ಪುಟಗಳು

29.7.11

ಮೈ ಡಿಪಾರ್ಟ್ಮೆಂಟ್

ಬೆವರ ನಾತಕ್ಕೆ
ಮೈ ಕೊಳೆಯಾಗಿರುವ ಅನುಭವದಿ
ನನ್ನನೇ ನಾ ಅಸಹ್ಯವೆಂದು
ಶುಚಿಯಾಗಲು ಬಯಸಿದೆ..

'ಗಕ್ಕನೆ' ಕೆಸರಿನಲಿ ಮಿಂದೆದ್ದ ಎಮ್ಮೆಗಳು
ಸುತ್ತಲೂ ನಿಂತವು,
ಕೆಸರೊಳಗೆ ಅವು ಸುಖ ಕಂಡ ಪರಿಗೆ
ಅಚ್ಚರಿಪಟ್ಟೆ!!
ತಾಗಿದರೆ ನನ್ನ ಶುಚಿತ್ವ
ಹಾಳಾಗುವ ಭಯದೊಂದಿಗೆ
ನನ್ನ ಅಸಹ್ಯದ ಭಾವನೆ
ಸ್ಥಾನ ಪಲ್ಲಟ ಮಾಡಿತ್ತು!!!

20.7.11




ಆಳವಾದದ್ದು ಎಂದಿಗೂ ಆಪ್ತವಾಗಿರುತ್ತದೆ... ಆಪ್ಯಾಯಮಾನವಾಗಿರುತ್ತದೆ..ಇದೋ ನನ್ನ ಗೆಳತಿ ನನ್ನಾಳದಲ್ಲಿ ಹುದುಗಿ ಕುಳಿತ ಪರಿ, ನನ್ನ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದದ್ದು ಹೀಗೆ...

11.5.11

ಅಜ್ಜನ ನಿಟ್ಟುಸಿರು ೨೦-೨-೧೧
ಒಂದರ ಬೆನ್ನಿಗೊಂದು ಮಳೆಗಾಲ


ಬೊಗಸೆಯೊಡ್ಡಿದಶ್ಟೂ ಸೋರಿ ಹೋಗುವ ಬಾಲ್ಯ


ಗೆಳೆಯರೆಲ್ಲರೂ ಕೂಡಿ ಕುಣಿದು ಕುಪ್ಪಳಿಸಿದ್ದು


ನಕ್ಕು ನಗಿಸಿದ್ದು..


ಬಿದ್ದಾಗ ಆಸರೆಯಾಗಿದ್ದು..


ಆಲಿಕಲ್ಲುಗಳ ಬಾಚಿ ತಿಂದದ್ದು..


ಬೆಳೆಯುವ ಬಿರುಸಿಗೆ,ಬಳಲಿಕೆಗೆ


ಚೈತನ್ಯದಂತೆ 'ದೋ'ಎಂದು ಸುರಿದದ್ದು


ಮಕ್ಕಳಾಟವ ಕ್ಂಡು ನೆನಪುಗಳ ಮರುಕಳಿಕೆ


ಮೊಮ್ಮಕ್ಕಳಾಟದಿ ತಣಿವ ತಿರುಗಿ ಬಾಲ್ಯಕ್ಕೆ ಹೊರಳುವಾ ಬಯಕೆ
ಹನಿಹನಿಯಲ್ಲೂ ನೆನೆದಿದ್ದ ಮುಗ್ದತೆ ಆರಿದೆ


ಉತ್ತರಗಳ ಕಂಡ ಪ್ರಶ್ನೆಗಳು ಮತ್ತೆ ಪ್ರಶ್ನೆಯಾಗುಳಿಯದ ದೌರ್ಬಲ್ಯಕ್ಕೆ!
ನಿಟ್ಟುಸಿರು ಕೇಳುತಿದೆ,ಸೋರುವ ಆಕಾಶ


ಹುಟ್ಟಿಸಿದ ಕನಸುಗಳು ಕೊತ್ತ ನೆನಪುಗಳ ಸಮತೂಗುವುದೇ?!


