ಪುಟಗಳು

12.5.13

ಮರಳಿ ಮರೆಯಾಗಿ..

ಅವನ ಪ್ರೀತಿನೇ ಹಾಗೆ.. ಬೆಂಗಳೂರಿನ ಮಳೆ ತರಾ. ಸುರಿದಿದ್ದು ಮಳೆನೋ, ಪ್ರೀತಿನೋ ಅಂತ ತಲೆಗೆ ಹೋಗೋದ್ರೊಳಗೆ ಗುರುತೇ ಸಿಗದಂತೆ ನೆಲದ ಪಸೆ ಆರಿರತ್ತೆ... ಆಗಸದ ಒಡಲು ತೀರಿರತ್ತೆ .
ಪ್ರೀತಿ! ಅದೇಕೆ ಅಷ್ಟು ಆಟವಾಡಿಸುತ್ತೆ ಅಂತಾನೆ ಗೊತ್ತಾಗಲ್ಲ.. ಬೇಡವೆಂದು  ದೂರವಿದ್ದಾಗ  ಭೋರ್ಗರೆದು ಸುರಿಯುತ್ತೆ... ಪ್ರವಾಹೋಪಾದಿಯಲ್ಲಿ ಹರಿಯುತ್ತೆ.. ಪ್ರವಾಹ ಪರಿಪರಿಯಾಗಿ ಕಾಡಿ, ಅದರೊಳಗೇ ಮುಳುಗುವ ಬಯಕೆಯಲ್ಲಿ ತೇಲುವಾಗಾಗಲೇ ಅದರ ಒಡಲು ಬತ್ತಿ ಬರಗಾಲದ ಬರಡು ಭೂಮಿ ಧುತ್ತೆಂದು ಎದುರಾಗುತ್ತೆ..
ಮತ್ತೆ ಹೇಳಿಕೊಳ್ಳಲಾಗದ ಅವ್ಯಕ್ತ ಭಯ, ಮಣ್ಣೊಳಗೆ ಮುದುಡಿ ಕೂರುವ ಅಗೋಚರ ಬಯಕೆಗಳು. ಬಲಹೀನ ಮನಸ್ಸಿಗೆ ಬೆಂಬಲವಾಗಿ ನಿಲ್ಲುವ ಪ್ರೀತಿಯೇ ಮತ್ತೊಮ್ಮೆ ದುರ್ಬಲಗೊಳಿಸಿ ದಿಗಿಲುಗೊಲಿಸುತ್ತೆ.
ಪ್ರೀತಿಸಲೇಬೇಕೆಂಬ ಹುಚ್ಚಿತ್ತು. ಹುಚ್ಚು ಹೆಚ್ಚಾಗಿ ಹುಚ್ಚುಚ್ಚಾಗಿ ಹಚ್ಚಿಕೊಂಡು ಹಚೀ ಎಂದರೂ ನಿಲ್ಲಲಾರದ ಒರತೆ. ಆ ಕಡೆ ಚಿಮ್ಮಲಾರದ ಚಿಲುಮೆ. ಬ್ರೇಕ್ ಫೇಲ್ ಆದಂತೆ ಓಡುತ್ತಿರುವ ಪ್ರೀತಿಯನ್ನು ನಿಲ್ಲಿಸದೆ ವಿಧಿಯಿಲ್ಲ. ನಿಲ್ಲಿಸಿದರೆ ಅಪಘಾತ ಗ್ಯಾರಂಟೀ!
ಬದುಕಿನಲಿ ಎಲ್ಲವೂ ಹೊಸತೆನಿಸುವ ಹೊತ್ತಿಗಾಗಲೇ ಹಲಸಿ ಹೋದ ಸಂಬಂಧಗಳು ..ತುಯ್ದಾಟ , ಮತ್ತೊಂದು ಘಳಿಗೆ ಹೊಯ್ದಾಟ, ಕಾದಾಟದ ಕಾಟವಂತೂ ತಪ್ಪಿದ್ದೇ ಇಲ್ಲ.
ಸಣ್ಣ ತೊರೆಯೊಂದ ನೋಡಿ ನದಿಯೆಂದು ಬಗೆದೆ. ಕಲ್ಪನೆಯ ಹುಚ್ಚು ಮೋಡ ಸುರಿದೇ ಸುರಿಯಿತು .. ನದಿ ಕಡಲಾಯಿತು. ಕಡಲ ಒಡಲಿನಲಿ ಈಜಾಡಿ ಹಲವು ದ್ವೀಪಗಳಲ್ಲಿ ಸುತ್ತಾಡಿ, ಮುತ್ತುರತ್ನಹವಳಗಳನ್ನು ಬಾಚಿಕೊಳ್ಳುತ್ತಿದ್ದ ಆ ಸಂಭ್ರಮದ ತುತ್ತತುದಿಯಲ್ಲಿದ್ದಾಗಲೇ ತಳ್ಳಿದಂತಾಯಿತು. ತೊರೆಯ ಬುಡದಲ್ಲಿ ನಿಂತಿದ್ದೆ .. ನನ್ನ ಕಲ್ಪನೆಯಿಂದ ತೊರೆ ಕದಲಾಯಿತೆ ಹೊರತು  ಆತ ಅಲುಗಿರಲಿಲ್ಲ.. ನೈಜತೆಯ ಅರಿವಾದರೂ ಛಿದ್ರ ಛಿದ್ರಗೊಂಡ ಕಲ್ಪನೆಯ ಲಹರಿ ಸುತ್ತಲೂ ಮುಳ್ಳಿನಂತೆ ಚುಚ್ಚತೊಡಗಿತು. ಮುಳ್ಳುಗಳನ್ನೇ ಬಿಟ್ಟೂಬಿಡದೆ ಸುರಿವ ಕಂಬನಿಗೆ ಬೇಲಿಯಾಗಿಸ ಹೊರಟೆ. ಯಾರಿಗೂ ಕಣ್ಣ ಪಸೆ ಕಾಣದಂತೆ ಮುಚ್ಚುವ ಹಂಬಲ. ಮುಳ್ಳಿನ ಬೇಲಿಗೆ ಕಣ್ ಕಡಲೇನು ಭೋರ್ಗರೆವುದ ಬಿಡಲಿಲ್ಲ .. ಕಣ್ಣ ಮಿಂಚು ಕೂಡಾ ಹರಿದು ಹೋದ ಅಶ್ರು ಧಾರೆಯಲ್ಲೆಲ್ಲೋ ಅದೃಶ್ಯವಾಗಿತ್ತು.
ಆಗಮನದ ಬೆನ್ನಲ್ಲೇ ನಿರ್ಗಮಿಸಿದ ಸೂರ್ಯನ ಆಟ ಗ್ರಹಣದಂತೆ ತೋರಿತ್ತು..ಕಿರಣವಿಲ್ಲದ ಅರುಣ ಕತ್ತಲ ಕೂಪಕ್ಕೆ ನೂಕಿಯಾಗಿತ್ತು.. ಬಯಕೆಗಳ ಬಣವೆಗೆ ಬೆಂಕಿ ತಗುಲಿ ಹೊತ್ತಿ ಉರಿಯತೊಡಗಿತು.
ಆದರೆ ಪ್ರೀತಿಯ ಪರಿಯೇ ಹಾಗೆ. ಪರಿಪರಿಯಾಗಿ ಬಂದು ಅಚ್ಚರಿ ಹುಟ್ಟಿಸುತ್ತೆ. ಅದೆಲ್ಲಿತ್ತೋ ಮುಳುಗುವ ಮನದಲ್ಲಿ ಚೈತನ್ಯ! ಅದು ಸ್ವ ಪ್ರೀತಿ. ಫೀನಿಕ್ಸ್ನಂತೆ ಎದ್ದು ನಿಲ್ಲುವ ಅದಮ್ಯ ಆಸೆಯೊಂದನ್ನು ಹುಟ್ಟು ಹಾಕಿತ್ತು. ಅಷ್ಟೇ ಸಾಕಿತ್ತು. ಕಳೆದುಕೊಂಡ ಆತ್ಮಗೌರವವನ್ನು ಮರಳಿ ಪಡೆಯಲು.. ಎದೆಯೋಳಗೊಂದು ದೀಪ ಹೊತ್ತಿತು. ಆತನಿಗಾಗಿ  ಆತ್ಮಗೌರವವನ್ನು ಮಾತ್ರವಲ್ಲ, ಎಲ್ಲವನ್ನೂ ಪ್ರೀತಿಗಾಗಿ ಕಳೆದುಕೊಳ್ಳಬಲ್ಲ ನನ್ನ ಮನಸ್ಸಿನ ತಾಕತ್ತೇ ಆತ್ಮಾಭಿಮಾನವನ್ನು ಮೂಡಿಸಿತು. ಮತ್ತೆ ಕವಿತೆಗಳು ಹುಟ್ಟತೊಡಗಿದವು, ಭಾವಗೀತೆಗಳು ಹತ್ತಿರಾದವು, ಕತೆ ಕನಸನ್ನು ಹುಟ್ಟಿಸತೊಡಗಿತು, ಅವನ ಹೊರತಾಗಿಯೂ....
ಅವನೊಬ್ಬ ಪಾತ್ರಧಾರಿ 
ಬಂದು ಹೋದ ಲಹರಿ 
ಕನಸಿನೋಟಕ್ಕೊಂದು ಗುರಿ 
ನಿಲುವುಗನ್ನಡಿಯಲ್ಲಿ ಕಂಡ ಮುಖ 
ಛಾಯಾಚಿತ್ರವೆಂಬ ಭ್ರಮೆ  ಹುಟ್ಟಿಸಿದ್ಯಾಕೆ?


