ಪುಟಗಳು

31.8.11

ಅರಿಕೆ

ಮತ್ತೆ ಮರಳದ ಇರುಳೆ
ಸ್ವಪ್ನದಲೂ ಅರಿಕೆಯಿದು,
ಬಂಧಿಸಿಡು ನಿನ ಬಾಹುಗಳಲಿ
ಬೆಳಕು ಬಂದೊಡನೆ ...
ಸಿಹಿಗನಸು ಬೀಳುತಿದೆ
ಅರ್ಧದಲಿ ಕದದಿರು ,
ಹೆಚ್ಚು ಕಾಯಿಸೆನು ನಿನ್ನ
ಹೇಳುವೆನು ಮುಗಿದೊಡನೆ ...

29.8.11

ಲಂಚ

ನೋಟಿನೊಳಗೆ ಕುಳಿತು ನಗುವ
ಬೊಚ್ಚು ಬಾಯಿಯ ಮುದುಕ ಗಾಂಧಿ
ಕಳ್ಳನಂತೆ ಟೇಲ್ಲಿನ್ನಡಿ ನುಸುಳಿದರು..
ಎಳೆದುಕೊಂಡ ಗಾಂಧೀ ಟೋಪಿಯವ
ತಾತನ ಬೋಳುತಲೆ ಕಂಡಾಗಲೇ
ಎದುರಿನವನ ತಲೆ ಬೋಳಿಸಿದ
ಅನುಭವದಿ ಸುಖ ಪಟ್ಟ!!
ಬೋಳಿಸಿಕೊಂಡ ಭೂಪ ಮುಜುಗರದಿ ಹೊರಬಂದ
ತನ್ನನೇ ಎಲ್ಲರೂ ನೋಡುತ್ತಿರುವ ಭ್ರಮೆಗೆ
ಸುತ್ತಲೂ ಕಳ್ಳ ದೃಷ್ಟಿ ಬೀರಿದ..
ಹಾದಿಬೀದಿಯ ತುಂಬಾ ಜನಜಂಗುಳಿ
ಎಲ್ಲರ ತಲೆಯಲ್ಲೂ ಬೋಳನ್ನು ಮುಚ್ಚಿದ
ಟೋನ್ನುಗಳು ಕಂಡಂತಾಯಿತು ..
ಎಲ್ಲರೊಳಗೊಂದಾದ ಖುಷಿಗೆ
ಅವನ ತಲೆಯಲ್ಲೂ ಟೋನ್ನಿನಂತೆ
ಕೂದಲು ಕುಳಿತಿತ್ತು!!!

11.8.11

kuruchalu mara: ನೇಮಿಚಂದ್ರ- ನನ್ನ ಮನಸ್ಸಿನ ಅತ್ಯಾಪ್ತ ಲೇಖಕಿ..ನಂಗೊಂದು ಹವ...

kuruchalu mara: ನೇಮಿಚಂದ್ರ- ನನ್ನ ಮನಸ್ಸಿನ ಅತ್ಯಾಪ್ತ ಲೇಖಕಿ..ನಂಗೊಂದು ಹವ...: "ನೇಮಿಚಂದ್ರ- ನನ್ನ ಮನಸ್ಸಿನ ಅತ್ಯಾಪ್ತ ಲೇಖಕಿ..ನಂಗೊಂದು ಹವ್ಯಾಸವಿದೆ, ಪುಸ್ತಕ ಓದುವಾಗಲೆಲ್ಲಾ ನನಗಿಷ್ಟವಾಗುವ ಸಾಲುಗಳನ್ನೆಲ್ಲಾ ಡೈರಿಯೊಂದರಲ್ಲಿ ಬರೆದುಕೊಳ್ಳುವುದು..ನ..."

29.7.11

ಮೈ ಡಿಪಾರ್ಟ್ಮೆಂಟ್

ಬೆವರ ನಾತಕ್ಕೆ
ಮೈ ಕೊಳೆಯಾಗಿರುವ ಅನುಭವದಿ
ನನ್ನನೇ ನಾ ಅಸಹ್ಯವೆಂದು
ಶುಚಿಯಾಗಲು ಬಯಸಿದೆ..