(ಸೋರುವ ಆಕಾಶಕ್ಕೆ ನೆರೆತ ಕೂದಲೂ ನೆನೆಯಬಲ್ಲದೇ?)

5.3.11

ವೈರುದ್ಯ..

ಅದು ತೆಪ್ಪಗೆ ಮನೆಯೊಂದರ ಅಂಗಳದಲ್ಲಿ ತಲೆ ಕೆದರಿಕೊಂಡು ನಿಂತ ಮರ.ಎಳನೀರು ಗೊಂಚಲುಗಳ ಹೊತ್ತ ತುಂಬು ಬಸುರಿ..ಅದಕ್ಕೇ ಇರಬೇಕು ಕೂದಲನ್ನು ಕಟ್ಟಲೂ,ಅಥವಾ ಗಾಳಿಗೆ ಹಾರಿಬಿಡಲೂ ಉದಾಸೀನ!!ಯಾರಿಗೆ ಬೇಕು ದಿನ ಬೆಳಗಾದರೆ ಈ ಹೊಂಡಕೊಂಡದ ಟಾರು ರಸ್ತೆಯನ್ನು ನೋಡುತ್ತಾ ಕಾಲ ತಳ್ಳುವ ಈ ಜೀವನ ಎಂಬ ಜಿಗುಪ್ಸೆ ಇರಬಹುದು.'ಉಸ್ಸಪ್ಪಾ' ಎಂದು ನಿಟ್ಟುಸಿರು ಬಿಡುವಾಗಿನ ಮುಖಚಹರೆ.ಆ ಪಾಟಿ ಎಳನೀರು ಗೊಂಚಲುಗಳ ನೋಡಿದರೆ ಹಳ್ಳಿಗಾಡಿನ ಹೆಂಗಸಿನಂತೆ ಹುಟ್ಟುವುದೇ ಮಕ್ಕಳನ್ನು ಹಡೆಯಲು' ಎಂದು ಅದು ಭಾವಿಸಿದಂತಿದೆ!ಆದರೂ ಸಣ್ಣದಾಗಿ ಅಲ್ಲಿ ಆ ಕಳಾಹೀನ ಮುಖದಲ್ಲಿ 'ಮಾತ್ರುಮಮತೆ ' ಇಣುಕುತ್ತಿದೆಯಾ?,ಇರಬಹುದೇನೋ?!
ಬದುಕು ಎಷ್ಟು ವಿಪರ್ಯಾಸ ನೋಡಿ,ತದ್ವಿರುದ್ದಗಳನ್ನು ಒಟ್ಟಿಗೆ ಇಟ್ಟು ಮಜಾ ನೋಡುತ್ತದೆ. ಇಂತಾ ಈ ಮರ,ಸದ್ದಿಲ್ಲದೇ ಸಮಯ ಕಳೆಯುವ ಈ ಮರದೊಳಗೆ ಸಂಜೆಯಾದರೆ ಕಿಚಪಿಚವೆನ್ನುತ್ತಾ ಎಡೆಬಿಡದ ಜೀವನೋತ್ಸಾಹದಿಂದ ನಲಿವ ಪುಟ್ಟ ಪುಟ್ಟ ಕಂದು ಹಾಗೂ ಬೂದು ಮಿಶ್ರಿತ ಹಕ್ಕಿಗಳು..ರೆಂಬೆಯಿಂದ ರೆಂಬೆಗೆ ಹಾರಿ ಪುರುಸೊತ್ತಿಲ್ಲದೇ ವಟಗುಡುವ ,ಬದುಕು ಬಯಸುವ,ಮನಕ್ಕೆ ಉಲ್ಲಾಸ ತುಂಬುವ ಪುಟ್ಟ ಜೀವಗಳು..ಅವುಗಳ ಇರುವಿಕೆ ಜಗತ್ತಿನ ಉಸಿರಾಟದ ಸದ್ದಿನಂತೆ ಕಿವಿಗೆ ಬಂದು ಬಡಿಯುತ್ತದೆ.ಅದು ಸಂಗೀತದ ಅರಿವಿರದಿದ್ದರೂ ಹಳ್ಳಿಗಾಡಿನ ಜನಪದದಂತೆ ಇಂಪಾಗಿ ಮಾರ್ದನಿಸುತ್ತದೆ.ಅವು ಪರಸ್ಪರ kushalakshemagalannu ವಿಚಾರಿಸಿಕೊಳ್ಳುವಂತೆ ಭಾಸವಾಗುತ್ತದೆ.ಬದುಕು ಬೇಡವೆಂಬಂತೆ ನಿಂತ ಆ ಮರದಲ್ಲಿ ಈ ಹಕ್ಕಿಗಳು ಕುಳಿತು ಬದುಕಿನೆಡೆಗೆ ವಿಸ್ಮಯವನ್ನು ವ್ಯಕ್ತಪಡಿಸುತ್ತವೆ..ಸಂಜೆ ಕೆಂಪಾದಾಗ ನಡೆಯುವ ಈ ಸಂಭಾಷಣೆ ಇಂಪೋ ಇಂಪಾಗಿ ಮನಕೆ ತಂಪೆರೆಯುತ್ತದೆ..

