್ಲುತ್ತಾಳೆ. ಅಷ್ಟರಲ್ಲಿ ಸಖಿಯರು ಬಟ್ಟೆ ತಂದು ಹೊದಿಸುತ್ತಾರೆ. ಹಾಗೆ ಚೆಲ್ಲಿದ ಹಾಲು ರಾಜಕುಮಾರಿಯ ಗೌರವ ಹಾಗೂ ಮರ್ಯಾದೆಯ ಪ್ರತೀಕವಾಗಿ ಸಾಗರದಂತೆ ಹರಿಯಲಾರಂಭಿಸುತ್ತದೆ. ಇಂದಿಗೂ ಆ ದೂದ್‌ಸಾಗರ(ಹಾಲಿನ ಹೊಳೆ) ಕಾಡಿನ ಮಧ್ಯೆ ಧುಮ್ಮಿಕ್ಕಿ ಹರಿಯುತ್ತಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಹಾಗೆನ್ನುತ್ತದೆ ಕತೆ.
ಈ ಮಾಡರ್ನ್ ಸರ್ವಜ್ಞನ ಪದಗಳನ್ನು ಮನಸಿನಾಳಕ್ಕೆ ತೆಗೆದುಕೊಂಡು ದೂದ್‌ಸಾಗರ ನೋಡಲು ಹೊರಟವರು ನಾವು ಹತ್ತು ಮಂದಿ. ಅದಾಗಲೇ ಯೂಟ್ಯೂಬ್‌ನಲ್ಲಿ ಕೇಳಿದ ಜಲಪಾತದ ಸದ್ದು ಕಿವಿಯೊಳಗೆ ಮನೆ ಮಾಡಿ ಕುಳಿತಾಗಿತ್ತು. ರಾತ್ರಿಯಿಡಿ ಬೆಂಗಳೂರನ್ನು ದೂರ ತಳ್ಳುತ್ತಾ ರೈಲು ಲೋಂಡಾ ತಲುಪಿತು. ಅಲ್ಲಿಂದ ಕ್ಯಾಸಲ್ ರಾಕ್ ಅರ್ಧ ಗಂಟೆಯ ದಾರಿ. ಮತ್ತೊಂದು ರೈಲನ್ನು ಹತ್ತಿದೆವು. ರೈಲು ದೂದ್‌ಸಾಗರ್ ಬಳಿಯೇ ನಿಲ್ಲುತ್ತಿತ್ತು. ಆದರೆ ಕ್ಯಾಸಲ್ ರಾಕ್‌ನಲ್ಲಿಳಿದು 14 ಕಿಮೀ ಟ್ರ್ಯಾಕ್ ಟ್ರೆಕ್ಕಿಂಗ್ ಮಾಡಿ ಗುರಿ ತಲುಪುವುದು ನಮ್ಮ ಯೋಜನೆ. ಏಕೆಂದರೆ ಕಷ್ಟ ಜೀವಿಗಳು ನಾವು! ಜಲಪಾತದ ಬಳಿ ಊಟ, ವಸತಿಗೆ ಏನೂ ವ್ಯವಸ್ಥೆ ಇಲ್ಲ. ಹಾಗಾಗಿ ಟೆಂಟು, ಸ್ಲೀಪಿಂಗ್ ಬ್ಯಾಗ್, ಎರಡು ದಿನದ ಲಗೇಜು, ಜೊತೆಗೆ 6 ಹೊತ್ತಿಗಾಗುವಷ್ಟು ಚಪಾತಿ, ಪರೋಟ, ಬ್ರೆಡ್ ಜ್ಯಾಮ್‌ನ್ನು ಕೈ, ಭುಜ, ಬೆನ್ನುಗಳಲ್ಲಿ ನೇತಾಡಿಸಿಕೊಂಡು ರೈನ್ ಕೋಟ್ ಮುಚ್ಚಿ ನಡೆಯತೊಡಗಿದೆವು. 