'ಗಕ್ಕನೆ' ಕೆಸರಿನಲಿ ಮಿಂದೆದ್ದ ಎಮ್ಮೆಗಳು
ಸುತ್ತಲೂ ನಿಂತವು,
ಕೆಸರೊಳಗೆ ಅವು ಸುಖ ಕಂಡ ಪರಿಗೆ
ಅಚ್ಚರಿಪಟ್ಟೆ!!
ತಾಗಿದರೆ ನನ್ನ ಶುಚಿತ್ವ
ಹಾಳಾಗುವ ಭಯದೊಂದಿಗೆ
ನನ್ನ ಅಸಹ್ಯದ ಭಾವನೆ
ಸ್ಥಾನ ಪಲ್ಲಟ ಮಾಡಿತ್ತು!!!

20.7.11




ಆಳವಾದದ್ದು ಎಂದಿಗೂ ಆಪ್ತವಾಗಿರುತ್ತದೆ... ಆಪ್ಯಾಯಮಾನವಾಗಿರುತ್ತದೆ..ಇದೋ ನನ್ನ ಗೆಳತಿ ನನ್ನಾಳದಲ್ಲಿ ಹುದುಗಿ ಕುಳಿತ ಪರಿ, ನನ್ನ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದದ್ದು ಹೀಗೆ...

11.5.11

ಅಜ್ಜನ ನಿಟ್ಟುಸಿರು ೨೦-೨-೧೧
ಒಂದರ ಬೆನ್ನಿಗೊಂದು ಮಳೆಗಾಲ


ಬೊಗಸೆಯೊಡ್ಡಿದಶ್ಟೂ ಸೋರಿ ಹೋಗುವ ಬಾಲ್ಯ


ಗೆಳೆಯರೆಲ್ಲರೂ ಕೂಡಿ ಕುಣಿದು ಕುಪ್ಪಳಿಸಿದ್ದು


ನಕ್ಕು ನಗಿಸಿದ್ದು..


ಬಿದ್ದಾಗ ಆಸರೆಯಾಗಿದ್ದು..


ಆಲಿಕಲ್ಲುಗಳ ಬಾಚಿ ತಿಂದದ್ದು..


ಬೆಳೆಯುವ ಬಿರುಸಿಗೆ,ಬಳಲಿಕೆಗೆ


ಚೈತನ್ಯದಂತೆ 'ದೋ'ಎಂದು ಸುರಿದದ್ದು


ಮಕ್ಕಳಾಟವ ಕ್ಂಡು ನೆನಪುಗಳ ಮರುಕಳಿಕೆ


ಮೊಮ್ಮಕ್ಕಳಾಟದಿ ತಣಿವ ತಿರುಗಿ ಬಾಲ್ಯಕ್ಕೆ ಹೊರಳುವಾ ಬಯಕೆ
ಹನಿಹನಿಯಲ್ಲೂ ನೆನೆದಿದ್ದ ಮುಗ್ದತೆ ಆರಿದೆ


ಉತ್ತರಗಳ ಕಂಡ ಪ್ರಶ್ನೆಗಳು ಮತ್ತೆ ಪ್ರಶ್ನೆಯಾಗುಳಿಯದ ದೌರ್ಬಲ್ಯಕ್ಕೆ!
ನಿಟ್ಟುಸಿರು ಕೇಳುತಿದೆ,ಸೋರುವ ಆಕಾಶ


ಹುಟ್ಟಿಸಿದ ಕನಸುಗಳು ಕೊತ್ತ ನೆನಪುಗಳ ಸಮತೂಗುವುದೇ?!


(ಸೋರುವ ಆಕಾಶಕ್ಕೆ ನೆರೆತ ಕೂದಲೂ ನೆನೆಯಬಲ್ಲದೇ?)

5.3.11

ವೈರುದ್ಯ..