(ಉದಯವಾಣಿ ಯಲ್ಲಿ ಪ್ರಕಟ)

4.12.10

ಕಾವ್ಯಕ್ಕೊಂದು ಮುನ್ನುಡಿ..ಛಾಯಾ ಚಿತ್ರ




ನನ್ನ ಪ್ರೀತಿಯ ಹುಡುಗಾ...

ನಂಗೂ ನನ್ನ ನಿನ್ನ ಹೆಸರನ್ನು ಹೀಗೆ ಕಂಡಕಂಡಲ್ಲಿ ಬರೆಯುವಾಸೆ,ಲೈಬ್ರರಿಯಿಂದ ತಂದ ಕಥಾಸಂಕಲನದಲ್ಲಿ,ದೂರಪ್ರವಾಸದಿ ಹತ್ತಿದ ದೊಡ್ಡ ಬಂಡೆಯಲ್ಲಿ,ಮತ್ತೆ-ಮತ್ತೆ ಅಲೆಗಳು ಬಂದಪ್ಪುವ ಕಡಲತಡಿಯ ಮಳಲ ಮೇಲೆ,ನೋಟ್ಪುಸ್ತಕದ ಕೊನೆಯ ಪುಟದ ಆಕಾರವಿಕಾರಗಳ ಮಧ್ಯೆ..
ಫ್ರೆಂಡ್ನ ಮಾತಿಗೆ ಅಗತ್ಯಕ್ಕಿಂತಲೂ ಹೆಚ್ಚು ನಗು ಉಕ್ಕುವಾಗ,ಅವನಾರೋ ಓರ್ಕುಟ್ನಲ್ಲಿ ಹೊಗಳಿದ ಹೊಗಳಿಕೆ ಪದೇ ಪದೇ ಕಾಡುವಾಗ,ಬರೀ ಪ್ರೀತಿಗೆ ಸಂಬಂಧಪಟ್ಟಿದ್ದೇ ಮೆಸೇಜ್ ಕಳಿಸುವ ಸೀನಿಯರ್ ಒಬ್ಬನ ಮೇಲೆ ಅನುಮಾನಮಿಶ್ರಿತ ಕುತೂಹಲ ಮೂಡುವಾಗ,ಬಸ್ನಲ್ಲಿ ಎದುರು ಕುಳಿತವನೊಬ್ಬ ಪದೇ ಪದೇ ತಿರುಗಿ ನೋಡುವಾಗ-ಹುಟ್ಟುವ ಭಾವನೆಗಳನ್ನೆಲ್ಲಾ ಎದೆಯೊಳಗೆ ಕಟ್ಟಿಟ್ಟು ಕಾಣದ ನಿನಗಾಗಿ ಮಡಿವಂತಿಕೆಯನ್ನು ಕಾಪಿಡುತ್ತಿದ್ದೇನೆ..
ನಿನ್ನೊಡನೆ ಹನಿಮಳೆಯಲ್ಲಿ ಮೌನವಾಗಿ ನಡೆಯುವ ಸಂಜೆಗಾಗಿ ಹಪಹಪಿಸುತ್ತಾ ,ನೀ ಮಾತಾಡುವ ರಸಿಕಭಾಷೆಗೆ ನಾಚಿ ನೀರಾಗುವ ನನ್ನನ್ನು ನಾನೇ ಕಲ್ಪಿಸಿಕೊಳ್ಳುತ್ತಾ,ನಿಧಾನಗತಿಯ ಯುಗಳಗೀತೆಯೊಂದನ್ನು ಕೇಳುವಾಗ ನಾನು ನಿನ್ನ ಕಣ್ಣಿನಲ್ಲೇ ಮಾತಾಗುತ್ತಾ ಕಳೆಯುವ ಆ ಕ್ಷಣಗಳಿಗಾಗಿ ಕಾತರಲಾಗಿದ್ದೇನೆ.
