ಪುಟಗಳು

4.12.10

ಕಾವ್ಯಕ್ಕೊಂದು ಮುನ್ನುಡಿ..ಛಾಯಾ ಚಿತ್ರ




ನನ್ನ ಪ್ರೀತಿಯ ಹುಡುಗಾ...

ನಂಗೂ ನನ್ನ ನಿನ್ನ ಹೆಸರನ್ನು ಹೀಗೆ ಕಂಡಕಂಡಲ್ಲಿ ಬರೆಯುವಾಸೆ,ಲೈಬ್ರರಿಯಿಂದ ತಂದ ಕಥಾಸಂಕಲನದಲ್ಲಿ,ದೂರಪ್ರವಾಸದಿ ಹತ್ತಿದ ದೊಡ್ಡ ಬಂಡೆಯಲ್ಲಿ,ಮತ್ತೆ-ಮತ್ತೆ ಅಲೆಗಳು ಬಂದಪ್ಪುವ ಕಡಲತಡಿಯ ಮಳಲ ಮೇಲೆ,ನೋಟ್ಪುಸ್ತಕದ ಕೊನೆಯ ಪುಟದ ಆಕಾರವಿಕಾರಗಳ ಮಧ್ಯೆ..
ಫ್ರೆಂಡ್ನ ಮಾತಿಗೆ ಅಗತ್ಯಕ್ಕಿಂತಲೂ ಹೆಚ್ಚು ನಗು ಉಕ್ಕುವಾಗ,ಅವನಾರೋ ಓರ್ಕುಟ್ನಲ್ಲಿ ಹೊಗಳಿದ ಹೊಗಳಿಕೆ ಪದೇ ಪದೇ ಕಾಡುವಾಗ,ಬರೀ ಪ್ರೀತಿಗೆ ಸಂಬಂಧಪಟ್ಟಿದ್ದೇ ಮೆಸೇಜ್ ಕಳಿಸುವ ಸೀನಿಯರ್ ಒಬ್ಬನ ಮೇಲೆ ಅನುಮಾನಮಿಶ್ರಿತ ಕುತೂಹಲ ಮೂಡುವಾಗ,ಬಸ್ನಲ್ಲಿ ಎದುರು ಕುಳಿತವನೊಬ್ಬ ಪದೇ ಪದೇ ತಿರುಗಿ ನೋಡುವಾಗ-ಹುಟ್ಟುವ ಭಾವನೆಗಳನ್ನೆಲ್ಲಾ ಎದೆಯೊಳಗೆ ಕಟ್ಟಿಟ್ಟು ಕಾಣದ ನಿನಗಾಗಿ ಮಡಿವಂತಿಕೆಯನ್ನು ಕಾಪಿಡುತ್ತಿದ್ದೇನೆ..
ನಿನ್ನೊಡನೆ ಹನಿಮಳೆಯಲ್ಲಿ ಮೌನವಾಗಿ ನಡೆಯುವ ಸಂಜೆಗಾಗಿ ಹಪಹಪಿಸುತ್ತಾ ,ನೀ ಮಾತಾಡುವ ರಸಿಕಭಾಷೆಗೆ ನಾಚಿ ನೀರಾಗುವ ನನ್ನನ್ನು ನಾನೇ ಕಲ್ಪಿಸಿಕೊಳ್ಳುತ್ತಾ,ನಿಧಾನಗತಿಯ ಯುಗಳಗೀತೆಯೊಂದನ್ನು ಕೇಳುವಾಗ ನಾನು ನಿನ್ನ ಕಣ್ಣಿನಲ್ಲೇ ಮಾತಾಗುತ್ತಾ ಕಳೆಯುವ ಆ ಕ್ಷಣಗಳಿಗಾಗಿ ಕಾತರಲಾಗಿದ್ದೇನೆ.
