ಪುಟಗಳು

2.4.14

ಸಿಂಗಲ್ ಈಸ್ ಕಿಂಗ್!

ಪಾಲಿಟಿಕ್ಸೇ ಇವರಿಗೆ ಪತಿ, ಪತ್ನಿ ಎಲ್ಲ...
ನೀವು ಬಾಲಿವುಡ್‌ನ ಬ್ಯಾಚುಲರ್‌ಗಳ ಬಗ್ಗೆ ಮೇಲಿಂದ ಮೇಲೆ ಕೇಳಿರಬಹುದು. ಅದಕ್ಕಿಂತಲೂ ಮೇಲ್ದರ್ಜೆಯ ಬ್ಯಾಚುಲರ್‌ಗಳು ರಾಜಕೀಯದಲ್ಲಿ ಕಾಣಿಸುತ್ತಾರೆ. ಇವರೆಲ್ಲ ಅಜನ್ಮ ಬ್ರಹ್ಮಚಾರಿಗಳು. ರಾಜಕಾರಣದ ಸಂದಿಗೊಂದಿಯಲ್ಲೂ ಹಾದು ಪ್ರಸ್ತುತ ಒಂದು ಹಂತ ತಲುಪಿ ನಾಯಕತ್ವದ ಪಟ್ಟ ಅಲಂಕರಿಸಿರುವ ಈ ದಿಗ್ಗಜರು ಹೆಂಡತಿಯ/ ಗಂಡನ ಜುಟ್ಟು ಹಿಡಿಯುವ ಸಾಹಸಕ್ಕೆ ಹೋಗಲಿಲ್ಲ. ಆದರೆ ದೇಶದ ಜುಟ್ಟನ್ನು ಭದ್ರವಾಗಿ ಹಿಡಿಯಲು ಪೈಪೋಟಿಗೆ ಬಿದ್ದಿದ್ದಾರೆ. ರಾಜಕೀಯದೊಂದಿಗೇ ಇವರ ಎಲ್ಲ ಸರಸ, ವಿರಸ, ಅಪರೂಪಕ್ಕೊಮ್ಮೊಮ್ಮೆ ಸಮರಸ ಕೂಡ. ಆಡಳಿತ ನಡೆಸುವುದು ಹೆಂಡತಿಯನ್ನಾಳುವುದಕ್ಕಿಂತಲೂ ಸುಲಭವೆಂಬುದು ಇವರ ಬಾಯಲ್ಲಿ ಬರಬಹುದಾದ ವಕ್ರತುಂಡೋಕ್ತಿ...
ಎಪಿಜೆ ಅಬ್ದುಲ್ ಕಲಾಂ
ದೇಶ ಕಂಡ ಅತ್ಯಂತ ಜನಾನುರಾಗಿ, ಸಮರ್ಥ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ. ಬಡ ಕುಟುಂಬದಲ್ಲಿ ಹುಟ್ಟಿದ ಈ ವಿಜ್ಞಾನಿ, ಈ ರಾಷ್ಟ್ರಪತಿಯ ಸಾಧನೆಯ ಹಿಂದೆ ಹೆಣ್ಣಿಲ್ಲ. 'ಇಂಡಿಯಾ 2020' ಎಂಬ ಪುಸ್ತಕ ಬರೆದಿರುವ ಕಲಾಂ 2020ರಲ್ಲಿ ಪ್ರಕಾಶಿಸುವ ಭಾರತವನ್ನು ನೋಡುವ ಕನಸು ಕಂಡವರು. ಇವರ ಆತ್ಮಕತೆ 'ವಿಂಗ್ಸ್ ಆಫ್ ಫೈರ್‌'ನಲ್ಲೂ ಹೆಣ್ಣಿನ ಪ್ರೀತಿಯ ಪರಿಮಳವನ್ನು ನೀವು ಕಾಣಲಾರಿರಿ.
ರಾಹುಲ್ ಗಾಂಧಿ 
ಇನ್ನೂ ಯುವಕನೆಂದೇ ಎಲ್ಲೆಡೆ ಬಿಂಬಿತವಾಗುತ್ತಿರುವ 44ರ ರಾಹುಲ್ 2004ರಿಂದಲೇ ವೆನಿಜುವೆಲಾದ ಗರ್ಲ್‌ಫ್ರೆಂಡ್ ವೆರೋನಿಕ ಜೊತೆ ಡೇಟಿಂಗ್ ನಡೆಸುತ್ತಿದ್ದರೂ ಅದೇಕೋ, ಕಂಕಣಭಾಗ್ಯ ಮಾತ್ರ ಕೂಡಿಬರುತ್ತಿಲ್ಲ. ಕಾಂಗ್ರೆಸ್‌ನಿಂದ ಪ್ರಧಾನಿ ಅಭ್ಯರ್ಥಿಯಾಗಿ ನಿಂತು, ಮಾಧ್ಯಮಗಳು ಏನೇ ಪ್ರಶ್ನೆ ಕೇಳಿದರೂ ತಾನು ಬಾಯಿಪಾಠ ಮಾಡಿದ್ದನ್ನು ಮಾತ್ರ ಉದುರಿಸಿ 'ಪಪ್ಪು' ಪಟ್ಟ ಅಲಂಕರಿಸಿರುವ ರಾಹುಲ್‌ಗೆ 'ಪಪ್ಪ' ಆಗುವ ಇಚ್ಛೆ ಇದ್ದಂತಿಲ್ಲ.
ಉಮಾ ಭಾರತಿ
ಬಿಜೆಪಿಯ ಪ್ರಮುಖ ನಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಕೂಡಾ ಇಂದಿಗೂ ಕುಮಾರಿ. ಆರೆಸ್ಸೆಸ್‌ನೊಂದಿಗೆ ಗಟ್ಟಿ ಸಂಬಂಧ ಹೊಂದಿದ್ದ ಉಮಾ, ವಾಜಪೇಯಿ ಸರ್ಕಾರದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದಾರೆ.
ಕೆ.ಎನ್. ಗೋವಿಂದಾಚಾರ್ಯ
ಪರಿಸರವಾದಿ, ಸಮಾಜವಾದಿ, ಬುದ್ಧಿಜೀವಿ ಎಂದು ಹೆಸರಾದ ಗೋವಿಂದಾಚಾರ್ಯ, ಜಯಪ್ರಕಾಶ ನಾರಾಯಣರ 'ಸಂಪೂರ್ಣ ಕ್ರಾಂತಿ'ಯಲ್ಲಿ ಪ್ರಖರಗೊಂಡವರು. ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ 2000ದವರೆಗೂ ಕಾರ್ಯನಿರ್ವಹಿಸಿದ್ದರು. ಮದುವೆಗೆ ಗೋವಿಂದಾ ಎಂದು ಬ್ರಹ್ಮಾಚಾರ್ಯವನ್ನೇ ಅಪ್ಪಿಕೊಂಡವರು.
ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮೊದಲ ಹಾಗೂ ಹಾಲಿ ಮುಖ್ಯಮಂತ್ರಿ ಮಮತಾ 1970ರಲ್ಲೇ ಕಾಂಗ್ರೆಸ್‌ಗೆ ಸೇರುವ ಮೂಲಕ ರಾಜಕೀಯಕ್ಕೆ ಧುಮುಕಿದವರು. ಅನಂತರ ಎರಡು ಅವಧಿಗೆ ರೇಲ್ವೆ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ದೇಶಾದ್ಯಂತ 'ದೀದೀ' (ಅಕ್ಕ) ಎಂದೇ ಪ್ರಸಿದ್ಧರಾದದ್ದಕ್ಕೂ, ಮಮತಾ ಮದುವೆಯಾಗದಿರುವುದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವುದು ಅವರು ಕೊಡದಿದ್ದರೂ ಸ್ಪಷ್ಟನೆಯಾಗಿಯೇ ಉಳಿಯಬಹುದಾದ ಮಾತು.
ಮಾಯಾವತಿ
ನಾಲ್ಕು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮಾಯಾವತಿ ದಲಿತರ ಪ್ರತಿನಿಧಿಯಾಗಿ ಅವರನ್ನು ಮೇಲೆತ್ತುವ ಕಾರ್ಯಗಳಿಂದ ಪ್ರಸಿದ್ಧರಾದವರು. ಬಹುಜನ ಸಮಾಜ ಪಕ್ಷದ ನೇತಾರೆಯಾಗಿರುವ ಮಾಯಾಗೂ 'ಬೆಹನ್‌ಜೀ' (ಅಕ್ಕ) ಎಂಬ ವಿಶೇಷಣ ಸೇರಿದ್ದು, ಅವರೂ ವಿವಾಹವಾಗಿಲ್ಲ.
ಜಯಲಲಿತಾ
'ಅಕ್ಕತಂಗಿ'ಯರು ಮದುವೆಯಾಗದಿದ್ದರೆ ವಿಶೇಷವಿಲ್ಲ. ಆದರೆ ಚಲನಚಿತ್ರ ತಾರೆಯಾಗಿದ್ದ ಈ ಸುಂದರಿ 'ಅಮ್ಮ'ನೂ ಮದುವೆಯಾಗದೆ ಉಳಿದಿರುವುದು ಆಶ್ಚರ್ಯವೇ ಸರಿ. 1991ರಲ್ಲಿ ಮೊದಲ ಬಾರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಜಯಾ ಇಂದಿಗೂ 'ಹಾಲಿ' ಪಟ್ಟ ಉಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಕೇಂದ್ರದಲ್ಲೂ ಹೆಚ್ಚಿನ ಪ್ರಭಾವ ಬೀರಿ ತಾವಂದುಕೊಂಡಿದ್ದರಲ್ಲಿ 'ಜಯಾ' ಗಳಿಸುತ್ತಾರೆ. 
ನರೇಂದ್ರ ಮೋದಿ
ಭಾರತದಾದ್ಯಂತ ತನ್ನ ಪ್ರಭಾವಶಾಲಿ ವ್ಯಕ್ತಿತ್ವದಿಂದ ಮೋಡಿ ಮಾಡಿರುವ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಇಂದು ಅವರನ್ನು ಪ್ರಧಾನಿ ಪಟ್ಟದ ಮೆಟ್ಟಿಲನ್ನೇರಿಸಲು ತುದಿಗಾಲಲ್ಲಿ ನಿಂತಿವೆ. ಇವರು ಮದುವೆಯಾಗಿದ್ದರಾದರೂ ಹೆಂಡತಿಯೊಂದಿಗೆ ಬಾಳು ನಡೆಸದೆ ಅಜನ್ಮ ಬ್ರಹ್ಮಚಾರಿಯಾಗಿಯೇ ಗುರುತಿಸಿಕೊಂಡಿದ್ದಾರೆ. 
ಅಟಲ್ ಬಿಹಾರಿ ವಾಜಪೇಯಿ
1996ರಿಂದ 2004ರವರೆಗೆ 3 ಅವಧಿಗೆ ಪ್ರಧಾನಮಂತ್ರಿಯಾಗಿ ಇಂದಿಗೂ ತಮ್ಮ ಸಚ್ಚಾರಿತ್ರ್ಯ ಹಾಗೂ ಅಭಿವೃದ್ಧಿ ಕೆಲಸಗಳಿಂದ ಜನಮನದಲ್ಲಿ ನೆಲೆಯೂರಿರುವ ವಾಜಪೇಯಿ ಕೂಡಾ ಭವಬಂಧನಕ್ಕೆ ಬೀಳಲಿಲ್ಲ. ಬಿಜೆಪಿಯ ಅತ್ಯುತ್ತಮ ರಾಜಕಾರಣಿಯಾಗಿದ್ದ ವಾಜಪೇಯಿ ಕವಿಯಾಗಿಯೂ ಹೆಸರು ಮಾಡಿದ್ದರು.
ನವೀನ್ ಪಟ್ನಾಯಕ್
ಒರಿಸ್ಸಾದ ಮಾಜಿ ಸಿಎಂ ಬಿಜು ಪಟ್ನಾಯಕ್ ಅವರ ಮಗ ನವೀನ್ ಕೂಡಾ ಅಪ್ಪನನ್ನೇ ಹಿಂಬಾಲಿಸಿ 1997ರಲ್ಲಿ ರಾಜಕೀಯ ಅಖಾಡಕ್ಕಿಳಿದವರು. ನಂತರ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿ ಜನಮೆಚ್ಚುಗೆ ಗಳಿಸಿದ ನವೀನ್, 2000ದಲ್ಲಿ ಒರಿಸ್ಸಾದ ಸಿಎಂ ಪದವಿ ಗಳಿಸುವಲ್ಲಿ ಸಫಲರಾದರು.
 ರೇಶ್ಮಾರಾವ್ ಸೊನ್ಲೆ