ಕಣ್ಣಿಗೆ ಕಣ್ಣು ಸೇರುವ ಹುಡುಗರ ಕಂಗಳಲೆಲ್ಲ ಹುಬ್ಬು ಕಿರಿದಾಗಿಸಿ ಅದು ನೀನೇನಾ ಎಂದು ಹುಡುಕುತ್ತಿದ್ದೇನೆ. ಹೊಟ್ಟೆ ಹಿಡಿದು ನಗುವಾಗ ನಿನ್ನ ಬೆನ್ನಿಗೆ ಸಣ್ಣದಾಗಿ ತಟ್ಟುವ ಹಂಬಲ,ದುಖವಾದಾಗೊಮ್ಮೆ ನಿನ್ನ ಎದೆಗೊರಗಿ ಸಾಂತ್ವಾನ ಪಡೆಯುವ ಬಯಕೆ,ಪ್ರತೀ ಕ್ಷಣವನ್ನೂ -ಕುಳಿತು,ನಿಂತು,ತಿಂದು ಕುಡಿದಿದ್ದನ್ನೂ ನಿನಗೆ ಮೆಸ್ಸೇಜ್ ಮಾಡುವ ಕನಸು..ಹೀಗೆ ನೀನಿರದ ಇಂದುಗಳನ್ನು ನಿನ್ನೊಡನೆ ಕಳೆವ ನಾಳೆಗಳ ಕನವರಿಕೆಯಲ್ಲೇ ಕಳೆಯುತ್ತಿದ್ದೇನೆ..,,ಸದಾ ಪಕ್ಕವೇ ಇರುವ ಜೀವದ ಗೆಳತಿಗೂ ಅನುಮಾನ ಬಾರದಂತೆ....
ಸಮಯ ಸರಿಯುತ್ತಿದೆ,
ನನ್ನ-ನಿನ್ನ ಮೊದಲ ಭೇಟಿಯಾಗುವ ಸಾವಿರಾರು ಸಂಭವಗಳ ಹುಡುಕುವಿಕೆಯಲ್ಲೇ ಸಂಭ್ರಮ ಪಡುತ್ತಾ ,ಜೊತೆಜೊತೆಗೆ ಹೀಗಿರಲಿ ಹಾಗಿರಲಿ ಎಂದು ನಿನ್ನಲ್ಲಿ ನಾನು ಬಯಸಿದ ನಿನ್ನನ್ನು ಕಲ್ಪಿಸಿಕೊಳ್ಳುತ್ತಾ...
ನಿನ್ನ ಕೈ ಹಿಡಿದು ದೂರದಾರಿಯನ್ನು ಮೌನವಾಗಿ ಸವೆಸಬೇಕಿದೆ ಜಂಬದ ಮುಖ ಹೊತ್ತು,ಅಣ್ಣ ಅಕ್ಕಂದಿರೆಲ್ಲಾ ಕೀಟಲೆ ಮಾಡಿ ಛೇಡಿಸುವಾಗ ನಾಚಿ ನೀರಾಗಬೇಕಿದೆ,ಸೀರೆ ಉಟ್ಟು ನಿಂತ ನನ್ನನ್ನು ನೀನು ಮೆಚ್ಚುಗೆಯ ಕಂಗಳಲ್ಲಿ ನೋಡಬೇಕಿದೆ,ಮಾಡಲು ಬಾರದ ಅಡಿಗೆಯೊಂದನ್ನು ರುಚಿಯಾಗಿ ಮಾಡಿ ನಿನಗೆ ಬಡಿಸಬೇಕಿದೆ,ಪ್ರೀತಿಯ ಹೊಳೆಯಲ್ಲಿ ಕೊಚ್ಚಿ ಹೋಗಬೇಕಿದೆ,ಇನ್ನೂ ಸಾವಿರ ಸಾವಿರ ಕನಸುಗಳು ಕಾಯುತ್ತಾ ಕನವರಿಸುತ್ತಿವೆ...ನನ್ನ ಪ್ರೀತಿಯ ಹುಡುಗಾ ನೀ ಎಲ್ಲಿರುವೆ?

