First Published: 24 Feb 2014 02:00:00 AM IST
24.2.14
19.2.14
ಕಾಪಾಡು ಚೊಂಬೇಶ್ವರಾ...
First Published: 15 Feb 2014 02:00:00 AM IST
ಹೇಳಿದ್ದೇ ಹೇಳೋ ಕಿಸ್ಬಾಯ್ದಾಸ ಗೊತ್ತು. ಮಾಡಿದ್ದೇ ಮಾಡೋ ಈ ಅಭ್ಯಾಸದ ಬಗ್ಗೆ ಕೇಳಿದ್ದೀರಾ?ನಮ್ಮೊಳಗೇ
ಹಲವರಿರ್ತಾರೆ. ಮುಕ್ಕೋಟಿ ದೇವರುಗಳಿಗೂ ಮುನಿಸಿಕೊಳ್ಳದೆ ಮುನ್ನೂರ್ ಸತಿ ಬೇಕಾದರೂ
ನಮಸ್ಕಾರ ಮಾಡೋರು. ನೋಡೋರು ಅವ್ರ್ಗೇ ಒಂದ್ ದೊಡ್ ನಮಸ್ಕಾರ ಹಾಕಬೇಕು, ಆ ರೇಂಜ್‌ಗೆ.
ದಾರೀಲಿ, ಬಸ್ಸಲ್ಲಿ ಎಲ್ಲೇ ದೇವರ ಮೂರ್ತಿನೋ, ಫೋಟೋನೋ ಕಂಡರೂ ಕೆನ್ನೆ, ಹಣೆ, ಗದ್ದ
ಮುಟ್ಕೊಳೋರು. ಹಾಗಂತ ಇವರೇನು ದೇವದೂತರಲ್ಲ, ಭಕ್ತಸಾಧು ಕನಕದಾಸರಲ್ಲ, ನಮಸ್ಕಾರ ಮಾಡೋದು
ಒಂದು ಚಟ ಅಷ್ಟೇ. ಅಲ್ಲಿ ಭಕ್ತಿಗಿಂತ ಭಯ ಜಾಸ್ತಿ ಇರುತ್ತೆ.
ಇನ್ನು ಕೆಲವರಿಗೆ ಕೈ ತೊಳೆಯೋ ಅಭ್ಯಾಸ. ಒಳ್ಳೇದೇ. ಆದ್ರೆ ಒಂದೆರಡು ಬಾರಿಯಲ್ಲ, ಭಗವಂತ ಇವರಿಗೆ ಎಕ್ಸ್‌ಟ್ರಾ ಟೈಮ್ ಕೊಟ್ಟಂತೆ ದಿನಕ್ಕೆ ನೂರು ಬಾರಿ!ಮತ್ತೊಂದಷ್ಟು ಜನಕ್ಕೆ ಮನೆಯಿಂದ ಹೊರಡುವಾಗ ಎರಡ್‌ಎರಡ್ ಸರ್ತಿ ಚೆಕ್ ಮಾಡಿದ್ರೂ ಅರ್ಧ ಫರ್ಲಾಂಗ್ ಬರ್ತಿದ್ದಂಗೆ ಬೀಗ ಹಾಕಿದ್ನೋ ಇಲ್ವೋ ಅನ್ನೋ ಸಂಶಯ ಬೇತಾಳ ಬೆನ್ನು ಹತ್ತುತ್ತೆ. ಇವುನ್ನೆಲ್ಲಾ ಕಾಯಿಲೆ ಅಂದ್ರೆ ನಂಬಲೇಬೇಕು ನೀವು...
ಹೌದು, ಬೇಡವೆಂದರೂ ಬಿಡದ, ಸುಳ್ಳೆಂದು ಗೊತ್ತಿದ್ದರೂ ನಂಬಲು ಒತ್ತಾಯಿಸುವ, ಅನವಶ್ಯಕ ಪುನರಾವರ್ತಿತ ಕಾಡುವ ಯೋಚನೆ, ಅನುಮಾನಗಳು ಮನಸ್ಸಿನ ನಿಯಂತ್ರಣ ತಪ್ಪಿಸುತ್ತವೆ. ಇದು ಅತಿಯಾದಾಗ ದಿನನಿತ್ಯದ ಕೆಲಸಕಾರ್ಯಗಳಿಗೆ ಅಡ್ಡಗಾಲಾಗತೊಡಗುತ್ತವೆ. ಆಗಲೇ ಇದು ಕಾಯಿಲೆಯ ರೂಪ ತಾಳುವುದು. ಇದನ್ನು ಮನೋತಜ್ಞರು ಆಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್ ಎನ್ನುತ್ತಾರೆ.
ಇಂಥಾ ರೋಗಗಳೂ ಇರುತ್ತವಾ? ಇವೂ ರೋಗಗಳಾ ಎಂದು ಆಶ್ಚರ್ಯ ಹುಟ್ಟಿಸುವಂಥ ರೂಪ ಇದರದ್ದು. ಪದೇ ಪದೇ ಅನವಶ್ಯಕ ಕಾಡುವ ಯೋಚನೆಗಳು ಆಬ್ಸೆಶನ್ ಆದರೆ ಆ ಯೋಚನೆಗಳ ಫಲವಾಗಿ ಪದೇ ಪದೇ ಮಾಡುವ ಕ್ರಿಯೆಗಳು ಕಂಪಲ್ಶನ್ ಎನಿಸಿಕೊಳ್ಳುತ್ತವೆ.
ಗೆಳತಿಯೊಬ್ಬಳಿದ್ದಾಳೆ. ಒಂದೊಳ್ಳೆ ಗಳಿಗೇಲಿ ಮಶಿನಿಷ್ಟ್ ಚಿತ್ರ ನೋಡಿದಳು. ಚಿತ್ರದ ನಾಯಕ ಕ್ರಿಷ್ಟಿನ್ ಬೇಲ್ ಕಾರ್‌ನಲ್ಲಿ ಹೋಗುವಾಗ ಆಕಸ್ಮಿಕವಾಗಿ ಒಂದು ಮಗುವಿಗೆ ಬಡಿಯುತ್ತಾನೆ. ಮತ್ತು ಇನ್ನಲ್ಲಿ ನಿಂತರೆ ಅಪಾಯ ಎಂದು ಅಲ್ಲಿಂದ ಕಾರ್ ಅನ್ನು ವೇಗವಾಗಿ ಓಡಿಸಿಕೊಂಡು ಮನೆ ತಲುಪುತ್ತಾನೆ. ನಂತರ ತನ್ನನ್ನು ಕಾಡುವ ಪಾಪಪ್ರಜ್ಞೆಯಿಂದ ತಪ್ಪಿಸಿಕೊಳ್ಳಲು ಘಟನೆಯನ್ನು ಸ್ಮೃತಿಪಟಲದಿಂದ ತೆಗೆದು ಬಿಡುತ್ತಾನೆ. ಆದರೆ ನಮಗೆ ನಿಮಗೆ ಗೊತ್ತಿರುವಂತೆ ಯಾವುದೇ ಎನರ್ಜಿ ರೂಪಾಂತರ ಹೊಂದಬಹುದೇ ಹೊರತು ಖಾಲಿಯಾಗುವುದಿಲ್ಲ. ಹೀಗಾಗಿ ಆತನ ಆ ಮರೆಯಾದ ಪಾಪಪ್ರಜ್ಞೆ ಅನ್‌ಕಾನ್ಷಿಯಸ್‌ನಲ್ಲಿ ಹೋಗಿ ಕುಳಿತುಕೊಳ್ಳುತ್ತದೆ. ಹೊರ ಹೋಗಲು ವಾಮಮಾರ್ಗಗಳನ್ನು ಹುಡುಕಿಕೊಳ್ಳುತ್ತದೆ. ಹೀಗಾಗಿ ಆತನನ್ನು ಚಿತ್ರವಿಚಿತ್ರವಾಗಿ ಹಿಂಸಿಸುತ್ತದೆ. ಈ ಚಿತ್ರ ನೋಡಿದ ನಂತರವೇ ನನ್ನ ಕ್ಯಾಥೊಲಿಕ್ ಗೆಳತಿ ಹಾಗಾದದ್ದು. ಅವಳ ದುರ್ಬಲ ಮನಸ್ಸಿನಲ್ಲಿ ಇಲ್ಲವೆಂದು ಎಷ್ಟು ಬಾರಿ ಕಿರುಚಿದರೂ ತಾನೂ ಹೀಗೆ ಅಪಘಾತ ಮಾಡಿ ಯಾರನ್ನಾದರೂ ಸಾಯಿಸಿರಬಹುದೇ ಎಂಬ ಅನುಮಾನ ಶುರುವಾಯ್ತು. ಒಮ್ಮೆ ಅನುಮಾನ ಪಿಶಾಚಿ ಹಿಡಿದುಕೊಂಡರೆ ಅನುಮಾನವೇ ಬೇಡ, ಅದು ನಮ್ಮನ್ನು ಭಯಂಕರವಾಗಿ ಹಿಂಸಿಸಿ ಬಿಡುತ್ತದೆ. ವರ್ಷದ ಹಿಂದೆ ಹೊಸ ವರ್ಷಕ್ಕೆ ಕುಡಿದು ಕಾರು ಓಡಿಸಿದ್ದೆನಲ್ಲ, ಆಗ ಯಾರಿಗಾದರೂ ಕುಟ್ಟಿರಬಹುದಾ? ಅವಳ ಬಳಿ ಇಲ್ಲವೆನ್ನಲು 100 ಶೇ. ಗ್ಯಾರಂಟಿ ಕೊಡಬಲ್ಲ ಸಾಕ್ಷಿಗಳಿದ್ದವು. ತನ್ನ ನೆನಪು, ಕಾರಿಗೆ ಏನೂ ಆಗದಿದ್ದುದು, ಆದರೂ ಅಂತರ್ಜಾಲದಲ್ಲಿ ಆ ಡೇಟ್‌ನಲ್ಲಿ ತಮ್ಮ ಏರಿಯಾದಲ್ಲಿ ಆದ ಆಕ್ಸಿಡೆಂಟ್‌ಗಳನ್ನು ಹುಡುಕಿದಳು. ಯಾವುದೂ ಇರಲಿಲ್ಲ. ಸಮಾಧಾನವಾಗಲಿಲ್ಲ. ಪ್ರತಿ ದಿನ ಪ್ರತಿ ಕ್ಷಣ ದೇವರನ್ನು ಮನ್ನಿಸೆಂದು ಬೇಡಿದಳು, ತಾನು ಮಾಡದ ಪಾಪಕ್ಕೆ!ಕಡೆಕಡೆಗೆ ಇದೊಂದೇ ಯೋಚನೆಯಾಗತೊಡಗಿತು. ಯು ಟ್ಯೂಬ್‌ನಲ್ಲಿ ಕಾರು ಅಪಘಾತದ ವೀಡಿಯೋ ನೋಡುವುದೊಂದೇ ಕೆಲಸವಾಯಿತು. ಇದರಿಂದಲಾದರೂ ಕ್ರಿಸ್ಟಿನ್ ಬೇಲ್‌ನಂತೆ ತಾನೂ ಮರೆತಿದ್ದರೆ ನೆನಪಾಗುವುದೆಂದು. ಶೇ.99.9 ಭಾಗ ತಾನು ಯಾರನ್ನೂ ಸಾಯಿಸಿಲ್ಲ ಎಂದು ತಿಳಿದಿದ್ದರೂ ಉಳಿದ 0.1 ಪ್ರತಿ ಶತ ಅನುಮಾನ ಸಾಕಿತ್ತು ಅವಳಿಗೆ ಹುಚ್ಚು ಹಿಡಿಸುವ ಮಟ್ಟಿಗೆ ಹಿಂಸೆ ನೀಡಲು. ಮನೋವೈದ್ಯರ ಬಳಿ ಆಪ್ತಸಲಹೆ ಪಡೆದ ಮೇಲೆ ತಿಳಿದದ್ದೆಂದರೆ ಕ್ಯಾಥೊಲಿಕ್ ಆಗಿ ತನಗೆ ನಿಷಿದ್ಧವಾದ ಕುಡಿದು ಕಾರು ಓಡಿಸಿದ ಪಾಪಪ್ರಜ್ಞೆ ಅವಳನ್ನು ಈ ಪರಿ ಕಾಡಿತ್ತು. ಇದು ನಮ್ಮ ಸೂಪರ್ ಇಗೋ ಪವರ್.