1.4.14

ಎಲೆಕ್ಷನ್ ಇಲೆವೆನ್

ಇದು Epl ಎಲೆಕ್ಷನ್ ಪ್ರಿಮಿಯರ್ ಲೀಗ್
11 ದೇಶಗಳ ಹಣೆಬರಹ ಬರೆಯಲು 2014 ಎಂಬ ಬ್ರಹ್ಮ ಸಿದ್ಧನಾಗಿ ಕುಳಿತಿದ್ದಾನೆ. ಈ ವರ್ಷ 11 ಪ್ರಮುಖ ದೇಶಗಳಲ್ಲಿ ರಾಷ್ಟ್ರಮಟ್ಟದ ಚುನಾವಣೆ ನಡೆಯಲಿದೆ. ಆದರೆ ಈ ಗಾಳಿ ಎಷ್ಟು ಕಡೆ ತಂಗಾಳಿಯಾಗಿ ದೇಶದ ಹಿತ ಕಾಯುವುದೋ, ಎಷ್ಟು ಕಡೆ ಬಿರುಗಾಳಿಯಾಗಿ ಮತ್ತಿಷ್ಟು ಹಗರಣಗಳ ಭಾರ ಏರಿಸುವುದೋ ಕಾದು ನೋಡಬೇಕಿದೆ. ಜನರೇನೋ ಬಲು ಉತ್ಸಾಹದಲ್ಲಿ ಹೊಸತನ್ನು ಆಹ್ವಾನಿಸಲು ಕಾದಿದ್ದಾರೆ. ಆದರೆ ರಾಜಕೀಯದಲ್ಲಿ ಕೆಲವೊಂದಿಷ್ಟು ಬೇಡದ್ದೂ ಸಾಂಕ್ರಾಮಿಕವಾಗಿ ಹರಡುತ್ತದೆ.
ಭಾರತ (ಏ.17)
1.3 ದಶಲಕ್ಷ ಮತಯಂತ್ರಗಳನ್ನು ಬಳಸಿಕೊಂಡು, ಒಟ್ಟು 800,000 ಮತಕೇಂದ್ರಗಳಲ್ಲಿ ಸುಮಾರು 700 ದಶಲಕ್ಷ ಜನ ಮತ ಚಲಾಯಿಸಿ ಪ್ರಧಾನಿಯನ್ನು ಆಯ್ಕೆ ಮಾಡುವುದನ್ನು ಉಳಿದ ದೇಶಗಳು ಕಲ್ಪಿಸಿಕೊಳ್ಳುವುದೂ ಕಷ್ಟದ ಮಾತೇ ಸರಿ. ಇದು ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ನಮ್ಮ ದೇಶದ ಹೆಗ್ಗಳಿಕೆ. ಈ ಬಾರಿ ಏ.17ರಂದು ದೇಶಾದ್ಯಂತ ಮತದಾನ ನಡೆಯಲಿದ್ದು 10 ವರ್ಷದ ಯುಪಿಎ ಆಡಳಿತಕ್ಕೆ ತೆರೆ ಬೀಳುವ ಲಕ್ಷಣಗಳು ಗೋಚರಿಸುತ್ತಿವೆ. ಸಮೀಕ್ಷೆಗಳು ಮೋದಿ ಅಲೆಯನ್ನು ಖಚಿತಪಡಿಸುತ್ತಿವೆ. 1989ರಿಂದ ನಂತರ ಒಂದೇ ಪಕ್ಷಕ್ಕೆ ಬಾಹ್ಯ ಬೆಂಬಲವಿಲ್ಲದೆ ಕೇಂದ್ರಾಡಳಿತದ ಕೀಲಿ ಹಿಡಿಯಲು ಸಾಧ್ಯವಾಗಿಲ್ಲ. ಈ ಬಾರಿಯೂ ಅದು ಮುಂದುವರಿಯಲಿದೆ ಎನ್ನುತ್ತಿವೆ ಸಮೀಕ್ಷೆಗಳು.
ಅಫ್ಘಾನಿಸ್ತಾನ (ಏ.5)
ಬರುವ ಏ.5ರಂದು ಆಫ್ಘಾನಿಸ್ತಾನದ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಹಿಂದಿನ ಎರಡು ಅವಧಿಗೆ ಪದವಿ ಅಲಂಕರಿಸಿದ್ದ ಹಮೀದ್ ಕರ್ಜಾಯ್‌ಗೆ 3ನೇ ಬಾರಿಗೆ ಅದೃಷ್ಟಪರೀಕ್ಷೆಗೊಡ್ಡಲು ಕಾನೂನು ಅಡ್ಡಗಾಲಾಗಿದೆ. ಹೀಗಾಗಿ 2009ರ ಚುನಾವಣೆಯಲ್ಲಿ 2, 3ನೇ ಸ್ಥಾನ ಗಳಿಸಿದ್ದ ಅಬ್ದುಲ್ಲಾ ಅಬ್ದುಲ್ಲಾ, ಅಶ್ರಫ್ ಘಾನಿ ಅಹ್ಮದ್‌ಜಾಯ್ ಮುಂಚೂಣಿಯಲ್ಲಿರುವ ಆಕಾಂಕ್ಷಿ ಅಭ್ಯರ್ಥಿಗಳು ಸೇರಿ ಒಟ್ಟು 11 ಮಂದಿ ಕಣದಲ್ಲಿದ್ದಾರೆ.
ಇರಾಕ್ (ಏ.30)
ಇಲ್ಲಿನ ಸಂಸತ್ ಚುನಾವಣೆಗೆ ಏ.30ರಂದು ಮುಹೂರ್ತ ನಿಗದಿಯಾಗಿದೆ. ಹಾಲಿ ಪ್ರಧಾನಿ ನೌರಿ ಅಲ್- ಮಲ್ಲಿಕ್ ಮೂರನೇ ಬಾರಿಗೂ ಪಟ್ಟದಲ್ಲೇ ಮುಂದುವರಿಯಲು ಆಕಾಂಕ್ಷಿಯಾಗಿದ್ದಾರೆ. ಆದರೆ ಇಲ್ಲಿನ ಸುಪ್ರೀಂ ಕೋರ್ಟ್ 3ನೇ ಬಾರಿ ಅವಕಾಶ ನೀಡುವುದಿಲ್ಲವೆಂದು ಆದೇಶಿಸುವ ಸಂಭವವಿದೆ. ಶಿಯಾ ಸುನ್ನಿ ಪಂಗಡಗಳ ನಡುವಿನ ಆಂತರಿಕ ಕಲಹದಿಂದ ಬೆಂದಿರುವ ಇರಾಕ್ ನೌರಿ ಅಲ್- ಮಲ್ಲಿಕ್ ಆಡಳಿತದಲ್ಲಿ ನಿಯಂತ್ರಣದಲ್ಲಿದೆ. ಬದಲಾದರೆ ಅನಿಶ್ಚಿತತೆ ಮೂಡಬಹುದೆಂಬ ಭಯದಿಂದ ಪ್ರತಿಪಕ್ಷಗಳು ಮಲ್ಲಿಕ್ ಮುಂದುವರಿಯಲಿ ಎಂದರೆ ಮಾತ್ರ ಮತ್ತೆ ಮುಂದಿನ ಐದು ವರ್ಷಗಳಿಗೆ ನೌರಿ ಅಲ್ ಮಲ್ಲಿಕ್ ಪ್ರಧಾನಿಯಾಗುವ ಅವಕಾಶವಿದೆ.
ಬ್ರೆಜಿಲ್ (ಅ.5)
ಹಾಲಿ ರಾಷ್ಟ್ರಪತಿ ಡಿಲ್ಮಾ ರುಸೆಫ್ ಮುಂದಿನ ಅವಧಿಗೂ ಮುಂದುವರಿಯುವ ಸಂಭವ ಹೆಚ್ಚಾಗಿದೆ. ಅಲ್ಲದೆ ಪ್ರತಿಪಕ್ಷಗಳು ಮಾಡಿದ ಹಲವು ಎಡವಟ್ಟುಗಳು ಆಕೆಯ ಜನಪ್ರಿಯತೆಯನ್ನು ಹೆಚ್ಚಿಸಿರುವುದು ಡಿಲ್ಮಾಗೆ ವರದಾಯಕವಾಗಲಿದೆ.ಯುಎಸ್ (ನ.4)ಬರುವ ನವೆಂಬರ್‌ನಲ್ಲಿ ಅಮೆರಿಕದಲ್ಲಿ ಕಾಂಗ್ರೆಶ್ನಲ್ ಚುನಾವಣೆ ನಡೆಯಲಿದ್ದು, ಇದು 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾರು ಅಭ್ಯರ್ಥಿಯಾಗಬಹುದೆಂಬ ನಿರ್ಣಾಯಕ ಚುನಾವಣೆಯಾಗಿರಲಿದೆ. ಹೀಗಾಗಿ ಒಬಾಮ ಭವಿಷ್ಯದ ದೃಷ್ಟಿಯಿಂದಲೂ ಈ ಚುನಾವಣೆ ಮಹತ್ವದ್ದೆನಿಸಿದೆ.
ಸೌತ್ ಆಫ್ರಿಕಾ (ಏ- ಜೂನ್ ನಡುವೆ)
ಈ ಬಾರಿ ದಕ್ಷಿಣಾ ಆಫ್ರಿಕಾದ 5ನೇ ಲೋಕಸಭಾ ಚುನಾವಣೆ ನಡೆಯಲಿದ್ದು, ಜನರು ಮಂತ್ರಿಗಳನ್ನು ಚುನಾಯಿಸಲಿದ್ದು, ಮಂತ್ರಿಗಳು ತಮ್ಮ ಪ್ರಧಾನಿಯನ್ನು ಆಯ್ಕೆ ಮಾಡಲಿದ್ದಾರೆ. 1994ರಿಂದ ಆಡಳಿತದ ಚುಕ್ಕಾಣಿ ಹಿಡಿದಿರುವ ದಿ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್(ಎಎನ್‌ಸಿ), ಡೆಮೊಕ್ರಟಿಕ್ ಅಲೈಯನ್ಸ್ ನಡುವೆ ಸ್ಪರ್ಧೆ ಇದೆ. ಕಳೆದ ಕೆಲ ವರ್ಷಗಳಿಂದ ನಿರುದ್ಯೋಗ, ಆರ್ಥಿಕ ಕುಸಿತ, ಭ್ರಷ್ಟಾಚಾರದಿಂದ ಬೇಸತ್ತಿರುವ ಪ್ರತಿಪಕ್ಷಗಳು ರಾಷ್ಟ್ರಪತಿ ಜೇಕಬ್ ಜುಮಾ ಅವರನ್ನು ಸ್ಥಾನದಿಂದ ಕೆಳಗಿಳಿಸಲು ಸಂಚು ರೂಪಿಸಿವೆ. ಆದರೆ ಹೊಸ ಪಕ್ಷ ದಿ ಎಕನಾಮಿಕ್ ಫ್ರೀಡಮ್ ಫೈಟರ್ಸ್ ಮಾತ್ರ ಕರಿಯರ ಗೌರವಘನತೆ ಉಳಿಸಲು ಎಎನ್‌ಸಿಯನ್ನು ಬೆಂಬಲಿಸಲು ಕೋರಿದೆ.
ಯೂರೋಪ್  (ಮೇ 22- 25)
ತೀವ್ರ ಆರ್ಥಿಕ ಮುಗ್ಗಟ್ಟು, ಮಿತಿ ಮೀರಿದ ನಿರುದ್ಯೋಗ ಸೇರಿದಂತೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ನಂಬಿಕೆಗಳನ್ನೇ ಕಳೆದುಕೊಂಡಿರುವ ಯೂರೋಪ್‌ನ ಸದ್ಯದ ಪರಿಸ್ಥಿತಿಯಲ್ಲಿ ಮೇನಲ್ಲಿ ನಡೆಯುವ ಚುನಾವಣೆ ಒಂದು ಆಶಾಕಿರಣದಂತೆ ಬಿಂಬಿತವಾಗಿದೆ. ಯುಕೆ ಇಂಡಿಪೆಂಡೆನ್ಸ್ ಪಕ್ಷ, ಟ್ರೂ ಫಿನ್ಸ್, ಫ್ರಂಟ್ ನ್ಯಾಷನಲ್ ಪಕ್ಷಗಳು ಗದ್ದುಗೆ ಅಲಂಕರಿಸಲು ಮುಂಚೂಣಿಯಲ್ಲಿವೆ. 
ಕೊಲಂಬಿಯಾ (ಮೇ 25)
ಇಲ್ಲಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಬಾರಿಯೂ ಹಾಲಿ ಅಧ್ಯಕ್ಷ ಜುವಾನ್ ಮ್ಯಾನುಯೆಲ್ ಸ್ಯಾಂಟೋಸ್ ಮರು ಆಯ್ಕೆಯಾಗುವ ಸಂಭವವೇ ಹೆಚ್ಚಿದೆ. ಜುವಾನ್‌ರೊಂದಿಗೆ ಬಂಡಾಯವೆದ್ದ ಪ್ರಮುಖ ರಾಜಕಾರಣಿ ಯೂರಿಬ್ ಹೊಸ ಪಕ್ಷ ಸ್ಥಾಪಿಸಿ ಆಸ್ಕರ್ ಇವಾನ್ ಜುಲಾಂಗಾರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದಾರೆ. ಹಾಗಾಗಿ ಅಧ್ಯಕ್ಷೀಯ ಚುನಾವಣೆ ಕಳೆಗಟ್ಟಿದೆ.
ಇಂಡೋನೇಷ್ಯಾ (ಜು.9)
ಜಕಾರ್ತದ ಗವರ್ನರ್ ಜೋಕೋ ವಿಡೊಡೊ ಜಕಾರ್ತದ ಒಬಾಮ ಎಂದೇ ಬಿಂಬಿತವಾಗಿದ್ದು ಅವರು ಈ ಬಾರಿಯ ಅಧ್ಯಕ್ಷೀಯ ಚುನಾವಣೆಗೆ ನಿಲ್ಲಬೇಕೆಂಬುದು ಇಲ್ಲಿನ ಜನರ ಒಮ್ಮತವಾಗಿದೆ. ಆದರೆ ಅವರ ಪಕ್ಷದ ನೇತಾರೆ, ಎರಡು ಬಾರಿ ಸೋಲನ್ನನುಭವಿಸಿರುವ ಮೇಘಾವತಿ ಸುಕರ್ನೋಪುತ್ರಿ ಕಣಕ್ಕಿಳಿಯುವುದಾದರೆ ವಿಡೊಡೊ ಸ್ಪರ್ಧಿಸುವುದಿಲ್ಲ. ಹೀಗಾಗಿ ಇವರಿಬ್ಬರಲ್ಲಿ ಒಬ್ಬರು ಅಧ್ಯಕ್ಷಗಾದಿ ಹಿಡಿಯುವುದು ಖಚಿತವಾಗಿದೆ.
ಟರ್ಕಿ (ಆಗಸ್ಟ್)
ಇಲ್ಲಿನ ರಾಷ್ಟ್ರಪತಿ ಹುದ್ದೆಗೆ ಆಗಸ್ಟ್‌ನಲ್ಲಿ ಚುನಾವಣೆ ನಡೆಯಲಿದ್ದು ಹಾಲಿ ಪ್ರಧಾನಮಂತ್ರಿ ರಿಸೆಪ್ ಎರ್ಡೋಗನ್ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಇದಕ್ಕೆ ಕಾರಣ ಅವರ ಪ್ರಧಾನಮಂತ್ರಿ ಅವಧಿ 2015ಕ್ಕೆ ಮುಗಿಯಲಿರುವುದು. ಮಾರ್ಚ್‌ನಲ್ಲಿ ನಡೆವ ಪ್ರಾಂತೀಯ ಚುನಾವಣೆಯಲ್ಲಿ ಎರ್ಡೋಗನ್‌ರ ಎಕೆಪಿ ಪಕ್ಷ ಉತ್ತಮ ಫಲಿತಾಂಶ ಪಡೆದರೆ ಅವರ ರಾಷ್ಟ್ರಪತಿ ಕನಸು ನನಸಾಗುವುದರಲ್ಲಿ ಅನುಮಾನವಿಲ್ಲ.
ಈಜಿಪ್ಟ್ (ಮೇ- ಆಗಸ್ಟ್)
ಸರ್ವಾಧಿಕಾರಿ ಧೋರಣೆ ತೋರಿದ ಮೊಹಮ್ಮದ್ ಮೊರ್ಸಿಯನ್ನು ಬಲವಂತವಾಗಿ ಕೆಳಕ್ಕಿಳಿಸಿದ ನಂತರ ಈಜಿಪ್ಟ್ ಹೊಸ ಅಧ್ಯಕ್ಷರ ಹುಡುಕಾಟದಲ್ಲಿ ತೊಡಗಿದೆ. ಬೇಸಿಗೆ ಮುಗಿಯುತ್ತಿದ್ದಂತೆ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ ಎಂದು ವಿದೇಶಾಂಗ ಸಚಿವ ನೆಬಿಲ್ ಫಾಮಿ ತಿಳಿಸಿದ್ದಾರೆ. ಇದುವರೆಗೂ ದಿನಾಂಕ ಹಾಗೂ ಅಭ್ಯರ್ಥಿಗಳ ಆಯ್ಕೆ ಘೋಷಣೆಯಾಗಿಲ್ಲ.