ಅದು ತೆಪ್ಪಗೆ ಮನೆಯೊಂದರ ಅಂಗಳದಲ್ಲಿ ತಲೆ ಕೆದರಿಕೊಂಡು ನಿಂತ ಮರ.ಎಳನೀರು ಗೊಂಚಲುಗಳ ಹೊತ್ತ ತುಂಬು ಬಸುರಿ..ಅದಕ್ಕೇ ಇರಬೇಕು ಕೂದಲನ್ನು ಕಟ್ಟಲೂ,ಅಥವಾ ಗಾಳಿಗೆ ಹಾರಿಬಿಡಲೂ ಉದಾಸೀನ!!ಯಾರಿಗೆ ಬೇಕು ದಿನ ಬೆಳಗಾದರೆ ಈ ಹೊಂಡಕೊಂಡದ ಟಾರು ರಸ್ತೆಯನ್ನು ನೋಡುತ್ತಾ ಕಾಲ ತಳ್ಳುವ ಈ ಜೀವನ ಎಂಬ ಜಿಗುಪ್ಸೆ ಇರಬಹುದು.'ಉಸ್ಸಪ್ಪಾ' ಎಂದು ನಿಟ್ಟುಸಿರು ಬಿಡುವಾಗಿನ ಮುಖಚಹರೆ.ಆ ಪಾಟಿ ಎಳನೀರು ಗೊಂಚಲುಗಳ ನೋಡಿದರೆ ಹಳ್ಳಿಗಾಡಿನ ಹೆಂಗಸಿನಂತೆ ಹುಟ್ಟುವುದೇ ಮಕ್ಕಳನ್ನು ಹಡೆಯಲು' ಎಂದು ಅದು ಭಾವಿಸಿದಂತಿದೆ!ಆದರೂ ಸಣ್ಣದಾಗಿ ಅಲ್ಲಿ ಆ ಕಳಾಹೀನ ಮುಖದಲ್ಲಿ 'ಮಾತ್ರುಮಮತೆ ' ಇಣುಕುತ್ತಿದೆಯಾ?,ಇರಬಹುದೇನೋ?!
ಬದುಕು ಎಷ್ಟು ವಿಪರ್ಯಾಸ ನೋಡಿ,ತದ್ವಿರುದ್ದಗಳನ್ನು ಒಟ್ಟಿಗೆ ಇಟ್ಟು ಮಜಾ ನೋಡುತ್ತದೆ. ಇಂತಾ ಈ ಮರ,ಸದ್ದಿಲ್ಲದೇ ಸಮಯ ಕಳೆಯುವ ಈ ಮರದೊಳಗೆ ಸಂಜೆಯಾದರೆ ಕಿಚಪಿಚವೆನ್ನುತ್ತಾ ಎಡೆಬಿಡದ ಜೀವನೋತ್ಸಾಹದಿಂದ ನಲಿವ ಪುಟ್ಟ ಪುಟ್ಟ ಕಂದು ಹಾಗೂ ಬೂದು ಮಿಶ್ರಿತ ಹಕ್ಕಿಗಳು..ರೆಂಬೆಯಿಂದ ರೆಂಬೆಗೆ ಹಾರಿ ಪುರುಸೊತ್ತಿಲ್ಲದೇ ವಟಗುಡುವ ,ಬದುಕು ಬಯಸುವ,ಮನಕ್ಕೆ ಉಲ್ಲಾಸ ತುಂಬುವ ಪುಟ್ಟ ಜೀವಗಳು..ಅವುಗಳ ಇರುವಿಕೆ ಜಗತ್ತಿನ ಉಸಿರಾಟದ ಸದ್ದಿನಂತೆ ಕಿವಿಗೆ ಬಂದು ಬಡಿಯುತ್ತದೆ.ಅದು ಸಂಗೀತದ ಅರಿವಿರದಿದ್ದರೂ ಹಳ್ಳಿಗಾಡಿನ ಜನಪದದಂತೆ ಇಂಪಾಗಿ ಮಾರ್ದನಿಸುತ್ತದೆ.ಅವು ಪರಸ್ಪರ kushalakshemagalannu ವಿಚಾರಿಸಿಕೊಳ್ಳುವಂತೆ ಭಾಸವಾಗುತ್ತದೆ.ಬದುಕು ಬೇಡವೆಂಬಂತೆ ನಿಂತ ಆ ಮರದಲ್ಲಿ ಈ ಹಕ್ಕಿಗಳು ಕುಳಿತು ಬದುಕಿನೆಡೆಗೆ ವಿಸ್ಮಯವನ್ನು ವ್ಯಕ್ತಪಡಿಸುತ್ತವೆ..ಸಂಜೆ ಕೆಂಪಾದಾಗ ನಡೆಯುವ ಈ ಸಂಭಾಷಣೆ ಇಂಪೋ ಇಂಪಾಗಿ ಮನಕೆ ತಂಪೆರೆಯುತ್ತದೆ..