(ಉದಯವಾಣಿಯಲ್ಲಿ ಪ್ರಕಟ)

19.11.10

ಮಿಲ್ಲಿಯ ಗಂಡ ಯಾರು??




ಮಿಲ್ಲಿ ನಮ್ಮ ಹಾಸ್ಟೆಲ್ ಬೆಕ್ಕು.ವಯಸ್ಸಿನ್ನಲ್ಲಿ ನಮಗಿಂತಾ ಎಷ್ಟೋ ಚಿಕ್ಕದಾದರೂ ಈಗಾಗಲೇ ಹಲವು ಮರಿಗಳನ್ನು ಹೆತ್ತು ತಾನು ತುಂಬಾ ದೊಡ್ದವಳೆಂದು ಬೀಗಿದೆ.. ನಾಲ್ಕು ತಿಂಗಳ ಹಿಂದಷ್ಟೇ ಒಂದೊಂದೇ ಮರಿಗಳನ್ನು ಕಚ್ಚಿಕೊಂಡು ಬಂದು ನಮ್ಮ ಹಾಸ್ಟೆಲ್ ಒಳಗಿಟ್ಟು ನಮಗೆಲ್ಲಾ ತನ್ನ ಮರಿಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡಿತ್ತು. ಬಿಳಿಯ,ಚಿಕಣಿ ,ಕೆಂಪಿ,ಹುಲಿಯ ಎಂದು ಮರಿಗಳ ಬಣ್ಣ,ಆಕಾರದ ಮೇಲೆ ಹೆಸರಿತ್ತು ಆಟ ಆಡಿಕೊಂಡಿದ್ದ ನಮಗೆ ದಿನಗಳೆದಂತೆಲ್ಲಾ 5ಕಾಲಡಿ ಕೈಯ್ಯಡಿ ಸಿಕ್ಕುವಾಗ,ಅಷ್ಟನ್ನೂ ಇಟ್ಟುಕ್ಕೊಳ್ಳಲು ಸಾಧ್ಯವಾಗದೆ ಎರಡೆರಡು ಮರಿಗಳನ್ನು ಒಬ್ಬೊಬ್ಬರ ಮನೆಗೆ ಸಾಗಿಸಿದೆವು..ಅಷ್ಟಾಗಿ ಇನ್ನೂ ೩ ತಿಂಗಳಾಗಿಲ್ಲ,ಮತ್ತೆ ಮಿಲ್ಲಿ ಬಸುರಿ!ಮಿಲ್ಲಿಯ ರಸಿಕತೆಗೆ ಬೆರಗಾದೆವು..ಇದೀಗ ಇಂದು ಬೆಳಿಗ್ಗೆ ಎದ್ದಾಗಿನಿಂದ ವಿಚಿತ್ರವಾಗಿ ಕೂಗುತ್ತಿದ್ದ ಮಿಲ್ಲಿ ಸೈಲೆಂಟ್ ಆಗಿ ಮಲಗಿದ್ದನ್ನು ನೋಡಿ ಏನಾಯ್ತು ನೋಡುವಾಗ ಎದುರಿನಲ್ಲಿ ಕರಿ ಕಾಲು ಬಾಲದ ಪುಟ್ಟ ಮರಿ!ಅದು ಇಲಿಮರಿಯೋ ಬೆಕ್ಕಿನದೇ ಮರಿಯೋ endu ನೋಡುತ್ತಿರುವಾಗ ಕಣ್ಣೆದುರಿಗೇ ಮಿಲ್ಲಿ ಎದ್ದು 'ಪುಳಕ್ 'ಎಂದು ಮತ್ತೊಂದು ಕಪ್ಪು ಮರಿಯನ್ನು ಭೂಮಿಗಿಳಿಸಿ ನಮ್ಮನ್ನೆಲ್ಲಾ ಪುಳಕಗೊಲಿಸಿದಳು!! ಮತ್ತರ್ಧ ಗಂಟೆಯಲ್ಲಿ ಇನ್ನೆರಡು ಮರಿಗಳು ಹೊರಜಗತ್ತಿಗೆ ತಮ್ಮ ಪುಟ್ಟ ಪಾದಗಳನ್ನಿಳಿಸಿದವು.. ಕಳೆದ ಬಾರಿ ಎರಡು ಹುಲಿ ಬಣ್ಣದ ಎರಡು ಬಿಳಿ ಬಣ್ಣದ ಮರಿ ಹಾಕಿದ್ದ ಮಿಲ್ಲಿ ಈ ಬಾರಿ ಎರಡು ಕಪ್ಪು ಎರಡು ಬಿಳಿ ಮರಿಗಳನ್ನು ಹಾಕಿದ್ದಾಳೆ.ಯಾವಾಗಲೂ ಹಾಸ್ಟೆಲ್ ಹೊರಗೆ ಒಂದು ಬಿಳಿ ಹಾಗೂ ಒಂದು ಬೆಕ್ಕಿನ ಬಣ್ಣದ ಗಡವ ಬೆಕ್ಕುಗಳು ಓಡಾಡುತ್ತಿರುತ್ತವೆ.. ಇದರಲ್ಲಿ ಹೀಗೆ ಬಣ್ಣಬಣ್ಣದ ಮರಿಗಳನ್ನು ಹೆರುವ ಮಿಲ್ಲಿಯ ಗಂಡ ಯಾರೆಂಬುದೇ ಸಧ್ಯಕ್ಕೆ ನಮ್ಮನ್ನೆಲ್ಲಾ ಕಾಡುತ್ತಿರುವ ಪ್ರಶ್ನೆ!!




