ಪುಟಗಳು

30.1.14

ಮರೆವು ಮರೆಸಿ

First Published: 27 Jan 2014 02:00:00 AM IST
ಬೊಚ್ಚು ಬಾಯಿಯ ನನ್ನಜ್ಜಿ ನಕ್ಕರೆ ಪುಟ್ಟ ಪಾಪಚ್ಚಿಯೊಂದು ನಕ್ಕಂತೆಯೇ ಕಾಣುತ್ತಾಳೆ. ಅವಳ ನಗು ಅಷ್ಟೇ ನಿಷ್ಕಲ್ಮಶ ಕೂಡಾ. ಅನುಭವದ ಖಜಾನೆಯಿಂದ ಅಪ್ಪಅಮ್ಮನಿಗೆ ಆಪತ್ಕಾಲದಲ್ಲಿ ಉತ್ತಮ ಸಲಹೆ ನೀಡುವ, ಮೊಮ್ಮಕ್ಕಳನ್ನು ಕೂರಿಸಿಕೊಂಡು ಕತೆ ಹೇಳುವ, ತನ್ನ ಬಾಲ್ಯದ ನೆನಪುಗಳ ಬಿಚ್ಚಿ ಜೀವನಪಾಠ ಹೇಳುವ ಈ ಮುದ್ದಿನ  ಸುಬ್ಬಮ್ಮ ನಮ್ಮೆಲ್ಲರನ್ನೂ ದಿಗಿಲುಗೊಳಿಸತೊಡಗಿದ್ದು ಇತ್ತೀಚೆಗೆ ಏನೋ ಹೇಳಲು ಬಂದು ಏಕೆ ಬಂದೆನೆಂದೇ ನೆನಪಾಗದೇ ತಡಕಾಡತೊಡಗಿದಾಗ, ತಾನು ನಿತ್ಯ ಅದೇ ಮರದ ಕಪಾಟಿನ ಮೂರನೇ ಡಬ್ಬಿಯಲ್ಲಿಡುವ ಮಾತ್ರೆಗಳಿಗಾಗಿ ಮನೆಯೆಲ್ಲಾ ಹುಡುಕಾಡತೊಡಗಿದಾಗ. ಹೊರಗೆ ಸುತ್ತಲು ಹೋದ ಅಜ್ಜಿ ಎಷ್ಟು ಹೊತ್ತಾದರೂ ಬರದಿದ್ದುದನ್ನು ಕಂಡು ಅಪ್ಪ ಹುಡುಕಹೋದರೆ ಮನೆ ದಾರಿ ತಿಳಿಯದೆ ಮಧ್ಯರಸ್ತೆಯಲ್ಲಿ ತಡವರಿಸುತ್ತಾ ನಿಂತಿದ್ದ ಅಜ್ಜಿಯನ್ನು ಕಂಡಾಗ.ಅಜ್ಜಿಗೆ ಈ ಪರಿ ಮರೆವು ಆವರಿಸುತ್ತಿದ್ದುದನ್ನು ನೋಡಿ ಅಪ್ಪ ಅಮ್ಮ ಚಿಂತಿಸತೊಡಗಿದರೆ ನನ್ನ ಮನಸ್ಸು ಮಾತ್ರ ಮರೆವಿಗೆ ಕಾರಣ ಹುಡುಕುತ್ತಿತ್ತು. ಓದಿದ್ದನ್ನು ಥಳಕು ಹಾಕಿಕೊಂಡ ನನ್ನ ಕಲ್ಪನೆ ಅಜ್ಜಿಯ ಮೆದುಳನ್ನು ಪೋಸ್ಟ್‌ಮಾರ್ಟಂ ಮಾಡುತ್ತಿತ್ತು. ಅಜ್ಜಿಯ ಮೆದುಳಿನ ಹಿಪ್ಪೋಕ್ಯಾಂಪಸ್‌ನಲ್ಲಿ ಕೋಶಗಳು ನಶಿಸತೊಡಗಿದ್ದವು. ಗ್ರೇ ಮ್ಯಾಟರ್(ಮೆದುಳಿನ ಬೂದು ಬಣ್ಣದ ಭಾಗ) ಕಡಿಮೆಯಾಗಿ ಮೆದುಳಿನ ಬಣ್ಣವೇ ಬದಲಾದಂತೆ ಕಂಡಿತು. ಇವೆಲ್ಲಕ್ಕೂ ಅಜ್ಜಿಗೆ ವಯಸ್ಸಾದದ್ದೇ ಕಾರಣ, ವಯಸ್ಸಾದಂತೆಲ್ಲ ಕೋಶಗಳು ಆಹಾರದಲ್ಲಿನ ಸತ್ವಗಳನ್ನು ಹೀರಿಕೊಳ್ಳುವುದು ನಿಧಾನಗತಿಯಾಗುತ್ತದೆ ಎಂಬುದನ್ನು ಕೂಡಾ ಮೈಕ್ರೋಸ್ಕೋಪ್‌ನಲ್ಲಿ ನೋಡಿದಂತೆ ಕಲ್ಪಿಸಿಕೊಂಡೆ. ಆದರೂ ಇದು ವಯೋಸಹಜ ಬಂದ ಮರೆವೋ ಅಥವಾ ಅಜ್ಜಿಗೆ ಅಲ್ಜೀಮರ್ಸ್ ಬರುತ್ತಿದೆಯೇ ಎಂಬ ಸಂಶಯ ತಲೆ ತಿನ್ನತೊಡಗಿತು.ಅಂತರ್ಜಾಲದಲ್ಲಿ ತಡಕಾಡಿದೆ. ಅಜ್ಜಿ ಏನೇ ಮರೆತರೂ ಮೊದಲಿನಿಂದ ಮಾಡಿಕೊಂಡು ಬಂದ ನಿತ್ಯದ ಕಾರ್ಯಗಳಾದ ಊಟ, ಸ್ನಾನ, ಪೂಜೆಗಳನ್ನು ಮಾಡುತ್ತಿದ್ದುದರಿಂದ ಇದು ಅಲ್ಜೀಮರ್ಸ್ ಅಲ್ಲ ಎಂದುಕೊಂಡೆ. ಅಲ್ಲದೆ ತನಗೇನು ಮರೆತುಹೋಗುತ್ತದೆ ಎಂದು ಕೇಳಿದರೆ ಅಜ್ಜಿ 'ಈ ಮಾತ್ರೆ ಒಂದ್ ಎಲ್ ಇಡ್ತೀನೇನ ಮಾರಾಯ್ತಿ, ಹಾಳು ಮರೆವು, ನೆನ್ಪೇ ಆಗಲ್ಲ', 'ಒಂದ್ ದಿನ ಬಿಡ್ದೆ ಕುಂಕುಮಭಾಗ್ಯ ಧಾರಾವಾಹಿ ನೋಡ್ತೀನಿ. ಸರಸ್ವತಿ ಕೇಳ್ದಾಗ ಧಾರವಾಹಿ ಹೆಸ್ರೇ ಬರ್‌ಬಾರ್ದನೇ ಬಾಯಿಗೆ', 'ಹೊರಗೆ ಯಾರನ್ನಾದರೂ ನೋಡಿ ಮಾತಾಡ್ಕಂಡು ಬಂದಿರ್ತೀನಿ. ಯಾರು ಅಂತನೇ ನೆನ್ಪಾಗಲ್ಲ' ಎನ್ನುತ್ತಿದ್ದಳು. ಡಿಮೆನ್ಷಿಯಾ, ಅಲ್ಜೀಮರ್ಸ್ ಇದ್ದಿದ್ದರೆ ತನಗೇನು ಮರೆತುಹೋಗುತ್ತದೆ ಎಂಬುದನ್ನೂ ಅವಳಿಂದ ಹೇಳಲಾಗುತ್ತಿರಲಿಲ್ಲ, ಸಂಬಂಧಗಳನ್ನೂ ಗುರುತಿಸಲಾಗುತ್ತಿರಲಿಲ್ಲ ಎಂದು ಸಮಾಧಾನ ತಂದುಕೊಂಡೆ.ಅಜ್ಜಿಯ ಮರೆವು ಹೋಗಿಸಲು ಏನಾದರೂ ಮಾಡಲೇಬೇಕೆನಿಸಿತ್ತು. ಏಕೆಂದರೆ ನಾಳೆ ನನ್ನ ಹೆಸರು ಏನೆಂದು ಕೇಳಿದರೆ ನನಗದನ್ನು ಸಹಿಸಲಾಗುತ್ತಿರಲಿಲ್ಲ. ಯಥಾಪ್ರಕಾರ ಎಲ್ಲ ಬಲ್ಲವ ಅಂತರ್ಜಾಲನೆಂಬ ಪುಣ್ಯಾತ್ಮ ಇದ್ದ. ವಾರಕ್ಕೆ ಕನಿಷ್ಠ 6- 9 ಕಿ.ಮೀ. ನಡೆವವರ ಮೆದುಳಿನಲ್ಲಿ ಗ್ರೇ ಮ್ಯಾಟರ್ ಹೆಚ್ಚಾಗುತ್ತದೆ, ಮೆದುಳು ಚುರುಕಾಗುತ್ತದೆ ಎಂದ. ಅಜ್ಜಿಯನ್ನು ಪ್ರತಿದಿನ 2 ಕಿ.ಮೀ. ವಾಕಿಂಗ್ ಕರೆದೊಯ್ಯತೊಡಗಿದೆ. ಅಜ್ಜಿಯೊಂದಿಗೆ ಕುಳಿತು ಸುಡೊಕು, ಪದಬಂಧ ಬಿಡಿಸುವುದು, ಒಗಟು ಕೇಳುವುದು, ವಸ್ತು ಮುಚ್ಚಿಟ್ಟು ಹುಡುಕಲು ಹೇಳುವುದು - ಹೀಗೆ ಮೆದುಳಿಗೆ ಕೆಲಸ ಕೊಡುವ ಹಲವಾರು ಆಟವಾಡಿದೆ. ವಿಟಮಿನ್ ಬಿ12 ಹೆಚ್ಚಿರುವ ಹಾಲು, ಮೊಟ್ಟೆ, ಇತರೆ ಆಹಾರಗಳನ್ನು ಹೆಚ್ಚು ಹೆಚ್ಚು ತಯಾರಿಸಲು ಅಮ್ಮನಿಗೆ ಹೇಳಿದೆ. ಏನೇ ನಿಂದು ಅಜ್ಜಿ ಮೇಲೆ ಪ್ರಯೋಗ ಎಂದಳು. ಪ್ರಯೋಗವಲ್ಲವ್ಮು, ಆಹಾರ, ವ್ಯಾಯಾಮ ಹೇಗೆ ದೈಹಿಕ ಆರೋಗ್ಯವನ್ನು ಫಿಟ್ ಆಗಿ ಇಡುತ್ತದೋ, ಹಾಗೇ ಮಾನಸಿಕ ಆರೋಗ್ಯವನ್ನೂ ಚುರುಕಾಗಿಡುತ್ತವೆ. ವಯಸ್ಸಾದ ಮೇಲೂ ಕೋಶಗಳು ಹುಟ್ಟುತ್ತವೆ, ಸ್ವಲ್ಪ ಹಟ ಮಾಡಬೇಕಷ್ಟೇ. ನೋಡ್ತಿರು ಅಜ್ಜಿಗೆ ಮರೆವೆಂದರೇನೆಂದೇ ಮರೆತು ಹೋಗುತ್ತದೆ ಎಂದು ಭಾಷಣ ಬಿಗಿದೆ. ಅದೊಂದು ದಿನ ಅವನ ಕೈ ಹಿಡಿದು ಪಾರ್ಕ್‌ನಲ್ಲಿ ಬರುವಾಗ ವಾಕಿಂಗ್‌ಗೆ ಬಂದ ಅಜ್ಜಿ ನೋಡೇಬಿಟ್ಟಳು. ಎದೆ ಧಸಕ್ ಎಂದಿತು. ಅಲ್ಲಿಂದ ಬಿರಬಿರನೆ ನಡೆದು ತಪ್ಪಿಸಿಕೊಂಡು ಹೇಗಪ್ಪಾ ಮನೆಗೆ ಹೋಗುವುದು, ಅಲ್ಲೇನು ರಣರಂಗವೇ ಕಾದಿದೆಯೋ ಎಂದು ಭಯ ಪಡುತ್ತಾ ಕಳ್ಳಬೆಕ್ಕಿನಂತೆ ಹೆಜ್ಜೆ ಹಾಕಿದೆ. ಅಪ್ಪ ಅಮ್ಮ ಎಲ್ಲರೂ ನಿತ್ಯದಂತೇ ಮಾತನಾಡುತ್ತಿದ್ದಾರೆ, ಅಜ್ಜಿಯು ಕೂಡಾ!ಉಸ್ಸಪ್ಪಾ ಅಜ್ಜಿಗೆ ವಿಷಯ ಮರೆತುಹೋಗಿದೆ ಎಂಬ ಸಂಭ್ರಮ ಉಕ್ಕಿ ಅಜ್ಜಿಯ ಮರೆವಿಗೂ, ಅಜ್ಜಿಗೂ ಸೇರಿ ಎರಡು ಮುತ್ತು ಕೊಟ್ಟೆ. 'ಹುಡುಗ ಚೆಂದ ಇದಾನೇ ಪುಟ್ಟಕ್ಕ' ಎನ್ನುತ್ತಾ ಕಿವಿ ಹಿಂಡಿದಳು. ಅಜ್ಜಿಯ ಮೆದುಳಲ್ಲಿ ನೆನಪುಗಳನ್ನು ಮುದ್ರಿಸಿಕೊಳ್ಳುತ್ತಾ ಕುಳಿತ ಹಿಪ್ಪೋಕ್ಯಾಂಪಸ್ ಕಣ್ಣ ಮುಂದೆ ಸುಳಿಯಿತು.
( ಕನ್ನಡಪ್ರಭದಲ್ಲಿ ಪ್ರಕಟ )

