ಪುಟಗಳು

11.1.22

ಏ ಹಾಲೇ ಉಕ್ಬೇಡ ಅಂದ್ರೆ ಮಾತು ಕೇಳದ ಹಾಲಿಗೆ ಹೀಗೆ ಬುದ್ಧಿ ಕಲಿಸಿ..

ಮನೆಯಲ್ಲೇನು ದಿನಾ ಗೃಹಪ್ರವೇಶ ಇರುತ್ತಾ, ದಿನಾ ಹಾಲುಕ್ಕಿಸೋಕೆ? ಇಲ್ಲಾ ತಾನೇ? ಹಾಗಿದ್ರೆ ಮತ್ಯಾಕೆ ಪದೇ ಪದೆ ಹಾಲುಕ್ಕಿಸ್ತೀರಾ? ಅದು ಉಕ್ಕದಂತೆ ನೋಡಿಕೊಳ್ಳಲು ಇಲ್ಲಿವೆ ಟ್ರಿಕ್ಸ್..

Useful Tips to Prevent Milk Boiling Over skr
Author
Bangalore, First Published Jan 11, 2022, 6:15 PM IST
  • Facebook
  • Twitter
  • Whatsapp

ಅದೇನೋ ಗೊತ್ತಿಲ್ಲ, ಹಾಲಿನ ಪಾತ್ರೆ ಎದುರು ನಿಂತು ಅದನ್ನೇ ಎಷ್ಟು ಹೊತ್ತು ದಿಟ್ಟಿಸಿದರೂ ಉಕ್ಕದ ಹಾಲು(milk), ಯಾರದೋ ಫೋನ್ ಬಂತೆಂದೋ, ಸಕ್ಕರೆ ತೆಗೆದಿಟ್ಟುಕೊಳ್ಳೋಣ ಎಂದೋ ಒಂದೇ ಒಂದು ಕ್ಷಣ ಕಣ್ಣು ಅತ್ತಿತ್ತ ತಿರುಗಿಸುವಷ್ಟರಲ್ಲಿ ಉಕ್ಕಿ ಹರಿದಿರುತ್ತದೆ. ಅಷ್ಟೊತ್ತು ಕಾದಿದ್ದೂ ವೇಸ್ಟು, ಜೊತೆಗೆ ಆಮೇಲೆ ಸ್ಟವ್, ಸ್ಲ್ಯಾಬ್, ಪಾತ್ರೆ ಎಲ್ಲವನ್ನೂ ಕ್ಲೀನ್ ಮಾಡುತ್ತಾ ಕೂರುವ ಗೋಳು ಬೇರೆ. ಅದರೊಂದಿಗೆ, ಹಾಲುಕ್ಕಿಸಿದರೆ ಚಂದ್ರನ ದೋಷ ಕಾಡುತ್ತದೆ ಎಂದು ಬೈಯುವ ಅತ್ತೆ! ಸಾಕಪ್ಪಾ ಸಾಕು, ಪ್ರತಿ ಬಾರಿ ಎಚ್ಚರ ಹೆಚ್ಚಿಸಿದರೂ ಹಾಲಿನ ತುಂಟತನವೇ ಗೆಲ್ಲುತ್ತದೆ ಎನ್ನುವವರು ನೀವಾಗಿದ್ದರೆ ನಿಮ್ಮನ್ನು ಈ ಸಮಸ್ಯೆಯಿಂದ ಪಾರು ಮಾಡುವ ಟ್ರಿಕ್ಸ್‌ಗಳು ನಮ್ಮಲ್ಲಿವೆ. ಯಾವುದಕ್ಕೂ ಒಮ್ಮೆ ಮುಂಚೆಯೇ ನಮಗೆ ಥ್ಯಾಂಕ್ಸ್ ಹೇಳಿ ಮುಂದೆ ಓದಿ. 

ಬೆಣ್ಣೆಯ ತುಂಡು
ಮನೆಯಲ್ಲಿ ಬೆಣ್ಣೆ(butter) ಇರಬೇಕಲ್ಲ, ಮೊದಲು ಅದನ್ನು ತೆಗೆದು ಹಾಲಿನ ಪಾತ್ರೆ(vessel)ಯ ಕಟ್ಟಿನ ಸುತ್ತ ಹಚ್ಚಿ ತಿಕ್ಕಿ. ನಂತರ ಪಾತ್ರೆಗೆ ಹಾಲು ಸುರಿದು ಕಾಯಲು ಬಿಡಿ. ಈಗ ಬೇಕಿದ್ದರೆ ನೀವು ಹಾಲ್‌ಗೆ ಹೋಗಿ ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತು ಫೋನಾದರೂ ನೋಡಬಹುದು, ಪೇಪರ್ ಆದರೂ ಓದಬಹುದು. ಏಕೆಂದರೆ ಕಾಲು ಕಾದ ನಂತರ ಖಂಡಿತಾ ಉಕ್ಕಲಾರದು. 

ನೀರು(water)
ಹಾಲಿಗೆ ನೀರು ಸೇರಿಸುವುದರಲ್ಲಿ ನೀವು ಎಕ್ಸ್‌ಪರ್ಟ್ ಇರಬಹುದು. ಆದರೆ, ಯಾವ ಸಂದರ್ಭದಲ್ಲಿ ನೀರು ಸೇರಿಸಬೇಕೆಂಬುದು ತುಂಬಾ ಮುಖ್ಯ. ಹೌದು, ನೆಂಟರು ಬಂದಾಗ ಸೇರಿಸಬೇಕು ಎಂಬ ನಿಮ್ಮ ಉತ್ತರವೂ ಸರಿಯೇ! ಆದರೆ, ನಾನೀಗ ಹೇಳುತ್ತಿರುವುದು ಹಾಲು ಉಕ್ಕದಂತೆ ಮಾಡಲು ಯಾವಾಗ ನೀರು ಸೇರಿಸಬೇಕೆಂಬ ಬಗ್ಗೆ. ಹಾಲಿನ ಖಾಲಿ ಪಾತ್ರೆಗೆ ಕೊಂಚ ನೀರು ಸೇರಿಸಿ. ನಂತರ ಹಾಲು ಹಾಕಿ ಕಾಯಲು ಒಲೆಯ ಮೇಲಿಡಿ. ಇನ್ನು ಅದು ಒಲೆಯ ಮೇಲೆ ಬೀಳುವ ಭಯವಿಲ್ಲದೆ ಬೇರೆ ಅಡುಗೆ ಮಾಡುವುದರಲ್ಲಿ ನಿರತರಾಗಿ. 

ಅಲ್ಲಾಡ್ಸಿ
ಅಲ್ಲಾಡ್ಸು ಅಲ್ಲಾಡ್ಸು ಅಂತ ಬಾಟ್ಲು ಅಲ್ಲಾಡ್ಸೋದು ಗಂಡಸ್ರಿಗಾಯ್ತು. ಅದ್ಕೆ ಠಕ್ಕರ್ ಕೊಡ್ಬೇಕಲ್ವಾ, ನೀವು ಪಾತ್ರೆ ಅಲ್ಲಾಡ್ಸಿ. ಹೌದು, ಹಾಲು ಕಾದ ಕೂಡಲೇ ಸ್ಟವ್ ಆಫ್ ಮಾಡುವ ಬದಲು, ಪಾತ್ರೆಯನ್ನು ಕೊಂಚ ಎತ್ತಿ ಅಲ್ಲಾಡ್ಸಿ. ಹಾಲು ತನ್ನೆಲ್ಲ ಬೆದರಿಕೆ, ಆರ್ಭಟ ನಿಲ್ಲಿಸಿ ತೆಪ್ಪಗೆ ಕೆಳಗೆ ಹೋಗಿ ಕೂರುತ್ತದೆ. 

ನೀರು
ನೀರಿನ ಟ್ರಿಕ್ ಆಗ್ಲೇ ಹೇಳಿದ್ರಲ್ಲ ಅಂದ್ರಾ? ನೆನಪಿದೆ.. ಆದ್ರೆ ಈ ಟ್ರಿಕ್ ಸ್ವಲ್ಪ ಡಿಫ್ರೆಂಟ್. ಹಾಲಿಗೆ ನೀರು ಹಾಕುವಷ್ಟು ಜುಗ್ಗರಲ್ಲ ನಾವು ಎಂದು ವಾದಿಸುವವರಿಗೆ ಇದು. ಕಾಯುತ್ತಿರುವ ಹಾಲಿನ ಮೇಲೆ ಕೊಂಚ ನೀರಿನ ಹನಿಗಳನ್ನು ಚಿಮುಕಿಸಿ. ಕೂಡಲೇ ಹಾಲು ಹಾವು ಹೆಡೆ ಮಡಚಿಕೊಂಡಂತೆ ಭುಸ್ ಗಿಸ್ ಎಲ್ಲ ಬಿಟ್ಟು ಟುಸ್ಸ್.. ಎನ್ನುತ್ತದೆ. 

ಮರದ ಸೌಟು(wooden spatula)
ಹಾಲಿನ ಪಾತ್ರೆ ಮರದ್ದೋ, ಅಲ್ಯೂಮಿನಿಯಂನದೋ ಅಥವಾ ಸ್ಟೀಲ್‌ನದ್ದೇ ಆಗಿರಲಿ, ಕುದಿಯುವ ಹಾಲಿನ ಸೊಕ್ಕನ್ನು ಇಳಿಸುವ ಶಕ್ತಿ ಮರದ ಸೌಟಿಗಿದೆ. ಹೌದು, ಹೇಗೆ ಲಟ್ಟಣಿಗೆ ನೋಡಲು ನಿಮ್ಮ ಪತಿರಾಯ ಎಗರಾಡುವುದು ಬಿಟ್ಟು ತಣ್ಣಗಾಗುವರೋ, ಹಾಗೆಯೇ ಮರದ ಸೌಟನ್ನು ಪಾತ್ರೆಯ ಮೇಲೆ ಅಡ್ಡವಾಗಿಟ್ಟರೆ ಹಾಲು ಅದನ್ನು ನೋಡಿ ತೆಪ್ಪಗಾಗುತ್ತದೆ. 