ನಮ್ಮ ನೈತಿಕ ಪ್ರಜ್ಞೆಯನ್ನೇ ಸೂಪರ್ ಇಗೋ ಎನ್ನುವುದು. ಇದರೊಳಗೆ ನಾವು ಚಿಕ್ಕಂದಿನಲ್ಲಿ ಪಡೆದ, ಓದಿದ ಮೌಲ್ಯಗಳು, ಹಿರಿಯರ ಬುದ್ಧಿವಾದಗಳು ಸದ್ದಿಲ್ಲದೇ ಜಾಗ ಮಾಡಿಕೊಂಡು ಕುಳಿತಿರುತ್ತವೆ. ಹಾಗಾಗೇ ನಮ್ಮ ಆದರ್ಶಗಳಿಗೆ ವಿರುದ್ಧವಾಗಿ ನಾವು ನಡೆದಾಗ ಪಾಪಪ್ರಜ್ಞೆಯ ರೂಪದಲ್ಲಿ ಇದು ನಮ್ಮನ್ನು ಶಿಕ್ಷಿಸುತ್ತದೆ. ಅಲ್ಲಿಯೇ ಪ್ರಾಯಶ್ಚಿತ್ತ ಮಾಡಿಕೊಂಡೆವೋ ಸರಿ, ಇಲ್ಲವಾದಲ್ಲಿ ಮನೋರೋಗಗಳಾಗಿ ಕಾಡುತ್ತವೆ. ಕೆಲವೊಮ್ಮೆ ಇಡಿ ದಿನ ಬೇಡವೆಂದರೂ ಹಾಡೊಂದು ಬಾಯಿಗೆ ಬರುತ್ತಲೇ ಇರುತ್ತದೆ. ಕಾಯಿಲೆ ಎಂದು ಗಾಬರಿ ಬೀಳಬೇಕಿಲ್ಲ. ಯಾವಾಗ ನಮ್ಮ ಈ ಚಟ ದೀರ್ಘಕಾಲವಿದ್ದು ದಿನನಿತ್ಯದ ಕೆಲಸಗಳಿಗೆ ಅಡ್ಡಿ ತರಲಾರಂಭಿಸುತ್ತದೋ ಅದು ಚಿಕಿತ್ಸೆಯತ್ತ ಮುಖ ಮಾಡಲು ಸಕಾಲ.
ನಡೆದಾಡುವಾಗ ಹೆಜ್ಜೆ ಎಣಿಸುವುದು, ತಾನು ಬಲದಲ್ಲೇ ಇರಬೇಕೆಂದು ನೋಡಿಕೊಳ್ಳುವುದು, ಲೈಟ್ ಸ್ವಿಚ್ ಅನ್ನು 10 ಬಾರಿ ಹಾಕಿ ಆರಿಸುವುದು, ಇಷ್ಟು ಬಾರಿಯೇ ಶ್ಲೋಕ ಹೇಳಬೇಕು, ಇಲ್ಲದಿದ್ದಲ್ಲಿ ಏನೋ ಅನಾಹುತ ಸಂಭವಿಸುತ್ತದೆ ಎಂಬ ಆತಂಕ... ಇದರಲ್ಲಿ ನೀವು ಗಮನಿಸಬಹುದಾದದ್ದು ಇಂತಹ ಕ್ರಿಯೆಗಳನ್ನು ಮಾಡದಿದ್ದರೆ ಏನೂ ಆಗುವುದಿಲ್ಲ, ಆದರೆ ಅವರಲ್ಲಿ ಮಾತ್ರ ಮುಂದೆ ಯಾವುದೊ ಅಪಾಯ ತಡೆಯಲು ನಾ ಹೀಗೆ ಮಾಡಲೇಬೇಕು ಎಂಬ ಭಾವ..
ಈಗೇನೋ ವಿಜ್ಞಾನ ಮುಂದುವರೆದಿದೆ ಸರಿ. ಆದರೆ ಷೇಕ್ಸ್‌ಪಿಯರ್ ಎಂಬ ನಾಟಕಕಾರನೊಳಗಿದ್ದ ಮನೋವಿಜ್ಞಾನಿ ಅಂದೇ ಈ ಮನೋಕಾಯಿಲೆಯನ್ನು ತನ್ನ ನಾಟಕಗಳಲ್ಲಿ ಪ್ರಸ್ತುತ ಪಡಿಸಿ ನಮ್ಮನ್ನು ಬೆರಗುಗೊಳಿಸುತ್ತಾನೆ. ಮ್ಯಾಕ್ಬೆತ್ ಮತ್ತು ಆತನ ಪತ್ನಿ ಅಧಿಕಾರದ ಆಸೆಯಿಂದ ರಾಜನನ್ನು ಕೊಲೆ ಮಾಡುತ್ತಾರೆ. ಪಟ್ಟವನ್ನೂ ಏರುತ್ತಾರೆ. ಆದರೆ ಈ ಘಟನೆ ನಂತರ ರಾಣಿ ಮ್ಯಾಕ್ಬೆತ್ ಪದೇ ಪದೇ ಕೈ ತೊಳೆಯಲು ಶುರು ಮಾಡುತ್ತಾಳೆ. ಅವಳಿಗೆ ಅವಳ ಕೈಲಿ ರಕ್ತ ಕಾಣಿಸುತ್ತಿರುತ್ತದೆ. ಕೊಲೆ ಅವಳ ನೆಮ್ಮದಿ ಕಿತ್ತು ಕೊಲ್ಲುತ್ತದೆ. ಹಾಗಂತ ಮತ್ತೆ ಮತ್ತೆ ಕೈ ತೊಳೆವವರೆಲ್ಲಾ ಕೊಲೆ ಮಾಡಿದ್ದಾರೆಂದು ಭಾವಿಸೀರಿ..
.-ರೇಶ್ಮಾ ರಾವ್ ಸೊನ್ಲೆ
ಎದೆಯೊಳಗೇ ಉಳಿದ ಮಾತಿಗೆ ಎಷ್ಟು ಅರ್ಥ?
First Published: 19 Feb 2014 02:00:00 AM IST
ಲಹರಿ...
ಅವಳು ವಟಸಾವಿತ್ರಿ. ಸದಾ ಮಾತಾಡ್ತಾಳೆ. ಅವನೊಬ್ಬ ಕೇಳ್ತಿದಾನೆ ಅಂತ ಗೊತ್ತಾದ್ರೆ ಸಾಕು, ಸಾವಿರ ಮಾತಾಡ್ತಾಳೆ. ಕೊರೀಬೇಡ್ವೆ ಅಂತ ಅವ ಗೋಗರೆದಿದ್ದೆಷ್ಟು ಸಲವೋ! ಆದರೆ ನಿಜವಾಗಿಯೂ ಹೇಳಬೇಕಾದ ಆ ಮೂರು ಪದಗಳು ಮಾತ್ರ ಅವಳ ನಾಲಿಗೆಗೆ ಸಿಗದೇ ಎಲ್ಲೆಲ್ಲೊ ಅಡ್ಡಾದಿಡ್ಡಿ ಅಲೆಯುತ್ತವೆ. ಬೇರೆ ಪದಗಳದೂ ದಿಕ್ಕು ತಪ್ಪಿಸಿ ಅಲೆದಲೆದು ಅವಿತುಕೊಳ್ಳುತ್ತವೆ. ಅವುಗಳ ಅಡಗುತಾಣವನ್ನು ಅವನೇ ಶೋಧಿಸಲಿ ಎಂಬುದವಳ ಆಸೆ. ಅವನೋ, ಅಡಗುತಾಣ ಕಂಡರೂ ಕಾಣದಂತೆ ನಟಿಸುವ ಚತುರ. ಒಟ್ಟಿನಲ್ಲಿ ಅವಳೆದೆ ಗೂಡಲ್ಲಿ ಆ ಮೂರು ಪದಗಳು ಭದ್ರವಾಗಿ ಬೆಚ್ಚಗೆ ಕುಳಿತಿವೆ.
ದೇವರಿಗೆ ಕೈ ಮುಗಿಯುವಾಗಲೆಲ್ಲ ಅವನ ಒಳಿತನ್ನು ಬಯಸುತ್ತಾಳೆ. ಆದರೆ ಅವನೆಂದೂ ತನ್ನವನಾಗಬೇಕೆಂದು ಕೇಳಿಕೊಳ್ಳುವುದಿಲ್ಲ. ಏಕೆಂದು ಅವಳೇ ಹಲವು ಬಾರಿ ಪ್ರಶ್ನಿಸಿಕೊಂಡಿದ್ದುಂಟು. ಹೀಗೆ ಹೇಳಲಾಗದೆ ಚಡಪಡಿಸುವ ಮೂರು ಪದಗಳಿಗೂ, ದೇವರಲ್ಲಿ ಕೋರಲಾಗದ ಕೋರಿಕೆಗೂ ಸಂಬಂಧವಿದೆ ಎಂಬ ಬಲವಾದ ನಂಬಿಕೆ ಅವಳದ್ದು. ಆದರೆ ಅದನ್ನು ಬಿಡಿಸಲು ಹೋದರೆಲ್ಲಿ ಪ್ರೀತಿ ಕಳೆದುಕೊಂಡಿದ್ದೇನೆನಿಸುತ್ತೊ ಎಂಬ ಭಯವನ್ನು ಮತ್ತೆ ಅವನ ಕನವರಿಕೆ ಕನಸುಗಳಲ್ಲಿ ಮುಚ್ಚಿ ಹಾಕುತ್ತಾಳೆ. ಪ್ರೀತಿಯಲ್ಲಿರುವ ಭಾವವೇ ಪ್ರೀತಿಸುವವನಿಗಿಂತ ಖುಷಿ ಕೊಡುತ್ತದಾ?
ಕನ್ನಡಿಯ ಮುಂದೆ ನಿಂತಗೆಲ್ಲಾ ಪಕ್ಕದಲ್ಲಿ ಅವನ ಬಿಂಬ ಮೂಡುತ್ತದೆ. ಸುಮ್ಮನೆ ನಾಚಿಕೊಂಡು ನುಲಿಯುತ್ತಾಳೆ. ಬಿಂಬ ಸರಿದು ಅವನೇ ಎದುರು ಬಂದಾಗ ನಾಚಿಕೆಯ ನೆರಳೂ ಅವನಿಗೆ ಕಾಣದಂತೆ ಮುಚ್ಚಿಟ್ಟು ಅವನ ಕಣ್ಣುಗಳನ್ನು ತಡಕುತ್ತಾಳೆ. ಅವು ಸುಮ್ಮನೆ ಬಡಿದರೂ ತನ್ನೊಡನೆ ಮಾತನಾಡಿದವು ಎಂದು ಭ್ರಮಿಸಿ ತೇಲುವ ಸುಖ ಇದೆಯಲ್ಲಾ ... ಖುಷಿಗೆ ಅವನು ಕಾರಣ ಕೇಳಿದರೆ ಮಾತು ತೇಲಿಸುತ್ತಾಳೆ. ತೇಲುವ ಮಾತುಗಳ ನೌಕೆ ಅವನಲ್ಲೂ ಅಲೆ ಎಬ್ಬಿಸುತ್ತವೆಯೇನೋ, ಹಾಗೆನಿಸುತ್ತದೆ ಆಕೆಗೆ. ಪ್ರೀತಿಯಲ್ಲಿರುವುದರಿಂದಲೇ ಈ ಮಾದಕ ಭ್ರಾಮಕ ಲೋಕ ತನ್ನದಾಗಿದೆ ಎಂಬ ಸತ್ಯ ಅವನೂ ಪ್ರೀತಿಸುತ್ತಿದ್ದಾನೆ ಎಂಬ ಸುಳ್ಳೂ ಆಗಿರಬಹುದಾದ ವಿಷಯವನ್ನೇ ಸುಲಭವಾಗಿ ನಂಬುವಂತೆ ಮಾಡುತ್ತದೆ. ಕೇಳಿ ಕ್ರಾಸ್ ಚೆಕ್ ಮಾಡಿದರೆಲ್ಲಿ ಗುಳ್ಳೆಯಂತೆ ತಾನು ಕಟ್ಟಿದ ಲೋಕ ಒಡೆದುಬಿಡುವುದೋ ಎಂಬ ಭಯವೇ ಆ ಮೂರು ಪದಗಳನ್ನು ಅವಳ ನಾಲಿಗೆಯ ನೆನಪಿನಿಂದ ಮರೆಸಿ ಹಾಕಿರುವುದು.
ಈ ಪ್ರೀತಿಯ ಲೋಕದ ಸೃಷ್ಟಿಯಲ್ಲಿ ಮಳೆ ಬಂದರೆ ಆತ ಕೊಡೆಯಾಗುತ್ತಾನೆ. ಇವಳ ಕಣ್ಣೀರು ನೆಲ ತಾಕುವ ಮೊದಲೇ ಅವನದನ್ನು ಒರೆಸಿ ನಗು ಅರಳಿಸಿರುತ್ತಾನೆ. ಇವಳು ಸು ಎನ್ನುವುದರೊಳಗೆ ಸುಖದ ಸುಪ್ಪತ್ತಿಗೆ ಎದುರು ಬಂದು ಬಿದ್ದಿರುತ್ತದೆ. ಕಣ್ಣಿನಲ್ಲಿ ಅಂದಿದ್ದನ್ನು ಓದಿ ಬಿಡುವ ಚತುರ, ಸದಾ ಇವಳ ಸಂಗ ಬಯಸುವ ಕೃಷ್ಣನಷ್ಟು ರಸಿಕನಾದ ರಾಮ, ಇವಳ ಮುಂದೆ ಪರ ಹುಡುಗಿಯರು ನೀರಸ ಎಂದು ಭರವಸೆಯ ಮಾತುಗಳನ್ನಾಡುವ ಹುಡುಗ...ಹೇಳಿಬಿಟ್ಟರೆ ತಾನು ಪ್ರೀತಿಸುವ ಜೊತೆಗೆ ಈ ಪ್ರೀತಿಸಲ್ಪಡುವ ಸುಖ ಇಷ್ಟು ಆಳವಾಗಿ, ತಾ ಬಯಸಿದಂತೆ ಸಿಗುವುದೇ? ಒಂದು ವೇಳೆ ತನ್ನ ಪ್ರೀತಿ ಏಕ ಮುಖ ಪ್ರವಾಹ ಎಂದಾದರೆ ತಾನದನ್ನು ಸಹಿಸಬಲ್ಲೆನೇ?