ಕಣ್ಣಿಗೆ ಕಣ್ಣು ಸೇರುವ ಹುಡುಗರ ಕಂಗಳಲೆಲ್ಲ ಹುಬ್ಬು ಕಿರಿದಾಗಿಸಿ ಅದು ನೀನೇನಾ ಎಂದು ಹುಡುಕುತ್ತಿದ್ದೇನೆ. ಹೊಟ್ಟೆ ಹಿಡಿದು ನಗುವಾಗ ನಿನ್ನ ಬೆನ್ನಿಗೆ ಸಣ್ಣದಾಗಿ ತಟ್ಟುವ ಹಂಬಲ,ದುಖವಾದಾಗೊಮ್ಮೆ ನಿನ್ನ ಎದೆಗೊರಗಿ ಸಾಂತ್ವಾನ ಪಡೆಯುವ ಬಯಕೆ,ಪ್ರತೀ ಕ್ಷಣವನ್ನೂ -ಕುಳಿತು,ನಿಂತು,ತಿಂದು ಕುಡಿದಿದ್ದನ್ನೂ ನಿನಗೆ ಮೆಸ್ಸೇಜ್ ಮಾಡುವ ಕನಸು..ಹೀಗೆ ನೀನಿರದ ಇಂದುಗಳನ್ನು ನಿನ್ನೊಡನೆ ಕಳೆವ ನಾಳೆಗಳ ಕನವರಿಕೆಯಲ್ಲೇ ಕಳೆಯುತ್ತಿದ್ದೇನೆ..,,ಸದಾ ಪಕ್ಕವೇ ಇರುವ ಜೀವದ ಗೆಳತಿಗೂ ಅನುಮಾನ ಬಾರದಂತೆ....
ಸಮಯ ಸರಿಯುತ್ತಿದೆ,
ನನ್ನ-ನಿನ್ನ ಮೊದಲ ಭೇಟಿಯಾಗುವ ಸಾವಿರಾರು ಸಂಭವಗಳ ಹುಡುಕುವಿಕೆಯಲ್ಲೇ ಸಂಭ್ರಮ ಪಡುತ್ತಾ ,ಜೊತೆಜೊತೆಗೆ ಹೀಗಿರಲಿ ಹಾಗಿರಲಿ ಎಂದು ನಿನ್ನಲ್ಲಿ ನಾನು ಬಯಸಿದ ನಿನ್ನನ್ನು ಕಲ್ಪಿಸಿಕೊಳ್ಳುತ್ತಾ...
ನಿನ್ನ ಕೈ ಹಿಡಿದು ದೂರದಾರಿಯನ್ನು ಮೌನವಾಗಿ ಸವೆಸಬೇಕಿದೆ ಜಂಬದ ಮುಖ ಹೊತ್ತು,ಅಣ್ಣ ಅಕ್ಕಂದಿರೆಲ್ಲಾ ಕೀಟಲೆ ಮಾಡಿ ಛೇಡಿಸುವಾಗ ನಾಚಿ ನೀರಾಗಬೇಕಿದೆ,ಸೀರೆ ಉಟ್ಟು ನಿಂತ ನನ್ನನ್ನು ನೀನು ಮೆಚ್ಚುಗೆಯ ಕಂಗಳಲ್ಲಿ ನೋಡಬೇಕಿದೆ,ಮಾಡಲು ಬಾರದ ಅಡಿಗೆಯೊಂದನ್ನು ರುಚಿಯಾಗಿ ಮಾಡಿ ನಿನಗೆ ಬಡಿಸಬೇಕಿದೆ,ಪ್ರೀತಿಯ ಹೊಳೆಯಲ್ಲಿ ಕೊಚ್ಚಿ ಹೋಗಬೇಕಿದೆ,ಇನ್ನೂ ಸಾವಿರ ಸಾವಿರ ಕನಸುಗಳು ಕಾಯುತ್ತಾ ಕನವರಿಸುತ್ತಿವೆ...ನನ್ನ ಪ್ರೀತಿಯ ಹುಡುಗಾ ನೀ ಎಲ್ಲಿರುವೆ?

(ಉದಯವಾಣಿಯಲ್ಲಿ ಪ್ರಕಟ)