ದೊಡ್ಡ ಪಾತ್ರೆ
ಒಂದ ಲೀಟರ್ ಹಾಲಿಗೆ ಅದನ್ನು ಪೂರ್ತಿ ತುಂಬಿಕೊಳ್ಳುವ ಪಾತ್ರೆಯಲ್ಲಿಟ್ಟು ಉಕ್ಕಲು ಚಾಲೆಂಜ್ ಮಾಡಿದರೆ ಅದೊಂದು ಸವಾಲೇ ಅಲ್ಲ. ಹಾಲಿನ ಅಳತೆಯ ಎರಡು ಪಟ್ಟು ದೊಡ್ಡ ಪಾತ್ರೆಯಿಟ್ಟು, ತಾಕತ್ತಿದ್ದರೆ ಈಗ ಉಕ್ಕು ಎನ್ನಿ ನೋಡೋಣ. ಎಗರಿ ಎಗರಿ ಸುಸ್ತಾಗಿ ಕುಸಿಯುವುದು ಹಾಲು. 

ಸ್ಟವ್
ನಿಮ್ ಕೈಯಿಂದ ಹಾಲುಕ್ಕುವುದು ತಪ್ಪಿಸಲು ಸಾಧ್ಯವೇ ಆಗುವುದಿಲ್ಲ ಎಂದರೆ ಸೋಲೊಪ್ಪಿಕೊಂಡು ಸ್ಟವ್‌ಗೆ ಅದನ್ನು ನಿಯಂತ್ರಿಸಲು ಹೇಳಿ ಉರಿಯನ್ನು ಸಣ್ಣ ಮಾಡಿಡಿ. ಹಾಲು ಉಕ್ಕುವುದು ಬಿಟ್ಟು ಕಮ್ಮನೆ ಕಾದು ರುಚಿ ಹೆಚ್ಚಿಸಿಕೊಳ್ಳುತ್ತದೆ.

ಏನಿಷ್ಟು ಸುಲಭವಾದ ಟ್ರಿಕ್ಸ್ ಹೇಳಿ ಬೆನ್ನು ತಟ್ಟಿಕೊಳ್ಳುತ್ತಿದ್ದೀರಾ ಎನ್ನಬೇಡಿ. ಇದೂ ಕೂಡಾ ಗೊತ್ತಿಲ್ಲದೆ ಹಾಲು ಉಕ್ಕಿಸುತ್ತಿದ್ದಿರಲ್ಲಾ ಅದಕ್ಕೇನನ್ನೋಣ?!