ಆತ ಮತ್ತೆ ಮತ್ತೆ ಸಿಗುತ್ತಾನೆ ... ಇವಳು ಹರಟುತ್ತಾಳೆ ... ಅವನು ಕೇಳಿಸಿಕೊಳ್ಳುತ್ತಾನೆ.. ಅವಳು ಹೇಳದ್ದು?
- ರೇಶ್ಮಾ ರಾವ್ ಸೊನ್ಲೆ
5.2.14
ಶಾಲೆಗೆ ಹಾಜರ್ ರಿಸಲ್ಟ್ ಬಂಪರ್
First Published: 06 Feb 2014 02:00:00 AM IST
ಲೆಕ್ಕದಿ ದಾಖಲೆ ಬರೆದ ಸೊನ್ಲೆ
'ನಿಮ್ಗೆ ಯಾವೂರಾಯ್ತು?'
'ಸೊನ್ಲೆ'
'ಸೊನ್ಲೆನಾ? ಏನ್ರೀ ನಿಮ್ಮೂರ್ ಹೈಸ್ಕೂಲು?! ಈ ವರ್ಷದ್ ಬ್ಯಾಚ್ ಹೆಂಗಿದೆಯಂತೆ?'
'ಬ್ಯಾಚ್ ಹೆಂಗಿದ್ರೂ ತಯಾರ್ ಮಾಡ್‌ಬಿಡ್ತಾರೆ ಸಾರ್ ನಮ್ ಮೇಷ್ಟ್ರುಗಳು. ಈ ವರ್ಷನೂ 100ರ್ ಗ್ಯಾರಂಟಿ.'
- ಹೌದು, ಹೀಗೆ ಸರ್ಕಾರಿ ಶಾಲೆಯೊಂದರಿಂದ ಊರೊಂದು ಗುರುತಿಸಿಕೊಂಡು ಊರಿನವರಿಗೆ ಹೆಮ್ಮೆ ತರುತ್ತಿರುವುದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸೊನಲೆಯಲ್ಲಿ. ಈ ಭಾಗದಲ್ಲಿ ಯಾರ ಬಳಿಯೇ ಸೊನಲೆ ಹೆಸರೆತ್ತಿದರೂ ಶಾಲೆಯ ಪ್ರಸ್ತಾಪವಿಲ್ಲದೆ ಮಾತು ಮುಗಿಯುವುದೇ ಇಲ್ಲ. ಇಲ್ಲಿನ ಸರ್ಕಾರಿ ಪ್ರೌಢಶಾಲೆ 5 ಬಾರಿ ಸತತವಾಗಿ ಸೇರಿದಂತೆ ಕಳೆದ 9 ವರ್ಷಗಳಲ್ಲಿ 7 ಬಾರಿ 100 ಶೇ. ಫಲಿತಾಂಶ ಕೊಟ್ಟಿದ್ದು ರಾಜ್ಯದ ಮಟ್ಟಿಗೆ ಒಂದು ದಾಖಲೆಯೇ ಸರಿ. ಎರಡು ಬಾರಿ ತಪ್ಪಿದಾಗಲೂ 90ರಿಂದ ನೂರು ವಿದ್ಯಾರ್ಥಿಗಳಿರುವ ಎಸ್ಸೆಸ್ಸೆಲ್ಸಿ ತರಗತಿಯಲ್ಲಿ ಒಬ್ಬರೋ ಇಬ್ಬರೋ ಒಂದು ವಿಷಯದಲ್ಲಿ ನಪಾಸಾಗಿದ್ದು ಇಲ್ಲಿನ ಶಿಕ್ಷಕರ ಮನಸ್ಸಿನಲ್ಲಿ ಸದಾ ಕೊರೆವ ವಿಷಾದ.
ಸೊನಲೆ ಒಂದು ಪುಟ್ಟ ಗ್ರಾಮ. ಬಹುತೇಕ ರೈತರೇ ವಾಸವಾಗಿರುವ ಈ ಭಾಗದಲ್ಲಿ ಮಕ್ಕಳನ್ನು ಶಿಕ್ಷಣದತ್ತ ಪ್ರೇರೇಪಿಸುವ ಕೆಲಸ ಒಂದು ಸವಾಲೇ ಸರಿ. ಅಂಥ ಸವಾಲಿಗೆ ಎದೆಯೊಡ್ಡಿದವರು ಸೊನಲೆ ಪ್ರೌಢಶಾಲೆಯ ಶಿಕ್ಷಕರು. ಹೌದು, ಇವರೆಲ್ಲರಲ್ಲೂ ಕನಸಿದೆ. ಇವರ ಪ್ರತಿ ಮಾತಿನಲ್ಲೂ ಅದು ಇಣುಕುತ್ತದೆ. ಆ ಕನಸಿನಲ್ಲಿ ಮಕ್ಕಳ ಉನ್ನತ ಭವಿಷ್ಯವಿದೆ. ಇಂಥಹ ಉತ್ಸಾಹಿ ಸಮಾನ ಮನಸ್ಕ ಶಿಕ್ಷಕರು ಒಂದೆಡೆಯೇ ಒಟ್ಟಾದ ಮೇಲೆ ಅದರ ಫಲ ಮಕ್ಕಳು ಹಾಗೂ ಸಮುದಾಯಕ್ಕೆ ಸಿಕ್ಕೇಸಿಗುತ್ತದೆ.
ಸರ್ಕಾರಿ ಕೆಲಸ, ಏನೋ 10ರಿಂದ 5ರವರೆಗೆ ಪಾಠ ಮಾಡಿ ಮನೆಗೆ ಹೋದರಾಯಿತು ಎಂಬ ಉದಾಸೀನ ಧೋರಣೆ ಹುಡುಕಿದರೂ ಸಿಗುವುದಿಲ್ಲ. ಸುತ್ತಲ ಹತ್ತಾರು ಹಳ್ಳಿಗಳ ಮನೆಮನೆಗೆ ಹೋಗಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ತಿಳಿವಳಿಕೆ ನೀಡುತ್ತಾರೆ. ಮನೆಯಲ್ಲಿ ಕರೆಂಟ್ ಇಲ್ಲ, ಅಪ್ಪ ಕೆಲಸ ಹೇಳಿದರು ಎಂಬ ನೆಪ ನಡೆಯುವುದಿಲ್ಲ. ಏಕೆಂದರೆ ಪಾಠ ಮುಗಿದ ಮೇಲೆ ಪ್ರತಿ ರಾತ್ರಿ ಊರಿನ ಹುಡುಗರು ಶಾಲೆಯಲ್ಲೇ ಇದ್ದು ಓದಬೇಕು. ಶಿಕ್ಷಕರು ಮೇಲ್ವಿಚಾರಣೆ ನಡೆಸುತ್ತಾರೆ. ಈ ನಿಯಮ ಹುಡುಗಿಯರಿಗಿಲ್ಲ. ಆದರೆ ಅವರು ಪ್ರತಿ ರಾತ್ರಿ ತಾವು ಮಲಗುವ ಮೊದಲು (ಕನಿಷ್ಠ ಪಕ್ಷ10.30ಕ್ಕೆ) ಶಿಕ್ಷಕರಿಗೆ ಮಿಸ್‌ಕಾಲ್ ಕೊಟ್ಟು ತಾವು ಇನ್ನೂ ಓದುತ್ತಿರುವುದನ್ನು ಸೂಚಿಸಬೇಕು. ಬೆಳಿಗ್ಗೆ 5 ಗಂಟೆಗೆ ಮತ್ತೊಮ್ಮೆ ಮಿಸ್‌ಕಾಲ್ ಕೊಡಬೇಕು. ಮಿಸ್‌ಕಾಲ್ ಕೊಟ್ಟು ಮತ್ತೆ ಮಲಗುವಂತಿಲ್ಲ. ಯಾವುದೇ ಸಮಯದಲ್ಲಿ ಬೇಕಾದರೂ ಶಿಕ್ಷಕರು ಕರೆ ಮಾಡಿ ಏನು ಓದಿದರೆಂದು ವಿಚಾರಿಸಬಹುದು. ರಜಾ ದಿನಗಳಲ್ಲಿ ಮಕ್ಕಳ ಮನೆಗಳಿಗೆ ಸರ್ಪ್ರೈಸ್ ಭೇಟಿ ನೀಡುತ್ತಾರೆ. ಶಾಲೆಯಲ್ಲಿ ಹಿಂದಿನ ದಿನ ಓದಿದ ಪಠ್ಯದ ಪ್ರಶ್ನೋತ್ತರ ಸಮಯವೂ ಇರುತ್ತದೆ.ಹಳೆಯ ವಿದ್ಯಾರ್ಥಿಯೊಬ್ಬ ತಾನು ಶಾಲೆಯಲ್ಲಿ ಪಡೆದ ಗಟ್ಟಿ ತಳಪಾಯದಿಂದ ವಾಲಿಬಾಲ್‌ನಲ್ಲಿ ರಾಷ್ಟ್ರೀಯ ಕ್ರೀಡಾ ಶಾಲೆಗೂ ಆಯ್ಕೆಯಾಗಿದ್ದಾನೆ. ಶಾಲೆಯ ಸುತ್ತಲೂ ಮಕ್ಕಳ ಶ್ರಮದಾನದ ಫಲವಾಗಿ ತರಕಾರಿ, ಹೂವಿನ ತೋಟ ಉದ್ಯಾನವನವಾಗಿ ಅರಳಿ ನಿಂತು ಪರಿಸರವನ್ನು ಹಸಿರಾಗಿಸಿದೆ.
ಸಭಾಭವನ ಬೇಕಿದೆ...ಇದುವರೆಗೂ ಶಾಲೆಗೆ ಜಿಪಂ, ತಾಪಂ, ಗ್ರಾಪಂನಿಂದ ಬಂದ ಅನುದಾನ ಹಾಗೂ ದಾನಿಗಳ ನೆರವಿನಿಂದ ಬಂದ ಒಂದೊಂದು ಪೈಸೆಯೂ ಶಾಲೆಗೆ ಉತ್ತಮ ಕಟ್ಟಡ, ಕಾಂಪೌಂಡ್, ಆಟದ ಮೈದಾನ, ಕುಡಿವ ನೀರಿನ ಟ್ಯಾಂಕ್ ಹಾಗೂ ಶೌಚಾಲಯ ನಿರ್ಮಾಣಕ್ಕೆ ಸದ್ವಿನಿಯೋಗವಾಗಿದೆ. ಇಲ್ಲಿನ ಗ್ರಾಮ ಪಂಚಾಯ್ತಿಯಂತೂ ಶಾಲೆಯ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ್ದಿಲ್ಲ. ಹಾಗಂತ ಅನವಶ್ಯಕ ಹಸ್ತಕ್ಷೇಪವೂ ಇಲ್ಲ. ಎಸ್‌ಡಿಎಂಸಿ ಸದಸ್ಯರು ಕೂಡಾ ವಿಶೇಷ ಆಸಕ್ತಿಯಿಂದ ಶಾಲೆಗೆ ವಿದ್ಯಾರ್ಥಿಗಳಷ್ಟೇ ಹಾಜರಿ ನೀಡುತ್ತಾರೆ. ಆದರೆ ಶಿಕ್ಷಕರ ಒಂದೇ ಕೊರಗೆಂದರೆ 280 ಮಕ್ಕಳಿರುವ ಶಾಲೆಯಲ್ಲಿ ಬಿಸಿಯೂಟ ಬಡಿಸಲು ಸರಿಯಾದ ಸ್ಥಳಾವಕಾಶವಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ರಂಗ ಮಂದಿರವಿಲ್ಲ. ಮಳೆಗಾಲದಲ್ಲಂತೂ ಮಕ್ಕಳು ಪ್ರಾರ್ಥನೆಗೆ ನಿಲ್ಲಲು, ಊಟ ಮಾಡಲು ಒಂದು ಸಭಾಭವನದ ಕೊರತೆ ಕಾಡುತ್ತಿದೆ. ಈಗಾಗಲೇ ಜಿಪಂನಿಂದ ಬಂದ ಅನುದಾನ ಹಾಗೂ ಉತ್ತಮ ಶಾಲೆ ಎಂದು ಗೋವಿಂದೇಗೌಡ ಪ್ರಶಸ್ತಿ ಲಭಿಸಿದ್ದಾಗಿ ಸಿಕ್ಕ ಹಣವನ್ನೂ ಸೇರಿಸಿ ಸಭಾಭವನಕ್ಕೆ ತಳಪಾಯ ಹಾಕಲಾಗಿದೆ. ಆದರೆ 500 ಮಂದಿ ಕೂರುವಂಥ ಸಭಾಭವನದ ಅಂದಾಜು ವೆಚ್ಚ ಸುಮಾರು 20 ಲಕ್ಷಗಳು. ಉನ್ನತ ಸ್ಥಾನ ತಲುಪಿರುವ ಶಾಲೆಯ ಹಳೆ ವಿದ್ಯಾರ್ಥಿಗಳು, ಶಿಕ್ಷಣ ಪ್ರೋತ್ಸಾಹಕರು, ದಾನಿಗಳು ಮನಸ್ಸು ಮಾಡಿದರೆ ಇದೇನು ದೊಡ್ಡ ಮೊತ್ತವಲ್ಲ. ಉತ್ಸಾಹಿ ಶಿಕ್ಷಕರ ನಿಸ್ವಾರ್ಥ ಕನಸು ಹಳ್ಳಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ, ಭವಿಷ್ಯಕ್ಕೆ ನಾಂದಿ ಹಾಡುವುದಾದರೆ ಅದಕ್ಕೆ ಕೈ ಜೋಡಿಸುವಷ್ಟು ಹೊಣೆ ನಮ್ಮದೂ ಆಗಲಿ ಅಲ್ಲವೇ?