31.12.13

ಖಾಲಿ ಮನದಲ್ಲಿ ಮಗುಚಿದ ಕ್ಯಾಲೆಂಡರ್


ನನ್ನ ಆತ್ಮಸಾಕ್ಷಿ ನನ್ನ ತಲೆಗೆರಡು ಮೊಟಕಿ ಅವರಿದ್ದಲ್ಲಿಗೆ ನಡೆದೇ ಬಿಟ್ಟಿತ್ತು. ತಗ್ಗಿಸಿದ ತಲೆ ಎತ್ತಲಾಗಲಿಲ್ಲ. ಯಾವಾಗಲೂ ಹೀಗೆ. ಅವರು ಕಂಡರೆ ಸಾಕು, ನನ್ನಾತ್ಮಸಾಕ್ಷಿಯೇ ರೂಪವೆತ್ತಿ ಬಂದಂತೆ. ಪಾಪಪ್ರಜ್ಞೆ ಕಾಲು ನೀವಿಕೊಳ್ಳುತ್ತಾ ಎದುರು ಬಂದು ಕುಳಿತುಬಿಡುತ್ತದೆ. ತಪ್ಪಿತಸ್ಥ ಕಂಗಳು ದೃಷ್ಟಿ ತಪ್ಪಿಸುತ್ತವೆ. 
ಆಗಬೇಕಾದ್ದೇ. ಅವರ ನಿರೀಕ್ಷೆಗಳಿಗೆ ತಣ್ಣೀರೆರಚಿ ನನ್ನ ಮುಖಕ್ಕೆ ಮಸಿ ಬಳಿದು ಕುಳಿತುಕೊಂಡಿದ್ದು ತಪ್ಪಲ್ಲವೇ? ಆದರೆ ಅವರ ಆ ಬೆಟ್ಟದಷ್ಟು ಪ್ರೀತಿಯನ್ನೂ, ಅದರ ಮೈದಡವಿಕೊಂಡು ಭೋರ್ಗರೆವ ನಿರೀಕ್ಷೆಯ ಭಾರವನ್ನೂ ಹೊರುವ ಶಕ್ತಿ ನನ್ನಲ್ಲಿತ್ತೇ? ಬರೆಯಲಾಗದ ನೋವು ಬದುಕು ಬರಡಾಗಿಸಿದೆ. 
ಖಿನ್ನತೆಯ ಮೆಟ್ಟಿಲುಗಳು ಇವತ್ತು ಹತ್ತಿಸಿದರೆ ನಾಳೆ ಇಳಿಸುತ್ತವೆ. ಜೀವಕ್ಕೆ ಅಂಟಿಕೊಂಡೇ ಸಾಗುವ ಈ ವಿಚಿತ್ರ ಬರಡುಭಾವ ಎಂಥ ಬಿಸಿಲಿಗೂ, ಹೊಡೆದು ಬೀಸುವ ಗಾಳಿಗೂ ಬತ್ತುತ್ತಿಲ್ಲವೇಕೆ? ಪ್ರೀತಿಯ ಗೊಂದಲ, ಮನಸ್ಸು ಸದಾ ಚಂಚಲ, ಈ ನಡುವೆ ಸುಖಾಸುಮ್ಮನೆ ಭೀತಿಯೂ ಆವರಿಸಿಕೊಂಡಿದೆ. ಮನದ ಹಿಡಿತ ನನ್ನ ಬಿಗಿತದಿಂದ ನುಣುಚಿಕೊಂಡಿದೆ. ಆತ್ಮವಿಲ್ಲದ ದೇಹ, ಮನಸ್ಸಿಲ್ಲದ ಹೃದಯ ಇನ್ನೇನ ಬರೆದೀತು? ಚೈತನ್ಯದೊರತೆ ಎಲ್ಲಿದೆ ಎಂಬುದನ್ನೂ ಸಿಕ್ಕಸಿಕ್ಕಲ್ಲಿ ಹುಡುಕಿ ಸೋತು, ಅಂತರ್ಜಾಲದಲ್ಲಿ ತಡಕಾಡುವ ಹೀನಾಯ ಸ್ಥಿತಿ ಅವರಿಗೆ ಅರ್ಥವಾದೀತೇ?
ಅಕ್ಷರಗಳ ಒತ್ತು ಇಳಿ ಸೂತ್ರಗಳೆಲ್ಲ ಒಡಲು ಬಿರಿದುಕೊಂಡು ಬಿದ್ದಿವೆ. ಇನ್ನವುಗಳನ್ನು ಹೊಲಿದು ಕವನವಾಗಿಸುವ ಕಸುವು ಅದಾವ ನರನಾಡಿಯಲ್ಲಿ ಅಡಗಿ ಕುಳಿತಿದೆಯೋ?! ಇದೆಲ್ಲ ನನ್ನಾತ್ಮಸಾಕ್ಷಿಗೆ ತಿಳಿಯದ್ದೇನಲ್ಲ. ಇದೆಲ್ಲ ಯೋಚಿಸುವಾಗ ಈ ಆತ್ಮಸಾಕ್ಷಿಯನ್ನೇ ಬಡಿದು ಬಗ್ಗಿಸಬೇಕು ಇಲ್ಲವೇ ಸಾಯಿಸಬೇಕೆಂಬಷ್ಟು ಸಿಟ್ಟು ಬರುತ್ತದೆ. 
ಆದರೆ ಅದೇ ನನ್ನ ಸಾವೆಂಬ ಪ್ರಜ್ಞೆ ಚೂರೂ ಸಾಂತ್ವನ ಹೇಳದೆ ಅಮಾನವೀಯವಾಗಿ ವರ್ತಿಸುತ್ತದೆ. ಇಷ್ಟಾದರೂ ತಿಳಿಯದವರಂತೆ ಹುಡುಕುತ್ತಾರೆ ನನ್ನ ಅವರು. ಕಸಿವಿಸಿಗೊಂಡು ನಾನೂ ಹುಡುಕುತ್ತೇನೆ ಕಳೆದುಕೊಂಡಿರುವ ನನ್ನನ್ನು. ಸಂಜೆಗಳಿಲ್ಲದ ಊರು ನುಂಗಿಬಿಟ್ಟಿತೇ? ಅಥವಾ ಅವನ ನಿರಾಕರಣೆಯ ಕಹಿಸತ್ಯದೊಂದಿಗೆ ನಾನೂ ಕರಗಿಹೋದೆನೇ? ಜೀವದ ಗೆಳತಿ ಹಾದಿ ಬದಲಿಸುವಾಗ ನನ್ನ ದಾರಿ ತಪ್ಪಿತೇ? ಪ್ರಶ್ನೆಗಳು ಮತ್ತಷ್ಟು ಕೆಣಕುತ್ತವೆ. ನಾನು ಮತ್ತಷ್ಟು ಸೊರಗುತ್ತೇನೆ. ಬೇಡವೆಂದರೂ ಕ್ಯಾಲೆಂಡರ್ ಬದಲಾಗುತ್ತದೆ.-ರೇಶ್ಮಾ ರಾವ್ ಸೊನ್ಲೆ

3.11.13

ಇಳಿ ಪಾಠ!

ತಿದ್ದಿಕೊಳ್ಳೋಣ ನಾವೂ
ಸಾವು ಅದೆಷ್ಟೊಂದನ್ನು ಕಲಿಸುತ್ತದೆ, ಬದುಕು ಕಲಿಸಲಾಗದಿದ್ದನ್ನೂ! ಆದರೆ ಆ ಕಲಿಕೆಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಮಯ ನೀಡದೆ ತನ್ನ ಸುಳಿಗೆ ಸೆಳೆದುಕೊಂಡು ಬಿಡುತ್ತದೆ. ಹೀಗೆ ಜ್ಞಾನೋದಯ ಹೊಂದಿದ ಬಿಳಿತಲೆಗಳ ಅನುಭವವನ್ನು ನಾವು ಕಿರಿಯರು ಅನುಭಾವವಾಗಿ ಪರಿಗಣಿಸಿದರೆ ಹಿರಿಯರ ಹಾದಿಯ ಮುಳ್ಳುಗಳು ನಮ್ಮ ದಾರಿಗೆ ಅಡ್ಡ ಬರದಂತೆ ಜತನ ಮಾಡಬಹುದು. ನನಗೂ ಸಾವಿಗೂ ಒಡನಾಟ ಬಹಳ ವರ್ಷಗಳದ್ದು. ಆದರೆ ಅದೂ ಅನುಭಾವವಷ್ಟೇ. ಏಕೆಂದರೆ ನಾನೊಬ್ಬಳು ಜೀವವನ್ನು ಕೈಲಿಡಿದು ಕೊನೆ ದಿನಗಳನ್ನು ಎಣಿಸುವಂಥ ರೋಗಿಗಳನ್ನು ನೋಡಿಕೊಳ್ಳುವ ದಾದಿ. ಅದೆಷ್ಟೋ ಹಿರಿಜೀವಗಳ ಬದುಕಿನ ಕೊನೆ ದಿನಗಳಲ್ಲಿ ಅವರೊಂದಿಗಿದ್ದ ಸಮಾಧಾನವೂ, ಚೇತನಗಳು ಕ್ಷಣಮಾತ್ರದಲ್ಲಿ ನಿಸ್ತೇಜವಾಗುವುದನ್ನು ದಿನಂಪ್ರತಿ ನೋಡಬೇಕಾದ ಅಸಮಾಧಾನವೂ ನನ್ನದು.ಇವರೆಲ್ಲರನ್ನೂ ನೋಡಿದಾಗ ನನಗೆ ನನ್ನ ಪ್ರತಿ ಉಸಿರಿನಲ್ಲೂ ಸಾವಿರುವುದು ಗೋಚರವಾಗುತ್ತದೆ. ಅದು ಯಾವಾಗ ಬೇಕಾದರೂ ನಿಲ್ಲಬಹುದು. ಹಾಗಾಗೇ ನಮ್ಮ ಆಸ್ಪತ್ರೆಯಲ್ಲಿ ಸೇರುವ ಪ್ರತಿ ಹಿರಿಜೀವಕ್ಕೂ ಪ್ರಶ್ನಿಸುತ್ತೇನೆ, ನಿಮ್ಮ ಜೀವನವನ್ನು ಪುನಾರಂಭಿಸುವ ವರ ಸಿಕ್ಕಿದರೆ ಏನು ಬದಲಾವಣೆ ಮಾಡಿಕೊಳ್ಳಬಯಸುತ್ತೀರೆಂದು. ನನ್ನ ಈ ಪ್ರಶ್ನೆಗೆ ಉತ್ತರ ತಡಕುವಾಗ ಜೀವನದಲ್ಲಿ ತಾವು ಮಾಡಿದ ತಪ್ಪುಗಳು ಪಶ್ಚಾತ್ತಾಪಗಳಾಗಿ, ಸಾಧಿಸಲಾರದ ಗುರಿಗಳು ಅತೃಪ್ತವಾಗಿ ಅವರನ್ನು ಕಾಡುತ್ತವೆ. ಮತ್ತು ಅವು ನನಗೆ ಬದುಕಿನ ಪಾಠ ಹೇಳುತ್ತವೆ. ಹೀಗೆ ನನ್ನ ಪ್ರಶ್ನೆಗೆ ಬಂದ ನೂರಾರು ಉತ್ತರಗಳಲ್ಲಿ ಅತ್ಯಂತ ಸಾಮಾನ್ಯವಾಗಿರುವುದನ್ನು ಭಟ್ಟಿ ಇಳಿಸಿದಾಗ ನನ್ನಲ್ಲಿ ಉಳಿದಿದ್ದಿಷ್ಟು;
ಅವರಿವರ ನಿರೀಕ್ಷೆಯನ್ನು ಪೂರೈಸಲು ಹೆಣಗದೆ ನಾನು ನಾನಾಗಿ, ನನಗನ್ನಿಸಿದಂತೆ ಬದುಕಬೇಕಿತ್ತು.    ಇದು ಅತ್ಯಂತ ಸಾಮಾನ್ಯ ಪಶ್ಚಾತ್ತಾಪವಾಗಿತ್ತು. ನಮ್ಮ ಬದುಕು ಮುಗಿಯುತ್ತಿದೆ ಎಂದಾಗ ಹಿಂದಿರುಗಿ ನೋಡಿದ ಶೇ.80ರಷ್ಟು ಮಂದಿಯ 50 ಪ್ರತಿಶತ ಕನಸುಗಳೂ ಸಾಕಾರವಾಗಿರಲಿಲ್ಲ. ಮತ್ತು ಇದು ಅವರೇ ಮಾಡಿಕೊಂಡ ಕೆಲವು ಆಯ್ಕೆಗಳು ಇಲ್ಲವೇ ಮಾಡಿಕೊಳ್ಳದ ಆಯ್ಕೆಗಳ ಫಲವಾಗಿತ್ತು. ಅವರಿವರ ನಿರೀಕ್ಷೆಯ ಭಾರಕ್ಕೆ ತಮ್ಮ ಕನಸುಗಳು ಅಪ್ಪಚ್ಚಿಯಾಗಿ ಬಿಟ್ಟಿದ್ದವು.    ನಮ್ಮ ಕನಸುಗಳನ್ನು ನಾವು ಪ್ರೀತಿಸದಿದ್ದರೆ, ಅವಕ್ಕೆ ಕನಿಷ್ಠ ಗೌರವ ನೀಡದಿದ್ದರೆ ಇನ್ನಾರು ನೀಡಬೇಕು?
ನಾನು ಅಷ್ಟೊಂದು ಕಷ್ಟ ಪಡುವ ಅವಶ್ಯಕತೆ ಇರಲಿಲ್ಲ. ಹೆಚ್ಚಾಗಿ ಕೆಲಸಕ್ಕೆ ಹೋಗುವ ಎಲ್ಲ ರೋಗಿಗಳದೂ ಇದೇ ಕೊರಗಾಗಿತ್ತು. ಏಕೆಂದರೆ ಅವರು ತಮ್ಮ ಮಗುವಿಗೆ ದಿನಕ್ಕೊಂದು ಐಷಾರಾಮಿ ಬಟ್ಟೆ ತೊಡಿಸುವ ಹುರುಪಿನಲ್ಲಿ ಆ ಮಗುವಿನ ಚೇಷ್ಟೆ, ಅಂಬೆಗಾಲಿಕ್ಕಿ ಬರುವ ಚೆಂದ, ಅದು ಹೇಗೆ ಬೆಳೆದು ದೊಡ್ಡವಾಯಿತೋ ಆ ಸಂತಸವನ್ನು ಕಣ್ತುಂಬಿಕೊಂಡಿರಲಿಲ್ಲ. ಪ್ರತಿ ವಾರ ತಮ್ಮ ಹೆಂಡತಿ ಬಂದು ರಾಗ ಎಳೆದು ಸಿನಿಮಾಗೆ ಹೋಗೋಣವೇ ಎಂದು ಕೇಳಿದಾಗೆಲ್ಲ ಕೆಲಸವಿದೆ, ಮುಂದಿನ ವಾರ ನೋಡೋಣ ಎಂದೇ ಸಾಗ ಹಾಕಿದ್ದರು. ಹೆಂಡತಿಯೊಂದಿಗೆ ಒಂದು ಸಿನಿಮಾವನ್ನೂ ನೋಡಲಾಗದಷ್ಟು ಬ್ಯುಸಿಯಾಗಿ ತಾನು ಹಗಲೂ ರಾತ್ರಿ ದುಡಿದು ಸಾಧಿಸಿದ್ದೇನು ಎಂಬ ಕೊರಗು ಅವರನ್ನು ಕಾಡುತ್ತಿತ್ತು.     ಬದುಕನ್ನು ಸರಳಗೊಳಿಸಿಕೊಂಡಿದ್ದರೆ, ಆಯ್ಕೆಗಳನ್ನು ಪ್ರಜ್ಞಾಪೂರ್ವಕವಾಗಿ ಮಾಡಿದ್ದರೆ ಆತ್ಮೀಯರೊಂದಿಗಿನ ಸುಂದರ ಕ್ಷಣಗಳು ಅವರದಾಗುತ್ತಿತ್ತಲ್ಲವೇ?!
ನನಗನ್ನಿಸಿದ್ದನ್ನೆಲ್ಲ ಹೇಳುವ ಧೈರ್ಯ ತೋರಬೇಕಿತ್ತು.    ಇನ್ನೊಬ್ಬರೊಂದಿಗೆ ಹೊಂದಿಕೊಳ್ಳುವ ಭರದಲ್ಲಿ ನಮ್ಮ ಹಲವು ಆಕಾಂಕ್ಷೆಗಳನ್ನು, ನಮಗನ್ನಿಸಿದ್ದನ್ನು ಹೇಳದೇ ಒಳಗೊಳಗೆ ತಳ್ಳುತ್ತಾ ಹೋಗುತ್ತೇವೆ. ಮತ್ತೆ ಆ ಅನಿಸಿಕೆ ಹುಟ್ಟದಂತೆ ಹೆಡೆ ಮೆಟ್ಟಿ ನಿಲ್ಲುತ್ತೇವೆ. ಇದರಿಂದ ನಾವು ಏನಾಗಲು ಸಾಧ್ಯವಿತ್ತೋ ಅದು ಸಾಧ್ಯವಿಲ್ಲದೆ ಮುಖವಾಡದ ಬದುಕೊಂದನ್ನು ನಮಗೆ ಗೊತ್ತಿಲ್ಲದೆಯೇ ಬದುಕಿಬಿಟ್ಟಿರುತ್ತೇವೆ. ಅಲ್ಲದೆ ಇದು ಹಲವು ಮಾನಸಿಕ ಅಸಮತೋಲನಕ್ಕೂ ಕಾರಣವಾಗಿರುತ್ತದೆ.    ಜೀವನದಲ್ಲಿ ಇನ್ನೊಬ್ಬರ ಪ್ರತಿಕ್ರಿಯೆಯನ್ನು ನಿಯಂತ್ರಿಸಲು, ಎಲ್ಲರನ್ನು ಮೆಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕಾಗಿ ತಲೆಕೆಡಿಸಿಕೊಳ್ಳದೆ ನಮಗನ್ನಿಸಿದಂತೆ ಪ್ರಾಮಾಣಿಕವಾಗಿ ಬದುಕೋಣ
ನನ್ನ ಗೆಳೆಯರೆಲ್ಲರನ್ನೂ ಕೊನೆಯವರೆಗೂ ಕಾಪಾಡಿಕೊಳ್ಳಬೇಕಿತ್ತು.    ಜೀವನದ ಕೊನೆಕ್ಷಣಗಳಲ್ಲಿ ನಾವು ಗಳಿಸಿದ ದುಡ್ಡಿಗಿಂತಾ ನಮಗಾಗಿ ಅಳುವ, ಹಿತ ಬಯಸುವ ಆತ್ಮೀಯರು ಎಷ್ಟಿದ್ದಾರೆಂಬುದೇ ಗಣನೆಗೆ ಬರುವುದು. ಹೆಚ್ಚಿನ ಮಂದಿ ತಮ್ಮದೇ ಬದುಕಿನ ಜಂಜಡದಲ್ಲಿ ಎಷ್ಟು ಮುಳುಗಿ ಹೋಗಿರುತ್ತಾರೆಂದರೆ ಒಂದು ಕಾಲದಲ್ಲಿ ತಮ್ಮ ಜೀವದ ಗೆಳೆಯರೆಂದುಕೊಂಡು ಹೆಗಲಿಗೆ ಹೆಗಲು ಕೂಡಿಸಿ ನಡೆದ ಆ ಗೆಳೆಯರು ಅದು ಯಾವಾಗ ಕಳೆದು ಹೋದರೆಂಬುದು ಕೊನೆಯ ಕ್ಷಣದವರೆಗೂ ಗಮನಕ್ಕೇ ಬಂದಿರುವುದಿಲ್ಲ!    ನಮ್ಮ ಆಸ್ತಿ ಅಂತಸ್ತು ಏನೇ ಇದ್ದರೂ ಕೊನೆಗೂ ಮುಖ್ಯವಾಗುವುದು ಪ್ರೀತಿ ಮತ್ತು ನಾವು ಉಳಿಸಿಕೊಂಡು ಬಂದ ಸಂಬಂಧಗಳು. ಅದಕ್ಕಾಗಿ ಯಾವ ಖರ್ಚೂ ಅಗತ್ಯವಿರುವುದಿಲ್ಲ, ನಮ್ಮ ಒಂದಿಷ್ಟು ಸಮಯ ಮತ್ತು ಕಾಳಜಿಯ ಹೊರತಾಗಿ.- 
ರೇಶ್ಮಾ ರಾವ್ ಸೊನ್ಲೆ