ಒಂದು ಕಿಮೀ ನಡೆವಷ್ಟರಲ್ಲಿ ಬ್ಯಾಗಿನಿಂದ ಡ್ರೈ ಫ್ರೂಟ್ಸ್, ಗ್ಲೂಕೋಸ್ ಹೊರಬರಲಾರಂಭಿಸಿತು. ಹಳಿಯ ಒಂದು ಭಾಗ ಪ್ರಪಾತ, ಇನ್ನೊಂದು ಬದಿಗೆ ಎತ್ತರದ ಕಲ್ಲಿನ ಗೋಡೆಯಂತಾ ರಚನೆ. ಇದೇನು ಮುಗಿಯದಾ ಪಯಣವೇನೋ ಎಂಬಂತೆ ಕಣ್ಣು ಕೀಲಿಸಿದಷ್ಟೂ, ದಾರಿ ಸವೆಸಿದಷ್ಟೂ ಕಂಬಿಯೇ. 'ಕಂಬಿ ಎಣಿಸೋದು' ಸುಲಭವಲ್ಲ ಅಂತ ಸ್ವಲ್ಪ ಸಮಯಕ್ಕೇ ಗೊತ್ತಾಗಿ ಹೋಯ್ತು. ಕರ್ನಾಟಕಕ್ಕೆ ಬೆನ್ನು ಹಾಕಿ ಗೋವಾದೊಳಕ್ಕೆ ಬಲಗಾಲಿಟ್ಟು ಪ್ರವೇಶಿಸಿದೆವು. 'ಕಾಡು'ಹರಟೆಯಲ್ಲಿ ನಡೆವಾಗ ಇದ್ದಕ್ಕಿದ್ದಂತೆ ನಿಂತ ನೆಲ ಕಪ್ಪಾಯಿತು. ಸುರಂಗದೊಳಕ್ಕೆ ಪ್ರವೇಶಿಸಿದ್ದೆವು. ಲಾಟೀನು ತೆಗೆದೆ. ಕಾಲು ನೆಲದ ಮೇಲೇ ಇದೆ ಎಂದು ಖಾತ್ರಿಯಾಗುವಷ್ಟರ ಮಟ್ಟಿಗೆ ಲಾಟೀನು ಬೆಳಕು ಧೈರ್ಯ ನೀಡಿತ್ತು. ಅನಾಯಾಸವಾಗಿ 'ಜುಗಾರಿ ಕ್ರಾಸ್‌'ನ ಸುರೇಶ ಮತ್ತು ಗೌರಿ ನಮ್ಮ ಪಕ್ಕದಲ್ಲೇ ನಡೆಯತೊಡಗಿದ್ದರು. ಅಷ್ಟರಲ್ಲೇ ರೈಲು ಕೂ ಎನ್ನುತ್ತಾ ಸುರಂಗದೊಳಗೆ ದಾಳಿಯಿಟ್ಟಿತು. ಕಿವಿಯ ತಮಟೆ ಉಳಿಸಿಕೊಳ್ಳುವ ಹೋರಾಟಕ್ಕೆ ಸಜ್ಜಾಗಿ ಎರಡೂ ಕೈಗಳೂ ಅಡ್ಡ ನಿಂತವು. ಸುರಂಗದ ಗೋಡೆಗೆ ಆತು ನಿಂತೆವು. ಅಬ್ಬ! ರೈಲೆಷ್ಟು 'ಊ'ದ್ದ ಇರುತ್ತದೆಂದು ಜ್ಞಾನೋದಯವಾಯ್ತು! 'ಕತ್ತಲಿಂದ ಬೆಳಕಿನೆಡೆಗೆ' ಹೆಜ್ಜೆ ಇಟ್ಟ ಆ ಕ್ಷಣ, ಯಪ್ಪಾ! ರೈನ್ ಕೋಟ್ ತುಂಬಾ ಪಾಚಿ, ಅಲ್ಲಲ್ಲಿ ಡಿಸೈನ್‌ನಂತೆ ಹತ್ತಿಕೊಂಡ ಇಂಬಳಗಳು. ರೈಲೇನಾದರೂ ಬರುತ್ತಿದ್ದರೆ ಹೆದರಿ ರಿವರ್ಸ್ ಗೇರ್‌ನಲ್ಲಿ ಓಡಬೇಕು, ಹಾಗೆ ಕಿರುಚಿಕೊಳ್ಳುತ್ತಲೇ ಕಲ್ಲಿನಿಂದ ಉಜ್ಜಿ ತೆಗೆದೆವು. ಹೀಗೆ ನಾಲ್ಕೈದು ಸುರಂಗ ಹಾದೆವು. 