ದೇಣಿಗೆ ನೀಡುವವರು ನೇರವಾಗಿ ಶಾಲೆಯ ಖಾತೆ ಸಂಖ್ಯೆ 10826100003057(ಐಎಫ್‌ಎಸ್‌ಸಿ ಕೋಡ್- ಸಿಎನ್‌ಆರ್‌ಬಿ000ಪಿಜಿಬಿ1) ಪ್ರಗತಿ ಗ್ರಾಮೀಣ ಬ್ಯಾಂಕ್, ಸೊನಲೆ, ಹೊಸನಗರ ತಾಲೂಕು ಇಲ್ಲಿಗೆ ಜಮಾ ಮಾಡಬಹುದು. ರಶೀದಿಯನ್ನು ತಮ್ಮ ವಿಳಾಸಕ್ಕೆ ಕಳಿಸಕೊಡಲಾಗುವುದು. ಮಾಹಿತಿಗೆ ಸೋಮಶೇಖರ್ ಬಿ.ಪಿ. (9448885142) ಸಂಪರ್ಕಿಸಬಹುದು.
ನಮ್ಮದೊಂದು ಕನಸಿದೆ, ಶಾಲೆಯನ್ನು ನವೋದಯ ಮಾದರಿ ಮಾಡಬೇಕೆಂದು. ಸದ್ಯ ಸಭಾಭವನವೊಂದು ನಿರ್ಮಾಣವಾದರೆ ಮಕ್ಕಳಿಗೆ ಬಿಸಿಯೂಟ ಮಾಡಲು, ಮಳೆಗಾಲದಲ್ಲಿ ಪ್ರಾರ್ಥನೆಗೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು, ಪರೀಕ್ಷೆ ಸಮಯದಲ್ಲಿ ರಾತ್ರಿವರೆಗೂ ಕುಳಿತು ಓದಲು ಅನುಕೂಲವಾಗುತ್ತದೆ. ಇದಕ್ಕಾಗಿ ದೇಣಿಗೆ ಎತ್ತುವ ಚಿಂತನೆ ನಡೆಸಿದ್ದೇವೆ.
- ಪ್ರವೀಣ್‌ಕುಮಾರ್, ಮುಖ್ಯಶಿಕ್ಷಕ.
-ರೇಶ್ಮಾ ರಾವ್ ಸೊನ್ಲೆ
30.1.14
ಮರೆವು ಮರೆಸಿ
First Published: 27 Jan 2014 02:00:00 AM IST
ಬೊಚ್ಚು ಬಾಯಿಯ ನನ್ನಜ್ಜಿ ನಕ್ಕರೆ ಪುಟ್ಟ ಪಾಪಚ್ಚಿಯೊಂದು ನಕ್ಕಂತೆಯೇ ಕಾಣುತ್ತಾಳೆ. ಅವಳ ನಗು ಅಷ್ಟೇ ನಿಷ್ಕಲ್ಮಶ ಕೂಡಾ. ಅನುಭವದ ಖಜಾನೆಯಿಂದ ಅಪ್ಪಅಮ್ಮನಿಗೆ ಆಪತ್ಕಾಲದಲ್ಲಿ ಉತ್ತಮ ಸಲಹೆ ನೀಡುವ, ಮೊಮ್ಮಕ್ಕಳನ್ನು ಕೂರಿಸಿಕೊಂಡು ಕತೆ ಹೇಳುವ, ತನ್ನ ಬಾಲ್ಯದ ನೆನಪುಗಳ ಬಿಚ್ಚಿ ಜೀವನಪಾಠ ಹೇಳುವ ಈ ಮುದ್ದಿನ ಸುಬ್ಬಮ್ಮ ನಮ್ಮೆಲ್ಲರನ್ನೂ ದಿಗಿಲುಗೊಳಿಸತೊಡಗಿದ್ದು ಇತ್ತೀಚೆಗೆ ಏನೋ ಹೇಳಲು ಬಂದು ಏಕೆ ಬಂದೆನೆಂದೇ ನೆನಪಾಗದೇ ತಡಕಾಡತೊಡಗಿದಾಗ, ತಾನು ನಿತ್ಯ ಅದೇ ಮರದ ಕಪಾಟಿನ ಮೂರನೇ ಡಬ್ಬಿಯಲ್ಲಿಡುವ ಮಾತ್ರೆಗಳಿಗಾಗಿ ಮನೆಯೆಲ್ಲಾ ಹುಡುಕಾಡತೊಡಗಿದಾಗ. ಹೊರಗೆ ಸುತ್ತಲು ಹೋದ ಅಜ್ಜಿ ಎಷ್ಟು ಹೊತ್ತಾದರೂ ಬರದಿದ್ದುದನ್ನು ಕಂಡು ಅಪ್ಪ ಹುಡುಕಹೋದರೆ ಮನೆ ದಾರಿ ತಿಳಿಯದೆ ಮಧ್ಯರಸ್ತೆಯಲ್ಲಿ ತಡವರಿಸುತ್ತಾ ನಿಂತಿದ್ದ ಅಜ್ಜಿಯನ್ನು ಕಂಡಾಗ.ಅಜ್ಜಿಗೆ ಈ ಪರಿ ಮರೆವು ಆವರಿಸುತ್ತಿದ್ದುದನ್ನು ನೋಡಿ ಅಪ್ಪ ಅಮ್ಮ ಚಿಂತಿಸತೊಡಗಿದರೆ ನನ್ನ ಮನಸ್ಸು ಮಾತ್ರ ಮರೆವಿಗೆ ಕಾರಣ ಹುಡುಕುತ್ತಿತ್ತು. ಓದಿದ್ದನ್ನು ಥಳಕು ಹಾಕಿಕೊಂಡ ನನ್ನ ಕಲ್ಪನೆ ಅಜ್ಜಿಯ ಮೆದುಳನ್ನು ಪೋಸ್ಟ್‌ಮಾರ್ಟಂ ಮಾಡುತ್ತಿತ್ತು. ಅಜ್ಜಿಯ ಮೆದುಳಿನ ಹಿಪ್ಪೋಕ್ಯಾಂಪಸ್‌ನಲ್ಲಿ ಕೋಶಗಳು ನಶಿಸತೊಡಗಿದ್ದವು. ಗ್ರೇ ಮ್ಯಾಟರ್(ಮೆದುಳಿನ ಬೂದು ಬಣ್ಣದ ಭಾಗ) ಕಡಿಮೆಯಾಗಿ ಮೆದುಳಿನ ಬಣ್ಣವೇ ಬದಲಾದಂತೆ ಕಂಡಿತು. ಇವೆಲ್ಲಕ್ಕೂ ಅಜ್ಜಿಗೆ ವಯಸ್ಸಾದದ್ದೇ ಕಾರಣ, ವಯಸ್ಸಾದಂತೆಲ್ಲ ಕೋಶಗಳು ಆಹಾರದಲ್ಲಿನ ಸತ್ವಗಳನ್ನು ಹೀರಿಕೊಳ್ಳುವುದು ನಿಧಾನಗತಿಯಾಗುತ್ತದೆ ಎಂಬುದನ್ನು ಕೂಡಾ ಮೈಕ್ರೋಸ್ಕೋಪ್‌ನಲ್ಲಿ ನೋಡಿದಂತೆ ಕಲ್ಪಿಸಿಕೊಂಡೆ. ಆದರೂ ಇದು ವಯೋಸಹಜ ಬಂದ ಮರೆವೋ ಅಥವಾ ಅಜ್ಜಿಗೆ ಅಲ್ಜೀಮರ್ಸ್ ಬರುತ್ತಿದೆಯೇ ಎಂಬ ಸಂಶಯ ತಲೆ ತಿನ್ನತೊಡಗಿತು.ಅಂತರ್ಜಾಲದಲ್ಲಿ ತಡಕಾಡಿದೆ. ಅಜ್ಜಿ ಏನೇ ಮರೆತರೂ ಮೊದಲಿನಿಂದ ಮಾಡಿಕೊಂಡು ಬಂದ ನಿತ್ಯದ ಕಾರ್ಯಗಳಾದ ಊಟ, ಸ್ನಾನ, ಪೂಜೆಗಳನ್ನು ಮಾಡುತ್ತಿದ್ದುದರಿಂದ ಇದು ಅಲ್ಜೀಮರ್ಸ್ ಅಲ್ಲ ಎಂದುಕೊಂಡೆ. ಅಲ್ಲದೆ ತನಗೇನು ಮರೆತುಹೋಗುತ್ತದೆ ಎಂದು ಕೇಳಿದರೆ ಅಜ್ಜಿ 'ಈ ಮಾತ್ರೆ ಒಂದ್ ಎಲ್ ಇಡ್ತೀನೇನ ಮಾರಾಯ್ತಿ, ಹಾಳು ಮರೆವು, ನೆನ್ಪೇ ಆಗಲ್ಲ', 'ಒಂದ್ ದಿನ ಬಿಡ್ದೆ ಕುಂಕುಮಭಾಗ್ಯ ಧಾರಾವಾಹಿ ನೋಡ್ತೀನಿ. ಸರಸ್ವತಿ ಕೇಳ್ದಾಗ ಧಾರವಾಹಿ ಹೆಸ್ರೇ ಬರ್‌ಬಾರ್ದನೇ ಬಾಯಿಗೆ', 'ಹೊರಗೆ ಯಾರನ್ನಾದರೂ ನೋಡಿ ಮಾತಾಡ್ಕಂಡು ಬಂದಿರ್ತೀನಿ. ಯಾರು ಅಂತನೇ ನೆನ್ಪಾಗಲ್ಲ' ಎನ್ನುತ್ತಿದ್ದಳು. ಡಿಮೆನ್ಷಿಯಾ, ಅಲ್ಜೀಮರ್ಸ್ ಇದ್ದಿದ್ದರೆ ತನಗೇನು ಮರೆತುಹೋಗುತ್ತದೆ ಎಂಬುದನ್ನೂ ಅವಳಿಂದ ಹೇಳಲಾಗುತ್ತಿರಲಿಲ್ಲ, ಸಂಬಂಧಗಳನ್ನೂ ಗುರುತಿಸಲಾಗುತ್ತಿರಲಿಲ್ಲ ಎಂದು ಸಮಾಧಾನ ತಂದುಕೊಂಡೆ.ಅಜ್ಜಿಯ ಮರೆವು ಹೋಗಿಸಲು ಏನಾದರೂ ಮಾಡಲೇಬೇಕೆನಿಸಿತ್ತು. ಏಕೆಂದರೆ ನಾಳೆ ನನ್ನ ಹೆಸರು ಏನೆಂದು ಕೇಳಿದರೆ ನನಗದನ್ನು ಸಹಿಸಲಾಗುತ್ತಿರಲಿಲ್ಲ. ಯಥಾಪ್ರಕಾರ ಎಲ್ಲ ಬಲ್ಲವ ಅಂತರ್ಜಾಲನೆಂಬ ಪುಣ್ಯಾತ್ಮ ಇದ್ದ. ವಾರಕ್ಕೆ ಕನಿಷ್ಠ 6- 9 ಕಿ.ಮೀ. ನಡೆವವರ ಮೆದುಳಿನಲ್ಲಿ ಗ್ರೇ ಮ್ಯಾಟರ್ ಹೆಚ್ಚಾಗುತ್ತದೆ, ಮೆದುಳು ಚುರುಕಾಗುತ್ತದೆ ಎಂದ. ಅಜ್ಜಿಯನ್ನು ಪ್ರತಿದಿನ 2 ಕಿ.