ರೇಶ್ಮಾ ರಾವ್ ಸೊನ್ಲೆ

28.2.17

manvi

ಶಾಶ್ವತ್ ಬಂದಿದ್ದ. ತನ್ನ ಎರಡನೇ ಮಗು ನಾಮಕರಣಕ್ಕೆ ಕರೆಯೋಕೆ. ಕಾಲೇಜ್‌ನಲ್ಲಿ ನನ್ನ ಸೀನಿಯರ್ ಅವ್ನ. ಮೊನ್ನೆ ಕತ್ರಿಗುಪ್ಪೆ ವಾಟರ್‌ಟ್ಯಾಂಕ್ ಹತ್ರ ಸಿಕ್ಕ ಮೇಲೆ ಮತ್ತೆ ನಂಬರ್‌ಗಳು ಎಕ್ಸ್‌ಚೇಂಜ್ ಆದವು. ಏನ್ ಹೆಸ್ರು ಇಡ್ತಿದೀರೋ ಕೇಳಿದ್ದಕ್ಕೆ ‘‘ನನ್ನ ಹೆಸರಿನ ಶಾ, ಅವಳ ಹೆಸರಿನ ನ್ವಿ ಸೇರಿಸಿ ಶಾನ್ವಿ ಅಂತಿಡೋಣ ಅಂತಾ’’ ಎಂದ. 
‘‘ಏನು ನಿಮ್ಮನೆಯೋರ ಹೆಸರು?‘‘
‘‘ಮಾನ್ವಿ.’’
ಆ ಒಂದು ಹೆಸರು ಅದೆಷ್ಟು ನೆನಪುಗಳನ್ನು ಮೇಲಕ್ಕೆಳೆದು ತಂತೋ! ಕೆಳಗೆ ಹೋಗಿದ್ದರೆ ತಾನೇ ಮೇಲೆ ಬರಲು. ಮಾನ್ವಿ, ನನ್ನ ಪ್ರೀತಿಯ ಮಾನು ಪ್ರತಿದಿನ ಕಾಲೇಜಿಗೆ ಹೋಗುವ ಸಮಯ. ಬೆಳಗ್ಗೆ 8.30ಕ್ಕೆ ಆ ಹನುಮಾನ್ ಬಸ್ಸಿನ ಮುಂದಿನಿಂದ ನಾಲ್ಕನೇ ಸೀಟಿನ ಕಿಟಕಿ ಪಕ್ಕ ಅವಳು ಇದ್ದೇ ಇರುತ್ತಿದ್ದಳು. ಅದಕ್ಕೆಂದೇ 10 ಗಂಟೆಯ ಕ್ಲಾಸಿಗೆ ಒಂದೂವರೆ ಗಂಟೆ ಮುಂಚೆಯೇ ಬಸ್ಸು ಹತ್ತುತ್ತಿದ್ದೆ. ಚೆಂದದ ಚೂಡಿಧಾರ್ ಹಾಕಿ ಕುಳಿತುಕೊಂಡಿರುತ್ತಿದ್ದ ಅವಳು ಬಹಳ ಡೀಸೆಂಟ್ ಎನಿಸುತ್ತಿದ್ದಳು. ತೆಳ್ಳಗೆ, ಬೆಳ್ಳಗೆ, ಉದ್ದಕೆ... ಆಹಾ! ಇನ್ನೂ ಆ ರೂಪ ಕಣ್ಮುಂದೆ ಕಟ್ಟಿದಂತಿದೆ. ಅವಳ ಉದ್ದ ರೆಪ್ಪೆಯ ಕಂದು ಬಣ್ಣದ ಕಣ್ಣುಗಳು ಹೊರಗೆಲ್ಲೋ ನೋಡುತ್ತಿದ್ದರೂ ನನ್ನನ್ನೇ ಗಮನಿಸುತ್ತಿದ್ದಾಳೆಂದು ನನಗನ್ನಿಸುತ್ತಿದ್ದಿದ್ದರಿಂದ ನನ್ನೊಳಗೆ ದಿನ ದಿನ ಸಂಭ್ರಮ ಉಕ್ಕೇರುತ್ತಿತ್ತು. ಕೈಗೊಂದು ಅಗಲ ಮುಖದ ವಾಚ್. ಅವಳ ಉದ್ದ ಜೆಡೆ- ಬಸ್ಸಿಳಿದು ನಡೆವಾಗ ಆ ಕಡೆ ಈ ಕಡೆ ಆಡುವ ರೀತಿ ನನಗೇ ಟಾಟಾ ಮಾಡುತ್ತಿದ್ದಾವೆನೋ ಎನಿಸುತ್ತಿತ್ತು. ಮತ್ತೆ ಸಂಜೆ ಮನೆಗೆ ಹೋಗುವಾಗ ಇವೇ ಸೀನ್‌ಗಳು ರಿಪೀಟ್ ಆಗುತ್ತಿದ್ದವು. 
ಆಗುತ್ತಿದ್ದುದು ಇಷ್ಟೇ ಆದರೂ ನಾನಾಗಲೇ ಅವಳ ಬಗ್ಗೆ ನೂರಾರು ಕನಸು ಕಂಡಿದ್ದೆ. ಇವಳ ಧ್ವನಿ ಯಾವಾಗ ಕೇಳುವೆನೋ ಎಂದು ಕಾತರದಲ್ಲಿ ಕಾಯುತ್ತಿದ್ದೆ. ಪಾಸ್ ಇರುತ್ತಿದ್ದುದ್ದರಿಂದ ಟಿಕೆಟ್‌ಗಾಗಿ ಕೂಡಾ ಅವಳು ಬಾಯಿ ಬಿಡಬೇಕಾದ ಸಂದರ್ಭ ಬರುತ್ತಿರಲಿಲ್ಲ. ಅದೊಂದು ದಿನ, ಕೇವಲ ದಿನವಲ್ಲ, ಸುದಿನ- ಮನೆಯ ಫೋನ್ ರಿಂಗಾದಾಗ ಎಂದಿನಂತೆ ನಾನೇ ಮುಂಚೆ ಓಡಿ ರಿಸೀವ್ ಮಾಡಿದ್ದೆ.
‘‘ಹಲೋ ನಚಿಕೇತ್, ನಿಮಗೆ ಬಯಾಲಜಿ ಎರಡನೇ ಚಾಪ್ಟರ್ ನೋಟ್ಸ್ ಬೇಕು ಅಂತಿದ್ರಲ್ಲಾ, ನನ್ನ ಹತ್ರ ಇದೆ. ಕಾಲೇಜ್ ಹತ್ರ ಬಂದು ಕಲೆಕ್ಟ್ ಮಾಡಿಕೊಳ್ಳಿ. ಬಸ್‌ನಲ್ಲಿ ಬೇಡ, ಯಾರಾದರೂ ನೋಡಿದರೆ ಕಷ್ಟ’’
‘‘ಯಾರಿದು?’’
‘‘ನಾನು ಮಾನ್ವಿ.’’
ಮಾನ್ವಿನಾ!!!!!!
ನನಗೆ ತಲೆಗೆ ಹೋಗುವಷ್ಟರಲ್ಲಿ ಅವಳು ಕಾಲ್ ಕಟ್ ಮಾಡಿದ್ದಳು. ಮಾನ್ವಿನೇ ನನಗೆ ಕಾಲ್ ಮಾಡಿದಳಾ? ನನ್ನ ಮಾನು?! ಜಾನು.... ನಾನಂತೂ ಅವತ್ತು ಈ ಭೂಮಿಯ ಮೇಲೆ ಇರಲಿಲ್ಲ. ಪ್ರತಿದಿನ ನೋಡಿದರೂ ಕೇಳದ ಧ್ವನಿಯನ್ನು ಫೋನ್‌ನಲ್ಲಿ ಕೇಳಿದ್ದೆ. 
ತಲೆ ತುಂಬ ನೋಟ್ಸ್ ತೆಗೆದುಕೊಳ್ಳುವಾಗಿನ ಸಂದರ್ಭದ ನೂರು ನೂರು ಕನಸು. ಏನು ಮಾತಾಡಬೇಕು, ಯಾವ ಬಟ್ಟೆ ಹಾಕಿಕೊಂಡು ಹೋಗಬೇಕು ಇತ್ಯಾದಿ ಯೋಚನೆಗಳು.
ಮರುದಿನ ಬಸ್ ಹತ್ತಿದಾಗ ಅವಳೆಡೆ ನೋಡಿದೆ. ನನ್ನತ್ತ ಕಣ್ಣು ಹಾಯಿಸಿ ಚಿಕ್ಕದೊಂದು ನಗೆ ಸೂಸಿದವಳು, ನಂತರ ಎಂದಿನಂತೆ ಹೊರಗೆ ನೋಡುತ್ತಾ ಕುಳಿತಳು. 
ಕಮಲಾ ನೆಹರೂ ಕಾಲೇಜ್ ಸ್ಟಾಪ್‌ನಲ್ಲಿ ಇಳಿದಳು. ನಾನೂ ಇಳಿದೆ. ಅವಳು ತಿರುಗಿ ನೋಡಲಿಲ್ಲ. ಸೀದಾ ಕಾಲೇಜ್ ಕ್ಯಾಂಪಸ್‌ನೊಳಗೆ ನಡೆದು ಹೋದಳು. 
ನನಗೆ ಭಯ ಆಗಲು ಶುರುವಾಯಿತು. ನಿಜವಾಗಿಯೂ ಇವಳೇ ಫೋನ್ ಮಾಡಿದ್ದಾ ಅಥವಾ ಬೇರೆ ಯಾರೋ ಆಟ ಆಡ್ಸೋಕೆ ಹೀಗೆ ಮಾಡಿದ್ರಾ? ಅವಳೇ ಮಾಡಿದ್ದಾದ್ರೆ ಹೀಗೆ ಇಲ್ಲಿ ನನ್ನ ನೋಡದವಳಂತೆ ಒಳ ಹೋಗುತ್ತಿದ್ದಳೇ? ಫೋನ್ ಮಾಡಿದವಳು ಇವಳಲ್ಲದಿದ್ದರೆ ಬಸ್‌ನಲ್ಲಿ ಸ್ಮೈಲ್ ಏಕೆ ಕೊಡುತ್ತಿದ್ದಳು? ನನಗೆ ಭಯ ಆಗಲು ಇನ್ನೊಂದು ಕಾರಣವಿತ್ತು. ಅದು ಕೇವಲ ಹುಡುಗಿಯರ ಕಾಲೇಜ್. ಮೊದಲೇ ಹುಡುಗಿಯರ ಪ್ರಪಂಚ ಅರಿಯದ ವಯಸ್ಸು. ಸುಮ್ಮನೇ ಅವಳ ಟಾಟಾ ಮಾಡುವ ಜೆಡೆ ನೋಡುತ್ತಾ ನಿಂತೆ. ಕಾಲೇಜ್ ಕಟ್ಟಡದ ಹತ್ತಿರ ಹೋದವಳು ಒಮ್ಮೆ ತಿರುಗಿ ನೋಡಿ ಬಾ ಎಂಬಂತೆ ಸನ್ನೆ ಮಾಡಿದಳು. ನಾನು ಒಳಗೊಳಗೇ ಹಾರಾಡುತ್ತಾ, ಎದುರಿಗೆ ಮಾತ್ರ ಡೀಸೆಂಟ್ ಆಗಿ ನಡೆದುಹೋದೆ. 