ಅಷ್ಟರಲ್ಲಿ ನಮ್ಮ ಗುಂಪಿನ ನಾಲ್ಕೈದು ಮಂದಿ ಗುಂಪು ಚದುರಿ ಮುಂದೆ ಹೋಗಿದ್ದರು. ಏಳೆಂಟು ಕಿಮೀ ಕ್ರಮಿಸಿರಬಹುದು, ನೆಟ್‌ವರ್ಕ್ ಇಲ್ಲದೆ ಸತ್ತಂತೆ ತೆಪ್ಪಗೆ ಬಿದ್ದಿದ್ದ ನಮ್ಮ ಜಂಗಮವಾಣಿಗಳ ಮಧ್ಯೆ ಯಾವುದೋ ಒಂದು ಶಾಪವಿಮೋಚನೆಯಾದಂತೆ ಹಾಡತೊಡಗಿತು. ನಮ್ಮಿಂದ ತಪ್ಪಿ ಹೋದ ಗುಂಪು ನಡೆಯಲಾರದೆ ರೈಲು ಹತ್ತಿತ್ತು. ನಾವೂ ರೈಲಿನೆಡೆಗೆ ಓಡಿದೆವು. ಹೇಗೋ ಸಿಕ್ಕಿದ ಬೋಗಿ ಹತ್ತಿಕೊಂಡು ಕುಳಿತ ಸ್ವಲ್ಪ ಹೊತ್ತಿಗೆ ರೈಲು ನಿಂತಿತು. ಯಾವ ಸ್ಟಾಪ್ ಎಂದು ನೋಡೋಣವೆಂದರೆ ಬಾಗಿಲಲ್ಲಿ ಫೋಟೋಗ್ರಫಿ ಮಾಡುತ್ತಿದ್ದ ಪಂಜಾಬಿಗಳು ಅಲ್ಲಾಡುತ್ತಿಲ್ಲ. ಕೊನೆಗೂ ಕಂಡಿಯಲ್ಲಿ ಹಣಕಿ ಅದೇ ದೂದ್‌ಸಾಗರ ಎಂದು ತಿಳಿಯುವಷ್ಟರಲ್ಲಿ ರೈಲು ಓಡತೊಡಗಿತ್ತು!ಎರಡು ಸೆಕೆಂಡಿನಲ್ಲಿ ಜಲಪಾತದ ಅದಮ್ಯ ಸೌಂದರ್ಯ ಮಿಂಚಿ ಮರೆಯಾಯ್ತು. (ಸ್ವರ್ಗ ರಪ್ಪಂತ ಪಾಸಾಗೋದು ಅಂದ್ರೆ ಅದೇ ಏನೋ!) ಇನ್ನೇನು ಮಾಡಲು ಸಾಧ್ಯ? ತಲೆ ಕೆಡಿಸಿಕೊಳ್ಳದೆ ಗೋವಾ ಬೀಚಿನಲ್ಲಿ ಆಟವಾಡಿ ಹಿಂತಿರುಗೋಣ ಎಂದುಕೊಂಡೆವು. ಆದರೂ ಜಲಪಾತದ ಸದ್ದು 'ಬನ್ನಿ ಬನ್ನಿ' ಎಂದಂತಾಗುತ್ತಿತ್ತು. ಮಳೆಗಾಲದಲ್ಲಿ ಆ ಹಾದಿಯುದ್ದಕ್ಕೂ ಸಣ್ಣಪುಟ್ಟ ಜಲಪಾತಗಳ ಜಾತ್ರೆಯೇ ನೆರೆದಿರುತ್ತದೆ. ಹೀಗಾಗಿ ಧೋ ಎಂಬ ಸದ್ದು ಬೆಂಬಿಡುವುದೇ ಇಲ್ಲ. ಅಷ್ಟರಲ್ಲಿ ರೈಲು ನಿಂತಿತು. ಹಾರಿಕೊಂಡೆವು. 6 ಕಿಮೀ ಮುಂದೆ ಹೋಗಿದ್ದೆವು. ಚಾರಣದ ದಿಕ್ಕು ಬದಲಾಗಿತ್ತು. ಮಳೆ ಸುರಿಯುತ್ತಲೇ ಇತ್ತು.ಬೆಳಗ್ಗೆ 9ಕ್ಕೆ ನಡೆಯತೊಡಗಿದವರು ಸಂಜೆ 4ಕ್ಕೆ ಜಲಪಾತದೆದುರು ನಿಂತಿದ್ದೆವು. 