(ಉದಯವಾಣಿಯಲ್ಲಿ ಪ್ರಕಟ)

18.11.10

ನಾವಿಸ್ಟು ಬೇಗ ದೊಡ್ಡವರಾಗಬಾರದಿತ್ತು!!

ಭಾನುವಾರದ ಈ ಸಂಜೆ ನಾನು ಮತ್ತು ಮೇ (ಮೇದಿನಿ)ನಮ್ಮ ನಮ್ಮ ಹಳೆಯ ಡೈರಿಗಳನ್ನು ಹರವಿಕೊಂಡು ಒಂದೊಂದೇ ಎನ್ನುತ್ತಾ ಹೆಕ್ಕಿ ತೆಗೆಯುವಾಗ ನೂರಾರು ಹಳೆಯ ನೆನಪುಗಳು ಸುತ್ತಲೂ ಹರಡಿ ಬಿದ್ದವು..ಮರೆತ ಮುಖಗಳೆಲ್ಲಾ ಎದುರಿನಲ್ಲೇ fashion show ನಡೆಸಿದವು..
ತುಂಬಿಹೋದ ಡೈರಿಯ ತುಂಬಾ ತುಂಬಿಕೊಂಡ ಬದುಕು..ನೆನಪುಗಳ ರಫ್ತು,ಆಮದು ಕಾರ್ಯಗಳು ಮುಗಿಯುವಷ್ಟರಲ್ಲಿ ಏನನ್ನೋ ಕಳೆದುಕೊಂಡ ಭಾವ ಇಬ್ಬರಲೂ ಮೂಡಿತ್ತು..ಕಾಡಿತ್ತು..ನಾವಿಷ್ಟು ಬೇಗ ದೊಡ್ಡವರಾಗಬಾರದಿತ್ತು!!!