ಅಲ್ಲಲ್ಲಿ ಕುಳಿತ ಹುಡುಗಿಯರ ಗುಂಪು ಕಾಮೆಂಟ್ ಪಾಸ್ ಮಾಡಿ ನಗುತ್ತಿದ್ದರು. ಬಹುಸಂಖ್ಯಾತರಿದ್ದೀರಾ, ಮಾಡಿ, ಮಾಡಿ... ನಂಗೂ ಒಂದೂ ಕಾಲ ಬರುತ್ತಂತ ಅಂದುಕೊಳ್ಳುತ್ತಾ ಮುಂದೆ ಹೋದೆ. 
ನೋಟ್ಸ್ ಕೊಟ್ಟಳು.
‘‘ನಿನಗೆ ಹೇಗೆ ಗೊತ್ತಾಯ್ತು ನನಗೆ ಈ ನೋಟ್ಸ್ ಬೇಕಂತ?’’
‘‘ಮೊನ್ನೆ ಸಂಜೆ ನೀನು ಬಸ್‌ನಲ್ಲಿ ಫ್ರೆಂಡ್ಸ್ ಹತ್ರ ಕೇಳ್ತಿದ್ಯಲ್ಲಾ....’’
‘‘ನಮ್ಮನೆ ನಂಬರ್ ಎಲ್ಲಿ ಸಿಕ್ತು?’’
‘‘ಫೋನ್ ಡೆರೆಕ್ಟರಿಲಿ.’’
ಮುಂದೇನು ಕೇಳೋದೋ ಗೊತ್ತಾಗದೇ ‘‘ಥ್ಯಾಂಕ್ಸ್’’ ಎಂದೆ. ‘‘ವೆಲ್‌ಕಮ್’’ ಎಂದಳು. 
ನಾ ತಿರುಗಿ ನಡೆದೆ. ಅವತ್ತು ಕಾಲೇಜ್‌ಗೆ ಹೋಗಲೇ ಇಲ್ಲ.
ಇಲ್ಲಿ ನಡೆದ ಮೂರು ಮತ್ತೊಂದು ಸಂಭಾಷಣೆಯನ್ನು ಮೆಲುಕು ಹಾಕಲು ಮನಕ್ಕೆ ಅರ್ಜೆಂಟ್ ಆಗಿತ್ತು. ಆ ದಿನ ಹೇಗೆ ಕಳೆದೆನೋ ಗೊತ್ತಾಗಲೇ ಇಲ್ಲ.
ಮರುದಿನದಿಂದ ಬಸ್‌ನಲ್ಲಿ ಒಂದು ಸ್ಮೈಲ್, ಆಗಾಗ ಒಂದೊಂದು ಮಾತು ಶುರುವಾಯಿತು. ಆಗೆಲ್ಲ ನನ್ನ ಹೃದಯ ದೇಹದಿಂದ ಹೊರ ಬಂದು ಕಿವಿ ಪಕ್ಕ ನಿಂತು ಬಡಿದುಕೊಳ್ಳುತ್ತಿದೆಯೇನೋ ಅನ್ನಿಸುವುದು. ಆಗಿನ ಹಾಗೂ ಇಲ್ಲೀವರೆಗಿನ ನನ್ನ ಪ್ರಪಂಚದಲ್ಲಿ ಸುಂದರಿ ಎಂಬುದರ ಮೂರ್ತರೂಪ ಮಾನ್ವಿ ಒಬ್ಬಳೇ. ಯಾರು ಯಾರ ಬಗ್ಗೆಯೇ ಸುಂದರಿ ಎನ್ನಲೀ, ನನಗೆ ಮಾನ್ವಿಯ ರೂಪ ಕಣ್ಮುಂದೆ ನಿಲ್ಲುತ್ತದೆ. 
ಇದು ಹೀಗೆಯೇ ಒಂದು ವರ್ಷ ಕಳೆಯಿತು. ಪಿಯುಸಿ ಮುಗಿದಿತ್ತು. ನಾ ಮುಂದಿನ ಓದಿಗೆ ಬೆಂಗಳೂರಿನತ್ತ ಮುಖ ಮಾಡಿದ್ದೆ. ಮೊಬೈಲ್ ಫೋನ್ ಇರಲಿಲ್ಲ. ಊರಿಗೆ ಹೋದಾಗ ಮಾನ್ವಿಗೆ ಕಾಲ್ ಮಾಡುತ್ತಿದ್ದೆ. ಅವರಪ್ಪನೋ, ಅಮ್ಮನೋ ಎತ್ತಿದರೆ ಕಾಲ್ ಕಟ್ ಮಾಡುತ್ತಿದ್ದೆ. ಹಾಗಾಗಿ ನಂತರದ ವರ್ಷಗಳಲ್ಲಿ ಒಂದೆರಡು ಬಾರಿ ಮಾತಾಡಿದೆವೇನೋ. ಹಾಗಂತ ಮಾನ್ವಿ ನನ್ನ ಎಂದಿನ ಕನಸಿನ ಹುಡುಗಿಯಾಗಿ ಉಳಿದಿದ್ದಳು. 
ಬಳಿಕ ಒಂದು ದಿನ ಊರಿಗೆ ಹೋದಾಗ ಮನೆಗೆ ನನ್ನ ಹುಡುಕಿಕೊಂಡು ಒಬ್ಬ ಯುವಕ ಬಂದಿದ್ದ. 
‘‘ನಾನು ಮಾನ್ವಿಯ ತಮ್ಮ. ಅಕ್ಕ ಇದನ್ನು ನಿಮಗೆ ಕೊಟ್ಟುಬರಲು ಹೇಳಿದಳು’’ ಎಂದು ಹೇಳಿ ಕಾರ್ಡ್ ನೀಡಿದ. ಮಾನ್ವಿಯ ಮದುವೆಯದು! ಯಾಕೋ ಗೊತ್ತಿಲ್ಲ, ನಾ ಆ ಕಾರ್ಡನ್ನು ಡೇಟ್ ಕೂಡಾ ನೋಡದೆ ಅಲ್ಲೇ ಹರಿದುಬಿಟ್ಟೆ. ಇದಾಗಿ ವರ್ಷಗಳೇ ಕಳೆದವು. 
-----
ಶಾಶ್ವತ್ ಮನೆಯ ಫಂಕ್ಷನ್‌ಗೆ ಹೋದೆ. ಕಣ್ಣುಗಳು ಅವನ ಹೆಂಡತಿಯನ್ನು ನೋಡಲು ಕಾತರಿಸಿದವು. ಪರಿಚಯ ಮಾಡಿಸಲು ಆತ ಅವಳನ್ನು ಕರೆದ.
ಕುತ್ತಿಗೆ ಸೊಂಟಗಳಲ್ಲಿ ಬೊಜ್ಜು ತುಂಬಿರುವ, ದಪ್ಪನೆಯ ಗರತಿ. ಬಾಬ್‌ಕಟ್ ಮಾಡಿಸಿಕೊಂಡಿದ್ದಾರೆ. ಮಗುವನ್ನು ಕಂಕುಳಲ್ಲಿ ಹಾಕಿಕೊಂಡು ಬಂದರು. ಹತ್ತಿರ ಬಂದಾಗಲೇ ಗೊತ್ತಾಗಿದ್ದು, ಅವಳೇ ಇವಳು!! 
ಯಾಕೋ ಗೊತ್ತಿಲ್ಲ, ಇಬ್ಬರೂ ಪರಿಚಯವಿಲ್ಲದವರಂತೆ ನಟಿಸಿದೆವು. ಊಟ ಮಾಡಿ, ಮಗುವಿನ ಕೈಗೆ ದುಡ್ಡನ್ನಿತ್ತು ಮನೆಗೆ ಬಂದೆ. 
 ಇದುವರೆಗೂ ಅಮ್ಮ ಮದುವೆಯಾಗು ಎಂದಾಗಲೆಲ್ಲ ಬಸ್‌ನಲ್ಲಿ ಕುಳಿತು ಹೊರಗೆ ನೋಡುತ್ತಿದ್ದ ಮಾನ್ವಿಯೇ ಕಣ್ಮುಂದೆ ಬರುತ್ತಿದ್ದಳು. ಆದರೀಗ ಅದೇಕೋ ಒಂದೇ ದಿನದಲ್ಲಿ ಮಾನ್ವಿಯೆಡೆಗಿನ ನನ್ನ ಆಕರ್ಷಣೆಗಳೆಲ್ಲವೂ ಉದುರಿಬಿದ್ದವು. ಅವಳ ಕಳೆದು ಹೋದ ಆ ಜೆಡೆ ನನ್ನತ್ತ ನೋಡಿ ಕಡೆಯದಾಗಿ ಎಂಬಂತೆ ಜೋರಾಗಿ ಟಾಟಾ ಮಾಡುತ್ತಿತ್ತು. 
ನಾ ಆಗಿನ್ನೂ ಪಿಯುಸಿ. ಪ್ರೀತಿಸಲು ಚೆಂದದಾಚೆಗೆ ಅವಳ ಬಗ್ಗೆ ಅಷ್ಟೊಂದು ಯೋಚಿಸಿಯೇ ಇರಲಿಲ್ಲ. ಹೀಗಾಗಿ ಹುಡುಗಿಯರ ಚೆಂದಕ್ಕೆ ಅವಳು ಮಾನದಂಡವಾಗಿದ್ದಳು. ಈಗ ಅಂದಚೆಂದಕ್ಕೆ ಕೂಡಾ ಅವಳನ್ನು ಕಲ್ಪಿಸಿಕೊಳ್ಳಲಾಗಲಿಲ್ಲ. ಅವಳ ಇನ್ಯಾವ ಗುಣಗಳೂ ನನಗೆ ಗೊತ್ತಿರಲಿಲ್ಲ. ಹಾಗಾಗಿಯೋ ಏನೋ ಮಾನ್ವಿ ಮನದ ಪರದೆಯಿಂದಾಚೆ ಸರಿದಳು ಎಂದುಕೊಳ್ಳುತ್ತಿದ್ದೆ. ಅಷ್ಟರಲ್ಲಿ ಅಮ್ಮ ಫೋಟೋವೊಂದನ್ನು ಹಿಡಿದು ತಂದು ಮುಂದಿಟ್ಟಳು. 
‘‘ಶಾರದಮ್ಮನ ಅಕ್ಕನ ಮಗಳಂತೆ. ಸ್ವಲ್ಪ ಕಪ್ಪು. ಚೂರು ಕುಳ್ಳಗಿದ್ದಾಳೆ. ಆದ್ರೆ ಅಂದಚೆಂದ ಎಲ್ಲ ಎರಡು ಮಕ್ಕಳಾಗುವವರೆಗೆ. ಅದ್ರ ಬಗ್ಗೆ ಯೋಚಿಸ್ಬೇಡ. ಒಮ್ಮೆ ಭೇಟಿಯಾಗಿ ಗುಣ, ಶಿಕ್ಷಣ, ಮಾತು ಮನಸ್ಸು ನೋಡಿ ಓ.ಕೆ.ನಾ ಹೇಳು. ಸರೀನಾ?’’