ಅಬ್ಬಾ, ಏನದರ ಭೋರ್ಗರೆತ! ರುದ್ರ ರಮಣೀಯವೆಂಬ ಉಪಮೆ ಜೀವಮಾನದಲ್ಲೊಮ್ಮೆ ಉಪಯೋಗಕ್ಕೆ ಬಂದಿತು. ಮಾಂಡೋವಿ ನದಿ ಸಮುದ್ರ ಸೇರುವ ಕನಸಿನ ಹಾದಿಯಲ್ಲಿ ಬಿಳಿ ನೊರೆಯಾಗಿ 1017 ಅಡಿ ಎತ್ತರದಿಂದ 100 ಅಡಿ ಅಗಲವಾಗಿ ಸೆರಗು ಹರಡಿಕೊಂಡು ಧುಮ್ಮಿಕ್ಕುತ್ತಿದ್ದಳು. ಜಲಪಾತದ ಎದುರು ನಿಂತರೆ ಕಣ್ಣು ಬಿಡಲಾಗದಂತೆ ಜಡಿಮಳೆಯ ರೀತಿ ನೀರು ಚಿಮ್ಮುತ್ತಿತ್ತು. ಭಾರತದ 5ನೇ ಎತ್ತರದ ಜಲಪಾತದ ಸಿಂಚನ ಪುಳಕ ತಂದಿತು. ಈ ಸೌಂದರ್ಯ ರಾಶಿ ಕಂಡು ಬದುಕು ಸಾರ್ಥಕವಾಯಿತೆಂದು ಇದುವರೆಗೆ ಯಾರಾದರೂ ಅದರಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಅನುಮಾನ ಕಾಡಿತು.ಜಲಪಾತದ ಪಕ್ಕದಲ್ಲೊಂದು ಬಸ್ ಸ್ಟ್ಯಾಂಡ್‌ನಂಥ ಜಾಗ, ಬಿಟ್ಟರೆ ಎದುರಿಗೆ ಹಳಿಯ ಇನ್ನೊಂದು ಬದಿ ಟೀ ಅಂಗಡಿ ಮತ್ತು ಒತ್ತೊತ್ತಾಗಿ ಹಾಕಿದರೆ 30 ಟೆಂಟ್ ಹಾಕಬಹುದಾದಷ್ಟು ಜಾಗ. ಅದಿಷ್ಟೇ ಪ್ರವಾಸಿಗರಿಗಾಗಿ ಅಲ್ಲಿರುವ ಸೌಲಭ್ಯಗಳು. ಒಂದು ತರಾ ಒಳ್ಳೆಯದೇ. ಇಲ್ಲಿ ಉಸಿರು ಕಟ್ಟಬಹುದಾದಷ್ಟು ಆಮ್ಲಜನಕ ಶ್ವಾಸಕೋಶವನ್ನೆಲ್ಲ ತುಂಬುತ್ತದೆ. ಅದನ್ನು ಸ್ಟೋರ್ ಮಾಡಿಕೊಳ್ಳಲು ದೇವರು ಇನ್ನೊಂದು ಅಂಗ ಕೊಡಬಹುದಿತ್ತೆನಿಸಿತು. ಆದರೆ ನಮ್ಮ ಭಾರತದ ಸುಸಂಸ್ಕೃತ ಧೀರಪುತ್ರರು ತಾವು ತಿಂದ ನಂತರ ಪ್ಲಾಸ್ಟಿಕ್, ಬಾಟಲ್‌ಗಳನ್ನು ಎಲ್ಲೆಂದರಲ್ಲಿ ಎಸೆದು ಭಾರ ಕಳೆದುಕೊಂಡಂತೆ ನಿರಾಳರಾಗುತ್ತಾರೆ. ಅಷ್ಟೇ ಅಲ್ಲ, ಟೀ ಅಂಗಡಿಯೊಳಗೆ ಅಡಗಿ ಕುಳಿತ ಬಿಯರ್, ವಿಸ್ಕಿ ಬಾಟಲ್‌ಗಳು ಹಗಲಿರುಳೆನ್ನದೆ ಸದ್ದು ಮಾಡುತ್ತವೆ. 