20.10.13

ಒಂದ್ ಕಥೆ ಹೇಳಜ್ಜಿ...

ಕಳೆದುಹೋದ ಕಥಾಸಂಕಲನ

ಒಂದಾನೊಂದು ಕಾಲದಲ್ಲಿ ಒಂದೂರಲ್ಲಿ ಒಬ್ಬಳು ಅಜ್ಜಿ ಇದ್ದಳು. ಸಮಯ ಸಿಕ್ಕಾಗೆಲ್ಲ ಮೊಮ್ಮಕ್ಕಳನ್ನು, ಆಚೀಚೆ ಮನೆ ಮಕ್ಕಳನ್ನು ಸುತ್ತಲೂ ಕೂರಿಸಿಕೊಂಡು, ತನ್ನ ಬೊಚ್ಚು ಬಾಯಿಯಲ್ಲಿ ಎಲೆಅಡಕೆ ಜಗಿಯುತ್ತಾ ಕತೆ ಹೇಳುತ್ತಿದ್ದಳು. ಅವಳ ಕತೆಗಳು ಅದೆಷ್ಟು ರೋಚಕವಾಗಿರುತ್ತಿದ್ದವೆಂದರೆ ಪುಣ್ಯಕೋಟಿ ಹುಲಿರಾಜನ ಬಳಿಗೆ ಹೊರಟಾಗ ಮಕ್ಕಳು ಬಿಕ್ಕಿ ಬಿಕ್ಕಿ ಅಳುತ್ತಿದ್ದವು. ಆಗ ಅಜ್ಜಿ ಅವುಗಳಿಗೆ ಸಮಾಧಾನ ಹೇಳಿ, ಸತ್ಯ ಹೇಗೆ ಗೆಲ್ಲುತ್ತದೆ ನೋಡ್ದನೋ ಪೋರ ಎಂದು ಕತೆ ಕೇಳುತ್ತಿದ್ದ ಗುಂಡನ ಬೆನ್ನು ಸವರುವಳು.
ಮಕ್ಕಳ ಮೆಚ್ಚಿನ ಇನ್ನೊಂದು ಕತೆ ಇತ್ತು. ಅದು ಒಂದು ಕೂದಲಿನ ರಾಜಕುಮಾರಿಯದು. ಅದನ್ನು ಹೇಳೆಂದು ಅಜ್ಜಿಯನ್ನು ಮಕ್ಕಳು ಒತ್ತಾಯಿಸುತ್ತಿದ್ದವು. ಅಜ್ಜಿಗೂ ಸ್ವಲ್ಪ ಆಟ ಆಡಿಸುವ ಎನಿಸುವುದು. ಅವಳು ಹುಗ್ಗಿ ಹರಿದು ಊರು ಮುಳುಗುವ ಕತೆ ಶುರು ಹಚ್ಚುವಳು. ಅದು ಮುಗಿಯುವವರೆಗೂ ಬಾಯಿ ಕಳೆದು ಕೇಳುತ್ತಿದ್ದ ಮಕ್ಕಳು ಮತ್ತೆ ರಾಜಕುಮಾರಿ ಕತೆಗೆ ಗೋಗರೆವವು. ಎಲೆ ಅಡಕೆ ತುಪ್ಪಿ ಬಂದ ಅಜ್ಜಿ ಮಾಳಿಗೆಯಲ್ಲಿಟ್ಟ ಡಬ್ಬಿ ತೆಗೆದು ಮಕ್ಕಳಿಗೆಲ್ಲ ಚಕ್ಕುಲಿ ಕೊಡುವಳು. ಮತ್ತೆ ಆ ರಾಜಕುಮಾರಿಗೆ ಒಂದು ಕೂದಲೆಂದು ರಾಜನ ಎರಡು ಕೂದಲಿನ ಎರಡನೇ ಹೆಂಡತಿಯೂ, ರಾಜನೂ ಸೇರಿ ಅವಳನ್ನು ಮನೆಯಿಂದ ಹೊರ ಹಾಕಿದ್ದನ್ನು ಅಜ್ಜಿ ವರ್ಣಿಸುವಳು. ಅವಳ ಒಳ್ಳೆತನ ಮೆಚ್ಚಿ ಮಾಟಗಾತಿ ತಲೆ ತುಂಬಾ ಕೂದಲು ಬರುವಂತೆ ಮಾಡುವಾಗಂತೂ ಮಕ್ಕಳಿಗೆ ಎಲ್ಲಿಲ್ಲದ ಖುಷಿ. ಕೇಕೆ ಹಾಕಿ ಚಪ್ಪಾಳೆ ತಟ್ಟಿ ನಗುವುವು. ಅಜ್ಜಿ ಕತೆ ಹೇಳದ ದಿನ ಮಕ್ಕಳು ನಿದ್ದೆ ಮಾಡುವುದಿಲ್ಲವೆಂದು ರಚ್ಚೆ ಹಿಡಿಯುತ್ತಿದ್ದವು. ಶಾಲೆಗೆ ಹೋಗಿ,
'ಅಜ್ಜಿ ಎಂದರೆ ನಮ್ಮಜ್ಜಿ
ಕತೆಯನು ಹೇಳುವ ನಮ್ಮಜ್ಜಿ
ಉಪ್ಪು ಮೆಣಸು ಜಜ್ಜಿ
ಮಾಡಿದಳೊಂದು ಬಜ್ಜಿ' ಎಂದು ಪ್ರಾಸಬದ್ಧವಾಗಿ ಹಾಡು ಹೇಳುತ್ತಿದ್ದವು. ಇಂತಿಪ್ಪ ಮಕ್ಕಳ ಮೆಚ್ಚಿನ ಈ ಅಜ್ಜಿ ಸೌದೆ ತರಲೆಂದು ಒಂದು ದಿನ ಕಾಡಿಗೆ ಹೋದಳು. ಇಂದಿಗೂ ಸೌದೆಯೂ ಇಲ್ಲ, ಅಜ್ಜಿಯೂ ಇಲ್ಲ! ಬಹುಶಃ ಸೌದೆ ಸಿಗಲಿಲ್ಲವೇನೋ? ಅಕೇಶಿಯಾ, ನೀಲಗಿರಿ, ರಬ್ಬರ್ ಕಾಡಿನಲ್ಲಿ ಸೌದೆ ಎಲ್ಲಿಂದ ಬರಬೇಕು? ಅವೆಲ್ಲ ದುಡ್ಡಿನ ಮರಗಳಲ್ಲವೇ?!ಅಥವಾ 'ಇನ್ನೂ ಒಂದಾನೊಂದು ಕಾಲದಲ್ಲಿರುವ' ಅಜ್ಜಿಗೆ ಗ್ಯಾಸ್ ಸ್ಟೌ, ಕರೆಂಟ್ ಒಲೆಗಳ ಕತೆ ಹೇಳಿ ಮರಗಳೇ ಮೂದಲಿಸಿ ನಕ್ಕಿರಬಹುದು.
ಅಲ್ಲವೇ ಆಕೆ ತಿರುಗಿ ಬಂದೂ ಮೊಮ್ಮಕ್ಕಳಾರೂ ಗುರುತಿಸಿರಲಾರರು. ಅವುಗಳೋ ಒಂದು ದಿನದಲ್ಲಿ ಶತಮಾನದಷ್ಟು ಮುಂದೋಡುವವು. ಬಟನ್ ಒತ್ತಿದಷ್ಟೂ ಮನರಂಜನೆ ಒದಗಿಸುವ ಕಾರ್ಟೂನ್ ನೆಟ್‌ವರ್ಕ್‌ಗಳಿರಲು, 3 ವರ್ಷಕ್ಕೇ 30ರಂತೆ ಟೈ ಧರಿಸಿ ಶಾಲೆಗೆ ಓಡುವ ಧಾವಂತದಲ್ಲಿ ಅಜ್ಜಿ ನೆನಪಾದಾಳು ಹೇಗೆ?
ಒಂದು ವೇಳೆ ಗುರುತು ಸಿಕ್ಕರೂ ಎಲೆಅಡಕೆ ಜಗಿಯುತ್ತಾ, ಮಾಡರ್ನ್ ಕಲ್ಚರ್ ಗೊತ್ತಿಲ್ಲದ 'ದಟ್ ಡರ್ಟಿ ಅಗ್ಲಿ ವುಮನ್‌'ಗೆ ಅಜ್ಜಿ ಎಂದವಾದರೂ ಹೇಗೆ?!
ಹೀಗೆ ಒಂದಾನೊಂದು ಕಾಲದಲ್ಲಿ ಕತೆ ಹೇಳುತ್ತಿದ್ದ ನಮ್ಮ ನಿಮ್ಮೆಲ್ಲರ ಅಜ್ಜಿ ಇಂದು ಕತೆಯಾದಳು.