ಚಿತ್ರವೇ  ಆದರೂ ಇನ್ನೇನ ಉಳಿಸೀತು 
ಸಿಹಿಯೋ, ಕಹಿಯೋ, ನೆನಪುಗಳ ಹೊರತು?

-ರೇಶ್ಮಾ  ರಾವ್ (ಕನ್ನಡಪ್ರಭದಲ್ಲಿ ಪ್ರಕಟ)

11.5.13

ಬಾಟಲ್ ಮನೆ ಕಟ್ಟಲ್!

ಸ್ವಂತದ್ದೊಂದು ಸೂರು ಬೇಕೆಂಬ ಕನಸು ಯಾರಿಗಿರುವುದಿಲ್ಲ ಹೇಳಿ? ಹಾಗೆಯೇ ಆಕೆಗೂ ಇತ್ತು. ವಯಸ್ಸು 73 ಆಗಿತ್ತು. ಪತಿಗೆ ಆಗಲೇ 95. ಕೇವಲ ಹತ್ತು ಡಾಲರಿನಲ್ಲಿ ವಾರ ಕಳೆಯುತ್ತಿದ್ದವರು ಬ್ರೆಜಿಲ್‌ನ ಈ ಜೋಡಿ. ಅದೂ ಇರುವ ಅಲ್ಪ ಜಮೀನಿನಲ್ಲಿ ಜೋಳ ಬೆಳೆದು.    
ಇಂಥ ಸಮಯದಲ್ಲಿ ಇನ್ನ್ಯಾರೇ ಆಗಿದ್ದರೂ ದುಬಾರಿ ಕನಸು ಈ ವಯಸ್ಸಿಗಲ್ಲ ಎಂದು ಸುಮ್ಮನೆ ಕುಳಿತುಬಿಡುತ್ತಿದ್ದರೇನೋ..? ಆದರೆ ಆಕೆ ಕುಳಿತುಕೊಳ್ಳಲಿಲ್ಲ. ಅದು 2005ನೇ ಇಸವಿ. ಬೀದಿಗಿಳಿದ ಅಜ್ಜಿ ಅಲ್ಲಿ ಇಲ್ಲಿ ಬಿದ್ದಿದ್ದ ಪ್ಲಾಸ್ಟಿಕ್ ಬಾಟಲ್‌ಗಳನ್ನು ಸಂಗ್ರಹಿಸತೊಡಗಿದಳು. ಮೂರೇ ತಿಂಗಳಲ್ಲಿ ಪ್ಲಾಸ್ಟಿಕ್ ಬಾಟಲ್‌ಗಳನ್ನೇ ಗೋಡೆ, ಬಾಗಿಲು, ಕಿಟಕಿಯಾಗಿಸಿಕೊಂಡ ಆಕೆಯ ಕನಸಿನ ಅತಿ ಕಡಿಮೆ ವೆಚ್ಚದ ಮನೆ ನೋಡುಗರ ಕಣ್ ಕುಕ್ಕುವಂತೆ ಎದ್ದು ನಿಂತಿತು. ಈಗ ಆಕೆ
ಗೆ 80 ವಯಸ್ಸು, ಗಂಡನಿಗೆ 104. ತಮ್ಮದೇ ಮನೆಯ ಎದುರು ನಿಂತು ಪ್ರವಾಸಿಗರಿಗೆ ಕೈ ಬೀಸುತ್ತಾರೆ. ಅವರು ಕೊಡುವ ಪುಡಿಗಾಸಿನಲ್ಲಿ ಜೀವನ ನಿರ್ವಹಣೆ ಮಾಡುತ್ತಾರೆ. ಸ್ವಂತ ಸೂರನ್ನು ದಿಟ್ಟಿಸುತ್ತಾ ಜೀವನದ ಕಡೆಕ್ಷಣಗಳನ್ನು ಎಣಿಸುವುದು ಅದೆಷ್ಟು ನೆಮ್ಮದಿ ಎನಿಸುತ್ತದೆ! ಕನಸಿಗೆ ವಯಸ್ಸು, ಬಡತನ ಯಾವುದೂ ಮಿತಿ ಅಲ್ಲ ಅಲ್ಲವೇ? - (ಕೃಪೆ - ಅಂತರ್ಜಾಲ)
 
ರೇಶ್ಮಾ ರಾವ್ ಸೊನ್ಲೆ

28.4.13

ಅವನಿದ್ದಾನೆ!

 

ಅವನಿದ್ದಾನೆ!

 

ಅಲ್ಲೊಂದು ಕಣಿವೆಯಿದೆ. ಅದೇ ಆ ಕಪ್ಪುಗಡಲಿನ ಮಧ್ಯೆ ಇರುವ ದ್ವೀಪದಲ್ಲಿ. ಕಡಲಿಗಿಂತ ಆಳ, ಆಗಸಕ್ಕಿಂತ ಅಗಾಧ. ಅಲ್ಲಿ ಪ್ರತಿದಿನ ಕನಸು ಮಾರುವವರು ಸಾವಿರಗಟ್ಟಲೆ ಜನ. ಸಂತೆ ನಡೆಸಲು ಹಾಸಿ ಕೂರುತ್ತಾರೆ ಬೃಹತ್ ಬಿಳಿ ಬಟ್ಟೆ. ಅದರ ಮೇಲೆ ಹರಡುತ್ತಾರೆ ವಿವಿಧ ಕನಸು. ಕಂತೆಗಟ್ಟಲೆ ಕನಸು, ಬಣ್ಣಬಣ್ಣದ ಕನಸು. ಅಲ್ಲೊಬ್ಬ ಇದ್ದಾನೆ ನೀಲಿಕಂಗಳ ಹುಡುಗ. ಅವನು ಮಾರುವ ಕನಸು ಥೇಟ್ ನಕ್ಷತ್ರಗಳನ್ನೇ ಕಿತ್ತು ತಂದಂತೆ. ಅವನ ಕಣ್ಣುಗಳು ಪ್ರತಿಫಲಿಸಿದಂತೆ ಫಳಫಳನೆ ಹೊಳೆಯುತ್ತವೆ... ಅವಳು ಹೇಳುತ್ತಲೇ ಹೋದಳು... ಕಣಿವೆ ಇರುವ ದ್ವೀಪದ ಸುತ್ತಲೂ ಹೂವಿನ ಗಿಡಗಳದ್ದೇ ಬೇಲಿ. ದ್ವೀಪದ ಮಧ್ಯದ ದೊಡ್ಡ ಆಲದ ಮರದ ರೆಂಬೆಗಳ ಮೇಲೆ ಕಾಮನಬಿಲ್ಲು ಕಾಲು ಚಾಚಿ ಮಲಗಿದೆ. ಎಷ್ಟು ಚೆನ್ನಾಗಿದೆ ಎಂದರೆ.. ಮರದ ಬುಡದಲ್ಲೊಂದು ನದಿ. ಕಾಮನಬಿಲ್ಲಿನ ಪ್ರತಿಬಿಂಬವನ್ನು ಅರೆದು ಕುಡಿದು ತರಹೇವಾರಿ ಬಣ್ಣಗಳಲ್ಲಿ ತರಂಗತರಂಗವಾಗಿ ಮೆಲ್ಲನೆ ಸರಿದಾಡುವ ನೀರು. ಹಕ್ಕಿಗಳ ಚಿಲಿಪಿಲಿಯಂತೂ ಕಿವಿ ತುಂಬುತ್ತದೆ. ದೇವಲೋಕವೇ ತುಂಡಾಗಿ ಭೂಮಿಗೆ ಬಿದ್ದಂತಿದೆ...ಅವಳು ಹೇಳುತ್ತಲೇ ಇದ್ದಳು. ನಾ ಮಾತ್ರ ನೀಲಿ ಕಣ್ಣಿನ ಹುಡುಗ, ನಕ್ಷತ್ರಗಳಂಥ ಕನಸು ಮಾರುವ ಹುಡುಗನ ಗುಂಗಿಗೆ ವಶಳಾಗಿದ್ದೆ. ಮುಂದಿನದೇನೂ ಕೇಳಲೇ ಇಲ್ಲ. ಗೆಳತಿ ಹೋದದ್ದೂ ತಿಳಿಯಲಿಲ್ಲ.ಈ ಹುಡುಗನಿಗೊಂದು ರೂಪ ಒಡಮೂಡತೊಡಗಿತು. 