ಮಳೆಗಾಲದಲ್ಲಿ ವಾರಾಂತ್ಯದಲ್ಲಂತೂ ಸಾವಿರಾರು ಯುವ ಪ್ರವಾಸಿಗರು ಬರುತ್ತಾರೆ, ವಾಲುತ್ತಾರೆ, ಕೂಗುತ್ತಾರೆ, ಸಿಗರೇಟು ಹೊಗೆ ಬಿಟ್ಟು ಮರಗಳಿಗೆ ಕೆಲಸ ಕೊಡುತ್ತಾರೆ.ಈ ದೃಶ್ಯಾವಳಿ ನೋಡಿ ಬೆದರಿದ್ದ ಮುಂಚೆಯೇ ತಲುಪಿದ್ದ ನಮ್ಮ ಅರ್ಧ ತಂಡ ಸುರಂಗದ ಮೇಲ್ಭಾಗದಲ್ಲಿ 3 ಟೆಂಟು ಹಾಕಿ ಕುಳಿತಿದ್ದರು. ಆ ದೃಶ್ಯಾವಳಿ ನೋಡಿ ಬೆದರುವ ಸರದಿ ನಮ್ಮದಾಗಿತ್ತು. ಮನುಷ್ಯ ಮಾತ್ರರಾದವರಿಗೆ ಹುಡುಕಲಸಾಧ್ಯವಾದ ಸ್ಥಳವದು. ಒಂದು ಜಲಪಾತವನ್ನು ದಾಟಿ(ಹಾರಿ), ಬಂಡೆ ಹತ್ತಿ ಇಳಿದು, ಇಂಬಳ ತುಂಬಿದ ಹುಲ್ಲು ಹಾಸಿನ ಮೇಲೆ ಹಂಸತೂಲಿಕಾತಲ್ಪದಂತೆ ನಮ್ಮ ಟೆಂಟುಗಳು! ಟೆಂಟಿನಾಚೆಗೆ ಒಂದು ಹೆಜ್ಜೆ ಇಟ್ಟರೆ ಮೂಳೆಯೂ ಸಿಗದಂತೆ ಪ್ರಪಾತದ ಮಡಿಲಲ್ಲಿ ಮಡಿಯಬೇಕಿತ್ತು. ನಮ್ಮ ನಡುವೆಯೇ ಇದ್ದ ಈ ನಾಲ್ವರು ಟೆಂಟು ಹಾಕಿದ ಮಹಾನುಭಾವರನ್ನು ಕಂಡು ಮೂಕವಿಸ್ಮಿತರಾದೆವು. ಯಾವುದೇ ಕ್ಷಣದಲ್ಲಿ ನಮ್ಮ ಭವಿಷ್ಯದ ಗೆರೆಗಳು ಅಳಿಸಬಹುದೆಂದು ಯೋಚಿಸಿ ಹೆಜ್ಜೆ ಎತ್ತಿಡಲಾರದಷ್ಟು ಸುಸ್ತಾಗಿದ್ದರೂ ಮತ್ತೆ ಟೆಂಟ್‌ಗಳನ್ನು ಕಿತ್ತು ಕುಡುಕರ ಕುಟೀರಗಳ ಬಳಿ ತಂದೆವು. 
ಕಾಲು ಮುರಿದುಕೊಂಡು ಬಿದ್ದಿದ್ದ ಸೃಷ್ಟಿಯ ಅಪರಿಮಿತ ಸೌಂದರ್ಯದೆದುರು ಟೆಂಟ್‌ನೊಳಗೆ ಕಾಲು ಚಾಚಿ ಮಲಗಿದ ಸುಖ ರೋಮಾಂಚನ ನೀಡಿತ್ತು. ಸುರಿದಷ್ಟೂ ಮುಗಿಯದ ಜಲಪಾತ ನಮ್ಮ ರಾಗ ಕಳೆದುಕೊಂಡ ಕನ್ನಡದ ಹಾಡುಗಳಿಗೂ ಲಯ ತಪ್ಪದೆ ಸಂಗೀತ ನೀಡುತ್ತಿತ್ತು. ಎಲ್ಲರ ಪ್ರಾತಃವಿಧಿಗಳೂ ಏರುಪೇರಾಗಿ ಕತ್ತಲೆಯಲ್ಲಿ ತೆಪ್ಪಗೆ ಹಾಸಿ ಬಿದ್ದಿದ್ದ ರೈಲುಕಂಬಿಗಳು ಪಾವನವಾದವು. ಬೆಳಗಾಗುವಾಗ ಎಡೆಬಿಡದೆ ಸುರಿಯುತ್ತಿದ್ದ ಜಡಿಮಳೆಗೆ ನಮ್ಮ ಒದ್ದೆಯಾದ ಸ್ಲೀಪಿಂಗ್ ಬ್ಯಾಗ್, ಬಚ್ಚಲುಮನೆಯಂತಾದ ಟೆಂಟು, ಒದ್ದೆಮುದ್ದೆಯಾಗಿ ನಡುಗುತ್ತಿದ್ದ ನಮ್ಮನ್ನು ನೋಡಿ ಕನಿಕರವೇನು ಹುಟ್ಟಲಿಲ್ಲ. ಬೆಳಗ್ಗೆ 8.30ರ ರೈಲಿಗೆ ಓಡಲು ಗಂಟುಮೂಟೆ ಕಟ್ಟಿದೆವು.