= ರೇಶ್ಮಾ ರಾವ್ ಸೊನ್ಲ್

(ಕನ್ನಡಪ್ರಭ ದಲ್ಲಿ ಪ್ರಕಟ)

4.10.13

ಕಾಡ ಹೂ

ಸ್ಯಾಕ್ಸೋಫೋನ್ ಸಾಧಕಿ
ಒಂದಷ್ಟು ಜನ ಬದುಕುವುದಕ್ಕಾಗಿ ಉಸಿರನ್ನು ಶ್ವಾಸಕೋಶಕ್ಕೆ ತುಂಬಲೇ ಹೆಣಗುತ್ತಾರೆ. ಆದರೆ ಕೆಲವರಿರುತ್ತಾರೆ, ಉಸಿರನ್ನೇ ಹಾಡಾಗಿ ಪರಿವರ್ತಿಸುವ ಮಾಂತ್ರಿಕರು. ಇಲ್ಲೊಬ್ಬ ಕಿನ್ನರಿ ಇದ್ದಾಳೆ ನಿರ್ಜೀವವಾಗಿ ಕುಳಿತ ಸ್ಯಾಕ್ಸಫೋನ್‌ಗೂ ಉಸಿರು ತುಂಬಿ ಹಾಡು ಕಲಿಸಿ ರಾಗಗಳನ್ನು ಅಲೆಅಲೆಯಾಗಿ ಗಾಳಿಗೆ ಬಿಡುವವಳು. ಹೀಗೆ ಹತ್ತು ವರ್ಷದಿಂದ ಮಲೆನಾಡಿನ ತೀರ್ಥಹಳ್ಳಿ ಬದಿಯ ಮೂಲೆಮೂಲೆಯಲ್ಲೂ ಗಾಳಿಗೆ ಗುಂಗು ಹತ್ತಿಸಿ ಮದುವೆಮನೆ, ಧಾರ್ಮಿಕ ಕಾರ್ಯಕ್ರಮದ ರಂಗು ನೀಡಿ ಸಂಭ್ರಮ ಹೆಚ್ಚಿಸುತ್ತಿರುವುದು ಪ್ರಥಮ ಬಿಕಾಂ ವಿದ್ಯಾರ್ಥಿನಿ ಸೌಮ್ಯ.
ಈ ಭಾಗದ ಯಾವುದೇ ಶುಭಕಾರ್ಯಗಳಿಗೆ ಹೋದರೆ ಗಂಟೆಗಟ್ಟಲೆ ಬಿಡುವಿಲ್ಲದೆ, ಭಕ್ತಿಗೀತೆ, ಚಿತ್ರಗೀತೆ ಸೇರಿದಂತೆ ಸಂದರ್ಭಕ್ಕೆ ತಕ್ಕಂತೆ ವಾದ್ಯದಲ್ಲಿ ಖಾದ್ಯ ಬಡಿಸುತ್ತಾ ಗಾನ ಸರಸ್ವತಿಯಂತೆ ಕುಳಿತಿರುವ ಈಕೆಯನ್ನು ನೋಡಿದರೆ 'ಮುತ್ತಿನಂತ ಹೆಂಡತಿ'ಯಲ್ಲಿ ಸ್ಯಾಕ್ಸಾಫೋನ್ ನುಡಿಸುವ ಮಾಲಾಶ್ರೀ ಕಣ್ಮುಂದೆ ಬರುತ್ತಾಳೆ. ತನ್ನ ತಂದೆ ನಾಗೇಶ್ ಅವರ ಗರಡಿಯಲ್ಲಿ ಪಳಗಿ, ನಂತರ ಶಿವಪ್ರಸಾದ್, ಕರುಣಾಕರ, ಸಾಲಿಗ್ರಾಮ ಸತೀಶ್ ದೇವಾಡಿಗ ಅವರ ಗುರು ಗಾರುಡಿಯಲ್ಲಿ ಮಿಂದೆದ್ದು ಪಕ್ಕಾ ವಾದ್ಯದಲ್ಲಿ ಪರಿಣತಿ ಸಾಧಿಸಿರುವ ಈಕೆ ಇದುವರೆಗೆ 250ಕ್ಕೂ ಹೆಚ್ಚು ಕಡೆ ಕಾರ್ಯಕ್ರಮ ನೀಡಿದ್ದಾಳೆ. 
ಎಸ್ಸೆಸ್ಸೆಲ್ಸಿ ಓದುತ್ತಿರುವ ಈಕೆಯ ತಂಗಿ ರಮ್ಯಾ ಕೂಡ ಹಿರಿಯಕ್ಕನ ಹಾದಿಯಲ್ಲಿ ಸಾಗುತ್ತಿದ್ದಾಳೆ.  ಇಷ್ಟಾದರೂ ಈ ಹಳ್ಳಿ ಹೂವಿನ ಪ್ರತಿಭೆಗೆ ಇದುವರೆಗೆ ಯಾವುದೇ ಪ್ರಶಸ್ತಿ ಫಲಕಗಳು ಲಭಿಸದಿರುವುದು ವಿಪರ್ಯಾಸವೇ ಸೈ. ಈ ಬಗ್ಗೆ ಈಕೆಯ ಪರಿಚಿತರನ್ನು ಕೇಳಿದಾಗ 'ಇಲ್ಲಿ ನಗರದಂತೆ ಇದನ್ನೆಲ್ಲ ಪ್ರತಿಭೆಯೆಂದು ನೋಡುವುದಿಲ್ಲ. ಅವಳು ಸ್ಯಾಕ್ಸಾಫೋನ್ ನುಡಿಸುತ್ತಾಳಂತೆ ಎಂಬುದು ಒಂದು ಸಾಮಾನ್ಯ ವಿಚಾರವೆಂಬಂತೆ ಜನ ನೋಡುತ್ತಾರೆ' ಎಂದು ವಿಷಾದಿಸುತ್ತಾರೆ. ಸೌಮ್ಯಳಿಗೊಂದು ಅಭಿನಂದನೆ ಹೇಳಬೇಕೆನಿಸಿದರೆ 9448106837ಗೆ ಕರೆ ಮಾಡಿ.- 
ರೇಶ್ಮಾ

9.8.13

ಭ್ರಾಂತು

ಹಾಗಾದ್ರೆ, ನೋಡಿದ್ದು ಸುಳ್ಳಾ?
'ಕೇಳಿದ್ದು ಸುಳ್ಳಾಗಬಹುದು, ನೋಡಿದ್ದು ಸುಳ್ಳಾಗಬಹುದು, ನಿಧಾನಿಸಿ ಯೋಚಿಸಿದಾಗ ನಿಜವು ತಿಳಿವುದು...'- ಭ್ರಾಂತಿ (ಇಲ್ಯೂಷನ್), ಕಣ್ಕಟ್ಟನ್ನು ಹೀಗೆ ವಿವರಿಸಬಹುದು.ಎಲ್ಲ ಇಂದ್ರಿಯಗಳೂ ಮೋಸ ಹೋಗುತ್ತವೆ. ಆದರೆ ಕಣ್ಣು ಪ್ರಧಾನ ಪಾತ್ರ ವಹಿಸುತ್ತದೆ. ಸಾಮಾನ್ಯವಾಗಿ ದೃಷ್ಟಿಭ್ರಾಂತಿ ಎಲ್ಲರಿಗೂ ಆಗುತ್ತದೆ. ಮೈಮ್‌ಗಳನ್ನು ನೋಡುವಾಗ ಅಲ್ಲಿ ವಸ್ತುಗಳೇನೂ ಇರದಿದ್ದರೂ ವ್ಯಕ್ತಿ ಏಣಿ ಹತ್ತುವುದನ್ನು, ಈಜುವುದನ್ನು ಎಲ್ಲವನ್ನು ಗ್ರಹಿಸುತ್ತೇವೆ.
ವೆಂಟ್ರಿಲೋಕ್ವಿಸ್ಟ್ (ಮಾತಾಡುವ ಗೊಂಬೆ ಆಡಿಸುವವರು) ಗಳನ್ನು ನೋಡುವಾಗ ಗೊಂಬೆ ಮಾತಾಡಲು ಸಾಧ್ಯವಿಲ್ಲವೆಂದು ಗೊತ್ತಿದ್ದರೂ ಗೊಂಬೆಯೇ ಮಾತನಾಡುತ್ತಿದೆ ಎಂದು ನಂಬುತ್ತೇವೆ. ಏಕೆಂದರೆ ನಮ್ಮ ಕಣ್ಣಿಗೆ ಗೊಂಬೆ ಬಾಯಿ ಆಡಿಸುವುದು ಕಾಣುತ್ತದೆ. ನಾವೇನನ್ನು ನೋಡುತ್ತೇವೆಯೋ ಅದು ಶೇ.10 ಭಾಗ ಆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಉಳಿದ ಶೇ.90ನ್ನು ಮೆದುಳು ಯೋಚನಾಸರಣಿಗೆ ಹಚ್ಚಿ ನಿರ್ಧರಿಸುತ್ತದೆ. ಆದ್ದರಿಂದ ವಿಜ್ಞಾನಿಗಳು ಭ್ರಾಂತಿಯನ್ನು ನಮ್ಮ ಇಂದ್ರಿಯಗಳ ಕೆಲಸದ ಬಗ್ಗೆ ಅಧ್ಯಯನ ಮಾಡಲು ಉಪಯೋಗಿಸುತ್ತಾರೆ. ಭ್ರಾಂತಿ ನಮ್ಮ ಕಣ್ಕಟ್ಟುವುದಕ್ಕಿಂತ ಹೆಚ್ಚಾಗಿ ನಾವು ಹೇಗೆ ಒಂದು ವಸ್ತುವನ್ನು ಇಲ್ಲವೆ ಪರಿಸ್ಥಿತಿಯನ್ನು ಅವಲೋಕಿಸುತ್ತೇವೆ ಎಂಬುದನ್ನು ತಿಳಿಯಲು ಸಹಾಯ ಮಾಡುತ್ತದೆ ಎನ್ನುತ್ತಾರೆ ವಿಜ್ಞಾನಿಗಳು. 
ನಾನೀಗ ನಿಮ್ಮೆದುರಿನಲ್ಲಿ ಕುಳಿತಿದ್ದೇನೆಂದುಕೊಳ್ಳಿ. ನಿಮ್ಮ ಕಣ್ಣು 6 ಅಡಿಯ ವ್ಯಕ್ತಿ ನನಗಿಂತ 4 ಅಡಿ ದೂರದಲ್ಲಿ ಕುಳಿತಿದ್ದಾನೆ ಎಂದು ಹೇಳುತ್ತದೆ. ನಿಮಗಿಂತ 8 ಅಡಿ ದೂರದಲ್ಲಿ ಮತ್ತೊಬ್ಬ ಕುಳಿತಿದ್ದು, ಅವನು 3 ಅಡಿ ಇದ್ದಾನೆಂದು ಕಣ್ಣು ಹೇಳುತ್ತದೆ. ಆದರೆ ಮೆದುಳು ಅವನಿರುವ ದೂರವನ್ನು ಪರಿಗಣಿಸಿ ಅವನೂ 6 ಅಡಿ ಇದ್ದಿರಬಹುದೆಂದು ಗ್ರಹಿಸುತ್ತದೆ.  ಇಷ್ಟೆಲ್ಲ ಆದರೂ ಭ್ರಾಂತಿ ಏಕಾಗುತ್ತದೆಂಬ ಪ್ರಶ್ನೆಗೆ ನಿಖರ ಉತ್ತರವಿನ್ನೂ ಸಿಕ್ಕಿಲ್ಲ. ಆದರೆ ಇಂಥ ಕಣ್ಕಟ್ಟನ್ನು ಬಳಸಿಯೇ ಅಲ್ಲವೇ ಮಾಂತ್ರಿಕರು ಮುಗ್ಧರನ್ನು ಮೋಸಗೊಳಿಸುತ್ತಿದ್ದುದು.
ಚಂದ್ರನ ಭ್ರಾಂತಿ
ಗುಡ್ಡದ ಬದಿಯಲ್ಲಿ ನೋಡುವಾಗ ಚಂದ್ರ ಕಾಣುವಷ್ಟು ದೊಡ್ಡದಾಗಿ ಮೇಲಿದ್ದಾಗ ಕಾಣುವುದಿಲ್ಲ. ಹಾಗೆಂದು ಚಂದ್ರನ ಗಾತ್ರ ಬದಲಾಗುವುದಿಲ್ಲ. ಇದೊಂದು ಇಲ್ಯೂಷನ್ ಅಷ್ಟೇ. ನಾವು ಗ್ರಹಿಸುವುದೇ ಹಾಗೆ... ದೂರದ ಬೆಟ್ಟವನ್ನು ತೋರಿಸುವಾಗ 'ಓಓ....ಲ್ಲಿ.... ದೂರದಲ್ಲಿ' ಎನ್ನುತ್ತೇವೆ. ಅದೇ ಆಕಾಶದಲ್ಲಿರುವ ನಕ್ಷತ್ರವನ್ನು ತೋರಿಸುವಾಗ, 'ಇದೋ ಇಲ್ಲಿ' ಎನ್ನುತ್ತೇವೆ. ಆದರೆ ನಿಜವಾಗಿ ನಕ್ಷತ್ರದ ದೂರ ಹೆಚ್ಚಿನದಾಗಿರುತ್ತದೆ. ಲಂಬವಾದ ದೂರ ಹತ್ತಿರವೆನಿಸುತ್ತದೆ, ಅಡ್ಡಡ್ಡದ ದೂರ ದೂ...ರವೆನಿಸುತ್ತದೆ. ಹಾಗಾಗೇ ಚಂದ್ರ ಮೇಲಿದ್ದಾಗ ಇಷ್ಟು ಹತ್ತಿರದಲ್ಲಿದ್ದರೂ ಚಿಕ್ಕದಾಗಿ ಕಾಣುತ್ತಿದ್ದಾನೆ. ಅದೇ ಗುಡ್ಡದ ಬದಿಯ ಚಂದ್ರ ಅಷ್ಟು ದೂರದಲ್ಲಿದ್ದರೂ ದೊಡ್ಡದಾಗಿ ಕಾಣುತ್ತಿದ್ದಾನೆ ಎಂದರೆ ಆತ ಕೆಳಗೆ ಬಂದಿರುವುದರಿಂದ ದೊಡ್ಡದಾಗಿ ಕಾಣಿಸುತ್ತಿದ್ದಾನೆ ಎಂದು ಭಾವಿಸುತ್ತೇವೆ.
ಆಸಕ್ತಿಯೂ ಕಾರಣ
ಐನ್‌ಸ್ಟೀನ್ 'ಸಾಪೇಕ್ಷತಾ ಸಿದ್ಧಾಂತ' ವಿವರಿಸುವಾಗ ಒಂದು ಉದಾಹರಣೆ ನೀಡುತ್ತಾನೆ. ಉರಿಯುತ್ತಿರುವ ಒಲೆ ಮೇಲೆ ಒಂದು ನಿಮಿಷ ಕುಳಿತರೆ ಒಂದು ಗಂಟೆ ಎನಿಸುತ್ತದೆ. ಅದೇ ಪ್ರೇಯಸಿಯೊಂದಿಗೆ ಪಾರ್ಕಿನಲ್ಲಿ ಒಂದು ಗಂಟೆ ಕುಳಿತರೂ ಒಂದು ನಿಮಿಷವೆನಿಸುತ್ತದೆ. ಭಾರವಾದ 5 ಕೆಜಿಯ ಸಿಲಿಂಡರ್ ಎತ್ತಲು ಒದ್ದಾಡುವ ಹುಡುಗ 45 ಕೆಜಿಯ ತನ್ನ ಹುಡುಗಿಯನ್ನು ಸರಾಗವಾಗಿ ಹೊತ್ತು ತಿರುಗುವುದಿಲ್ಲವೇ? ಅಂದ ಮೇಲೆ ಈ ಅನಿಸುವಿಕೆಗಳು ನಮ್ಮ ಆಸಕ್ತಿಯನ್ನವಲಂಬಿಸುತ್ತವೆ. 
ಮೋಸ ಹೋಗುವ ಫ್ಯಾಸಿನೇಶನ್ 
ನ್ನೋಡಿದ್ದನ್ನೆಲ್ಲ ನಂಬಬೇಕಾಗಿಲ್ಲ. ನನ್ ಕಣ್ಣೇ ನಂಗೆ ಮೋಸ ಮಾಡ್ತು ಎಂದು ಅದೆಷ್ಟೋ ಬಾರಿ ಹೇಳುತ್ತೇವೆ. ಆದ್ರೆ ಹಾಗೆ ಮೋಸ ಹೋಗುವುದರಲ್ಲೂ ನಾವು ಮನುಷ್ಯರಿಗೊಂಥರಾ ಫ್ಯಾಸಿನೇಶನ್. ಹಾಗಾಗಿಯೇ ಸುಳ್ಳೆಂದು ಗೊತ್ತಿದ್ದರೂ ಮ್ಯಾಜಿಕ್‌ಗಳನ್ನು ಚೆನ್ನಾಗಿ ಎಂಜಾಯ್ ಮಾಡುತ್ತೇವೆ. 
ಕಾಲವೆಂಬ ಭ್ರಾಂತಿ
ಹಲವು ವಿಜ್ಞಾನಿ, ತತ್ವಜ್ಞಾನಿಗಳ ಪ್ರಕಾರ ಕಾಲವೆಂಬುದೇ ದೊಡ್ಡ ಭ್ರಾಂತು. ನಾವು ನಮ್ಮ ಅನುಕೂಲಕ್ಕಾಗಿ ಭೂತ, ವರ್ತಮಾನ, ಭವಿಷ್ಯ ಎಂದು 3 ವಿಭಾಗವನ್ನಾಗಿ ಮಾಡಿಕೊಂಡಿದ್ದೇವೆ. ಆದರೆ ಇರುವುದು ವರ್ತಮಾನವೊಂದೇ. ಅದೂ ಸದಾ ಕಾಲ ಬದಲಾಗುತ್ತಲೇ ಇರುವ ವರ್ತಮಾನ. ನಿನ್ನೆಯೂ ಆ ಕ್ಷಣಕ್ಕೆ ವರ್ತಮಾನವಾಗಿತ್ತು. ಮತ್ತು ಅದು ಆಗ ಮಾತ್ರ ಸತ್ಯವಾಗಿತ್ತು. ನಾಳೆಯೂ ವರ್ತಮಾನದಲ್ಲಷ್ಟೇ ಅನುಭವಕ್ಕೆ ಬರುತ್ತದೆ. ಅಂದ ಮೇಲೆ ನಿನ್ನೆ, ಇಂದು, ನಾಳೆಗಳೆಲ್ಲ ಭ್ರಾಂತಿ ಅಷ್ಟೇ ಆಗಲು ಸಾಧ್ಯವಲ್ಲವೇ?
 -ರೇಷ್ಮಾರಾವ್ ಸೊನ್ಲೆ