ಗುಂಗುರು ಕೂದಲು, ಕಪ್ಪು ಎನ್ನಬಹುದಾದ ಕಪ್ಪಲ್ಲದ ಬಣ್ಣ, ಕೋಲು ಮುಖ, ಎಲ್ಲಕ್ಕಿಂತಾ ಹೆಚ್ಚಾಗಿ ಮಿನುಗುವ ಕಣ್ಗಳು! ಅವನು ಅತ್ಯಂತ ಸುಂದರನಾಗಿದ್ದ. ಅವ ಆಕಾಶದಿಂದಲೇ ಹೆಕ್ಕಿ ತರುತ್ತಾನೆಯೇ ನೀಲಿ ನಕ್ಷತ್ರಗಳಂಥ ಕನಸುಗಳನ್ನು? ಅವನೊಬ್ಬ ಮಾರು ವೇಶದಲ್ಲಿರುವ ಕಿನ್ನರಿಯೇ? ಅಲ್ಲದಿದ್ದರೆ ಅವನ ಕಣ್ಗಳೇಕೆ ಹಾಗೆ ಮಿನುಗುತ್ತಿದ್ದವು? ಅಯ್ಯೋ ನನಗೇನಾಗಿದೆ? ಗೆಳತಿ ಹೇಳಿದ ಕಟ್ಟುಕತೆಯ ಪಾತ್ರವೊಂದು ನನ್ನನ್ನು ಹೀಗೆ ಆವರಿಸುತ್ತಿರುವುದೇಕೆ? ಗೆಳೆಯ ಇಂದ್ರ ಕಾರಣ ಹೇಳದೇ ದೂರಾದಾಗಿನಿಂದ ಕನಸುಗಳೇ ಹುಟ್ಟಿಲ್ಲ. ಶೂನ್ಯಳಾಗಿ ವರ್ಷದ ಮೇಲೆ ಆರು ತಿಂಗಳಾಗುತ್ತಾ ಬಂತು. ಈಗ, ಈ ಕ್ಷಣದಲ್ಲಿ ಮನಸ್ಸಿನೊಳಗೇನೋ ಬದಲಾವಣೆ. ಸದ್ದಿಲ್ಲದೆ ಯಾರೋ ಬಂದು ಕುಳಿತಂತೆ. ಹೌದು, ಇಂದ್ರನೇಕೆ ನನ್ನ ಬಿಟ್ಟು ಹೋದ??ಮಾತ್ರೆಗಳ ಹೊರತು ನಿದ್ದೆ ಸುಳಿಯದೇ ಯಾವುದೋ ಕಾಲವಾಗಿದ್ದ ನನಗೆ ಇಂದೇಕೋ ನಿದ್ದೆ ಒತ್ತರಿಸಿಕೊಂಡು ಬರುತ್ತಿದೆ. 
ಮಲಗುತ್ತೇನೆ.ಯಾರೋ ಕರೆದಂತಾಗಿ ಎಚ್ಚರವಾಯಿತು. ಅರೆ! ಇದು..ಇದು.. ಅವನೇ!! ಆ ನೀಲಿ.. ಈತ ನಿಜವಾಗಿಯೂ ಇರುವನೇ? ನಾನಂದುಕೊಂಡಂತೇ ಇರುವನಲ್ಲಾ...ಗಲ್ಲದಲ್ಲೊಂದು ಮಚ್ಚೆ ಬೇರೆ. ಇದೇನು ಪೂರ್ವಜನ್ಮದ ಸ್ಮರಣೆಯಲ್ಲವಷ್ಟೇ. ಎಂಥಾ ನಗು ಮುಖ.'ನೀನು.. ಇಲ್ಲಿ?' ಪ್ರಶ್ನಿಸಿದೆ. ಮುಖದಲ್ಲಿ ನಗು ಮಾಸದೇ ಉತ್ತರಿಸಿದ, 'ನೀ ಕರೆದೆ, ನಾ ಬಂದೆ'. ಅವನ ಕಣ್ಣಿಗೆ ದೃಷ್ಟಿ ತಾಕಿಸಿದೆ. ನನ್ನ ಕಣ್ಣಿನಲ್ಲೂ ನೀಲಿ ಕಿರಣಗಳು ಮಿಂಚಿ ರೋಮಾಂಚನವಾಯಿತು. 'ಹೇಳು ಏಕೆ ಕರೆದೆ? ಏನು ಬೇಕು?' ಗೊತ್ತಿದ್ದೂ ಕೇಳುತ್ತಿರುವವನೇನೋ..'ಕನಸು ಮಾರುತ್ತೀಯಂತೆ. ನಾನು ಬರಿದಾಗಿರುವೆ. ನನಗೆ ಕನಸುಗಳು ಬೇಕು' 'ಎಂಥ ಕನಸುಗಳು ಬೇಕು ನಿನಗೆ? ನೀನು ರಾಣಿಯಾಗುವ ಕನಸು, ಇಡಿ ಪ್ರಪಂಚ ಸುತ್ತುವ ಕನಸು, ಶತ್ರುಗಳಿಗೆ ಶಾಸ್ತಿ ಮಾಡಿಸುವ ಕನಸು, ಸಮಾರಂಭವೊಂದರ ಕೇಂದ್ರಬಿಂದುವಾಗುವ ಕನಸು... ನನ್ನ ಬತ್ತಳಿಕೆಯಲ್ಲಿ ಕೋಟಿಗಟ್ಟಲೆ ಕನಸಿದೆ. ನಿನ್ನ ಬರಿದಾದ ಮನಸ್ಸನ್ನು ನಾ ತುಂಬುತ್ತೇನೆ. ಕೇಳು ಯಾವ ಕನಸು ಬೇಕು ನಿನಗೆ?'ಚೂರೂ ತಡವರಿಸದೆ ಹೇಳಿದೆ, 'ಅದೇ.. ನನ್ನ ಬರಿದಾದ ಮನಸ್ಸನ್ನು ನೀ ತುಂಬುವ ಕನಸು'. ಅವನ ಹುಬ್ಬು ಕಿರಿದಾಯಿತು. ಸ್ಪಷ್ಟವಾಗಲಿಲ್ಲವೆಂಬಂತೆ. ಅದೇ ದೃಢದನಿಯಲ್ಲೆಂದೆ, 'ಕನಸು ಮಾರುವ ಹುಡುಗ ನನ್ನವನಾಗಬೇಕು'. ನಸುನಕ್ಕು ತಿದ್ದಿದ, 'ನಿನ್ನವನಾಗುವ ಕನಸು'.ಹೌದಲ್ಲಾ... ಕನಸು ಮಾತ್ರ! ನಿಟ್ಟುಸಿರಿಟ್ಟು ತಲೆಯಾಡಿಸಿದೆ. 'ಇದರ ಬದಲಿಗೆ ಪ್ರಪಂಚದ ಸುಂದರ, ಶಕ್ತ, ಶ್ರೀಮಂತ, ಸರ್ವವಿದ್ಯಾಪಾರಂಗತ ನಿನ್ನವನಾಗಿ ನಿನ್ನನ್ನು ಜೀವನ ಪೂರ್ತಿ ಪ್ರೀತಿಯಲ್ಲಿ ಮುಳುಗಿಸುವ ಕನಸು ಕೊಡಲೇ?' ವ್ಯಾಪಾರಿಯಂತೆ ಕೇಳಿದ. ಅರೆ, ಇವ ವ್ಯಾಪಾರಿಯೇ ತಾನೇ... 'ನನ್ನ ಬಳಿ ಬಂದವರಾರೂ ನಿರಾಶೆಯಿಂದ ಹಿಂದಿರುಗಿಲ್ಲ. ಆದರೆ ಏಕೆ ನಿನಗೆ ಇದೇ ಕನಸು ಬೇಕೆಂದು ಕೇಳಬಹುದೇ?, ಕುತೂಹಲಕ್ಕಷ್ಟೇ'.'ವರ್ಷಗಳುರುಳಿವೆ ಕನಸುಗಳಿಲ್ಲದೆ. ಅವ, ಇಂದ್ರ, ನನ್ನ ಹೇಳದೇ ಕೇಳದೇ ಬಿಟ್ಟು ಹೋದ. ಕನಸುಗಳಿಲ್ಲದ ಬದುಕು ಬದುಕೇ ಅಲ್ಲ. ಜೀವತ್‌ಶವವಾಗಿದ್ದೇನೆ. ಆದರೆ ಇದೀಗ ನೀ ಸಿಕ್ಕಿದ್ದಿ. ಕನಸು ಮಾರುವ ಹುಡುಗ. ನೀ ನನ್ನವನಾದರೆ ನಿನ್ನೆಲ್ಲ ಕನಸುಗಳೂ ನನ್ನವೇ ತಾನೇ?''ಹಮ್...ಜಾಣೆ. ಆದರೆ ಇದೂ ಕನಸೆಂಬುದನ್ನು ಮರೆಯದಿರು. ಕನಸಿಗೂ ಭ್ರಮೆಗೂ ಅಂತರ ಬಹಳ ಕಡಿಮೆ.' ಎಚ್ಚರಿಸಿಯೇ ಕೊಟ್ಟ.ಅಂದಿನಿಂದ ನನ್ನ ಬದುಕೇ ಬದಲಾಯಿತು. ಒಂದೇ ಕಡೆ ಜಡ್ಡುಗಟ್ಟಿದಂತೆ ಕುಳಿತಿರುತ್ತಿದ್ದ ನಾನು ಚಿಗರೆಯಂತೆ ಓಡಾಡತೊಡಗಿದೆ. ಅವ ಪ್ರತಿದಿನ ಬರುತ್ತಿದ್ದ ನನ್ನೊಡನೆ ಮಾತಾಡಲು. ಅವನ ನೀಲಿ ಕಂಗಳಲ್ಲಿ ಕಳೆದು ಹೋಗುತ್ತಿದ್ದೆ. ಕಣ್ಣಲ್ಲಿ ನೀರು ಜಿನುಗುವಷ್ಟು ನಗಿಸುತ್ತಿದ್ದ. ಅವನ ಪ್ರೀತಿಯಂತೂ ಹುಚ್ಚುಕೋಡಿಯಾಗಿ ಹರಿಯುತ್ತಿತ್ತು. ಹಳೆಯದೆಲ್ಲವನ್ನೂ ಮರೆತೆ. ನನ್ನೇ ನಾನು ಮರೆತೆ. ತಿಂಗಳಾಗಿರಬಹುದು. 