ಮೀ. ವಾಕಿಂಗ್ ಕರೆದೊಯ್ಯತೊಡಗಿದೆ. ಅಜ್ಜಿಯೊಂದಿಗೆ ಕುಳಿತು ಸುಡೊಕು, ಪದಬಂಧ ಬಿಡಿಸುವುದು, ಒಗಟು ಕೇಳುವುದು, ವಸ್ತು ಮುಚ್ಚಿಟ್ಟು ಹುಡುಕಲು ಹೇಳುವುದು - ಹೀಗೆ ಮೆದುಳಿಗೆ ಕೆಲಸ ಕೊಡುವ ಹಲವಾರು ಆಟವಾಡಿದೆ. ವಿಟಮಿನ್ ಬಿ12 ಹೆಚ್ಚಿರುವ ಹಾಲು, ಮೊಟ್ಟೆ, ಇತರೆ ಆಹಾರಗಳನ್ನು ಹೆಚ್ಚು ಹೆಚ್ಚು ತಯಾರಿಸಲು ಅಮ್ಮನಿಗೆ ಹೇಳಿದೆ. ಏನೇ ನಿಂದು ಅಜ್ಜಿ ಮೇಲೆ ಪ್ರಯೋಗ ಎಂದಳು. ಪ್ರಯೋಗವಲ್ಲವ್ಮು, ಆಹಾರ, ವ್ಯಾಯಾಮ ಹೇಗೆ ದೈಹಿಕ ಆರೋಗ್ಯವನ್ನು ಫಿಟ್ ಆಗಿ ಇಡುತ್ತದೋ, ಹಾಗೇ ಮಾನಸಿಕ ಆರೋಗ್ಯವನ್ನೂ ಚುರುಕಾಗಿಡುತ್ತವೆ. ವಯಸ್ಸಾದ ಮೇಲೂ ಕೋಶಗಳು ಹುಟ್ಟುತ್ತವೆ, ಸ್ವಲ್ಪ ಹಟ ಮಾಡಬೇಕಷ್ಟೇ. ನೋಡ್ತಿರು ಅಜ್ಜಿಗೆ ಮರೆವೆಂದರೇನೆಂದೇ ಮರೆತು ಹೋಗುತ್ತದೆ ಎಂದು ಭಾಷಣ ಬಿಗಿದೆ. ಅದೊಂದು ದಿನ ಅವನ ಕೈ ಹಿಡಿದು ಪಾರ್ಕ್‌ನಲ್ಲಿ ಬರುವಾಗ ವಾಕಿಂಗ್‌ಗೆ ಬಂದ ಅಜ್ಜಿ ನೋಡೇಬಿಟ್ಟಳು. ಎದೆ ಧಸಕ್ ಎಂದಿತು. ಅಲ್ಲಿಂದ ಬಿರಬಿರನೆ ನಡೆದು ತಪ್ಪಿಸಿಕೊಂಡು ಹೇಗಪ್ಪಾ ಮನೆಗೆ ಹೋಗುವುದು, ಅಲ್ಲೇನು ರಣರಂಗವೇ ಕಾದಿದೆಯೋ ಎಂದು ಭಯ ಪಡುತ್ತಾ ಕಳ್ಳಬೆಕ್ಕಿನಂತೆ ಹೆಜ್ಜೆ ಹಾಕಿದೆ. ಅಪ್ಪ ಅಮ್ಮ ಎಲ್ಲರೂ ನಿತ್ಯದಂತೇ ಮಾತನಾಡುತ್ತಿದ್ದಾರೆ, ಅಜ್ಜಿಯು ಕೂಡಾ!ಉಸ್ಸಪ್ಪಾ ಅಜ್ಜಿಗೆ ವಿಷಯ ಮರೆತುಹೋಗಿದೆ ಎಂಬ ಸಂಭ್ರಮ ಉಕ್ಕಿ ಅಜ್ಜಿಯ ಮರೆವಿಗೂ, ಅಜ್ಜಿಗೂ ಸೇರಿ ಎರಡು ಮುತ್ತು ಕೊಟ್ಟೆ. 'ಹುಡುಗ ಚೆಂದ ಇದಾನೇ ಪುಟ್ಟಕ್ಕ' ಎನ್ನುತ್ತಾ ಕಿವಿ ಹಿಂಡಿದಳು. ಅಜ್ಜಿಯ ಮೆದುಳಲ್ಲಿ ನೆನಪುಗಳನ್ನು ಮುದ್ರಿಸಿಕೊಳ್ಳುತ್ತಾ ಕುಳಿತ ಹಿಪ್ಪೋಕ್ಯಾಂಪಸ್ ಕಣ್ಣ ಮುಂದೆ ಸುಳಿಯಿತು.
( ಕನ್ನಡಪ್ರಭದಲ್ಲಿ ಪ್ರಕಟ )
31.12.13
ಖಾಲಿ ಮನದಲ್ಲಿ ಮಗುಚಿದ ಕ್ಯಾಲೆಂಡರ್
First Published: 31 Dec 2013
ನನ್ನ ಆತ್ಮಸಾಕ್ಷಿ ನನ್ನ ತಲೆಗೆರಡು ಮೊಟಕಿ ಅವರಿದ್ದಲ್ಲಿಗೆ ನಡೆದೇ ಬಿಟ್ಟಿತ್ತು. ತಗ್ಗಿಸಿದ ತಲೆ ಎತ್ತಲಾಗಲಿಲ್ಲ. ಯಾವಾಗಲೂ ಹೀಗೆ. ಅವರು ಕಂಡರೆ ಸಾಕು, ನನ್ನಾತ್ಮಸಾಕ್ಷಿಯೇ ರೂಪವೆತ್ತಿ ಬಂದಂತೆ. ಪಾಪಪ್ರಜ್ಞೆ ಕಾಲು ನೀವಿಕೊಳ್ಳುತ್ತಾ ಎದುರು ಬಂದು ಕುಳಿತುಬಿಡುತ್ತದೆ. ತಪ್ಪಿತಸ್ಥ ಕಂಗಳು ದೃಷ್ಟಿ ತಪ್ಪಿಸುತ್ತವೆ.
ಆಗಬೇಕಾದ್ದೇ. ಅವರ ನಿರೀಕ್ಷೆಗಳಿಗೆ ತಣ್ಣೀರೆರಚಿ ನನ್ನ ಮುಖಕ್ಕೆ ಮಸಿ ಬಳಿದು ಕುಳಿತುಕೊಂಡಿದ್ದು ತಪ್ಪಲ್ಲವೇ? ಆದರೆ ಅವರ ಆ ಬೆಟ್ಟದಷ್ಟು ಪ್ರೀತಿಯನ್ನೂ, ಅದರ ಮೈದಡವಿಕೊಂಡು ಭೋರ್ಗರೆವ ನಿರೀಕ್ಷೆಯ ಭಾರವನ್ನೂ ಹೊರುವ ಶಕ್ತಿ ನನ್ನಲ್ಲಿತ್ತೇ? ಬರೆಯಲಾಗದ ನೋವು ಬದುಕು ಬರಡಾಗಿಸಿದೆ.
ಖಿನ್ನತೆಯ ಮೆಟ್ಟಿಲುಗಳು ಇವತ್ತು ಹತ್ತಿಸಿದರೆ ನಾಳೆ ಇಳಿಸುತ್ತವೆ. ಜೀವಕ್ಕೆ ಅಂಟಿಕೊಂಡೇ ಸಾಗುವ ಈ ವಿಚಿತ್ರ ಬರಡುಭಾವ ಎಂಥ ಬಿಸಿಲಿಗೂ, ಹೊಡೆದು ಬೀಸುವ ಗಾಳಿಗೂ ಬತ್ತುತ್ತಿಲ್ಲವೇಕೆ? ಪ್ರೀತಿಯ ಗೊಂದಲ, ಮನಸ್ಸು ಸದಾ ಚಂಚಲ, ಈ ನಡುವೆ ಸುಖಾಸುಮ್ಮನೆ ಭೀತಿಯೂ ಆವರಿಸಿಕೊಂಡಿದೆ. ಮನದ ಹಿಡಿತ ನನ್ನ ಬಿಗಿತದಿಂದ ನುಣುಚಿಕೊಂಡಿದೆ. ಆತ್ಮವಿಲ್ಲದ ದೇಹ, ಮನಸ್ಸಿಲ್ಲದ ಹೃದಯ ಇನ್ನೇನ ಬರೆದೀತು? ಚೈತನ್ಯದೊರತೆ ಎಲ್ಲಿದೆ ಎಂಬುದನ್ನೂ ಸಿಕ್ಕಸಿಕ್ಕಲ್ಲಿ ಹುಡುಕಿ ಸೋತು, ಅಂತರ್ಜಾಲದಲ್ಲಿ ತಡಕಾಡುವ ಹೀನಾಯ ಸ್ಥಿತಿ ಅವರಿಗೆ ಅರ್ಥವಾದೀತೇ?
ಅಕ್ಷರಗಳ ಒತ್ತು ಇಳಿ ಸೂತ್ರಗಳೆಲ್ಲ ಒಡಲು ಬಿರಿದುಕೊಂಡು ಬಿದ್ದಿವೆ. ಇನ್ನವುಗಳನ್ನು ಹೊಲಿದು ಕವನವಾಗಿಸುವ ಕಸುವು ಅದಾವ ನರನಾಡಿಯಲ್ಲಿ ಅಡಗಿ ಕುಳಿತಿದೆಯೋ?! ಇದೆಲ್ಲ ನನ್ನಾತ್ಮಸಾಕ್ಷಿಗೆ ತಿಳಿಯದ್ದೇನಲ್ಲ. ಇದೆಲ್ಲ ಯೋಚಿಸುವಾಗ ಈ ಆತ್ಮಸಾಕ್ಷಿಯನ್ನೇ ಬಡಿದು ಬಗ್ಗಿಸಬೇಕು ಇಲ್ಲವೇ ಸಾಯಿಸಬೇಕೆಂಬಷ್ಟು ಸಿಟ್ಟು ಬರುತ್ತದೆ.
ಆದರೆ ಅದೇ ನನ್ನ ಸಾವೆಂಬ ಪ್ರಜ್ಞೆ ಚೂರೂ ಸಾಂತ್ವನ ಹೇಳದೆ ಅಮಾನವೀಯವಾಗಿ ವರ್ತಿಸುತ್ತದೆ. ಇಷ್ಟಾದರೂ ತಿಳಿಯದವರಂತೆ ಹುಡುಕುತ್ತಾರೆ ನನ್ನ ಅವರು. ಕಸಿವಿಸಿಗೊಂಡು ನಾನೂ ಹುಡುಕುತ್ತೇನೆ ಕಳೆದುಕೊಂಡಿರುವ ನನ್ನನ್ನು. ಸಂಜೆಗಳಿಲ್ಲದ ಊರು ನುಂಗಿಬಿಟ್ಟಿತೇ? ಅಥವಾ ಅವನ ನಿರಾಕರಣೆಯ ಕಹಿಸತ್ಯದೊಂದಿಗೆ ನಾನೂ ಕರಗಿಹೋದೆನೇ? ಜೀವದ ಗೆಳತಿ ಹಾದಿ ಬದಲಿಸುವಾಗ ನನ್ನ ದಾರಿ ತಪ್ಪಿತೇ? ಪ್ರಶ್ನೆಗಳು ಮತ್ತಷ್ಟು ಕೆಣಕುತ್ತವೆ. ನಾನು ಮತ್ತಷ್ಟು ಸೊರಗುತ್ತೇನೆ. ಬೇಡವೆಂದರೂ ಕ್ಯಾಲೆಂಡರ್ ಬದಲಾಗುತ್ತದೆ.-ರೇಶ್ಮಾ ರಾವ್ ಸೊನ್ಲೆ
3.11.13
ಇಳಿ ಪಾಠ!
First Published: 28 Oct 2013 02:00:00 AM IST
ತಿದ್ದಿಕೊಳ್ಳೋಣ ನಾವೂ
ಸಾವು ಅದೆಷ್ಟೊಂದನ್ನು ಕಲಿಸುತ್ತದೆ, ಬದುಕು ಕಲಿಸಲಾಗದಿದ್ದನ್ನೂ! ಆದರೆ ಆ ಕಲಿಕೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಮಯ ನೀಡದೆ ತನ್ನ ಸುಳಿಗೆ ಸೆಳೆದುಕೊಂಡು ಬಿಡುತ್ತದೆ. ಹೀಗೆ ಜ್ಞಾನೋದಯ ಹೊಂದಿದ ಬಿಳಿತಲೆಗಳ ಅನುಭವವನ್ನು ನಾವು ಕಿರಿಯರು ಅನುಭಾವವಾಗಿ ಪರಿಗಣಿಸಿದರೆ ಹಿರಿಯರ ಹಾದಿಯ ಮುಳ್ಳುಗಳು ನಮ್ಮ ದಾರಿಗೆ ಅಡ್ಡ ಬರದಂತೆ ಜತನ ಮಾಡಬಹುದು. ನನಗೂ ಸಾವಿಗೂ ಒಡನಾಟ ಬಹಳ ವರ್ಷಗಳದ್ದು. ಆದರೆ ಅದೂ ಅನುಭಾವವಷ್ಟೇ. ಏಕೆಂದರೆ ನಾನೊಬ್ಬಳು ಜೀವವನ್ನು ಕೈಲಿಡಿದು ಕೊನೆ ದಿನಗಳನ್ನು ಎಣಿಸುವಂಥ ರೋಗಿಗಳನ್ನು ನೋಡಿಕೊಳ್ಳುವ ದಾದಿ. ಅದೆಷ್ಟೋ ಹಿರಿಜೀವಗಳ ಬದುಕಿನ ಕೊನೆ ದಿನಗಳಲ್ಲಿ ಅವರೊಂದಿಗಿದ್ದ ಸಮಾಧಾನವೂ, ಚೇತನಗಳು ಕ್ಷಣಮಾತ್ರದಲ್ಲಿ ನಿಸ್ತೇಜವಾಗುವುದನ್ನು ದಿನಂಪ್ರತಿ ನೋಡಬೇಕಾದ ಅಸಮಾಧಾನವೂ ನನ್ನದು.ಇವರೆಲ್ಲರನ್ನೂ ನೋಡಿದಾಗ ನನಗೆ ನನ್ನ ಪ್ರತಿ ಉಸಿರಿನಲ್ಲೂ ಸಾವಿರುವುದು ಗೋಚರವಾಗುತ್ತದೆ. ಅದು ಯಾವಾಗ ಬೇಕಾದರೂ ನಿಲ್ಲಬಹುದು. ಹಾಗಾಗೇ ನಮ್ಮ ಆಸ್ಪತ್ರೆಯಲ್ಲಿ ಸೇರುವ ಪ್ರತಿ ಹಿರಿಜೀವಕ್ಕೂ ಪ್ರಶ್ನಿಸುತ್ತೇನೆ, ನಿಮ್ಮ ಜೀವನವನ್ನು ಪುನಾರಂಭಿಸುವ ವರ ಸಿಕ್ಕಿದರೆ ಏನು ಬದಲಾವಣೆ ಮಾಡಿಕೊಳ್ಳಬಯಸುತ್ತೀರೆಂದು. ನನ್ನ ಈ ಪ್ರಶ್ನೆಗೆ ಉತ್ತರ ತಡಕುವಾಗ ಜೀವನದಲ್ಲಿ ತಾವು ಮಾಡಿದ ತಪ್ಪುಗಳು ಪಶ್ಚಾತ್ತಾಪಗಳಾಗಿ, ಸಾಧಿಸಲಾರದ ಗುರಿಗಳು ಅತೃಪ್ತವಾಗಿ ಅವರನ್ನು ಕಾಡುತ್ತವೆ. ಮತ್ತು ಅವು ನನಗೆ ಬದುಕಿನ ಪಾಠ ಹೇಳುತ್ತವೆ. ಹೀಗೆ ನನ್ನ ಪ್ರಶ್ನೆಗೆ ಬಂದ ನೂರಾರು ಉತ್ತರಗಳಲ್ಲಿ ಅತ್ಯಂತ ಸಾಮಾನ್ಯವಾಗಿರುವುದನ್ನು ಭಟ್ಟಿ ಇಳಿಸಿದಾಗ ನನ್ನಲ್ಲಿ ಉಳಿದಿದ್ದಿಷ್ಟು;
ಅವರಿವರ ನಿರೀಕ್ಷೆಯನ್ನು ಪೂರೈಸಲು ಹೆಣಗದೆ ನಾನು ನಾನಾಗಿ, ನನಗನ್ನಿಸಿದಂತೆ ಬದುಕಬೇಕಿತ್ತು. ಇದು ಅತ್ಯಂತ ಸಾಮಾನ್ಯ ಪಶ್ಚಾತ್ತಾಪವಾಗಿತ್ತು. ನಮ್ಮ ಬದುಕು ಮುಗಿಯುತ್ತಿದೆ ಎಂದಾಗ ಹಿಂದಿರುಗಿ ನೋಡಿದ ಶೇ.80ರಷ್ಟು ಮಂದಿಯ 50 ಪ್ರತಿಶತ ಕನಸುಗಳೂ ಸಾಕಾರವಾಗಿರಲಿಲ್ಲ. ಮತ್ತು ಇದು ಅವರೇ ಮಾಡಿಕೊಂಡ ಕೆಲವು ಆಯ್ಕೆಗಳು ಇಲ್ಲವೇ ಮಾಡಿಕೊಳ್ಳದ ಆಯ್ಕೆಗಳ ಫಲವಾಗಿತ್ತು. ಅವರಿವರ ನಿರೀಕ್ಷೆಯ ಭಾರಕ್ಕೆ ತಮ್ಮ ಕನಸುಗಳು ಅಪ್ಪಚ್ಚಿಯಾಗಿ ಬಿಟ್ಟಿದ್ದವು. ನಮ್ಮ ಕನಸುಗಳನ್ನು ನಾವು ಪ್ರೀತಿಸದಿದ್ದರೆ, ಅವಕ್ಕೆ ಕನಿಷ್ಠ ಗೌರವ ನೀಡದಿದ್ದರೆ ಇನ್ನಾರು ನೀಡಬೇಕು?
ನಾನು ಅಷ್ಟೊಂದು ಕಷ್ಟ ಪಡುವ ಅವಶ್ಯಕತೆ ಇರಲಿಲ್ಲ. ಹೆಚ್ಚಾಗಿ ಕೆಲಸಕ್ಕೆ ಹೋಗುವ ಎಲ್ಲ ರೋಗಿಗಳದೂ ಇದೇ ಕೊರಗಾಗಿತ್ತು. ಏಕೆಂದರೆ ಅವರು ತಮ್ಮ ಮಗುವಿಗೆ ದಿನಕ್ಕೊಂದು ಐಷಾರಾಮಿ ಬಟ್ಟೆ ತೊಡಿಸುವ ಹುರುಪಿನಲ್ಲಿ ಆ ಮಗುವಿನ ಚೇಷ್ಟೆ, ಅಂಬೆಗಾಲಿಕ್ಕಿ ಬರುವ ಚೆಂದ, ಅದು ಹೇಗೆ ಬೆಳೆದು ದೊಡ್ಡವಾಯಿತೋ ಆ ಸಂತಸವನ್ನು ಕಣ್ತುಂಬಿಕೊಂಡಿರಲಿಲ್ಲ. ಪ್ರತಿ ವಾರ ತಮ್ಮ ಹೆಂಡತಿ ಬಂದು ರಾಗ ಎಳೆದು ಸಿನಿಮಾಗೆ ಹೋಗೋಣವೇ ಎಂದು ಕೇಳಿದಾಗೆಲ್ಲ ಕೆಲಸವಿದೆ, ಮುಂದಿನ ವಾರ ನೋಡೋಣ ಎಂದೇ ಸಾಗ ಹಾಕಿದ್ದರು. ಹೆಂಡತಿಯೊಂದಿಗೆ ಒಂದು ಸಿನಿಮಾವನ್ನೂ ನೋಡಲಾಗದಷ್ಟು ಬ್ಯುಸಿಯಾಗಿ ತಾನು ಹಗಲೂ ರಾತ್ರಿ ದುಡಿದು ಸಾಧಿಸಿದ್ದೇನು ಎಂಬ ಕೊರಗು ಅವರನ್ನು ಕಾಡುತ್ತಿತ್ತು. ಬದುಕನ್ನು ಸರಳಗೊಳಿಸಿಕೊಂಡಿದ್ದರೆ, ಆಯ್ಕೆಗಳನ್ನು ಪ್ರಜ್ಞಾಪೂರ್ವಕವಾಗಿ ಮಾಡಿದ್ದರೆ ಆತ್ಮೀಯರೊಂದಿಗಿನ ಸುಂದರ ಕ್ಷಣಗಳು ಅವರದಾಗುತ್ತಿತ್ತಲ್ಲವೇ?!
ನನಗನ್ನಿಸಿದ್ದನ್ನೆಲ್ಲ ಹೇಳುವ ಧೈರ್ಯ ತೋರಬೇಕಿತ್ತು. ಇನ್ನೊಬ್ಬರೊಂದಿಗೆ ಹೊಂದಿಕೊಳ್ಳುವ ಭರದಲ್ಲಿ ನಮ್ಮ ಹಲವು ಆಕಾಂಕ್ಷೆಗಳನ್ನು, ನಮಗನ್ನಿಸಿದ್ದನ್ನು ಹೇಳದೇ ಒಳಗೊಳಗೆ ತಳ್ಳುತ್ತಾ ಹೋಗುತ್ತೇವೆ. ಮತ್ತೆ ಆ ಅನಿಸಿಕೆ ಹುಟ್ಟದಂತೆ ಹೆಡೆ ಮೆಟ್ಟಿ ನಿಲ್ಲುತ್ತೇವೆ. ಇದರಿಂದ ನಾವು ಏನಾಗಲು ಸಾಧ್ಯವಿತ್ತೋ ಅದು ಸಾಧ್ಯವಿಲ್ಲದೆ ಮುಖವಾಡದ ಬದುಕೊಂದನ್ನು ನಮಗೆ ಗೊತ್ತಿಲ್ಲದೆಯೇ ಬದುಕಿಬಿಟ್ಟಿರುತ್ತೇವೆ. ಅಲ್ಲದೆ ಇದು ಹಲವು ಮಾನಸಿಕ ಅಸಮತೋಲನಕ್ಕೂ ಕಾರಣವಾಗಿರುತ್ತದೆ. ಜೀವನದಲ್ಲಿ ಇನ್ನೊಬ್ಬರ ಪ್ರತಿಕ್ರಿಯೆಯನ್ನು ನಿಯಂತ್ರಿಸಲು, ಎಲ್ಲರನ್ನು ಮೆಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕಾಗಿ ತಲೆಕೆಡಿಸಿಕೊಳ್ಳದೆ ನಮಗನ್ನಿಸಿದಂತೆ ಪ್ರಾಮಾಣಿಕವಾಗಿ ಬದುಕೋಣ
ನನ್ನ ಗೆಳೆಯರೆಲ್ಲರನ್ನೂ ಕೊನೆಯವರೆಗೂ ಕಾಪಾಡಿಕೊಳ್ಳಬೇಕಿತ್ತು. ಜೀವನದ ಕೊನೆಕ್ಷಣಗಳಲ್ಲಿ ನಾವು ಗಳಿಸಿದ ದುಡ್ಡಿಗಿಂತಾ ನಮಗಾಗಿ ಅಳುವ, ಹಿತ ಬಯಸುವ ಆತ್ಮೀಯರು ಎಷ್ಟಿದ್ದಾರೆಂಬುದೇ ಗಣನೆಗೆ ಬರುವುದು. ಹೆಚ್ಚಿನ ಮಂದಿ ತಮ್ಮದೇ ಬದುಕಿನ ಜಂಜಡದಲ್ಲಿ ಎಷ್ಟು ಮುಳುಗಿ ಹೋಗಿರುತ್ತಾರೆಂದರೆ ಒಂದು ಕಾಲದಲ್ಲಿ ತಮ್ಮ ಜೀವದ ಗೆಳೆಯರೆಂದುಕೊಂಡು ಹೆಗಲಿಗೆ ಹೆಗಲು ಕೂಡಿಸಿ ನಡೆದ ಆ ಗೆಳೆಯರು ಅದು ಯಾವಾಗ ಕಳೆದು ಹೋದರೆಂಬುದು ಕೊನೆಯ ಕ್ಷಣದವರೆಗೂ ಗಮನಕ್ಕೇ ಬಂದಿರುವುದಿಲ್ಲ! ನಮ್ಮ ಆಸ್ತಿ ಅಂತಸ್ತು ಏನೇ ಇದ್ದರೂ ಕೊನೆಗೂ ಮುಖ್ಯವಾಗುವುದು ಪ್ರೀತಿ ಮತ್ತು ನಾವು ಉಳಿಸಿಕೊಂಡು ಬಂದ ಸಂಬಂಧಗಳು. ಅದಕ್ಕಾಗಿ ಯಾವ ಖರ್ಚೂ ಅಗತ್ಯವಿರುವುದಿಲ್ಲ, ನಮ್ಮ ಒಂದಿಷ್ಟು ಸಮಯ ಮತ್ತು ಕಾಳಜಿಯ ಹೊರತಾಗಿ.-
ರೇಶ್ಮಾ ರಾವ್ ಸೊನ್ಲೆ
20.10.13
ಒಂದ್ ಕಥೆ ಹೇಳಜ್ಜಿ...