29.3.14

ಪೊಲೀಸ್ ಟಿಕ್ಸ್

cop ಆಡಿ cop ಆಡಿ
ಪೊಲೈಟ್ ಎನಿಸಿಕೊಂಡ ಪೊಲೀಸ್ ಆಫೀಸರುಗಳೆಲ್ಲಾ ಪೊಲಿಟಿಕ್ಸ್ನತ್ತ ಮುಖ ಮಾಡಿದರೆ ಪೋಲಿಗಳ ಜುಟ್ಟು ಹಿಡಿಯೋರ್ಯಾರು? ಖಾಕಿ ಹಾಕುತ್ತಿದ್ದವರೆಲ್ಲ ಟೈಡ್ ಪ್ಲಸ್ ಬಳಸುತ್ತಿದ್ದಾರೋ ಎಂಬಂತೆ ಬಿಳಿ ಖಾದಿ ಧರಿಸಿ ರಾಜಕೀಯ ರಂಗಕ್ಕೆ ಇಳಿಯುತ್ತಿದ್ದಾರೆ. ಗನ್ ಹಿಡಿಯುತ್ತಿದ್ದ ಕೈಯನ್ನು ಅಷ್ಟು ಸುಲಭವಾಗಿ ಹಿಡಿಯಲೊಪ್ಪದ ರಾಜಕೀಯರಂಗ, ಎಲ್ಲೋ ಮೂರು ಮತ್ತೊಬ್ಬರಿಗೆ ಮಾತ್ರ ಸಲ್ಯೂಟ್ ಹೊಡೆದಿದೆ. 
ಗಿರೀಶ್ ಮಟ್ಟಣ್ಣನವರ್
ಸದ್ಯ ಕಂಠೀರವ ಸ್ಟುಡಿಯೋದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಗಿರೀಶ್ ಪೊಲೀಸ್ ಸಬ್ಇನ್ಸ್ಪೆಕ್ಟರ್ ಆಗಿದ್ದವರು. ರಾಜಕೀಯದ ಭ್ರಷ್ಟ ವ್ಯವಸ್ಥೆ ನೋಡಿ ಹೇಸಿಗೆಪಟ್ಟು ವಿಧಾನಸೌಧಕ್ಕೇ ಬಾಂಬ್ ಇಡುವ ದುಸ್ಸಾಹಸಕ್ಕೆ ಕೈ ಹಾಕಿ ಸೋತ ಗಿರೀಶ್, ಭ್ರಷ್ಟ ವ್ಯವಸ್ಥೆ ಸರಿಪಡಿಸಲೆಂದೇ ಬಿಜೆಪಿ ಸೇರುವ ಮೂಲಕ ರಾಜಕೀಯ ಪ್ರವೇಶಿಸಿದ್ದರು.
ಬಿ.ಕೆ. ಶಿವರಾಂ
ಬೆಂಗಳೂರಿನ ಮಲ್ಲೇಶ್ವರಂನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತಿದ್ದ ಬಿ.ಕೆ.ಶಿವರಾಂ ಐಪಿಎಸ್ ಅಧಿಕಾರಿಯಾಗಿದ್ದವರು. ವೃತ್ತಿಗೆ ಸ್ವಯಂನಿವೃತ್ತಿ ಘೋಷಿಸಿ ಅಣ್ಣ ಬಿ.ಕೆ.ಹರಿಪ್ರಸಾದ್ ಹಾದಿ ಹಿಡಿದು ರಾಜಕಾರಣಕ್ಕೆ ಧುಮುಕಿದರು. ಮಲ್ಲೇಶ್ವರಂನಲ್ಲಿ ಸೋಲಾಯಿತಾದರೂ ರಾಜಕಾರಣದಲ್ಲಿನ್ನೂ ಸಕ್ರಿಯವಾಗಿದ್ದಾರೆ.
ಶಂಕರ್ ಬಿದರಿ
ಕರ್ನಾಟಕದ ಪೊಲೀಸ್ ಮಹಾನಿರ್ದೇಶಕರಾಗಿ ಎಲ್ಟಿಟಿಇ ಮುಖಂಡರಾದ ಶುಭಾ, ಶಿವರಸನ್ ಹಿಡಿವಲ್ಲಿ ಪ್ರಮುಖ ಪಾತ್ರ ವಹಿಸಿ ತಮ್ಮ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿದ ಬಿದರಿಯವರು ಕಳೆದ ವರ್ಷ ಕಾಂಗ್ರೆಸ್ಗೆ ಸೇರ್ಪಡೆಗೊಳ್ಳುವ ಮೂಲಕ 30 ವರ್ಷಗಳ ತಮ್ಮ ಪೊಲೀಸ್ ಒಡನಾಟಕ್ಕೆ ಬೈಬೈ ಹೇಳಿದರು.
ಬಿ.ಸಿ.ಪಾಟೀಲ್
1979ರಲ್ಲಿ ಪೊಲೀಸ್ ಟ್ರೈನಿಂಗ್ ಪಡೆದ ಈ 'ಬಿಸಿ' ರಕ್ತದ ಯುವಕ ನಂತರ ಚಿತ್ರೋದ್ಯಮದಲ್ಲಿ ನೆಲೆ ಕಂಡುಕೊಂಡು ಕೌರವನಾಗಿ ರೌರವ ರೂಪದಿಂದಲೇ ಜನಮನ ಗೆದ್ದರು. ಹಲವಾರು ಯಶಸ್ವಿ ಚಿತ್ರಗಳನ್ನು ಕೊಟ್ಟ ಪಾಟೀಲ್, ಹಿರೇಕೆರೂರು ಕ್ಷೇತ್ರದಿಂದ ಎರಡು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಸಾಂಗ್ಲಿಯಾನ
ವಿಶೇಷ ಪೊಲೀಸ್ ಆಯುಕ್ತರಾಗಿದ್ದ ಮಿಜೋರಾಂ ಮೂಲದ ಸಾಂಗ್ಲಿಯಾನಾ ಅದೆಷ್ಟು ಖ್ಯಾತಿ ಗಳಿಸದ್ದರೆಂಬುದನ್ನು ಹೇಳಲು ಅವರ ಹೆಸರಿನಲ್ಲಿ ಬಂದ ಎರಡು ಕನ್ನಡ ಚಿತ್ರಗಳೇ ಸಾಕು. ಸಾಂಗ್ಲಿಯಾನಾರನ್ನು ಖ್ಯಾತಿಯೇ ರಾಜಕೀಯಕ್ಕೆ ಎಳೆತಂದಿತು. ಕಾಂಗ್ರೆಸ್ ಅಭ್ಯರ್ಥಿಯಾಗಿ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಾಂಗ್ಲಿಯಾನಾ ಸಂಸದರಾಗಿ ಕಾರ್ಯ ನಿರ್ವಹಿಸಿದರು. ಸದ್ಯ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಅಬ್ದುಲ್ ಅಜೀಮ್
ಪ್ರಾಮಾಣಿಕತೆ ಹಾಗೂ ಶಿಸ್ತಿಗೆ ಹೆಸರಾದ, ಸಾಂಗ್ಲಿಯಾನ ಅವರಿಂದ 'ಬೆಂಗಳೂರಿನ ಶೆರ್ಲಾಕ್ ಹೋಮ್ಸ್' ಎಂದೇ ಕರೆಸಿಕೊಂಡಿದ್ದ ಮಾಜಿ ಅಸಿಸ್ಟೆಂಟ್ ಪೊಲೀಸ್ ಕಮಿಷನರ್ ಅಬ್ದುಲ್ ಅಜೀಮ್, ಹೆಸರು ಕೊಟ್ಟ ಹುದ್ದೆ ಬಿಟ್ಟು 'ಹಸಿರು' ತೆನೆ ಹೊತ್ತದ್ದು 2004ರಲ್ಲಿ. 2006ರಲ್ಲಿ ಶಾಸನಮಂಡಳಿ ಸದಸ್ಯರಾಗಿ ಆಯ್ಕೆಯಾಗಿ 2013ರಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದರು.
ಕೆನಡಿ ಸಿ ಕಿರಿಮ್
ತಮ್ಮ ಹೊಸ ಶೈಲಿಯ ಪ್ರಚಾರಗಳಿಂದ ಬಹುಮತ ಗಳಿಸಿ ಅದುವರೆಗೂ ಮೂರು ಬಾರಿ ಗೆದ್ದಿದ್ದ ಆಡಳಿತ ಪಕ್ಷದ ಎದುರಾಳಿಯನ್ನು ಸೋಲಿಸಿದ ಶಿಲ್ಲಾಂಗ್ನ ಮಾಜಿ ಪೊಲೀಸ್ ಅಧಿಕಾರಿ ಕಿರಿಮ್ ಗೆಲುವಿಗೆ ಸ್ವತಃ ಮುಖ್ಯಮಂತ್ರಿಯೇ ಆಶ್ಚರ್ಯಸಹಿತ ಮೆಚ್ಚುಗೆ ವ್ಯಕ್ತಪಡಿಸಿದ್ದರು. 
ಅಫ್ತಾಬ್ ಅಹ್ಮದ್ ಖಾನ್
ಮಹಾರಾಷ್ಟ್ರದ ಲೋಖಂಡ್ವಾಲಾ ಶೂಟ್ಔಟ್ನಿಂದ ಖ್ಯಾತರಾಗಿದ್ದ ದಕ್ಷ ಪೊಲೀಸ್ ಅಧಿಕಾರಿ ಅಫ್ತಾಬ್ ಅಹ್ಮದ್ಖಾನ್ರನ್ನೂ ಕೂಡಾ ರಾಜಕೀಯ ಅಯಸ್ಕಾಂತದಂತೆ ಸೆಳೆದಿದ್ದು 1990ರ ಹೊಸ್ತಿಲಲ್ಲಿ. ಸಮಾಜವಾದಿ ಪಕ್ಷದ ಮೂಲಕ ರಾಜಕೀಯಕ್ಕೆ ಬಂದು ನಂತರ ಜೆಡಿಎಸ್ಗೆ ಹಾರಿಕೊಂಡ ಅಫ್ತಾಬ್ ದಶಕಗಳ ಬಳಿಕ ರಾಜಕೀಯದಿಂದ ಹೊರಬಂದು ಸದ್ಯ ಖಾಸಗಿ ಭದ್ರತಾ ಸಂಸ್ಥೆಯೊಂದನ್ನು ನಡೆಸುತ್ತಿದ್ದಾರೆ.
ಸೋಮ್ ಪ್ರಕಾಶ್ ಸಿಂಗ್
ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಸ್ವಯಂನಿವೃತ್ತಿ ಘೋಷಿಸಿ, ಹಲವು ಧ್ಯೇಯಗಳೊಂದಿಗೆ 2010ರಲ್ಲಿ ಬಿಹಾರದಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ ಗೆದ್ದು ಶಾಸಕರಾದ ಸೋಮ್ಪ್ರಕಾಶ್ ಸಿಂಗ್ ಸದ್ಯ ಭ್ರಮನಿರಸನಗೊಂಡು ಮತ್ತೆ ತಮ್ಮ ಹಿಂದಿನ ಹುದ್ದೆಗೆ ಮರಳುವ ಬಗ್ಗೆ ಯೋಚಿಸಿದ್ದಾರೆ. ಪೊಲೀಸ್ ಅಧಿಕಾರಿಯಾಗಿದ್ದಾಗ ಕೆಲವಾದರೂ ಭ್ರಷ್ಟರನ್ನು ಒಳತಳ್ಳುವ ಅಧಿಕಾರವಿತ್ತು. ಆದರೆ ಶಾಸಕನಾದ ಮೇಲೆ ಎಲ್ಲ ಭ್ರಷ್ಟಾಚಾರಗಳಿಗೆ ಸಾಕ್ಷಿಯಾಗಿಯೂ ಏನೂ ಮಾಡಲಾಗುತ್ತಿಲ್ಲ ಎಂಬುದು ಅವರ ಅಳಲು.
ಸುಶೀಲ್ ಕುಮಾರ್ ಸಂಭಾಜಿರಾವ್ ಶಿಂಧೆ
ಸದ್ಯ ಯುಪಿಎ ಸರ್ಕಾರದಲ್ಲಿ ಗೃಹಮಂತ್ರಿಯಾಗಿರುವ ಸುಶೀಲ್ಕುಮಾರ್ ಶಿಂಧೆ, ಮಹಾರಾಷ್ಟ್ರ ರಾಜ್ಯ ಪೊಲೀಸ್ ಬಳಗದಲ್ಲಿ ಕಾನ್ಸ್ಟೆಬಲ್ ಆಗಿ, ಸಬ್ಇನ್ಸ್ಪೆಕ್ಟರ್ ಆಗಿ, ಸಿಐಡಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದವರು. ರಾಜಕಾರಣಕ್ಕೆ ಕಾಲಿಟ್ಟ ಪೊಲೀಸ್ ಅಧಿಕಾರಿಗಳಲ್ಲಿ ಉನ್ನತ ಸ್ಥಾನಕ್ಕೇರಿದ ಕೀರ್ತಿ ಇವರದು.
ಆರ್. ಚಕ್ರವರ್ತಿ ರಾಜಗೋಪಾಲಕೃಷ್ಣನ್
ಪೊಲೀಸ್ ಡೆಪ್ಯುಟಿ ಸೂಪರಿಂಟೆಂಡೆಂಟ್ ಆಗಿದ್ದ ಚಕ್ರವರ್ತಿ ಭ್ರಷ್ಟವಿರೋಧಿ ನೀತಿಗಳಿಂದ ಪ್ರಖ್ಯಾತರಾಗಿದ್ದವರು. ಹಾಗಾಗೇ ಆಮ್ ಆದ್ಮಿ ಪಕ್ಷದ ತತ್ವಗಳಿಗೆ ಮನಸೋತು ಆರು ತಿಂಗಳ ಹಿಂದಷ್ಟೇ ರಾಜಕೀಯಕ್ಕೆ ಬಂದ ಚಕ್ರವರ್ತಿ, ಇದೀಗ ಆಪ್ನ ತಿರುಪುರ ಲೋಕಸಭಾ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಇಣುಕು nota

First Published: 29 Mar 2014 02:00:00 AM IST
ಹಳೇ ವೋಟಾ, ಹೊಸ ನೋಟಾ..?
ಈ ಬಾರಿ ನೀವು ವೋಟ್ ಮಾಡುತ್ತೀರೋ, ನೋಟಾ ಅನ್ನುತ್ತೀರೋ? ಭಾರತದ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಮತದಾರನ ಅಮೂಲ್ಯ ಮತದ ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಲು ಮತಪಟ್ಟಿಯಲ್ಲಿ 'ಮೇಲಿನ ಆಯ್ಕೆಗಳಲ್ಲಿ ಯಾವುದೂ ಅಲ್ಲ' (none of the above- NOTA) ಎಂಬ ಆಯ್ಕೆ ನೀಡಿದೆ. ರಾಜಕೀಯ ಪಕ್ಷಗಳ ವಿರೋಧದ ನಡುವೆಯೂ ಸುಪ್ರೀಂ ಕೋರ್ಟ್ ಈ 'ನೋಟಾ' ಆಯ್ಕೆಗೆ ಸಮ್ಮತಿ ನೀಡಿದೆ. ಅಭ್ಯರ್ಥಿಗಳಲ್ಲಿ ಯಾರೂ ನನ್ನ ಮತ ಪಡೆಯುವ ಅರ್ಹತೆ ಹೊಂದಿಲ್ಲ, ನನ್ನ ಪ್ರತಿನಿಧಿಯಾಗಬಲ್ಲವ ಇವರ್ಯಾರೂ ಅಲ್ಲ ಎಂದು ಹೇಳುವ ಹಕ್ಕನ್ನು ಮತದಾರನಿಗೆ ನೀಡುವ ಮೂಲಕ ಪಕ್ಷಗಳಿಗೆ ಸ್ವಚ್ಛ ಅಭ್ಯರ್ಥಿಯನ್ನು ನಿಲ್ಲಿಸುವಲ್ಲಿ ಜವಾಬ್ದಾರಿ ಹೆಚ್ಚಿಸಿದೆ. ಆದರೆ ಭಾರತದಲ್ಲಿ ಈ ಆಯ್ಕೆ ಮೂಲಕ ಅಭ್ಯರ್ಥಿಯನ್ನು ತಿರಸ್ಕರಿಸಲಾಗುವುದಿಲ್ಲ. ಏಕೆಂದರೆ 'ಮೇಲಿನ ಆಯ್ಕೆಗಳಲ್ಲಿ ಯಾವುದೂ ಅಲ್ಲ' ಎಂಬ ನಮ್ಮ ಮತ ಮತದಾರನ ಮನಸ್ಸನ್ನು ತಿಳಿಯಲು ಮಾತ್ರವೇ ಹೊರತು ಎಣಿಕೆಗೊಳಪಡುವುದಿಲ್ಲ.
ಸದ್ಯದ ಸರ್ವೆಯ ಪ್ರಕಾರ, ಎಲ್ಲ ಅಭ್ಯರ್ಥಿಗಳನ್ನು ತಿರಸ್ಕರಿಸಬಹುದಾದ ಆಯ್ಕೆಯನ್ನು 2014ರ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಶೇ.1 ಮಂದಿ ಮತದಾರರು ಮಾತ್ರ ಬಳಸಿಕೊಳ್ಳಲಿದ್ದಾರೆ. ಇದಕ್ಕೆ ಈ ಆಯ್ಕೆಯ ಬಗ್ಗೆ ಹೆಚ್ಚು ತಿಳಿವಳಿಕೆ ಇಲ್ಲದಿರುವುದು ಮೊದಲ ಕಾರಣ. ಇದರಿಂದ ನಮ್ಮ ಒಂದೇ ಒಂದು ಮತ ಎಣಿಕೆಗಿಲ್ಲದೆ ವ್ಯರ್ಥವಾಗುತ್ತದೆ ಎಂಬುದು ಮತ್ತೊಂದು ಕಾರಣ. ಬೇರೆ ದೇಶಗಳಲ್ಲಾದರೆ ಹೆಚ್ಚು ಮಂದಿ ನೋಟಾ ಆಯ್ಕೆ ಬಳಸಿದರೆ ಮರುಚುನಾವಣೆ ನಡೆಯುತ್ತದೆ. ಆದರೆ ಭಾರತದಲ್ಲಿ ಇದು ಕೇವಲ ಅಂಕಿಅಂಶಗಳಿಗೆ ಸೀಮಿತವಾಗಿ ಕುಳಿತುಕೊಳ್ಳುತ್ತದೆ. ನೋಟಾ ಭಾರತದ ಚುನಾವಣೆಯ ಮೇಲೆ ಹೆಚ್ಚೇನೂ ಪರಿಣಾಮ ಬೀರುವುದಿಲ್ಲವಂತೆ. ಏಕೆಂದರೆ ಸರ್ವೆಗಳಲ್ಲಿ ನೋಟಾ ಬಳಸುತ್ತೇವೆಂದವರು ಒಂದು ವೇಳೆ ಈ ಆಯ್ಕೆಯೇ ಇಲ್ಲದಿದ್ದರೆ ಮತ ನೀಡುತ್ತಿದ್ದುದೇ ಅನುಮಾನ ಎನ್ನುತ್ತಾರೆ ವಿಶ್ಲೇಷಕರು.
ದೆಹಲಿ, ರಾಜಸ್ತಾನ, ಚತ್ತೀಸ್ಘಡ, ಮಧ್ಯಪ್ರದೇಶ ನಾಲ್ಕು ರಾಜ್ಯಗಳಲ್ಲಿ ನಡೆಸಿದ ಸರ್ವೆ ಹೇಳುವಂತೆ 115 ದಶಲಕ್ಷ ಜನರಲ್ಲಿ 1.67 ದಶಲಕ್ಷ ಜನರು ಮಾತ್ರ 'ನೋಟಾ' ಆಯ್ಕೆ ಬಳಸುವುದಾಗಿ ತಿಳಿಸಿದ್ದಾರೆ. ದೆಹಲಿಯಲ್ಲಿ ಈ ಆಯ್ಕೆಯ ಬಗ್ಗೆ ಒಲವು ತೋರಿದವರ ಸಂಖ್ಯೆ ಶೇ.1ಕ್ಕಿಂತಲೂ ಕಡಿಮೆ. ದೆಹಲಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಲು ಹುಟ್ಟಿಕೊಂಡಿರುವ ಪಕ್ಷವೆಂಬಂತೆ ಆಪ್ ಬಿಂಬಿಸಿಕೊಂಡಿರುವುದರಿಂದ, ಆಪ್ಗೆ ನೀಡುವ ಮತವೇ ಉಳಿದ ಪಕ್ಷಗಳೆಡೆ ಮತದಾರರು ತಮ್ಮ ಸಿಟ್ಟನ್ನು ವ್ಯಕ್ತಪಡಿಸುವ ಬಗೆಯಾಗಿದೆ. ಹೀಗಾಗಿ ದೆಹಲಿಯಲ್ಲಿ ನೋಟಾ ಮತದಾರರು ಕಡಿಮೆ ಎನ್ನುವುದು ತಜ್ಞರ ವಿಶ್ಲೇಷಣೆ.
ಈ ನನ್ ಆಫ್ ದಿ ಎಬೌ ಆಯ್ಕೆ ವಿವಿಧ ದೇಶಗಳಲ್ಲಿ ವಿವಿಧ ರೀತಿಯಲ್ಲಿ ಜಾರಿಯಲ್ಲಿದ್ದು ಕೆಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗಿದೆ.
ಯುನೈಟೆಡ್ ಕಿಂಗ್ಡಮ್
2000, ನವೆಂಬರ್ನಲ್ಲಿ ಯುಕೆಯಲ್ಲಿ ನೋ ಕ್ಯಾಂಡಿಡೇಟ್ ಡಿಸರ್ವ್ಸ್ ಮೈ ವೋಟ್(ನನ್ನ ಮತ ಪಡೆದುಕೊಳ್ಳುವ ಅರ್ಹತೆ ಯಾವ ಅಭ್ಯರ್ಥಿಗೂ ಇಲ್ಲ) ಎಂಬ ಹೆಸರಿನಲ್ಲೇ ಹೊಸ ಪಕ್ಷವೊಂದು ಅಧಿಕೃತವಾಗಿ ಸೃಷ್ಟಿಯಾಯಿತು! ಈ ಪಕ್ಷದ ಮುಖ್ಯ ಉದ್ದೇಶ ದೇಶದಲ್ಲಿ ಗ್ರಾಮ ಮಟ್ಟದಿಂದ ದೇಶಮಟ್ಟದವರೆಗೆ ನಡೆವ ಪ್ರತೀ ಚುನಾವಣೆಯಲ್ಲೂ 'ನನ್ ಆಫ್ ದಿ ಎಬೌ' ಆಯ್ಕೆ ಅಳವಡಿಸಬೇಕೆಂಬುದಾಗಿತ್ತು! ಇನ್ನೊಂದು ಸ್ವಾರಸ್ಯವೆಂದರೆ 2010ರಲ್ಲಿ ಎರಿಕ್ ಮಚ್ ಎಂಬಾತ ತನ್ನ ಹೆಸರನ್ನು ಬದಲಿಸಿಕೊಂಡು 'ಜೀರೋ, ನನ್ ಆಫ್ ದಿ ಎಬೌ' ಎಂಬ ಹೆಸರಿನಲ್ಲಿ ಕಣಕ್ಕಿಳಿದು ಅಚ್ಚರಿ ಮೂಡಿಸಿದ್ದ. ಆ ಮೂಲಕವಾದರೂ ತನ್ನ ದೇಶದ ಮತದಾರರಿಗೆ 'ನನ್ ಆಫ್ ದಿ ಎಬೌ' ಆಯ್ಕೆ ನೀಡುವ ಉದ್ದೇಶ ಅವನದಾಗಿತ್ತು!
ಸೋವಿಯತ್ ಯೂನಿಯನ್
1991ರಲ್ಲಿ ಸೋವಿಯತ್ ಸಂಯುಕ್ತ ರಾಷ್ಟ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಜನತೆ ನೋಟಾ ಬಟನ್ ಒತ್ತಿದ್ದರಿಂದ ಕಮ್ಯೂನಿಸ್ಟ್ ಪಕ್ಷದ 100ಕ್ಕೂ ಹೆಚ್ಚು ಅಭ್ಯರ್ಥಿಗಳು ಅನರ್ಹರೆಂದು ರಾಜಕೀಯ ಕ್ಷೇತ್ರದಿಂದ ಹೊರಹೋಗಬೇಕಾಯಿತು. ಅಲ್ಲದೆ ಮರುಚುನಾವಣೆ ನಡೆಯಲು ಕಾರಣವಾಯಿತು. ಈ ಮೂಲಕ ಪ್ರಜಾಪ್ರಭುತ್ವದ ಅರ್ಥ ಹೆಚ್ಚು ಕಳೆಗಟ್ಟಿತು.
ಸ್ಪೇನ್
ಇಲ್ಲಿನ ಮತನಿಯಮಗಳ ಪ್ರಕಾರ ಯಾವುದೇ ಅಭ್ಯರ್ಥಿಗೆ ಮತ ಹಾಕಲು ಇಷ್ಟವಿಲ್ಲದಿದ್ದರೆ ಖಾಲಿ ಬಾಕ್ಸ್ವೊಂದನ್ನು ಆಯ್ಕೆ ಮಾಡುವ ಅಧಿಕಾರ ಮತದಾರನಿಗಿದೆ. ಇಲ್ಲಿ ಖಾಲಿ ಬಾಕ್ಸ್ಗೆ ಬಿದ್ದ ಮತಗಳ ಸಂಖ್ಯೆ 5 ಶೇಕಡ ದಾಟಿದರೆ ಆ ಪಕ್ಷವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸಲಾಗುವುದಿಲ್ಲ. ಅಲ್ಲದೆ ಹಾಗೆ ಮತದಾರರಿಂದ ತಿರಸ್ಕರಿಸಲ್ಪಟ್ಟ ಅಭ್ಯರ್ಥಿಗಳ ಸ್ಥಾನವನ್ನು ಮಂತ್ರಿಮಂಡಲದಲ್ಲೂ ಮರುಚುನಾವಣೆ ನಡೆವವರೆಗೆ ಖಾಲಿ ಬಿಡಲಾಗುತ್ತದೆ.
ಯುಎಸ್
ಅಮೆರಿಕ ಸಂಯುಕ್ತ ರಾಷ್ಟ್ರಗಳಲ್ಲಿ ನೆವಾಡ ರಾಜ್ಯದಲ್ಲಿ ಮಾತ್ರ 1978ರಿಂದಲೇ 'ನೋಟಾ' ಆಯ್ಕೆಯ ಅನುಕೂಲವಿದೆ. 1999ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ನೋಟಾ ಬೇಕೆಂಬ ಕೂಗು ಕೇಳಿಬಂದು ಅದರ ಪ್ರಚಾರಕ್ಕಾಗಿ 987000 ಡಾಲರ್ಗಳನ್ನು ವ್ಯಯಿಸಲಾಯಿತಾದರೂ 2000ನೇ ಇಸವಿಯಲ್ಲಿ ನಡೆದ ಚುನಾವಣೆಯಲ್ಲಿ ಅಭ್ಯರ್ಥಿ ಅತ್ಯಧಿಕ ಮತ ಗಳಿಸುವ ಮೂಲಕ ನೋಟಾ ಮತದಾರರಿಂದಲೇ ತಿರಸ್ಕರಿಸಲ್ಪಟ್ಟಿತು.
ಬ್ರಿಟನ್
ಬ್ರಿಟನ್ ಸರ್ಕಾರ ಯಾವುದೇ ಪಕ್ಷಗಳೂ 'ನನ್ ಆಫ್ ದಿ ಎಬೌ' ಎಂಬ ಹೆಸರಿಟ್ಟುಕೊಳ್ಳುವಂತಿಲ್ಲವೆಂದು ಆದೇಶ ಹೊರಡಿಸಿತ್ತು. ಇದರಿಂದ ಕುಪಿತನಾದ ದೊಡ್ಡ ತಲೆಯ ಬ್ರಿಟಿಷ್ ವ್ಯಕ್ತಿಯೊಬ್ಬ 'ನನ್ ಆಫ್ ದಿ ಎಬೌ ಎಕ್ಸ್' ಎಂಬ ಹೆಸರಿನಲ್ಲಿ ಕಣಕ್ಕಿಳಿದಿದ್ದ. ಆ ಹೆಸರಿನಲ್ಲಿ ಪಕ್ಷವಿರಬಾರದೇ ಹೊರತೂ, ಅಭ್ಯರ್ಥಿ ಇರಬಾರದೆದೇನಿಲ್ಲವಲ್ಲ, ನನ್ನ ಹೆಸರಿನ ಆಯ್ಕೆಯ ಸ್ವಾತಂತ್ರ್ಯವನ್ನು ಜಾಹೀರುಗೊಳಿಸಲೋಸುಗವೇ ಹೀಗೆ ಚುನಾವಣೆಗೆ ನಿಂತಿದ್ದೇನೆ ಎಂದು ಸಾರಿದ್ದ. ಒಂದು ವೇಳೆ 'ನನ್ ಆಫ್ ದಿ ಎಬೌ'ಗೆ ಹೆಚ್ಚು ಮತ ಬಂದರೆ ಅವನು ಗೆಲ್ಲುತ್ತಿದ್ದನೋ, ಸೋಲುತ್ತಿದ್ದನೋ!?
ಪೋಲಂಡ್
1989ರ ಚುನಾವಣೆಯಲ್ಲಿ ಪೋಲೆಂಡ್ನಲ್ಲಿ ಕಮ್ಯೂನಿಸ್ಟ್ ಪಕ್ಷದಿಂದ ನಿಂತಿದ್ದ ಏಕೈಕ ಅಭ್ಯರ್ಥಿಯ ಹೆಸರನ್ನು ಮತದಾನದಂದು ಮತದಾರರೆಲ್ಲರೂ ಚಿತ್ತು ಹಾಕುವ ಮೂಲಕ ಅಂದಿನ ಪ್ರಧಾನಮಂತ್ರಿ ಹಾಗೂ ಪ್ರಮುಖ ಕಮ್ಯೂನಿಸ್ಟ್ ನೇತಾರರನ್ನು ಅಧಿಕಾರದಿಂದ ಕೆಳಗಿಳಿಸಿದರು.
-ರೇಶ್ಮಾರಾವ್ ಸೊನ್ಲೆ

