ಪುಟಗಳು

5.3.11

ವೈರುದ್ಯ..

ಅದು ತೆಪ್ಪಗೆ ಮನೆಯೊಂದರ ಅಂಗಳದಲ್ಲಿ ತಲೆ ಕೆದರಿಕೊಂಡು ನಿಂತ ಮರ.ಎಳನೀರು ಗೊಂಚಲುಗಳ ಹೊತ್ತ ತುಂಬು ಬಸುರಿ..ಅದಕ್ಕೇ ಇರಬೇಕು ಕೂದಲನ್ನು ಕಟ್ಟಲೂ,ಅಥವಾ ಗಾಳಿಗೆ ಹಾರಿಬಿಡಲೂ ಉದಾಸೀನ!!ಯಾರಿಗೆ ಬೇಕು ದಿನ ಬೆಳಗಾದರೆ ಈ ಹೊಂಡಕೊಂಡದ ಟಾರು ರಸ್ತೆಯನ್ನು ನೋಡುತ್ತಾ ಕಾಲ ತಳ್ಳುವ ಈ ಜೀವನ ಎಂಬ ಜಿಗುಪ್ಸೆ ಇರಬಹುದು.'ಉಸ್ಸಪ್ಪಾ' ಎಂದು ನಿಟ್ಟುಸಿರು ಬಿಡುವಾಗಿನ ಮುಖಚಹರೆ.ಆ ಪಾಟಿ ಎಳನೀರು ಗೊಂಚಲುಗಳ ನೋಡಿದರೆ ಹಳ್ಳಿಗಾಡಿನ ಹೆಂಗಸಿನಂತೆ ಹುಟ್ಟುವುದೇ ಮಕ್ಕಳನ್ನು ಹಡೆಯಲು' ಎಂದು ಅದು ಭಾವಿಸಿದಂತಿದೆ!ಆದರೂ ಸಣ್ಣದಾಗಿ ಅಲ್ಲಿ ಆ ಕಳಾಹೀನ ಮುಖದಲ್ಲಿ 'ಮಾತ್ರುಮಮತೆ ' ಇಣುಕುತ್ತಿದೆಯಾ?,ಇರಬಹುದೇನೋ?!
ಬದುಕು ಎಷ್ಟು ವಿಪರ್ಯಾಸ ನೋಡಿ,ತದ್ವಿರುದ್ದಗಳನ್ನು ಒಟ್ಟಿಗೆ ಇಟ್ಟು ಮಜಾ ನೋಡುತ್ತದೆ. ಇಂತಾ ಈ ಮರ,ಸದ್ದಿಲ್ಲದೇ ಸಮಯ ಕಳೆಯುವ ಈ ಮರದೊಳಗೆ ಸಂಜೆಯಾದರೆ ಕಿಚಪಿಚವೆನ್ನುತ್ತಾ ಎಡೆಬಿಡದ ಜೀವನೋತ್ಸಾಹದಿಂದ ನಲಿವ ಪುಟ್ಟ ಪುಟ್ಟ ಕಂದು ಹಾಗೂ ಬೂದು ಮಿಶ್ರಿತ ಹಕ್ಕಿಗಳು..ರೆಂಬೆಯಿಂದ ರೆಂಬೆಗೆ ಹಾರಿ ಪುರುಸೊತ್ತಿಲ್ಲದೇ ವಟಗುಡುವ ,ಬದುಕು ಬಯಸುವ,ಮನಕ್ಕೆ ಉಲ್ಲಾಸ ತುಂಬುವ ಪುಟ್ಟ ಜೀವಗಳು..ಅವುಗಳ ಇರುವಿಕೆ ಜಗತ್ತಿನ ಉಸಿರಾಟದ ಸದ್ದಿನಂತೆ ಕಿವಿಗೆ ಬಂದು ಬಡಿಯುತ್ತದೆ.ಅದು ಸಂಗೀತದ ಅರಿವಿರದಿದ್ದರೂ ಹಳ್ಳಿಗಾಡಿನ ಜನಪದದಂತೆ ಇಂಪಾಗಿ ಮಾರ್ದನಿಸುತ್ತದೆ.ಅವು ಪರಸ್ಪರ kushalakshemagalannu ವಿಚಾರಿಸಿಕೊಳ್ಳುವಂತೆ ಭಾಸವಾಗುತ್ತದೆ.ಬದುಕು ಬೇಡವೆಂಬಂತೆ ನಿಂತ ಆ ಮರದಲ್ಲಿ ಈ ಹಕ್ಕಿಗಳು ಕುಳಿತು ಬದುಕಿನೆಡೆಗೆ ವಿಸ್ಮಯವನ್ನು ವ್ಯಕ್ತಪಡಿಸುತ್ತವೆ..ಸಂಜೆ ಕೆಂಪಾದಾಗ ನಡೆಯುವ ಈ ಸಂಭಾಷಣೆ ಇಂಪೋ ಇಂಪಾಗಿ ಮನಕೆ ತಂಪೆರೆಯುತ್ತದೆ..

(ಉದಯವಾಣಿ ಯಲ್ಲಿ ಪ್ರಕಟ)