6.1.17

ಉಡುಪಿನ ಲೋಪ ಹುಡುಕುವ ನಿಮ್ಮ ಮನಸ್ಥಿತಿಗೆ ಧಿಕ್ಕಾರ

ಅದು ವಾಘಾ ಬಾರ್ಡರ್‌. ಭಾರತ ಪಾಕಿಸ್ತಾನದ ಗಡಿ ಬಾಗಿಲನ್ನು ತೆರೆವ ಸಮಯ. ಈ ಕಡೆಯಿಂದ ಇಂಡಿಯಾ ಜಿಂದಾಬಾದ್‌ ಕೂಗು, ಆ ಕಡೆಯಿಂದ ಪಾಕಿಸ್ತಾನ್‌ ಜಿಂದಾಬಾದ್‌, ಭಾರತ್‌ ಮುರ್ದಾಬಾದ್‌ ಅಬ್ಬರ... ಎಂಥವರ ಮೈಯ್ಯಲ್ಲೂ ದೇಶಭಕ್ತಿಯೆಂಬುದು ಜಾಗೃತವಾಗಿ ಉಕ್ಕುವಂಥ ಸನ್ನಿವೇಶ. ಜನಸಂದಣಿಯ ಸುತ್ತಲೂ ನಮ್ಮ ಸೈನಿಕರು, ನಡುವೆ ತಲೆ ಹಾಕಿ ಪಾಕಿಸ್ತಾನವನ್ನು ನೋಡುವ ಕಾತರದಲ್ಲಿ ಒದ್ದಾಡುತ್ತಿದ್ದ ನಾವು.... ಇದ್ದಕ್ಕಿದ್ದಂತೆ ನನ್ನ ಗೆಳತಿ, ಬೇಗ ಹೊರಗೆ ಹೋಗಣ... ಇಲ್ಯಾರೂ ಸರಿಯಿಲ್ಲ ಎನ್ನಲು ಶುರು ಮಾಡಿದಳು. ಯಾಕೆಂದು ನೋಡುವ ಹೊತ್ತಿಗೆ ಸಿಕ್‌ ಮೈಂಡೆಡ್‌ ಯುವಕನೊಬ್ಬ ಅವಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ. ಮುಖ ಮಾತ್ರ ಎತ್ತರಿಸಿಕೊಂಡು ಗಡಿಯ ಗೇಟ್‌ ಬಳಿ ನೋಡುತ್ತಾ ಸಭ್ಯನಂತೆ ನಿಂತಿದ್ದ. ಭಾಷೆ ಬರದ ನಾವು ಅತ್ತೂ ಕರೆದು, ಸೈನಿಕರೊಬ್ಬರ ಸಹಾಯ ಪಡೆದು ಜನಜಂಗುಳಿಯಿಂದಾಚೆ ಹೋದೆವು. ಇಷ್ಟಕ್ಕೂ ಆಕೆಯೇನೂ ಪ್ರಚೋದನಾಕಾರಿ ಉಡುಗೆ ಧರಿಸಿರಲಿಲ್ಲ. ಅಮೃತಸರದಲ್ಲಿ ಆಗಿದ್ದ ಚಳಿ 9 ಡಿಗ್ರಿ ಸೆಲ್ಶಿಯಸ್‌. ದಪ್ಪ ಕೋಟ್‌ ಹಾಕದೆ ನೆಟ್ಟಗೆ ನಿಲ್ಲುವುದೂ ಸಾಧ್ಯವಿರಲಿಲ್ಲ. ಅದೇನು ಹೊಸ ವರ್ಷದ ಪಾರ್ಟಿಯೂ ಅಲ್ಲ, ರಾತ್ರಿಯೂ ಅಲ್ಲ, ಯಾರೂ ಕುಡಿದಿರಲೂ ಇಲ್ಲ, ಉಡುಪಿನಲ್ಲೂ ಲೋಪವಿರಲಿಲ್ಲ... ಹಾಗಿದ್ದೂ ಆ ಸ್ಫುರದ್ರೂಪಿ, ವಿದ್ಯಾವಂತನಂತೆ ಕಾಣುತ್ತಿದ್ದ ವಿಕೃತನಿಗೆ ಅವಳ ಬಟ್ಟೆ ಮೇಲೆ ಕೈಯಾಡಿಸುವ ವಾಂಛೆ ಹುಟ್ಟಿದ್ದು ಹೇಗೆ? ಆತನಿಗೆ ಕುಟುಂಬದಿಂದ ಒಳ್ಳೆಯ ಸಂಸ್ಕಾರ ಸಿಕ್ಕಿರಲಿಲ್ಲ ಇಲ್ಲವೇ ಆತನೊಬ್ಬ ಸೈಕೋಪಾತ್‌ ಎಂಬುದರ ಹೊರತಾಗಿ ನನಗಿನ್ಯಾವ ಕಾರಣವೂ ಇಲ್ಲಿ ಸಿಗುತ್ತಿಲ್ಲ. ಬೆಂಗಳೂರಿನ ಹೊಸ ವರ್ಷಾಚರಣೆಯ ಕಹಿ ಘಟನೆ, ಕಮ್ಮನಹಳ್ಳಿಯ ಗ್ರೋಪಿಂಗ್‌ ಪ್ರಕರಣದ ಬಳಿಕ, ಇಂಥ ಕೆಟ್ಟ ಘಟನೆಗಳು ಕರಗದಲ್ಲಾಗಲ್ಲ, ಕಡ್ಲೆಕಾಯಿ ಪರಿಷೆಯಲ್ಲಾಗಲ್ಲ, ಅವರೆಕಾಳು ಮೇಳದಲ್ಲಾಗಲ್ಲ, ಕನ್ನಡಿಗರು ಇದ್ದಲ್ಲಾಗಲ್ಲ ಅಂತೆಲ್ಲ ಹೊಸ ತರದಾದ ವಿಚಿತ್ರ ಸಮರ್ಥನೀಯ ವಾದಗಳು ಹುಟ್ಟಿಕೊಂಡಿವೆ. ಯಾರು ಸ್ವಾಮಿ ಹೇಳಿದ್ದು ಕರಗದಲ್ಲಾಗಲ್ಲ ಅಂತ? ಕರಗದಲ್ಲೂ ಆಗುತ್ತೆ, ಪರಿಷೆಯಲ್ಲೂ ಆಗುತ್ತೆ, ಬಸ್‌ನಲ್ಲೂ ಆಗುತ್ತೆ, ಬಸ್‌ಸ್ಟ್ಯಾಂಡ್‌ನಲ್ಲೂ ಆಗುತ್ತೆ. ಅಷ್ಟೇ ಏಕೆ? ಮನೆಯೊಳಗೇ ಎಷ್ಟೊಂದೆಲ್ಲ ಆಗುತ್ತದೆ, ಹೊರಜಗತ್ತಿಗೆ ಎಂದಿಗೂ ಬಹಿರಂಗವಾಗದ್ದು... ಯಾರೂ ಬಂದು ನಿಮಗೆ ಹೇಳಿಕೊಳ್ಳೋಲ್ಲ ಅಷ್ಟೆ. ಏಕೆಂದರೆ ಇಂಥ ಕೃತ್ಯದಲ್ಲಿ ತೊಡಗುವ ಗಂಡಸರಿಗೆ ಮಾನವಿಲ್ಲವೆಂಬುದು ಹೆಣ್ಣುಮಕ್ಕಳಿಗೆ ಗೊತ್ತು. ಸಂತ್ರಸ್ತೆಯಾದರೂ ತಮ್ಮ ಮೇಲೆ ಗೂಬೆ ಕೂರಿಸಿ ಮಾನ ತೆಗೆಯುತ್ತಾರೆಂಬುದೂ ಗೊತ್ತು. ಹೀಗಾಗಿ ಬಾಯ್ಬಿಡದೆ ತಮ್ಮೊಳಗೇ ಕಹಿಯೊಂದನ್ನು ಹೂತು ಹಾಕುವ ಹೆಣ್ಮಕ್ಕಳೇ ಹೆಚ್ಚು. ಒಂದು ವೇಳೆ ಪೋಷಕರಲ್ಲಿ ಹೇಳಿಕೊಂಡರೂ, ಮದುವೆಯಾಗಬೇಕಾದ ಹುಡುಗಿ, ಯಾರು ಹೆಣ್ಣು ಕೊಡುತ್ತಾರೆ, ಮನೆ ಮಾನ ಹೋಗುತ್ತದೆ ಇತ್ಯಾದಿ ಆತಂಕಗಳಿಂದ ತಾವೂ ಕೊರಗಿ, ಅವಳಲ್ಲೂ ಆತಂಕ ಹುಟ್ಟಿಸಿ ಬಾಯಿ ಮುಚ್ಚಿಸಿಬಿಡುತ್ತಾರೆ. ಅಪ್ಪನೇ ಮಗಳ ಮೇಲೆ ಅತ್ಯಾಚಾರವೆಸಗಿದ್ದು, ಅಣ್ಣನಿಂದಲೇ ತಂಗಿ ಬಸಿರಾದದ್ದು, ಶಿಕ್ಷ ಕನೇ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, 2 ವರ್ಷದ ಕೂಸಿನ ಮೇಲೆ ಅತ್ಯಾಚಾರದಂಥ ಘಟನೆಗಳು ಆಗಾಗ ರಿಪೋರ್ಟ್‌ ಆಗುತ್ತವಲ್ಲಾ... ಅದು ಹೇಗೆ ಆ ಮಗು ಇವರನ್ನು ಪ್ರಚೋದಿಸಿರುತ್ತದೆ? ಅದು ಹೇಗೆ ಪ್ರತಿ ವರ್ಷ ರಾಖಿ ಕಟ್ಟಿಸಿಕೊಂಡ ಅಣ್ಣನಿಗೆ ತಂಗಿಯ ಮೇಲೆ ಅಂಥದೊಂದು ಯೋಚನೆ ಹುಟ್ಟುತ್ತದೆ? ಬಸ್‌ನಲ್ಲಿ ಹೆಣ್ಣಿನ ಪಕ್ಕ ಕುಳಿತು ಡೀಸೆಂಟ್‌ ಮುಖ ಹಾಕಿಕೊಂಡು ಕೈಕಟ್ಟಿ ನಿದ್ದೆ ಮಾಡುವ ಸೋಗಿನ ಅದೆಷ್ಟು ಅಂಕಲ್‌ಗಳು 'ಕರಕುಶಲ ಕಲೆ'ಯಲ್ಲಿ ನಿಸ್ಸೀಮರೆಂಬುದು ಹುಡುಗಿಯರ ಜಗತ್ತಿಗೆ ಗೊತ್ತಿದೆ. ರಶ್ಶಿದೆ ಎಂಬ ಮಾತ್ರಕ್ಕೆ ಹುಡುಗಿಯ ಮೈಗೆ ವಾಲಿಕೊಂಡು ನಿಲ್ಲುವ ಹುಡುಗರ ಭಂಡತನದ ಬಗ್ಗೆಯೂ ಹುಡುಗಿಯರಿಗೆ ಗೊತ್ತಿದೆ. ಸೆಲ್ಫೀ ತೆಗೆದುಕೊಳ್ಳುವ ನೆಪದಲ್ಲಿ ರಸ್ತೆಯಲ್ಲಿ ಫೋಟೋ ತೆಗೆದುಕೊಂಡು ಹೋದ ಹುಡುಗನ ಕೆಲಸ ಆಕೆಗೆ ತಿಳಿಯುತ್ತದೆ. ಆದರೆ, ಇಲ್ಲೆಲ್ಲ ಪಕ್ಕಾ ಪರ್ಫೆಕ್ಟ್ ಆಗಿ ವಾದಿಸಲಾಗದಂತೆ ಹುಡುಗರು ಚಾಲಾಕಿತನ ಮೆರೆದಿರುತ್ತಾರೆ. ನನ್ನ ಫೋಟೋ ತೆಗೆದೆ ಎಂದರೆ, ತಾನು ಸೆಲ್ಫೀ ತೆಗೆದುಕೊಂಡೆನೆಂದು ಆಗ ತಾನೇ ತೆಗೆದ ಮತ್ತೊಂದು ಫೋಟೋ ತೋರಿಸುತ್ತಾನೆ, ಮೈಮೇಲೆ ಬೀಳಬೇಡವೆಂದರೆ ತಳ್ಳುತ್ತಿದ್ದಾರೆನ್ನುತ್ತಾನೆ... ಸುಳ್ಳಿಗೇ ನಿಲ್ಲುವುದಿಲ್ಲವಲ್ಲ ಆತನ ಓರಲ್‌ ಡಯೇರಿಯಾ... ಜೊತೆಗೆ ಒಂದಿಷ್ಟು ಕೆಟ್ಟ ಪದಗಳನ್ನುಗುಳಿ ಆಕೆಯ ನಡತೆ ಮೇಲೆ ಗೂಬೆ ಕೂರಿಸಿದರೆ ಮತ್ತೆ ಜನರ್ಯಾರೂ ಅವಳ ಮಾತನ್ನು ನಂಬುವುದಿಲ್ಲ. ಇದಕ್ಕೇ ಆಕೆ ಬಾಯಿ ತೆಗೆಯಲು ಹೆದರುವುದು. ಅಂಥದರಲ್ಲಿ ಇಲ್ಲಿ ಕೆಲವು ಹುಡುಗಿಯರು ಬಾಯಿ ತೆರೆದಿದ್ದಾರೆ. ತನ್ನ ತಪ್ಪಿಲ್ಲವೆಂಬ ಧೈರ್ಯದಿಂದಲೇ ಹೇಳುತ್ತಿದ್ದೇನೆ ಎಂದು ಕೂಡಾ ದೌರ್ಜನ್ಯಕ್ಕೊಳಗಾದ ಯುವತಿಯೊಬ್ಬಳು ಹೆಸರು ಸಮೇತ ತಿಳಿಸಿದ್ದಾಳೆ. ಹಾಗೆ ಹೇಳಲು ಅದೆಷ್ಟು ಧೈರ್ಯ, ನೈತಿಕತೆ ಬೇಕು? ಅವಳು ಗೋಳು ಹೇಳಿಕೊಳ್ಳುತ್ತಿದ್ದರೆ, ಅವಳು ಯಾವ ಬಟ್ಟೆ ತೊಟ್ಟಿದ್ದಳು? ಗಂಟೆ ಎಷ್ಟಾಗಿತ್ತು? ಇವಳೇಕೆ ಅಲ್ಲಿ ಹೋಗಬೇಕಿತ್ತು? ಕುಡಿದಿದ್ದಳಾ? ಇತ್ಯಾದಿ ಪ್ರಶ್ನೆಗಳು ನಿಮಗೆ ಮೂಡಿದ್ದರೆ ದಯವಿಟ್ಟು ನಿಮ್ಮ ಮನಸ್ಥಿತಿ ಬದಲಿಸಿಕೊಳ್ಳಿ. ಅವನೇಕೆ ಅಷ್ಟು ಹೊತ್ತಿನಲ್ಲಿ ಅಲ್ಲಿದ್ದ? ಕುಡಿದದ್ದು ತಪ್ಪಲ್ಲವಾ? ಅದ್ಯಾವ ಭಂಡತನದಿಂದ ಅವನು ಹುಡುಗಿಯ ಮೈಮೇಲೆ ಕೈ ಹಾಕಬಲ್ಲ? ಅಷ್ಟು ರಾತ್ರಿಯಲ್ಲೂ ಎಂಥ ಪಾರ್ಟಿ? ಅವನು ಅವಕಾಶಕ್ಕಾಗಿ ಕಾಯುತ್ತಲೇ ಅಲ್ಲಿ ಹೋಗಿದ್ದನಾ? ಇಂಥ ಪ್ರಶ್ನೆಗಳನ್ನು ಮೊದಲು ಕೇಳಿಕೊಳ್ಳಿ. ನಿಜವಾಗಿಯೂ ಬಟ್ಟೆ ಅಥವಾ ನಡತೆ ಪ್ರಚೋದನಾಕಾರಿಯಾಗಿರಬೇಕಿಲ್ಲ, ಅಲ್ಲಿರುವುದು ಹುಡುಗಿ ಎಂಬ ಒಂದು ವಿಷಯ ಸಾಕು, ಇವರು ಪ್ರಚೋದನೆಗೊಳಗಾಗಲು. ತಾವು ಮಾಡುವುದು ಯಾರಿಗೂ ಗೊತ್ತಾಗುವುದಿಲ್ಲವೆಂದರೆ, ಅವಕಾಶ ಸಿಕ್ಕಿತೆಂದರೆ ಅದೆಷ್ಟು 'ಗೋಮುಖ'ದ ದೇಹದಿಂದ 'ವ್ಯಾಘ್ರ'ಮನಸ್ಥಿತಿಗಳು ಹೊರಬರುತ್ತವೋ ತಿಳಿಯದು. ಬಟ್ಟೆ ಗಿಡ್ಡಕೆ ಹಾಕುವುದು ನಮ್ಮ ಸಂಸ್ಕೃತಿಯಲ್ಲ. ಸರಿ, ಹಾಗೆಯೇ ಪಾಶ್ಚಾತ್ಯ ಉಡುಗೆ ಹಾಕಿದ ಹೆಣ್ಮಕ್ಕಳನ್ನು ಬೇಕೆಂದಂತೆ ಮುಟ್ಟುವುದು ನಮ್ಮ ಸಂಸ್ಕೃತೀನಾ? ಅವಳಿಗೆ ಅರ್ಧ ರಾತ್ರಿ ಹೊರ ಹೋಗಬೇಡ ಎನ್ನುವುದು ಸರಿಯೆಂದೇ ಒಪ್ಪಿಕೊಳ್ಳೋಣ. ಆದರೆ ಅದನ್ನು ಅವನಿಗೂ ಹೇಳಿ. ಅವಳು ಕುಡಿಯುತ್ತಾಳೆಂದರೆ ನಡತೆಗೆಟ್ಟವಳೆಂದು ತೀರ್ಪು ನೀಡುವ ನಿಮ್ಮ ಮನಸ್ಸು ಅವನು ಕುಡಿಯುತ್ತಾನೆಂದಾಗಲೂ ನಡತೆಗೆಟ್ಟವನೆಂದು ತೀರ್ಪು ನೀಡಲಿ. ಅವಳು ಬಾಯ್‌ಫ್ರೆಂಡ್‌ ಜೊತೆಗೆ ಪಾರ್ಟಿ ಮಾಡಿದಳೆಂದ ಮಾತ್ರಕ್ಕೆ ಹಿಂದೂಮುಂದೂ ಯೋಚಿಸದೆ ಅವಳನ್ನು 'ಪ್ರಾಸ್ಟಿಟ್ಯೂಟ್‌' ಎನ್ನುವ ನಾಲಿಗೆಗಳಿಗೆ, ಪ್ರಾಸ್ಟಿಟ್ಯೂಟ್‌ಗಳದ್ದೂ ಸೇರಿಸಿ ಯಾರೊಬ್ಬರ ದೇಹವನ್ನೂ ಮತ್ತೊಬ್ಬ ವ್ಯಕ್ತಿ ಆಕೆಯ ಅನುಮತಿ ಇಲ್ಲದೆ ಮುಟ್ಟುವ ಹಕ್ಕಿಲ್ಲ ಎಂಬ ಕಾಮನ್‌ಸೆನ್ಸ್‌ ಹೇಳಿಕೊಡುವವರಾರ‍ಯರು? ಅರ್ಧರಾತ್ರಿಯಲ್ಲಿ ಪಾರ್ಟಿ ಮಾಡುತ್ತಿದ್ದಾಳೆಂಬ ಕಾರಣಕ್ಕೆ ಅವಳನ್ನು ಮುಟ್ಟುವ, ಅವಳ ಬಗ್ಗೆ ಕೆಟ್ಟದಾಗಿ ಮಾತಾಡುವ ಹಕ್ಕು ನೀಡಿದವರಾರು? ಹಾಗೆಂದು ಎಲ್ಲ ಗಂಡಸರೂ ಹಾಗೆಯೇ ಎನ್ನುತ್ತಿಲ್ಲ. ಆದರೆ, ಬದಲಾಗಬೇಕಾದ್ದು ಬಹಳಷ್ಟಿದೆ. ಕೀಚಕರಿದ್ದಾರೆ ಎಂದು ಮಗಳಿಗೆ ತಿಳಿಸುವಾಗ ಅವರನ್ನು ಎದುರಿಸುವುದು ಹೇಗೆಂಬುದನ್ನೂ ತಿಳಿಸಿ. ಅಂತೆಯೇ ಮಗನಿಗೆ ಮಹಿಳೆಯರನ್ನು ಗೌರವಿಸುವ, ರಕ್ಷಿಸುವ, ಅವರೊಂದಿಗೆ ಹೇಗೆ ವರ್ತಿಸಬೇಕೆಂಬುದರ ಸಂಸ್ಕಾರವನ್ನು ಮೊದಲು ಕಲಿಸಿ. ಒಮ್ಮೆ ಕಲ್ಪಿಸಿಕೊಳ್ಳಿ, ಎಲ್ಲ ಗಂಡ್ಮಕ್ಕಳೂ ಸಂಸ್ಕಾರವಂತರಾದರೆ, ಹೆಣ್ಮಕ್ಕಳ ಮೇಲೆ ಬಟ್ಟೆ, ರಾತ್ರಿ ಎಂದು ನೀವೀಗ ಕೂರಿಸುವ ಗೂಬೆಗಳೆಲ್ಲ ಇನ್ನಾವುದೋ ಗ್ರಹಕ್ಕೆ ಹಾರಿಹೋಗುವುದರಲ್ಲಿ ಸಂಶಯವಿಲ್ಲ.