(ಉದಯವಾಣಿ ಯಲ್ಲಿ ಪ್ರಕಟ)

4.12.10

ಕಾವ್ಯಕ್ಕೊಂದು ಮುನ್ನುಡಿ..ಛಾಯಾ ಚಿತ್ರ




ನನ್ನ ಪ್ರೀತಿಯ ಹುಡುಗಾ...

ನಂಗೂ ನನ್ನ ನಿನ್ನ ಹೆಸರನ್ನು ಹೀಗೆ ಕಂಡಕಂಡಲ್ಲಿ ಬರೆಯುವಾಸೆ,ಲೈಬ್ರರಿಯಿಂದ ತಂದ ಕಥಾಸಂಕಲನದಲ್ಲಿ,ದೂರಪ್ರವಾಸದಿ ಹತ್ತಿದ ದೊಡ್ಡ ಬಂಡೆಯಲ್ಲಿ,ಮತ್ತೆ-ಮತ್ತೆ ಅಲೆಗಳು ಬಂದಪ್ಪುವ ಕಡಲತಡಿಯ ಮಳಲ ಮೇಲೆ,ನೋಟ್ಪುಸ್ತಕದ ಕೊನೆಯ ಪುಟದ ಆಕಾರವಿಕಾರಗಳ ಮಧ್ಯೆ..
ಫ್ರೆಂಡ್ನ ಮಾತಿಗೆ ಅಗತ್ಯಕ್ಕಿಂತಲೂ ಹೆಚ್ಚು ನಗು ಉಕ್ಕುವಾಗ,ಅವನಾರೋ ಓರ್ಕುಟ್ನಲ್ಲಿ ಹೊಗಳಿದ ಹೊಗಳಿಕೆ ಪದೇ ಪದೇ ಕಾಡುವಾಗ,ಬರೀ ಪ್ರೀತಿಗೆ ಸಂಬಂಧಪಟ್ಟಿದ್ದೇ ಮೆಸೇಜ್ ಕಳಿಸುವ ಸೀನಿಯರ್ ಒಬ್ಬನ ಮೇಲೆ ಅನುಮಾನಮಿಶ್ರಿತ ಕುತೂಹಲ ಮೂಡುವಾಗ,ಬಸ್ನಲ್ಲಿ ಎದುರು ಕುಳಿತವನೊಬ್ಬ ಪದೇ ಪದೇ ತಿರುಗಿ ನೋಡುವಾಗ-ಹುಟ್ಟುವ ಭಾವನೆಗಳನ್ನೆಲ್ಲಾ ಎದೆಯೊಳಗೆ ಕಟ್ಟಿಟ್ಟು ಕಾಣದ ನಿನಗಾಗಿ ಮಡಿವಂತಿಕೆಯನ್ನು ಕಾಪಿಡುತ್ತಿದ್ದೇನೆ..
ನಿನ್ನೊಡನೆ ಹನಿಮಳೆಯಲ್ಲಿ ಮೌನವಾಗಿ ನಡೆಯುವ ಸಂಜೆಗಾಗಿ ಹಪಹಪಿಸುತ್ತಾ ,ನೀ ಮಾತಾಡುವ ರಸಿಕಭಾಷೆಗೆ ನಾಚಿ ನೀರಾಗುವ ನನ್ನನ್ನು ನಾನೇ ಕಲ್ಪಿಸಿಕೊಳ್ಳುತ್ತಾ,ನಿಧಾನಗತಿಯ ಯುಗಳಗೀತೆಯೊಂದನ್ನು ಕೇಳುವಾಗ ನಾನು ನಿನ್ನ ಕಣ್ಣಿನಲ್ಲೇ ಮಾತಾಗುತ್ತಾ ಕಳೆಯುವ ಆ ಕ್ಷಣಗಳಿಗಾಗಿ ಕಾತರಲಾಗಿದ್ದೇನೆ.