27.3.14

ಕಣ್ಕಟ್ ಬಾಯ್ಕಟ್



First Published: 27 Mar 2014 02:00:00 AM IST
ಪವರ್ ಶಿರೋಮಣಿಯರ ಫ್ರೀ ಸ್ಟೈಲ್
ಅಧಿಕಾರದಲ್ಲಿರುವ ಮಹಿಳೆಯರೇಕೆ ಬಾಯ್ಕಟ್ಗೆ ಮೊರೆ ಹೋಗುತ್ತಾರೆ?ಮಹಿಳೆ ಎಂದರೆ ನೀಳ ಕೇಶರಾಶಿ, ಹಣೆಗೆ ಕುಂಕುಮ, ಕೈತುಂಬ ಬಳೆ, ಭೂಮಿಯೆಡೆಗೆ ನೋಟವಿಟ್ಟ ನಡಿಗೆ...ಹೀಗೆ ವರ್ಣಿಸಿ ವರ್ಣಿಸಿಯೇ ಆಕೆಯನ್ನು ಈ ಸ್ಟಿಗ್ಮಾಕ್ಕೆ ಅಂಟಿಸಿರುವುದು ಭಾರತೀಯ ಪುರುಷ ಪ್ರಧಾನ ಸಮಾಜ. ಇದರಲ್ಲಿ ತಮ್ಮ ಕಲ್ಪನೆಯ ಹುಡುಗಿಯನ್ನು ತೆರೆದಿಡುವುದರೊಂದಿಗೆ ಮಹಿಳೆಯರು ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳಬಾರದೆಂಬ ಧೋರಣೆಯೂ, ತಮ್ಮನ್ನು ಮೀರಿ ಬೆಳೆವ ಭಯವೂ ಪುರುಷರ ಕಳ್ಳ ಮನಸ್ಸಿನಲ್ಲಿ ಹುಳ್ಳಹುಳ್ಳಗೆ ಇರುತ್ತದೆ. ಇಂಥ ಬಹುಸಂಖ್ಯಾತ, ಬಲಾಢ್ಯ ಪುರುಷ ಜಾತಿಯ ಕಟ್ಟುಕಟ್ಟಳೆಗಳನ್ನು ಮೀರಲು ಸಹಜವಾಗಿಯೇ ಭಯವೂ, ಪುರುಷರ ಮೆಚ್ಚುಗೆ ಕಣ್ಗಳಿಂದ ದೂರವಾಗುವ ಆತಂಕವೂ ಮಹಿಳೆಯ ಆತ್ಮಕ್ಕೇ ಬೇಲಿ ಹಾಕಿರುತ್ತದೆ. 
ಇಂಥ ವಾತಾವರಣದಲ್ಲಿ ಈ ಬೇಲಿ ದಾಟುವ ಆಕೆಯ ಯಾವುದೇ ಸಣ್ಣ ಪ್ರಯತ್ನವೂ ಬಹುಶೀಘ್ರವಾಗಿ ಸಮಾಜದ ಗಮನ ಸೆಳೆಯಬಲ್ಲದು. ಹಾಗಾಗಿಯೇ ಅಧಿಕಾರಯುತ ಮಹಿಳೆಯ ಬಾಯ್ಕಟ್ ಆಕೆಯ ವ್ಯಕ್ತಿತ್ವವನ್ನೇ ಬದಲಿಸಬಲ್ಲದು. ಒಬ್ಬಳು ಮಧ್ಯವಯಸ್ಸಿನ ಮಹಿಳೆ ಬಾಯ್ಕಟ್ ಮಾಡಿಕೊಂಡಿದ್ದಾಳೆಂದರೆ ಓದಿದವಳು, ದಿಟ್ಟೆ, ಅಧಿಕಾರಯುತಸ್ಥಾನದಲ್ಲಿರಬೇಕು.. ಇತ್ಯಾದಿ ಊಹೆಗಳು ನೋಡುವವರ ಕಣ್ಗಳಲ್ಲಿ ಆಕೆಯ ತೂಕವನ್ನು ಹೆಚ್ಚಿಸುತ್ತವೆ. (ತೀರ್ಥಕ್ಷೇತ್ರಗಳಲ್ಲಿ ಕಾಣಸಿಗುವವರನ್ನು ಹೊರತುಪಡಿಸಿ) ಆದ್ದರಿಂದಲೇ ಬಹುತೇಕ ರಾಜಕೀಯ ಕ್ಷೇತ್ರದಲ್ಲಿರುವ ಮಹಿಳೆಯರು ಬಾಯ್ಕಟ್ ಮೊರೆ ಹೋಗುತ್ತಾರೆ. 
ಇಂದಿರಾ ಗಾಂಧಿ
50ರ ದಶಕದಲ್ಲಿ ಮಧ್ಯೆ ಬೈತಲೆ ತೆಗೆದು ಸಣ್ಣ ಜುಟ್ಟು ಕಟ್ಟಿ ಪಾರ್ಲಿಮೆಂಟ್ಗೆ ಹಾಜರಾಗುತ್ತಿದ್ದ ಇಂಧಿರಾ ಗಾಂಧಿ 60ರ ದಶಕಕ್ಕೆ ಕಾಲಿಡುತ್ತಿದ್ದಂತೆ ಬೊಫ್ಯಾಂಟಿಶ್ ಸ್ಟೈಲ್(ಬಾಯ್ಕಟ್)ಗೆ ಮೊರೆ ಹೋದರು. ಮಹಿಳೆಯನ್ನು ಸದಾ ಮನೆಯೊಳಗಡಗಿಸುವ ಸಂಸ್ಕೃತಿ ಹೊತ್ತಿದ್ದ ಭಾರತದ ತೊಟ್ಟಿಲು ತೂಗುವ ಕೈ ತನ್ನ ಹುಡುಗರ ಶೈಲಿಯ ಕೇಶರಾಶಿಯ ಮೇಲೆ ಕೈಯಾಡಿಸುತ್ತಿದ್ದರೆ ಅಧಿಕಾರಯುತ ಪುರುಷ ಪುಂಗವರು ಇವರ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದರು! ತಂದೆಯಿಂದಲೇ ಫ್ಯಾಷನ್ ಪ್ರೀತಿಯನ್ನು ಎರವಲು ಪಡೆದಿದ್ದ ಇಂದಿರಾ ತಲೆ ಸಂಪೂರ್ಣ ಬೆಳ್ಳಗಾಗತೊಡಗಿದಾಗ ಪ್ಯಾರಿಸ್ಗೆ ಹಾರಿ ಒಂದೆಳೆಯನ್ನು ಬಿಳಿಯಾಗಿಯೇ ಬಿಟ್ಟು ಉಳಿದ ಕೂದಲನ್ನು ಕಪ್ಪಾಗಿಸಿಕೊಂಡು ಬಂದಿದ್ದರು. ಮಹಿಳೆಯ ಈ ವಿಶಿಷ್ಟ ಕೇಶಶೈಲಿಗೆ ಭಾರತ ಸಾಕ್ಷಿಯಾದದ್ದು ಅದೇ ಮೊದಲಿರಬೇಕು. ತುರ್ತು ಸಂದರ್ಭದಲ್ಲಿ ಇಂದಿರಾ ತಲೆಯ ಅರ್ಧಬಿಳಿ, ಅರ್ಧ ಕಪ್ಪು ಕೂದಲು ಆಕೆಯ ವಿಕೃತ ಮನಸ್ಸಿನ ಕುರೂಪವೆಂದು ವಿಶೇಷ ಅರ್ಥ ಪಡೆದುಕೊಂಡಿದ್ದು ಸಹ ಗಮನಾರ್ಹ.
ಮಾಯಾವತಿ
ಸಮಾಜವಾದಿ ಪಕ್ಷದ ನೇತಾರೆ, ಭಾರತದ ಮೊದಲ ಮಹಿಳಾ ದಲಿತ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಯ ಮಾಯಾವತಿ ವ್ಯಕ್ತಿತ್ವಕ್ಕೆ ಕೂಡಾ ಆಕೆಯ ಬಾಯ್ಕಟ್ ಹೇರ್ಸ್ಟೆ ೈಲ್ ವಿಶಿಷ್ಟ ದಿಟ್ಟತನವನ್ನೊದಗಿಸಿಕೊಟ್ಟಿದೆ. 2 ಬಾರಿ ಮುಖ್ಯಮಂತ್ರಿಯಾದಾಗಲೂ ಎಣ್ಣೆ ತೀಡಿ ಜೆಡೆ ಹೆಣೆದುಕೊಂಡು ಬರುತ್ತಿದ್ದ ಮಾಯಾ, 3ನೇ ಬಾರಿಗೆ ಮುಖ್ಯಮಂತ್ರಿಯಾಗುವಾಗ ಅವರ ಜಡೆಯೂ ಮಾಯ! 'ದಲಿತ' ಎಂಬ ಪಟ್ಟದಿಂದ ಹೊರಬಂದು ಮೇಲ್ವರ್ಗದವರೊಂದಿಗೆ ತನ್ನನ್ನು ತಾನು ಸಮೀಕರಿಸಿಕೊಳ್ಳಲು ಮಾಯಾವತಿಗೆ ಈ ಹೇರ್ಸ್ಟೈಲ್ ಮಹತ್ವದ್ದೆಂದೆನಿಸಿರಬಹುದು.
ಪ್ರಿಯಾಂಕ ಗಾಂಧಿ
ರಾಜಕೀಯ ಅಖಾಡಕ್ಕಿಳಿಯದಿದ್ದರೂ ನೆಹರೂ ಕುಟುಂಬದ ಕುಡಿಯಾಗಿದ್ದರಿಂದ ರಾಜಕೀಯವಾಗಿ ಗುರುತಿಸಿಕೊಂಡಿರುವವರು ಪ್ರಿಯಾಂಕ ಗಾಂಧಿ. ಈಕೆ ಮೊದಲಿಂದಲೂ ತನ್ನ ಅಜ್ಜಿಯ ಕೇಶಶೈಲಿಯನ್ನೇ ನೆಚ್ಚಿಕೊಂಡು ಬಂದವರು. ಆದರೂ ಈ ಫ್ಯಾಷನ್'ಪ್ರಿಯೆ'ಯ ಕೇಶಶೈಲಿ ಸದ್ದು ಮಾಡಿದ್ದು 2011ರಲ್ಲಿ. 40ರ ಹೊಸ್ತಿಲಲ್ಲಿದ್ದ ಪ್ರಿಯಾಂಕಳ ಕೇಶಶೈಲಿಯನ್ನು 20-25ರ ಯುವತಿಯರು ಟ್ರೆಂಡ್ ಆಗಿ ಸ್ವೀಕರಿಸಿ ಅನುಕರಿಸತೊಡಗಿದ್ದರು.
ಗೀತಾ ಶಿವರಾಜ್ ಕುಮಾರ್
ಇದೀಗ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ, ರಾಜ್ ಕುಟುಂಬದ ಗೀತಾ ಶಿವರಾಜ್ಕುಮಾರ್ ಕೂಡಾ ಬಾಯ್ಕಟ್ನೊಂದಿಗೇ ರಾಜಕೀಯ ಪ್ರವೇಶಿಸಿದ್ದು, ಈ ಹೇರ್ಸ್ಟೈಲ್ ಆಕೆಯ ರಾಜಕೀಯ ಜೀವನದಲ್ಲಿ ಯಾವ ಪಾತ್ರ ವಹಿಸಲಿದೆ ಕಾದು ನೋಡಬೇಕಿದೆ.
ಕಿರಣ್ ಬೇಡಿ
ರಾಜಕೀಯದ ಗಾಳಿಯನ್ನು ಹತ್ತಿರದಿಂದ ಸೇವಿಸಿ ಅದು ಕಾರುವ ವಿಷಕ್ಕೆ ಭಯಗೊಂಡು ದೂರ ಓಡಿದ ಭಾರತದ ಮೊಟ್ಟಮೊದಲ ಮಹಿಳಾ ಐಪಿಎಸ್ ಆಫೀಸರ್ ಕಿರಣ್ ಬೇಡಿ ವ್ಯಕ್ತಿತ್ವಕ್ಕೆ ವಿಶೇಷಣಗಳು ಅಂಟಿದ ದಿನದಿಂದಲೂ ಬಾಯ್ಕಟ್ ಆಕೆಯ ಬಾಯ್ಫ್ರೆಂಡ್ನ ಹಾಗೆ ಜೊತೆಗೇ ಇದೆ.
ಪ್ರಿಯಾದತ್
ಸುನೀಲ್ದತ್ ಮತ್ತು ನರ್ಗೀಸ್ ಪುತ್ರಿ ಪ್ರಿಯಾ ದತ್ ರಾಜಕೀಯ ಅಖಾಡಕ್ಕಿಳಿದ ಕೆಲ ಸಮಯ ಬಾಯ್ಕಟ್ಗೆ ಮೊರೆ ಹೋದದ್ದು ಮತ್ತೊಮ್ಮೆ ರಾಜಕೀಯಕ್ಕೂ ಮಹಿಳೆಯ ಬಾಯ್ಕಟ್ಗೂ ಇರುವ ಸಂಬಂಧವನ್ನು ಪುಷ್ಟೀಕರಿಸುತ್ತದೆ.
ಮಾರ್ಗರೆಟ್ ಹಿಲ್ಡಾ ಥ್ಯಾಚರ್
ಅತಿ ಹೆಚ್ಚು ಕಾಲ ಬ್ರಿಟಿಷ್ ಪ್ರೈಮ್ ಮಿನಿಸ್ಟರ್ ಆಗಿದ್ದ ಮಾರ್ಗರೆಟ್ ಹಿಲ್ಡಾ ಥ್ಯಾಚರ್ ಕೂಡಾ ಕೆಂಪುಕೂದಲನ್ನು ಹೊರತುಪಡಿಸಿದರೆ ನಮ್ಮ ಇಂದಿರಾ ಗಾಂಧಿಯದೇ ಎನಿಸುವ ಹೇರ್ಸ್ಟೈಲ್ ಹೊಂದಿದ್ದರು. ಅದು ಈ ಉಕ್ಕಿನ ಮಹಿಳೆಯ ನಾಯಕತ್ವದ ವರ್ಚಸ್ಸನ್ನು ಹೆಚ್ಚಿಸಿತ್ತು.
ಹಿಲರಿ ಕ್ಲಿಂಟನ್
ಅಮೆರಿಕ ಸಂಯುಕ್ತ ಸಂಸ್ಥಾನದ ಕಾರ್ಯದರ್ಶಿಯಾಗಿ ಉತ್ತಮ ಹೆಸರು ಮಾಡಿರುವ, ಅಮೆರಿಕದ ಅತ್ಯುತ್ಕೃಷ್ಟ ವಕೀಲೆ ಎಂಬ ಖ್ಯಾತಿವೆತ್ತ ಹಿಲರಿ ಕ್ಲಿಂಟನ್ಗೆ ಕೂಡಾ ಬಾಯ್ಕಟ್ ವಿಶಿಷ್ಟ ಮೆರುಗು ನೀಡಿದೆ.
ಮಿಶೆಲ್ ಒಬಾಮ
ಅಮೆರಿಕ ಅಧ್ಯಕ್ಷ ಒಬಾಮ ಪತ್ನಿ ಸ್ವತಃ ವಕೀಲೆ ಮತ್ತು ಬರಹಗಾರ್ತಿಯಾಗಿ ಗುರುತಿಸಿಕೊಂಡಿರುವ ಮಿಶೆಲ್ ಬಾಯ್ಕಟ್ಗೆ ಸಮೀಪದ ಎಲ್ಲ ಹೇರ್ಸ್ಟೈಲ್ಗಳನ್ನು ತನ್ನ ಮೇಲೇ ಪ್ರಯೋಗಿಸಿಕೊಂಡು ನೋಡುಗರ ಗಮನ ಸೆಳೆಯುತ್ತಾರೆ.