ಒಂದು ದಿನ ಆತ ನನ್ನನ್ನು ಅವನ ಕಣಿವೆಯಿರುವ ದ್ವೀಪಕ್ಕೆ ಕರೆದೊಯ್ಯುವುದಾಗಿ ಹೇಳಿದ. ನನ್ನ ಖುಷಿಗೆ ಪಾರವೇ ಇರಲಿಲ್ಲ. 'ನಿಮ್ಮೂರಲ್ಲಿ ಕಾಮನಬಿಲ್ಲು ಮರದ ಮೇಲೆ ಕಾಲು ಚಾಚಿ ಮಲಗಿರುವುದಂತೆ. ಎಲ್ಲೆಲ್ಲೂ ಹೂವಿನ ಬೇಲಿಯಂತೆ.. ಹೌದೇ? ಮತ್ತೆ... ಕನಸು ಮಾರುವವರ ಸಂತೆಗೆ ಕರೆದೊಯ್ಯುತ್ತೀಯಲ್ಲಾ? ಹ್ಞಾಂ, ಹಾಗೇ ನೀನು ಮಾರುವ ನಕ್ಷತ್ರಗಳಂತಾ ಕನಸುಗಳನ್ನೆಲ್ಲಾ ತೋರಿಸಬೇಕು.'ನನ್ನ ಕಾತರತೆ ನೋಡಿ ಪ್ರೀತಿಯಿಂದ ಮೈ ಸವರಿದ. ಅದಾವ ಮಾಯದಲ್ಲಿ ಕರೆದೊಯ್ದನೋ ಗೊತ್ತಿಲ್ಲ. ನಾನಲ್ಲಿ, ನನ್ನ ಹುಡುಗನ ಊರಲ್ಲಿ ನಿಂತಿದ್ದೆ. ಅಬ್ಬಾ! ಅದೊಂತೂ ದೇವನಗರಿಯೇ ಸೈ. ಗೆಳತಿಯ ಮಾತುಗಳಿಗೆ ಸಂಪೂರ್ಣ ನಿಲುಕಿರದ ಸೌಂದರ್ಯ. ಅದಾವುದೋ ಪರಿಮಳ, ಸಣ್ಣದಾಗಿ ಹರಿದು ಬರುವ ಸಂಗೀತ, ಅಸಾಧಾರಣ ಪ್ರಾಕೃತಿಕ ಚೆಲುವು, ಎಲ್ಲೆಲ್ಲೂ ಹೂಹಣ್ಣುಗಳನ್ನು ಹೊತ್ತ ಗಿಡಮರಬಳ್ಳಿ, ಜೊತೆಗೆ ನನ್ನಿನಿಯನ ಸಾಂಗತ್ಯ. ಇನ್ನೇನು ಬೇಕು ನನಗೆ?ಆ ದಿನವಿಡೀ ಅವನೂರಿನಲ್ಲಿ ಅಲೆದೆ. ಕನಸಿನ ಸಂತೆಗೆ ಹೋದೆ. ಪುಟ್ಟ ಮಗುವೊಂದು ಅಪ್ಪ- ಅಮ್ಮ ಕೆಲಸ ಕಳೆದುಕೊಳ್ಳುವ ಕನಸು ಖರೀದಿಸುತ್ತಿತ್ತು. ತಾತ ಒಬ್ಬರು ಮೊಮ್ಮಕ್ಕಳೊಂದಿಗೆ ಸಮಯ ಕಳೆವ ಕನಸಿಗಾಗಿ ಬಾರ್ಗೇನ್ ಮಾಡುತ್ತಿದ್ದರು. 30ರ ಹರೆಯದವನೊಬ್ಬ ತನ್ನ ಹೆಂಡತಿಗೆ ಡೈವೋರ್ಸ್ ಕೊಟ್ಟು ತನ್ನ ಆಫೀಸಿನ 18ರ ಚೆಲುವೆಯೊಂದಿಗೆ ಬದುಕುವ ಕನಸಿಗಾಗಿ ಅಂಗಡಿ ಅಂಗಡಿ ಅಲೆಯುತ್ತಿದ್ದ, ಹುಡುಗಿಯೊಬ್ಬಳು ತನ್ನ ಗಂಡನೊಡನೆ ವಿದೇಶಕ್ಕೆ ಹಾರುವ ಕನಸನ್ನು ಕೊಂಡು ತೇಲಾಡುತ್ತಿದ್ದಳು. ಜನವೋ ಜನ. ಯುವಕ ಯುವತಿಯರಂತೂ ನಶೆಯಲ್ಲಿದ್ದಂತೆ ಸಂತೆಬೀದಿಯಲ್ಲಿ ಅಲೆದಾಡುತ್ತಿದ್ದರು.'ನೀನು ಈ ದಿನ ಅಂಗಡಿ ತೆರೆಯುವುದಿಲ್ಲವೇ?' ಕೇಳಿದೆ. 'ಹೇಗೆ ತೆರೆಯಲಿ? ನನ್ನ ಕನಸುಗಳನ್ನೆಲ್ಲ ನಿನಗೇ ಕಾದಿರಿಸಿದ್ದೇನಲ್ಲಾ...'ಮೋಡಿ ಮಾತಿನಲ್ಲಿ ಚತುರ. ಆ ರಾತ್ರಿ ಅವನ ಸ್ವಚ್ಛ ಬಿಳಿ ಬಣ್ಣದ ಹತ್ತಿಯಿಂದ ಮಾಡಿದಂತಾ ಮನೆಯೊಳಗೆ ಮಲಗಿದೆ. ಬೆಳಗ್ಗೆ ನನ್ನ ಮನೆಯಲ್ಲಿದ್ದೆ. ಇತ್ತೀಚೆಗಂತೂ ನನ್ನನ್ನು ಒಂದು ಕ್ಷಣವೂ ಬಿಟ್ಟಿರಲಾರ. ನಾ ಯಾವಾಗ ಅವನೂರಿನಲ್ಲಿರುತ್ತೇನೋ, ನನ್ನ ಮನೆಯಲ್ಲಿರುತ್ತೇನೋ ನನಗಂತೂ ತಿಳಿಯುವುದೇ ಇಲ್ಲ. ಆ ದಿನ ಹಾಗೇ ಮಾತನಾಡುತ್ತಾ ಕುಳಿತಿದ್ದೆವು. ಮನೆಯ ಕರೆಗಂಟೆ ಬಾರಿಸಿತು. ನೋಡುವಾಗ ಗೆಳತಿ. ಖುಷಿಯಾಯಿತು. ಎಷ್ಟೇ ಆದರೂ ನೀಲಿ ಕಂಗಳ ಹುಡುಗನ ಬಗ್ಗೆ ನನಗೆ ಮೊದಲು ಹೇಳಿದವಳಲ್ಲವೇ?!'ಯಾರೊಂದಿಗೋ ಮಾತಾಡುತ್ತಿದ್ದೆಯಲ್ಲಾ? ಯಾರಿದ್ದಾರೆ ಮನೆಯಲ್ಲಿ?' ಕೇಳಿದಳು. ಆ ಪ್ರಶ್ನೆಗೇ ಉತ್ತರಿಸಲು ಕಾತರಿಸುತ್ತಿದ್ದೆ.'ನಿನಗೊಂದು ಆಶ್ಚರ್ಯ ಕಾದಿದೆ. ನೀ ಆ ದಿನ ಕನಸು ಮಾರುವ ಹುಡುಗನ ಬಗ್ಗೆ ಹೇಳಿದೆಯಲ್ಲ, ಅವನಿದ್ದಾನೆ.ಅವನೀಗ ನನ್ನ ಪ್ರೇಮಿ' ನಾಚಿದೆ.'ತಲೆ ಕೆಟ್ಟಿದೆಯೆನೇ? ನಾನೇನೋ ಕಟ್ಟುಕತೆಯೊಂದನ್ನು ನಿನಗೆ ಹೇಳಿದರೆ ಆ ಪಾತ್ರದೊಂದಿಗಿದ್ದೀನಿ ಎನ್ನುವೆಯಲ್ಲಾ'.'ಇಲ್ಲವೇ ಅವನಿದ್ದಾನೆ. ಬಾ ಪರಿಚಯ ಮಾಡಿಸುತ್ತೇನೆ. ಆಮೇಲೆ ನಂಬುತ್ತಿ' ಎಂದು ಎಳೆದೊಯ್ದೆ. ಸೋಫಾ ಮೇಲೆ ಸುಮ್ಮನೆ ಕುಳಿತಿದ್ದ ಹುಡುಗ ನಕ್ಕ. 'ನೋಡು ಇಲ್ಲಿದ್ದಾನೆ. ಇವನೇ ಅವನು. ಗುರುತು ಸಿಗುತ್ತಿಲ್ಲವೇ?' ಎಂದೆ.'ಇಲ್ಲಾರೂ ಇಲ್ಲವಲ್ಲೇ...ಏನಾಗಿದೆ ನಿನಗೆ? ಮನಸ್ಸಿಗೇನೋ ಹಚ್ಚಿಕೊಂಡು ಮನೆಯಲ್ಲಿ ಒಬ್ಬಳೇ ಇರುತ್ತಿ. ಎಂಥ ಕೇಳಿದರೂ ಹೇಳಿಕೊಳ್ಳುವುದಿಲ್ಲ... ನಿನ್ನ ಸಂತೋಷವಾಗಿಡಬೇಕೆಂದೇ ಅಲ್ಲವೇನೇ ನಾ ಕತೆ ಹೇಳುತ್ತಿದ್ದುದು?..'ಬೆದರುಗಣ್ಣುಗಳಲ್ಲಿ ಬಯ್ಯತೊಡಗಿದಳು.'ನಿನ್ನ ಕಣ್ಣುಗಳಿಗೇನಾಗಿದೆ? ನೋಡು ನಿನಗೆ ಹಾಯ್ ಎನ್ನುತ್ತಿದ್ದಾನೆ'. ಒಂದೆರಡು ನಿಮಿಷ ಸುಮ್ಮನಿದ್ದ ಗೆಳತಿ 'ಹೇಗೆ ಸಿಕ್ಕ' ಎಂದಳು. ನಡೆದ ಕತೆಯೆಲ್ಲ ಹೇಳಿದೆ. ಆ ದ್ವೀಪ ನೀನು ಹೇಳಿದುದಕ್ಕಿಂತ ಸುಂದರವಾಗಿದೆ ಎಂದು ವರ್ಣಿಸಿದೆ. ಅವಳೇಕೋ ಭಯಗೊಂಡಂತೆ ಕಂಡಳು. ಅಥವಾ ಹೊಟ್ಟೆಕಿಚ್ಚಿರಬಹುದೇ ನನ್ನ ಸಂತೋಷ ನೋಡಿ. 'ಬಾ ಹೊರ ಹೋಗಿ ಬರೋಣ' ಎಂದಳು. 'ಇವನನ್ನು ಬಿಟ್ಟು ಎಲ್ಲಿಗೂ ಬರಲ್ಲ' ಎಂದೆ. 