13.11.10

ಒಂದು ಸಂಜೆ..

ಮುಗಿಲಿಗೆ ದಿಗಿಲು!
ಕರಗಿ ಧರೆಗಿಳಿವುದೋ..
ಹೆಪ್ಪುಗಟ್ಟಿ ಮರೆಯಾಗುವುದೋ..??

ಒಡಲಾಳದಿ ಬೆರೆತಿದೆ ಬೆಳಕು ಹಾಗೂ ಕಟ್ಟಲು
ಆಕಾಶದವಕಾಶವೆಲ್ಲಾ ಗೋಜಲು ಗೋಜಲು.

ನೇಸರನ ಮುಚ್ಚಿಟ್ಟು ಬಣ್ಣ ಕಳೆದುಕೊಂಡ ಬದುಕು
ಮುಗಿದುಹೋದಂತೆ ಆಗಸದ ರಸಸ್ಪರ್ಶಿ ಸರಕು..

ಅಂಬರದ ಅಂಗಳದಿ ಸ್ಮಶಾನಮೌನ
ಮೋಡಗಳ ತೊಟ್ಟಿಲಿಗೆ ಕವಿದಿರುವ ಗ್ರಹಣ..

ಸದ್ದು ಮಾಡದೆ ಗಾಳಿ ಸಣ್ಣಗೆ ಗುನುಗುತ್ತಿದೆ ಚರಮಗೀತೆ
ನಿಂತುಹೋದಂತೆ ಸಮಯ,ಹುಟ್ಟಲಾರದ ಕವಿತೆ.