1.3.14

ಟಿಪಿಕಲ್ ಸಿಂಹ

ಅದು 1992. ಅಪಘಾತದಲ್ಲಿ ಕಾಲಿಗೆ ತೀವ್ರ ಸುಟ್ಟ ಏಟಾಗಿ ಸಿ.ಆರ್.ಸಿಂಹ ಎಂಬ ಚೈತನ್ಯ ಹಾಸಿಗೆಯಲ್ಲೇ ಕಾಲ ಕಳೆಯಬೇಕಾದ ಅನಿವಾರ್ಯವಿತ್ತು. ಅಷ್ಟೇ ಅಲ್ಲ, ಅವರು ಮತ್ತೆ ಚೇತರಿಸಿಕೊಳ್ಳುವ ಭರವಸೆ ಕೊಡಲು ವೈದ್ಯರು ಧೈರ್ಯ ಮಾಡಲಿಲ್ಲ. ಹೀಗಾಗಿ ಖಿನ್ನತೆಗೊಳಗಾದ ಸಿಂಹ ಅದರಿಂದ ಹೊರ ಬರುವ ಪ್ರಯತ್ನವಾಗಿ ಕುವೆಂಪು ಸಾಹಿತ್ಯದ ಮೊರೆ ಹೊಕ್ಕರು. ಅಂದಿನಿಂದ ಅವರ ಬದುಕಿನಲ್ಲಿ ಕುವೆಂಪು ಹಾಸುಹೊಕ್ಕಾದರು. 
ಎದ್ದು ಓಡಾಡುವಂತಾದ ಕೂಡಲೇ ಕುವೆಂಪುರನ್ನು ಭೇಟಿಯಾಗಲು ಯತ್ನಿಸಿ ಕೊನೆಗೂ ಸಾಹಿತ್ಯದ ಮೂಲಕವೇ ಅವರನ್ನು ಗ್ರಹಿಸಿ, ಸಿಂಹ ಅವರೇ ಬರೆದು ನಿರ್ದೇಶಿಸಿ ರಂಗದ ಮೇಲೆ 'ರಸಋಷಿ ಕುವೆಂಪು'ವಿನ ಮುಖಕ್ಕೆ ಬೆಳಕು ಹಾಯಿಸೇ ಬಿಟ್ಟರು. ಆ ಬೆಳಕು, ನೋಡಲು ಕುಪ್ಪಳಿಯ ಪುಟ್ಟಪ್ಪನ ದೇಹಾಕಾರಕ್ಕೆ ಹೊಂದುತ್ತಿದ್ದ ಕುವೆಂಪು ಪಾತ್ರಾಧಾರಿ ಸಿಂಹರ ಮುಖದ ಮೇಲೆ 100ಕ್ಕೂ ಹೆಚ್ಚು ಬಾರಿ ಬಿದ್ದು ಅಭೂತಪೂರ್ವ ಯಶಸ್ಸು ತಂದುಕೊಟ್ಟಿತು. ಕುವೆಂಪು ಬದುಕಿದ್ದಾಗಲೇ ಈ ರಂಗಪ್ರಯೋಗವಾಯಿತಾದರೂ ಅನಾರೋಗ್ಯದಿಂದಾಗಿ ಕುವೆಂಪು ನಾಟಕ ನೋಡಲಾಗಲಿಲ್ಲ.
c.r. shima photosತಮ್ಮ ಭಾಷಣಗಳಲ್ಲೆಲ್ಲ ಕುವೆಂಪುವಿನ ಕತೆ, ಕವಿತೆ, ಕಾದಂಬರಿಯ ಸಾಲುಗಳನ್ನು ಅನಾಯಾಸವಾಗಿ ಉದುರಿಸುತ್ತಿದ್ದ ಸಿಂಹ ಈ ಬಹುಮುಖಿ ವ್ಯಕ್ತಿತ್ವದೆಡೆಗೆ ಅದೆಷ್ಟು ಆಕರ್ಷಿತರಾಗಿದ್ದರೆಂದರೆ ತಮ್ಮ ಎಂಟರ್‌ಪ್ರೈಸ್ ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿಯಲ್ಲಿ ರಸಋಷಿ ಕುವೆಂಪು ಎಂಬ ಚಲನಚಿತ್ರವನ್ನೂ ತಂದರು. ತಮ್ಮ ಮಗ ಋತ್ವಿಕ್ ನಿರ್ದೇಶಿಸಿದ ಈ ಚಿತ್ರದಲ್ಲೂ ತಾವೇ ಕುವೆಂಪುವಿನ ಪಾತ್ರಧಾರಿಯಾದರು. ಆದರೆ ಅವರೆಲ್ಲೂ ಅಭಿನಯಿಸಲಿಲ್ಲ. ಅವರೇ  ಹೇಳುವಂತೆ ಕುವೆಂಪುವೇ ಆಗಬೇಕಾದ ಅದಮ್ಯ ಆಸೆ ಹಾಗು ಅನಿವಾರ್ಯತೆ ಇತ್ತು. 
ರಂಗಗಾಥೆ
1942ರಲ್ಲಿ ಹುಟ್ಟಿದ ಸಿಂಹ 12ನೇ ವಯಸ್ಸಿಗೇ ವೇದಿಕೆ ಏರಿದವರು. ಬಸವನಗುಡಿಯ ನ್ಯಾಷನಲ್ ಕಾಲೇಜಿನ ವಿದ್ಯಾರ್ಥಿಯಾಗಿ ಹಾಗೂ ಹಳೆ ವಿದ್ಯಾರ್ಥಿಯಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ತಮ್ಮ ಮೂವತ್ತನೇ ವಯಸ್ಸಿನಲ್ಲಿ ಗೆಳೆಯರನ್ನೆಲ್ಲ ಸೇರಿಸಿಕೊಂಡು 'ನಟರಂಗ' ಎಂಬ ರಂಗಸಂಸ್ಥೆಯೊಂದನ್ನು ಹುಟ್ಟುಹಾಕಿದರು. ಕಾಕನಕೋಟೆ, ತಲೆದಂಡ, ತುಘಲಕ್, ಸಂಕ್ರಾಂತಿ ಮುಂತಾದ ನಾಟಕಗಳ ಪ್ರಖ್ಯಾತಿಗೆ ನಿರ್ದೇಶಕ ಮತ್ತು ನಟನಾಗಿ ಓನಾಮ ಹಾಕುತ್ತಲೇ ಸಾಗಿದರು. 30ಕ್ಕೂ ಹೆಚ್ಚು ವರ್ಷ ತುಘಲಕ್ ಆಗಿ ರಂಗದರ್ಬಾರು ಮೆರೆಸಿದ ಹೆಗ್ಗಳಿಕೆ ಸಿಂಹ ಅವರದ್ದು.
ಸಿನಿಮಾರಂಗದಿಂದ ತಮ್ಮನ್ನು ಗುರುತಿಸುವವರ ಸಂಖ್ಯೆ ಹೆಚ್ಚಿದ್ದರೂ ರಂಗಭೂಮಿಯನ್ನೇ ಕರ್ಮಭೂಮಿ, ಧರ್ಮಭೂಮಿ ಎಂದು ಭಾವಿಸಿದ ಸಿಂಹ 1983ರಲ್ಲಿ ಮತ್ತೊಂದು ರಂಗಗುಂಪು 'ವೇದಿಕೆ' ಹುಟ್ಟು ಹಾಕಿದರು. ಏಕವ್ಯಕ್ತಿ ಪ್ರದರ್ಶಕರಾಗಿ 'ಟಿಪಿಕಲ್ ಟಿ.ಪಿ.ಕೈಲಾಸಂ'ನ್ನು ಅಮೆರಿಕ, ಕೆನಡ, ಇಂಗ್ಲೆಂಡ್ ಮತ್ತಿತರೆ ವಿದೇಶಿ ನೆಲಕ್ಕೂ ಕೊಂಡೊಯ್ದದ್ದು ನಮ್ಮ ರಂಗಭೂಮಿಗೆ ದೊಡ್ಡ ಮಟ್ಟದ ಯಶಸ್ಸೇ.
'ವೇದಿಕೆ' ಮೀಸೆ ಬಂದೋರು, ಕರ್ಣ, ಭೈರವಿ, ಕೋಲ್ಮಿಂಚು, ಅಗ್ನಿ ಮತ್ತು ಮಳೆ ಸೇರಿದಂತೆ ಹಲವಾರು ಹೊಸ ನಾಟಕಗಳಿಗೆ ವೇದಿಕೆಯಾಗಿ 'ಸಿಂಹ'ಘರ್ಜನೆ ಜೋರಾಗೇ ಮೊಳಗಿತು.
ಕೊರಗು 
ಸಿ.ಆರ್. ಸಿಂಹ ತಮ್ಮ ಇತ್ತೀಚಿನ ಭಾಷಣಗಳಲ್ಲಿ ರಂಗಭೂಮಿ ಕಲಾವಿದರ ಹರಸಾಹಸದ ಹೊರತಾಗಿಯೂ ಜನ ರಂಗಭೂಮಿಯಿಂದ ದೂರ ಸರಿಯುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದರು. ಎಪ್ಪತ್ತು ಎಂಬತ್ತರ ದಶಕದಲ್ಲಿ ನಾಟಕ ನೋಡಲು ಬಂದು ರಂಗಭೂಮಿಯ ಸೀಟುಗಳಿಗೆ ತುಂಬಿ 'ತುಳುಕಿ' ಮರುಪ್ರದರ್ಶನಕ್ಕಾಗಿ ಹಾತೊರೆಯುತ್ತಿದ್ದ ಮಂದಿ ತ್ತೊಂಬತ್ತರಿಂದೀಚೆಗೆ ಕಳೆದು ಹೋಗಿರುವ ವಿಷಾದ, ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದು ಕ್ರಮಗಳನ್ನು ಸೂಚಿಸಿದರೂ ಯಾವುದೇ ಪ್ರತಿಕ್ರಿಯೆ ಸಿಗದ ಹತಾಶೆ ಬಗ್ಗೆ ಹೇಳಿಕೊಳ್ಳುತ್ತಿದ್ದರು.
ವಯಸ್ಸು ಸಿಂಹದ ಬೇಟೆಯಾಡಿ ಆರ್ಭಟಕ್ಕೆ ಅಂತ್ಯ ಹಾಡಿದೆ. ಆದರೆ ಅಭಿಮಾನಿಗಳ ನೆನಪಿನ ಕಾಡೊಳಗೆ ಸಿಂಹದ ಓಡಾಟ ಗಾಂಭೀರ್ಯದೊಂದಿಗೆ ನಡೆದೇ ಇದೆ.
ರೇಶ್ಮಾ ರಾವ್ ಸೊನ್ಲೆ

24.2.14

ಬಿಂಕದ ಸಿಂಗಾರಿ...