25.7.13

ಒಂದು ಫಾಲ್ಸ್ ರಿರ್ಪೋಟ್

ಈಗ ಜಲಪಾತ ನೋಡಲು ಸೂಕ್ತ ಸಮಯ
ಅದೊಂದು ಗೊಂಡಾರಣ್ಯ. ಪ್ರಾಣಿ ಪಕ್ಷಿಗಳ ಇಂಚರ ಅಲ್ಲಿ ಹೊಸ ಲೋಕವನ್ನೇ ಸೃಷ್ಟಿಸಿತ್ತು. ಅಲ್ಲೊಬ್ಬಳು ರಾಜಕುಮಾರಿ. ಅನುರೂಪ ಸುಂದರಿ. ಪ್ರತಿದಿನ ಪುಟ್ಟ ಕೊಳವೊಂದರಲ್ಲಿ ಸ್ನಾನ ಮಾಡಿ ಸಿಹಿ ಹಾಲು ಸ್ವೀಕರಿಸುವುದು ಅವಳ ದಿನಚರಿ. ಅದೊಂದು ದಿನ ಆಕೆ ಸ್ನಾನ ಮಾಡಿ ಹಾಲು ಸೇವಿಸಲು ಬಂಗಾರದ ಚೊಂಬನ್ನು ಎತ್ತುತ್ತಿರುವಾಗ ರಾಜಕುಮಾರನೊಬ್ಬ ಎವೆಯಿಕ್ಕದೆ ತನ್ನನ್ನೇ ನೋಡುತ್ತಿರುವುದನ್ನು ನೋಡುತ್ತಾಳೆ. ನಾಚಿಕೆಯಿಂದ ತನ್ನ ನಗ್ನ ದೇಹ ಮುಚ್ಚಿಕೊಳ್ಳಲು ಹಾಲನ್ನು ಅಗಲವಾಗಿ ಚೆಲ್ಲುತ್ತಾಳೆ. ಅಷ್ಟರಲ್ಲಿ ಸಖಿಯರು ಬಟ್ಟೆ ತಂದು ಹೊದಿಸುತ್ತಾರೆ. ಹಾಗೆ ಚೆಲ್ಲಿದ ಹಾಲು ರಾಜಕುಮಾರಿಯ ಗೌರವ ಹಾಗೂ ಮರ್ಯಾದೆಯ ಪ್ರತೀಕವಾಗಿ ಸಾಗರದಂತೆ ಹರಿಯಲಾರಂಭಿಸುತ್ತದೆ. ಇಂದಿಗೂ ಆ ದೂದ್‌ಸಾಗರ(ಹಾಲಿನ ಹೊಳೆ) ಕಾಡಿನ ಮಧ್ಯೆ ಧುಮ್ಮಿಕ್ಕಿ ಹರಿಯುತ್ತಿರಲು ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ಞ. ಹಾಗೆನ್ನುತ್ತದೆ ಕತೆ.
ಈ ಮಾಡರ್ನ್ ಸರ್ವಜ್ಞನ ಪದಗಳನ್ನು ಮನಸಿನಾಳಕ್ಕೆ ತೆಗೆದುಕೊಂಡು ದೂದ್‌ಸಾಗರ ನೋಡಲು ಹೊರಟವರು ನಾವು ಹತ್ತು ಮಂದಿ. ಅದಾಗಲೇ ಯೂಟ್ಯೂಬ್‌ನಲ್ಲಿ ಕೇಳಿದ ಜಲಪಾತದ ಸದ್ದು ಕಿವಿಯೊಳಗೆ ಮನೆ ಮಾಡಿ ಕುಳಿತಾಗಿತ್ತು. ರಾತ್ರಿಯಿಡಿ ಬೆಂಗಳೂರನ್ನು ದೂರ ತಳ್ಳುತ್ತಾ ರೈಲು ಲೋಂಡಾ ತಲುಪಿತು. ಅಲ್ಲಿಂದ ಕ್ಯಾಸಲ್ ರಾಕ್ ಅರ್ಧ ಗಂಟೆಯ ದಾರಿ. ಮತ್ತೊಂದು ರೈಲನ್ನು ಹತ್ತಿದೆವು. ರೈಲು ದೂದ್‌ಸಾಗರ್ ಬಳಿಯೇ ನಿಲ್ಲುತ್ತಿತ್ತು. ಆದರೆ ಕ್ಯಾಸಲ್ ರಾಕ್‌ನಲ್ಲಿಳಿದು 14 ಕಿಮೀ ಟ್ರ್ಯಾಕ್ ಟ್ರೆಕ್ಕಿಂಗ್ ಮಾಡಿ ಗುರಿ ತಲುಪುವುದು ನಮ್ಮ ಯೋಜನೆ. ಏಕೆಂದರೆ ಕಷ್ಟ ಜೀವಿಗಳು ನಾವು! ಜಲಪಾತದ ಬಳಿ ಊಟ, ವಸತಿಗೆ ಏನೂ ವ್ಯವಸ್ಥೆ ಇಲ್ಲ. ಹಾಗಾಗಿ ಟೆಂಟು, ಸ್ಲೀಪಿಂಗ್ ಬ್ಯಾಗ್, ಎರಡು ದಿನದ ಲಗೇಜು, ಜೊತೆಗೆ 6 ಹೊತ್ತಿಗಾಗುವಷ್ಟು ಚಪಾತಿ, ಪರೋಟ, ಬ್ರೆಡ್ ಜ್ಯಾಮ್‌ನ್ನು ಕೈ, ಭುಜ, ಬೆನ್ನುಗಳಲ್ಲಿ ನೇತಾಡಿಸಿಕೊಂಡು ರೈನ್ ಕೋಟ್ ಮುಚ್ಚಿ ನಡೆಯತೊಡಗಿದೆವು. 
ಒಂದು ಕಿಮೀ ನಡೆವಷ್ಟರಲ್ಲಿ ಬ್ಯಾಗಿನಿಂದ ಡ್ರೈ ಫ್ರೂಟ್ಸ್, ಗ್ಲೂಕೋಸ್ ಹೊರಬರಲಾರಂಭಿಸಿತು. ಹಳಿಯ ಒಂದು ಭಾಗ ಪ್ರಪಾತ, ಇನ್ನೊಂದು ಬದಿಗೆ ಎತ್ತರದ ಕಲ್ಲಿನ ಗೋಡೆಯಂತಾ ರಚನೆ. ಇದೇನು ಮುಗಿಯದಾ ಪಯಣವೇನೋ ಎಂಬಂತೆ ಕಣ್ಣು ಕೀಲಿಸಿದಷ್ಟೂ, ದಾರಿ ಸವೆಸಿದಷ್ಟೂ ಕಂಬಿಯೇ. 'ಕಂಬಿ ಎಣಿಸೋದು' ಸುಲಭವಲ್ಲ ಅಂತ ಸ್ವಲ್ಪ ಸಮಯಕ್ಕೇ ಗೊತ್ತಾಗಿ ಹೋಯ್ತು. ಕರ್ನಾಟಕಕ್ಕೆ ಬೆನ್ನು ಹಾಕಿ ಗೋವಾದೊಳಕ್ಕೆ ಬಲಗಾಲಿಟ್ಟು ಪ್ರವೇಶಿಸಿದೆವು. 'ಕಾಡು'ಹರಟೆಯಲ್ಲಿ ನಡೆವಾಗ ಇದ್ದಕ್ಕಿದ್ದಂತೆ ನಿಂತ ನೆಲ ಕಪ್ಪಾಯಿತು. ಸುರಂಗದೊಳಕ್ಕೆ ಪ್ರವೇಶಿಸಿದ್ದೆವು. ಲಾಟೀನು ತೆಗೆದೆ. ಕಾಲು ನೆಲದ ಮೇಲೇ ಇದೆ ಎಂದು ಖಾತ್ರಿಯಾಗುವಷ್ಟರ ಮಟ್ಟಿಗೆ ಲಾಟೀನು ಬೆಳಕು ಧೈರ್ಯ ನೀಡಿತ್ತು. ಅನಾಯಾಸವಾಗಿ 'ಜುಗಾರಿ ಕ್ರಾಸ್‌'ನ ಸುರೇಶ ಮತ್ತು ಗೌರಿ ನಮ್ಮ ಪಕ್ಕದಲ್ಲೇ ನಡೆಯತೊಡಗಿದ್ದರು. ಅಷ್ಟರಲ್ಲೇ ರೈಲು ಕೂ ಎನ್ನುತ್ತಾ ಸುರಂಗದೊಳಗೆ ದಾಳಿಯಿಟ್ಟಿತು. ಕಿವಿಯ ತಮಟೆ ಉಳಿಸಿಕೊಳ್ಳುವ ಹೋರಾಟಕ್ಕೆ ಸಜ್ಜಾಗಿ ಎರಡೂ ಕೈಗಳೂ ಅಡ್ಡ ನಿಂತವು. ಸುರಂಗದ ಗೋಡೆಗೆ ಆತು ನಿಂತೆವು. ಅಬ್ಬ! ರೈಲೆಷ್ಟು 'ಊ'ದ್ದ ಇರುತ್ತದೆಂದು ಜ್ಞಾನೋದಯವಾಯ್ತು! 'ಕತ್ತಲಿಂದ ಬೆಳಕಿನೆಡೆಗೆ' ಹೆಜ್ಜೆ ಇಟ್ಟ ಆ ಕ್ಷಣ, ಯಪ್ಪಾ! ರೈನ್ ಕೋಟ್ ತುಂಬಾ ಪಾಚಿ, ಅಲ್ಲಲ್ಲಿ ಡಿಸೈನ್‌ನಂತೆ ಹತ್ತಿಕೊಂಡ ಇಂಬಳಗಳು. ರೈಲೇನಾದರೂ ಬರುತ್ತಿದ್ದರೆ ಹೆದರಿ ರಿವರ್ಸ್ ಗೇರ್‌ನಲ್ಲಿ ಓಡಬೇಕು, ಹಾಗೆ ಕಿರುಚಿಕೊಳ್ಳುತ್ತಲೇ ಕಲ್ಲಿನಿಂದ ಉಜ್ಜಿ ತೆಗೆದೆವು. ಹೀಗೆ ನಾಲ್ಕೈದು ಸುರಂಗ ಹಾದೆವು. 
ಅಷ್ಟರಲ್ಲಿ ನಮ್ಮ ಗುಂಪಿನ ನಾಲ್ಕೈದು ಮಂದಿ ಗುಂಪು ಚದುರಿ ಮುಂದೆ ಹೋಗಿದ್ದರು. ಏಳೆಂಟು ಕಿಮೀ ಕ್ರಮಿಸಿರಬಹುದು, ನೆಟ್‌ವರ್ಕ್ ಇಲ್ಲದೆ ಸತ್ತಂತೆ ತೆಪ್ಪಗೆ ಬಿದ್ದಿದ್ದ ನಮ್ಮ ಜಂಗಮವಾಣಿಗಳ ಮಧ್ಯೆ ಯಾವುದೋ ಒಂದು ಶಾಪವಿಮೋಚನೆಯಾದಂತೆ ಹಾಡತೊಡಗಿತು. ನಮ್ಮಿಂದ ತಪ್ಪಿ ಹೋದ ಗುಂಪು ನಡೆಯಲಾರದೆ ರೈಲು ಹತ್ತಿತ್ತು. ನಾವೂ ರೈಲಿನೆಡೆಗೆ ಓಡಿದೆವು. ಹೇಗೋ ಸಿಕ್ಕಿದ ಬೋಗಿ ಹತ್ತಿಕೊಂಡು ಕುಳಿತ ಸ್ವಲ್ಪ ಹೊತ್ತಿಗೆ ರೈಲು ನಿಂತಿತು. ಯಾವ ಸ್ಟಾಪ್ ಎಂದು ನೋಡೋಣವೆಂದರೆ ಬಾಗಿಲಲ್ಲಿ ಫೋಟೋಗ್ರಫಿ ಮಾಡುತ್ತಿದ್ದ ಪಂಜಾಬಿಗಳು ಅಲ್ಲಾಡುತ್ತಿಲ್ಲ. ಕೊನೆಗೂ ಕಂಡಿಯಲ್ಲಿ ಹಣಕಿ ಅದೇ ದೂದ್‌ಸಾಗರ ಎಂದು ತಿಳಿಯುವಷ್ಟರಲ್ಲಿ ರೈಲು ಓಡತೊಡಗಿತ್ತು!ಎರಡು ಸೆಕೆಂಡಿನಲ್ಲಿ ಜಲಪಾತದ ಅದಮ್ಯ ಸೌಂದರ್ಯ ಮಿಂಚಿ ಮರೆಯಾಯ್ತು. (ಸ್ವರ್ಗ ರಪ್ಪಂತ ಪಾಸಾಗೋದು ಅಂದ್ರೆ ಅದೇ ಏನೋ!) ಇನ್ನೇನು ಮಾಡಲು ಸಾಧ್ಯ? ತಲೆ ಕೆಡಿಸಿಕೊಳ್ಳದೆ ಗೋವಾ ಬೀಚಿನಲ್ಲಿ ಆಟವಾಡಿ ಹಿಂತಿರುಗೋಣ ಎಂದುಕೊಂಡೆವು. ಆದರೂ ಜಲಪಾತದ ಸದ್ದು 'ಬನ್ನಿ ಬನ್ನಿ' ಎಂದಂತಾಗುತ್ತಿತ್ತು. ಮಳೆಗಾಲದಲ್ಲಿ ಆ ಹಾದಿಯುದ್ದಕ್ಕೂ ಸಣ್ಣಪುಟ್ಟ ಜಲಪಾತಗಳ ಜಾತ್ರೆಯೇ ನೆರೆದಿರುತ್ತದೆ. ಹೀಗಾಗಿ ಧೋ ಎಂಬ ಸದ್ದು ಬೆಂಬಿಡುವುದೇ ಇಲ್ಲ. ಅಷ್ಟರಲ್ಲಿ ರೈಲು ನಿಂತಿತು. ಹಾರಿಕೊಂಡೆವು. 6 ಕಿಮೀ ಮುಂದೆ ಹೋಗಿದ್ದೆವು. ಚಾರಣದ ದಿಕ್ಕು ಬದಲಾಗಿತ್ತು. ಮಳೆ ಸುರಿಯುತ್ತಲೇ ಇತ್ತು.ಬೆಳಗ್ಗೆ 9ಕ್ಕೆ ನಡೆಯತೊಡಗಿದವರು ಸಂಜೆ 4ಕ್ಕೆ ಜಲಪಾತದೆದುರು ನಿಂತಿದ್ದೆವು. 