3.11.16

habbada batte


bathroom



sweets parade intro


gym


ಅಲ್ಲೊಂದು ಲೋಕವುಂಟು ಇಲ್ಲೊಂದು ದಾರಿಯುಂಟು

ಅಲೆವ ಮನಗಳಿಗೆ ಒನ್ ವೇ ಟಿಕೆಟ್
ಅಂದು ನನಗೆ ನಾ ಸ್ಕೂಟಿ ಕೊಂಡು, ಮೊದಲ ಬಾರಿ ಬೆಂಗಳೂರಿನ ಟ್ರಾಫಿಕ್‌ಗಳ ಮಧ್ಯೆ ನುಗ್ಗಿಸಿ ಓಡಿಸಿದಷ್ಟೇ ಖುಷಿಯಾಗಿತ್ತು. ತಳಮಳವೆಲ್ಲ ಕರಗಿ ಆತ್ಮವಿಶ್ವಾಸವಾಗಿ ಬದಲಾಗುತ್ತಿರುವ ಆ ಚಟಪಟ ಕುದಿತ, ಒಳಗಿನ ಬೇಗುದಿ ಅರಿವಿಗೆ ಬರುತ್ತಿತ್ತು. ಸಂಜೆಯ ಹೊತ್ತು, ರಾಜಧಾನಿ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದೆ, ಒಬ್ಬಳೇ. ಹೊರಟದ್ದೆಲ್ಲಿಗೆ? ಟಿಕೆಟ್ ಏನೋ ದೆಹಲಿಗಿತ್ತು. ಆದರೆ ನನ್ನ ಗುರಿ ಅದೆಲ್ಲಿಗೋ ಅದೆಲ್ಲಿಗೋ, ಗೊತ್ತಿರಲಿಲ್ಲ. ಆದರೆ ಎಲ್ಲಿಗೋ ಹೋಗುವೆನೆಂಬುದು ಖಾತ್ರಿಯಾಗಿತ್ತು. ಎಲ್ಲೂ ಹೋಗಲಾಗದಿದ್ದರೆ ತಿರುಗಿಯಂತೂ ಬರಬಲ್ಲೆನೆಂಬ ವಿಶ್ವಾಸವಿತ್ತು. ಊರು ನೋಡುವುದು ನನ್ನ ಗುರಿಯಾಗಿರಲಿಲ್ಲ, ಬದುಕು ನೋಡಬೇಕಿತ್ತು. ಹಾಗಾಗಿ ಸಿದ ್ಧಮಾದರಿ ರಚಿಸಿಕೊಂಡಿರಲಿಲ್ಲ. ಕೈಯ್ಯಲ್ಲಿ ಒಂದು ತಿಂಗಳ ರಜೆ, ಎಟಿಎಂನಲ್ಲಿ ಒಂದಿಡೀ ವರ್ಷದ ಸಂಬಳದಲ್ಲಿ ಹೀಗೆ ಗೊತ್ತುಗುರಿ ಇಲ್ಲದೆ ಅಲೆಯಲೆಂದೇ ಎತ್ತಿಟ್ಟ ಹಣ, ಮೊಬೈಲ್, ಮತ್ತೊಂದು ಬ್ಯಾಕ್‌ಪ್ಯಾಕ್. 
ಹೊರಡುವ ಮೊದಲಿನ ಒಂದು ತಿಂಗಳು ಅಪ್ಪಅಮ್ಮನನ್ನು ಒಪ್ಪಿಸಲು ನಡೆಸಿದ ಅಳು, ಜಗಳ, ಕೋಪ, ಹಟ, ಕೆಲಸದ ಕಿರಿಕಿರಿ, ಅಜ್ಜನ ಆನಾರೋಗ್ಯ, ಅವನ ದಬ್ಬಾಳಿಕೆ ಎಲ್ಲವೂ ನೆನಪಿನ ರೈಲನ್ನೇರಿ, ಕಂಬಿಯಲ್ಲಿ ನನ್ನೊಂದಿಗೆ ಓಡಲು ಹವಣಿಸುತ್ತಿದ್ದವು. ಆದರೆ ನಾನು ಒಬ್ಬಳೇ ಹೋಗಬೇಕಿತ್ತು. ಯಾವುದೆಲ್ಲದರಿಂದ ದೂರ ಓಡಲು ಪ್ರಯತ್ನಿಸಿದ್ದೆನೋ ಅವೇ ಬೆನ್ನು ಬಿದ್ದರೆ?! ನಿರ್ದಯಿಯಾಗಲು ನಿರ್ಧರಿಸಿದೆ. ಎಲ್ಲವನ್ನೂ ನನ್ನೆಲ್ಲ ಶಕ್ತಿ ಒಗ್ಗೂಡಿಸಿ ಹೊರ ತಳ್ಳಿದೆ. ಕಂಬಿಗಳಡಿಯಲ್ಲಿ ಸಾವನ್ನಪ್ಪಿದ ಅವುಗಳ ಬಗ್ಗೆ ನನಗೆ ಕಿಂಚಿತ್ತೂ ಬೇಸರವಾಗಲಿಲ್ಲ. ಭಯ, ಕೀಳರಿಮೆಗಳನ್ನು ನನ್ನ ಕನಸು, ಧೈರ್ಯ, ನನ್ನ ಮೇಲಿನ ನಂಬಿಕೆಗಳು ತಟ್ಟಿ ಮಲಗಿಸಿದವು. ಇದೀಗ ಮನಸ್ಸು ಓಡುತ್ತಿತ್ತು, ಕನಸು ಕಾಣುತ್ತಿತ್ತು, ರೈಲಿಗಿಂತಲೂ ವೇಗವಾಗಿ.
ನಾನಿದ್ದ ಬೋಗಿಯಲ್ಲೇ ಇದ್ದರು ಬಿಹಾರದ ಆ ಆಂಟಿ ತಮ್ಮ ಮಗುವಿನೊಡನೆ. ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಮಗುವಿನ ಕ್ಯಾನ್ಸರ್‌ಗೆ ಚಿಕಿತ್ಸೆ ಕೊಡಲು ಕರೆದುಕೊಂಡು ಹೋದವರು. ರಜೆಗೆ ಮನೆಗೆ ತೆರಳುತ್ತಿರುವ ಚೆನ್ನೈನಲ್ಲಿ ಓದುತ್ತಿರುವ ರಾಜಸ್ತಾನದ ಆ ಹುಡುಗ, ದಕ್ಷಿಣ ಭಾರತ ಪ್ರವಾಸ ಕೈಗೊಂಡ ಪಂಜಾಬ್‌ನ ಕುಟುಂಬ- ಒಂದು ಮಿನಿ ಭಾರತವೇ ಬೋಗಿಯೊಳಗೆ ಬಂಧಿಯಾಗಿತ್ತು. ಮತ್ತು ದಿನವೊಂದರ ಪಯಣದಲ್ಲಿ ಅವರೆಲ್ಲರ ಬದುಕು ನನ್ನ ಬದುಕಿನಲ್ಲಿ ಪಾಲು ಪಡೆದಿದ್ದವು. ಮೊದಲು ಕಷ್ಟಸುಖ ಹಂಚಿಕೊಂಡೆವು, ನಂತರ ಹರಟಿದೆವು, ಕಿಚಾಯಿಸಿದೆವು, ಅಂತ್ಯಾಕ್ಷರಿ ಆಡಿದೆವು, ಟೀಯನ್ನು ಒಬ್ಬರಿಗೊಬ್ಬರು ಕೊಡಿಸಿ ಒಟ್ಟಿಗೆ ಕುಡಿದೆವು. ಗೆಳೆಯರೊಡನೆ ಬಂದಿದ್ದರೆ ಅಪರಿಚಿತರೊಡನೆ, ವಯಸ್ಸಿನ ಹಂಗಿಲ್ಲದೆ, ಮೇಲು ಕೀಳು, ಬಡವಶ್ರೀಮಂಥ ಬೇಧವಿಲ್ಲದೆ ಈ ಪರಿಯ ಬಾಂಧವ್ಯವೊಂದು ಹುಟ್ಟಿಕೊಳ್ಳಲು ಸಾಧ್ಯವಿತ್ತೇ? ನನ್ನನ್ನು ನಾನು ಈ ಮಟ್ಟಿಗೆ ಸುತ್ತಲಿನ ಸಮಾಜಕ್ಕೊಡ್ಡುವ ಅವಕಾಶವಿತ್ತೇ? ಯೋಚಿಸುತ್ತಿದ್ದೆ.
ಹೊರಗೆ ಪ್ರಕೃತಿ ತನ್ನ ರೀಲನ್ನು ಬಿಚ್ಚಿಕೊಳ್ಳುತ್ತಲೂ, ಚಿತ್ರಗಳನ್ನು ಬದಲಾಯಿಸುತ್ತಲೂ, ರಾಜ್ಯ ಬದಲಾದಂತೆ ಮಣ್ಣಿನ ಪರಿಮಳದಲ್ಲೇ ಸೂಚನೆ ನೀಡುತ್ತಲೂ ಹರವಿಕೊಂಡಿತ್ತು. ದೆಹಲಿಯಲ್ಲಿ ಬೆನ್ನ ಮೇಲೆ ಬೇತಾಳದಂತೆ ಬ್ಯಾಕ್‌ಪ್ಯಾಕ್ ಹೊತ್ತು ಹೇಳಲು ಕತೆ ಹುಡುಕುತ್ತಾ ನಡೆಯತೊಡಗಿದೆ. ಚಾಂದಿನಿ ಚೌಕ್‌ನ ಗಲ್ಲಿಯಲ್ಲಿ ಹಾದೆ. ಯಾವುದೋ ಹೈವೇಯಲ್ಲಿ ತೆರಳುವ ಅಲಂಕೃತ ಲಾರಿಯಂತೆ ಚಾಂದಿನಿ ಚೌಕ್‌ನ ಪುಟ್ಟ ಗಲ್ಲಿ ಜಿಗಮಗ ಎನ್ನುತ್ತ ತುಂಬಿ ತುಳುಕುತ್ತಿತ್ತು. ಅಲ್ಲೇ ಹೊಟೇಲ್ ಒಂದರ ರೂಂ ಬುಕ್ ಮಾಡಿ ಲಗೇಜನೆಲ್ಲ ಇಳಿಸಿ ಸುತ್ತಲು ಹೋದೆ. ನಂತರದ ಇಪ್ಪತ್ತು ದಿನ ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶ, ಉತ್ತರಾಂಚಲ್‌ಗಳಲ್ಲಿ ಅಲೆದೆ. ಪ್ರೇಕ್ಷಣೀಯ ಸ್ಥಳಗಳಿಗಿಂತಲೂ ಊರೂರು ಸುತ್ತಿದೆ. ಅಲೆದದ್ದರ, ಕಂಡಿದ್ದರ ಕತೆ ಇನ್ನೊಮ್ಮೆ ಹೇಳುವೆ. ಹೇಳಹೊರಟಿದ್ದು ಕಲಿತದ್ದರ ಬಗ್ಗೆ. 
ಮೊದಲೆಲ್ಲ ಖಾಲಿ ಎನಿಸುತ್ತಿದ್ದ ಮನಸ್ಸು ಒಳಗಿನಿಂದ ತುಂಬಿಕೊಂಡ ಅನುಭವ. ನನ್ನ ಅಧೈರ್ಯ, ಕೀಳರಿಮೆಗಳು ನಾನು ತಿನ್ನಿಸುವ ಮೊದಲೇ ಅವೇ ಸೈನೈಡ್ ತಗೊಂಡಿದ್ದವು. ಪ್ರತಿ ಕ್ಷಣವೂ ಎಚ್ಚರಿಕೆಯಿಂದ, ಮೈಮೇಲೆ ಪ್ರಜ್ಞೆ ಇಟ್ಟುಕೊಂಡೇ ಇರುವುದು, ಎಲ್ಲಿಲ್ಲಿ ಖರ್ಚನ್ನು ಮಿತಿಗೊಳಿಸಬಹುದೋ ಅಲ್ಲೆಲ್ಲ ಮಿತಿಗೊಳಿಸುವುದು, ಮೊದಲೇ ಯೋಜಿಸಿದ್ದಲ್ಲದ್ದರಿಂದ ಪ್ರತಿಕ್ಷಣ ನಿರ್ಧಾರ ತೆಗೆದುಕೊಂಡಿದ್ದು ಎಲ್ಲವೂ ನನ್ನ ಸಾಮರ್ಥ್ಯವನ್ನು ಹಿಗ್ಗಿಸಿದ್ದವು. ದಾರಿಯಲ್ಲಿ ಸಿಕ್ಕ ಒಂದಿಷ್ಟು ಗೆಳೆಯ ಗೆಳತಿಯರು ನನ್ನಂತೆಯೇ ಒಬ್ಬರೇ ಬಂದವರಿದ್ದರು, ತಿರುಗಾಟದ ರುಚಿ ಹತ್ತಿ ಲಕ್ಷಗಟ್ಟಲೆ ಸಂಬಳದ ಕೆಲಸವನ್ನೇ ಬಿಟ್ಟು ವರ್ಷದಿಂದ ಅಲೆಮಾರಿಗಳಾದವರಿದ್ದರು, ಹಾಗೆ ಅಲೆಯುತ್ತಾ ಅದಾವುದೋ ಹಳ್ಳಿಯೊಂದರಲ್ಲಿ ಬಡ ಮಕ್ಕಳಿಗೆ ಪಾಠ ಹೇಳುತ್ತಾ ನೆಲೆ ನಿಂತ ಸಾಫ್ಟ್‌ವೇರ್ ಎಂಜಿನಿಯರ್ ಸಿಕ್ಕರು. ಇನ್ನೊಬ್ಬರು ಹಿಮಾಲಯದ ಸಾಧುಗಳ ಬಳಿ ಹೊರಟವರು ವೈರಾಗ್ಯದಿಂದ. ಬದುಕಿನೋಟದಲ್ಲಿ ಅವರವರ ನೆಮ್ಮದಿಯನ್ನು ಹುಡುಕಿಕೊಂಡು ಅಲೆವವರು..
ಅಪರಿಚಿತರೊಂದಿಗೆ ಮಾತನಾಡಬೇಡ ಎಂದೇ ಕೇಳಿ ಬೆಳೆದಿದ್ದ ನನಗೆ ಮೊದಲ ಬಾರಿಗೆ ಅಪರಿಚಿತ ಜಗತ್ತು ಎಷ್ಟು ಸುಂದರವಾಗಿದೆ ಎಂಬ ಅರಿವು ಉಂಟಾಯಿತು. ದಾರಿಯಲ್ಲಿ ಪರಿಚಿತರಾದವರು ಕೆಲವರು ಟಾಟಾ ಹೇಳಿ ಹೋದರು. ಕೆಲವರು ನಂಬರು, ಇಮೇಲ್ ಐಡಿ ನೀಡಿ ನನ್ನ ಸೋಷಿಯಲ್ ನೆಟ್‌ವರ್ಕ್ ಬೆಳೆಸಿದರು. ಎಲ್ಲೋ ಹುಟ್ಟಿ ಬೆಳೆದವರ ಬದುಕಿನ ಕೆಲ ಹೊತ್ತಿನ ಪಾಲು ನನಗೆ ದಕ್ಕಿತ್ತು. ಹಂಚಿಕೊಂಡು ಬದುಕುವ ಹಾಗೂ ಬದುಕು ಹಂಚಿಕೊಳ್ಳುವ ವಿಶಿಷ್ಟ ಗುಣವನ್ನು ಈ ಪ್ರವಾಸ ಕಲಿಸಿತ್ತು. ಕೆಟ್ಟ ಅನುಭವಗಳೂ ಆದವು. ಆದರೆ ಅನುಭವಗಳಿಂದ ತಾನೇ ಕಲಿಯಲು ಸಾಧ್ಯ?
ಬಿಸಿಲು, ಮಂಜು, ಮಳೆ, ಚಳಿ, ಏಕಾಂತ- ಆದರೆ ಏಕಾಂಗಿಯಲ್ಲ... ಯೋಚನೆಗಳು ವಿಸ್ತಾರರೂಪ ಪಡೆದಿದ್ದವು, ಸಮಯವಿದೆಯೆಂದು ಎಲ್ಲವನ್ನೂ ಒಂದೇ ದಿನ ನೋಡುವ ಹಪಹಪಿಗೆ ಬೀಳಲಿಲ್ಲ. ಒಂದೊಂದು ದಿನ ಒಬ್ಬಳೇ ಸುಮ್ಮನೇ ಯೋಚಿಸುತ್ತಾ, ಕನಸು ಕಾಣುತ್ತಾ ಕಳೆದೆ. ಆ ಸಮಯವೂ ತಿರುಗಾಡಿದಷ್ಟೇ ಅಮೂಲ್ಯ. ಏಕೆಂದರೆ ಸಮಯದ ಹಿಂದೆ ನಾ ಓಡುತ್ತಿರಲಿಲ್ಲ. ತಿರುಗಿ ಬೆಂಗಳೂರಿಗೆ ಬರುವಾಗ ಜಗ ಸುತ್ತುವ ಕನಸು ಅರಳುತ್ತಿತ್ತು. ಬಂದೊಡನೆಯೇ ವರ್ಷಗಳಿಂದ ಮುಂದೂಡುತ್ತಿದ್ದ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದೆ.
ರೇಶ್ಮಾರಾವ್ ಸೊನ್ಲೆ

nachi hijakku


gates


appy happy


ತುಂಬಾ ಸಿಂಬಲ್!