ಬೆಂಗಳೂರಿಗೆ ಬಂದು ಎಷ್ಟು ದಿನವಾದರೂ ಇನ್ನೂ ಭೋರ್ಗರೆಯುತ್ತಿದೆ ಜಲಪಾತ, ರಿಂಗಣಿಸುತ್ತಿದೆ ಹಳಿಯ ಮೇಲಿನ ಹೆಜ್ಜೆಮಾತಿನ ಸಪ್ಪಳ, ಅಣಕಿಸುತ್ತಿದೆ ಹರಿದ ರೈನ್‌ಕೋಟ್, ಒದ್ದೆ ಬ್ಯಾಗಿನೊಳಗೆ ಮುದ್ದೆ ಬಿಸ್ಕೆಟ್. ನೆನಪುಗಳ ರೈಲು ಓಡುತ್ತಲೇ ಇದೆ, ಕೊನೆಯಿಲ್ಲದೆ ಹಳಿ ಉದ್ದಕ್ಕೆ ಮಲಗಿದೆ.
ಹೋಗುವುದು ಹೇಗೆ?
ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಜಲಪಾತ ಹೆಚ್ಚು ಮೈ ತುಂಬಿಕೊಂಡಿರುತ್ತದೆ. ಆದರೆ ಈ ಸಮಯದಲ್ಲಿ ರೈಲನ್ನೇ ನಂಬಿಕೊಳ್ಳಬೇಕು. ನದಿಯ ಹರಿವಿಗೆ ಜೀಪ್ ರೂಟ್ ಬಂದ್ ಆಗಿರುತ್ತದೆ. ಬೆಂಗಳೂರಿನಿಂದಾದರೆ ಬೆಳಗಾಂ ರೈಲನ್ನು ಹಿಡಿದು ಲೋಂಡಾದಲ್ಲಿ ಇಳಿಯಬೇಕು. ಅಲ್ಲಿಂದ ಗೋವಾ ರೈಲು ಹತ್ತಿದರೆ ದೂದ್‌ಸಾಗರ್ ಸ್ಟಾಪ್‌ನಲ್ಲೇ ರೈಲು ಒಂದು ನಿಮಿಷ ನಿಲ್ಲುತ್ತದೆ. ಚಾರಣ ಮಾಡುವವರು ಲೋಂಡಾದಿಂದ ರೈಲಿನಲ್ಲಿ ಕ್ಯಾಸಲ್ ರಾಕ್ ಇಲ್ಲವೇ ಕುಲೇಮ್ ಹೋಗಿ ಅಲ್ಲಿಂದ ನಡೆಯಬಹುದು. ಊಟ, ವಸತಿ, ಟಾಯ್ಲೆಟ್ ಯಾವುದೇ ಸೌಲಭ್ಯಗಳಿಲ್ಲದ ಕಾರಣ ಎಲ್ಲವನ್ನೂ ಹೊತ್ತೊಯ್ಯುವುದು ಒಳ್ಳೆಯದು. ಸುರಂಗ ಮಾರ್ಗಗಳಿರುವುದರಿಂದ ಒಂದು ಟಾರ್ಚ್ ಜೊತೆಯಲ್ಲಿರಲಿ. ಆಗಾಗ ರೈಲುಗಳು ಬರುವುದರಿಂದ (ಎಲ್ಲವೂ ದೂದ್‌ಸಾಗರ್‌ನಲ್ಲಿ ನಿಲ್ಲುವುದಿಲ್ಲ) ಚಾರಣ ಮಾಡುವವರು ಎಚ್ಚರಿಕೆ ವಹಿಸುವುದು ಅಗತ್ಯ.
 -ಕನ್ನಡಪ್ರಭದಲ್ಲಿ ಪ್ರಕಟ