ಅಬ್ಬಾ, ಏನದರ ಭೋರ್ಗರೆತ! ರುದ್ರ ರಮಣೀಯವೆಂಬ ಉಪಮೆ ಜೀವಮಾನದಲ್ಲೊಮ್ಮೆ ಉಪಯೋಗಕ್ಕೆ ಬಂದಿತು. ಮಾಂಡೋವಿ ನದಿ ಸಮುದ್ರ ಸೇರುವ ಕನಸಿನ ಹಾದಿಯಲ್ಲಿ ಬಿಳಿ ನೊರೆಯಾಗಿ 1017 ಅಡಿ ಎತ್ತರದಿಂದ 100 ಅಡಿ ಅಗಲವಾಗಿ ಸೆರಗು ಹರಡಿಕೊಂಡು ಧುಮ್ಮಿಕ್ಕುತ್ತಿದ್ದಳು. ಜಲಪಾತದ ಎದುರು ನಿಂತರೆ ಕಣ್ಣು ಬಿಡಲಾಗದಂತೆ ಜಡಿಮಳೆಯ ರೀತಿ ನೀರು ಚಿಮ್ಮುತ್ತಿತ್ತು. ಭಾರತದ 5ನೇ ಎತ್ತರದ ಜಲಪಾತದ ಸಿಂಚನ ಪುಳಕ ತಂದಿತು. ಈ ಸೌಂದರ್ಯ ರಾಶಿ ಕಂಡು ಬದುಕು ಸಾರ್ಥಕವಾಯಿತೆಂದು ಇದುವರೆಗೆ ಯಾರಾದರೂ ಅದರಲ್ಲಿ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಅನುಮಾನ ಕಾಡಿತು.ಜಲಪಾತದ ಪಕ್ಕದಲ್ಲೊಂದು ಬಸ್ ಸ್ಟ್ಯಾಂಡ್‌ನಂಥ ಜಾಗ, ಬಿಟ್ಟರೆ ಎದುರಿಗೆ ಹಳಿಯ ಇನ್ನೊಂದು ಬದಿ ಟೀ ಅಂಗಡಿ ಮತ್ತು ಒತ್ತೊತ್ತಾಗಿ ಹಾಕಿದರೆ 30 ಟೆಂಟ್ ಹಾಕಬಹುದಾದಷ್ಟು ಜಾಗ. ಅದಿಷ್ಟೇ ಪ್ರವಾಸಿಗರಿಗಾಗಿ ಅಲ್ಲಿರುವ ಸೌಲಭ್ಯಗಳು. ಒಂದು ತರಾ ಒಳ್ಳೆಯದೇ. ಇಲ್ಲಿ ಉಸಿರು ಕಟ್ಟಬಹುದಾದಷ್ಟು ಆಮ್ಲಜನಕ ಶ್ವಾಸಕೋಶವನ್ನೆಲ್ಲ ತುಂಬುತ್ತದೆ. ಅದನ್ನು ಸ್ಟೋರ್ ಮಾಡಿಕೊಳ್ಳಲು ದೇವರು ಇನ್ನೊಂದು ಅಂಗ ಕೊಡಬಹುದಿತ್ತೆನಿಸಿತು. ಆದರೆ ನಮ್ಮ ಭಾರತದ ಸುಸಂಸ್ಕೃತ ಧೀರಪುತ್ರರು ತಾವು ತಿಂದ ನಂತರ ಪ್ಲಾಸ್ಟಿಕ್, ಬಾಟಲ್‌ಗಳನ್ನು ಎಲ್ಲೆಂದರಲ್ಲಿ ಎಸೆದು ಭಾರ ಕಳೆದುಕೊಂಡಂತೆ ನಿರಾಳರಾಗುತ್ತಾರೆ. ಅಷ್ಟೇ ಅಲ್ಲ, ಟೀ ಅಂಗಡಿಯೊಳಗೆ ಅಡಗಿ ಕುಳಿತ ಬಿಯರ್, ವಿಸ್ಕಿ ಬಾಟಲ್‌ಗಳು ಹಗಲಿರುಳೆನ್ನದೆ ಸದ್ದು ಮಾಡುತ್ತವೆ. 
ಮಳೆಗಾಲದಲ್ಲಿ ವಾರಾಂತ್ಯದಲ್ಲಂತೂ ಸಾವಿರಾರು ಯುವ ಪ್ರವಾಸಿಗರು ಬರುತ್ತಾರೆ, ವಾಲುತ್ತಾರೆ, ಕೂಗುತ್ತಾರೆ, ಸಿಗರೇಟು ಹೊಗೆ ಬಿಟ್ಟು ಮರಗಳಿಗೆ ಕೆಲಸ ಕೊಡುತ್ತಾರೆ.ಈ ದೃಶ್ಯಾವಳಿ ನೋಡಿ ಬೆದರಿದ್ದ ಮುಂಚೆಯೇ ತಲುಪಿದ್ದ ನಮ್ಮ ಅರ್ಧ ತಂಡ ಸುರಂಗದ ಮೇಲ್ಭಾಗದಲ್ಲಿ 3 ಟೆಂಟು ಹಾಕಿ ಕುಳಿತಿದ್ದರು. ಆ ದೃಶ್ಯಾವಳಿ ನೋಡಿ ಬೆದರುವ ಸರದಿ ನಮ್ಮದಾಗಿತ್ತು. ಮನುಷ್ಯ ಮಾತ್ರರಾದವರಿಗೆ ಹುಡುಕಲಸಾಧ್ಯವಾದ ಸ್ಥಳವದು. ಒಂದು ಜಲಪಾತವನ್ನು ದಾಟಿ(ಹಾರಿ), ಬಂಡೆ ಹತ್ತಿ ಇಳಿದು, ಇಂಬಳ ತುಂಬಿದ ಹುಲ್ಲು ಹಾಸಿನ ಮೇಲೆ ಹಂಸತೂಲಿಕಾತಲ್ಪದಂತೆ ನಮ್ಮ ಟೆಂಟುಗಳು! ಟೆಂಟಿನಾಚೆಗೆ ಒಂದು ಹೆಜ್ಜೆ ಇಟ್ಟರೆ ಮೂಳೆಯೂ ಸಿಗದಂತೆ ಪ್ರಪಾತದ ಮಡಿಲಲ್ಲಿ ಮಡಿಯಬೇಕಿತ್ತು. ನಮ್ಮ ನಡುವೆಯೇ ಇದ್ದ ಈ ನಾಲ್ವರು ಟೆಂಟು ಹಾಕಿದ ಮಹಾನುಭಾವರನ್ನು ಕಂಡು ಮೂಕವಿಸ್ಮಿತರಾದೆವು. ಯಾವುದೇ ಕ್ಷಣದಲ್ಲಿ ನಮ್ಮ ಭವಿಷ್ಯದ ಗೆರೆಗಳು ಅಳಿಸಬಹುದೆಂದು ಯೋಚಿಸಿ ಹೆಜ್ಜೆ ಎತ್ತಿಡಲಾರದಷ್ಟು ಸುಸ್ತಾಗಿದ್ದರೂ ಮತ್ತೆ ಟೆಂಟ್‌ಗಳನ್ನು ಕಿತ್ತು ಕುಡುಕರ ಕುಟೀರಗಳ ಬಳಿ ತಂದೆವು. 
ಕಾಲು ಮುರಿದುಕೊಂಡು ಬಿದ್ದಿದ್ದ ಸೃಷ್ಟಿಯ ಅಪರಿಮಿತ ಸೌಂದರ್ಯದೆದುರು ಟೆಂಟ್‌ನೊಳಗೆ ಕಾಲು ಚಾಚಿ ಮಲಗಿದ ಸುಖ ರೋಮಾಂಚನ ನೀಡಿತ್ತು. ಸುರಿದಷ್ಟೂ ಮುಗಿಯದ ಜಲಪಾತ ನಮ್ಮ ರಾಗ ಕಳೆದುಕೊಂಡ ಕನ್ನಡದ ಹಾಡುಗಳಿಗೂ ಲಯ ತಪ್ಪದೆ ಸಂಗೀತ ನೀಡುತ್ತಿತ್ತು. ಎಲ್ಲರ ಪ್ರಾತಃವಿಧಿಗಳೂ ಏರುಪೇರಾಗಿ ಕತ್ತಲೆಯಲ್ಲಿ ತೆಪ್ಪಗೆ ಹಾಸಿ ಬಿದ್ದಿದ್ದ ರೈಲುಕಂಬಿಗಳು ಪಾವನವಾದವು. ಬೆಳಗಾಗುವಾಗ ಎಡೆಬಿಡದೆ ಸುರಿಯುತ್ತಿದ್ದ ಜಡಿಮಳೆಗೆ ನಮ್ಮ ಒದ್ದೆಯಾದ ಸ್ಲೀಪಿಂಗ್ ಬ್ಯಾಗ್, ಬಚ್ಚಲುಮನೆಯಂತಾದ ಟೆಂಟು, ಒದ್ದೆಮುದ್ದೆಯಾಗಿ ನಡುಗುತ್ತಿದ್ದ ನಮ್ಮನ್ನು ನೋಡಿ ಕನಿಕರವೇನು ಹುಟ್ಟಲಿಲ್ಲ. ಬೆಳಗ್ಗೆ 8.30ರ ರೈಲಿಗೆ ಓಡಲು ಗಂಟುಮೂಟೆ ಕಟ್ಟಿದೆವು.
ಬೆಂಗಳೂರಿಗೆ ಬಂದು ಎಷ್ಟು ದಿನವಾದರೂ ಇನ್ನೂ ಭೋರ್ಗರೆಯುತ್ತಿದೆ ಜಲಪಾತ, ರಿಂಗಣಿಸುತ್ತಿದೆ ಹಳಿಯ ಮೇಲಿನ ಹೆಜ್ಜೆಮಾತಿನ ಸಪ್ಪಳ, ಅಣಕಿಸುತ್ತಿದೆ ಹರಿದ ರೈನ್‌ಕೋಟ್, ಒದ್ದೆ ಬ್ಯಾಗಿನೊಳಗೆ ಮುದ್ದೆ ಬಿಸ್ಕೆಟ್. ನೆನಪುಗಳ ರೈಲು ಓಡುತ್ತಲೇ ಇದೆ, ಕೊನೆಯಿಲ್ಲದೆ ಹಳಿ ಉದ್ದಕ್ಕೆ ಮಲಗಿದೆ.
ಹೋಗುವುದು ಹೇಗೆ?
ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ಜಲಪಾತ ಹೆಚ್ಚು ಮೈ ತುಂಬಿಕೊಂಡಿರುತ್ತದೆ. ಆದರೆ ಈ ಸಮಯದಲ್ಲಿ ರೈಲನ್ನೇ ನಂಬಿಕೊಳ್ಳಬೇಕು. ನದಿಯ ಹರಿವಿಗೆ ಜೀಪ್ ರೂಟ್ ಬಂದ್ ಆಗಿರುತ್ತದೆ. ಬೆಂಗಳೂರಿನಿಂದಾದರೆ ಬೆಳಗಾಂ ರೈಲನ್ನು ಹಿಡಿದು ಲೋಂಡಾದಲ್ಲಿ ಇಳಿಯಬೇಕು. ಅಲ್ಲಿಂದ ಗೋವಾ ರೈಲು ಹತ್ತಿದರೆ ದೂದ್‌ಸಾಗರ್ ಸ್ಟಾಪ್‌ನಲ್ಲೇ ರೈಲು ಒಂದು ನಿಮಿಷ ನಿಲ್ಲುತ್ತದೆ. ಚಾರಣ ಮಾಡುವವರು ಲೋಂಡಾದಿಂದ ರೈಲಿನಲ್ಲಿ ಕ್ಯಾಸಲ್ ರಾಕ್ ಇಲ್ಲವೇ ಕುಲೇಮ್ ಹೋಗಿ ಅಲ್ಲಿಂದ ನಡೆಯಬಹುದು. ಊಟ, ವಸತಿ, ಟಾಯ್ಲೆಟ್ ಯಾವುದೇ ಸೌಲಭ್ಯಗಳಿಲ್ಲದ ಕಾರಣ ಎಲ್ಲವನ್ನೂ ಹೊತ್ತೊಯ್ಯುವುದು ಒಳ್ಳೆಯದು. ಸುರಂಗ ಮಾರ್ಗಗಳಿರುವುದರಿಂದ ಒಂದು ಟಾರ್ಚ್ ಜೊತೆಯಲ್ಲಿರಲಿ. ಆಗಾಗ ರೈಲುಗಳು ಬರುವುದರಿಂದ (ಎಲ್ಲವೂ ದೂದ್‌ಸಾಗರ್‌ನಲ್ಲಿ ನಿಲ್ಲುವುದಿಲ್ಲ) ಚಾರಣ ಮಾಡುವವರು ಎಚ್ಚರಿಕೆ ವಹಿಸುವುದು ಅಗತ್ಯ.
 -ಕನ್ನಡಪ್ರಭದಲ್ಲಿ ಪ್ರಕಟ 