'ಅಜ್ಜೀ...' ಎಂದಿತು ಸರೋಜಳ ಮೂರು ವರ್ಷದ ಎರಡನೇ ಮೊಮ್ಮಗು. ಒಮ್ಮೆ ಅದರ ಕಿವಿ ಹಿಂಡಿದಳು. 
ಎಷ್ಟು ಬಾರಿ ದೊಡ್ಡಮ್ಮ, ಅಮ್ಮಮ್ಮ ಅನ್ನು ಎಂದು ಹೇಳಿಕೊಟ್ಟರೂ ಅದೆಲ್ಲಿ ಅಜ್ಜಿ ಎನ್ನಲು ಕಲಿಯಿತೇನೋ ಸರೋಜಳಿಗಂತೂ ತಿಳಿಯುತ್ತಿಲ್ಲ. 
ಆಸುಪಾಸಿನಲ್ಲಿರುವ ಸರೋಜ ಇಂದಿಗೂ ತನ್ನ ದೇಹಗಾತ್ರವನ್ನು ಅಚ್ಚುಕಟ್ಟಾಗಿ ಕಾಪಾಡಿಕೊಂಡು ಬಂದಿದ್ದಾಳೆ. ಸಮಾರಂಭವೊಂದಕ್ಕೆ ಹೋಗಬೇಕೆಂದರೆ 4 ದಿನದ ಮುಂಚಿಂದಲೇ ಬ್ಯೂಟಿಪಾರ್ಲರ್‌ಗೆ ಹೋಗಿ ವ್ಯಾಕ್ಸಿಂಗ್, ಹುಬ್ಬು, ಹೇರ್‌ಡೈ ಎಂದು ಒಂದಿಷ್ಟು ಹಣ ಸುರಿಯುವುದಲ್ಲದೆ ಹೊಸ ಬಟ್ಟೆ, ಮ್ಯಾಚಿಂಗ್ ಬ್ಲೌಸ್, ನೈಲ್ ಪಾಲಿಶ್, ಆಭರಣಗಳ ಬಗ್ಗೆಯೂ ಅಷ್ಟೇ ನಿಗಾ ವಹಿಸುತ್ತಾರೆ. ತನ್ನ ಯಾವ ಹುಟ್ಟುಹಬ್ಬದಲ್ಲೂ ಕೇಳಿದವರಿಗೆ ವಯಸ್ಸನ್ನು ಹೇಳಿದ್ದಿಲ್ಲ, ಹೇಳಿದರೂ ನಿಖರವಾಗಿ ಹೇಳಿದ್ದಿಲ್ಲವೇ ಇಲ್ಲ. ಇನ್ನು ಹೆತ್ತರೆ ಸೌಂದರ್ಯ ಹಾಳಾಗುತ್ತದೆಂದು ಒಂದು ಮಗುವಿಗೇ ಆಪರೇಶನ್ ಮಾಡಿಸಿಕೊಂಡವಳು.
 ಅವಳ ಈ ಸೌಂದರ್ಯಪ್ರಜ್ಞೆಯ ಫಲವಾಗಿ ಆಕೆ ತನ್ನ ವಯಸ್ಸಿಗಿಂತಾ ಎಂಟ್ಹತ್ತು ವರ್ಷ ಚಿಕ್ಕವರಾಗಿ ಕಾಣುವುದಂತೂ ನಿಜವೇ. ಬಿದ್ದು ಹೋದ 4 ದವಡೆ ಹಲ್ಲು, ಮುಂದಿನ ಎರಡು ಹಲ್ಲುಗಳನ್ನು ತೆಗೆಸಿ ಸೆಟ್ ಕಟ್ಟಿಸಿಕೊಂಡಿರುವುದರಿಂದ ಹಲ್ಲುಗಳೂ ಸಮಾನಾಂತರದಲ್ಲಿ ಕುಳಿತು ನಗೆ ಬೀರುತ್ತವೆ. ಬಿಪಿ, ಶುಗರ್ ಇರಬಹುದು. ಮಾತ್ರೆಗಳ ಕಂಟ್ರೋಲ್‌ನಲ್ಲಿವೆ. ಅಲ್ಲದೆ ಅವೇನೂ ಕಾಣುವುದಿಲ್ಲವಲ್ಲ... ಮೈಕೈ ನೋವು, ಕನ್ನಡಕ ಈಗ ಮಕ್ಕಳಿಗೂ ಸಾಮಾನ್ಯ. ಅದೇನು ವಯಸ್ಸಾದ ಸೂಚನೆಯೂ ಅಲ್ಲ. ಹೀಗಾಗಿ ತನಗಿನ್ನೂ ವಯಸ್ಸಾಗಿಲ್ಲವೆಂದೇ ಸರೋಜಳ ತಿಳಿವಳಿಕೆ. ಅಲ್ಲದೆ ಈಗಲೂ ಹೇಮಾಮಾಲಿನಿಯಂತೆ ಎವರ್‌ಗ್ರೀನ್ ಎಂದು ಕೆಲವರು ಕಿಚಾಯಿಸಿ ಹೊಗಳುವುದೂ ಉಂಟು.ಅಂಥದರಲ್ಲಿ ಏನೂ ಅರಿಯದ ತನ್ನ ಮೊಮ್ಮಗು ಮಾತ್ರ ಅಜ್ಜಿ ಅನ್ನುವುದೇಕೆ? ಅವಳಿಗೆ ಆಗುವ ಇರಿಸುಮುರುಸು ಹೇಳತೀರದ್ದಲ್ಲ.  
ಈ ಬಾರಿ ಬಹಳ ವರ್ಷಗಳ ನಂತರ ಸರೋಜಳ 80ರ ಅಜ್ಜಿ ಮನೆಗೆ ಬಂದಿದ್ದರು. ಅವರೆದುರಿಗೇ ಅಜ್ಜಿ ಎಂದ ಮೊಮ್ಮಗಳ ಕಿವಿ ಹಿಂಡಿದಳು ಸರೋಜ. ಅಜ್ಜಿ ಎಂಬುದು ಸಂಬಂಧ ಸೂಚಕವೇ ಹೊರತು ವಯಸ್ಸಿನ ಸೂಚಕವಲ್ಲ, ಮಗುವಿಗೇಕೆ ಗದರುತ್ತೀ ಎಂದು ಬುದ್ದಿಮಾತು ಹೇಳಿ ಸಮಾಧಾನ ಪಡಿಸಿದಳು ಸರೋಜಳ ಅಜ್ಜಿ.
13ರಲ್ಲೇ ಮದುವೆಯಾಗಿ, 14ಕ್ಕೆ ಮಕ್ಕಳ ಕಾರ್ಖಾನೆ ಆರಂಭಿಸಿದಂತೆ ಹೆರಲು ಶುರು ಮಾಡಿದವಳು 29ರಲ್ಲಿ 9ನೇ ಮಗು ಹೆರುವಾಗ ಅವಳ ಮೊದಲ ಮಗಳು, ಚೊಚ್ಚಲ ಮಗು ಹೆತ್ತಾಗಿತ್ತು! ತನ್ನ ಮಗುವಿಗೆ ಅಮ್ಮ ಎಂದು ಹೇಳಲು ಹೇಳಿಕೊಡುತ್ತಿರುವಾಗಲೇ ಮಗಳ ಮಗುವಿಗೆ ಅಜ್ಜಿ ಅನ್ನು ಎಂದು ಹೇಳುತ್ತಿದ್ದಳಂತೆ 29ರ ಅವಳಜ್ಜಿ! ಸದಾ ಕೆಲಸ ಮಾಡುತ್ತಲೇ ಇರುತ್ತಿದ್ದ ಅಜ್ಜಿ ಈಗಲೂ ಗಟ್ಟಿಮುಟ್ಟಾಗಿ ಬರಿಗಣ್ಣಿನಲ್ಲಿ ಅಕ್ಕಿ ಆರಿಸುತ್ತಿದ್ದಳು. ಕೋಡುಬಳೆಯನ್ನು ಸರಾಗವಾಗಿ ತಿನ್ನುತ್ತಿದ್ದಳು. ಹಳ್ಳಿಗಳಲ್ಲಿದ್ದ ಮಕ್ಕಳ ಮನೆಗೆ 3-4 ಕಿಮೀ ಒಳದಾರಿಯಲ್ಲಿ ನಡೆದೇ ಹೋಗುತ್ತಿದ್ದಳು. ಕಾಯಿಲೆಗಳಾವುವೂ ಆಕೆಯನ್ನು ಬಾಧಿಸಿದ್ದಿಲ್ಲ. ಇಷ್ಟೆಲ್ಲ ಯೋಚನೆಗಳು ಸರೋಜಳನ್ನು ಮುತ್ತುವಾಗಲೇ ತನ್ನನ್ನೊಮ್ಮೆ ಬರಿಗಣ್ಣು, ಡೈ ಇಲ್ಲದ ತಲೆಕೂದಲು, ಹಲ್ಲುಸೆಟ್ ಇಲ್ಲದ ಬಾಯಿಯಲ್ಲಿ ಕಲ್ಪಿಸಿಕೊಂಡಳು.
 ತನ್ನಜ್ಜಿಯೇ ಸೌಂದರ್ಯ ಸ್ಪರ್ಧೆಯಲ್ಲಿ ಗೆದ್ದಂತೆ ನಕ್ಕಿತು. ಅಜ್ಜಿ ಎನ್ನು ಎಂದು ಹೇಳಿ ಕರೆಸಿಕೊಂಡ ಆಕೆಗೆ ಯಾವತ್ತೂ ವಯಸ್ಸಾಗಿರಲಿಲ್ಲ. ಅಜ್ಜಿ ಎನ್ನಬೇಡ ಎಂದು ಮೊಮ್ಮಗುವಿನ ಕಿವಿ ಹಿಂಡುವ ತಾನು ಹಣ್ಣು ಹಣ್ಣು ಮುದುಕಿಯಾದಂತೆನಿಸಿತು. ಅಷ್ಟರಲ್ಲಿ ಮೊದಲ ಬಾರಿಗೆ ಮೊಮ್ಮಗಳು ದೊಡ್ಡಮ್ಮಾ ಎನ್ನುತ್ತಾ ತನ್ನೆಡೆಗೆ ಓಡಿಬಂದಳು. 'ನಿನ್ನಜ್ಜಿ ನಾನು, ಅಜ್ಜಿ' ಎನ್ನಬಾರದೇ ಎಂದು ಮತ್ತೆ ಕಿವಿ ಹಿಂಡಿದಳು.
-ರೇಶ್ಮಾ ರಾವ್ ಸೊನ್ಲೆ

19.2.14

ಕಾಪಾಡು ಚೊಂಬೇಶ್ವರಾ...