ಮೇದಿನಿಯಲ್ಲಿ ನನ್ನ ಮಾರ್ದನಿ





ಬೆಳಿಗ್ಗೆ ತಾನೇ ಕಾಳಜಿಯಾಗಿ ಕಣ್ಣಂಚು ತುಂಬಿಕೊಂಡು ಮಿಂಚುವಂತೆ ಮಾಡಿದ ಆಕೆಯ ಮೃದು ಧ್ವನಿ ಈಗ ಕೋಪದಲ್ಲಿ ತರಗುಟ್ಟುತ್ತಾ ಬಾಣದಂತೆ ಮೈಗೆರಗುತ್ತಿವೆ..ಮೊನ್ನೆ ಮಾತು ಬಿಟ್ಟು ಮುಖ ಉಬ್ಬಿಸಿ ಕುಳಿತ ಹುಡುಗಿ ನಿನ್ನೆ ಅಳುವಾಗಿ ಬಂದು ಅಪ್ಪಿ ನನ್ನನ್ನೂ ಕರಗಿಸಿದಳು.,ಮಾತು ಬಿಟ್ಟ ಕ್ಷಣದ ಮಾತುಗಳೆಲ್ಲಾ ಬಟ್ಟೆ ಒದ್ದೆ ಮಾಡಿದ್ದ ಆಕೆಯ ಕಣ್ಣೀರಿನಲ್ಲಿ ಅಡಗಿ ಕುಳಿತಿದ್ದವು!
ಆಕೆ ಚಂಚಲೆ..ನನ್ನಾಳವನ್ನು ಆಕ್ರಮಿಸಿಕೊಂಡ ಆಪ್ತಗೆಳತಿ.ಹೆಚ್ಚಿನ ಬಾರಿ ನಮ್ಮಿಬ್ಬರ ಕಣ್ಣುಗಳೇ ಮಾತನಾಡಿಕೊಳ್ಳುತ್ತವೆ.
ಬೇರೆ ಗೆಳತಿಯರೊಂದಿಗೆ ಮಾತನಾಡುವಾಗ ,ನಗುವಾಗ ಅದೇನೋ ಭಯಮಿಶ್ರಿತ ಮತ್ಸರವನ್ನು ಕಂಡಿದ್ದೇನೆ ಆಕೆಯ ಕಂಗಳಲ್ಲಿ..
ಜಗಳವಾಡುವಾಗ ಅಕ್ಕನೊಂದಿಗಿರುವ ಸಲುಗೆ,ಆಕೆಯ ತೊಡೆಯ ಮೇಲೆ ಮಲಗಿದಾಗ ಅಮ್ಮನ ವಾತ್ಸಲ್ಯವನ್ನು ಜೋತೆಗಿಡುವ ತಟ್ಟುವ ಕೈಗಳು,ಪ್ರೀತಿ..ಹುಡುಗ ಎಂದೆಲ್ಲ ಹರಟುವಾಗ ಗೆಳತಿಯೊಂದಿಗಿನ ಮುಜುಗರರಹಿತ ವಾತಾವರಣ-ಎಲ್ಲವೂ ನನ್ನದಾಗಿರುತ್ತದೆ,ಆಕೆಯ ಸಾನಿಧ್ಯದಲ್ಲಿ..ಕನಸು ಹಾಗು ನನಸು-ಎರಡಕ್ಕೂ ಸಾಥ್ ನೀಡುವಾಕೆ.
ಒಮ್ಮೊಮ್ಮೆ ಮಗುವಿನಂತೆ ಮುಗ್ಧತೆಯ ಗೂಡಾಗಿ ಕಂಡರೆ ಮತ್ತೊಮ್ಮೆ ಅಡಗೂಲಜ್ಜಿಯಂತೆ ಅನುಭವದ ಹಾಡುಗಳನ್ನು ಹೊತ್ತು ಹತ್ತಿರ ಬರುವ ಚವತಿ..ಆಕೆ ನನ್ನ ಜೀವದ ಗೆಳತಿ.ಅವಳ ಕೋಪ,ಅಹಂಕಾರ,ಮದ,ಕಾಳಜಿ,ಮತ್ಸರ,ಹಠಮಾರಿತನ,ವಾತ್ಸಲ್ಯ,ನಗು,ಅಳು,ಭಯ-ಎಲ್ಲದರ ಹಿಂದಿರುವುದೂ ಪ್ರೀತಿ ಹಾಗೂ ಪ್ರೀತಿಯೊಂದೇ..
ಗಂಡುಭೀರಿಯಂತೆ ನಿರ್ಭಿಡೆಯಿಂದ ವರ್ತಿಸುವ ಆಕೆಯ ವರ್ತನೆಯ ಆಳದಲ್ಲಿ ಇಣುಕುವುದೂ ಪ್ರೀತಿ..ಹೆಣ್ತನ..




ಎಲ್ಲಾ ಹೆಣ್ಣುಗಳಂತೆ ಆಕೆಯೂ ಕರಗುತ್ತಾಳೆ ,ಕರಗಿಸುತ್ತಾಳೆ ,ನಗುತ್ತಾಳೆ,ಅಳುತ್ತಾಳೆ,,ಭಯಗೊಳ್ಳುತ್ತಾಳೆ,ಸಿಟ್ಟಾಗುತ್ತಾಳೆ..ಆದರೂ
ಉಳಿದವರಿಗಿಂತ ಭಿನ್ನತೆಯ ಅಂಶವೊಂದನ್ನು ಕಂಡೂ ಕಾಣದಂತೆ ಪ್ರಚುರಪಡಿಸುತ್ತಾಳೆ.ನನ್ನ ಎಲ್ಲಾ ಭಾವನೆಗಳಲ್ಲೂ ನಿರ್ಧಾರಗಳಲ್ಲೂ ನನ್ನೊಂದಿಗೆ ಇರುತ್ತಾಳೆ..ಸಾವಿರ ಜಸ್ಟ್ ಫ್ರೆಂಡ್ಸ್ ಗಿಂತಾ 1 ಬೆಸ್ಟ್ ಫ್ರೆಂಡ್ ಮೇಲು ಎನ್ನುವಂತೆ ಹೃದಯವನ್ನು ತುಂಬಿಕೊಂಡಿದ್ದಾಳೆ...