20.6.13

ಹೌದು ಸ್ವಾಮಿ...



ಹುಟ್ಟಿದ ಎರಡೂವರೆ ತಿಂಗಳಲ್ಲಿ ಬಹುತೇಕ ಕನ್ನಡಿಗರ ದಿನಚರಿಯಲ್ಲೊಂದಾದ ಬಿಗ್‌ಬಾಸ್ ಜೂ.29ರಂದು ತನ್ನ ಮನೆಯೊಳಗಿನ ಸದಸ್ಯರೊಬ್ಬರ ತೆಕ್ಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕನ್ನಡದ ಮೇರು ತಾರೆಗಳ ಸಮ್ಮುಖದಲ್ಲಿ 50 ಲಕ್ಷ ನೀಡಿ ಅಂತರ್ಧಾನವಾಗಲಿದೆ. 
ಅಯ್ಯೋ ಮುಗಿಯಿತೇ.. ಎಂದು ಬೇಸರಿಸಿಕೊಳ್ಳಬೇಕಿಲ್ಲ. ಬಿಗ್‌ಬಾಸ್2 ತಯಾರಿಸುವ ಯೋಜನೆಗಳು ಚಾಲ್ತಿಯಲ್ಲಿವೆ. ಆದರೆ ಅದಕ್ಕಾಗಿ ಒಂದು ವರ್ಷ ಕಾಯಬೇಕಷ್ಟೇ. ಯಾಕೆಂದರೆ ಈಗಾಗಲೇ ಬಾಂಗ್ಲಾದಲ್ಲಿ ಶೋ ತಯಾರಿ ನಡೆದಿದೆ. ನಂತರ ಹಿಂದಿ, ಮತ್ತೆ ಕನ್ನಡ. ಇವೆಲ್ಲಕ್ಕೂ ಇರುವುದೊಂದೇ ಮನೆ. ಹಾಗಾಗಿ ಕಾಯಬೇಕಷ್ಟೇ.
ಪುಣೆ ಸಮೀಪದ ಲೋನಾವಾಲಾದ ಹಳೆಯ ಕಾರ್ಖಾನೆಯೊಂದರಲ್ಲಿ ಬಿಗ್‌ಬಾಸ್ ಮನೆಯನ್ನು ಏಳು ಸುತ್ತಿನ ಕೋಟೆಯಂತೆ ಒಳಗಿನವರಿಗೆ ಹೊರ ಜಗತ್ತಿನ ಸಂಪರ್ಕವಿಲ್ಲದಂತೆ ನಿರ್ಮಿಸಲಾಗಿದೆ. ಯೋಗರಾಜ್ ಭಟ್ ಬರೆದಂತೆ ಹೊರಗಡೆಯಿಂದ ಅರಮನೆ, ಒಳಗಡೆ ಹೋದರೆ ಸೆರೆಮನೆಯೇ ಸೈ. ಮನೆಯಲ್ಲಿರುವ ಸೆಲೆಬ್ರಿಟಿ ಸದಸ್ಯರ ಪ್ರತಿ ಉಸಿರಾಟವನ್ನು 55 ಕ್ಯಾಮೆರಾಗಳು ಕೇಳುತ್ತವೆ, ರಾಜ್ಯದ ಜನತೆ ನೋಡುತ್ತಾರೆ. ಇಲ್ಲಿ ವ್ಯಕ್ತಿತ್ವದ ಪೊಳ್ಳುತನ, ಗಟ್ಟಿತನವನ್ನು ಪರೀಕ್ಷೆಗೊಡ್ಡಲಾಗುತ್ತದೆ. ಎಲ್ಲ ಪರೀಕ್ಷೆಗಳಲ್ಲಿ ಜನಮನವನ್ನು ಗೆಲ್ಲುವವನೇ 50 ಲಕ್ಷಗಳ ಒಡೆಯ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಚಾನೆಲ್‌ಗಳಲ್ಲಿ ಜನಪ್ರಿಯವಾಗಿ ಮೊದಲ ಬಾರಿಗೆ ಪ್ರಾದೇಶಿಕ ಭಾಷೆಯೊಂದರಲ್ಲಿ ತಯಾರಾಗುವಾಗ ಈ ರಿಯಾಲಿಟಿ ಶೋ ಹೆಗಲಿನ ಮೇಲೆ ಇತ್ತೀಚೆಗೆ ಈಟಿವಿ ಕಳೆದುಕೊಂಡ ಕೆಲವು ವೀಕ್ಷಕರನ್ನು ಮರಳಿ ತಂದುಕೊಡುವ ಹಾಗೂ ಬೇರೆ ಚಾನೆಲ್ ರಿಯಾಲಿಟಿ ಶೋಗಳಿಂದ ಕೆಲವು ವೀಕ್ಷಕರನ್ನು ಸೆಳೆದುಕೊಳ್ಳುವ ಜವಾಬ್ದಾರಿ ಇತ್ತು. ಮತ್ತು ಆ ಕೆಲಸವನ್ನು ಕಾರ್ಯಕ್ರಮ ಅಚ್ಚುಕಟ್ಟಾಗಿ ಮಾಡಿದೆ ಎನ್ನುತ್ತಿದೆ ಟಿಆರ್‌ಪಿ.
ಆರಂಭದ ದಿನವೇ 4.5 ಟಿಆರ್‌ಪಿಯೊಂದಿಗೆ ಭರವಸೆ ಮೂಡಿಸಿದ ಬಿಗ್‌ಬಾಸ್ ವಾರದ ಕೊನೆಯಲ್ಲಿ 6.8ರ ದಾಖಲೆ ಟಿಆರ್‌ಪಿ ಕಂಡು ಅಚ್ಚರಿ ಮೂಡಿಸಿದೆ. ಜೊತೆಗೆ 5.8 ಆವ್‌ರೇಜ್ ಟಿಆರ್‌ಪಿಯನ್ನು ಕಾಯ್ದುಕೊಂಡು ಬಂದಿದೆ.ಎಲ್ಲದರಲ್ಲೂ ಒಳ್ಳೆಯದು, ಕೆಟ್ಟದ್ದು ಇದ್ದೇ ಇರುತ್ತದೆ. ಒಳ್ಳೆಯದಕ್ಕೆ ಮಾತ್ರ ಪಂಚೇಂದ್ರಿಯಗಳನ್ನು ತೆರೆದಿಟ್ಟು ನೋಡಿದರೆ ಹುಚ್ಚು ಮನಸ್ಸಿನ ಹತ್ತು ಹಲವು ಮುಖಗಳ ಅನಾವರಣಕ್ಕೆ ವೇದಿಕೆಯಾಗಿರುವ ಬಿಗ್‌ಬಾಸ್ ಮನುಷ್ಯನ ವರ್ತನೆ ಬಗ್ಗೆ ತಿಳಿಯಬಯಸುವವರಿಗೆ ಸಹಾಯಕ. ಜೊತೆಗೆ ನಮ್ಮೊಳಗಿನ ಮಂಕೀ ಮ್ಯಾನ್‌ಗೆ ಹಿಡಿದ ಕನ್ನಡಿಯಾಗಿಯೂ ಕಾರ್ಯಕ್ರಮವನ್ನು ಸ್ವೀಕರಿಸಿದ್ದಾರೆ ಕನ್ನಡದ ಜನ.
ರಾಷ್ಟ್ರೀಯ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿದ್ದ ಹಿಂದಿಯ ಬಿಗ್‌ಬಾಸ್‌ನ ವೋಟಿಂಗ್ ಸಮಯದಲ್ಲಿ ಸದಸ್ಯರಿಗೆ ಬೀಳುತ್ತಿದ್ದ ಮತಗಳು ಹೆಚ್ಚೆಂದರೆ 35,000. ಆದರೆ ಕನ್ನಡದ ಮಣ್ಣಿಗೆ ಸೀಮಿತವಾಗಿರುವ ಕನ್ನಡದ ಬಿಗ್‌ಬಾಸ್‌ನ ಸದಸ್ಯರು ಗಳಿಸುತ್ತಿರುವ ಮತಗಳು ತಲಾ 46,000ಕ್ಕೂ ಹೆಚ್ಚು. ಇದು ಕನ್ನಡದ ಪ್ರೇಕ್ಷಕ ತನ್ನನ್ನು ತಾನು ಕಾರ್ಯಕ್ರಮದ ಒಂದು ಭಾಗವಾಗಿ ಗುರುತಿಸಿಕೊಂಡಿರುವುದನ್ನು ಸೂಚಿಸುತ್ತದೆ.
- ರಾಘವ್ ಹುಣಸೂರು, ಈಟಿವಿ ಕಾರ್ಯಕ್ರಮ ಮುಖ್ಯಸ್ಥ
 
(ಚಿತ್ರ ಪ್ರಭದಲ್ಲಿ ಪ್ರಕಟ - ೧4 -6 - 2 0 1 3 )