'ಅವನೂ ಬರಲಿ' ಎಂದಳು. ಸೀದಾ ಹೋಗಿದ್ದು ಆಸ್ಪತ್ರೆಗೆ. ಎಲ್ಲಿಲ್ಲದ ಕೋಪ ಬಂತು. ಚೀರಿದೆ, 'ನಾನು ಸರಿಯಾಗಿಯೇ ಇದ್ದೇನೆ'ಡಾಕ್ಟರ್ ಮಾತನಾಡಿದರು, 'ಅದು ನಮಗೆ ಗೊತ್ತಮ್ಮ, ಇವಳು ನನ್ನ ಗೆಳತಿ. ಆಗಾಗ ಮಾತಾಡಿಸಲು ಬರುತ್ತಿರುತ್ತಾಳೆ. ಹಾಗೆ ಇವತ್ತು ನಿನ್ನೊಂದಿಗೆ ಬಂದಿದ್ದಾಳೆ ಅಷ್ಟೇ.' ಸಮಾಧಾನವಾಯಿತು. ನನ್ನ ಹುಡುಗನನ್ನು ಪರಿಚಯಿಸಿದೆ. ಹಾಯ್ ಎಂದರು. ನಾ ಇಲ್ಲೇ 4 ದಿನ ಇರಲು ಹೇಳಿದರು. ನಾನೇಕೆ ಇಲ್ಲಿರಬೇಕು? ಮನೆಗೆ ಹೋಗುತ್ತೇನೆಂದೆ. ಇಬ್ಬರು ಸಿಸ್ಟರ್ಸ್ ಬಂದು ಎಳೆದೊಯ್ದರು. ಎಲ್ಲ ಮೋಸ. ನನ್ನ ಸಂತೋಷ ನೋಡಲಾರದ ಗೆಳತಿಯ ಪಿತೂರಿ. ಈ ಬಗ್ಗೆ ನನ್ನ ಹುಡುಗನಿಗೆ ಹೇಳುತ್ತಿದ್ದೆ. ಅಷ್ಟರಲ್ಲಿ ಡಾಕ್ಟರ್ ಬಂದರು. 'ಯಾರ ಬಳಿ ಮಾತಾಡುತ್ತಿದ್ದೀಯಮ್ಮಾ?' ಎಂದರು. 'ಕಣ್ಣು ಕಾಣುವುದಿಲ್ಲವೇ? ನನ್ನ ಹುಡುಗನ ಬಳಿ'. ಅವನ ಬಗ್ಗೆ ಒಂದಿಷ್ಟು ಪ್ರಶ್ನೆ ಕೇಳಿದರು. 
ಉತ್ತರಿಸಿದೆ. ಕೊನೆಯಲ್ಲಿ ನನಗಾರೂ ಕಾಣುತ್ತಿಲ್ಲವಲ್ಲಮ್ಮಾ ಎಂದರು. ಇವರಿಗೇನು ಲೂಸಾ? ಎಂದುಕೊಳ್ಳುವಷ್ಟರಲ್ಲೇ ಇಂಜೆಕ್ಷನ್ ಕೊಟ್ಟರು. ಕರೆಂಟ್ ಶಾಕ್ ಕೊಟ್ಟರು. ನಾ ರಗಳೆ ಮಾಡಿಕೊಂಡಿದ್ದನ್ನು ನೋಡಿದ ಗೆಳೆಯ ಅವನೂರಿಗೆ ಕರೆದೊಯ್ದ. ಆ ಸಂತೋಷದಲ್ಲಿದ್ದಾಗಲೇ ಕಟುಕ ಡಾಕ್ಟರ್ ಅಲ್ಲಿಗೂ ಬಂದ. 'ನಾ ಹೇಳಿದರೆ ನಂಬಲಿಲ್ಲವಲ್ಲ, ಈಗ ನೋಡಿ ನನ್ನ ಹುಡುಗನ ಊರು' ಎಂದೆ. ಆದರೆ ಆ ಕ್ರೂರಿ ಮತ್ತೆ ಆಸ್ಪತ್ರೆಗೆ ಎಳೆದೊಯ್ದ. ಗೆಳತಿ ಬಂದಳು. ಡಾಕ್ಟರ್ ಅವಳಿಗೆ ಹೇಳಿದರು, 'ಅವಳಿಗೇನೋ ಮಾನಸಿಕ ಆಘಾತವಾಗಿದೆ. ಈಗ ಆಕೆ ಸ್ಕೀಜೋಫ್ರೀನಿಯಾದಿಂದ ಬಳಲುತ್ತಿದ್ದಾಳೆ. ಅದನ್ನೇ ಜನಸಾಮಾನ್ಯರು ಹುಚ್ಚು ಎನ್ನುವುದು. ಈಗಾಗಲೇ ಸೀವಿಯರ್ ಸ್ಟೇಜ್ ತಲುಪಿಬಿಟ್ಟಿದ್ದಾಳೆ. ಈಗವಳದ್ದು ಅವಳದೇ ಲೋಕ. ಅಲ್ಲಿನ ಕಾಲ್ಪನಿಕ ಪಾತ್ರಗಳನ್ನೇ ನಿಜವೆಂದು ಭ್ರಮಿಸಿ ಅವರೊಂದಿಗೇ ಬದುಕುತ್ತಿರುತ್ತಾರೆ. ಈ ರೋಗದಲ್ಲಿ ರೋಗಿಗೆ ಇಲ್ಲದ ವಾಸನೆ ಬರುವುದು, ಯಾವುದೋ ಶಬ್ದ ಕೇಳುವುದು, ಏನೋ ಕಣ್ಣಿಗೆ ಕಾಣುವುದು ಸಾಮಾನ್ಯ. ಅದನ್ನೇ ಹ್ಯಾಲೂಸಿನೇಶನ್ ಎನ್ನುತ್ತೇವೆ....ಅನುಮಾನ ಪಡುವುದೂ...ಅರ್ಧದಲ್ಲೇ ಕಿರುಚಿದೆ, 
'ಯಾವಳಿಗೋ ಹುಚ್ಚು? ನನ್ನ ಹುಡುಗ ಇಲ್ಲೇ ಇದ್ದಾನೆ ಪಕ್ಕದಲ್ಲಿ. ಕಲ್ಪನೆ ಅನ್ನುತ್ತೀಯಾ? ನೀವಿಬ್ಬರೂ ಸೇರಿ ನನ್ನ ವಿರುದ್ಧ ಸಂಚು ಮಾಡುತ್ತಿದ್ದೀರಿ. ನಿನಗೇ ಹುಚ್ಚು' ಕೋಪ ನೆತ್ತಿಗೇರಿತ್ತು. ಚಪ್ಪಲಿ ತೆಗೆದು ಅವನತ್ತ ಎಸೆದೆ. ಥೂ, ಈ ದರಿದ್ರ ಜಗತ್ತಿನಲ್ಲಿ ನಮ್ಮ ಪಾಡಿಗೆ ನಾವು ಕನಸು ಕಾಣಲೂ ಅವಕಾಶವಿಲ್ಲವೇ?! ಹುಡುಗನತ್ತ ತಿರುಗಿದೆ, 'ನೀನಿಲ್ಲವಂತೆ. ನೀನಿಲ್ಲದಿದ್ದರೆ ನಾನೂ ಇರುತ್ತಿರಲಿಲ್ಲ. ನಿನ್ನ ಪ್ರೀತಿಯೊಂದೇ ಉಳಿಸಿರುವುದು ನನ್ನನ್ನು. ಇವರು ಸಾವಿರ ಹೇಳಲಿ. ನೀ ಮಾತ್ರ ನನ್ನ ಬಿಟ್ಟು ಹೋಗಬೇಡ, ಇಂದ್ರನಂತೆ' ಎಂದೆ. ಅವ ಸಮಾಧಾನಗೊಳಿಸುವಂತೆ ನಕ್ಕ. ಅವನ ಭುಜಕ್ಕೊರಗಿದೆ. 
(  10-3 -1 3  ಸಾಪ್ತಾಹಿಕ ಪ್ರಭದಲ್ಲಿ ಪ್ರಕಟ)
 ಬೆಂಗಳೂರೆಂಬ ಬಯಲಾಟ
ಹೇಳೀ ಕೇಳೀ ಇದು ಬೆಂದಕಾಳೂರು. ಅಂದ ಮೇಲೆ ಯಾರೂ ತಮ್ಮ ಬೇಳೆಯನ್ನು ಇಲ್ಲಿ ಬೇಯಿಸಿಕೊಳ್ಳಬಹುದು!    ವಲಸಿಗರು ಬಂದು ಸೇರುತ್ತಲೇ ಇದ್ದಾರೆ. ಹೀಗಾಗಿ ಜಿಮ್ಗೆ ಹೋಗುವ ಯುವಕನಂತೆ ಬೆಂಗಳೂರು ತನ್ನ ತೆಕ್ಕೆಗೆ ಪಾಳ್ಯ, ದೊಡ್ಡಿ, ಹಳ್ಳಿಗಳನ್ನೆಲ್ಲ ಎಳೆದುಕೊಳ್ಳುತ್ತಾ ಮಾಂಸಖಂಡಗಳನ್ನು ಹುರಿಗೊಳಿಸಿಕೊಳ್ಳುತ್ತಲೇ ಇದೆ. ಅಷ್ಟದಿಕ್ಕುಗಳಲ್ಲೂ ಅಷ್ಟಾವಕ್ರನಾಗಿ ಹರಡಿ ಬೆರಳೆಣಿಕೆಯಷ್ಟು ಮೂಲಬೆಂಗಳೂರಿಗರನ್ನು ಹೊತ್ತು ಕನ್ನಡ, ಎಕ್ಕಡ, ಎನ್ನಡಗಳಿಗೆ ಇಂಗ್ಲಿಷ್ ಹೊದಿಕೆ ಹಾಸಿದೆ. ನಮನಮೂನೆಯ ವೇಷಭಾಷೆ ಬದುಕನ್ನು ತನ್ನೊಡಲಿಗೆ ಹಾಕಿಕೊಂಡು ಕಳೆದುಕೊಂಡ ಸ್ವಂತಿಗೆಗಾಗಿ ಪರಿತಪಿಸುತ್ತಿದೆ. ಸ್ವಂತಿಕೆಯೇ ಇಲ್ಲದ ಊರಲ್ಲಿ ಸ್ವಂತಕ್ಕೆಂದು ಸಾವಿರ ಮಾಡಿಕೊಂಡರೂ ಸುಖ ಮರೀಚಿಕೆಯೇ! ಸಣ್ಣ ಹಳ್ಳಿಯಲ್ಲೆಲ್ಲೋ ಹುಟ್ಟಿದ ಕೂಸು ಪಟ್ಟಣದಲ್ಲಿ ಶಾಲೆ ಕಲಿತು, ನಗರದಲ್ಲಿ ಎಂಜಿನಿಯರಿಂಗ್ ಮಾಡಿ ಶುಭದಿನ ನೋಡಿ ಮಹಾನಗರಕ್ಕೆ ಪದಾರ್ಪಣೆ ಮಾಡಿ ಎಂಎನ್ಸಿಗಳ ಎಸಿ ಕೊಠಡಿಯಲ್ಲಿ ಕುಳಿತು ಅಮೆರಿಕ, ಆಸ್ಟ್ರೇಲಿಯಾ ಎಂದು ಕುಳಿತಲ್ಲೇ ವ್ಯವಹರಿಸಿ ಕ್ಷಣಮಾತ್ರದಲ್ಲಿ ವಿಶ್ವಮಾನವನಾಗಿ ಬಿಡುತ್ತದೆ! ತಿಂಗಳು ತಿಂಗಳು ಲಕ್ಷಗಟ್ಟಲೆ ಎಣಿಸಿಯೂ ಮನೆಯನೆಂದೂ ಕಟ್ಟಲಾಗದೇ, ಕೊನೆಯನೆಂದೂ ಮುಟ್ಟಲಾಗದೇ ಅನಂತವಾಗಿ ಬಿಡುವ ಜನಜೀವನ!