First Published: 21 Oct 2013 02:00:00 AM IST
ಕಳೆದುಹೋದ ಕಥಾಸಂಕಲನ
ಒಂದಾನೊಂದು ಕಾಲದಲ್ಲಿ ಒಂದೂರಲ್ಲಿ ಒಬ್ಬಳು ಅಜ್ಜಿ ಇದ್ದಳು. ಸಮಯ ಸಿಕ್ಕಾಗೆಲ್ಲ ಮೊಮ್ಮಕ್ಕಳನ್ನು, ಆಚೀಚೆ ಮನೆ ಮಕ್ಕಳನ್ನು ಸುತ್ತಲೂ ಕೂರಿಸಿಕೊಂಡು, ತನ್ನ ಬೊಚ್ಚು ಬಾಯಿಯಲ್ಲಿ ಎಲೆಅಡಕೆ ಜಗಿಯುತ್ತಾ ಕತೆ ಹೇಳುತ್ತಿದ್ದಳು. ಅವಳ ಕತೆಗಳು ಅದೆಷ್ಟು ರೋಚಕವಾಗಿರುತ್ತಿದ್ದವೆಂದರೆ ಪುಣ್ಯಕೋಟಿ ಹುಲಿರಾಜನ ಬಳಿಗೆ ಹೊರಟಾಗ ಮಕ್ಕಳು ಬಿಕ್ಕಿ ಬಿಕ್ಕಿ ಅಳುತ್ತಿದ್ದವು. ಆಗ ಅಜ್ಜಿ ಅವುಗಳಿಗೆ ಸಮಾಧಾನ ಹೇಳಿ, ಸತ್ಯ ಹೇಗೆ ಗೆಲ್ಲುತ್ತದೆ ನೋಡ್ದನೋ ಪೋರ ಎಂದು ಕತೆ ಕೇಳುತ್ತಿದ್ದ ಗುಂಡನ ಬೆನ್ನು ಸವರುವಳು.
ಮಕ್ಕಳ ಮೆಚ್ಚಿನ ಇನ್ನೊಂದು ಕತೆ ಇತ್ತು. ಅದು ಒಂದು ಕೂದಲಿನ ರಾಜಕುಮಾರಿಯದು. ಅದನ್ನು ಹೇಳೆಂದು ಅಜ್ಜಿಯನ್ನು ಮಕ್ಕಳು ಒತ್ತಾಯಿಸುತ್ತಿದ್ದವು. ಅಜ್ಜಿಗೂ ಸ್ವಲ್ಪ ಆಟ ಆಡಿಸುವ ಎನಿಸುವುದು. ಅವಳು ಹುಗ್ಗಿ ಹರಿದು ಊರು ಮುಳುಗುವ ಕತೆ ಶುರು ಹಚ್ಚುವಳು. ಅದು ಮುಗಿಯುವವರೆಗೂ ಬಾಯಿ ಕಳೆದು ಕೇಳುತ್ತಿದ್ದ ಮಕ್ಕಳು ಮತ್ತೆ ರಾಜಕುಮಾರಿ ಕತೆಗೆ ಗೋಗರೆವವು. ಎಲೆ ಅಡಕೆ ತುಪ್ಪಿ ಬಂದ ಅಜ್ಜಿ ಮಾಳಿಗೆಯಲ್ಲಿಟ್ಟ ಡಬ್ಬಿ ತೆಗೆದು ಮಕ್ಕಳಿಗೆಲ್ಲ ಚಕ್ಕುಲಿ ಕೊಡುವಳು. ಮತ್ತೆ ಆ ರಾಜಕುಮಾರಿಗೆ ಒಂದು ಕೂದಲೆಂದು ರಾಜನ ಎರಡು ಕೂದಲಿನ ಎರಡನೇ ಹೆಂಡತಿಯೂ, ರಾಜನೂ ಸೇರಿ ಅವಳನ್ನು ಮನೆಯಿಂದ ಹೊರ ಹಾಕಿದ್ದನ್ನು ಅಜ್ಜಿ ವರ್ಣಿಸುವಳು. ಅವಳ ಒಳ್ಳೆತನ ಮೆಚ್ಚಿ ಮಾಟಗಾತಿ ತಲೆ ತುಂಬಾ ಕೂದಲು ಬರುವಂತೆ ಮಾಡುವಾಗಂತೂ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಕೇಕೆ ಹಾಕಿ ಚಪ್ಪಾಳೆ ತಟ್ಟಿ ನಗುವುವು. ಅಜ್ಜಿ ಕತೆ ಹೇಳದ ದಿನ ಮಕ್ಕಳು ನಿದ್ದೆ ಮಾಡುವುದಿಲ್ಲವೆಂದು ರಚ್ಚೆ ಹಿಡಿಯುತ್ತಿದ್ದವು. ಶಾಲೆಗೆ ಹೋಗಿ,
'ಅಜ್ಜಿ ಎಂದರೆ ನಮ್ಮಜ್ಜಿ
ಕತೆಯನು ಹೇಳುವ ನಮ್ಮಜ್ಜಿ
ಉಪ್ಪು ಮೆಣಸು ಜಜ್ಜಿ
ಮಾಡಿದಳೊಂದು ಬಜ್ಜಿ' ಎಂದು ಪ್ರಾಸಬದ್ಧವಾಗಿ ಹಾಡು ಹೇಳುತ್ತಿದ್ದವು. ಇಂತಿಪ್ಪ ಮಕ್ಕಳ ಮೆಚ್ಚಿನ ಈ ಅಜ್ಜಿ ಸೌದೆ ತರಲೆಂದು ಒಂದು ದಿನ ಕಾಡಿಗೆ ಹೋದಳು. ಇಂದಿಗೂ ಸೌದೆಯೂ ಇಲ್ಲ, ಅಜ್ಜಿಯೂ ಇಲ್ಲ! ಬಹುಶಃ ಸೌದೆ ಸಿಗಲಿಲ್ಲವೇನೋ? ಅಕೇಶಿಯಾ, ನೀಲಗಿರಿ, ರಬ್ಬರ್ ಕಾಡಿನಲ್ಲಿ ಸೌದೆ ಎಲ್ಲಿಂದ ಬರಬೇಕು? ಅವೆಲ್ಲ ದುಡ್ಡಿನ ಮರಗಳಲ್ಲವೇ?!ಅಥವಾ 'ಇನ್ನೂ ಒಂದಾನೊಂದು ಕಾಲದಲ್ಲಿರುವ' ಅಜ್ಜಿಗೆ ಗ್ಯಾಸ್ ಸ್ಟೌ, ಕರೆಂಟ್ ಒಲೆಗಳ ಕತೆ ಹೇಳಿ ಮರಗಳೇ ಮೂದಲಿಸಿ ನಕ್ಕಿರಬಹುದು.
ಅಲ್ಲವೇ ಆಕೆ ತಿರುಗಿ ಬಂದೂ ಮೊಮ್ಮಕ್ಕಳಾರೂ ಗುರುತಿಸಿರಲಾರರು. ಅವುಗಳೋ ಒಂದು ದಿನದಲ್ಲಿ ಶತಮಾನದಷ್ಟು ಮುಂದೋಡುವವು. ಬಟನ್ ಒತ್ತಿದಷ್ಟೂ ಮನರಂಜನೆ ಒದಗಿಸುವ ಕಾರ್ಟೂನ್ ನೆಟ್‌ವರ್ಕ್‌ಗಳಿರಲು, 3 ವರ್ಷಕ್ಕೇ 30ರಂತೆ ಟೈ ಧರಿಸಿ ಶಾಲೆಗೆ ಓಡುವ ಧಾವಂತದಲ್ಲಿ ಅಜ್ಜಿ ನೆನಪಾದಾಳು ಹೇಗೆ?
ಒಂದು ವೇಳೆ ಗುರುತು ಸಿಕ್ಕರೂ ಎಲೆಅಡಕೆ ಜಗಿಯುತ್ತಾ, ಮಾಡರ್ನ್ ಕಲ್ಚರ್ ಗೊತ್ತಿಲ್ಲದ 'ದಟ್ ಡರ್ಟಿ ಅಗ್ಲಿ ವುಮನ್'ಗೆ ಅಜ್ಜಿ ಎಂದವಾದರೂ ಹೇಗೆ?!
ಹೀಗೆ ಒಂದಾನೊಂದು ಕಾಲದಲ್ಲಿ ಕತೆ ಹೇಳುತ್ತಿದ್ದ ನಮ್ಮ ನಿಮ್ಮೆಲ್ಲರ ಅಜ್ಜಿ ಇಂದು ಕತೆಯಾದಳು.
= ರೇಶ್ಮಾ ರಾವ್ ಸೊನ್ಲ್
(ಕನ್ನಡಪ್ರಭ ದಲ್ಲಿ ಪ್ರಕಟ)
4.10.13
ಕಾಡ ಹೂ
First Published: 03 Oct 2013 02:00:00 AM IST
ಸ್ಯಾಕ್ಸೋಫೋನ್ ಸಾಧಕಿ
ಒಂದಷ್ಟು ಜನ ಬದುಕುವುದಕ್ಕಾಗಿ ಉಸಿರನ್ನು ಶ್ವಾಸಕೋಶಕ್ಕೆ ತುಂಬಲೇ ಹೆಣಗುತ್ತಾರೆ. ಆದರೆ ಕೆಲವರಿರುತ್ತಾರೆ, ಉಸಿರನ್ನೇ ಹಾಡಾಗಿ ಪರಿವರ್ತಿಸುವ ಮಾಂತ್ರಿಕರು. ಇಲ್ಲೊಬ್ಬ ಕಿನ್ನರಿ ಇದ್ದಾಳೆ ನಿರ್ಜೀವವಾಗಿ ಕುಳಿತ ಸ್ಯಾಕ್ಸಫೋನ್‌ಗೂ ಉಸಿರು ತುಂಬಿ ಹಾಡು ಕಲಿಸಿ ರಾಗಗಳನ್ನು ಅಲೆಅಲೆಯಾಗಿ ಗಾಳಿಗೆ ಬಿಡುವವಳು. ಹೀಗೆ ಹತ್ತು ವರ್ಷದಿಂದ ಮಲೆನಾಡಿನ ತೀರ್ಥಹಳ್ಳಿ ಬದಿಯ ಮೂಲೆಮೂಲೆಯಲ್ಲೂ ಗಾಳಿಗೆ ಗುಂಗು ಹತ್ತಿಸಿ ಮದುವೆಮನೆ, ಧಾರ್ಮಿಕ ಕಾರ್ಯಕ್ರಮದ ರಂಗು ನೀಡಿ ಸಂಭ್ರಮ ಹೆಚ್ಚಿಸುತ್ತಿರುವುದು ಪ್ರಥಮ ಬಿಕಾಂ ವಿದ್ಯಾರ್ಥಿನಿ ಸೌಮ್ಯ.
ಈ ಭಾಗದ ಯಾವುದೇ ಶುಭಕಾರ್ಯಗಳಿಗೆ ಹೋದರೆ ಗಂಟೆಗಟ್ಟಲೆ ಬಿಡುವಿಲ್ಲದೆ, ಭಕ್ತಿಗೀತೆ, ಚಿತ್ರಗೀತೆ ಸೇರಿದಂತೆ ಸಂದರ್ಭಕ್ಕೆ ತಕ್ಕಂತೆ ವಾದ್ಯದಲ್ಲಿ ಖಾದ್ಯ ಬಡಿಸುತ್ತಾ ಗಾನ ಸರಸ್ವತಿಯಂತೆ ಕುಳಿತಿರುವ ಈಕೆಯನ್ನು ನೋಡಿದರೆ 'ಮುತ್ತಿನಂತ ಹೆಂಡತಿ'ಯಲ್ಲಿ ಸ್ಯಾಕ್ಸಾಫೋನ್ ನುಡಿಸುವ ಮಾಲಾಶ್ರೀ ಕಣ್ಮುಂದೆ ಬರುತ್ತಾಳೆ. ತನ್ನ ತಂದೆ ನಾಗೇಶ್ ಅವರ ಗರಡಿಯಲ್ಲಿ ಪಳಗಿ, ನಂತರ ಶಿವಪ್ರಸಾದ್, ಕರುಣಾಕರ, ಸಾಲಿಗ್ರಾಮ ಸತೀಶ್ ದೇವಾಡಿಗ ಅವರ ಗುರು ಗಾರುಡಿಯಲ್ಲಿ ಮಿಂದೆದ್ದು ಪಕ್ಕಾ ವಾದ್ಯದಲ್ಲಿ ಪರಿಣತಿ ಸಾಧಿಸಿರುವ ಈಕೆ ಇದುವರೆಗೆ 250ಕ್ಕೂ ಹೆಚ್ಚು ಕಡೆ ಕಾರ್ಯಕ್ರಮ ನೀಡಿದ್ದಾಳೆ.
ಎಸ್ಸೆಸ್ಸೆಲ್ಸಿ ಓದುತ್ತಿರುವ ಈಕೆಯ ತಂಗಿ ರಮ್ಯಾ ಕೂಡ ಹಿರಿಯಕ್ಕನ ಹಾದಿಯಲ್ಲಿ ಸಾಗುತ್ತಿದ್ದಾಳೆ. ಇಷ್ಟಾದರೂ ಈ ಹಳ್ಳಿ ಹೂವಿನ ಪ್ರತಿಭೆಗೆ ಇದುವರೆಗೆ ಯಾವುದೇ ಪ್ರಶಸ್ತಿ ಫಲಕಗಳು ಲಭಿಸದಿರುವುದು ವಿಪರ್ಯಾಸವೇ ಸೈ. ಈ ಬಗ್ಗೆ ಈಕೆಯ ಪರಿಚಿತರನ್ನು ಕೇಳಿದಾಗ 'ಇಲ್ಲಿ ನಗರದಂತೆ ಇದನ್ನೆಲ್ಲ ಪ್ರತಿಭೆಯೆಂದು ನೋಡುವುದಿಲ್ಲ. ಅವಳು ಸ್ಯಾಕ್ಸಾಫೋನ್ ನುಡಿಸುತ್ತಾಳಂತೆ ಎಂಬುದು ಒಂದು ಸಾಮಾನ್ಯ ವಿಚಾರವೆಂಬಂತೆ ಜನ ನೋಡುತ್ತಾರೆ' ಎಂದು ವಿಷಾದಿಸುತ್ತಾರೆ. ಸೌಮ್ಯಳಿಗೊಂದು ಅಭಿನಂದನೆ ಹೇಳಬೇಕೆನಿಸಿದರೆ 9448106837ಗೆ ಕರೆ ಮಾಡಿ.-
ರೇಶ್ಮಾ
9.8.13
ಭ್ರಾಂತು
First Published: 08 Aug 2013
ಹಾಗಾದ್ರೆ, ನೋಡಿದ್ದು ಸುಳ್ಳಾ?
'ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು...'- ಭ್ರಾಂತಿ (ಇಲ್ಯೂಷನ್), ಕಣ್ಕಟ್ಟನ್ನು ಹೀಗೆ ವಿವರಿಸಬಹುದು.ಎಲ್ಲ ಇಂದ್ರಿಯಗಳೂ ಮೋಸ ಹೋಗುತ್ತವೆ. ಆದರೆ ಕಣ್ಣು ಪ್ರಧಾನ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ದೃಷ್ಟಿಭ್ರಾಂತಿ ಎಲ್ಲರಿಗೂ ಆಗುತ್ತದೆ. ಮೈಮ್‌ಗಳನ್ನು ನೋಡುವಾಗ ಅಲ್ಲಿ ವಸ್ತುಗಳೇನೂ ಇರದಿದ್ದರೂ ವ್ಯಕ್ತಿ ಏಣಿ ಹತ್ತುವುದನ್ನು, ಈಜುವುದನ್ನು ಎಲ್ಲವನ್ನು ಗ್ರಹಿಸುತ್ತೇವೆ.
ವೆಂಟ್ರಿಲೋಕ್ವಿಸ್ಟ್ (ಮಾತಾಡುವ ಗೊಂಬೆ ಆಡಿಸುವವರು) ಗಳನ್ನು ನೋಡುವಾಗ ಗೊಂಬೆ ಮಾತಾಡಲು ಸಾಧ್ಯವಿಲ್ಲವೆಂದು ಗೊತ್ತಿದ್ದರೂ ಗೊಂಬೆಯೇ ಮಾತನಾಡುತ್ತಿದೆ ಎಂದು ನಂಬುತ್ತೇವೆ. ಏಕೆಂದರೆ ನಮ್ಮ ಕಣ್ಣಿಗೆ ಗೊಂಬೆ ಬಾಯಿ ಆಡಿಸುವುದು ಕಾಣುತ್ತದೆ. ನಾವೇನನ್ನು ನೋಡುತ್ತೇವೆಯೋ ಅದು ಶೇ.10 ಭಾಗ ಆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಉಳಿದ ಶೇ.90ನ್ನು ಮೆದುಳು ಯೋಚನಾಸರಣಿಗೆ ಹಚ್ಚಿ ನಿರ್ಧರಿಸುತ್ತದೆ. ಆದ್ದರಿಂದ ವಿಜ್ಞಾನಿಗಳು ಭ್ರಾಂತಿಯನ್ನು ನಮ್ಮ ಇಂದ್ರಿಯಗಳ ಕೆಲಸದ ಬಗ್ಗೆ ಅಧ್ಯಯನ ಮಾಡಲು ಉಪಯೋಗಿಸುತ್ತಾರೆ. ಭ್ರಾಂತಿ ನಮ್ಮ ಕಣ್ಕಟ್ಟುವುದಕ್ಕಿಂತ ಹೆಚ್ಚಾಗಿ ನಾವು ಹೇಗೆ ಒಂದು ವಸ್ತುವನ್ನು ಇಲ್ಲವೆ ಪರಿಸ್ಥಿತಿಯನ್ನು ಅವಲೋಕಿಸುತ್ತೇವೆ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.
ನಾನೀಗ ನಿಮ್ಮೆದುರಿನಲ್ಲಿ ಕುಳಿತಿದ್ದೇನೆಂದುಕೊಳ್ಳಿ. ನಿಮ್ಮ ಕಣ್ಣು 6 ಅಡಿಯ ವ್ಯಕ್ತಿ ನನಗಿಂತ 4 ಅಡಿ ದೂರದಲ್ಲಿ ಕುಳಿತಿದ್ದಾನೆ ಎಂದು ಹೇಳುತ್ತದೆ. ನಿಮಗಿಂತ 8 ಅಡಿ ದೂರದಲ್ಲಿ ಮತ್ತೊಬ್ಬ ಕುಳಿತಿದ್ದು, ಅವನು 3 ಅಡಿ ಇದ್ದಾನೆಂದು ಕಣ್ಣು ಹೇಳುತ್ತದೆ. ಆದರೆ ಮೆದುಳು ಅವನಿರುವ ದೂರವನ್ನು ಪರಿಗಣಿಸಿ ಅವನೂ 6 ಅಡಿ ಇದ್ದಿರಬಹುದೆಂದು ಗ್ರಹಿಸುತ್ತದೆ. ಇಷ್ಟೆಲ್ಲ ಆದರೂ ಭ್ರಾಂತಿ ಏಕಾಗುತ್ತದೆಂಬ ಪ್ರಶ್ನೆಗೆ ನಿಖರ ಉತ್ತರವಿನ್ನೂ ಸಿಕ್ಕಿಲ್ಲ. ಆದರೆ ಇಂಥ ಕಣ್ಕಟ್ಟನ್ನು ಬಳಸಿಯೇ ಅಲ್ಲವೇ ಮಾಂತ್ರಿಕರು ಮುಗ್ಧರನ್ನು ಮೋಸಗೊಳಿಸುತ್ತಿದ್ದುದು.
ಚಂದ್ರನ ಭ್ರಾಂತಿ
ಗುಡ್ಡದ ಬದಿಯಲ್ಲಿ ನೋಡುವಾಗ ಚಂದ್ರ ಕಾಣುವಷ್ಟು ದೊಡ್ಡದಾಗಿ ಮೇಲಿದ್ದಾಗ ಕಾಣುವುದಿಲ್ಲ. ಹಾಗೆಂದು ಚಂದ್ರನ ಗಾತ್ರ ಬದಲಾಗುವುದಿಲ್ಲ. ಇದೊಂದು ಇಲ್ಯೂಷನ್ ಅಷ್ಟೇ. ನಾವು ಗ್ರಹಿಸುವುದೇ ಹಾಗೆ... ದೂರದ ಬೆಟ್ಟವನ್ನು ತೋರಿಸುವಾಗ 'ಓಓ....ಲ್ಲಿ.... ದೂರದಲ್ಲಿ' ಎನ್ನುತ್ತೇವೆ. ಅದೇ ಆಕಾಶದಲ್ಲಿರುವ ನಕ್ಷತ್ರವನ್ನು ತೋರಿಸುವಾಗ, 'ಇದೋ ಇಲ್ಲಿ' ಎನ್ನುತ್ತೇವೆ. ಆದರೆ ನಿಜವಾಗಿ ನಕ್ಷತ್ರದ ದೂರ ಹೆಚ್ಚಿನದಾಗಿರುತ್ತದೆ. ಲಂಬವಾದ ದೂರ ಹತ್ತಿರವೆನಿಸುತ್ತದೆ, ಅಡ್ಡಡ್ಡದ ದೂರ ದೂ...ರವೆನಿಸುತ್ತದೆ. ಹಾಗಾಗೇ ಚಂದ್ರ ಮೇಲಿದ್ದಾಗ ಇಷ್ಟು ಹತ್ತಿರದಲ್ಲಿದ್ದರೂ ಚಿಕ್ಕದಾಗಿ ಕಾಣುತ್ತಿದ್ದಾನೆ. ಅದೇ ಗುಡ್ಡದ ಬದಿಯ ಚಂದ್ರ ಅಷ್ಟು ದೂರದಲ್ಲಿದ್ದರೂ ದೊಡ್ಡದಾಗಿ ಕಾಣುತ್ತಿದ್ದಾನೆ ಎಂದರೆ ಆತ ಕೆಳಗೆ ಬಂದಿರುವುದರಿಂದ ದೊಡ್ಡದಾಗಿ ಕಾಣಿಸುತ್ತಿದ್ದಾನೆ ಎಂದು ಭಾವಿಸುತ್ತೇವೆ.
ಆಸಕ್ತಿಯೂ ಕಾರಣ
ಐನ್‌ಸ್ಟೀನ್ 'ಸಾಪೇಕ್ಷತಾ ಸಿದ್ಧಾಂತ' ವಿವರಿಸುವಾಗ ಒಂದು ಉದಾಹರಣೆ ನೀಡುತ್ತಾನೆ. ಉರಿಯುತ್ತಿರುವ ಒಲೆ ಮೇಲೆ ಒಂದು ನಿಮಿಷ ಕುಳಿತರೆ ಒಂದು ಗಂಟೆ ಎನಿಸುತ್ತದೆ. ಅದೇ ಪ್ರೇಯಸಿಯೊಂದಿಗೆ ಪಾರ್ಕಿನಲ್ಲಿ ಒಂದು ಗಂಟೆ ಕುಳಿತರೂ ಒಂದು ನಿಮಿಷವೆನಿಸುತ್ತದೆ. ಭಾರವಾದ 5 ಕೆಜಿಯ ಸಿಲಿಂಡರ್ ಎತ್ತಲು ಒದ್ದಾಡುವ ಹುಡುಗ 45 ಕೆಜಿಯ ತನ್ನ ಹುಡುಗಿಯನ್ನು ಸರಾಗವಾಗಿ ಹೊತ್ತು ತಿರುಗುವುದಿಲ್ಲವೇ? ಅಂದ ಮೇಲೆ ಈ ಅನಿಸುವಿಕೆಗಳು ನಮ್ಮ ಆಸಕ್ತಿಯನ್ನವಲಂಬಿಸುತ್ತವೆ.
ಮೋಸ ಹೋಗುವ ಫ್ಯಾಸಿನೇಶನ್
ನ್ನೋಡಿದ್ದನ್ನೆಲ್ಲ ನಂಬಬೇಕಾಗಿಲ್ಲ. ನನ್ ಕಣ್ಣೇ ನಂಗೆ ಮೋಸ ಮಾಡ್ತು ಎಂದು ಅದೆಷ್ಟೋ ಬಾರಿ ಹೇಳುತ್ತೇವೆ. ಆದ್ರೆ ಹಾಗೆ ಮೋಸ ಹೋಗುವುದರಲ್ಲೂ ನಾವು ಮನುಷ್ಯರಿಗೊಂಥರಾ ಫ್ಯಾಸಿನೇಶನ್. ಹಾಗಾಗಿಯೇ ಸುಳ್ಳೆಂದು ಗೊತ್ತಿದ್ದರೂ ಮ್ಯಾಜಿಕ್‌ಗಳನ್ನು ಚೆನ್ನಾಗಿ ಎಂಜಾಯ್ ಮಾಡುತ್ತೇವೆ.
ಕಾಲವೆಂಬ ಭ್ರಾಂತಿ
ಹಲವು ವಿಜ್ಞಾನಿ, ತತ್ವಜ್ಞಾನಿಗಳ ಪ್ರಕಾರ ಕಾಲವೆಂಬುದೇ ದೊಡ್ಡ ಭ್ರಾಂತು. ನಾವು ನಮ್ಮ ಅನುಕೂಲಕ್ಕಾಗಿ ಭೂತ, ವರ್ತಮಾನ, ಭವಿಷ್ಯ ಎಂದು 3 ವಿಭಾಗವನ್ನಾಗಿ ಮಾಡಿಕೊಂಡಿದ್ದೇವೆ. ಆದರೆ ಇರುವುದು ವರ್ತಮಾನವೊಂದೇ. ಅದೂ ಸದಾ ಕಾಲ ಬದಲಾಗುತ್ತಲೇ ಇರುವ ವರ್ತಮಾನ. ನಿನ್ನೆಯೂ ಆ ಕ್ಷಣಕ್ಕೆ ವರ್ತಮಾನವಾಗಿತ್ತು. ಮತ್ತು ಅದು ಆಗ ಮಾತ್ರ ಸತ್ಯವಾಗಿತ್ತು. ನಾಳೆಯೂ ವರ್ತಮಾನದಲ್ಲಷ್ಟೇ ಅನುಭವಕ್ಕೆ ಬರುತ್ತದೆ. ಅಂದ ಮೇಲೆ ನಿನ್ನೆ, ಇಂದು, ನಾಳೆಗಳೆಲ್ಲ ಭ್ರಾಂತಿ ಅಷ್ಟೇ ಆಗಲು ಸಾಧ್ಯವಲ್ಲವೇ?
-ರೇಷ್ಮಾರಾವ್ ಸೊನ್ಲೆ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)