First Published: 15 Feb 2014 02:00:00 AM IST

ಹೇಳಿದ್ದೇ ಹೇಳೋ ಕಿಸ್ಬಾಯ್ದಾಸ ಗೊತ್ತು. ಮಾಡಿದ್ದೇ ಮಾಡೋ ಈ ಅಭ್ಯಾಸದ ಬಗ್ಗೆ ಕೇಳಿದ್ದೀರಾ?ನಮ್ಮೊಳಗೇ ಹಲವರಿರ್ತಾರೆ. ಮುಕ್ಕೋಟಿ ದೇವರುಗಳಿಗೂ ಮುನಿಸಿಕೊಳ್ಳದೆ ಮುನ್ನೂರ್ ಸತಿ ಬೇಕಾದರೂ ನಮಸ್ಕಾರ ಮಾಡೋರು. ನೋಡೋರು ಅವ್ರ್ಗೇ ಒಂದ್ ದೊಡ್ ನಮಸ್ಕಾರ ಹಾಕಬೇಕು, ಆ ರೇಂಜ್‌ಗೆ. ದಾರೀಲಿ, ಬಸ್ಸಲ್ಲಿ ಎಲ್ಲೇ ದೇವರ ಮೂರ್ತಿನೋ, ಫೋಟೋನೋ ಕಂಡರೂ ಕೆನ್ನೆ, ಹಣೆ, ಗದ್ದ ಮುಟ್ಕೊಳೋರು. ಹಾಗಂತ ಇವರೇನು ದೇವದೂತರಲ್ಲ, ಭಕ್ತಸಾಧು ಕನಕದಾಸರಲ್ಲ, ನಮಸ್ಕಾರ ಮಾಡೋದು ಒಂದು ಚಟ ಅಷ್ಟೇ. ಅಲ್ಲಿ ಭಕ್ತಿಗಿಂತ ಭಯ ಜಾಸ್ತಿ ಇರುತ್ತೆ. 
ಇನ್ನು ಕೆಲವರಿಗೆ ಕೈ ತೊಳೆಯೋ ಅಭ್ಯಾಸ. ಒಳ್ಳೇದೇ. ಆದ್ರೆ ಒಂದೆರಡು ಬಾರಿಯಲ್ಲ, ಭಗವಂತ ಇವರಿಗೆ ಎಕ್ಸ್‌ಟ್ರಾ ಟೈಮ್ ಕೊಟ್ಟಂತೆ ದಿನಕ್ಕೆ ನೂರು ಬಾರಿ!ಮತ್ತೊಂದಷ್ಟು ಜನಕ್ಕೆ ಮನೆಯಿಂದ ಹೊರಡುವಾಗ ಎರಡ್‌ಎರಡ್ ಸರ್ತಿ ಚೆಕ್ ಮಾಡಿದ್ರೂ ಅರ್ಧ ಫರ್ಲಾಂಗ್ ಬರ್ತಿದ್ದಂಗೆ ಬೀಗ ಹಾಕಿದ್ನೋ ಇಲ್ವೋ ಅನ್ನೋ ಸಂಶಯ ಬೇತಾಳ ಬೆನ್ನು ಹತ್ತುತ್ತೆ. ಇವುನ್ನೆಲ್ಲಾ ಕಾಯಿಲೆ ಅಂದ್ರೆ ನಂಬಲೇಬೇಕು ನೀವು...
 ಹೌದು, ಬೇಡವೆಂದರೂ ಬಿಡದ, ಸುಳ್ಳೆಂದು ಗೊತ್ತಿದ್ದರೂ ನಂಬಲು ಒತ್ತಾಯಿಸುವ, ಅನವಶ್ಯಕ ಪುನರಾವರ್ತಿತ ಕಾಡುವ ಯೋಚನೆ, ಅನುಮಾನಗಳು ಮನಸ್ಸಿನ ನಿಯಂತ್ರಣ ತಪ್ಪಿಸುತ್ತವೆ. ಇದು ಅತಿಯಾದಾಗ ದಿನನಿತ್ಯದ ಕೆಲಸಕಾರ್ಯಗಳಿಗೆ ಅಡ್ಡಗಾಲಾಗತೊಡಗುತ್ತವೆ. ಆಗಲೇ ಇದು ಕಾಯಿಲೆಯ ರೂಪ ತಾಳುವುದು. ಇದನ್ನು ಮನೋತಜ್ಞರು ಆಬ್ಸೆಸ್ಸಿವ್ ಕಂಪಲ್ಸಿವ್ ಡಿಸಾರ್ಡರ್ ಎನ್ನುತ್ತಾರೆ. 
ಇಂಥಾ ರೋಗಗಳೂ ಇರುತ್ತವಾ? ಇವೂ ರೋಗಗಳಾ ಎಂದು ಆಶ್ಚರ್ಯ ಹುಟ್ಟಿಸುವಂಥ ರೂಪ ಇದರದ್ದು. ಪದೇ ಪದೇ ಅನವಶ್ಯಕ ಕಾಡುವ ಯೋಚನೆಗಳು ಆಬ್ಸೆಶನ್ ಆದರೆ ಆ ಯೋಚನೆಗಳ ಫಲವಾಗಿ ಪದೇ ಪದೇ ಮಾಡುವ ಕ್ರಿಯೆಗಳು ಕಂಪಲ್ಶನ್ ಎನಿಸಿಕೊಳ್ಳುತ್ತವೆ. 
ಗೆಳತಿಯೊಬ್ಬಳಿದ್ದಾಳೆ. ಒಂದೊಳ್ಳೆ ಗಳಿಗೇಲಿ ಮಶಿನಿಷ್ಟ್ ಚಿತ್ರ ನೋಡಿದಳು. ಚಿತ್ರದ ನಾಯಕ ಕ್ರಿಷ್ಟಿನ್ ಬೇಲ್ ಕಾರ್‌ನಲ್ಲಿ ಹೋಗುವಾಗ ಆಕಸ್ಮಿಕವಾಗಿ ಒಂದು ಮಗುವಿಗೆ ಬಡಿಯುತ್ತಾನೆ. ಮತ್ತು ಇನ್ನಲ್ಲಿ ನಿಂತರೆ ಅಪಾಯ ಎಂದು ಅಲ್ಲಿಂದ ಕಾರ್ ಅನ್ನು ವೇಗವಾಗಿ ಓಡಿಸಿಕೊಂಡು ಮನೆ ತಲುಪುತ್ತಾನೆ. ನಂತರ ತನ್ನನ್ನು ಕಾಡುವ ಪಾಪಪ್ರಜ್ಞೆಯಿಂದ ತಪ್ಪಿಸಿಕೊಳ್ಳಲು ಘಟನೆಯನ್ನು ಸ್ಮೃತಿಪಟಲದಿಂದ ತೆಗೆದು ಬಿಡುತ್ತಾನೆ. ಆದರೆ ನಮಗೆ ನಿಮಗೆ ಗೊತ್ತಿರುವಂತೆ ಯಾವುದೇ ಎನರ್ಜಿ ರೂಪಾಂತರ ಹೊಂದಬಹುದೇ ಹೊರತು ಖಾಲಿಯಾಗುವುದಿಲ್ಲ. ಹೀಗಾಗಿ ಆತನ ಆ ಮರೆಯಾದ ಪಾಪಪ್ರಜ್ಞೆ ಅನ್‌ಕಾನ್ಷಿಯಸ್‌ನಲ್ಲಿ ಹೋಗಿ ಕುಳಿತುಕೊಳ್ಳುತ್ತದೆ. ಹೊರ ಹೋಗಲು ವಾಮಮಾರ್ಗಗಳನ್ನು ಹುಡುಕಿಕೊಳ್ಳುತ್ತದೆ. ಹೀಗಾಗಿ ಆತನನ್ನು ಚಿತ್ರವಿಚಿತ್ರವಾಗಿ ಹಿಂಸಿಸುತ್ತದೆ. ಈ ಚಿತ್ರ ನೋಡಿದ ನಂತರವೇ ನನ್ನ ಕ್ಯಾಥೊಲಿಕ್ ಗೆಳತಿ ಹಾಗಾದದ್ದು. ಅವಳ ದುರ್ಬಲ ಮನಸ್ಸಿನಲ್ಲಿ ಇಲ್ಲವೆಂದು ಎಷ್ಟು ಬಾರಿ ಕಿರುಚಿದರೂ ತಾನೂ ಹೀಗೆ ಅಪಘಾತ ಮಾಡಿ ಯಾರನ್ನಾದರೂ ಸಾಯಿಸಿರಬಹುದೇ ಎಂಬ ಅನುಮಾನ ಶುರುವಾಯ್ತು. ಒಮ್ಮೆ ಅನುಮಾನ ಪಿಶಾಚಿ ಹಿಡಿದುಕೊಂಡರೆ ಅನುಮಾನವೇ  ಬೇಡ, ಅದು ನಮ್ಮನ್ನು ಭಯಂಕರವಾಗಿ ಹಿಂಸಿಸಿ ಬಿಡುತ್ತದೆ. ವರ್ಷದ ಹಿಂದೆ ಹೊಸ ವರ್ಷಕ್ಕೆ ಕುಡಿದು ಕಾರು ಓಡಿಸಿದ್ದೆನಲ್ಲ, ಆಗ ಯಾರಿಗಾದರೂ ಕುಟ್ಟಿರಬಹುದಾ? ಅವಳ ಬಳಿ ಇಲ್ಲವೆನ್ನಲು 100 ಶೇ. ಗ್ಯಾರಂಟಿ ಕೊಡಬಲ್ಲ ಸಾಕ್ಷಿಗಳಿದ್ದವು. ತನ್ನ ನೆನಪು, ಕಾರಿಗೆ ಏನೂ ಆಗದಿದ್ದುದು, ಆದರೂ ಅಂತರ್ಜಾಲದಲ್ಲಿ ಆ ಡೇಟ್‌ನಲ್ಲಿ ತಮ್ಮ ಏರಿಯಾದಲ್ಲಿ ಆದ ಆಕ್ಸಿಡೆಂಟ್‌ಗಳನ್ನು ಹುಡುಕಿದಳು. ಯಾವುದೂ ಇರಲಿಲ್ಲ. ಸಮಾಧಾನವಾಗಲಿಲ್ಲ. ಪ್ರತಿ ದಿನ ಪ್ರತಿ ಕ್ಷಣ ದೇವರನ್ನು ಮನ್ನಿಸೆಂದು ಬೇಡಿದಳು, ತಾನು ಮಾಡದ ಪಾಪಕ್ಕೆ!ಕಡೆಕಡೆಗೆ ಇದೊಂದೇ ಯೋಚನೆಯಾಗತೊಡಗಿತು. ಯು ಟ್ಯೂಬ್‌ನಲ್ಲಿ ಕಾರು ಅಪಘಾತದ ವೀಡಿಯೋ ನೋಡುವುದೊಂದೇ ಕೆಲಸವಾಯಿತು. ಇದರಿಂದಲಾದರೂ ಕ್ರಿಸ್ಟಿನ್ ಬೇಲ್‌ನಂತೆ ತಾನೂ ಮರೆತಿದ್ದರೆ ನೆನಪಾಗುವುದೆಂದು. ಶೇ.99.9 ಭಾಗ ತಾನು ಯಾರನ್ನೂ ಸಾಯಿಸಿಲ್ಲ ಎಂದು ತಿಳಿದಿದ್ದರೂ ಉಳಿದ 0.1 ಪ್ರತಿ ಶತ ಅನುಮಾನ ಸಾಕಿತ್ತು ಅವಳಿಗೆ ಹುಚ್ಚು ಹಿಡಿಸುವ ಮಟ್ಟಿಗೆ ಹಿಂಸೆ ನೀಡಲು. ಮನೋವೈದ್ಯರ ಬಳಿ ಆಪ್ತಸಲಹೆ ಪಡೆದ ಮೇಲೆ ತಿಳಿದದ್ದೆಂದರೆ ಕ್ಯಾಥೊಲಿಕ್ ಆಗಿ ತನಗೆ ನಿಷಿದ್ಧವಾದ ಕುಡಿದು ಕಾರು ಓಡಿಸಿದ ಪಾಪಪ್ರಜ್ಞೆ ಅವಳನ್ನು ಈ ಪರಿ ಕಾಡಿತ್ತು. ಇದು ನಮ್ಮ ಸೂಪರ್ ಇಗೋ ಪವರ್. 
ನಮ್ಮ ನೈತಿಕ ಪ್ರಜ್ಞೆಯನ್ನೇ ಸೂಪರ್ ಇಗೋ ಎನ್ನುವುದು. ಇದರೊಳಗೆ ನಾವು ಚಿಕ್ಕಂದಿನಲ್ಲಿ ಪಡೆದ, ಓದಿದ ಮೌಲ್ಯಗಳು, ಹಿರಿಯರ ಬುದ್ಧಿವಾದಗಳು ಸದ್ದಿಲ್ಲದೇ ಜಾಗ ಮಾಡಿಕೊಂಡು ಕುಳಿತಿರುತ್ತವೆ. ಹಾಗಾಗೇ ನಮ್ಮ ಆದರ್ಶಗಳಿಗೆ ವಿರುದ್ಧವಾಗಿ ನಾವು ನಡೆದಾಗ ಪಾಪಪ್ರಜ್ಞೆಯ ರೂಪದಲ್ಲಿ ಇದು ನಮ್ಮನ್ನು ಶಿಕ್ಷಿಸುತ್ತದೆ. ಅಲ್ಲಿಯೇ ಪ್ರಾಯಶ್ಚಿತ್ತ ಮಾಡಿಕೊಂಡೆವೋ ಸರಿ, ಇಲ್ಲವಾದಲ್ಲಿ ಮನೋರೋಗಗಳಾಗಿ ಕಾಡುತ್ತವೆ. ಕೆಲವೊಮ್ಮೆ ಇಡಿ ದಿನ ಬೇಡವೆಂದರೂ ಹಾಡೊಂದು ಬಾಯಿಗೆ ಬರುತ್ತಲೇ ಇರುತ್ತದೆ. ಕಾಯಿಲೆ ಎಂದು ಗಾಬರಿ ಬೀಳಬೇಕಿಲ್ಲ. ಯಾವಾಗ ನಮ್ಮ ಈ ಚಟ ದೀರ್ಘಕಾಲವಿದ್ದು ದಿನನಿತ್ಯದ ಕೆಲಸಗಳಿಗೆ ಅಡ್ಡಿ ತರಲಾರಂಭಿಸುತ್ತದೋ ಅದು ಚಿಕಿತ್ಸೆಯತ್ತ ಮುಖ ಮಾಡಲು ಸಕಾಲ. 
ನಡೆದಾಡುವಾಗ ಹೆಜ್ಜೆ ಎಣಿಸುವುದು, ತಾನು ಬಲದಲ್ಲೇ ಇರಬೇಕೆಂದು ನೋಡಿಕೊಳ್ಳುವುದು, ಲೈಟ್ ಸ್ವಿಚ್ ಅನ್ನು 10 ಬಾರಿ ಹಾಕಿ ಆರಿಸುವುದು, ಇಷ್ಟು ಬಾರಿಯೇ ಶ್ಲೋಕ ಹೇಳಬೇಕು, ಇಲ್ಲದಿದ್ದಲ್ಲಿ ಏನೋ ಅನಾಹುತ ಸಂಭವಿಸುತ್ತದೆ ಎಂಬ ಆತಂಕ... ಇದರಲ್ಲಿ ನೀವು ಗಮನಿಸಬಹುದಾದದ್ದು ಇಂತಹ ಕ್ರಿಯೆಗಳನ್ನು ಮಾಡದಿದ್ದರೆ ಏನೂ ಆಗುವುದಿಲ್ಲ, ಆದರೆ ಅವರಲ್ಲಿ ಮಾತ್ರ ಮುಂದೆ ಯಾವುದೊ ಅಪಾಯ ತಡೆಯಲು ನಾ ಹೀಗೆ ಮಾಡಲೇಬೇಕು ಎಂಬ ಭಾವ.. 
ಈಗೇನೋ ವಿಜ್ಞಾನ ಮುಂದುವರೆದಿದೆ ಸರಿ. ಆದರೆ ಷೇಕ್ಸ್‌ಪಿಯರ್ ಎಂಬ ನಾಟಕಕಾರನೊಳಗಿದ್ದ ಮನೋವಿಜ್ಞಾನಿ ಅಂದೇ ಈ ಮನೋಕಾಯಿಲೆಯನ್ನು ತನ್ನ ನಾಟಕಗಳಲ್ಲಿ ಪ್ರಸ್ತುತ ಪಡಿಸಿ ನಮ್ಮನ್ನು ಬೆರಗುಗೊಳಿಸುತ್ತಾನೆ. ಮ್ಯಾಕ್ಬೆತ್ ಮತ್ತು ಆತನ ಪತ್ನಿ ಅಧಿಕಾರದ ಆಸೆಯಿಂದ ರಾಜನನ್ನು ಕೊಲೆ ಮಾಡುತ್ತಾರೆ. ಪಟ್ಟವನ್ನೂ ಏರುತ್ತಾರೆ. ಆದರೆ ಈ ಘಟನೆ ನಂತರ ರಾಣಿ ಮ್ಯಾಕ್ಬೆತ್ ಪದೇ ಪದೇ ಕೈ ತೊಳೆಯಲು ಶುರು ಮಾಡುತ್ತಾಳೆ. ಅವಳಿಗೆ ಅವಳ ಕೈಲಿ ರಕ್ತ ಕಾಣಿಸುತ್ತಿರುತ್ತದೆ. ಕೊಲೆ ಅವಳ ನೆಮ್ಮದಿ ಕಿತ್ತು ಕೊಲ್ಲುತ್ತದೆ. ಹಾಗಂತ ಮತ್ತೆ ಮತ್ತೆ ಕೈ ತೊಳೆವವರೆಲ್ಲಾ ಕೊಲೆ ಮಾಡಿದ್ದಾರೆಂದು ಭಾವಿಸೀರಿ..
.-ರೇಶ್ಮಾ ರಾವ್ ಸೊನ್ಲೆ

ಎದೆಯೊಳಗೇ ಉಳಿದ ಮಾತಿಗೆ ಎಷ್ಟು ಅರ್ಥ?

ಲಹರಿ...
ಅವಳು ವಟಸಾವಿತ್ರಿ. ಸದಾ ಮಾತಾಡ್ತಾಳೆ. ಅವನೊಬ್ಬ ಕೇಳ್ತಿದಾನೆ ಅಂತ ಗೊತ್ತಾದ್ರೆ ಸಾಕು, ಸಾವಿರ ಮಾತಾಡ್ತಾಳೆ. ಕೊರೀಬೇಡ್ವೆ ಅಂತ ಅವ ಗೋಗರೆದಿದ್ದೆಷ್ಟು ಸಲವೋ! ಆದರೆ ನಿಜವಾಗಿಯೂ ಹೇಳಬೇಕಾದ ಆ ಮೂರು ಪದಗಳು ಮಾತ್ರ ಅವಳ ನಾಲಿಗೆಗೆ ಸಿಗದೇ ಎಲ್ಲೆಲ್ಲೊ ಅಡ್ಡಾದಿಡ್ಡಿ ಅಲೆಯುತ್ತವೆ. ಬೇರೆ ಪದಗಳದೂ ದಿಕ್ಕು ತಪ್ಪಿಸಿ ಅಲೆದಲೆದು ಅವಿತುಕೊಳ್ಳುತ್ತವೆ. ಅವುಗಳ ಅಡಗುತಾಣವನ್ನು ಅವನೇ ಶೋಧಿಸಲಿ ಎಂಬುದವಳ ಆಸೆ. ಅವನೋ, ಅಡಗುತಾಣ ಕಂಡರೂ ಕಾಣದಂತೆ ನಟಿಸುವ ಚತುರ. ಒಟ್ಟಿನಲ್ಲಿ ಅವಳೆದೆ ಗೂಡಲ್ಲಿ ಆ ಮೂರು ಪದಗಳು ಭದ್ರವಾಗಿ ಬೆಚ್ಚಗೆ ಕುಳಿತಿವೆ. 
ದೇವರಿಗೆ ಕೈ ಮುಗಿಯುವಾಗಲೆಲ್ಲ ಅವನ ಒಳಿತನ್ನು ಬಯಸುತ್ತಾಳೆ. ಆದರೆ ಅವನೆಂದೂ ತನ್ನವನಾಗಬೇಕೆಂದು ಕೇಳಿಕೊಳ್ಳುವುದಿಲ್ಲ. ಏಕೆಂದು ಅವಳೇ ಹಲವು ಬಾರಿ ಪ್ರಶ್ನಿಸಿಕೊಂಡಿದ್ದುಂಟು. ಹೀಗೆ ಹೇಳಲಾಗದೆ ಚಡಪಡಿಸುವ ಮೂರು ಪದಗಳಿಗೂ, ದೇವರಲ್ಲಿ ಕೋರಲಾಗದ ಕೋರಿಕೆಗೂ ಸಂಬಂಧವಿದೆ ಎಂಬ ಬಲವಾದ ನಂಬಿಕೆ ಅವಳದ್ದು. ಆದರೆ ಅದನ್ನು ಬಿಡಿಸಲು ಹೋದರೆಲ್ಲಿ ಪ್ರೀತಿ ಕಳೆದುಕೊಂಡಿದ್ದೇನೆನಿಸುತ್ತೊ ಎಂಬ ಭಯವನ್ನು ಮತ್ತೆ ಅವನ ಕನವರಿಕೆ ಕನಸುಗಳಲ್ಲಿ ಮುಚ್ಚಿ ಹಾಕುತ್ತಾಳೆ. ಪ್ರೀತಿಯಲ್ಲಿರುವ ಭಾವವೇ ಪ್ರೀತಿಸುವವನಿಗಿಂತ ಖುಷಿ ಕೊಡುತ್ತದಾ?
ಕನ್ನಡಿಯ ಮುಂದೆ ನಿಂತಗೆಲ್ಲಾ ಪಕ್ಕದಲ್ಲಿ ಅವನ ಬಿಂಬ ಮೂಡುತ್ತದೆ. ಸುಮ್ಮನೆ ನಾಚಿಕೊಂಡು ನುಲಿಯುತ್ತಾಳೆ. ಬಿಂಬ ಸರಿದು ಅವನೇ ಎದುರು ಬಂದಾಗ ನಾಚಿಕೆಯ ನೆರಳೂ ಅವನಿಗೆ ಕಾಣದಂತೆ ಮುಚ್ಚಿಟ್ಟು ಅವನ ಕಣ್ಣುಗಳನ್ನು ತಡಕುತ್ತಾಳೆ. ಅವು ಸುಮ್ಮನೆ ಬಡಿದರೂ ತನ್ನೊಡನೆ ಮಾತನಾಡಿದವು ಎಂದು ಭ್ರಮಿಸಿ ತೇಲುವ ಸುಖ ಇದೆಯಲ್ಲಾ ... ಖುಷಿಗೆ ಅವನು ಕಾರಣ ಕೇಳಿದರೆ ಮಾತು ತೇಲಿಸುತ್ತಾಳೆ. ತೇಲುವ ಮಾತುಗಳ ನೌಕೆ ಅವನಲ್ಲೂ ಅಲೆ ಎಬ್ಬಿಸುತ್ತವೆಯೇನೋ, ಹಾಗೆನಿಸುತ್ತದೆ ಆಕೆಗೆ. ಪ್ರೀತಿಯಲ್ಲಿರುವುದರಿಂದಲೇ ಈ ಮಾದಕ ಭ್ರಾಮಕ ಲೋಕ ತನ್ನದಾಗಿದೆ ಎಂಬ ಸತ್ಯ ಅವನೂ ಪ್ರೀತಿಸುತ್ತಿದ್ದಾನೆ ಎಂಬ ಸುಳ್ಳೂ ಆಗಿರಬಹುದಾದ ವಿಷಯವನ್ನೇ ಸುಲಭವಾಗಿ ನಂಬುವಂತೆ ಮಾಡುತ್ತದೆ. ಕೇಳಿ ಕ್ರಾಸ್ ಚೆಕ್ ಮಾಡಿದರೆಲ್ಲಿ ಗುಳ್ಳೆಯಂತೆ ತಾನು ಕಟ್ಟಿದ ಲೋಕ ಒಡೆದುಬಿಡುವುದೋ ಎಂಬ ಭಯವೇ ಆ ಮೂರು ಪದಗಳನ್ನು ಅವಳ ನಾಲಿಗೆಯ ನೆನಪಿನಿಂದ ಮರೆಸಿ ಹಾಕಿರುವುದು. 
ಈ ಪ್ರೀತಿಯ ಲೋಕದ ಸೃಷ್ಟಿಯಲ್ಲಿ ಮಳೆ ಬಂದರೆ ಆತ ಕೊಡೆಯಾಗುತ್ತಾನೆ. ಇವಳ ಕಣ್ಣೀರು ನೆಲ ತಾಕುವ ಮೊದಲೇ ಅವನದನ್ನು ಒರೆಸಿ ನಗು ಅರಳಿಸಿರುತ್ತಾನೆ. ಇವಳು ಸು ಎನ್ನುವುದರೊಳಗೆ ಸುಖದ ಸುಪ್ಪತ್ತಿಗೆ ಎದುರು ಬಂದು ಬಿದ್ದಿರುತ್ತದೆ. ಕಣ್ಣಿನಲ್ಲಿ ಅಂದಿದ್ದನ್ನು ಓದಿ ಬಿಡುವ ಚತುರ, ಸದಾ ಇವಳ ಸಂಗ ಬಯಸುವ ಕೃಷ್ಣನಷ್ಟು ರಸಿಕನಾದ ರಾಮ, ಇವಳ ಮುಂದೆ ಪರ ಹುಡುಗಿಯರು ನೀರಸ ಎಂದು ಭರವಸೆಯ ಮಾತುಗಳನ್ನಾಡುವ ಹುಡುಗ...ಹೇಳಿಬಿಟ್ಟರೆ ತಾನು ಪ್ರೀತಿಸುವ ಜೊತೆಗೆ ಈ ಪ್ರೀತಿಸಲ್ಪಡುವ ಸುಖ ಇಷ್ಟು ಆಳವಾಗಿ, ತಾ ಬಯಸಿದಂತೆ ಸಿಗುವುದೇ? ಒಂದು ವೇಳೆ ತನ್ನ ಪ್ರೀತಿ ಏಕ ಮುಖ ಪ್ರವಾಹ ಎಂದಾದರೆ ತಾನದನ್ನು ಸಹಿಸಬಲ್ಲೆನೇ?
ಆತ ಮತ್ತೆ ಮತ್ತೆ ಸಿಗುತ್ತಾನೆ ... ಇವಳು ಹರಟುತ್ತಾಳೆ ...  ಅವನು ಕೇಳಿಸಿಕೊಳ್ಳುತ್ತಾನೆ.. ಅವಳು ಹೇಳದ್ದು?
- ರೇಶ್ಮಾ ರಾವ್ ಸೊನ್ಲೆ