ಕಣ್ಣಿಗೆ ಕಣ್ಣು ಸೇರುವ ಹುಡುಗರ ಕಂಗಳಲೆಲ್ಲ ಹುಬ್ಬು ಕಿರಿದಾಗಿಸಿ ಅದು ನೀನೇನಾ ಎಂದು ಹುಡುಕುತ್ತಿದ್ದೇನೆ. ಹೊಟ್ಟೆ ಹಿಡಿದು ನಗುವಾಗ ನಿನ್ನ ಬೆನ್ನಿಗೆ ಸಣ್ಣದಾಗಿ ತಟ್ಟುವ ಹಂಬಲ,ದುಖವಾದಾಗೊಮ್ಮೆ ನಿನ್ನ ಎದೆಗೊರಗಿ ಸಾಂತ್ವಾನ ಪಡೆಯುವ ಬಯಕೆ,ಪ್ರತೀ ಕ್ಷಣವನ್ನೂ -ಕುಳಿತು,ನಿಂತು,ತಿಂದು ಕುಡಿದಿದ್ದನ್ನೂ ನಿನಗೆ ಮೆಸ್ಸೇಜ್ ಮಾಡುವ ಕನಸು..ಹೀಗೆ ನೀನಿರದ ಇಂದುಗಳನ್ನು ನಿನ್ನೊಡನೆ ಕಳೆವ ನಾಳೆಗಳ ಕನವರಿಕೆಯಲ್ಲೇ ಕಳೆಯುತ್ತಿದ್ದೇನೆ..,,ಸದಾ ಪಕ್ಕವೇ ಇರುವ ಜೀವದ ಗೆಳತಿಗೂ ಅನುಮಾನ ಬಾರದಂತೆ....
ಸಮಯ ಸರಿಯುತ್ತಿದೆ,
ನನ್ನ-ನಿನ್ನ ಮೊದಲ ಭೇಟಿಯಾಗುವ ಸಾವಿರಾರು ಸಂಭವಗಳ ಹುಡುಕುವಿಕೆಯಲ್ಲೇ ಸಂಭ್ರಮ ಪಡುತ್ತಾ ,ಜೊತೆಜೊತೆಗೆ ಹೀಗಿರಲಿ ಹಾಗಿರಲಿ ಎಂದು ನಿನ್ನಲ್ಲಿ ನಾನು ಬಯಸಿದ ನಿನ್ನನ್ನು ಕಲ್ಪಿಸಿಕೊಳ್ಳುತ್ತಾ...
ನಿನ್ನ ಕೈ ಹಿಡಿದು ದೂರದಾರಿಯನ್ನು ಮೌನವಾಗಿ ಸವೆಸಬೇಕಿದೆ ಜಂಬದ ಮುಖ ಹೊತ್ತು,ಅಣ್ಣ ಅಕ್ಕಂದಿರೆಲ್ಲಾ ಕೀಟಲೆ ಮಾಡಿ ಛೇಡಿಸುವಾಗ ನಾಚಿ ನೀರಾಗಬೇಕಿದೆ,ಸೀರೆ ಉಟ್ಟು ನಿಂತ ನನ್ನನ್ನು ನೀನು ಮೆಚ್ಚುಗೆಯ ಕಂಗಳಲ್ಲಿ ನೋಡಬೇಕಿದೆ,ಮಾಡಲು ಬಾರದ ಅಡಿಗೆಯೊಂದನ್ನು ರುಚಿಯಾಗಿ ಮಾಡಿ ನಿನಗೆ ಬಡಿಸಬೇಕಿದೆ,ಪ್ರೀತಿಯ ಹೊಳೆಯಲ್ಲಿ ಕೊಚ್ಚಿ ಹೋಗಬೇಕಿದೆ,ಇನ್ನೂ ಸಾವಿರ ಸಾವಿರ ಕನಸುಗಳು ಕಾಯುತ್ತಾ ಕನವರಿಸುತ್ತಿವೆ...ನನ್ನ ಪ್ರೀತಿಯ ಹುಡುಗಾ ನೀ ಎಲ್ಲಿರುವೆ?

(ಉದಯವಾಣಿಯಲ್ಲಿ ಪ್ರಕಟ)