ಬಿಗ್‌ಬಾಸ್ ಮನೆಯಂಗಳದಲ್ಲಿ




ಎಸ್, ಐ ಆ್ಯಮ್ ಅಲೂಫ್. ನಂಗೆ ಒಬ್ನೇ ಇರೋಕೆ ಇಷ್ಟ. ನನ್ನ ಫ್ಯಾಮಿಲಿ, ಚಿಕ್ಕ ಗೆಳೆಯರ ಬಳಗ ಇಷ್ಟರ ಮಧ್ಯೆ ಮಾತ್ರ ನಾ ತೆರೆದುಕೊಳ್ಳಬಲ್ಲೆ ಎನ್ನುತ್ತಾ ಆ್ಯಟಿಟ್ಯೂಡ್ ಪದಕ್ಕೆ ತದ್ಭವದಂತೆ ಕುಳಿತ ಕಿಚ್ಚನ ಖದರೇ ಅಂಥದು. ಯಾರನ್ನೂ ಓಲೈಸುವ ಸೋಗಿಲ್ಲದೆ, ಸ್ವಲ್ಪ ಸಿಡುಕುತ್ತಾ, ಪತ್ರಕರ್ತರಿಗೆ ತಿರುಗಿ ಕಾಲೆಳೆಯುತ್ತಲೇ ಕಾಫಿ ಕುಡೀರಿ ಎಂದು ಉಪಚರಿಸುತ್ತಾ ಬಿಗ್‌ಬಾಸ್, ಸಿನಿಮಾ, ಮನೆ, ನೆನಪು ಎಂದೆಲ್ಲ ಮನಬಿಚ್ಚಿ ಕುಳಿತದ್ದು ನಟ, ನಿರ್ದೇಶಕ, ಹಾಡುಗಾರ, ನಿರ್ಮಾಪಕ, ಮತ್ತು ಬಿಗ್‌ಬಾಸ್ ನಿರೂಪಕ ಕಿಚ್ಚ ಸುದೀಪ್.
ಸಿನಿಮಾ ಮಾಡಿದಾಗ ಜನರನ್ನು ಚಿತ್ರಮಂದಿರಕ್ಕೆ ಎಳೆದು ತರ್ಬೇಕು. ಆದರೆ ಬಿಗ್‌ಬಾಸ್‌ನಲ್ಲಿ ಹಾಗಲ್ಲ, ನಾವೇ ಜನರ ಮನೆಗೆ ಹೋಗ್ತೀವಿ. ಇದರಿಂದ ಜನ ನಮ್ಮೊಂದಿಗೆ ಹೆಚ್ಚು ನಿಕಟ ಸಂಬಂಧ ಗುರುತಿಸಿಕೊಳ್ಳುತ್ತಾರೆ. ಇದು ನನಗೆಷ್ಟು ಖುಷಿ ಕೊಡ್ತಿದೆ ಎಂದರೆ ಬೇರೆಲ್ಲ ಶೂಟಿಂಗ್‌ಗಳನ್ನೂ ಜುಲೈಗೆ ಮುಂದೆ ಹಾಕಿಕೊಂಡು ಕುಳಿತಿದ್ದೇನೆ. ಅದೂ ಅಲ್ಲದೆ ಹೊಸ ಅನುಭವಗಳಿಗೆ ತೆರೆದುಕೊಂಡಾಗಲೇ ಏಕತಾನತೆ ಹೋಗುವುದಲ್ಲವೇ? ಕಲೀಬೇಕು ಅನ್ನೋ ಮನಸ್ಸಿದ್ರೆ ಎಲ್ಲದರಲ್ಲೂ ಕಲಿಯೋಕಿರತ್ತೆ. ಈ ರಿಯಾಲಿಟಿ ಶೋ ಕೂಡಾ ಏನೇನೋ ಕಲಿಸುತ್ತದೆ.ಸಾಮಾಜಿಕ ಜಾಲತಾಣಗಳಲ್ಲಿ ಜನ ಅವ್ರು ಹೀಗ್ಮಾಡ್ಬಾರ್ದಿತ್ತು, ಇವ್ರು ಹೀಗ್ಮಾಡ್ಬೇಕಿತ್ತು ಎಂದೆಲ್ಲ ಸ್ಪಂದಿಸುವಾಗ ಖುಷಿಕೊಡತ್ತೆ. ಏಕೆಂದರೆ ಜನ ಅಷ್ಟರ ಮಟ್ಟಿಗೆ ಕಾರ್ಯಕ್ರಮದೊಳಕ್ಕೆ ಇಳಿದಿದ್ದಾರೆ ಎನ್ನುತ್ತಾರೆ 'ಬಚ್ಚನ್‌'. 
ಬಿಗ್‌ಬಾಸ್‌ಗೆ ಬಂದು ಚಂದ್ರಿಕಾರ ಮಗ ವಯಸ್ಸಿಗೆ ಮೀರಿದ ಮಾತನಾಡಿದ ದಿನ ತಮಗೇ ಗೊತ್ತಿಲ್ಲದಂತೆ ಮಗಳು ಸಾನ್ವಿಯೊಡನೆ ಎಂದಿಗಿಂತ ಒಂದು ಗಂಟೆ ಹೆಚ್ಚು ಕಳೆದರಂತೆ ಸುದೀಪ್. ಆದರೂ ಮಗಳಿಗಾಗಿ ಸಿಗರೇಟು ಬಿಡುವುದಾಗಿ ಹೇಳಿಕೊಂಡಿದ್ದ ಸುದೀಪ್ ಕೈಲಿ ಸಿಗರೇಟ್ ಕಿಡಿ ನರಳುತ್ತಿತ್ತು. ಈ ಪ್ರೆಶರ್‌ನಲ್ಲಿ ಅಷ್ಟು ಕಂಟ್ರೋಲ್ ಮಾಡಲಾಗುತ್ತಿಲ್ಲ. ಆದರೆ ಸಿಗರೇಟ್‌ಗೆ ಡೈವೋರ್ಸ್ ನೀಡುವುದಂತೂ ಖಂಡಿತ. ಕೊಂಚ ಸಮಯ ಬೇಕಷ್ಟೇ ಎಂದು ಮತ್ತೊಮ್ಮೆ ವಾಗ್ದಾನ ನೀಡುವುದನ್ನು ಮಾತ್ರ ಮರೆಯಲಿಲ್ಲ. 
ಸೆರೆಮನೆಯೊಳಗಿರುವ ಎಲ್ಲ ಸದಸ್ಯರಿಗೆ ಹೊರಜಗತ್ತಿನೊಂದಿಗೆ ಏಕಮಾತ್ರಕೊಂಡಿಯಾಗಿರುವ ತಾನು ಯಾರ ವರ್ತನೆ ಬಗ್ಗೆಯೂ ಜಡ್ಜ್‌ಮೆಂಟಲ್ ಆಗಿರಕೂಡದು ಹಾಗೂ ಆಗಿಲ್ಲ ಎಂಬುದು ಕಿಚ್ಚನ ಖಡಕ್ ನುಡಿ. ಜಿಮ್‌ಗೆ ಹೋಗಿ ಗಂಟೆಗಟ್ಟಲೆ ಕಳೆಯುವುದು ಅದೇಕೋ ಸುದೀಪ್‌ಗೆ ಆಗಿಬರಲ್ಲಂತೆ. ಬದಲಿಗೆ ಸೈಕ್ಲಿಂಗ್,  ಬ್ಯಾಡ್‌ಮಿಂಟನ್ ಆಡಿ ದೇಹ ದಂಡಿಸುತ್ತಾರೆ. ಪ್ರತಿದಿನ ಒಂದಾದರೂ ಸಿನಿಮಾ ನೋಡದೇ ಮಲಗಿದರೆ ನಿದ್ದೆ ಬರುವುದಿಲ್ಲ. ಅದೇ ಪುಸ್ತಕ ಹಿಡಿದುಕೊಂಡರೆ ಮಾತ್ರ ನಾಲ್ಕು ಪುಟಗಳನ್ನು ಮೀರಿ ಮುಂದೆ ಹೋಗುವುದಿಲ್ಲ. ವಿಷ್ಣುವರ್ಧನ್ ಅಂದರೆ ಅಚ್ಚುಮೆಚ್ಚು. ಕಾಲೇಜು ದಿನಗಳಲ್ಲಿ ನಾಟಕಗಳಿಗೆ ಸ್ಕ್ರಿಪ್ಟ್ ತಯಾರಿಸುತ್ತಿದ್ದ ತನಗೆ ಯಾರೂ ಮುಂದೆ ಹೋಗಲೇ ಬಿಡುತ್ತಿರಲಿಲ್ಲ. ಆಗೆಲ್ಲ ನಂಗೊಂದ್ ಸಣ್ಣ ಪಾತ್ರ ಸಿಕ್ಕಿದ್ರೆ ಅಂತ ಆಸೆಕಂಗಳಿಂದ ನೋಡ್ತಾ ಕನಸು ಕಾಣ್ತಿದ್ದೆ. ಆ ದಿನಗಳು ನಿಜಕ್ಕೂ ಚೆನ್ನಾಗಿತ್ತು ಎಂದು ನೆನಪಿಗೆ ಹೊರಳಿದ ಸುದೀಪ್ ಆಗಲೇ ಹಾಡು ಮತ್ತು ಗಿಟಾರ್‌ನಲ್ಲಿ ತೊಡಗಿಸಿಕೊಂಡಿದ್ದರಂತೆ.
- ರೇಶ್ಮಾ ರಾವ್

19.6.13

ಅಪ್ಪನಿಗೇನೂ ಗೊತ್ತಿಲ್ಲ!

ಮೊನ್ನೆ (ಜೂ.16) ಅಪ್ಪಂದಿರ ದಿನ. ಈ ಹಿನ್ನೆಲೆಯಲ್ಲಿ ಇದೊಂದು ಲಹರಿ...
ಹುಟ್ಟಿ ಎರಡು ದಶಕಗಳಲ್ಲಿ ಐದೂವರೆ ಅಡಿ ಬೆಳೆದಿದ್ದೇನೆ. ಭುಜಕ್ಕೆ ಭುಜ ತಾಗಿಸಿ ನಿಂತರೂ ಅಪ್ಪ ಮಾತ್ರ ಹೆಗಲಲ್ಲಿದ್ದೇನೋ ಎಂಬಂತೆ ಜಾಗರೂಕತೆ ವಹಿಸುತ್ತಾರೆ. ಊಟಕ್ಕೆ ಕುಳಿತಾಗೆಲ್ಲ ಹೇಗೆ ಊಟ ಮಾಡಬೇಕೆಂದು ಹೇಳುವ ಅಪ್ಪನ ಪರಿಪಾಠ ನನಗೀಗ ಬಾಯಿಪಾಠವೇ ಆಗಿಹೋಗಿದೆ. ಅಪ್ಪನಿಗೆ ಮಗಳು ಬೆಳೆದಿದ್ದಾಳೆಂಬುದೇ ಗೊತ್ತಿಲ್ಲ.
ಚೂರು ಎಡವಿದರೂ ಕಿರುಚುವುದು ಅಭ್ಯಾಸವೆಂಬಷ್ಟು ಸಹಜವಾಗಿದ್ದರೂ, ಕಿರುಚಿದ ಸದ್ದಿಗಿಂತಾ ಜೋರಾಗಿ ಹೆಜ್ಜೆ ಸಪ್ಪಳ ಮಾಡಿಕೊಂಡು ಓಡಿ ಬರುವ ಅಪ್ಪ ಹತ್ತಿರ ಬಂದ ಮೇಲೆ ಅದೇನಾಗಿ ಹೋಗಿದೆಯೋ ಎಂಬ ಭಯಕ್ಕೆ ನನ್ನೆಡೆಗೆ ನೋಡುವುದೇ ಇಲ್ಲ. ಆಗೆಲ್ಲ ಇಷ್ಟು ಸಣ್ಣದಕ್ಕೆ ಅಷ್ಟು ದೊಡ್ಡದಾಗಿ ಕಿರುಚಿದೆನೆಂಬ ಪಾಪಪ್ರಜ್ಞೆ, ಅದಕ್ಕಾಗಿ ಅತಿಯಾಗಿ ಪ್ರತಿಕ್ರಿಯಿಸಿದ ಅಪ್ಪನ ಬಗ್ಗೆ ಕೋಪ ಮತ್ತು ಅವರ ಕಾಳಜಿಯ ಬಗ್ಗೆ ಹೆಮ್ಮೆ ಎಲ್ಲವೂ ಒಟ್ಟೊಟ್ಟಿಗೇ ಆಗುತ್ತದೆ. ಆದರೂ ತಾವು ಬರಲೆಂದೇ ಮಗಳು ಕಡ್ಡಿ ಗುಡ್ಡ ಮಾಡುತ್ತಾಳೆಂದು ಅಪ್ಪನಿಗೆ ಗೊತ್ತಿಲ್ಲ.
ನನಗೆ ಸಣ್ಣದಾಗಿ ತರಚಿದರೂ ಎಣ್ಣೆ, ಆಯಿಂಟ್‌ಮೆಂಟ್ ತಂದು ನಿಲ್ಲುವ ಅಪ್ಪನ ಅಂಗಾಲು ಮಾತ್ರ ಐನೂರು ಬಿರುಕು ಬಿಟ್ಟು ತಮಗಿಲ್ಲದ ಎಣ್ಣೆ, ವ್ಯಾಸಲೀನ್ ಭಾಗ್ಯಕ್ಕೆ ಕರುಬುತ್ತಾ ಬಾಯಿ ಬಾಯಿ ಬಿಡುತ್ತಿರುತ್ತವೆ. ಆದರೂ ಅಪ್ಪನಿಗೆ ಔಷಧ ಬೇಕಾಗಿರುವುದು ಅವರಿಗೇ ಎಂದು ಗೊತ್ತಿಲ್ಲ.
ದೂರದ ಊರಲ್ಲಿರುವ ಮಗಳು ಕುಳಿತರೂ ನಿಂತರೂ ಊರಿನಲ್ಲೆಲ್ಲ ಸುದ್ದಿ ಹರಡುವುದು ಹೇಗೆಂದು ಅಮ್ಮ ಕೇಳುವಾಗೆಲ್ಲ ಅಪ್ಪನ ಕರಿಮೀಸೆಯ ಮಧ್ಯ ಮಧ್ಯ ಅಡಗಿ ಕುಳಿತ ಬಿಳಿಕೂದಲು ಕಿಸಕ್ ಎಂದು ಶಬ್ದ ಮಾಡದೆ ನಕ್ಕ ವಿಷಯ ಫೋನಿನಲ್ಲಿ ನನಗೆ ಕೇಳುತ್ತದೆ. ಆದರೂ ಅಪ್ಪನಿಗೂ ಅದು ಹೇಗೆ ವಿಷಯ ಹಬ್ಬಿತೆಂದು ಗೊತ್ತಿಲ್ಲ! 
ಮಕ್ಕಳು ಮನೆಗೆ ಬರುತ್ತಿದ್ದಾರೆ ಎಂಬ ವಿಷಯ ತಿಳಿಯುವುದರೊಳಗೆ ಕೆಜಿಗಟ್ಟಲೆ ಹಣ್ಣು, ತರಕಾರಿ, ತಿಂಡಿ ಮಾಡಲು ಸಾಮಾನು ತಂದು ಮನೆಯ ತುಂಬಾ ರಾಶಿ ಹಾಕುವ ಅಪ್ಪನಿಗೆ ಮಕ್ಕಳ ಹೊಟ್ಟೆಯ ಗಾತ್ರ ಸಣ್ಣದೆಂದು ಇನ್ನೂ ಗೊತ್ತಿಲ್ಲ.
ಒಂದು ತಿಂಗಳು ಡ್ರೈವಿಂಗ್ ಕ್ಲಾಸ್‌ಗೆ ಹೋದ ಮಗಳು ಕಾರು ಓಡಿಸಬಲ್ಲಳೆಂದು ಗೊತ್ತಿಲ್ಲ. ನಲ್ವತ್ತಕ್ಕಿಂತ ಜೋರಾಗಿ ಸ್ಕೂಟಿ ಓಡಿಸಬೇಡ ಎನ್ನುವ ಅಪ್ಪನಿಗೆ ಟ್ರಾಫಿಕ್ ಸಿಗ್ನಲ್ ಹಾರಿಸುತ್ತೇನೆಂದು ಗೊತ್ತಿಲ್ಲ, ಅನ್ನ ಸಾಂಬಾರ್ ತಿಂದೆನೆಂದು ಹೇಳಿ ಸ್ಯಾಂಡ್‌ವಿಚ್ ತಿಂದು ಮಲಗುವುದು ಗೊತ್ತಿಲ್ಲ. ಇಷ್ಟೆಲ್ಲ ಆದ್ಮೇಲೂ ಅಪ್ಪ ನನಗೇ ಬೈತಾರೆ, ಎಂಥ ಗೊತ್ತಿಲ್ಲದಿದ್ದರೂ 'ಎಲ್ಲ ಗೊತ್ತಿದೆ' ಅನ್ನೋಕ್ಕೊಂದು ಗೊತ್ತು ಅಂತ!- 
 (ಕನ್ನಡಪ್ರಭದ ರಂಗೋಲಿಯಲ್ಲಿ ಪ್ರಕಟ)
ರೇಶ್ಮಾ ರಾವ್ ಸೊನ್ಲೆ