- ಇದು ಬೆಂಗಳೂರು. ಅಜ್ಜಿ ಬರುತ್ತಾಳೆ ಮೊಮ್ಮಗಳು ಬಸುರಿ ಎಂದು. ಮೊಮ್ಮಗಳ ಬಾಣಂತನ ಮಾಡುವಾಗಾಗಲೇ ಶತಶತಮಾನಗಳಿಂದ ವಂಶವಾಹಿನಿಯಲ್ಲಿ ಹರಿದು ಬಂದ ಸಂಪ್ರದಾಯ, ತಿಂಡಿತೀರ್ಥಗಳನ್ನು ಕಚ್ಚೆಸೀರೆಯಲ್ಲಿ ಹೊತ್ತು ತಂದಿದ್ದ ಅಜ್ಜಿಯ ವಯಸ್ಸು, ಅನುಭವ ತಾನು ಧರಿಸಿದ ನೈಟಿಯೊಳಗೆ ಅವಿತಿರುತ್ತದೆ! (ಇದು ಬೆಂಗಳೂರಿನ ನೀರು.) ಯಾರ ಬಾಣಂತನ ಯಾರು ಮಾಡುತ್ತಿದ್ದಾರೆಂಬ ಅನುಮಾನ ಬರಬಹುದೇನೋ ನೆರೆಮನೆಯವನು ನೋಡಿದರೆ! ಆದರೆ ಆತ ನೋಡುವುದಿಲ್ಲ. ಅವನಿಗೆ ತಿಂಗಳಿಗೊಮ್ಮೆ ಬದ   ಚಯ ಬೇಕಾಗಿಲ್ಲ. ಕಂಪ್ಯೂಟರ್, ಟಿವಿ, ಸೋಷಿಯಲ್ ನೆಟ್ವರ್ಕ್ಗಳು ಮನೆಯೊಳಗೇ ವಿಶ್ವದ ಕಾಲು ಮುರಿದು ತಂದೆಸೆದಿರುವಾಗ ಹೆಂಡತಿಮಕ್ಕಳ ಮುಖವೇ ಕಾಣುವುದಕ್ಕೆ ಸಮಯವಿಲ್ಲ. ಅಂಥದರಲ್ಲಿ ಪಕ್ಕದ ಮನೆಯವರ ಗೊಡವೆಯೇಕೇ?(ಬೆಂಗಳೂರಿನ ಮನೋಧರ್ಮ) ಬೆಳದಿಂಗಳಿರುಳುಗಳನ್ನೂ, ಅಮಾವಾಸ್ಯೆಯ ಕಾರ್ಮುಗಿಲನ್ನೂ ನುಂಗಿ ಕುಳಿತ ನಿಯಾನ್ ಲೈಟ್ಗಳಲ್ಲಿ ಕವಿತ್ವ ಜಡವಾಗುತ್ತದೆ. ಕಪಿತ್ವ ಮಾತ್ರ ಆಧುನಿಕ ಬಟ್ಟೆ ಧರಿಸಿ ಹೆಂಡ ಕುಡಿದಂತೆ ಪಬ್ಗಳಲ್ಲಿ, ಹಾದಿಬೀದಿಗಳಲ್ಲಿ ತೂರಾಡುತ್ತದೆ, ಹಾರಾಡುತ್ತದೆ. ಅದಕ್ಕೆ ಯಾವ ಅರ್ಥವೂ ಇಲ್ಲ. ರಾತ್ರಿಗಳಲ್ಲೂ ಕಪ್ಪಗಾಗದ ಬೆಂಗಳೂರಿನ ಆಕಾಶ ಕುರುಡು. ಅದಕ್ಕೆ ತನ್ನ ಬುಡದಲ್ಲೇ ನಡೆಯುವ ಕಾಳದಂಧೆಗಳು ಕಾಣುವುದೇ ಇಲ್ಲ!- (ಇದು ಬೆಂಗಳೂರಿನ ಆಕಾಶ.) ಕಾವಿ ಬಟ್ಟೆ ಕಂಡರೆ ಸಾಕು, ಕಲಿತ ವಿದ್ಯೆಯನ್ನೆಲ್ಲ ಮರೆತು ಪರಮದೈವಿಕರಾಗುವ ಜನತೆ! ಸ್ವಾಮಿ ನಿತ್ಯಾನಂದ, ಸತ್ಯಾನಂದ, ಭೋಗಾನಂದ- ಯಾವುದೇ ಆನಂದ ಎಂಬ ಹೆಸರು ಕೇಳಿದರೂ ತಮ್ಮ ಜೀವನದ ಆನಂದದ ಕೀಲಿಕೈ ಸಿಕ್ಕಿತೆಂಬಂತೆ ಸತ್ಸಂಗ ಮಾಡುತ್ತಾ ಕುಳಿತುಬಿಡುವ ಭಕ್ತಾನಂದರು! (ಇದು ಬೆಂಗಳೂರಿನ ಅಧ್ಯಾತ್ಮ)  ಶಾಲೆಯಲ್ಲಿದ್ದಾಗ ಬೆಂಗಳೂರಿಗೆ ಟೂರ್ ಬಂದು ಊರಗಲ ಕಣ್ಣು ಹೊರಳಿಸಿ ತುಂಬಿಕೊಂಡು ಊರಿಗೆ ಮರಳಿ 'ನಾ ವಿಧಾನಸೌಧದ ಬಾಗಿಲು ಮುಟ್ಟಿ ಬಂದೆ' ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದ ಕುವರ 'ದೊಡ'್ಡವನಾಗಿ ಇಲ್ಲೇ ಬಂದು ನೆಲೆ ನಿಂತ ಮೇಲೆ ಮಾಲ್ಗಳು, ಥಿಯೇಟರ್ ಹಾಲ್ಗಳಲ್ಲಿ ಕಾಲ ಕಳೆಯುತ್ತಾ ವಿಧಾನಸೌಧದೊಳಗೇನಾದರೆ ತನಗೇನಾಗಬೇಕು? ಭ್ರಷ್ಟ ರಾಜಕಾರಣಿಗಳಿಗೂ ತನಗೂ ಸಂಬಂಧವಿಲ್ಲವೆಂದು ಘೋಷಿಸಿ ನಿರಾಳ ನಿರ್ಲಿಪ್ತನಾಗುತ್ತಾನೆ. ಕೈಲಿ ದುಡ್ಡು, ಬಾಯಲ್ಲಿ ಬ್ರಿಟಿಷರ ಭಾಷೆ, ತುರುಸಿಕೊಳ್ಳಲೂ ಪುರುಸೊತ್ತಿಲ್ಲದಂತೆ ಪಾಶ್ಚಾತ್ಯ ಕಂಪನಿಗಳ ಉದ್ಧಾರಕ್ಕೆ ದುಡಿಯುವ ಅವನಿಗೆ ದೇಶದ ಬೆಳವಣಿಗೆಯಿಂದೇನಾಗಬೇಕಿದೆ? ಆದ್ಯತೆ ಬಾದ್ಯತೆಗಳನ್ನೇ ಬದಲಾಯಿಸಿಬಿಡುವುದು ಬೆಂಗಳೂರು (ಇದು ಬೆಂಗಳೂರಿಗರ ಪಾಲಿಟಿಕ್ಸ್). ವಾರಕ್ಕೆರಡು ಬರ್ತ್ಡೇ ಪಾರ್ಟಿ, ಆಗಾಗ್ಗೆ ಉದರದ ಒಳಗಿನ ಸೌಂದರ್ಯವನ್ನು ವೃದ್ಧಿಸುವ ಪಿಜ್ಜಾಬರ್ಗರ್, ದಿನಂಪ್ರತಿ ಉಪಹಾರ ದರ್ಶಿನಿಗಳಲ್ಲಿ ಊಟತಿಂಡಿ, ಗೂಡಂಗಡಿಗಳ ಬೈಟೂ ಟೀ. ವೀಕೆಂಡ್ಗಳಲ್ಲಿ ದೊಡ್ಡ ದೊಡ್ಡ ಹೋಟೆಲ್ಗಳೆದುರು ಕ್ಯೂನಲ್ಲಿ ನಿಲ್ಲುವ ಜನರ ಮನೆಯ ಅಡುಗೆಕೋಣೆಯೆಂಬ ಶೋಕೇಸಿನಲ್ಲಿ ತೆಪ್ಪಗೆ ಕುಳಿತ ಎಂದೂ ಹೊತ್ತದ ಗ್ಯಾಸ್ ಒಲೆ! (ಬೆಂಗಳೂರಿಗರ ಆಹಾರಶೈಲಿ). ಬೆಳಗ್ಗೆ ಎಂಟು ಗಂಟೆಗೆ ಬಾಗಿಲು ತೆರೆದು ಮೈ ಮುರಿಯುವ ಮನೆಗಳೆದುರು ರಾತ್ರಿ 11ಕ್ಕೇ ಹರಡಿ ನಿಂತ ರಂಗೋಲಿ. ಕೋಟಿ ಬೆಲೆ ಬಾಳುವ ಅಂಗಳವಿಲ್ಲದ ಮನೆಯ ನೆತ್ತಿ, ಬಗಲಲ್ಲಿ ಹತ್ತಿ ಕುಳಿತ ಪಾಟ್ಗಳಲ್ಲಿ ಅರಳುವ ದಿನಕ್ಕೊಂದು ಕೆಂಪು ಗುಲಾಬಿ! ಇಬ್ಬರೂ ಕೆಲಸಕ್ಕೆ ಹೋಗುವ ಗಡಿಯಾರದ ಒಂದು ನಿಮಿಷವೂ ವ್ಯರ್ಥವಾಗದ ಮನೆಗಳಲ್ಲಿ ಪ್ಲೇಹೋಂ ಒಡತಿಯ ಜೇಬು ತುಂಬಲೆಂದೇ ಯಾವುದೋ ಮಾಯದಲ್ಲಿ ಹುಟ್ಟುವ ಕೂಸು. ನೈತಿಕತೆಯ ತೇಗನ್ನು ಗ್ಯಾಸ್ಟ್ರಿಕ್ ಮಾತ್ರೆ ನುಂಗಿ ಶಮನಗೊಳಿಸುವ ಮಂದಿಗೆ ಸ್ವಾರ್ಥದ ಬೊಜ್ಜನ್ನು ಕರಗಿಸಲು ಅಶಕ್ತವಾಗುವ ಬೆಳಗಿನ ವಾಕಿಂಗ್, ಜಿಮ್ಮಿಂಗ್, ಸ್ವಿಮ್ಮಿಂಗ್. ಇರುವ ಮಚ್ಚೆ, ಮೊಡವೆ, ಕಲೆಗಳನ್ನು ಮುಚ್ಚಲು ಹಾದಿಗೆ ನಾಲ್ಕರಂತೆ ಹಬ್ಬಿ ನಿಂತ ಬ್ಯೂಟಿಪಾರ್ಲರ್ಗಳು! ಬೆಂಗಳೂರು ಬೆಳೆದಿದೆ, ಬದುಕು ಬದಲಾಗಿದೆ. 
(ಕನ್ನಡಪ್ರಭದ ಸಾಪ್ತಾಹಿಕದಲ್ಲಿ 21- 4 - 2013 ರಂದು ಪ್ರಕಟ)