ಸಾವಿರ ಚಿಹ್ನೆಗಳ ಕಥೆ
ಚುನಾವಣೆ ಘೋಷಣೆಯಾದ ದಿನದಿಂದಲೂ ಕಂಡಕಂಡಲ್ಲೆಲ್ಲ ಕೈ, ಕಾಲು, ಕಮಲ, ಪೊರಕೆ, ಆನೆ, ಸೈಕಲ್, ಕಾಯಿ, ನೈಲ್ ಕಟ್ಟರ್, ಬ್ರಶ್‌ಗಳು ನೇತಾಡುತ್ತಿವೆ. ಹೀಗೆ ಎಲ್ಲದರ ಸಂಭ್ರಮದ 'ಹ್ಯಾಂಗ್‌' ಔಟ್‌ನಿಂದ ಚುನಾವಣಾ ಕಣ ರಂಗೇರಿದೆ. ಭಾರತದಲ್ಲಿ 1616 ಪಕ್ಷಗಳು ನೋಂದಣಿಯಾಗಿವೆ. ಅದರಲ್ಲಿ 6 ರಾಷ್ಟ್ರೀಯ, 47 ರಾಜ್ಯ ಮಟ್ಟದ ಹಾಗೂ 1563 ಪ್ರಾದೇಶಿಕ ಪಕ್ಷಗಳಾಗಿವೆ. ಈ ಎಲ್ಲ ಪಕ್ಷಗಳಿಗೂ ಒಂದೊಂದು ಚಿಹ್ನೆ ಜೊತೆಗೆ ಪಕ್ಷೇತರರಾಗಿ ಸ್ಪರ್ಧಿಸುವವರಿಗೂ ಒಂದೊಂದು ಚಿಹ್ನೆ ಎಂದರೆ ಏನಿಲ್ಲವೆಂದರೂ 2000ಕ್ಕೂ ಅಧಿಕ ಚಿಹ್ನೆಗಳಿವೆ!ಹೆಸರಿದ್ದರೂ ಚಿಹ್ನೆಗಳೇಕೆ?ಸಾವಿರಗಟ್ಟಲೆ ಪಕ್ಷಗಳಿವೆ, ಪ್ರತಿಯೊಂದಕ್ಕೂ ಹೆಸರಿದೆ, ಅದರಿಂದ ನಿಲ್ಲುವ ಪ್ರತಿ ಅಭ್ಯರ್ಥಿಗೂ ಹೆಸರಿದೆ. ಆದರೂ ಚಿಹ್ನೆಗಳ ಬಳಕೆ ಏಕೆಂಬ ಪ್ರಶ್ನೆ ಹಲವರನ್ನು ಕಾಡಿರಬಹುದಲ್ಲವೇ? ಇದಕ್ಕೆ ಉತ್ತರ ಇಲ್ಲಿದೆ. 1951ರಲ್ಲಿ ದೇಶದ ಮೊದಲ ಲೋಕಸಭಾ ಚುನಾವಣೆ ಏರ್ಪಟ್ಟಾಗ ಬಹುತೇಕ ಮತದಾರರು ಅನಕ್ಷರಸ್ಥರಾಗಿದ್ದರು. ಹಾಗಾಗಿ ಅವರಿಗೆ ಅಭ್ಯರ್ಥಿಗಳ ಹೆಸರು ಓದಿ ಮತ ಚಲಾಯಿಸುವುದು ಸಾಧ್ಯವಿರಲಿಲ್ಲ. ಇದರಿಂದ ಪಕ್ಷಗಳು ಒಂದೊಂದು ಸಂಕೇತವನ್ನು ತಮ್ಮದಾಗಿಟ್ಟುಕೊಳ್ಳುವ ಅನಿವಾರ್ಯತೆಗೆ ಬಿದ್ದವು. ಹೀಗೆ ಪಕ್ಷಗಳು ತಮ್ಮನ್ನು ಸಂಕೇತಿಸುವ ಚಿಹ್ನೆವನ್ನು ಹೊಂದುವಾಗ ಅವುಗಳು ತಮ್ಮ ಸಿದ್ಧಾಂತವನ್ನು ಧ್ವನಿಸುತ್ತಿರಬೇಕೆಂದು ಬಯಸಿ ಸಿದ್ಧಪಡಿಸಿದವು. ಹಾಗಾಗಿ ಒಂದು ಚಿಹ್ನೆಯ ಬಣ್ಣ, ಚಿತ್ರ, ಅದು ತಿರುಗಿರುವ ದಿಕ್ಕು ಪ್ರತಿಯೊಂದೂ ಪಕ್ಷದ ಧ್ಯೇಯವನ್ನು ಧ್ವನಿಸುತ್ತವೆ. ಚುನಾವಣಾ ಆಯೋಗ ನೀಡುವ ಕೆಲವು ಚಿಹ್ನೆಗಳಲ್ಲೇ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಿರುವುದರಿಂದ ಹಾಗೂ ನಿತ್ಯ ಸಾಮಗ್ರಿಗಳು ಜನಮಾನಸಕ್ಕೆ ಹೆಚ್ಚು ಬೇಗ ತಲುಪುತ್ತವೆ ಎಂಬ ಕಾರಣದಿಂದ ಕುಕ್ಕರ್, ಸೈಕಲ್, ಬಿಲ್ಡಿಂಗ್, ಪೆನ್, ಕಪ್ಪುಹಲಗೆ, ಹೊಲಿಗೆ ಯಂತ್ರ, ಟಿವಿ, ಕೇಕ್, ಕ್ಯಾರೆಟ್, ಸ್ಕೂಲ್ ಬ್ಯಾಗ್ ಪ್ರತಿಯೊಂದೂ ಪಕ್ಷಗಳ ಸಂಕೇತವಾಗಿ ಹೊರಬಂದಿವೆ.ಪಕ್ಷಿಗಳಿಗೆ ನಿಷೇಧ!ಒಂದೊಮ್ಮೆ ನವಿಲು, ಗಿಳಿ, ಪಾರಿವಾಳ ಎಲ್ಲವೂ ಪಕ್ಷಗಳ ಸಂಕೇತಗಳಾಗಿದ್ದವು. ಪ್ರಚಾರದ ಸಮಯದಲ್ಲಿ ಪಕ್ಷಗಳು ನಿಜವಾದ ಪಕ್ಷಿಗಳನ್ನೇ ಬಳಸತೊಡಗಿದ್ದರಿಂದ ಪ್ರಾಣಿದಯಾ ಸಂಘಗಳು ಹೋರಾಟ ನಡೆಸಿ ಪಕ್ಷಿಗಳ ಸಂಕೇತಗಳನ್ನು ಬ್ಯಾನ್ ಮಾಡಿಸಿದವು.ಕತ್ತೆ ಮತ್ತು ಡೆಮೋಕ್ರಟಿಕ್ ಪಕ್ಷ1828ರಲ್ಲಿ ಅಮೆರಿಕದಲ್ಲಿ ಡೆಮೋಕ್ರಟಿಕ್ ಪಕ್ಷದಿಂದ ಆಂಡ್ರ್ಯೂ ಜಾಕ್ಸನ್ ಕಣಕ್ಕಿಳಿದಾಗ ವಿರೋಧ ಪಕ್ಷದವರು ಅವನನ್ನು 'ಕತ್ತೆ' ಎಂದು ಜರಿದರು. ಆದರೆ ಜಾಕ್ಸನ್ ಕೆರಳದೆ ಭ್ರಷ್ಟಾಚಾರ ಹೊಡೆದೋಡಿಸುವ ಮೊಂಡುತನ ತನ್ನದೆಂದು ಕತ್ತೆಯನ್ನೇ ತನ್ನ ಪ್ರಚಾರ ಕಾರ್ಯಕ್ರಮದಲ್ಲಿ ಚಿಹ್ನೆಯಾಗಿ ಬಳಸಿದರು. ನಂತರ 1837ರಲ್ಲಿ ಪ್ರಖ್ಯಾತ ವ್ಯಂಗ್ಯಚಿತ್ರಕಾರ ಥಾಮಸ್ ನ್ಯಾಸ್ಟ್ ಡೆಮೋಕ್ರಟಿಕ್ ಪಕ್ಷವನ್ನು ಟೀಕಿಸಲು ಕತ್ತೆಯನ್ನೇ ಬಳಸುವ ಮೂಲಕ ಪಕ್ಷದೊಂದಿಗೆ ಕತ್ತೆಯ ಸಂಬಂಧವನ್ನು ಬಿಗಿಗೊಳಿಸಿದ. ಈಗಲೂ ಅಧಿಕೃತವಾಗದ 'ಕತೆ'್ತಯನ್ನೇ ಡೆಮೋಕ್ರಟಿಕ್ ಪಕ್ಷ ಧೈರ್ಯ ಹಾಗೂ ಸಂಕಲ್ಪದ ಸಂಕೇತವಾಗಿ ತನ್ನ ಪ್ರಚಾರಕ್ಕೆ ಬಳಸುತ್ತಿದೆ. ಆದರೆ, ವಿರೋಧ ಪಕ್ಷ ಮಾತ್ರ ಕತ್ತೆಯ ದಡ್ಡತನ ಹಾಗೂ ತಿದ್ದಲಾಗದ ಬುದ್ಧಿಯ ಮಾತುಗಳನ್ನೆತ್ತಿ ಪ್ರತಿಪಕ್ಷವನ್ನು ಜರಿಯುತ್ತಿದೆ.= ರೇಶ್ಮಾ