5.2.14

ಶಾಲೆಗೆ ಹಾಜರ್ ರಿಸಲ್ಟ್ ಬಂಪರ್



ಲೆಕ್ಕದಿ ದಾಖಲೆ ಬರೆದ ಸೊನ್ಲೆ


'ನಿಮ್ಗೆ ಯಾವೂರಾಯ್ತು?'
'ಸೊನ್ಲೆ'
'ಸೊನ್ಲೆನಾ? ಏನ್ರೀ ನಿಮ್ಮೂರ್ ಹೈಸ್ಕೂಲು?! ಈ ವರ್ಷದ್ ಬ್ಯಾಚ್ ಹೆಂಗಿದೆಯಂತೆ?'
'ಬ್ಯಾಚ್ ಹೆಂಗಿದ್ರೂ ತಯಾರ್ ಮಾಡ್‌ಬಿಡ್ತಾರೆ ಸಾರ್ ನಮ್ ಮೇಷ್ಟ್ರುಗಳು. ಈ ವರ್ಷನೂ 100ರ್ ಗ್ಯಾರಂಟಿ.'
- ಹೌದು, ಹೀಗೆ ಸರ್ಕಾರಿ ಶಾಲೆಯೊಂದರಿಂದ ಊರೊಂದು ಗುರುತಿಸಿಕೊಂಡು ಊರಿನವರಿಗೆ ಹೆಮ್ಮೆ ತರುತ್ತಿರುವುದು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸೊನಲೆಯಲ್ಲಿ. ಈ ಭಾಗದಲ್ಲಿ ಯಾರ ಬಳಿಯೇ ಸೊನಲೆ ಹೆಸರೆತ್ತಿದರೂ ಶಾಲೆಯ ಪ್ರಸ್ತಾಪವಿಲ್ಲದೆ ಮಾತು ಮುಗಿಯುವುದೇ ಇಲ್ಲ. ಇಲ್ಲಿನ ಸರ್ಕಾರಿ ಪ್ರೌಢಶಾಲೆ 5 ಬಾರಿ ಸತತವಾಗಿ ಸೇರಿದಂತೆ ಕಳೆದ 9 ವರ್ಷಗಳಲ್ಲಿ 7 ಬಾರಿ 100 ಶೇ. ಫಲಿತಾಂಶ ಕೊಟ್ಟಿದ್ದು ರಾಜ್ಯದ ಮಟ್ಟಿಗೆ ಒಂದು ದಾಖಲೆಯೇ ಸರಿ. ಎರಡು ಬಾರಿ ತಪ್ಪಿದಾಗಲೂ 90ರಿಂದ ನೂರು ವಿದ್ಯಾರ್ಥಿಗಳಿರುವ ಎಸ್ಸೆಸ್ಸೆಲ್ಸಿ ತರಗತಿಯಲ್ಲಿ ಒಬ್ಬರೋ ಇಬ್ಬರೋ ಒಂದು ವಿಷಯದಲ್ಲಿ ನಪಾಸಾಗಿದ್ದು ಇಲ್ಲಿನ ಶಿಕ್ಷಕರ ಮನಸ್ಸಿನಲ್ಲಿ ಸದಾ ಕೊರೆವ ವಿಷಾದ.
ಸೊನಲೆ ಒಂದು ಪುಟ್ಟ ಗ್ರಾಮ. ಬಹುತೇಕ ರೈತರೇ ವಾಸವಾಗಿರುವ ಈ ಭಾಗದಲ್ಲಿ ಮಕ್ಕಳನ್ನು ಶಿಕ್ಷಣದತ್ತ ಪ್ರೇರೇಪಿಸುವ ಕೆಲಸ ಒಂದು ಸವಾಲೇ ಸರಿ. ಅಂಥ ಸವಾಲಿಗೆ ಎದೆಯೊಡ್ಡಿದವರು ಸೊನಲೆ ಪ್ರೌಢಶಾಲೆಯ ಶಿಕ್ಷಕರು. ಹೌದು, ಇವರೆಲ್ಲರಲ್ಲೂ ಕನಸಿದೆ. ಇವರ ಪ್ರತಿ ಮಾತಿನಲ್ಲೂ ಅದು ಇಣುಕುತ್ತದೆ. ಆ ಕನಸಿನಲ್ಲಿ ಮಕ್ಕಳ ಉನ್ನತ ಭವಿಷ್ಯವಿದೆ. ಇಂಥಹ ಉತ್ಸಾಹಿ ಸಮಾನ ಮನಸ್ಕ ಶಿಕ್ಷಕರು ಒಂದೆಡೆಯೇ ಒಟ್ಟಾದ ಮೇಲೆ ಅದರ ಫಲ ಮಕ್ಕಳು ಹಾಗೂ ಸಮುದಾಯಕ್ಕೆ ಸಿಕ್ಕೇಸಿಗುತ್ತದೆ.
ಸರ್ಕಾರಿ ಕೆಲಸ, ಏನೋ 10ರಿಂದ 5ರವರೆಗೆ ಪಾಠ ಮಾಡಿ ಮನೆಗೆ ಹೋದರಾಯಿತು ಎಂಬ ಉದಾಸೀನ ಧೋರಣೆ ಹುಡುಕಿದರೂ ಸಿಗುವುದಿಲ್ಲ. ಸುತ್ತಲ ಹತ್ತಾರು ಹಳ್ಳಿಗಳ ಮನೆಮನೆಗೆ ಹೋಗಿ ಮಕ್ಕಳನ್ನು ಶಾಲೆಗೆ ಸೇರಿಸುವಂತೆ ತಿಳಿವಳಿಕೆ ನೀಡುತ್ತಾರೆ. ಮನೆಯಲ್ಲಿ ಕರೆಂಟ್ ಇಲ್ಲ, ಅಪ್ಪ ಕೆಲಸ ಹೇಳಿದರು ಎಂಬ ನೆಪ ನಡೆಯುವುದಿಲ್ಲ. ಏಕೆಂದರೆ ಪಾಠ ಮುಗಿದ ಮೇಲೆ ಪ್ರತಿ ರಾತ್ರಿ ಊರಿನ ಹುಡುಗರು ಶಾಲೆಯಲ್ಲೇ ಇದ್ದು ಓದಬೇಕು. ಶಿಕ್ಷಕರು ಮೇಲ್ವಿಚಾರಣೆ ನಡೆಸುತ್ತಾರೆ. ಈ ನಿಯಮ ಹುಡುಗಿಯರಿಗಿಲ್ಲ. ಆದರೆ ಅವರು ಪ್ರತಿ ರಾತ್ರಿ ತಾವು ಮಲಗುವ ಮೊದಲು (ಕನಿಷ್ಠ ಪಕ್ಷ10.30ಕ್ಕೆ) ಶಿಕ್ಷಕರಿಗೆ ಮಿಸ್‌ಕಾಲ್ ಕೊಟ್ಟು ತಾವು ಇನ್ನೂ ಓದುತ್ತಿರುವುದನ್ನು ಸೂಚಿಸಬೇಕು. ಬೆಳಿಗ್ಗೆ 5 ಗಂಟೆಗೆ ಮತ್ತೊಮ್ಮೆ ಮಿಸ್‌ಕಾಲ್ ಕೊಡಬೇಕು. ಮಿಸ್‌ಕಾಲ್ ಕೊಟ್ಟು ಮತ್ತೆ ಮಲಗುವಂತಿಲ್ಲ. ಯಾವುದೇ ಸಮಯದಲ್ಲಿ ಬೇಕಾದರೂ ಶಿಕ್ಷಕರು ಕರೆ ಮಾಡಿ ಏನು ಓದಿದರೆಂದು ವಿಚಾರಿಸಬಹುದು. ರಜಾ ದಿನಗಳಲ್ಲಿ ಮಕ್ಕಳ ಮನೆಗಳಿಗೆ ಸರ್ಪ್ರೈಸ್ ಭೇಟಿ ನೀಡುತ್ತಾರೆ. ಶಾಲೆಯಲ್ಲಿ ಹಿಂದಿನ ದಿನ ಓದಿದ ಪಠ್ಯದ ಪ್ರಶ್ನೋತ್ತರ ಸಮಯವೂ ಇರುತ್ತದೆ.ಹಳೆಯ ವಿದ್ಯಾರ್ಥಿಯೊಬ್ಬ ತಾನು ಶಾಲೆಯಲ್ಲಿ ಪಡೆದ ಗಟ್ಟಿ ತಳಪಾಯದಿಂದ ವಾಲಿಬಾಲ್‌ನಲ್ಲಿ ರಾಷ್ಟ್ರೀಯ ಕ್ರೀಡಾ ಶಾಲೆಗೂ ಆಯ್ಕೆಯಾಗಿದ್ದಾನೆ. ಶಾಲೆಯ ಸುತ್ತಲೂ ಮಕ್ಕಳ ಶ್ರಮದಾನದ ಫಲವಾಗಿ ತರಕಾರಿ, ಹೂವಿನ ತೋಟ ಉದ್ಯಾನವನವಾಗಿ ಅರಳಿ ನಿಂತು ಪರಿಸರವನ್ನು ಹಸಿರಾಗಿಸಿದೆ.
 ಸಭಾಭವನ ಬೇಕಿದೆ...ಇದುವರೆಗೂ ಶಾಲೆಗೆ ಜಿಪಂ, ತಾಪಂ, ಗ್ರಾಪಂನಿಂದ ಬಂದ ಅನುದಾನ ಹಾಗೂ ದಾನಿಗಳ ನೆರವಿನಿಂದ ಬಂದ ಒಂದೊಂದು ಪೈಸೆಯೂ ಶಾಲೆಗೆ ಉತ್ತಮ ಕಟ್ಟಡ, ಕಾಂಪೌಂಡ್, ಆಟದ ಮೈದಾನ, ಕುಡಿವ ನೀರಿನ ಟ್ಯಾಂಕ್ ಹಾಗೂ ಶೌಚಾಲಯ ನಿರ್ಮಾಣಕ್ಕೆ ಸದ್ವಿನಿಯೋಗವಾಗಿದೆ. ಇಲ್ಲಿನ ಗ್ರಾಮ ಪಂಚಾಯ್ತಿಯಂತೂ ಶಾಲೆಯ ವಿಷಯದಲ್ಲಿ ನಿರ್ಲಕ್ಷ್ಯ ತೋರಿದ್ದಿಲ್ಲ. ಹಾಗಂತ ಅನವಶ್ಯಕ ಹಸ್ತಕ್ಷೇಪವೂ ಇಲ್ಲ. ಎಸ್‌ಡಿಎಂಸಿ ಸದಸ್ಯರು ಕೂಡಾ ವಿಶೇಷ ಆಸಕ್ತಿಯಿಂದ ಶಾಲೆಗೆ ವಿದ್ಯಾರ್ಥಿಗಳಷ್ಟೇ ಹಾಜರಿ ನೀಡುತ್ತಾರೆ. ಆದರೆ ಶಿಕ್ಷಕರ ಒಂದೇ ಕೊರಗೆಂದರೆ 280 ಮಕ್ಕಳಿರುವ ಶಾಲೆಯಲ್ಲಿ ಬಿಸಿಯೂಟ ಬಡಿಸಲು ಸರಿಯಾದ ಸ್ಥಳಾವಕಾಶವಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ರಂಗ ಮಂದಿರವಿಲ್ಲ. ಮಳೆಗಾಲದಲ್ಲಂತೂ ಮಕ್ಕಳು ಪ್ರಾರ್ಥನೆಗೆ ನಿಲ್ಲಲು, ಊಟ ಮಾಡಲು ಒಂದು ಸಭಾಭವನದ ಕೊರತೆ ಕಾಡುತ್ತಿದೆ. ಈಗಾಗಲೇ ಜಿಪಂನಿಂದ ಬಂದ ಅನುದಾನ ಹಾಗೂ ಉತ್ತಮ ಶಾಲೆ ಎಂದು ಗೋವಿಂದೇಗೌಡ ಪ್ರಶಸ್ತಿ ಲಭಿಸಿದ್ದಾಗಿ ಸಿಕ್ಕ ಹಣವನ್ನೂ ಸೇರಿಸಿ ಸಭಾಭವನಕ್ಕೆ ತಳಪಾಯ ಹಾಕಲಾಗಿದೆ. ಆದರೆ 500 ಮಂದಿ ಕೂರುವಂಥ ಸಭಾಭವನದ ಅಂದಾಜು ವೆಚ್ಚ ಸುಮಾರು 20 ಲಕ್ಷಗಳು. ಉನ್ನತ ಸ್ಥಾನ ತಲುಪಿರುವ ಶಾಲೆಯ ಹಳೆ ವಿದ್ಯಾರ್ಥಿಗಳು, ಶಿಕ್ಷಣ ಪ್ರೋತ್ಸಾಹಕರು, ದಾನಿಗಳು ಮನಸ್ಸು ಮಾಡಿದರೆ ಇದೇನು ದೊಡ್ಡ ಮೊತ್ತವಲ್ಲ. ಉತ್ಸಾಹಿ ಶಿಕ್ಷಕರ ನಿಸ್ವಾರ್ಥ ಕನಸು ಹಳ್ಳಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ, ಭವಿಷ್ಯಕ್ಕೆ ನಾಂದಿ ಹಾಡುವುದಾದರೆ ಅದಕ್ಕೆ ಕೈ ಜೋಡಿಸುವಷ್ಟು ಹೊಣೆ ನಮ್ಮದೂ ಆಗಲಿ ಅಲ್ಲವೇ?
 ದೇಣಿಗೆ ನೀಡುವವರು ನೇರವಾಗಿ ಶಾಲೆಯ ಖಾತೆ ಸಂಖ್ಯೆ 10826100003057(ಐಎಫ್‌ಎಸ್‌ಸಿ ಕೋಡ್- ಸಿಎನ್‌ಆರ್‌ಬಿ000ಪಿಜಿಬಿ1) ಪ್ರಗತಿ ಗ್ರಾಮೀಣ ಬ್ಯಾಂಕ್, ಸೊನಲೆ, ಹೊಸನಗರ ತಾಲೂಕು ಇಲ್ಲಿಗೆ ಜಮಾ ಮಾಡಬಹುದು. ರಶೀದಿಯನ್ನು ತಮ್ಮ ವಿಳಾಸಕ್ಕೆ ಕಳಿಸಕೊಡಲಾಗುವುದು. ಮಾಹಿತಿಗೆ ಸೋಮಶೇಖರ್ ಬಿ.ಪಿ. (9448885142) ಸಂಪರ್ಕಿಸಬಹುದು.
ನಮ್ಮದೊಂದು ಕನಸಿದೆ, ಶಾಲೆಯನ್ನು ನವೋದಯ ಮಾದರಿ ಮಾಡಬೇಕೆಂದು. ಸದ್ಯ ಸಭಾಭವನವೊಂದು ನಿರ್ಮಾಣವಾದರೆ ಮಕ್ಕಳಿಗೆ ಬಿಸಿಯೂಟ ಮಾಡಲು, ಮಳೆಗಾಲದಲ್ಲಿ ಪ್ರಾರ್ಥನೆಗೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲು, ಪರೀಕ್ಷೆ ಸಮಯದಲ್ಲಿ ರಾತ್ರಿವರೆಗೂ ಕುಳಿತು ಓದಲು ಅನುಕೂಲವಾಗುತ್ತದೆ. ಇದಕ್ಕಾಗಿ ದೇಣಿಗೆ ಎತ್ತುವ ಚಿಂತನೆ ನಡೆಸಿದ್ದೇವೆ.
- ಪ್ರವೀಣ್‌ಕುಮಾರ್, ಮುಖ್ಯಶಿಕ್ಷಕ.
-ರೇಶ್ಮಾ ರಾವ್ ಸೊನ್ಲೆ