26.6.12

.ಮಾತು - ಮನಸು

ಒಡಲಾಳದ ಬಾವಿಯ ಆಳಕ್ಕೆ ನಿಲುಕುವ ಹಗ್ಗ ಸಿಗಲಿಲ್ಲ
ಆದರೂ ಕಪ್ಪೆಯ ವಟಗುಟ್ಟುವಿಕೆ ನಿರಂತರವಾಗಿ  ಹತ್ತಿರದಲ್ಲೇ ಕೇಳಿಸುತ್ತಿದೆ ..

'ವಂಶಿ' ಚಿತ್ರದ 'ಅಮಲೂ..ಅಮಲೂ' ಗೀತೆಯನ್ನು ಕುಡಿದ ಅಮಲಿನಲ್ಲಿ ಹಾಡಿದರೆ ಹೀಗಿರಬಹುದೇನೋ?


ಅಮಲೂ ಅಮಲೂ ಅಮಲೂ..
90 ಒಳಗೆ ಹೋಗಲೂ..
ಮರುಳೀಗ ಮಿತಿಮೀರಿ ನನಗಂತೂ ದಿಗಿಲು..
 
ಬಾSSSSS ರು ಫ್ರೆಂಡ್ಸ್ ಆSSSS ರು ಹರಟೆ ಕಾಲಹರಣ...
ಕುರುಕಲು ಬಿಸಿ ಬಿಸಿ ಜತೆಯಿದ್ರೆ ಲಕ್ಷಣ..
ತಿಳಿಯದೆ ಕುಡಿದೆನು ಪದೇ ಪದೆ ಇದ..
ಸ್ವಲ್ಪದೆ ಏರಿತು ಮತ್ತಿನ ಮದ..
ಭೂಮಿ ತಿರುಗಿದೆ...
ನಾ ಏಳಲೂ.........//ಅಮಲೂ//
 
ನೀ...ನು ಮತಿಗೇರಿ ಮರೆತೇ ನಾನು ಅವಳ..
ಬೇರೆ ಕಹಿ ಮರೆವ ಬಗೆ ಕಾಣೆ ಇಷ್ಟು ಸರಳ..
ಮುಗಿಲಲೆ ತೇಲಿದೆ ನಾನು ಸದಾ..
ದಿನ ದಿನ ರುಚಿಸಿದೆ ಹೊಸ ಹೊಸ ವಿಧ..
ದೇವದಾಸನೂ
ನಾ ಆಗಲೂ ....//ಅಮಲೂ//
 

18.1.12

ವಿರಕ್ತಪ್ರೇಮಿ


                                    
ಪ್ರಿಯ ಗೆಳತಿ,
     ನನ್ನಾಳದ ಹೊಯ್ದಾಟಗಳನ್ನೆಲ್ಲ  ಹೇಳಲೇಬೇಕೆಂಬ ಹಪಹಪಿ ಒಳಗಿನಿಂದ ಒತ್ತರಿಸಿಕೊಂಡು ಬರುತ್ತಿದೆ.  ನನ್ನೊಳಗಿನ ಅಭಾವವನ್ನು ತುಂಬಿಕೊಡೆಂದು ನಿನಗೊಂದು ಆಹ್ವಾನವೀಯಲು  ಈ ಪತ್ರ. ಇದೊಂತರಾ ವಿರಕ್ತಿಯ ಹೊಸ್ತಿಲಲ್ಲೂ ನಿನ್ನಲ್ಲಿ ಅನುರಕ್ತನಾಗದಿರಲು ಅಶಕ್ತನಾದ ನನ್ನ ಪ್ರೇಮಪತ್ರ. ನಿನಗೆ ನನ್ನ ಭಾವನೆಗಳ ಭಾವವೆಲ್ಲವೂ ಅರ್ಥವಾಗಬೇಕೆಂಬ ನಿರೀಕ್ಷೆಗಳೇನೂ ನನಗಿಲ್ಲ.ಆದರೆ ಒಮ್ಮೆ ಈ ಸಂತೆಗೂಡನ್ನು ಹೊರತೆಗೆದು ಖಾಲಿಯಾಗಬೇಕಿದೆ. ಖಾಲಿ ಎಂದರೆ ಹೇಗಂತಿಯ? ಇನ್ನೂ ಹುಟ್ಟಿರಲಿಲ್ಲ .ಅಮ್ಮನ ಹೊಟ್ಟೆಯೊಳಗೂ ನನ್ನ ಅಸ್ತಿತ್ವವಿರಲಿಲ್ಲ..,ಹಾಗೆ ,ಏನೆಂದರೆ ಏನೂ ಇರದಂತೆ. ಈ ಪ್ರಪಂಚ , ನಾವು ಮನುಷ್ಯರು, ನೀನು, ಎಲ್ಲಕ್ಕಿಂತ ಮುಖ್ಯವಾಗಿ 'ನಾನು' -ಎಲ್ಲವೂ ಇತ್ತೀಚಿಗೆ ಹಾಸ್ಯಾಸ್ಪದವಾಗಿ ತೋರುತ್ತಿದೆ. ಹಾಗೆ ತೋರುತ್ತಲೇ ಗಂಭೀರವಾದ ಭಾವವೊಂದು ಅದರ ಹೊರಭಾಗವನ್ನು ಸುತ್ತುವರಿದು , ಪ್ರತಿಯೊಂದೂ ಪೊರೆ ಪೊರೆಗಳಾಗಿ ಸುತ್ತಿಕೊಂಡ 'ಬದುಕು' ಎಂದು ನಾವು ಕರೆಯುವ ವಿಸ್ಮಯವಾಗಿ ಕಾಣುತ್ತಿದೆ. ಏನನ್ನೇ ಯೋಚಿಸಹೊರಟರೂ ಅದರ ಒಂದೊಂದೇ ಪೊರೆ ಕಳಚುತ್ತಾ ಸಾಗುತ್ತೇನೆ. ಹಾಗೆ ಕಳಚುತ್ತಾ ಕಳಚುತ್ತಾ ಎಲ್ಲವೂ ಶೂನ್ಯವೆನಿಸುತ್ತದೆ. ಎಲ್ಲವೂ ಎಂದರೆ ಎಲ್ಲವೂ. ಇದನ್ನು ವ್ಯಕ್ತಪಡಿಸುತ್ತಿರುವ ಈ ಭಾಷೆ ಕೂಡ! ಹೀಗಲ್ಲದೇ ಬೇರೆ ರೀತಿ ಯೋಚಿಸಲು ನಾ ಶಕ್ತನಲ್ಲ. ಎಷ್ಟೇ ಆದರೂ ಭಾರತೀಯನಲ್ಲವೇ? ಶೂನ್ಯ ಪ್ರಪಂಚಕ್ಕೆ ಭಾರತದ ಕೊಡುಗೆ ತಾನೇ?! ಶೂನ್ಯದಿಂದಲೇ ಸೃಷ್ಟಿ .ಇಂತಹ ಈ ಶೂನ್ಯದಲ್ಲಿ 'ನಾನು' ಹುಟ್ಟಿದೆ. ನನ್ನನ್ನು ಗುರುತಿಸಲು ಒಂದು ಹೆಸರು ಹುಟ್ಟಿತು. ನನ್ನ ಅಸ್ತಿತ್ವದಲ್ಲಿ ಅಸ್ತಿತ್ವ ಕಂಡುಕೊಂಡ ಪರಾವಲಂಬಿ ಹೆಸರು!! ಬೆಳೆಸುವ ನೆಪದಲ್ಲಿ ಭಾಷೆ,ಆಟ,ಪಾಠ ,ಸಂಸ್ಕೃತಿ,ಜಾತಿ,ದೇಶ ಇನ್ನೂ ಏನೇನನ್ನೋ ನನಗೆ ಸುತ್ತುತ್ತಾ ಹೋದರು.ಅವರಾದರೂ ಯಾರು, ತಮ್ಮ ಶೂನ್ಯವನ್ನು ಮುಚ್ಚಿಕೊಳ್ಳುವ ಪ್ರಯತ್ನದಲ್ಲಿ ಕಳೆದುಹೋಗಿರುವವರು. ನನ್ನ ಖಾಲಿತನವನ್ನು ತುಂಬುವುದರಲ್ಲಿ ತಮ್ಮ ಸುಖ ಕಂಡುಕೊಂಡರು. ನನ್ನದೇ 'ವ್ಯಕ್ತಿತ್ವ'ವೆಂದು ಕರೆಯಲು ಶಕ್ತವಾಗುವಷ್ಟು ಪೊರೆಗಳು ನನ್ನನ್ನು ಸುತ್ತಿಕೊಂಡವು. ಆದರೆ ಆ ಒಳಗೆ , ಇನ್ನೂ ಒಳಗೆ, ಮೊದಲ  ಪೊರೆಗಿಂತಾ ಒಳಗೆ ಸುತ್ತಿದ್ದು ಏನನ್ನ?, ಮತ್ತದೇ ಖಾಲಿತನವನ್ನ!! ಶೂನ್ಯವನ್ನು ಹಿಡಿದಿಡಲು ಸಾಧ್ಯವೇ?, ನೀನೂ ಹೀಗೆಯೇ..ಎಲ್ಲರ ಒಳಗೂ ಹೀಗೆಯೇ.,ಬಯಲು ಮಾಡುವ ಮೊದಲು ಆಳದಲ್ಲಿ ಕತ್ತಲಾದರೂ ಗೋಚರಿಸುತ್ತದೆ. ಆದರೆ ಬಟ್ಟಂಬಯಲಾದ ಮೇಲೆ ಕತ್ತಲೆಗೆ ಕೂಡ ಅವಕಾಶವಿಲ್ಲ. ಇಷ್ಟಕ್ಕೂ ಅವಕಾಶ ಎಂದು ಮತ್ತದೇ ಖಾಲಿ ಸ್ಥಳಕ್ಕೆ ಕರೆಯುವುದಲ್ಲವೇ?
ಹೀಗೆ ಈ ನನ್ನೊಳಗಿನ ಖಾಲಿತನವನ್ನು ನೀನು ತುಂಬಿಕೊಡಬಹುದು ಎಂಬ ಭಾವ ದಟ್ಟವಾಗಿ ಕಾಡಿದ್ದರಿಂದಲೇ  ನೀ ನನ್ನ ಜೀವನ ಸಂಗಾತಿಯಾಗಬೇಕೆಂಬ ಬಯಕೆ ಹುಟ್ಟಿರುವುದು. ಹೀಗನ್ನಿಸಿದ್ದು ದಿಟ. ಆದರೆ ಅದು ಹೇಗೆ ಸಾಧ್ಯವೆಂದು ಯೋಚಿಸಹೊರಟರೆ  ಮತ್ತೆ ಹುಚ್ಚು ಆಲೋಚನೆಗಳ ಮಧ್ಯೆ ಹುಚ್ಚನಾಗುತ್ತೇನೆ. ಬಾ , ನನ್ನೊಡಲ ಶೂನ್ಯದಲ್ಲಿ ಕುಳಿತುಬಿಡು. ನಾನೂ ನಿನ್ನಾಳದ ಬಯಲ ಬೆಳಕಿನಲ್ಲಿ ಲೀನನಾಗುತ್ತೇನೆ. ಈ ಅರ್ಥಹೀನ ಲೋಕಕ್ರಿಯೆಯಲ್ಲಿ ಅರ್ಥವನ್ನು ಒತ್ತಾಯಪೂರ್ವಕವಾಗಿ ಕಂಡುಕೊಳ್ಳುವಂತೆ ನಟಿಸೋಣ. ಅದಕ್ಕಿಂತಾ ಹೆಚ್ಚಿನ ಕ್ರಿಯೆ ಮನುಷ್ಯ ಮಾತ್ರರಿಗೆ ಸಾಧ್ಯವಾದರೂ ಎಲ್ಲಿ??!

                                                                                                 ಇಂತಿ ನಿನ್ನವ 

8.12.11

ಮೂಲ

ಕಲಾವಿದ ಕುಂಚಕ್ಕೆ ಕೊಟ್ಟ ಅರ್ಥ
ಉದಿಸಿತು;
ಕವಿಯಲ್ಲಿ ಹೊಸ ಕಾವ್ಯ
ಪಡೆದಿತ್ತು ;
ಕತೆಯಲ್ಲಿ ಹೊಸ ಜೀವ
ಕತೆಗೇನು ಗೊತ್ತು ಕವಿತೆಯೊಳಗಿನ ನೋವು
ಹಂಗಿಸಿತು ನಿನಗಿಲ್ಲವೆಂದು ನನ್ನ ಸೊಬಗು
ಕವಿತೆ ಕಾಣಲಿಲ್ಲ ಕತೆಯ ಹೊಳಹು
ಛೇಡಿಸಿತು, ನೀ ಕೊಡಬಲ್ಲೆಯಾ
ನನ್ನಂತೆ ಮಧುರ ಕಾವು?

ಕತೆ ಮೆಚ್ಚಿ ಬಂದವರು
ಕವಿತೆ ಮೆಚ್ಚಿ ಬಂದವರು
ತಿಳಿಯದಾದರು
ಎರಡಕ್ಕೂ ಒಂದೇ ತಾಯಿಬೇರು
ಅವರಿಟ್ಟ ಹೆಸರಿನಲ್ಲಿ
ಇವರು ಕೊಟ್ಟ ಪ್ರಶಂಸೆಯಲ್ಲಿ
ತನ್ನರ್ಥವ ಹುಡುಕುತ್ತಾ
ಮೌನವಾಗಿ ನೋಡುತ್ತಿತ್ತು
ಎರಡಕ್ಕೂ ಜನ್ಮ ನೀಡಿದ ಕುಂಚ ಕೃತಿ
ಹಲವು ಭಾವಗಳ ಸೂಸುತ್ತಾ
ತನ್ನಲ್ಲೇ ಗುನುಗುತಿತ್ತು ಹೊಸ ಶ್ರುತಿ..